ಶನಿವಾರ, ಜನವರಿ 18, 2020
27 °C

ಏಳಿ, ಎದ್ದೇಳಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಡಾ. ಅರ್ನಾಲ್ಡ್ ಫಾಕ್ಸ್ ಎಂಬ ಅಮೇರಿಕನ್ ವೈದ್ಯರು ಬರೆದ ಘಟನೆಯೊಂದು ನನ್ನ ಮನಸ್ಸನ್ನು ಸೆಳೆಯಿತು.ಒಂದು ಭಾನುವಾರ ಡಾ. ಫಾಕ್ಸ್ ಮನೆಯಲ್ಲಿ ಊಟಮಾಡಿ ಮನೆಯವರೊಂದಿಗೆ ಹರಟೆ ಹೊಡೆಯುತ್ತ ಕುಳಿತಿದ್ದರು. ಆಗೊಂದು ಫೋನ್ ಬಂತು. ಅದು ಹತ್ತಿರದ ಲಾಸ್ ಏಂಜಲಿಸ್‌ನ ಪ್ರಮುಖ ಆಸ್ಪತ್ರೆಯ ಅಧಿಕಾರಿ ಮಾಡಿದ್ದು. ಅವರ ಧ್ವನಿಯಲ್ಲಿ ಆತುರತೆ ಇತ್ತು.  ಡಾ.ಫಾಕ್ಸ್ ನಮ್ಮ ಆಸ್ಪತ್ರೆಯಲ್ಲಿ ಮಧ್ಯವಯಸ್ಸಿನ ಹೆಣ್ಣು ಮಗಳೊಬ್ಬಳು ದಾಖಲಾಗಿದ್ದಾಳೆ. ಆಕೆ ಆಳವಾದ ಕೋಮಾದಲ್ಲಿದ್ದಾಳೆ.ನಾಳೆ ಬೆಳಿಗ್ಗೆ ನರರೋಗ ತಜ್ಞರು ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಆದರೆ ಅವರು ಶಸ್ತ್ರಚಿಕಿತ್ಸೆ ಮಾಡುವ ಮೊದಲು ಆಕೆಯ ಸಂಪೂರ್ಣ ತಪಾಸಣೆಯನ್ನು ಮತ್ತೊಬ್ಬ ವೈದ್ಯರು ಮಾಡಿ ಆಪರೇಷನ್ನಿಗೆ ಯಾವ ತೊಂದರೆಯೂ ಇಲ್ಲ ಎಂದು ಶಿಫಾರಸ್ಸು ಮಾಡಬೇಕಾಗುತ್ತದೆ ಎಂದಿದ್ದಾರೆ. ನಾನು ಈಗಾಗಲೇ ಏಳು ಜನ ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರು ಯಾರೂ ಲಭ್ಯರಿಲ್ಲ. ಭಾನುವಾರವಾದ್ದರಿಂದ ಯಾರೊಬ್ಬರ ಸಮಯ ದೊರಕುತ್ತಿಲ್ಲ. ನೀವು ಎಂಟನೆಯವರು.ತಾವು ದಯವಿಟ್ಟು ಬಂದು ಪರೀಕ್ಷೆ ನಡೆಯಿಸಿ ವರದಿ ಕೊಟ್ಟರೆ ಆ ಮಹಿಳೆಯ ಶಸ್ತ್ರಚಿಕಿತ್ಸೆಗೆ ಅನುಕೂಲವಾಗುತ್ತದೆ  ಎಂದರು ಅಧಿಕಾರಿಗಳು. ಫಾಕ್ಸ್‌ರ ಮನಸ್ಸಿಗೆ ಪಿಚ್ಚೆನ್ನಿಸಿತು. ತಾನು ಎಂಟನೆಯವನೇ?. ತನ್ನನ್ನೇ ಮೊದಲು ಸಂಪರ್ಕಿಸಿದ್ದರೆ ಹೋಗಬಹುದಿತ್ತು. ಏಳು ಜನ ಇಲ್ಲವೆಂದ ಮೇಲೆ ನನ್ನ ಕಡೆಗೆ ಬಂದಿದ್ದಾರೆ. ಅಂದರೆ ಅವರಿಗೆ ನಾನೊಬ್ಬ ಪ್ರಭಾವೀ ವೈದ್ಯನಲ್ಲವೆಂದಾಯಿತು. ಹೀಗೆ ಯೋಚಿಸಿ ತನಗೂ ಸಾಧ್ಯವಿಲ್ಲವೆಂದು ಹೇಳಲು ಮನಸ್ಸಾಯಿತು. ಇನ್ನೊಂದು ಮನಸ್ಸು ಹೇಳಿತು. ಹೇಗೂ ಇಂದು ಖಾಲಿ ಇದ್ದೀಯಾ. ಹೋಗಿ ನೋಡು. ನಿನ್ನಿಂದ ಆ ಹೆಣ್ಣು ಮಗಳಿಗೆ ಅನುಕೂಲವಾದರೆ ಆಗಲಿ. ಆಯಿತು ಒಂದು ಗಂಟೆಯಲ್ಲಿ ಅಲ್ಲಿಗೆ ಬರುತ್ತೇನೆ  ಎಂದು ಹೇಳಿ ಫೋನ್ ಇಟ್ಟರು ಡಾ. ಫಾಕ್ಸ್.ಇವರು ಆಸ್ಪತ್ರೆ ತಲುಪುವ ಹೊತ್ತಿಗೆ ನರ್ಸ್‌ಗಳು ಕಾಯ್ದುಕೊಂಡಿದ್ದು ಪರೀಕ್ಷೆಗಳಿಗೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆ ಹೆಣ್ಣುಮಗಳು ಯಾವ ಪ್ರಜ್ಞೆಯೂ ಇಲ್ಲದೇ ಮಲಗಿದ್ದಾಳೆ. ಆಕೆಯ ಮೂಗಿನಲ್ಲಿ ಬಾಯಿಯಲ್ಲಿ ಪೈಪುಗಳು, ಕೈಗಳ ಮೇಲೆ, ಕುತ್ತಿಗೆಯಲ್ಲಿ ಏನೇನೋ ಔಷಧಿಗಳ ಟ್ಯೂಬುಗಳು. ಡಾ. ಫಾಕ್ಸ್ ನಾಡಿ ಹಿಡಿದು ನೋಡಿದರು, ಕಣ್ಣು ತೆರೆಸಿ ನೋಡಿದರು, ಚಟುವಟಿಕೆಯ ಯಾವ ಲಕ್ಷಣಗಳೂ ಕಾಣಲಿಲ್ಲ.ನರ್ಸ್ ದಾಖಲೆಗಳನ್ನು ತರಲು ಹೊರಗೆ ಹೋದಾಗ ಡಾ. ಫಾಕ್ಸ್‌ರವರಿಗೆ ಒಂದು ಪ್ರಯೋಗ ಮಾಡಬೇಕೆನಿಸಿತು. ಅವರು ಬಗ್ಗಿ ರೋಗಿಯ ಕಿವಿಯ ಹತ್ತಿರ ತಮ್ಮ ಬಾಯಿಯನ್ನು ಒಯ್ದು ಜೋರಾಗಿ ಕಿರುಚಿದರು,  “ಏಳು, ಎದ್ದೇಳು, ಯಾಕೆ ಮಲಗಿದ್ದೀಯಾ?”  ಆಶ್ಚರ್ಯ! ಆ ಹೆಣ್ಣುಮಗಳು ಧಡಕ್ಕನೇ ಎದ್ದು ಕುಳಿತೇ ಬಿಟ್ಟಳು. ಆ ಹೊತ್ತಿಗೆ ನಸ್‌ರ್ ಒಳಗೆ ಬಂದವಳು ಆಶ್ಚರ್ಯದಿಂದ ಕೂಗಿದಳು. ಪವಾಡ, ಪವಾಡ, ಡಾ. ನೀವು ಪವಾಡ ಮಾಡಿಬಿಟ್ಟಿರಿ. ಕೋಮಾದಲ್ಲಿದ್ದ ರೋಗಿಗೆ ಯಾವ ಶಸ್ತ್ರಚಿಕಿತ್ಸೆಯೂ ಇಲ್ಲದೇ ಗುಣಪಡಿಸಿಬಿಟ್ಟರಿ. ಇವರು ಹೇಳಿದರು,  ನಾನೇನೂ ಮಾಡಲಿಲ್ಲ. ಆಕೆ ಕೋಮಾಕ್ಕೆ ಹೋಗಿರಲೇ ಇಲ್ಲ. ನಾನು ಜೋರಾಗಿ ಏಳು  ಎಂದು ಕೂಗಿದೆ. ಆಕೆ ಎದ್ದೇ ಬಿಟ್ಟಳು  ನರ್ಸ್ ನಂಬುತ್ತಾಳೆಯೇ? ಸುದ್ದಿ ಹಬ್ಬಿತು, ಡಾ. ಫಾಕ್ಸ್ ಪವಾಡ ಮಾಡಿದರೆಂದು. ನಂತರ ಆಸ್ಪತ್ರೆಯ ವೈದ್ಯರ ಯಾದಿಯಲ್ಲಿ ಇವರ ಸಂಖ್ಯೆ ಎಂಟಾಗಿ ಉಳಿಯಲಿಲ್ಲ. ಇವರೇ ಪ್ರಥಮವಾಗಿ ಕರೆಯಬೇಕಾದ ವೈದ್ಯರಾದರು.ಈ ಘಟನೆ ನನಗೆ ತೋಚಿದ್ದು ಬೇರೆಯೇ. ನಾವೂ ಬಹಳಷ್ಟು ಜನ ಹಾಗೆಯೇ ಬೌದ್ಧಿಕವಾದ, ಅಧ್ಯಾತ್ಮಿಕವಾದ ಕೋಮಾದಲ್ಲಿದ್ದೇವೆ. ಆಗ ಸ್ವಾಮಿ ವಿವೇಕಾನಂದರಂತಹ ವೈದ್ಯರು ಬಂದು ನಮ್ಮ ಕಿವಿಯಲ್ಲಿ,  ಏಳು, ಎದ್ದೇಳು, ಗುರಿ ಮುಟ್ಟುವವರೆಗೂ ನಿಲ್ಲದಿರು,  ಎಂದು ಜೋರಾಗಿ ಕೂಗುತ್ತಾರೆ. ಆಗ ನಮ್ಮ ಕೋಮಾ ಬಿಟ್ಟು ಹೋಗುತ್ತದೆ. ನಾವು ಏಳಲೇಬೇಕಲ್ಲ ಯಾಕೆಂದರೆ ನಾವಿನ್ನೂ ಬದುಕಿದ್ದೇವೆ!

 

ಪ್ರತಿಕ್ರಿಯಿಸಿ (+)