ಏನಿದ್ದೀತು ಮೋದಿ ಗೆಲುವಿನ ಗುಟ್ಟು?

7

ಏನಿದ್ದೀತು ಮೋದಿ ಗೆಲುವಿನ ಗುಟ್ಟು?

ಡಿ. ಉಮಾಪತಿ
Published:
Updated:
ಏನಿದ್ದೀತು ಮೋದಿ ಗೆಲುವಿನ ಗುಟ್ಟು?

ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದ ರಾಜಕಾರಣದ ಹೊಚ್ಚ ಹೊಸ ಬಡವರ ಬಂಧು. ಈ ರೂಪಧಾರಣೆಯ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದಕ್ಕೆ ಉತ್ತರಪ್ರದೇಶದಂತಹ ಬಹುದೊಡ್ಡ ಮತ್ತು ರಾಜಕೀಯವಾಗಿ ನಿರ್ಣಾಯಕ ಪ್ರಭಾವ ಹೊಂದಿರುವ ರಾಜ್ಯ ‘ಜನಾದೇಶದ ಅನುಮೋದನೆ’ ನೀಡಿದೆ.

 

ಗರೀಬಿ ಹಠಾವೋ ಎಂಬ ಜನಪ್ರಿಯ ಘೋಷಣೆ ಮತ್ತು ಬ್ಯಾಂಕ್ ಸಾಲಮೇಳಗಳ ಅತಿ ದೊಡ್ಡ ಪ್ರಹಸನಗಳನ್ನು ನಿಜವೆಂದು ಇಂದಿರಾ ಗಾಂಧಿ ನಂಬಿಸಿದ್ದ ಮಾದರಿಯಲ್ಲೇ, ನೋಟು ರದ್ದತಿ ಅತಿದೊಡ್ಡ ಸಮಾಜವಾದಿ ಕ್ರಮ ಎಂದು ಜನರನ್ನು ನಂಬಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.ತಾವು ಹೇಳಿದ್ದೆಲ್ಲವನ್ನೂ ಜನಸಮೂಹ ಪ್ರಶ್ನೆ ಮಾಡದೆ ಸತ್ಯವೆಂದು ಒಪ್ಪಿಕೊಳ್ಳುವ ಸಮ್ಮೋಹಿನಿಯ ಜಾಲವನ್ನು ಪ್ರಧಾನಿ ಬೀಸಿದ್ದಾರೆ. ಜನಸಮೂಹದೊಂದಿಗೆ  ಮಾತಿಗಿಳಿದು ಅವರ ವಿವೇಚನಾ ಶಕ್ತಿಯನ್ನು ವಶಕ್ಕೆ ಪಡೆಯುವ ಅಪ್ರತಿಮ ರಾಜಕೀಯ ಮೈಗೂಡಿಸಿಕೊಂಡ ನಾಯಕನೊಬ್ಬ ಇಂದಿರಾ ನಂತರ ಮತ್ತೊಬ್ಬ ಹೊರಹೊಮ್ಮಿರಲಿಲ್ಲ. ಅಂತಹ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಈ ‘ಸಮ್ಮೋಹಕ ಶಕ್ತಿ’ ಇರಲಿಲ್ಲ.

 

ಹಿಂದೂ ಹಬ್ಬಕ್ಕೆ ಕಡಿಮೆ ಮತ್ತು ಮುಸ್ಲಿಂ ಹಬ್ಬಕ್ಕೆ ಹೆಚ್ಚು ವಿದ್ಯುಚ್ಛಕ್ತಿ ಸರಬರಾಜು, ಮುಸ್ಲಿಂ ಮಕ್ಕಳಿಗೇ ಹೆಚ್ಚು ಲ್ಯಾಪ್‌ಟಾಪ್ ಮತ್ತಿತರೆ ಕೋಮು ಧ್ರುವೀಕರಣದ ಆರೋಪಗಳಿಗೆ ಪುರಾವೆ ಇಲ್ಲ. ನೋಟು ರದ್ದತಿ ಕ್ರಮವೂ ಅಷ್ಟೆ. ಕಾಳಧನ ವಾಪಸು ಬಂದಿಲ್ಲವೆಂದು ಅಂಕಿ ಅಂಶಗಳು ಬೇರೊಂದು ಕತೆಯನ್ನೇ ಹೇಳುತ್ತವೆ.ಆದರೆ ತಾವು ನಂಬಿಕೆಯಿಟ್ಟ ನಾಯಕ ಹೇಳುವುದೇ ಅಂತಿಮ ಸತ್ಯ ಎಂಬಷ್ಟು ಆಳದ ವಿಶ್ವಾಸವನ್ನು ಜನಸಮೂಹದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮೂಡಿಸಿರುವ ಮೋದಿಯವರ ಸಾಧನೆ ಯಾವ ಪವಾಡಕ್ಕೂ ಕಡಿಮೆಯದಲ್ಲ.

 

‘ಪ್ರಜಾವಾಣಿ’ ಕೈಗೊಂಡಿದ್ದ ಚುನಾವಣಾ ಪ್ರವಾಸ ಕಾಲದಲ್ಲಿ ಹರದೋಯಿ ಪಟ್ಟಣದ ಹೊರವಲಯದಲ್ಲಿ ಎದುರಾಗಿದ್ದ ಜಾಟವ (ಚಮ್ಮಾರ) ಆಶಾರಾಂ ಚೌಧರಿ ಈ ಮಾತಿಗೆ ಹೊಳೆ ಹೊಳೆಯುವ ಉದಾಹರಣೆ. ಮೂಳೆ ಚಕ್ಕಳಕ್ಕೆ ಮಸಿ ಬಟ್ಟೆ ಹೊದಿಸಿದಂತಿದ್ದ ಆತ ಸೈಕಲ್ ರಿಪೇರಿಯಿಂದ ಹೊಟ್ಟೆ ಹೊರೆಯುವವ.ಆತನ ಹಳ್ಳಿ ಆಗಾಪುರದ ಚಮ್ಮಾರ ಕೇರಿಯಲ್ಲಿ 250 ಮನೆಗಳಿವೆಯಂತೆ. ಅಲ್ಲಿ ಮೋದಿಯವರದೇ ಚರ್ಚೆಯಂತೆ. ತನ್ನ ಮತ ಕೂಡ ಮೋದಿಯವರಿಗೇ ಎಂದು ಹೇಳಲು ಆತನಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ‘ಮಾಯಾವತಿ ಅವರನ್ನು ಯಾಕೆ ಕೈಬಿಟ್ಟಿರಿ’ ಎಂಬ ಮಾತಿಗೆ ಆತ ಕಡೆಗೂ ಉತ್ತರ ಹೇಳಲಿಲ್ಲ.ಮೋದಿಯವರ ಮನಸ್ಸಿನ ಭಾವನೆಗಳು ಆತನಿಗೆ ಹಿಡಿಸಿದವಂತೆ. ‘ಮೋದೀಜೀ ಕೆ ದಿಲ್ ಕಾ ಭಾವನಾ ಮುಝೇ ಅಚ್ಛಾ ಲಗಾ...’ ಎಂದಿದ್ದ. ಬಡವರಿಗೆ ಉಚಿತ ಅಡುಗೆ ಅನಿಲ ನೀಡಿದ ಮೋದಿಯವರಿಗೆ ಮತ ಹಾಕಲು ಆತನ ಕೇರಿ ನಿರ್ಧರಿಸಿದೆಯೆಂದು ತಿಳಿಸಿದ್ದ. ನೋಟು ರದ್ದತಿಯಿಂದ ತನ್ನ ಕೂಲಿ ಗಳಿಕೆ ಕುಸಿದಿದ್ದು ನಿಜವಾದರೂ, ತನಗೆ ಅಸಮಾಧಾನ ಇಲ್ಲ ಎಂದಿದ್ದ.ಮೋದಿಯವರು ಹೇಳಿದಂತೆ ಬಡವ ಬಲ್ಲಿದರ ನಡುವೆ ಸಮಾನತೆ ತರುವ ಅವರ ಕೆಲಸಕ್ಕೆ ನಾವು ಮಾಡಬಹುದಾದ ತ್ಯಾಗವಿದು ಎಂದಿದ್ದ. ರೋಹಿತ್ ವೇಮುಲ ಆತ್ಮಹತ್ಯೆಯ ದುರಂತ ಆತನ ಕಿವಿಗೆ ಬಿದ್ದೇ ಇಲ್ಲ. ಗುಜರಾತಿನಲ್ಲಿ ಸತ್ತ ಹಸುವಿನ ಚರ್ಮ ಸುಲಿದ ಚಮ್ಮಾರರ ಚರ್ಮ ಸುಲಿದ ಅನಾಚಾರದ ಘಟನೆ ಕೂಡ ಆಗಾಪುರದ ಚಮ್ಮಾರ ಕೇರಿಯನ್ನು ತಲುಪಿಯೇ ಇಲ್ಲ. ಮೋದಿಯವರ ದಿಗ್ವಿಜಯಕ್ಕೆ ಮತ್ತು ಮಾಯಾವತಿ ಅವರ ಪಕ್ಷ ಆಕೆಯ ತವರಿನಲ್ಲೇ ನೆಲ ಕಚ್ಚಿದ ದುರಂತಕ್ಕೆ ಆಶಾರಾಂ ಚೌಧರಿ ಒಳನೋಟಗಳು ಅತ್ಯಂತ ಪ್ರಸ್ತುತ.

 

ಉತ್ತರಪ್ರದೇಶದ ಜನಸಂಖ್ಯೆಯ ಶೇ 21.6ರಷ್ಟಿರುವ ದಲಿತರು ಬಹುಜನ ಸಮಾಜ ಪಾರ್ಟಿಯ ತಳಹದಿ ಎಂದೇ ಜನಜನಿತ. ಆದರೆ ಈ ನಂಬಿಕೆಯ ಒಳಹೊಕ್ಕು ನೋಡಿದರೆ ಗರಿಕೆ ಬೇರುಮಟ್ಟದ ವಾಸ್ತವವೇ ಬೇರೆ. ಈ ದಲಿತ ಜನಜಾತಿಗಳ ಪೈಕಿ ಬಿಎಸ್‌ಪಿಯ ನಿಜವಾದ ಮೂಲಾಧಾರ ಜಾಟವರು (ಚಮ್ಮಾರರು). ಉಳಿದಂತೆ ಕೋರಿ, ಖಾಟಿಕ್, ಪಾಸಿ, ಧೋಬಿ ಮುಂತಾದ ಜಾತಿಗಳನ್ನೂ ಬಿಎಸ್‌ಪಿ ಬೆಂಬಲಿಗ ಲೆಕ್ಕಕ್ಕೆ ಹಿಡಿಯಲಾಗುತ್ತದೆ.ಈ ರಾಜ್ಯದ ಒಟ್ಟು 65 ದಲಿತ ಜಾತಿಗಳ ಪೈಕಿ 55 ಜಾತಿಗಳು ದೂರದೂರಕ್ಕೆ ಹರಿದು ಹಂಚಿಹೋಗಿ ಬದುಕಿರುವಂತಹವು. ಇವುಗಳ ಜನಸಂಖ್ಯೆಯೂ ನಗಣ್ಯ. ರಂಗರೇಜ್, ಸಾರ್ವನ್, ಮೂಸಾಹರ, ಕುಚ್ಬಧಿಯಾ, ಸಪೇರ, ಬೇಗಾರ, ತಂತ್ವಾ, ಬಾಸೋರ್... ಹೀಗೆ ಬೆಳೆಯುತ್ತದೆ ಅವುಗಳ ಪಟ್ಟಿ.ಈ ಜಾತಿಗಳ ಜನ ಸ್ವಂತ ವಿವೇಚನೆಯ ಮೇರೆಗೆ ಮತ ಚಲಾಯಿಸುವುದು ಅತಿ ವಿರಳ. ಸವರ್ಣ, ಹಿಂದುಳಿದ ಹಾಗೂ ಪ್ರಬಲ ದಲಿತರ ನೆರಳಾಗಿ, ಅವರು ಇಷಾರೆ ಮಾಡಿದ ಪಕ್ಷಗಳು- ಉಮೇದುವಾರರಿಗೆ ಮತ ಚಲಾಯಿಸುತ್ತಾರೆ. ಈ ಜಾತಿಗಳು ಮತ ಬ್ಯಾಂಕುಗಳಲ್ಲವೆಂದೇ ಇವರನ್ನು ರಾಜಕೀಯ ಪಕ್ಷಗಳು ಲೆಕ್ಕಕ್ಕೆ ಇಡುವುದಿಲ್ಲ. ಬಿಎಸ್‌ಪಿ ಕೂಡ ಈ ಮಾತಿಗೆ ಹೊರತಲ್ಲ.ದಲಿತ ಬಹುಜನ ರಾಜಕಾರಣದಲ್ಲೂ ಅವರಿಗೆ ಜಾಗ ದೊರೆತಿಲ್ಲ. ಕಷ್ಟ ಕಾರ್ಪಣ್ಯಗಳಲ್ಲೇ ನವೆದು ನೀಗುವ ಈ ಜಾತಿಗಳ ಜನ ಉಳಿದ ಸಮಾಜದ ಕಣ್ಣಿಗೆ ಅದೃಶ್ಯರು. ಈ ಜಾತಿಗಳ ನಡುವೆ ಆರ್‌ಎಸ್‌ಎಸ್‌  ಮತ್ತು ತುಸು ಮಟ್ಟಿಗೆ ಕಾಂಗ್ರೆಸ್ ಕೆಲಸ ಮಾಡತೊಡಗಿವೆ ಎನ್ನುತ್ತಾರೆ ಸಮಾಜಶಾಸ್ತ್ರಜ್ಞ ಬದರೀನಾರಾಯಣ.

 

ಜಾಟವ ಮತ್ತು ಇತರ ದಲಿತರ ನಡುವೆ ಉಂಟಾಗಿದ್ದ ಧ್ರುವೀಕರಣದ ಕಂದಕವನ್ನು ಇನ್ನಷ್ಟು ಹಿಗ್ಗಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿಯು ಜಾಟವ ಹೊರತಾದ 69 ದಲಿತರನ್ನು ಅಭ್ಯರ್ಥಿಗಳನ್ನಾಗಿ ಆರಿಸಿ ಕಣಕ್ಕೆ ಇಳಿಸಿತು. ಉತ್ತರಪ್ರದೇಶದ ಜಾತಿ ರಾಜಕಾರಣದ ಪರಿದೃಶ್ಯದಲ್ಲಿ ‘ಸರ್ವ ಜಾತ್ ವರ್ಸಸ್‌ ತೀನ್ ಜಾತ್’ (ಯಾದವ, ಜಾಟವ, ಮುಸ್ಲಿಂ ಎಂಬ ಮೂರು ಜಾತಿಗಳ ವಿರುದ್ಧ ಸರ್ವಜಾತಿಗಳು) ಎಂಬ ಯಶಸ್ವಿ ಸಮೀಕರಣ ಕಟ್ಟಿ ನಿಲ್ಲಿಸಿತು.

 

ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಿಯತಕಾಲಿಕ ‘ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ’ ಕೆಲ ದಿನಗಳ ಹಿಂದೆ ಸಂಶೋಧನಾ ಲೇಖನವೊಂದನ್ನು ಪ್ರಕಟಿಸಿದೆ. ‘ಭಾರೀ ಅಂಕಿಅಂಶಗಳು ಮತ್ತು ನಿಜಸ್ಥಿತಿಯ ಪುರಾವೆಗಳನ್ನೂ ಬೃಹತ್ ಕಥಾನಕವೊಂದು ಬುಡಮೇಲು ಮಾಡಿಬಿಡಬಲ್ಲದು ಎಂಬುದನ್ನು ಉತ್ತರಪ್ರದೇಶದಲ್ಲಿ ಬಿಜೆಪಿಯ ದೈತ್ಯ ಗೆಲುವು ರುಜುವಾತು ಮಾಡಿದೆ’ ಎಂದು ಈ ಲೇಖನ ಹೇಳಿದೆ.ಭಾರೀ ಅಂಕಿಅಂಶಗಳ ಕೊಂಡಾಟದ ಈ ಕಾಲಮಾನದಲ್ಲಿ, ಬಹುತೇಕ ಘನ ತೀರ್ಮಾನಗಳನ್ನು ಮುನ್ನಡೆಸುವ ಅಂಶ ಬೃಹತ್ ಕಥಾನಕಗಳೇ. ತಲೆಯಾಳೊಬ್ಬ ತಮ್ಮ ಸಲುವಾಗಿ ಹೋರಾಡುತ್ತಿದ್ದಾನೆಂದು ಜನಸಮೂಹ ಒಮ್ಮೆ ನಂಬಿಬಿಟ್ಟರೆ, ಅತ್ಯಂತ ನಿಖರ ಪುರಾವೆಗಳು ಕೂಡ ಅದನ್ನು ಪ್ರಭಾವಿಸಲಾರವು. ಈ ನಿಖರ ಪುರಾವೆಗಳು ಅಂಕಿ ಅಂಶಗಳಿರಬಹುದು ಇಲ್ಲವೇ ಇತಿಹಾಸವೇ ಆಗಿರಬಹುದು’ ಎಂದು ಈ ಲೇಖನದಲ್ಲಿ ಹೇಳಲಾಗಿದೆ.

 

‘ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಅವರ ಬಿಜೆಪಿ ಪರವಾಗಿ ಮತ ಚಲಾಯಿಸುವಾಗ ನೋಟು ರದ್ದತಿಯಿಂದ ತಮಗೆ ಒದಗಿದ ಪಡಿಪಾಟಲು, ಬ್ಯಾಂಕುಗಳಲ್ಲಿ ಜಮೆಯಾದ ಭಾರೀ ಠೇವಣಿ ಅಥವಾ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಲೆಕ್ಕಾಚಾರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ.ಭಾರತ ವಿತ್ತೀಯ ಮತ್ತು ರಾಜಕೀಯ ಪವಾಡವೊಂದನ್ನು ನಿಜಕ್ಕೂ ಸಾಧಿಸಿತೇನು? ಸರ್ಕಾರ ಬಡಬಗ್ಗರ ಪರವಾಗಿ ಭ್ರಷ್ಟಾಚಾರದ ವಿರುದ್ಧ ಕ್ರಿಯಾಶೀಲವಾಗಿದೆ, ನಿರ್ಣಾಯಕವಾಗಿ ಕೆಲಸ ಮಾಡುತ್ತಿದೆ ಎಂಬ ತೂಕದ ಸಂದೇಶವನ್ನು ಜನತೆಗೆ ಮುಟ್ಟಿಸಲಾಯಿತು.ಹಾಡು, ಕುಣಿತ, ಅಡಿಗಡಿಗೆ ದಿರಿಸು ಬದಲಾವಣೆ ಇಲ್ಲದ ಈ ಸನ್ನಿವೇಶವನ್ನು ಭ್ರಮಾಧೀನ ಬಾಲಿವುಡ್ ಸಿನಿಲೋಕದಿಂದ ಅನಾಮತ್ತಾಗಿ ಎತ್ತಿಕೊಂಡದ್ದು ಎಂಬ ಭ್ರಮೆ ಮೂಡಿಸಿದರೆ ಆಶ್ಚರ್ಯಪಡಬೇಕಿಲ್ಲ’ ಎಂದು ಭಾಸ್ಕರ ಚಕ್ರವರ್ತಿ ‘ಭಾರತದ ನೋಟು ರದ್ದತಿ ಪ್ರಯೋಗದ ಆರಂಭಿಕ ಪಾಠಗಳು’ ಕುರಿತ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

 

ಕಣ್ಣು ಕುಕ್ಕುವಂತಹದ್ದೇನನ್ನಾದರೂ ಮಾಡಿ ತೋರಿಸಬೇಕೆಂಬ ಒತ್ತಡ ತಮ್ಮ ಮೇಲೆ ಹೆಚ್ಚತೊಡಗಿದಂತೆ, ಉತ್ತರಪ್ರದೇಶದ ಚುನಾವಣೆಗಳೂ ಕದ ತಟ್ಟಿದ್ದ ಹಂತದಲ್ಲಿ ಮೋದಿಯವರು ಕೈ ಹಾಕಿದ್ದು ನೋಟು ರದ್ದತಿಯ ಅಪಾಯಕಾರಿ ಆಟಕ್ಕೆ.ಈ ಬಹುದೊಡ್ಡ ಬಾಜಿಗೆ ಕೈ ಹಾಕುವ ಕೆಟ್ಟ ಧೈರ್ಯದ ಜೊತೆಗೆ ಬಾಜಿಯನ್ನು ಗೆಲ್ಲುವ ಆತ್ಮವಿಶ್ವಾಸವೂ ಅವರಲ್ಲಿತ್ತು ಎಂಬುದಕ್ಕೆ ಜನಸಮೂಹವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ವೈಖರಿಯೇ ಬಹುದೊಡ್ಡ ಪುರಾವೆ. ಪ್ರಧಾನಿಯವರ ಈ ಆತ್ಮವಿಶ್ವಾಸಕ್ಕೆ ಎಣ್ಣೆ ಎರೆದು ಬಿಜೆಪಿಯ ಘನ ಗೆಲುವಿಗೆ ಕಾರಣವಾದ ಹತ್ತು ಹಲವು ಕಾರಣಗಳು, ವಿದ್ಯಮಾನಗಳು ಉತ್ತರಪ್ರದೇಶದಲ್ಲಿ ಜರುಗಿವೆ.

 

ಉಳಿದಂತೆ ಮೋದಿ ಗೆಲುವಿಗೆ ಗರಿ ಮೂಡಿಸುವಂತೆ ಬೇರು ಮಟ್ಟದಲ್ಲಿ ನಡೆದ ಕೆಲಸವನ್ನು ಇಲ್ಲಿ ಪ್ರಸ್ತಾಪಿಸಬೇಕು. ಉತ್ತರಪ್ರದೇಶದ ಚುನಾವಣೆಯನ್ನು ಬಿಜೆಪಿಯ ಬೇರು ಸಂಸ್ಥೆ ಆರ್‌ಎಸ್‌ಎಸ್‌ ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು. ಉಳಿದ ಎಲ್ಲ ಪಕ್ಷಗಳೂ ಮಲಗಿದ್ದಾಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪರಿವಾರ ಕೆಲಸಕ್ಕೆ ಇಳಿದಿತ್ತು.2019ರ ಲೋಕಸಭಾ ಚುನಾವಣೆ ‘ಅಂತಿಮ ಪಂದ್ಯ’ವೆಂದೂ, ಈ ಅಂತಿಮ ಪಂದ್ಯಕ್ಕೆ ಹಾಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಿರ್ಣಾಯಕ ‘ಸೆಮಿಫೈನಲ್’ ಎಂದೂ ಬಗೆದಿತ್ತು. ವಿಶೇಷವಾಗಿ ಉತ್ತರಪ್ರದೇಶದಲ್ಲಿ ಆರ್‌ಎಸ್ಎಸ್‌  ಗರಿಕೆ ಬೇರುಮಟ್ಟವನ್ನೂ ಮುಟ್ಟಿರುವ ಸಂಘಟನೆ.2015ರ ಕಡೆಯ ಭಾಗದಲ್ಲಿ ಬಿಹಾರ ವಿಧಾನಸಭಾ ಚುನಾವಣಾ ಸೋಲಿನ ಮುಖಭಂಗ ಈ ಎಚ್ಚರವನ್ನು ಮೂಡಿಸಿತ್ತು. 2014ರಲ್ಲಿ ಉತ್ತರಪ್ರದೇಶದ ಅಭೂತಪೂರ್ವ ಗೆಲುವಿನ ಉಡುಗೊರೆಯನ್ನು ಮೋದಿಯವರಿಗೆ ಸಮರ್ಪಿಸಿ ಪಡೆದಿದ್ದ ‘ಅಭಿನವ ಚಾಣಕ್ಯ’ನೆಂಬ ಅಮಿತ್ ಷಾ ಬಿರುದು ಅಪಾಯಕ್ಕೆ ಸಿಲುಕಿತ್ತು.ಬಿಹಾರದ ಸೋಲಿನ ಬೆನ್ನಿಗೇ ಉತ್ತರಪ್ರದೇಶದ ಕಣಕ್ಕೆ ಅವರು ಇಳಿದರು. ಮತಗಟ್ಟೆಗಳ ಸೂಕ್ಷ್ಮ ನಿರ್ವಹಣೆಯ ಕಲೆಯನ್ನು ಅವರು 2014ರಲ್ಲೇ ಕರಗತ ಮಾಡಿಕೊಂಡಿದ್ದರು. ಈ ಯಶಸ್ವಿ ಯಂತ್ರದ ದೂಳು ಕೊಡವಿ ನುಣುಪುಕಾರಕ ಎರೆದು ಚಾಲನೆಯ ಗುಂಡಿ ಒತ್ತುವ ಕೆಲಸ ಮಾಡಬೇಕಿತ್ತು.ಜೊತೆ ಜೊತೆಗೆ ಮತ್ತೊಂದು ನಿರ್ಣಾಯಕ ಕೆಲಸವನ್ನು ಅವರು ತಳಮಟ್ಟದಿಂದ ಹೊಸದಾಗಿ ಆರಂಭಿಸಿದ್ದರು. ಅದೆಂದರೆ ಯಾದವ ಜಾತಿಯನ್ನು ಹೊರತುಪಡಿಸಿದ ಹಿಂದುಳಿದ ವರ್ಗಗಳ ಜಾತಿಗಳು ಮತ್ತು ಚದುರಿ ಹೋಗಿದ್ದ ಅತಿ ಹಿಂದುಳಿದ ವರ್ಗಗಳ ಜಾತಿಗಳು, ಈ ಜಾತಿಗಳನ್ನು ಆಧರಿಸಿದ ಸಣ್ಣಪುಟ್ಟ ರಾಜಕೀಯ ಪಕ್ಷಗಳನ್ನು ಬಿಜೆಪಿಯ ಚುನಾವಣಾ ಯಂತ್ರಕ್ಕೆ ಜೋಡಿಸುವ ಕೆಲಸ.ಸಮಾಜವಾದಿ ಪಾರ್ಟಿ ಕುಟುಂಬ ಕಲಹದಲ್ಲಿ ತೊಡಗಿದ್ದಾಗ, ಕಾಂಗ್ರೆಸ್ ಮತ್ತು ಬಿಎಸ್‌ಪಿ ಮೈಕೊಡವಿ ಮೇಲೇಳುವ ಮುನ್ನವೇ ಈ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಗೌಡ್, ಲೋಹಾರ, ಕುಮ್ಹಾರ, ಬಿಂಡ್, ಮಲ್ಲಾ, ಪಾಲ್, ರಾಜಭರ್, ಚೌಹಾಣ್ ಮತ್ತು ಇತರ 40ಕ್ಕೂ ಹೆಚ್ಚು ಅತಿ ಹಿಂದುಳಿದ ಜಾತಿಗಳ ಸಭೆಗಳಿಗೆ ಖುದ್ದು ಅಮಿತ್ ಷಾ ಹಾಜರಾಗಿ ಅವುಗಳ ವಿಶ್ವಾಸ ಗಳಿಸಿದರು.ಉದಾಹರಣೆಗೆ, ಇಂತಹುದೊಂದು ಜಾತಿಯ ಹೆಸರು ರಾಜಭರ್. ಈ ಜಾತಿಯ ಪಕ್ಷವಾದ ಸುಹೇಲ್‌ ದೇವ್ ಭಾರತೀಯ ಸಮಾಜ ಪಾರ್ಟಿಯ ಜೊತೆಗೆ ಬಿಜೆಪಿ ಚುನಾವಣಾ ಮೈತ್ರಿ ಮಾಡಿಕೊಂಡಿತು. ಈ ಜಾತಿಯ ಸ್ವಾಭಿಮಾನದ ಪ್ರತೀಕವಾದ ರಾಜಾ ಸುಹೇಲ್ ದೇವನ ಹೆಸರಿನ ಹೊಸ ರೈಲುಗಾಡಿ ಸಂಚಾರ ಆರಂಭಿಸಲಾಯಿತು. ರಾಜಭರ್, ಕುಶವಾಹ, ಮೌರ್ಯ ಮುಂತಾದ ಹಿಂದುಳಿದ ವರ್ಗಗಳಿಗೆ ಬಿಜೆಪಿ 119 ಟಿಕೆಟ್‌ಗಳನ್ನು ನೀಡಿತು.

 

ಮೋದಿಯವರ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸುವ ಕೆಲಸದಲ್ಲಿ ಆರ್‌ಎಸ್‌ಎಸ್‌ ಎಡೆಬಿಡದೆ ತೊಡಗಿತ್ತು. ಜನಾಭಿಪ್ರಾಯ ಸಂಗ್ರಹದಿಂದ ಹಿಡಿದು  ಆಯಾ ಕ್ಷೇತ್ರಗಳಲ್ಲಿ ಜನರನ್ನು ಬಾಧಿಸುವ, ಪ್ರಭಾವಿಸುವ ಸಂಗತಿಗಳನ್ನು ಗುರುತಿಸಿ ಬಿಜೆಪಿಗೆ ದಾಟಿಸುತ್ತಿತ್ತು.ಬಿಜೆಪಿ ಕಾರ್ಯಕರ್ತರು- ಬೆಂಬಲಿಗರ ನಡುವಣ ಅಸಮಾಧಾನಅಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಬಿಹಾರ ಮಾದರಿಯ ಮಹಾ ಮೈತ್ರಿಕೂಟವೊಂದು ಎದುರಾಗಿದ್ದರೆ ಬಿಜೆಪಿಯ ಗೆಲುವು ಕಠಿಣವಿತ್ತು ಎನ್ನುತ್ತದೆ ಫಲಿತಾಂಶದ ಅಂಕಿ ಅಂಶಗಳ ಸೂಕ್ಷ್ಮ ವಿಶ್ಲೇಷಣೆ. ಮುಂಬರುವ ದಿನಗಳಲ್ಲಿ ಬಿಜೆಪಿ ಹೆಜ್ಜೆ ಗುರುತುಗಳು ದೇಶದ ದಶದಿಕ್ಕುಗಳಿಗೆ ವ್ಯಾಪಿಸುವ ಎಲ್ಲ ಸೂಚನೆಗಳು ದಟ್ಟವಾಗಿ ಕಾಣಬರುತ್ತಿವೆ.

 

ಸಮಾನ ನಾಗರಿಕ ಸಂಹಿತೆ, ಕಾಶ್ಮೀರದ ಸ್ವಾಯತ್ತ ಸ್ಥಾನಮಾನ ಎತ್ತಿ ಹಿಡಿಯುವ ಸಂವಿಧಾನದ 370ನೆಯ ಕಲಮು, ರಾಮಮಂದಿರ ನಿರ್ಮಾಣ, ಹೊಸ ಶಿಕ್ಷಣ ನೀತಿ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮೊದಲಾದ ತನ್ನ ತಿರುಳು ಕಾರ್ಯಸೂಚಿಯನ್ನು ಬಿಜೆಪಿ ಹೊರ ತೆಗೆದು ದೂಳು ಕೊಡವಲಿರುವುದು ನಿಶ್ಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry