ಬುಧವಾರ, ಡಿಸೆಂಬರ್ 11, 2019
24 °C

ಏರುಗತಿಯ ಷೇರು ಖರೀದಿ ಅಪಾಯಕಾರಿ

ಕೆ. ಜಿ. ಕೃಪಾಲ್
Published:
Updated:
ಏರುಗತಿಯ ಷೇರು ಖರೀದಿ ಅಪಾಯಕಾರಿ

ಷೇರುಪೇಟೆಯ ಸಂವೇದಿ ಸೂಚ್ಯಂಕ ಶುಕ್ರವಾರ ದಿನದ ಮಧ್ಯಂತರದಲ್ಲಿ 32,109.75 ಅಂಶಗಳಿಗೆ ತಲುಪಿ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿ 32,020.75ರಲ್ಲಿ ಕೊನೆಗೊಂಡಿದೆ.  ಮಧ್ಯಮ, ಕೆಳಮಧ್ಯಮ,  ಫೈನಾನ್ಸ್, ಟೆಲಿಕಾಂ, ಬ್ಯಾಂಕೆಕ್ಸ್‌ಗಳು ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿವೆ.  ಆದರೂ ಹತ್ತಾರು ಅಲ್ಪಕಾಲಿಕ ಅವಕಾಶಗಳನ್ನು ಪೇಟೆ ಸೃಷ್ಟಿಮಾಡಿಕೊಡುವುದು ಸಹಜವಾಗಿದೆ.

ಇತ್ತೀಚೆಗಷ್ಟೇ ಕೆನರಾ ಬ್ಯಾಂಕ್ ತನ್ನ ಕೇರ್ ರೇಟಿಂಗ್ಸ್ ಕಂಪೆನಿಯ ಶೇ 8.9 ರಷ್ಟು ಭಾಗಿತ್ವವನ್ನು ಪ್ರತಿ ಷೇರಿಗೆ ₹1,660 ರಂತೆ ಕ್ರಿಸಿಲ್ ಕಂಪೆನಿಗೆ ಮಾರಾಟ ಮಾಡಿರುವುದು ಸುದ್ದಿ ಯಾ ಗಿತ್ತು.  ತದನಂತರ ಷೇರಿನ ಬೆಲೆಯೂ ₹1,570 ರ ಸಮೀಪಕ್ಕೆ ಕುಸಿದಿತ್ತು.  ಸೋಮವಾರ ಷೇರಿನ ಬೆಲೆಯು ಮತ್ತೊಮ್ಮೆ ಜಿಗಿತ ಕಂಡು ₹1,800 ನ್ನು ತಲುಪಿ ಅಂತ್ಯದಲ್ಲಿ ₹1,707 ರಲ್ಲಿತ್ತು.  ಈ ಜಿಗಿತಕ್ಕೆ ಕಂಪೆನಿಯ ಪ್ರವರ್ತಕರ ಬದಲಾವಣೆ ಎಂಬ ಸುದ್ದಿಯು ತೇಲಾಡುತ್ತಿತ್ತು.  ಆದರೆ, ಕೆನರಾ ಬ್ಯಾಂಕ್‌ನಿಂದ  ಈ ಷೇರನ್ನು ಖರೀದಿಸಿದ ಕ್ರಿಸಿಲ್ ಈ ಕಂಪೆನಿಯಲ್ಲಿ ಹೆಚ್ಚಿನ ಭಾಗಿತ್ವ ಹೊಂದಿದ ಕಾರಣ ತನ್ನ ಅಂಗ ಸಂಸ್ಥೆಯನ್ನಾಗಿಸಿ ಕೊಂಡಂತಾಗಿದೆ. 

ಇದು ಹೊಸ ಸುದ್ದಿಲ್ಲ.  ಆದರೆ, ಕೇರ್ ರೇಟಿಂಗ್ಸ್ ಕಂಪೆನಿ ವಿತರಿಸಲಿ ರುವ ಪ್ರತಿ ಷೇರಿಗೆ ₹10 ರ ಲಾಭಾಂಶಕ್ಕೆ ಈ ತಿಂಗಳ 25 ನಿಗದಿತ  ದಿನ ವಾಗಿರುವುದಲ್ಲದೆ, ಆಗಸ್ಟ್ ಒಂದ ರಂದು ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ.  ಈ ಕಾರಣಕ್ಕಾಗಿ ಷೇರಿನಲ್ಲಿ ವಹಿವಾಟುದಾರರ ಆಸಕ್ತಿ ಹೆಚ್ಚಿದೆ.

ಫಾರ್ಮಾ ವಲಯದಲ್ಲಿ ಮೌಲ್ಯಾಧಾರಿತ ಖರೀದಿ: ಇದುವರೆಗೂ ಫಾರ್ಮಾ ವಲಯದ ಕಂಪೆನಿಗಳು ವಿವಿಧ ಕಾರಣಗಳಿಂದ ಮಾರಾಟದ ಒತ್ತಡ

ಕ್ಕೊಳಗಾಗಿ ಷೇರಿನ ಬೆಲೆಗಳು ಕುಸಿತ ಕ್ಕೊಳಗಾಗಿದ್ದವು.  ಬೆಲೆಗಳು ಕುಸಿತದಲ್ಲಿದ್ದಾಗ ಅವು ಹೂಡಿಕೆಗೆ ಯೋಗ್ಯ.   ಅದು ವಾಲ್ಯೂ ಪಿಕ್ ಆಗುವುದು ಎಂಬುದಕ್ಕೆ  ಮಂಗಳ ವಾರ ಎಸ್‌ಬಿಐ ಮ್ಯೂಚುವಲ್ ಫಂಡ್ 13.5 ಲಕ್ಷ  ಅಜಂತಾ ಫಾರ್ಮಾ ಷೇರನ್ನು  ಪ್ರತಿ ಷೇರಿಗೆ ₹1,500 ರಂತೆ ಖರೀದಿಸಿದೆ.  ಅಂದು ಈ ಷೇರಿನ ಬೆಲೆಯು ₹1,535 ರ ಸಮೀಪದಿಂದ ಇಳಿಕೆ ಕಂಡಾಗ ₹1,500 ರಲ್ಲಿ ಖರೀದಿ ಮಾಡಲಾಗಿದೆ.  ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಅಕ್ಟೋಬರ್ ತಿಂಗಳಲ್ಲಿ ₹2,150 ರ ವಾರ್ಷಿಕ ಗರಿಷ್ಠದಲ್ಲಿತ್ತು.  ಎರಡು ತಿಂಗಳ ಹಿಂದೆ ಅಂದರೆ ಮೇ ನಲ್ಲಿ ₹1,432 ವರೆಗೂ ಕುಸಿದಿತ್ತು. ಇದು ವಾರ್ಷಿಕ ಕನಿಷ್ಠ ಮಟ್ಟವಾಗಿತ್ತು. 

ಸೋಮವಾರ ಫಾರ್ಮಾ ವಲಯದ ದಿವೀಸ್ ಲ್ಯಾಬೊರೇಟರೀಸ್ ಆರಂಭದಲ್ಲಿ ₹680 ರ ಸಮೀಪ ವಹಿವಾಟಾಗಿ,  ಸುಮಾರು 12 ಗಂಟೆಯ ಸಮಯದಲ್ಲಿ   ₹816 ರವರೆಗೂ ಜಿಗಿತ ಕಂಡಿತು. ನಂತರ ಮಾರಾಟದ ಒತ್ತಡದ ಕಾರಣ ಷೇರಿನ ಬೆಲೆಯು ₹ 734 ರಲ್ಲಿ ಕೊನೆಗೊಂಡಿತು. ಈ ರೀತಿಯ ಅಸಹಜ ಚಟುವಟಿಕೆಗೆ  ಕಾರಣವೇನು ಎಂದು ಅನ್ವೇಷಣೆ ಮಾಡುವಷ್ಟರಲ್ಲೇ ಕ್ರಿಯೆ- ಪ್ರಕ್ರಿಯೆಗಳು ಕೊನೆಗೊಂಡಿದ್ದವು. 

ಈ ನಡುವಳಿಕೆಗೆ ಕಾರಣ ಕಂಪೆನಿ  ವಿಶಾಖಪಟ್ಟಣದ ಘಟಕದ  ಮೇಲೆ ಅಮೆರಿಕದ ಎಫ್‌ಡಿಎ   ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ ಎಂಬ ಮಾಹಿತಿ  ಷೇರು ವಿನಿಮಯ ಕೇಂದ್ರಗಳಿಗೆ ಮತ್ತು ಮಾಧ್ಯಮಗಳಿಗೆ ದೊರೆತು ಸುದ್ದಿ ಹೊರಬರುತ್ತಿದ್ದಂತೆಯೇ ತಕ್ಷಣದ ಪೇಟೆಯ ಪ್ರತಿಕ್ರಿಯೆ  ಇಷ್ಟು ತೀವ್ರವಾಗಿತ್ತು.

ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯು ಈ ತಿಂಗಳ 20 ರಂದು ಜೂನ್ ಅಂತ್ಯದ ಮೊದಲನೇ  ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ಕಾರ್ಯ ಸೂಚಿಯ ಕಾರಣ ಷೇರಿನ ಬೆಲೆ ಮಂಗಳವಾರ  ದಿನದ ವಹಿವಾಟು ಆರಂಭದ ಕ್ಷಣಗಳಲ್ಲಿ ₹523 ರಲ್ಲಿದ್ದು, ನಂತರ ₹545 ರವರೆಗೂ ಜಿಗಿತ ಕಂಡು ನಂತರ ₹534 ರ ಸಮೀಪ ಕೊನೆಗೊಂಡಿತು.  

ಬುಧವಾರ  ಸರ್ಕಾರಿ ವಲಯದ ಕಂಪೆನಿಗಳಾದ ಚೆನ್ನೈ ಪೆಟ್ರೋಲಿಯಂ  ಆರಂಭಿಕ ₹360.30 ರ ಸಮೀಪದಿಂದ ದಿನದ ಮಧ್ಯಂತರದಲ್ಲಿ ₹398 ರ ಸಮೀಪಕ್ಕೆ ಜಿಗಿದು ನಂತರ ₹386 ರ ವರೆಗೂ ಕುಸಿದು ₹393.30 ರಲ್ಲಿ ಕೊನೆಗೊಂಡಿತು.  ವಾರಾಂತ್ಯದಲ್ಲಿ  ₹400 ರ ಸಮೀಪವಿದೆ.   ಈ ಕಂಪೆನಿಯು ಪ್ರತಿ ಷೇರಿಗೆ ₹21 ರ ಲಾಭಾಂಶ ಪ್ರಕಟಿಸಿದ್ದರೂ ಇದುವರೆಗೂ ನಿಗದಿತ ದಿನವನ್ನು ಗೊತ್ತು ಪಡಿಸಿಲ್ಲ. 

ಈ ಮಧ್ಯೆ  ಈ ಕಂಪೆನಿಯ ಷೇರನ್ನು ಸದ್ಯದ ಬಿ ಗುಂಪಿನಿಂದ ಎ ಗುಂಪಿಗೆ  ಈ ತಿಂಗಳ  17 ರಿಂದ ವರ್ಗಾವಣೆ ಮಾಡುವ ಸುದ್ದಿಯೇ ಈ ರೀತಿಯ ಅಸಹಜ ಜಿಗಿತಕ್ಕೆ ಕಾರಣ ವಾಗಿರುವುದು ಪೇಟೆಯ ಸೂಕ್ಷ್ಮತೆಗೆ ಹಿಡಿದ ಕನ್ನಡಿಯಾಗಿದೆ.  ಇದರ ಜೊತೆಗೆ ಆಯಿಲ್ ಇಂಡಿಯಾ, ಒಎನ್‌ಜಿಸಿ, ಗೇಲ್ ಇಂಡಿಯಾ,  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್,  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಜಿಎಂ ಡಿಸಿಗಳು ಚುರುಕಾದ ಏರಿಕೆ ಕಂಡುಕೊಂಡವು.

ಫಾರ್ಮಾ ವಲಯದ ಕಂಪೆನಿಗಳಲ್ಲಿ ಬಯೋಕಾನ್ ಮಂಗಳವಾರ  ₹318 ರ ವರೆಗೂ ಕುಸಿತ ಕಂಡು ₹320 ರ ಸಮೀಪ ಕೊನೆಗೊಂಡಿತ್ತು.  ಮಾರನೇ ದಿನ ಷೇರಿನ ಬೆಲೆ ₹370 ರವರೆಗೂ ಜಿಗಿತ ಕಂಡಿದೆ.  ವಿಭಿನ್ನ ಕಾರಣಗಳಾದರೂ,  ಏರಿಳಿತ ತೋರಿಸಿ ಲಾಭ ಗಳಿಕೆಯ ಹುನ್ನಾರ ಇದಾಗಿರಬಹುದು.    ಇತರೆ ಸಣ್ಣ ಕಂಪೆನಿಗಳಾದ ಬ್ಲಿಸ್‌, ಜಿವಿಎಸ್‌, ನೋವಾರ್ಟಿಸ್, ಸಿಂಜಿನ್ ಇಂಟರ್‌ನ್ಯಾಷನಲ್‌ ಸಹ   ಚುರುಕಾದ ವಹಿವಾಟು ಪ್ರದರ್ಶಿಸಿದವು.  ಸಿಂಜಿನ್ ಇಂಟರ್‌ನ್ಯಾಷನಲ್‌ 17 ರಿಂದ ಎ ಗುಂಪಿಗೆ ವರ್ಗಾಯಿಸಲ್ಪಡುತ್ತದೆ. ಈ ಕಾರಣಕ್ಕಾಗಿ ಮತ್ತು ಸಮೂಹ ಕಂಪೆನಿ ಬಯೋಕಾನ್ ಷೇರಿನ ಜಿಗಿತದ ಕಾರಣ ಈ ವಾರ ಸುಮಾರು ₹35 ರ ಷ್ಟು ಏರಿಕೆ ಪಡೆಯಿತು.

ಒಟ್ಟಾರೆ  ಈ ವಾರ ಸಂವೇದಿ ಸೂಚ್ಯಂಕ 660 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 250 ಅಂಶಗಳ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 77ಅಂಶಗಳ ಏರಿಕೆ ಕಾಣುವಂತೆ ಮಾಡಿದೆ. 

ವಿದೇಶಿ ವಿತ್ತೀಯ ಸಂಸ್ಥೆಗಳು ₹1,262 ಕೋಟಿ ಮತ್ತು ಸ್ಥಳೀಯ ವಿತ್ತೀಯ ಸಂಸ್ಥೆಗಳು ₹1,042 ಕೋಟಿ ಮೌಲ್ಯದ ಷೇರು ಖರೀದಿ ಮಾಡಿವೆ.  ಪೇಟೆಯ ಬಂಡವಾಳ ಮೌಲ್ಯ ಗುರುವಾರ  ₹130.91 ಲಕ್ಷ ಕೋಟಿ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿ, ₹130.17 ಲಕ್ಷ ಕೋಟಿಯಲ್ಲಿ ವಾರಾಂತ್ಯ ಕಂಡಿದೆ.

ಮುಖಬೆಲೆ ಸೀಳಿಕೆ

* ನವೀನ್ ಫ್ಲೋರೀನ್ ಇಂಟರ್ ನ್ಯಾಷನಲ್ ಲಿ. ಕಂಪೆನಿಯ ಷೇರಿನ ಮುಖಬೆಲೆ ₹10 ರಿಂದ ₹2ಕ್ಕೆ ಸೀಳಲು ಜುಲೈ 20 ನಿಗದಿತ ದಿನಾಂಕ.

* ಸನ್ ಟೆಕ್ ರಿಯಾಲ್ಟಿ ಕಂಪೆನಿಯ ಷೇರಿನ ಮುಖಬೆಲೆ ₹2 ರಿಂದ ₹1 ಕ್ಕೆ ಸೀಳಲು ಜು.26 ನಿಗದಿತ ದಿನ.

ಗುಂಪಿನಲ್ಲಿ  ಬದಲಾವಣೆ: ಈ ತಿಂಗಳ 17 ರಿಂದ ಆದಿತ್ಯ ಬಿರ್ಲಾ ಫ್ಯಾಷನ್ಸ್ , ಅಲ್ಕೆಮ್ ಲ್ಯಾಬ್, ಬಾಂಬೆ ಡೈಯಿಂಗ್, ಕ್ಯಾನ್ ಫಿನ್ ಹೋಮ್ಸ್, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್, ಕ್ರಾಮ್ ಟನ್  ಗ್ರೀವ್ಸ್ ಕನ್ಸೂಮರ್,  ಇಕ್ವಿಟಾಸ್ ಹೋಲ್ಡಿಂಗ್ಸ್,  ಜಿ ಹೆಚ್ ಸಿ ಎಲ್,  ಗ್ಯಾನ್ಯೂಲ್ಸ್,  ಜಿ ಎನ್ ಎಫ್ ಸಿ, ಐ ಡಿ ಎಫ್ ಸಿ ಬ್ಯಾಂಕ್,  ಇಂಡೋ ಕೌಂಟ್ ಇಂಡಸ್ಟ್ರೀಸ್, ಜೆ ಎಂ ಫೈನಾನ್ಸ್, ಎಲ್ ಅಂಡ್ ಟಿ ಟೆಕ್,  ಲಕ್ಷ್ಮಿ ವಿಲಾಸ್ ಬ್ಯಾಂಕ್, ಮಹಾನಗರ ಗ್ಯಾಸ್,  ಎಂ ಸಿ ಎಕ್ಸ್,  ಎನ್‌ಬಿಸಿಸಿ (ಇಂಡಿಯಾ),  ಅರ್‌ಬಿಎಲ್ ಬ್ಯಾಂಕ್, ಸಿಂಜಿನ್ ಇಂಟರ್ ನ್ಯಾಷನಲ್,  ವಿ ಗಾರ್ಡ್, ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಸೇರಿ  48 ಕಂಪೆನಿಗಳನ್ನು ಸಧ್ಯದ ಬಿ ಗುಂಪಿನಿಂದ ಎ ಗುಂಪಿಗೆ ವರ್ಗಾಯಿಸಲಾಗಿದೆ.

ಆಮ್ ಟೆಕ್ ಆಟೊ,  ಪೂಂಜ್ ಲಾಯ್ಡ್, ಜಿ ವಿ ಕೆ ಪವರ್, ವಿ ಆರ್ ಎಲ್ ಲಾಜಿಸ್ಟಿಕ್ಸ್ ಕಂಪೆನಿಗಳು ಎ ಗುಂಪಿನಿಂದ ಬಿ ಗುಂಪಿಗೆ ವರ್ಗಾವಣೆಯಾಗಲಿವೆ.

ವಾರದ ವಿಶೇಷ

ಷೇರುಪೇಟೆಯಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಬೇಕಾದರೆ  ಕಂಪೆನಿಗಳ ಸಾಧನೆ, ಮೂಲಭೂತ ಅಂಶಗಳ ಜೊತೆಗೆ ಷೇರಿನ ಬೆಲೆಗಳಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದಲ್ಲಿ ಲಾಭಗಳಿಕೆಗೆ ಅಪಾರ ಅವಕಾಶಗಳನ್ನು ಪಡೆಯಬಹುದಾಗಿದೆ.

ಈ ವಾರ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠದ ದಾಖಲೆ ನಿರ್ಮಿಸಿದ್ದಲ್ಲದೆ ಪೇಟೆಯ ಬಂಡವಾಳ ಮೌಲ್ಯವು ಸಹ ದಾಖಲೆಯ ₹130 ಲಕ್ಷ ಕೋಟಿ ಗಡಿ ದಾಟಿದೆ. ಸೂಚ್ಯಂಕಗಳು ಉನ್ನತ ಮಟ್ಟದಲ್ಲಿದ್ದರೂ ಅನಿರೀಕ್ಷಿತ ಮಟ್ಟದ  ಲಾಭದ ಅವಕಾಶಗಳನ್ನು  ಕಂಪೆನಿಗಳಾದ ಹುಡ್ಕೊ, ಸಿಂಟೆಕ್ಸ್,  ಚೆನ್ನೈ ಪೆಟ್ರೋಲಿಯಂ, ಬಯೋಕಾನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಅಲೆಂಬಿಕ್ ಫಾರ್ಮಾ,  ಕೆನರಾ ಬ್ಯಾಂಕ್, ಐಟಿಸಿ ಗಳು ಕಲ್ಪಿಸಿಕೊಟ್ಟಿವೆ. ಈ ರೀತಿಯ ಏರಿಳಿತಗಳಿಗೆ ವಿವಿಧ ಕಾರಣಗಳಿವೆ.  ಇವುಗಳಿಗೆ ಮಾರುಹೋಗದೆ ಲಾಭಗಳಿಕೆಯ ಅವಕಾಶಗಳಿಗೆ ಸೀಮಿತಗೊಂಡವರಿಗೆ ಹೆಚ್ಚಿನ ಗಳಿಕೆ ಲಭ್ಯವಾಗಿದೆ. ಬ್ಯಾಂಕಿಂಗ್ ಬಡ್ಡಿ ದರದಂತೆ ತೊಡಗಿಸಿದ ಹಣವು ಶೇ40 ರಿಂದ ಶೇ50 ರ ಲಾಭ ಗಳಿಕೆಗೆ ವರ್ಷಗಟ್ಟಲೆ ಕಾಯಬೇಕು.

ಷೇರುಪೇಟೆಯಲ್ಲಿ ಅವಕಾಶಕ್ಕೆ ಕಾಯಬೇಕು. ಕೇವಲ ಹಣವಿದೆ ಎಂದು ಮನಬಂದಂತೆ ಏರಿಕೆಯಲ್ಲಿರುವ ಷೇರುಗಳನ್ನು ಮತ್ತಷ್ಟು ಏರಿಕೆ ಕಾಣಬಹುದೆಂಬ ನಿರೀಕ್ಷೆಯಲ್ಲಿ ಖರೀದಿಸಿದರೆ ಅಪಾಯ ಹೆಚ್ಚಿರುತ್ತದೆ. ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಸಮೀಕರಣ ಪೇಟೆಗಳು ಉತ್ತುಂಗದಲ್ಲಿರುವ ಈ ಸಮಯದಲ್ಲಿ ಹೆಚ್ಚು ಸಕಾರಾತ್ಮಕ ಫಲ ನೀಡುವ ಸರಳ ಸಮೀಕರಣವಾಗಿದೆ.

ಪ್ರತಿಕ್ರಿಯಿಸಿ (+)