ಎರವಲು ಜ್ಞಾನ

7

ಎರವಲು ಜ್ಞಾನ

ಗುರುರಾಜ ಕರ್ಜಗಿ
Published:
Updated:

ಆತನೊಬ್ಬ ಹಿರಿಯ ಪಾದ್ರಿ. ಅವನ ಬಗ್ಗೆ ಉಳಿದವರಿಗೆಲ್ಲ ತುಂಬ ಗೌರವ. ಆತ ಹೆಚ್ಚು ಮಾತನಾಡುವವನಲ್ಲ ಆದರೆ ಮಾತನಾಡಿದ್ದೆಲ್ಲ ಚಿನ್ನ, ಅಪ್ಪಟ ಜ್ಞಾನದ ಧ್ವನಿ. ಅವನು ಬಹಳ ಪುಸ್ತಕಗಳನ್ನು, ಧರ್ಮಗ್ರಂಥಗಳನ್ನು ಓದಿದಂತೆ ಕಾಣುತ್ತಿರಲಿಲ್ಲ. ಆದರೆ, ಒಂದು ಗ್ರಂಥ ಮಾತ್ರ ಯಾವಾಗಲೂ ಅವನೊಂದಿಗೆ ಇರುತ್ತಿತ್ತು. ಅವನು ಮಲಗುವಾಗಲೂ ತನ್ನ ತಲೆದಿಂಬಿನ ಕೆಳಗೆ ಇಟ್ಟುಕೊಂಡೇ ಇರುತ್ತಿದ್ದ. ತನ್ನ ಚರ್ಚಿನಲ್ಲಿಯ ಕೆಲಸ ಮುಗಿದೊಡನೆ ಪಾದ್ರಿ ತನ್ನ ಕೋಣೆಗೆ ತೆರಳಿ ಆ ಗ್ರಂಥ ಅಧ್ಯಯನ ಮಾಡಲು ಕುಳಿತುಕೊಳ್ಳುತ್ತಿದ್ದ.ಅವನು ಅದನ್ನು ಓದುವಾಗ ಎಷ್ಟು ತನ್ಮಯನಾಗಿರುತ್ತಿದ್ದನೆಂದರೆ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದ, ನಗುತ್ತಿದ್ದ ಕೆಲವೊಮ್ಮೆ ತುಂಬ ಚಿಂತಾಕ್ರಾಂತನಾಗುತ್ತಿದ್ದ. ದಿನವೂ ಅದನ್ನೇ ಓದುವುದನ್ನು ಕಂಡ ಅವನ ಸಹೋದ್ಯೋಗಿಗಳು ಆ ಗ್ರಂಥ ಯಾವುದು ಎಂದು ಕೇಳಿದರೆ ಬಾಯಿತುಂಬ ನಕ್ಕುಬಿಟ್ಟು `ಅದು ನನಗಾಗಿಯೇ ಇದ್ದ ವಿಶೇಷ ಪುಸ್ತಕ~ ಎಂದು ಓದುತ್ತಿದ್ದ. ಯಾರು ಎಷ್ಟು ಕೇಳಿದರೂ ಅದನ್ನು ತೋರಿಸುತ್ತಿರಲಿಲ್ಲ.

 

ದಿನಗಳು ಕಳೆದಂತೆ ಆ ಗ್ರಂಥವೊಂದು ಅತ್ಯಂತ ಕುತೂಹಲಕಾರಿ ವಸ್ತುವಾಯಿತು. ಅವನ ಶಿಷ್ಯರಲ್ಲಿ ಕೆಲವರು ಅವನು ಕೋಣೆಯಲ್ಲಿ ಇಲ್ಲದಾಗ ಅದನ್ನು ಹುಡುಕಲು ವ್ಯರ್ಥ ಪ್ರಯತ್ನ ಮಾಡಿದ್ದರು. ಒಂದು ಸಲವಂತೂ ಕುತೂಹಲ ತಡೆಯಲಾರದೇ ಒಬ್ಬ ತರುಣ ಈ ಪಾದ್ರಿ ಕುಳಿತು ಓದುತ್ತಿದ್ದ ಕೋಣೆಯ ಮೇಲೇರಿ ಮಾಳಿಗೆಯ ಹೆಂಚು ತೆಗೆದು ನೋಡಲು ಹೋದ. ಆಗ ಪಾದ್ರಿ ಥಟ್ಟನೇ ಪುಸ್ತಕವನ್ನು ಮುಚ್ಚಿಟ್ಟುಬಿಟ್ಟ.ಹೀಗೆಯೇ ವರ್ಷಗಳು ಉರುಳಿದವು. ಪಾದ್ರಿಯ ವಿದ್ವತ್ತು, ತಿಳುವಳಿಕೆ, ಅವನ ಕರುಣೆ ದೇಶದಲ್ಲೆಲ್ಲ ಸಾಕಷ್ಟು ಖ್ಯಾತಿ ಗಳಿಸಿದವು. ಅವನ ಜೊತೆಗಾರರು ಮತ್ತು ಶಿಷ್ಯರು ಒಮ್ಮೆ ಪಾದ್ರಿಯ ಕಡೆಗೆ ಹೋಗಿ ವಿನಂತಿ ಮಾಡಿದರು, `ತಾವು ಮಹಾನುಭಾವರು, ತಮ್ಮ ಜ್ಞಾನದಿಂದ ಜಗಮಾನ್ಯರಾಗಿದ್ದೀರಿ. ತಮ್ಮ ಹತ್ತಿರ ಇದ್ದ ಮಹಾಗ್ರಂಥವೊಂದನ್ನು ಬಿಟ್ಟು ಬೇರೆ ಯಾವುದನ್ನೂ ನೀವು ನೋಡಿದವರಲ್ಲ.ಆದ್ದರಿಂದ ಆ ಗ್ರಂಥ ತಮ್ಮ ಜ್ಞಾನದ ಮೂಲಸೆಲೆಯಾಗಿದೆ ಎಂದುಕೊಂಡಿದ್ದೇವೆ. ದಯವಿಟ್ಟು ನಮಗೂ ಆ ಗ್ರಂಥದ ಅವಲೋಕನ ಮಾಡಲು ಅವಕಾಶ ಮಾಡಿಕೊಡಿ~ ಎಂದರು. ಆತ ಮತ್ತೆ ನಕ್ಕು ಹೇಳಿದ, `ನೀವೆಲ್ಲ ತಿಳಿದ ಹಾಗೆ ಅದು ಮಹಾನ್ ಗ್ರಂಥವೇ. ನನಗೇನಾದರೂ ಒಂದಿಷ್ಟು ವಿಷಯ ತಿಳಿದಿದ್ದರೆ ಅದು ಈ ಗ್ರಂಥದಿಂದಲೇ ಬಂದದ್ದು. ಆದರೆ ಅದನ್ನು ನಾನು ನಿಮಗೆ ಈಗಲೇ ಕೊಡಲಾರೆ. ಬಹುಶಃ ಇನ್ನು ಕೆಲವೇ ದಿನಗಳಲ್ಲಿ ನನ್ನ ಆಯುಷ್ಯ ಮುಗಿಯುತ್ತದೆ.

 

ನಾನು ಸತ್ತ ದಿನವೇ ಆ ಪುಸ್ತಕ ನಿಮ್ಮದೇ ಸ್ವತ್ತು ಆಗಲಿದೆ~ ಎಂದ. ಹದಿನೈದು ದಿನಗಳಲ್ಲೇ ಆ ಪಾದ್ರಿ ನಿಧನ ಹೊಂದಿದ. ಅವನ ಅಂತ್ಯಕ್ರಿಯೆಗಳು ಮುಗಿದ ಮೇಲೆ ಅವನ ಸಹೋದ್ಯೋಗಿಗಳು ಮತ್ತು ಶಿಷ್ಯರು ಅವನ ಕೋಣೆಗೆ ಹೋಗಿ ಆ ಗ್ರಂಥವನ್ನು ತೆಗೆದುಕೊಂಡು ನೋಡಿದರು.ಅವರಿಗೆಲ್ಲ ಆಘಾತ. ಅಷ್ಟು ದಪ್ಪನಾದ ಪುಸ್ತಕದಲ್ಲಿ ಇದ್ದುದೆಲ್ಲ ಬರೀ ಖಾಲಿ ಹಾಳೆಗಳು! ಅವುಗಳಲ್ಲಿ ಒಂದು ಅಕ್ಷರವನ್ನೂ ಮುದ್ರಿಸಿಲ್ಲ. ಅವರು ಪ್ರತಿಯೊಂದು ಹಾಳೆಯನ್ನು ನಿಧಾನಕ್ಕೆ ತೆಗೆದು ನೋಡಿದರು. ಊಹ್ಞೂ, ಎಲ್ಲವೂ ಖಾಲಿ ಖಾಲಿ. ಆದರೆ ಗಮನವಿಟ್ಟು ನೋಡಿದಾಗ ಅದರ ಕಡೆಯ ಪುಟದಲ್ಲಿ ತೀರಾ ಸಣ್ಣ ಅಕ್ಷರಗಳಲ್ಲಿ ಒಂದು ಸಾಲನ್ನು ಬರೆಯಲಾಗಿತ್ತು.`ಜ್ಞಾನಕ್ಕೋಸ್ಕರ ಅಕ್ಷರಗಳನ್ನು ಓದುವುದು ಬೇಕಿಲ್ಲ. ಸದಾ ನಿಮ್ಮ ಆಂತರ್ಯ ತಿದ್ದಿಕೊಳ್ಳಿ~. ಪಾದ್ರಿ ಜೀವನದುದ್ದಕ್ಕೂ ಓದಿದ್ದು ಇದೊಂದೇ ಸಾಲು, ನಡೆದದ್ದೂ ಅದರಂತೆಯೇ. ಅಕ್ಷರಗಳು ಮತ್ತೊಬ್ಬರ ಜ್ಞಾನದ ಎಂಜಲು. ಅದು ಎಷ್ಟಿದ್ದರೂ ಸಾಲವನ್ನು ಪಡೆದಂತೆಯೇ. ಆದರೆ, ನಮ್ಮ ಹೃದಯ, ಬುದ್ಧಿಗಳಲ್ಲೇ ಚಿಂತನೆ ನಡೆದರೆ ಅದರ ಫಲಶೃತಿ ನಮ್ಮ ಜ್ಞಾನವಾಗುತ್ತದೆ. ಎರವಲು ಪಡೆದ ಮಾತುಗಳು ಮತ್ತು ಜ್ಞಾನ ಬರೀ ಪ್ರದರ್ಶನಕ್ಕೆ ಬಳಕೆಯಾದಾವು. ನಮ್ಮ ಆಂತರ್ಯ ಶೋಧಿಸಿಕೊಳ್ಳುವುದರಿಂದ ಬರುವ ಜ್ಞಾನ ಜೀವನದ ಮಟ್ಟ ಎತ್ತರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry