ಬುಧವಾರ, ಡಿಸೆಂಬರ್ 11, 2019
24 °C

ಏನ ಹೇಳಲಿ ನಾನು...

ಪ್ರಕಾಶ್ ರೈ
Published:
Updated:
ಏನ ಹೇಳಲಿ ನಾನು...

ಅದೊಂದು ಸಾವಿನ ಮನೆ. ಎಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಕಣ್ಣ ಮುಂದೆ ಹೆಂಡತಿ ಸತ್ತು ಮಲಗಿದ್ದಾಳೆ. ಅವಳ ಗಂಡ ಮಾತ್ರ ಕಲ್ಲಿನಂತೆ ಕುಳಿತಿದ್ದಾನೆ. ‘ನೀನು ಸತ್ತರೇನೇ ನನಗೆ ಜೀವನದಲ್ಲಿ ನೆಮ್ಮದಿ...’ ಎಂದು ಅವಳಿಗೆ ಎರಡು ವಾರದ ಹಿಂದೆ ಬೈದಿದ್ದಾನೆ. ‘ಸೇಮ್ ಟು ಯೂ’ ಎಂದು ಅವಳು ಐ ಲವ್ ಯೂ ಅನ್ನುವಂತೆ ಉತ್ತರಿಸಿದ್ದಾಳೆ. ಬೆಳಿಗ್ಗೆ ಮಾರ್ಕೆಟ್‌ಗೆ ಹೋಗಿ ಹಿಂತಿರುಗುವಾಗ ಆಕ್ಸಿಡೆಂಟ್ ಆಗಿದೆ. ಈಗ ಅವಳಿಲ್ಲ.

ಅವನು-ಅವಳು ಅಥವಾ ಅವಳು-ಅವನು! ಈ ಸಂಬಂಧವನ್ನು ಹೇಗೆ ವಿವರಿಸುವುದೆಂದು ಗೊತ್ತಾಗುತ್ತಿಲ್ಲ. ಒಬ್ಬರನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು. ಜಾತಿ, ಮತ, ಊರು ಎಲ್ಲವೂ ಬೇರೆಯಾಗಿದ್ದರೂ ಮನಸ್ಸು ಒಂದಾಗಿತ್ತು. ಎಲ್ಲವನ್ನೂ ಎಲ್ಲರನ್ನೂ ಮೀರಿ ಅವರಿಬ್ಬರೂ ಸೇರಿದ್ದರು. ಆದರೆ ಎರಡೇ ವರ್ಷಗಳಲ್ಲಿ ಸಂಬಂಧ ಹಳಸಿತ್ತು. ಅವನು ಬಯಸಿದಂತೆ ಅವಳಿಲ್ಲ. ಅವನೋ ಅವಳಿಗೆ ಹಿಡಿಸದ ಬದುಕನ್ನು ಬದುಕುತ್ತಿದ್ದಾನೆ. ‘ಇವನಿಗೆ ಸಾವು ಬರುತ್ತಿಲ್ಲವಲ್ಲ’ ಎಂದು ಅವಳೂ, ‘ಅವಳನ್ನು ಕೊಂದು ಜೈಲಿಗೆ ಹೋದರೂ ಪರವಾಗಿಲ್ಲ’ ಎಂದು ಅವನೂ ಯೋಚಿಸಿದ್ದಾನೆ.

ಹೆಂಡತಿ ಸತ್ತು ಮಲಗಿರುವ ಮನೆಯಲ್ಲಿ ಅಷ್ಟೊಂದು ಜನರಿದ್ದರೂ ಒಂಟಿಯಾಗಿದ್ದಾನೆ ಗಂಡ. ಇಬ್ಬರೂ ಸೇರಿ ಬದುಕಿದ ಯಾವ ಕ್ಷಣಗಳೋ ಕಣ್ಣ ಮುಂದೆ ಬಂದು ಹೋಗುತ್ತಿವೆ. ಬಟ್ಟೆಗಳನ್ನು ಜೋಡಿಸುತ್ತಾ ಅವಳ ಕಪಾಟನ್ನು ತೆರೆದು ನೋಡಿದರೆ ಅವನಿಗೆ ಒಂದಿಷ್ಟೂ ಹಿಡಿಸದ ಮಾಡರ್ನ್ ಉಡುಗೆಗಳು. ಅವಳು ತೊಡುವ ಡ್ರೆಸ್‌ಗಳಿಗಾಗಿಯೇ ಎಷ್ಟೋ ಸಲ ‘ಸತ್ತು ಹೋಗು’ ಎಂದು ಶಪಿಸಿದ್ದ. ಈಗಾದರೂ, ‘ಸದ್ಯ, ಹೋದಳಲ್ಲ’ ಎಂದು ನಿಟ್ಟುಸಿರುಬಿಟ್ಟು ಮಂಚದ ಮೇಲೆ ಕೂರುತ್ತಾನೆ. ಆ ಮಂಚ ಅವಳಿಗೆ ಇಷ್ಟವಾಗಿರಲಿಲ್ಲ. ಅದು ಗೊತ್ತಾಗಿಯೇ ಅವನು ಅದನ್ನು ಕೊಂಡು ತಂದಿದ್ದ.

ಆದರೂ... ಎಷ್ಟೋ ವಿಷಯಗಳಲ್ಲಿ ಅವಳೂ ತನ್ನನ್ನು ಸಹಿಸಿಕೊಂಡಿದ್ದಳಲ್ಲವೇ ಎಂದು ಮನಸ್ಸು ಹೇಳುತ್ತಿದೆ. ಒಂದು ಕಾಲದಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿಯ ಮರಣಕ್ಕೆ ಅಳುವುದೇ- ಬೇಡವೇ ಅನ್ನುವ ಗೊಂದಲವೇ ಅವನಿಗೆ ಹೆಚ್ಚು ನೋವು ಕೊಡುತ್ತಿದೆ. ಹಾಗೇ ಅಡುಗೆ ಮನೆಗೆ ಹೋಗಿ ಫ್ರಿಡ್ಜನ್ನು ತೆರೆಯುತ್ತಾನೆ. ಅದರೊಳಗೆ ಅವನಿಗೆ ತುಂಬಾ ಇಷ್ಟವಾದ ಆದರೆ, ಅವಳಿಗೆ ಸ್ವಲ್ಪವೂ ಹಿಡಿಸದ ಸಿಹಿಖಾದ್ಯವೊಂದನ್ನು ಇವನಿಗೆಂದೇ ಮಾಡಿಟ್ಟು ಅಂದು ಮಾರ್ಕೆಟ್‌ಗೆ ಹೋಗಿದ್ದಾಳೆ. ಅದನ್ನು ಕಂಡೊಡನೆ ಅಷ್ಟು ಹೊತ್ತು ಹಿಡಿದಿಟ್ಟಿದ್ದ ದುಃಖ ಕಣ್ಣೀರಾಗಿ ಹರಿಯುತ್ತದೆ. ಅವಳು ಸಾಯುವ ಮೊದಲು ತನಗಾಗಿ ಮಾಡಿಟ್ಟ ಸಿಹಿ ತಿನಿಸನ್ನು ಅಳುತ್ತಲೇ ತಿನ್ನುತ್ತಾನೆ.

ಕತೆಯ ದುರಂತ ಅಲ್ಲಿದೆ. ಅವಳು ಆ ಸಿಹಿಯೊಳಗೆ ವಿಷ ಬೆರೆಸಿಟ್ಟು ಹೋಗಿದ್ದಾಳೆ. ಅವನು ಅದನ್ನು ತಿಂದು ಸಾಯಲಿ ಎಂದು ಆಶಿಸಿದ್ದಾಳೆ. ಅವಳನ್ನು ನೆನೆದು ಕಣ್ಣೀರಿಟ್ಟು, ಅದನ್ನು ತಿಂದೊಡನೆ ಅವನ ಕತೆಯೂ ಮುಗಿಯಿತು.

ಎಂದೋ ಯಾರೋ ನನಗೆ ಹೇಳಿದ ಕತೆಯಿದು. ಇದನ್ನು ಕೇಳಿದ ಮೇಲೆ ಅನ್ನಿಸಿತು; ಅವರಿಬ್ಬರೂ ಸತ್ತು ಹೋಗಿ ಬಹಳ ದಿನಗಳಾಗಿದ್ದವು. ಇಬ್ಬರಿಗೂ ಅದು ಗೊತ್ತಾಗಿರಲಿಲ್ಲ. ಒಂದೇ ಮನೆಯಲ್ಲಿ ಇಬ್ಬರೂ ಉಸಿರಾಡುವ ಹೆಣಗಳಾಗಿ ಜೀವ ಸವೆಸುತ್ತಿದ್ದರು.

ನಮ್ಮ ಸುತ್ತಮುತ್ತಲೂ ಇಂಥ ಗಾಢವಾದ ಪ್ರೇಮಕತೆಗಳು ಬಹಳಷ್ಟಿವೆ. ನನಗೆ ತುಂಬಾ ಹತ್ತಿರದ ಸ್ನೇಹಿತರಿಬ್ಬರು ಪ್ರೇಮಿಸಿದರು. ಹೆತ್ತವರ ಒಪ್ಪಿಗೆ ಪಡೆದು ಮದುವೆಯಾದರು. ಅವಳು ಅವನನ್ನು ‘ಲೇ ಹಂದಿ’ ಎಂದು ಪ್ರೀತಿಯಿಂದ ಕರೆಯುತ್ತಿದ್ದಳು. ಅವರ ಮದುವೆಯ ಮೊದಲ ವರ್ಷದ ಸಂಭ್ರಮಕ್ಕೆ ನಾವು ಗೆಳೆಯರೆಲ್ಲಾ ಸೇರಿ ಪುಟ್ಟ ಹಂದಿಮರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದೆವು. ನಮ್ಮ ಗ್ಯಾಂಗ್‌ನ ರೋಲ್‌ಮಾಡೆಲ್ ಜೋಡಿ ಅವರೇ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಂತೇ ದಿಢೀರೆಂದು ಅವರಿಬ್ಬರು ವಿವಾಹ ವಿಚ್ಛೇದನ ಮಾಡಿಕೊಂಡರು.

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಗ ಅವರಿಬ್ಬರ ಬಳಿಯೂ ನಾನು ಪ್ರತ್ಯೇಕವಾಗಿ ಮಾತನಾಡಿದೆ. ಮಾತನಾಡಿದಾಗ ಅವರಿಬ್ಬರು ಕೂಡಿ ಬದುಕುವುದು ಸಾಧ್ಯವಿಲ್ಲ ಎಂದು ಮಾತ್ರವಲ್ಲ, ಕೂಡಿ ಬದುಕಲೇಕೂಡದು ಎಂದು ನನಗೆ ಅನ್ನಿಸಿತು. ಯಾಕೆಂದರೆ ಅವರಿಬ್ಬರು ಪ್ರೀತಿಸುವವರೆಗೂ ಅವನು ಕಂಡ ಅವಳು ಬೇರೆ, ಅವಳು ಕಂಡ ಅವನು ಬೇರೆ. ಇಬ್ಬರೂ ಅವರೊಳಗಿನ ಓರೆಕೋರೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡಿದ್ದೇ ಇಲ್ಲ.

‘ಅವನು ಬದಲಾಗಿಬಿಟ್ಟ, ನಾನು ಪ್ರೇಮಿಸಿದಾಗ ಇದ್ದಂತಿಲ್ಲ, ಜೀವನಪೂರ್ತಿ ಪ್ರಿಯಕರನಾಗಿಯೇ ಇರುತ್ತಾನೆಂದು ನಂಬಿ ಮದುವೆಯಾದೆ, ಮದುವೆಯಾದೊಡನೆ ಗಂಡನಾಗಿಬಿಟ್ಟ’ ಎಂದು ಆರೋಪಗಳ ದೊಡ್ಡ ಪಟ್ಟಿಯನ್ನೇ ಓದುತ್ತಿದ್ದಾಳೆ ಅವಳು. ‘ಅವಳು ನಾನಂದುಕೊಂಡ ಹೆಣ್ಣೇ ಅಲ್ಲ, ಮೋಸ ಹೋಗಿಬಿಟ್ಟೆ ಪ್ರಕಾಶ್’ ಎಂದು ಘಾಸಿಗೊಂಡು ನಿಂತಿದ್ದಾನೆ ಅವನು.

ಅವಳ ಬೆವರಿನ ವಾಸನೆ ಇವನಿಗೆ ಹಿಡಿಸಿಲ್ಲ, ಇವನ ಗೊರಕೆಯ ಶಬ್ದ ಅವಳನ್ನು ಡಿಸ್ಟರ್ಬ್ ಮಾಡಿದೆ. ಕಾಫಿಯನ್ನು ಸೊರ್ ಸೊರ್ ಎಂದು ಅವಳು ಹೀರಿ ಕುಡಿಯುವುದು ಇವನಿಗೆ ಹಿಡಿಸಲಿಲ್ಲ. ಇವನು ಎರಡು ದಿನಕ್ಕೊಮ್ಮೆ ಸ್ನಾನ ಮಾಡಿ ಕೊಳಕಾಗಿ ಸುತ್ತುವುದು ಅವಳಿಗೆ ಸಹಿಸಲಾಗಿಲ್ಲ. ಹೀಗೆ ಹಲವಾರು ವಿಷಯಗಳಲ್ಲಿ ಹೊಂದಿಕೊಂಡು ಹೋಗಲು ಅವರು ತಯಾರಿಲ್ಲ. ಅವಳಿಗೆ ಇನ್ನು ಮುಂದೆ ನನ್ನನ್ನು ಹಂದಿ ಎಂದು ಕರೆಯಬೇಡವೆಂದು ಸಿಡುಕುತ್ತಿದ್ದಾನೆ. ಇವರ ಇಂಥಾ ಪ್ರೀತಿಗೆ ಸಾಕ್ಷಿಯಾದೆನೇ ಎಂದು ಪುಟ್ಟ ಹಂದಿ ಪಿಳಿಪಿಳಿ ನೋಡುತ್ತಿದೆ.

ಹಲವು ಯುವಕ, ಯುವತಿಯರಿಗೆ ಪ್ರೇಮಿಸಲೇ ಗೊತ್ತಿಲ್ಲ. ‘ಕ್ಲಾಸ್‌ನಲ್ಲಿ ಅವಳು ನನ್ನ ಜೊತೆ ಮಾತ್ರ ಮಾತನಾಡುತ್ತಾಳೆ ಸಾರ್’ ಎಂದು ಆಕೆ ಸುಮ್ಮನೆ ಹಾಯ್-ಹಲೋ ಅಂದಿದ್ದನ್ನೇ ಪ್ರೀತಿ ಎಂದು ಅರ್ಥೈಸಿಕೊಳ್ಳುತ್ತಾನೆ ಇವನು. ‘ಅವನು ಪ್ರತಿದಿನ ಬಂದು ಬಸ್ ಹತ್ತಿಸಿ ಹೋಗುತ್ತಿದ್ದ, ಈಗವನು ಲವ್ ಮಾಡಲೇ ಇಲ್ಲ ಅನ್ನಿಸುತ್ತಿದೆ’ ಎಂದು ಅವಳು ಅಳುತ್ತಾಳೆ. ಪ್ರೇಮಕ್ಕೂ ಕಾಮಕ್ಕೂ ಇರುವ ಅರ್ಥವೇನೆಂದು ಹಲವರಿಗೆ ಗೊತ್ತೇ ಇಲ್ಲ. ದೇಹಕ್ಕೂ ಮನಸ್ಸಿಗೂ ನಡೆಯುವ ನಿರಂತರ ಹೋರಾಟವನ್ನು ಪ್ರಪಂಚದ ಯಾವ ಭಾಷೆಯಲ್ಲೂ ಅಷ್ಟು ಸುಲಭವಾಗಿ ವರ್ಣಿಸಲಾಗುವುದಿಲ್ಲ.

ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರ ಒಳಗೂ ಹೀಗೆ ಪ್ರೇಮವೂ ಕಾಮವೂ ರಾಟೆಯಂತೆ ಸುತ್ತುತ್ತಲೇ ಇರುತ್ತದೆ. ಕೆಲವರು ಅದರ ಮಾಯೆಗೆ ಒಳಗಾಗುತ್ತಾರೆ. ಕೆಲವರು ತಲೆ ಸುತ್ತಿ ಕೆಳಗಿಳಿಯುತ್ತಾರೆ. ಕೆಲವರು ಯಾರಿಗೂ ತಿಳಿಯದಂತೆ ಅತ್ತು ನಗುತ್ತಾ ಸಂಭಾಳಿಸುತ್ತಾರೆ. ಕಾಮವೂ ಪ್ರೇಮವೂ ಮನಸ್ಸಿನೊಳಗಿರುವವರೆಗೂ ಅದು ಗೌರವ. ಮಿದುಳಿಗೆ ಏರಿಬಿಟ್ಟರೆ ಎಲ್ಲರೂ ರಾವಣರೇ.

ಇರುವ ಒಂದು ತಲೆಗೆ ಕಾಮವೇರಿದರೇನೇ ತಡಬಡಾಯಿಸುತ್ತೇವೆ. ರಾವಣನಿಗೆ ಹತ್ತು ತಲೆ. ಸೀತೆ ಹತ್ತು ತಲೆಯೊಳಗೂ ಹತ್ತಿ ಮಲಗಿದ್ದಾಳೆ. ಯಾರ ಮಾತು ಕೇಳುವನು ರಾವಣ. ರಾವಣನೊಳಗೆ ಮೊಳೆತದ್ದೂ ಪ್ರೇಮವೇ. ಒಬ್ಬನಿಗೆ ಒಬ್ಬಳು ಎನ್ನುವುದು ಮಾತ್ರ ಪ್ರೇಮವೆಂದಾದರೆ, ಮಹಾಭಾರತದಲ್ಲಿ ಐವರಿಗೆ ಒಬ್ಬಳೆನ್ನುವುದು ಪ್ರೇಮವಲ್ಲವೇ? ಹದಿನಾರು ಸಾವಿರ ಮಂದಿ ಹೆಣ್ಣುಮಕ್ಕಳು ಕೃಷ್ಣನನ್ನು ಇಷ್ಟಪಟ್ಟರಲ್ಲವೇ - ಅದಕ್ಕೆ ಹೆಸರೇನು?

‘ಪ್ರೇಮ, ಪ್ರೇಮಿಸುವವರ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಿಯಲ್ಲ ಪ್ರಕಾಶ್, ನಿನ್ನೊಳಗೂ ಇಂಥಾ ಕತೆಗಳಿಲ್ಲವೇ’ ಎಂದು ನೀವು ಕೇಳಬಹುದು. ನಾನು ಹೆಸರುಗಳನ್ನು ಹೆಸರಿಸದೇ ಅವನು-ಅವಳು ಎಂದಿದ್ದಕ್ಕೆ ಕಾರಣ ಅದೇ. ಎಲ್ಲಾ ಅವನೂ ಅವಳೂ ದಾಟಿಬರಲೇಬೇಕಾದ ವಿಷಯ ಇದು.

ಪ್ರೇಮವೋ ಕಾಮವೋ ಇವುಗಳ ಬಗ್ಗೆ ನನಗೆ ಎಂದಿಗೂ ಗೊಂದಲವಾಗಿದ್ದಿಲ್ಲ. ಎರಡೂ ಅನುಭವವೇ ನನಗೆ. ನನ್ನ ಗುರುಗಳಾದ ಕೆ.ಬಾಲಚಂದರ್ ಅವರ ಧಾರಾವಾಹಿಯಲ್ಲಿ ನನ್ನ ಪಾತ್ರ ಹಾಡುವ, ಡಾ.ಕೃತಿಕಾ ಅವರು ಬರೆದ ಅದ್ಭುತವಾದ ಗಜಲ್ ಒಂದು ನನಗೆ ನೆನಪಿಗೆ ಬರುತ್ತಿದೆ.

ಪ್ರೇಮವೆನ್ನುವುದು ಕಾವ್ಯವೇ

ಅದರೊಳಗೆ ಪದಗಳಾಗಿ ಸೆರೆಯಾಗಲು ನನಗೆ ಇಷ್ಟವಿಲ್ಲ

ಪ್ರೇಮವೆಂಬುದು ಕಾದಂಬರಿಯೇ

ಅನೇಕರ ಸ್ಪರ್ಶಕ್ಕೆ ಪಕ್ಕಾಗಲು ನನಗೆ ಇಷ್ಟವಿಲ್ಲ

ಪ್ರೇಮವೆಂಬುದು ಸನ್ನಿಧಿಯೇ

ಅಲ್ಲಿ ಶಿಲೆಯಾಗಿ ನಿಲ್ಲುವುದು ನನಗೆ ಇಷ್ಟವಿಲ್ಲ

ಪ್ರೇಮವೆಂಬುದು ಸ್ವರ್ಗವೇ

ಅದರೊಳಗೆ ಕಾಲಿಟ್ಟ ಯಾರೊಬ್ಬರೂ ಹಿಂತಿರುಗಿಲ್ಲ

ಹೇಗೆ ನಂಬಲಿ ಈ ಪ್ರೇಮವನ್ನು?

ಈ ಹಾಡೇ ನನ್ನ ಕ್ಯಾರೆಕ್ಟರ್. ಒಂದು ಹೂ ಕಾಯಾಗಿ, ಹಣ್ಣಾಗುವ ದಿವ್ಯಕ್ಷಣವನ್ನು ಈ ಪ್ರಪಂಚದಲ್ಲಿ ಕಂಡವರು ಯಾರೂ ಇಲ್ಲ. ಆದರೆ ನಮ್ಮ ಕಣ್ಣ ಮುಂದೆಯೇ ಆ ಬದಲಾವಣೆ ನಡೆದಿರುತ್ತದೆ. ಪ್ರೇಮವೂ ಹಾಗೆಯೇ. ಎಲ್ಲರೊಳಗೂ ಮೂಡುತ್ತದೆ. ನನ್ನೊಳಗೂ ಮೂಡುತ್ತಲೇ ಇದೆ. ನಾನು, ನನ್ನ ಮಡದಿ ಪ್ರೇಮಿಸಿ ಮದುವೆಯಾದೆವು. ಇನ್ನೂ ಪ್ರೇಮಿಸುತ್ತಲೇ ಇದ್ದೇವೆ. ಒಂದು ದಿನ, ‘ನಿನ್ನನ್ನು ಅಣು ಅಣುವಾಗಿ ನಾನು ಬಲ್ಲೆ’ ಎಂದೆ. ಅವಳು ನಕ್ಕು ‘ನಿನ್ನೆ ರಾತ್ರಿ ನಾನು ಕಂಡ ಕನಸೇನೆಂದು ನಿನಗೆ ಗೊತ್ತೇ ಪ್ರಕಾಶ್’ ಎಂದಳು.

ಏನ ಹೇಳಲಿ ನಾನು?

ಪ್ರತಿಕ್ರಿಯಿಸಿ (+)