ಏಯ್...ಥೂ ಹಛಾ... ಅನ್ನಬಾರದಿತ್ತು

7

ಏಯ್...ಥೂ ಹಛಾ... ಅನ್ನಬಾರದಿತ್ತು

Published:
Updated:
ಏಯ್...ಥೂ ಹಛಾ... ಅನ್ನಬಾರದಿತ್ತು

ಶಾಲೆಗೆ ಬರುವ ಮಕ್ಕಳ ಜೊತೆಯಲ್ಲಿ ಅವರುಗಳು ಮನೆಯಲ್ಲಿ ಸಾಕಿದ ನಾಯಿಗಳೂ ಕಾಲೇಜಿಗೆ ಬರುವುದು ಮಲೆನಾಡಿನಲ್ಲಿ ಒಂದು ವಾಡಿಕೆ. ‘ಬೇಡ ಬೇಡವೆಂದು ಬೈದು ಕಲ್ಲಲ್ಲಿ ಹೊಡೆದು ಓಡಿಸಿದರೂ ಹಿಂದೆ ಹಿಂದೇನೆ ಬಂದು ಬಿಡ್ತಾವೆ ಸಾರ್, ಪಾಪ ಏನ್ಮಾಡೋದು? ಇವು ನಮ್ಮ ಜೊತೆ ಬರುವಾಗ ಊರಿನಲ್ಲಿ, ದಾರಿಯಲ್ಲಿ ಸಿಗುವ ಹೊಸ ನಾಯಿಗಳ ಜೊತೆ ಜಗಳಕ್ಕೆ ಬೀಳ್ತಾವೆ ಸಾರ್. ಆ ಜಗಳಾನ ದಿನಾ ಬಿಡಿಸಿಕೊಂಡೇ ನಾವು ಬರ್ಬೇಕು. ಏನು ಮಾಡೋದು ಹೇಳಿ, ಪ್ರೀತಿಯಿಂದ ಸಾಕಿರ್ತೀವಿ. ಆ ಪ್ರೀತಿ ಜಾಸ್ತಿಯಾಗಿ ಹಿಂಬಾಲಿಸಿಕೊಂಡು ಬಂದ್ ಬಿಡ್ತಾವೆ ಸಾರ್. ನಮಗೂ ಅವುಗಳಿದ್ದರೆ ಕಾಡಿನಲ್ಲಿ ಬರೋದಕ್ಕೆ ಒಂಥರ ಧೈರ್ಯ ಸಾರ್’ ಎಂದು ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನೂ, ನಾಯಿಗಳು ಜೊತೆಗಿರುವ ಅಗತ್ಯವನ್ನು ವಿವರಿಸುತ್ತಿದ್ದರು.ಎಲ್ಲರ ಮನೆಯಿಂದ ಬರುವ ನಾಯಿಗಳು ತಾವೇ ಕಾಲೇಜಿನ ಒಂದು ಕಡೆ ಸಭೆ ಸೇರುತ್ತಿದ್ದವು. ಸಭೆಯಲ್ಲಿ ಒಮ್ಮೆ ಜಂಗೀ ಕುಸ್ತಿ ಶುರುವಾದರೆ ಅದನ್ನು ನಿಲ್ಲಿಸುವುದೇ ಕಷ್ಟವಾಗುತ್ತಿತ್ತು. ಪರಸ್ಪರ ಕಿತ್ತಾಡಿ ಗಲಭೆ ಎಬ್ಬಿಸುತ್ತಿದ್ದ ಅವುಗಳ ದಾಂದಲೆಗೆ ನಾವು ಪಾಠ ಮಾಡುವುದೇ ಒಮ್ಮೊಮ್ಮೆ ಕಷ್ಟವಾಗುತ್ತಿತ್ತು. ಎಷ್ಟೋ ಸಲ ಪಾಠ ನಿಲ್ಲಿಸಿ ಆ ನಾಯಿಗಳ ಅಟ್ಟಾಡಿಸಿ ಬಂದಿದ್ದೂ ಇದೆ. ಎಷ್ಟು ಓಡಿಸಿದರೂ ಅವು ಜಪ್ಪಯ್ಯ ಎನ್ನದೆ ಮತ್ತೆ ಬಂದು ಕ್ಲಾಸುಗಳ ಸುತ್ತ ಅಂಡಲೆಯುತ್ತಿದ್ದವು. ಇತ್ತ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸಿ ಅತ್ತ ಮೈದಾನದಲ್ಲಿ ನಾಯಿಗಳಿಗೆ ಶಿಸ್ತು ಕಲಿಸುವುದು ನಮಗೆಲ್ಲಾ ಒಂಥರ ಅನಿವಾರ್ಯವಾಗಿ  ಹೋಗಿತ್ತು.ಒಮ್ಮೊಮ್ಮೆ  ನಾನು ಬೇಜಾರಾಗಿ, ನೋಡ್ರಯ್ಯ ಯಾರ ಮನೆ ನಾಯಿ ಅದೂಂತ. ನಾನು ಇಲ್ಲಿ ಬೊಗಳುತ್ತಿದ್ದರೆ ನನಗೆ ಸರಿ ಸಮನಾಗಿ ನಿಂತು ಅದು ಹೊರಗೆ ಬೊಗಳುತ್ತಿದೆ. ಅದರ ಮಾಲೀಕರು ಯಾರು ಹೋಗಿ ನೋಡಿ ಅದಕ್ಕೊಂದಿಷ್ಟು ಬುದ್ಧಿ ಹೇಳಿ ಬನ್ನಿ ಎನ್ನುತ್ತಿದ್ದೆ. ಎಲ್ಲರೂ ಅದು ನಮ್ಮದಲ್ಲ ಸಾರ್ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದರು. ಕೊರೆದು ತಲೆತಿನ್ನುವ ಈ ಮೇಷ್ಟ್ರಿಗೆ ನಮ್ಮ ಬದಲಿಗೆ  ನಾಯಿಗಳಾದರೂ ನಮ್ಮ ಕಷ್ಟ ತಿಳಿದು ತೊಂದರೆ ಕೊಡ್ತಿವೆಯಲ್ಲ; ಕೊಡಲಿ ಬಿಡು ಎನ್ನುವ ಒಳಖುಷಿ ಅವರಿಗೆ.ಒಮ್ಮೆ ಎರಡು ನಾಯಿಗಳು ಜಗಳವಾಡುವ ಭರಾಟೆಯಲ್ಲಿ ಕ್ಲಾಸಿನ ಒಳಗೇ ನುಗ್ಗಿ ಬಂದು ಬಿಟ್ಟವು. ಒಂದು ಹೆಣ್ಣು ನಾಯಿ ಕ್ಲಾಸಿನ ಒಳಗೆ ಬಂದು ಹೆದರಿ ಅವಿತುಕೊಂಡಿದ್ದು ಏನು ಮಾಡಿದರೂ ಹೊರಗೆ ಹೋಗುವ ಮನಸ್ಸು ಮಾಡಲಿಲ್ಲ. ನಾನು ಗದರಿಸಿ ಓಡಿಸಲು  ಹತ್ತಿರ ಹೋದಾಗ ಅದು ಗುರ್ರ್ ಎಂದು ತನ್ನೆಲ್ಲಾ ಹಲ್ಲುಗಳನ್ನು ವ್ಯಗ್ರವಾಗಿ ಕಿರಿಯಿತು. ತಕ್ಷಣ ಬೆಚ್ಚಿ ಬಿದ್ದು, ಕಿರುಚಿ ನಡುಗಿದ ನನ್ನ ಸ್ಥಿತಿಗೆ  ವಿದ್ಯಾರ್ಥಿಗಳು ಫುಲ್ ಖುಶ್ ಆಗಿ ಒಮ್ಮೆಗೇ ಗೊಳ್ಳಂತ ನಕ್ಕು ಬಿಟ್ಟರು. ನನಗೆ ಸಣ್ಣ ಅವಮಾನವಾಯಿತು. ಲೋ ನೋಡ್ತಾ ನಿಂತಿದ್ದೀರಲ್ಲ ಅದನ್ನು ಓಡಿಸ್ರೋ ಎಂದು ಕೂಗಿಕೊಂಡೆ. ಆ ನಾಯಿಯ ಮಾಲೀಕ ಅದೇ ಕ್ಲಾಸಿನಲ್ಲಿದ್ದ. ಅವನು ಹೆಸರಿಡಿದು ಕರೆದ ಕೂಡಲೇ ಅದು ಪ್ರೀತಿಯಿಂದ ಅವನ ಬಳಿ ಓಡಿ ನಿಂತಿತು. ಅದನ್ನವ ಹೊರಗೆ ಕರೆದುಕೊಂಡು ಹೋಗಿ ಬಿಟ್ಟ.ಆಮೇಲೆ ನನಗೆ ಸಿಟ್ಟು ಬಂದಿದ್ದು ನನ್ನ ಕ್ಲಾಸಿನಲ್ಲಿ ಆ ಹೆಣ್ಣು ನಾಯಿಯನ್ನು ನುಗ್ಗುವಂತೆ ಮಾಡಿದ ಆ ಗಂಡು ನಾಯಿಯ ಮೇಲೆ. ಅದು ನನ್ನ ಕ್ಲಾಸಿನ ಹೊರಗೆ ನಿಂತು ದಣಿವಾರಿಸಿಕೊಳ್ಳುತ್ತಿತ್ತು. ಒಂದು ಕೋಲು ತರಿಸಿ ಅದು ಕಂಯ್ಯಯ್ಯೋ ಎನ್ನುವಂತೆ ಬಾರಿಸಿ ಓಡಿಸಿದೆ. ಆಮೇಲೆ ಅದರ ಮಾಲೀಕಳಾದ ನನ್ನ ವಿದ್ಯಾರ್ಥಿನಿ ಬಂದು ಅದು ನಮ್ಮ ನಾಯಿ ಸಾರ್. ನಾವು ಸಾಕಿ ಬೆಳೆಸಿದವರು. ನೀವು ಹಾಗೆಲ್ಲ ಹೊಡೆಯಬಾರದಿತ್ತು ಎಂದು ತಕರಾರು ತೆಗೆದಳು. ನಾನು ಏನು ಸಮಜಾಯಿಷಿ ಕೊಟ್ಟರೂ ಅವಳು ಒಪ್ಪಲು ತಯಾರಿರಲಿಲ್ಲ. ಅವಳ ಜೊತೆ ಬಂದಿದ್ದ ಕೆಲ ವಿದ್ಯಾರ್ಥಿನಿಯರು ಏಯ್ ಹೊಡೆದಿದ್ದು ಮೇಷ್ಟ್ರೇ ಅಲ್ಲವೇನೆ. ಇರಲಿ ಬಿಡೇ ಎಂದು ಬುದ್ಧಿ ಹೇಳಿ ಕರೆದುಕೊಂಡು ಹೋದರು. ನನ್ನ ಹೊಡೆದಿದ್ದರೂ ಪರ್ವಾಗಿಲ್ಲ. ಅದನ್ನ ಹೊಡೀಬಾರದಿತ್ತು. ಪಾಪ ಎಷ್ಟು ನೋವಾಯಿತೋ ಎಂದು ಗೊಣಗಿಕೊಂಡೇ ಆಕೆ ಹೋದಳು.ಕಾಡಿನ ಮೂಲೆಯಿಂದ ದಿನಾ ಆರು ಮೈಲಿ ನಡೆದು ಬರುವ ಆಕೆಗೆ ಆ ನಾಯಿಯೇ ಆಪ್ತ ರಕ್ಷಕ.  ಹೀಗಾಗಿ ಅವಳು ನೊಂದುಕೊಂಡಿದ್ದು ಸಹಜವಾಗಿಯೇ ಇತ್ತು. ನಾನು ಆ ನಾಯಿಯನ್ನು ಹೊಡೆಯಬಾರದಿತ್ತು ಎಂದು ಪಶ್ಚಾತ್ತಾಪ ಪಡುವಾಗ ಹೆಣ್ಣು ನಾಯಿಯ ಮಾಲೀಕ ಹುಡುಗ ಬಂದು ಇಲ್ಲಾ ಸಾರ್ ನೀವು ಹೊಡೆದಿದ್ದೇ ಸರಿ. ಬಡ್ಡೀ ಮಂಗದು ನಮ್ಮ ನಾಯಿಗೆ ಭಾಳ ತೊಂದರೆ ಕೊಡುತ್ತಿತ್ತು ಎಂದು ನನ್ನ ಸಮರ್ಥಿಸಲು ಬಂದ. ನಾನು ರೇಗಿ ಲೇ ಎಲ್ರೂ ಸೇರಿ ನನ್ನ ನಾಯಿ ಕಾಯೋನು ಮಾಡಿದ್ದೀರಲ್ಲೋ. ಇನ್ನು ಮೇಲೆ ನೀವು ಮಾತ್ರ ಕಾಲೇಜಿಗೆ ಬರ್ಬೇಕು. ನಿಮ್ಮ ನಾಯಿಗಳು ಕಾಲೇಜಿನ ಹೊರಗೆ ನಿಮ್ಮನ್ನು ಕಾಯ್ತಾ ಇರ್ಬೇಕು. ಅವೇನಾದ್ರೂ ಇನ್ಮೇಲೆ ಒಳಗೆ ಬಂದ್ರೆ ನಿಮಗೆ ಗ್ರಾಚಾರ ಬಿಡಿಸ್ತೀನಿ ಎಂದು ಎಚ್ಚರಿಸಿದೆ. ನನ್ನ ಧಮಕಿಯನ್ನು ನಾಯಿಗಳಾಗಲೀ, ಅದರ ಮಾಲೀಕರಾಗಲಿ ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.ಕೆಲವರು ನಾಯಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಸಾಕಿರುತ್ತಾರೆ. ಅಷ್ಟೇ ಪ್ರೀತಿಸುತ್ತಾರೆ. ನಾಯಿ ಸಾಕದ ನಮಗೆ ಇದು ವಿಚಿತ್ರವಾಗಿ ಕಂಡರೂ ಅವರ ಪಾಲಿಗದು ಮುಖ್ಯ ಸಂಗತಿಯೇ ಆಗಿರುತ್ತದೆ. ಬಾಲ್ಯದಿಂದ ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಕಲ್ಲಿನಲ್ಲಿ ಹೊಡೆಯುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ತಿಳಿದು ಬೆಳೆದ ನನಗೆ ಅವುಗಳ ಮಹತ್ವದ ಅರಿವಿಲ್ಲ.  ಹೀಗಾಗಿ ಅವುಗಳನ್ನು ಪ್ರೀತಿಸುವುದೂ ಗೊತ್ತಿಲ್ಲ.ಒಂದು ಸಲ ನನ್ನ ಸಿರಿವಂತ ಗೆಳೆಯರ ಮನೆಗೆ ಹೋದೆ. ಬಾಗಿಲು ತೆಗೆಯುತ್ತಲೇ ಒಂದು ಹುಲಿಯಂಥ ನಾಯಿ ಛಂಗನೆ ಮೈಮೇಲೆ ಎರಗಿ ಬಂದು ನಿಂತಿತು. ಅದು ಸಡನ್ನಾಗಿ ಬಂದು ಅಪ್ಪಳಿಸಿದ ರೀತಿಗೆ ನಾನು ಹೆದರಿ ಕಂಗಾಲಾಗಿ ಹೋದೆ. ಕಿಟಾರಂತ ಕಿರುಚಿಕೊಂಡು ಯಥಾ ಪ್ರಕಾರ ಏಯ್ ಥೂ ಹಛಾ ಎಂದು ಅಬ್ಬರಿಸಿದೆ. ನಾನು ಅವರ ನಾಯಿಗೆ ಏಯ್ ಥೂ ಹಛಾ ಎಂದು ನಿಂದಿಸಿದ್ದು ಆ ಮನೆಯವರಿಗೆ ಇಷ್ಟವಾಗಲಿಲ್ಲ.  ಗೆಳೆಯನ ಹೆಂಡತಿ ಮುಖ ಸಣ್ಣಗೆ ಮಾಡಿಕೊಂಡು ಸಾರ್, ನೀವು ನಮ್ಮ ಟಾಮಿಗೆ ಹಾಗೆ ಬೈಯಬಾರದಿತ್ತು. ನೋಡಿ ಎಷ್ಟು ಬೇಜಾರು ಮಾಡಿಕೊಂಡಿದ್ದಾನೆ? ಅವನಿಗೆ ಯಾರಾದರೂ ಮನಸ್ಸು  ನೋಯಿಸಿದರೆ ಎರಡು ದಿನ ಊಟನೇ ಬಿಟ್ಟು ಬಿಟ್ತಾನೆ. ಮೊದಲು ಅವನಿಗೆ ಸಾರಿ ಕೇಳಿ ಎಂದರು.ನನಗೆ ನಾಯಿಗಳ ಹತ್ತಿರ ಸಾರಿ ಕೇಳಿ ಅಭ್ಯಾಸವಿರಲಿಲ್ಲ. ಆಮೇಲೆ ಅದನ್ನು ಹೇಗೆ ಕೇಳಬೇಕು? ಯಾವ ಭಾಷೆಯಲ್ಲಿ ಕೇಳಬೇಕು ಎಂಬುದೂ ಗೊತ್ತಿರಲಿಲ್ಲ. ಹೀಗಾಗಿ, ನಾನು ಭಯಂಕರ ಅಪರಾಧ ಮಾಡಿದವನಂತೆ ನಿಂತು ಬಿಟ್ಟೆ. ನನ್ನ ಸಂಕಟ ಅರ್ಥ ಮಾಡಿಕೊಂಡ ಗೆಳೆಯ ಇರ್ಲಿ ಬಿಡೆ. ಪಾಪ ಅವನಿಗೆ ನಾಯಿಗಳ ಬಗ್ಗೆ ಗೊತ್ತಿಲ್ಲ. ನೀನು ಕಾಫಿ ಮಾಡ್ಕೊಂಡು ಬಾ ಎಂದು ಅವರ ಹೆಂಡತಿಯನ್ನು ಒಳಕ್ಕೆ ಕಳಿಸಿ ನೀನು ಬೇಜಾರಾಗಬೇಡ. ನಮ್ಮ ಮನೇಲಿ ಎಲ್ಲಾ ಅದಲು ಬದಲಾಗಿದೆ. ನಾನೇ ನಾಯಿ, ಆ ಟಾಮೀನೆ ಯಜಮಾನ. ಬೇಕಾದರೆ ನನ್ನ ಹಛಾ ಅನ್ನು ಪರಾವಾಗಿಲ್ಲ. ಕೇಳಿ ಅಭ್ಯಾಸ ಆಗಿದೆ ಎಂದು ನೊಂದು ಕಣ್ಣು ಮಿಟುಕಿಸಿದ. ಒಂದು ದಿನ ರಾತ್ರಿ ಹೆಂಡತಿ ಮತ್ತು ಮಗನೊಂದಿಗೆ, ನಾನು ರಾತ್ರಿ ವಾಕ್ ಮಾಡುತ್ತಾ ಬರುವಾಗ ದಾರಿಯಲ್ಲಿ ಒಂದು ಸಣ್ಣ ನಾಯಿ ಮರಿಯೊಂದು ನಮ್ಮ ಕಡೆಗೆ ಓಡಿ ಬಂದಿತು. ಅದು ಎಳೆಯ ಮರಿ. ದಾರಿಯಲ್ಲಿ ಹೋಗಿ ಬರುವವರ ಹಿಂದೆ ತನ್ನನ್ನು ಯಾರಾದರೂ ಕರೆದೊಯ್ಯಲಿ ಎನ್ನುವಂತೆ ಓಡಾಡುತ್ತಿತ್ತು. ನನ್ನ ಮಗನ ನೋಡಿ ಅವನ ಹತ್ತಿರ ಓಡಿ ಬಂತು. ಅವನು ಅದನ್ನು ನೋಡಿ ಇದನ್ನು ಸಾಕೋಣವೇ ಎಂದು ಕೇಳಿಕೊಂಡ. ನನ್ನ ಹೆಂಡತಿಗೆ ನಾಯಿಗಳೆಂದರೆ ಆಗಲ್ಲ. ಪಕ್ಕಾ ಅಲರ್ಜಿ. ಜೊತೆಗೆ ನಾನು ವಾಸವಿರುವುದರಿಂದಲೋ ಏನೋ ಅವಳಿಗೆ ನಾಯಿಗಳೆಂದರೆ ಇಷ್ಟವಿಲ್ಲ. ಮಗನಿಗೆ ಅದನ್ನು ಮುಟ್ಟಬೇಡ. ಬೀದಿ ನಾಯಿ ಏನು ರೋಗವಿರುತ್ತೋ ಏನೋ ಎಂದು ಎಚ್ಚರಿಸಿದಳು. ನನ್ನ ಮಗನಿಗೆ ಅದನ್ನು ನೋಡಿ ಅದಾಗಲೇ ಕರುಣೆ, ಪ್ರೀತಿ, ವಾತ್ಸಲ್ಯಗಳು ಉಕ್ಕಿ ಬಂದಿದ್ದವು. ಅವನು ಆಸೆ ಕಂಗಳಿಂದ ಅದನ್ನು ಮಾತಾಡಿಸುತ್ತಿದ್ದ. ಅವನ ಪ್ರೀತಿ ತಿಳಿದೋ ಎನೋ ಅದು ನಮ್ಮನ್ನು ಹಿಂಬಾಲಿಸುತ್ತಲೇ ಬರತೊಡಗಿತು.ಮಗ ಕಬೀರ್ ಅವಳ ತಾಯಿಗೆ ನಾಯಿಮರಿಯ ಬಗ್ಗೆ ಅದರ ತಾಯಿ ಯಾರು? ಅದಕ್ಕೆ ಯಾರು ಊಟ ಹಾಕ್ತಾರೆ? ಅದರ ಮನೆ ಎಲ್ಲಿದೆ? ರಾತ್ರಿ ಅದು ಎಲ್ಲಿ ಮಲಗುತ್ತೆ? ಹೀಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಅದಕ್ಕವಳು ದೇವರು ಅವಕ್ಕೆ ಊಟ ಹಾಕ್ತಾನೆ. ನೀನು ಚಿಂತೆ ಮಾಡಬೇಡ. ಅದರ ಪ್ರಾಣ ಕಾಪಾಡುವ ಜವಾಬ್ದಾರಿ ದೇವರದ್ದು ಎಂದು ಹೇಳಿ ಒಪ್ಪಿಸುತ್ತಿದ್ದಳು. ನಮ್ಮ ಹಿಂದೆಯೇ ಮನೆ ತನಕ ಬಂದ ಅದಕ್ಕೆ ನಾನು ಅನ್ನ ತರಿಸಿ ಹಾಕಿಸಿದೆ. ಆದರೆ ಅದೇಕೋ ತಿನ್ನಲು ನಿರಾಕರಿಸಿತು. ಕರೆದರೆ ವಾಪಸ್ಸು ಓಡೋಡಿ ಹೋಗುತ್ತಿತ್ತು. ಇಲ್ಲೇ ಇರುತ್ತೆ  ಬಾ ಎಂದು ಹೇಳಿ ನಾನು ನನ್ನ ಮಗನ ಕರೆದುಕೊಂಡು ಮನೆ ಒಳಗೆ ಹೋದೆ.ನಮ್ಮ ಬೀದಿಯ ಹಿರಿಯ ನಾಯಿಗಳಿಗೆ ಈ ಹೊಸ ನಾಯಿಯ ಪ್ರವೇಶ ಇಷ್ಟವಾಗಲಿಲ್ಲವೆಂದು ತೋರುತ್ತವೆ. ಎಲ್ಲವೂ ಸೇರಿ ಕ್ಯಾತೆ ತೆಗೆದು ಅದರ ಮೇಲೆ ಕೆಟ್ಟ ಭಾಷೆಯಲ್ಲಿ ಜಗಳಕ್ಕೆ ನಿಂತವು. ಆ ಮರಿ ಹೆದರಿ ಕಾರಿನ ಕೆಳಗೆ ನುಸುಳಿ ಯಾರಿಗೂ ಸಿಗದಂತೆ ಅವಿತುಕೊಂಡಿತು. ದಿನಾ ಅದಕ್ಕೆ ಊಟ- ಬಿಸ್ಕತ್ ಹಾಕುವುದು, ಅದರ ಯೋಗಕ್ಷೇಮ ವಿಚಾರಿಸುವುದು, ಕದ್ದು ಮುದ್ದಾಡುವುದನ್ನೂ ನನ್ನ ಮಗ ಮಾಡುತ್ತಲೇ ಇದ್ದ.ತಕ್ಷಣವೇ ಅದಕ್ಕೊಂದು ಮನೆಯನ್ನು ಎಲ್ಲಿ ಕಟ್ಟಬಹುದೆಂದೂ ಯೋಚಿಸುತ್ತಿದ್ದ. ನಾಲ್ಕನೆಯ ದಿನ ಅದೇನಾಯಿತೋ ಗೊತ್ತಿಲ್ಲ. ಕಾರಿನ ಕೆಳಗೆ ಮಲಗಿದ್ದ ನಾಯಿ ಮರಿ ಯಾವಾಗಲೋ ಸದ್ದಿಲ್ಲದೆ ಸತ್ತು ಹೋಗಿತ್ತು. ಅದನ್ನು ಬೆಳಿಗ್ಗೆ ನೋಡಿದವನೇ ದುಗುಡದಿಂದ ಓಡಿ ಬಂದ ನನ್ನ ಮಗ ನನ್ನ ಹೆಂಡತಿಗೆ ನೀನು ಸುಳ್ಳಿ ಎಂದು ಬೈಯತೊಡಗಿದ. ರಪರಪ ಎಂದು ಅವಳ ಕಾಲಿಗೆ ಒದೆಯತೊಡಗಿದ.ನಾನು ಯಾಕೋ ನನ್ನ ಹೆಂಡ್ತಿಗೆ ಹೊಡೀತೀಯಾ ಎಂದೆ. ನೋಡಿ ಪಪ್ಪಾ, ಆ ನಾಯೀನ ದೇವರು ಊಟ ಹಾಕಿ ಸಾಕ್ತಾನೆ. ಅದರ ಜೀವಾನ ಕಾಪಾಡ್ತಾನೆ ಅಂತ ಅಮ್ಮ ಹೇಳಿದ್ರು. ಹಾಗಿದ್ದರೂ ಅದು ಹೇಗೆ ಸತ್ತು ಹೋಯಿತು ಹೇಳಿ. ದೇವರು ಅದನ್ನು ಏಕೆ ಸಾಯಿಸಿದ ಹೇಳಿ ಎಂದು ಕಣ್ಣೀರು ಹಾಕತೊಡಗಿದ. ಸುಳ್ಳು ಆಶ್ವಾಸನೆ ಕೊಟ್ಟಿದ್ದ ನನ್ನ ಹೆಂಡತಿ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry