ಏಷ್ಯಾ ಮತ್ತು ಯೂರೋಪಿನ ಅಂಟುನಂಟು

7

ಏಷ್ಯಾ ಮತ್ತು ಯೂರೋಪಿನ ಅಂಟುನಂಟು

Published:
Updated:
ಏಷ್ಯಾ ಮತ್ತು ಯೂರೋಪಿನ ಅಂಟುನಂಟು

ಪ್ರತಿವರ್ಷ ಜರ್ಮನಿಯಲ್ಲಿ ನೀಡಲಾಗುವ ಲೈಪ್ಜಿಸ್ ಪುಸ್ತಕ ಬಹುಮಾನವನ್ನು ಭಾರತೀಯ ಇಂಗ್ಲಿಷ್ ಬರಹಗಾರ ಪಂಕಜ್ ಮಿಶ್ರಾ ಅವರಿಗೆ ಎರಡು ವಾರಗಳ ಹಿಂದೆ ನೀಡಲಾಯಿತು. ಪುರ­ಸ್ಕೃತ ಪುಸ್ತಕದ ಹೆಸರು: ‘ದ ರಿವೋಲ್ಟ್ ಅಗೆನ್‌ಸ್ಟ್ ದ ವೆಸ್ಟ್ ಅಂಡ್ ದ ರಿಮೇಕಿಂಗ್ ಆಫ್ ಏಷ್ಯಾ’. ಈ ಹೆಮ್ಮೆಯ ಪುರಸ್ಕಾರವನ್ನು ಯೂರೋಪ್‌ ಕುರಿತ ಜ್ಞಾನವನ್ನು ವಿಸ್ತರಿಸುವ ಮತ್ತು ಜರ್ಮನ್ ಭಾಷೆಯ ಅಥವಾ ಜರ್ಮನ್ ಭಾಷೆಯ ಅನುವಾದದಲ್ಲಿ ಉಪಲಬ್ಧವಿರುವ ಶ್ರೇಷ್ಠ ಪುಸ್ತಕಕ್ಕೆ ನೀಡಲಾಗುತ್ತದೆ. ಭಾರತೀಯ ಬರಹಗಾರರೊಬ್ಬರು ಯೂರೋಪಿನ ಬಗೆಗಿನ ಪುಸ್ತಕವನ್ನು ರಚಿಸಿ ಅದಕ್ಕೆ ಯೂರೋಪಿನ ದೊಡ್ಡ ಗೌರವ ಸಂದಿರುವುದು ಭಾರತೀಯ­ರಾದ ನಮಗೆ ಹೆಮ್ಮೆಯ ವಿಚಾರ. ಜರ್ಮನ್ ಭಾಷೆಯಲ್ಲಿ ಈ ವಿಷಯ ಕುರಿತು ಪ್ರತಿವರ್ಷ ಪ್ರಕ­ಟವಾಗುವ ನೂರಾರು ಪುಸ್ತಕಗಳನ್ನು ಪರಿ­ಶೀಲಿಸಿ ಈ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗುತ್ತದೆ.ಲೈಪ್ಜಿಸ್ ಪುಸ್ತಕಮೇಳ, ಫ್ರಾಂಕ್‌­ಫರ್ಟ್ ಪುಸ್ತಕ ಮೇಳದ ನಂತರ ಜರ್ಮನಿಯ ಅತ್ಯಂತ ಪ್ರಸಿದ್ಧ ವಾರ್ಷಿಕ ಮೇಳ. ಇದರಲ್ಲಿ ಮುಖ್ಯವಾದ ಒತ್ತು ಜರ್ಮನ್ ಪುಸ್ತಕ ಪ್ರಕಟಣೆ­ಯನ್ನು ಪ್ರೋತ್ಸಾಹಿಸುವುದಾದರೂ ಇದರಲ್ಲಿ ಅಂತರ­ರಾಷ್ಟ್ರೀಯ ಪ್ರಕಾಶಕರೂ ಪಾಲ್ಗೊಳ್ಳುತ್ತಾರೆ. ಪುಸ್ತಕ ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಪುಸ್ತಕ ಪ್ರಿಯರು ಈ ಸಂದರ್ಭದಲ್ಲಿ ಲೈಪ್ಜಿಸ್ ನಗರಕ್ಕೆ ಲಗ್ಗೆಯಿಡುತ್ತಾರೆ. ಜರ್ಮನಿಯ ಸ್ಯಾಕ್ಸನಿ ರಾಜ್ಯದ ಹೆಮ್ಮೆಯ ಉತ್ಸವ ಇದಾಗಿರುವ ಕಾರಣ  ಸರ್ಕಾರ ಮತ್ತು ಲೈಪ್ಜಿಸ್‌ನ ನಗರಪಾಲಿಕೆಯ ಆಡಳಿತವರ್ಗ­ದವರು ಉತ್ಸಾಹ ಮತ್ತು ಸಂಭ್ರಮದಿಂದ ಎಲ್ಲ ಏರ್ಪಾಟುಗಳನ್ನು ಮಾಡುತ್ತಾರೆ.ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲೈಪ್ಜಿಸ್ ನಗರದ ಬಹು ದೊಡ್ಡ ಅಪೆರಾ ಹೌಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡು ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದ ಭವ್ಯ ಸಭೆಯಲ್ಲಿ ಸ್ಯಾಕ್ಸನಿ ರಾಜ್ಯದ ಪ್ರಧಾನ ಮಂತ್ರಿ, ಲೈಪ್ಜಿಸ್‌ನ ನಗರ­ಪಾಲಿಕೆಯ ಅಧ್ಯಕ್ಷರು, ಜರ್ಮನ್ ಪುಸ್ತಕ ಪ್ರಕಾಶನ ಸಂಘದ ಅಧ್ಯಕ್ಷರು ಮತ್ತು ಕಳೆದ ವರ್ಷ ಇದೇ ಪ್ರಶಸ್ತಿಗೆ ಭಾಜನರಾದ ಬರಹಗಾರ ಇಲಿಯಾತ್ರೋಯನೋವ್ ಮುಖ್ಯ ಅತಿಥಿಗ­ಳಾಗಿ­ದ್ದರು. ಈ ವರ್ಷದ ಪುರಸ್ಕೃತರ ಬಗ್ಗೆ, ಅವರ ಪುಸ್ತಕದ ಬಗ್ಗೆ ಕೊಂಡಾಡಿ ಮಾತನಾ­ಡಿ­ದರು. ಆ ಬಳಿಕ ಪಂಕಜ್ ಮಿಶ್ರಾ ಅವರು ಪ್ರಶಸ್ತಿ ಸ್ವೀಕಾರ ಭಾಷಣ ಮಾಡಿ ಧನ್ಯವಾದ­ಗಳನ್ನು ಅರ್ಪಿಸಿದ್ದಲ್ಲದೆ ತಮ್ಮ ಪುಸ್ತಕದ ಹಿಂದಿನ ಪ್ರೇರಣೆ ಮತ್ತು ಉದ್ದೇಶಗಳನ್ನು ಸ್ಪಷ್ಟೀಕರಿ­ಸಿ­ದರು.ಪಂಕಜ್ ಮಿಶ್ರಾ ಅವರ ಪುಸ್ತಕದ ಲಘು ತಾತ್ಪರ್ಯವನ್ನು ಹೀಗೆ ನೀಡಬಹುದು:

ಕಳೆದ ಎರಡು ಶತಮಾನಗಳ ಜಾಗತಿಕ ಇತಿ­ಹಾಸ­­ವನ್ನು ಯೂರೋಪ್‌ ಕೇಂದ್ರಿತ ದೃಷ್ಟಿಯಲ್ಲಿ ನೋಡು­ವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ. ಯೂರೋಪಿನ ನಾಡುಗಳ ವಸಾಹತು ವ್ಯವಸ್ಥೆ ಉಚ್ಛ್ರಾಯ ಸ್ಥಿತಿ ಮುಟ್ಟಿದ ಈ ಕಾಲ­ದಲ್ಲಿ ಯೂರೋಪಿನ ಅಧಿಕಾರಬಲವನ್ನು ವಿರೋಧಿ­ಸುವ ಪ್ರವೃತ್ತಿಗಳು ಇಡೀ ಏಷ್ಯಾದಲ್ಲಿ ವ್ಯಾಪಕವಾಗಿ ಬೆಳೆಯತೊಡಗಿದವು. ತಮ್ಮ ತಮ್ಮ ನಾಡುಗಳ ಭವಿತವ್ಯದ ಬಗ್ಗೆ ಚಿಂತಿತರಾದ ಏಷ್ಯಾದ ದೇಶಗಳ ನಾಯಕರು ತಮ್ಮ ತಮ್ಮ ಗತಗಳ ಬಗ್ಗೆ, ವರ್ತಮಾನದ ಬಗ್ಗೆ ಹೊಸ ರೀತಿ­ಯಲ್ಲಿ ಚಿಂತನೆ ಮಾಡತೊಡಗಿ ಹೊಸ ವಿಚಾರ, ಸಿದ್ಧಾಂತಗಳನ್ನು ಮುಂದಿಡತೊಡಗಿದರು. ಅವರ ವಿಮರ್ಶೆ ಕೇವಲ ಯೂರೋಪಿಗೆ ಮೀಸಲಾಗಿರ­ಲಿಲ್ಲ. ತಮ್ಮ ಪರಂಪರೆಗಳ ಇತಿಮಿತಿಗಳ ಬಗ್ಗೆಯೂ ವಸ್ತುನಿಷ್ಠವಾಗಿ ಆಲೋಚಿಸತೊಡಗಿ­ದರು. ತಮ್ಮ ಹಿತರಕ್ಷಣೆಗಾಗಿ ಹೋರಾಟ­ಗ­ಳನ್ನೂ ಪ್ರಾರಂಭಿಸಿದರು.ಭಾರತದಲ್ಲಿ ಸಿಪಾಯಿ­ದಂಗೆ, ಬ್ರಿಟಿಷ್ ವಸಾಹತು ವ್ಯವಸ್ಥೆಗೆ ಭಾರತೀಯರು ಎಸೆದ ಮೊದಲ ಸವಾಲಾ­ಯಿತು. ಇದಕ್ಕೆ ಸಂವಾದಿಯಾದ ಬೆಳವಣಿಗೆಗಳು ಎಲ್ಲ ಏಷ್ಯಾದ ನಾಡುಗಳಲ್ಲಿ ನಡೆದು ಅವು ವಿವಿಧ ಯೂರೋಪ್‌ ವಿರೋಧಿ ವಿಮೋ­ಚನಾ ಚಳವಳಿಗಳನ್ನು ನಿರ್ಮಿಸಿ ಇಪ್ಪತ್ತನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಯೂರೋಪಿನ ಕಬಂಧಬಾಹುವಿನಿಂದ ಏಷ್ಯಾ­ವನ್ನು ಬಿಡುಗಡೆಗೊಳಿಸಿದವು. ಈ ಅಪೂರ್ವ ಐತಿಹಾಸಿಕ ಸಂದರ್ಭದ ಅಂತರ್ವಿರೋಧಗಳು ಒಂದುಕಡೆ ಪಾರಂಪರಿಕ ಶಕ್ತಿಗಳನ್ನು ಪುನಶ್ಚೇತ­ನ­ಗೊಳಿಸುವ ಅಗತ್ಯ ಒತ್ತಿಹೇಳಿದರೆ ಇನ್ನೊಂದು ಕಡೆ ತಮ್ಮ ಸಮಾಜಗಳ ನೀತಿನಿಯಮಗಳನ್ನು ಬುಡಮಟ್ಟ ನವೀಕರಿಸುವ ಅಗತ್ಯವನ್ನು ಎತ್ತಿಹಿಡಿ­ದವು.ಉದಾಹರಣೆಗೆ ಭಾರತದಲ್ಲಿ ಗಾಂಧಿ ಮತ್ತು ನೆಹರೂ ನಡುವಿನ ಅಂತರ್ವಿರೋಧ­ವನ್ನು ಗಮನಿಸಬಹುದು. ಗಾಂಧಿಯವರು ಸಮಸ್ಯೆಗಳ ಪರಿಹಾರಕ್ಕೆ ಗತದ ಆದರ್ಶಗಳ ಕಡೆಗೆ ತಿರುಗಿದರೆ ನೆಹರೂ ಅವರು ಪಶ್ಚಿಮದ ಮೌಲ್ಯಗಳ ಕಡೆಗೆ ತಿರುಗಿದರು. ಇಸ್ಲಾಮೀಯ ದೇಶಗಳಾದ ಟರ್ಕಿ ಮುಂತಾದ ಕಡೆ ಕೆಲವು ನಾಯಕರು ಇಸ್ಲಾಮನ್ನು ಆಧುನಿಕ ವಿಕಾರಕ್ಕೆ ಮದ್ದನ್ನಾಗಿ ನೋಡಿದರೆ ಇನ್ನಿತರರು ಧರ್ಮದ ಸುಧಾರಣೆ ಅಥವಾ ನಿರಾಕರಣೆಗಳನ್ನು ಬೆಂಬಲಿ­ಸ­ತೊ­ಡಗಿದರು. ಇದೇ ರೀತಿಯ ತಲ್ಲಣಗಳು, ದ್ವಂದ್ವಗಳು ಚೀನಾ ಮತ್ತು ಜಪಾನ್‌ಗಳಲ್ಲೂ ರೂಪುತಳೆದವು. ಏಷ್ಯಾದ ನಾಡುಗಳ ಪರಿಸ್ಥಿತಿ­ಗಳ ನಡುವೆ ಮತ್ತು ಹೋರಾಟ ಪ್ರಕ್ರಿಯೆಗಳ ನಡುವೆ ಅಸಂಖ್ಯಾತ ವ್ಯತ್ಯಾಸಗಳಿದ್ದರೂ ಈ ಎಲ್ಲ ವ್ಯತ್ಯಾಸಗಳನ್ನು ದಾಟಿದ ಏಷಿಯನ್ ಅಸ್ತಿತ್ವದ ಪರಿಕಲ್ಪನೆಯೊಂದು ಮೂಡತೊಡಗಿ ಅದೊಂದು ಪ್ರಬಲ ಅಂತರ್ವಾಹಿನಿಯಾಗಿ ಈ ಕಾಲದ ಚಿಂತನೆ ಮತ್ತು ಹೋರಾಟಗಳ ಪ್ರೇರಕಶಕ್ತಿಯಾಗಿ ಕೆಲಸ ಮಾಡತೊಡಗಿತು.

ಉದಾಹರಣೆಗೆ ರವೀಂದ್ರನಾಥ ಟ್ಯಾಗೋರರು ಏಷ್ಯನ್ ಏಕತೆಯನ್ನು, ಅಸ್ತಿತ್ವವನ್ನು ತಮ್ಮ ಪ್ರತಿ­ಪಾ­ದನೆಗಳ ಮುಖ್ಯ ಅಂಶವನ್ನಾಗಿ ಮಾಡಿಕೊಂಡರು.

ವಸಾಹತು ಕಾಲದ ನಂತರ ಏಷ್ಯಾದ ರಾಷ್ಟ್ರಗಳಲ್ಲಿ ನಿರ್ಮಾಣವಾಗುತ್ತಿರುವ ಪ್ರವೃತ್ತಿ-­ಗಳು, ಪ್ರಕ್ರಿಯೆಗಳು, ಆಡಳಿತ ಕ್ರಮಗಳು ಪಾರಂಪ­ರಿಕತೆ ಮತ್ತು ಆಧುನಿಕತೆಗಳ ಪರಸ್ಪರ ವಿರುದ್ಧ ನೆಲೆಗಳಿಂದ ರೂಪಿತವಾಗಿದ್ದರೂ ಒಟ್ಟಾರೆ­ಯಾಗಿ ಅವು ಯೂರೋಪ್‌ ಕೇಂದ್ರಿತ ದೃಷ್ಟಿಯ ವಿರುದ್ಧದ ಬಂಡಾಯದ ಸ್ವರೂಪ­ವನ್ನು ತಳೆದವು. ಹೀಗಾಗಿ ಸಮಕಾಲೀನ ಜಗತ್ತಿನ ನಿರ್ಮಿತಿಯಲ್ಲಿ ಯೂರೋಪೇತರ ಏಷ್ಯಾದ ಸಂಸ್ಕೃತಿಗಳು ಸಕ್ರಿಯವಾಗಿ ಕೆಲಸ ಮಾಡತೊಡಗಿ ಇಂದು ಯೂರೋಪಿನ ಆಯ್ಕೆಗಳನ್ನೂ ನಿರ್ಧರಿ­ಸುತ್ತಿವೆ. ಯೂರೋಪ್‌ ಅಥವಾ ಅಮೆರಿಕ ಕೇಂದ್ರಿತ ಚಿಂತನೆ ಮತ್ತು ಕಾರ್ಯಾಚರಣೆಗಳು ಇಂದು ಎಂದಿಗಿಂತಲೂ ಅಪ್ರಸ್ತುತವೆನ್ನುವುದು ಪಂಕಜ್ ಮಿಶ್ರಾ ಅವರ ಮುಖ್ಯ ವಾದ.ವ್ಯಾಪಕ ಅಧ್ಯಯನ ಮತ್ತು ಸೂಕ್ಷ್ಮ ವಿಶ್ಲೇಷ­ಣೆಗಳ ಪರಿಣಾಮವಾಗಿರುವ ಈ ಪುಸ್ತಕ ಸರಳ ಮತ್ತು ಸುಲಭ ಗ್ರಾಹ್ಯವಾದ ಶೈಲಿ ಮತ್ತು ನಿರೂ­ಪಣೆಗಳಿಂದ ಈಗಾಗಲೇ ಅತ್ಯಂತ ಜನಪ್ರಿಯ ವಾಗಿದೆ. ಪಶ್ಚಿಮ ಕೇಂದ್ರಿತವಲ್ಲದ ಚಿಂತನೆಯನ್ನು ಸ್ವಾಗತಿಸುವವರಿಗೆ ಉಪಯುಕ್ತವಾದ ಅನೇಕ ಮಾಹಿತಿ ಮತ್ತು ವಿವರಗಳನ್ನು ಈ ಪುಸ್ತಕ ನೀಡು­ತ್ತದೆ. ಜಾಗತಿಕ ಪರಸ್ಪರಾವಲಂಬನೆ ಅನಿವಾ­ರ್ಯ­ವೆಂಬ ಅರಿವು ಯೂರೋಪಿನಲ್ಲೂ ಮೂಡು­ತ್ತಿ­ರುವ ಇಂದಿನ ದಿನಗಳಲ್ಲಿ ಚರಿತ್ರೆಯ ನಿರ್ಮಾಣದಲ್ಲಿ ಯೂರೋಪಿನ ಕುಗ್ಗುತ್ತಿರುವ ಪಾತ್ರವನ್ನು ಹೇಳುವ ಈ ಪುಸ್ತಕ ಜನಪ್ರಿ­ಯವಾಗುತ್ತಿ­ರುವುದು ಪ್ರಶಸ್ತಿಭಾಜನವಾಗುತ್ತಿ­ರುವುದು ಆಶ್ಚರ್ಯವೇನಲ್ಲ. ಯೂರೋಪ್‌ ಕೇಂದ್ರೀಯತೆಯ ಬಗ್ಗೆ ಯೂರೋಪಿನಲ್ಲೇ ಮರುಚಿಂತನೆ ಆರಂಭವಾ ಗಿರುವ ಕುರುಹು ಇದಾಗಿದೆ.ವಸಾಹತು ಕಾಲದ ಜಟಿಲ ಪರಿವರ್ತನೆಗಳ ಪರಿಣಾಮಗಳು ಇಂದಿನ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದ­ರಿಂದ ವರ್ತಮಾನ ಜಗತ್ತಿನ ಬಗ್ಗೆ ಈ ಪುಸ್ತಕ ವಿಶೇಷವಾದ ಬೆಳಕು ಚೆಲ್ಲುವ ಕಾರಣ ಅಭಿನಂದನಾರ್ಹವಾಗಿದೆ. ಏಷ್ಯಾದ ಯೂರೋಪ್‌ ವಿರೋಧಿ ಚಿಂತನೆಗಳ ನಡುವಿನ ವೈವಿಧ್ಯಗಳನ್ನು ಸಾಕಷ್ಟು ಗಮನಿಸಿಲಾಗಿದೆಯೆನ್ನು­ವುದು ನಿಜವಾದರೂ ಆಯಾ ದೇಶಗಳ ವಿವಿಧ ಪ್ರಕ್ರಿಯೆ, ಪ್ರತಿಕ್ರಿಯೆಗಳನ್ನು ಎಷ್ಟರಮಟ್ಟಿಗೆ ಗಮ­ನಿ­ಸಲಾಗಿದೆ ಎಂಬುದು ಸಂದೇಹಾಸ್ಪದ.ಉದಾಹರಣೆಗೆ ಪಂಕಜ್ ಮಿಶ್ರಾ ಅವರು ಭಾರತದ ಪ್ರಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನೋಡುವ ಬಗೆಯನ್ನು ಗಮನಿಸಬಹುದು. ಇಲ್ಲಿ ಅವರಿಗೆ ತೊಡಕಾಗಿರುವುದು ಅವರ ಇಂಗ್ಲಿಷ್ ಭಾಷಾವಲಂಬನೆ ಮತ್ತು ಅಘೋಷಿತ ಪ್ರಾದೇ­ಶಿಕ ಮಿತಿ. ಉತ್ತರ ಭಾರತದ ಮತ್ತು ಬಂಗಾಳದ ಚಿಂತಕರನ್ನು ಅವರು ಮುಖ್ಯವಾಗಿ ಗಮನಿಸುವು­ದ­ರಿಂದ ಭಾರತದ ಇತರ ಭಾಗಗಳಲ್ಲಿ  ನಡೆದ ಚಿಂತನೆ ಮತ್ತು ಪ್ರಕ್ರಿಯೆಗಳನ್ನು ಪೂರ್ತಿ ಕೈಬಿ­ಡುತ್ತಾರೆ. ಭಾರತೀಯ ಮೌಲ್ಯಗಳ ಪುನರ್‌ ನಿರ್ಮಾಣದಲ್ಲಿ ಮಹತ್ತರ ಭೂಮಿಕೆಯನ್ನು ನಿಭಾಯಿಸಿದ ದಕ್ಷಿಣ ಭಾರತದ ಮೇಧಾವಿಗ­ಳಾದ ಪೆರಿಯಾರ್, ನಾರಾಯಣಗುರು ಮುಂತಾದ­ವರನ್ನು ಅವರು ಪ್ರಸ್ತಾಪಿಸುವುದೂ ಇಲ್ಲ.ಟ್ಯಾಗೋರರ ಯುಗದಲ್ಲೇ ಅಷ್ಟೇ ಮಹತ್ವದ ಕವಿ–ದಾರ್ಶನಿಕರಾಗಿ ಪ್ರಭಾವಿಗಳಾ­ಗಿದ್ದ ಸುಬ್ರಹ್ಮಣ್ಯ ಭಾರತಿಯವರನ್ನೂ ಅವರು ಹೆಸರಿಸುವುದಿಲ್ಲ. ಇಂಗ್ಲಿಷ್ ಆಕರಗಳಲ್ಲಿ ಇಲ್ಲಿ­ಯವರೆಗೆ ಯುಕ್ತರೀತಿಯಲ್ಲಿ ದಾಖಲಾಗದ ದಲಿತ- ಶೂದ್ರ ಹೋರಾಟಗಳಾದ ಕೇರಳದ ಅಯ್ಯಂಗಳಿ ಚಳವಳಿಯನ್ನಾಗಲಿ ಬಂಗಾಳದ ನಾಮಶೂದ್ರ ಚಳವಳಿಯನ್ನಾಗಲಿ ಅವರು ಗಮನಿಸುವುದೇ ಇಲ್ಲ. ಅವರ ವಿಶ್ಲೇಷಣೆಯಲ್ಲಿ ಭಾರತ ಕುರಿತ ಭಾಗ ಬಹಳ ಮುಖ್ಯವಾಗಿರುವು­ದರಿಂದ ಈ ಅಲ್ಪವ್ಯಾಪ್ತಿ ದೋಷಗಳು ಬಹಳ ಗಂಭೀರವಾಗಿವೆ. ಇಂದಿನ ಭಾರತದ ಮತ್ತು ಏಷ್ಯಾದ ಮೂಲಭೂತವಾದಿ ಪುನರ್‌­ನಿರ್ಮಾಣ­ಗಳ ಭಯಾನಕತೆಯ ಹಿನ್ನೆಲೆಯಲ್ಲಿ ವಸಾಹತು ಕಾಲದಲ್ಲಿ ಸಾವರ್ಕರ್ ಮುಂತಾದ­ವರ ಹಿಂದೂ ರಾಷ್ಟ್ರೀಯ ಚಿಂತನೆಗಳು ಬೆಳೆದು­ಬಂದ ರೀತಿಯನ್ನು ವಿಸ್ತೃತವಾಗಿ ವಿಶ್ಲೇಷಿಸಬೇ­ಕಾಗಿತ್ತು ಅಂತಲೂ ಅನಿಸುತ್ತದೆ. ಅಲ್ಲದೆ ಅಂಬೇಡ್ಕರ್ ಅವರ ಭೂಮಿಕೆಗೆ ಹೆಚ್ಚು ಅವಧಾರಣೆ ನೀಡಬೇಕಿತ್ತು.ವಸಾಹತುಶಾಹಿಯ ಕೊನೆಯ ನಂತರ ಜಗತ್ತಿನಲ್ಲಾದ ನಿರ್ಣಾಯಕ ಬೆಳವಣಿಗೆ­ಯೆಂದರೆ ಆರ್ಥಿಕ ಮೂಲವಾದ ಅಮೆರಿಕ ಕೇಂದ್ರಿತ ಬಹುರಾಷ್ಟ್ರೀಯ ಕಂಪೆನಿಗಳ ನವವಸಾ­ಹತುಶಾಹಿ ಪ್ರಭಾವ. ಅದರ ಪರಿಣಾಮ ಇವತ್ತು ಸೋವಿಯತ್ ಒಕ್ಕೂಟದ ಪತನದ ನಂತರದ ಯುಗದಲ್ಲಿ ದಕ್ಷಿಣದ ರಾಷ್ಟ್ರಗಳ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಗಾಢ­ಪ್ರಭಾವ ಬೀರುತ್ತಿದೆ. ನವಬಂಡವಾಳಶಾಹಿ ಮತ್ತು ನವವಸಾಹತುಶಾಹಿ ಅಂತರ್ವಿ ರೋಧಗಳ ತಲಸ್ಪರ್ಶಿಯಾದ ಬಿಚ್ಚುನೋಟ­ಗಳನ್ನು ಅರ್ನಸ್ಟ್ ಮಂಡೆಲ್, ನೋಮ್ ಚೋಮ್ ಸ್ಕಿ ಮುಂತಾದ ಚಿಂತಕರು ತಮ್ಮ ವ್ಯಾಪಕ ಬರಹಗಳಲ್ಲಿ ಪರೀಕ್ಷೆಗೊಳಪಡಿಸಿದ್ದಾರೆ.ಅಂದರೆ ಏಷ್ಯಾದ ಅಥವಾ ಇತರ ಯೂರೋ­ಪೇತರ ಭೂಭಾಗಗಳ ಇಂದಿನ ಸವಾಲುಗಳನ್ನು ಗ್ರಹಿಸುವಲ್ಲಿ ಈ ಅಂಶಗಳನ್ನು ಉದಾಸೀನ ಮಾಡುವುದು ತುಂಬಾ ಅಪಾಯಕಾರಿ. ಸದಾ ಚಲನಶೀಲವಾದ ಚರಿತ್ರೆಯಲ್ಲಿ ಈ ಮಹತ್ವ­ಪೂರ್ಣ ಮತ್ತು ನಿರ್ಣಾಯಕ ಆಯಾಮಗಳನ್ನು ನಮ್ಮ ವಿಶ್ಲೇಷಣೆಯ ತೆಕ್ಕೆಗೊಳಪಡಿಸದೆ ಹೋದರೆ ನಮ್ಮ ಚಿಂತನೆ ವರ್ತಮಾನದ ಅಕ್ಷಮ್ಯವಾದ ಅಸಮಾನ ಹಂಚಿಕೆಯ ಘೋರ ಪರಿಣಾಮಗಳನ್ನು ಪ್ರಶ್ನಿಸುವುದಿರಲಿ ಮುಟ್ಟು­ವುದೂ ಇಲ್ಲ.ಆದರೆ ಯೂರೋಪೇತರ ದೃಷ್ಟಿ­ಕೋನವನ್ನು ಪ್ರತಿಪಾದಿಸುವ ಮಿಶ್ರಾ ಅವರು ಸಾಂಪ್ರದಾಯಿಕ ಉದಾರವಾದಿ ಚೌಕಟ್ಟಿನಲ್ಲಿ ಇತಿಹಾಸವನ್ನು ಗಮನಿಸು ವುದರಿಂದ ಈ ಗೋಜಲು­ಗಳ ತಂಟೆಗೇ ಹೋಗುವುದಿಲ್ಲ. ಸಾಂಪ್ರ­ದಾಯಿಕ ಉದಾರವಾದವಾಗಲಿ ಅಥವಾ ಸಾಂಪ್ರದಾಯಿಕ ಸಮಾಜ ವಾದವಾ­ಗಲಿ ಅಥವಾ ಗತದ ಯಾವುದೇ ಸಿದ್ಧಾಂತ­ವಾಗಲಿ ಇಂದಿನ ದಂದುಗಗಳನ್ನು ಪರಿಹರಿಸಲಾ­ರವು. ಯಾಕೆಂದರೆ ಗೋಳೀಕರಣದ ಪ್ರವಾಹ­ದಲ್ಲಿ ಪುರುಷಕೇಂದ್ರಿತ ಉದಾರವಾದಿತ್ವ ಪೂರ್ತಿ ಮುಳುಗಿಹೋಗಿದೆ.ಪಂಕಜ ಮಿಶ್ರಾ ಅವರು ತಮ್ಮ ಪುರಸ್ಕಾರ ಸ್ವೀಕಾರ ಭಾಷಣದಲ್ಲಿ ಹೇಳಿದ ಮಾತು ವಿಶ್ಲೇಷಣಾಯೋಗ್ಯ. ಯಾವ ಯೂರೋಪಿ­ಯನ್ ಭಾಷೆಯನ್ನೂ ಅರಿಯದ ಸಾಂಪ್ರದಾ­ಯಿಕ ಕುಟುಂಬದಲ್ಲಿ ಜನಿಸಿದ ತಾವು ಕೇವಲ ಜ್ಞಾನಾರ್ಜನೆಯ ದಾಹದಿಂದ ಇಂಗ್ಲಿಷಿನ ಮೊರೆ­ಹೊಕ್ಕಿದ್ದಾಗಿ ತಿಳಿಸಿದರು. ಭಾರತದ ಪರಿಚಯ­ವನ್ನು ಭಾರತೀಯರಿಗೆ  ಇಂಗ್ಲಿಷಿನ ಮೂಲಕ ಮಾಡಿಸಿದ ಯೂರೋಪಿನ ಅದರಲ್ಲೂ ಜರ್ಮನಿಯ ಚಿಂತಕರಿಗೆ ತಮ್ಮ ನಮ್ರ ಕೃತಜ್ಞತೆಗಳನ್ನು ಅರ್ಪಿಸಿದರು. ಉಪನಿಷತ್ತು­ಗಳನ್ನು ಅವರು ಗ್ರಹಿಸಿದ್ದು ಮ್ಯಾಕ್ಸ್ ಮುಲ್ಲರ್ ಮೂಲಕ.ಬೌದ್ಧ ಧರ್ಮವನ್ನು ಗ್ರಹಿಸಿದ್ದು ಜರ್ಮನಿಯ ಷೋಪನ್ಹಾವೆರ್, ನೀಟ್ಷೆ ಇತ್ಯಾದಿ­ಗಳ ಮೂಲಕ. ಹೇಗೆ ಆಧುನಿಕ ಜಗತ್ತಿನಲ್ಲಿ ಯೂರೋಪ್‌ ಏಷ್ಯಾಕ್ಕೆ ಋಣಿಯಾಗಿರಬೇಕೋ ಅದೇ ರೀತಿ ಭಾರತ ಮತ್ತು ಇತರ ಏಷಿಯನ್ ರಾಷ್ಟ್ರಗಳು ಯೂರೋಪಿಗೆ ಋಣಿಯಾಗಿ­ರಬೇಕು ಎಂದರು. ಈ ಮಾತುಗಳನ್ನು ಯೂರೋಪಿನ ಟೀಕಾಕಾರರೊಬ್ಬರ ಬಾಯಿಂದ ಕೇಳಿದ ಎರಡು ಸಹಸ್ರ ಮಂದಿ ಜರ್ಮನರು ಆನಂದತುಂದಿಲರಾಗಿ ಕರತಾಡನ ಮಾಡಿದರು. ಯೂರೋಪಿನವರಿಗೆ ಮೆಚ್ಚುಗೆಯಾಗುವ ಬಗೆಯಲ್ಲಿ ಯೂರೋಪಿನ ಟೀಕೆಯನ್ನು ಮಂಡಿಸಿದ ಪಂಕಜ ಮಿಶ್ರಾ ಅವರು ಯೂರೋಪಿನ ಬಹುದೊಡ್ಡ ಪುರಸ್ಕಾರವನ್ನು ಪಡೆದು ಕೃತಾರ್ಥರಾದರು.ಅವರ ಮಾತುಗಳನ್ನು ಕೇಳಿಸಿ­ಕೊಂಡು ಮುಜಗರಗೊಂಡ ನನಗೆ ಆಫ್ರಿಕನ್ ಬರಹಗಾರ ಚಿನುವಾ ಅಚಿಬೆ, ಇನ್ನೊಬ್ಬ ಆಫ್ರಿಕನ್ ಬರಹಗಾರ ವೊಲೆಷೋಯಿಂಕಾಗೆ ನೊಬೆಲ್ ಪುರಸ್ಕಾರ ದೊರೆತಾಗ ಪ್ರತಿಕ್ರಿಯಿ­ಸಿದ್ದು ನೆನಪಾಯಿತು. ಆಗ ಅಚಿಬೆ ಹೀಗೆ ಹೇಳಿದರು:‘ಬಿಳಿಯರ ನಿಯಮಗಳಿಗೆ ಅನುಸಾರವಾಗಿ ಕರಿಯರಾದ ನಾವು ಅವರಿಗಿಂತ ಚೆನ್ನಾಗಿ ಆಟವಾಡಬಲ್ಲೆವು ಎಂದು ತೋರಿಸಿಕೊಟ್ಟು ಅಭಿನಂದನೆಗೆ ಅರ್ಹರಾದೆವು. ಆದರೆ ನಾವು ನಮ್ಮ ನಿಯಮಗಳ ಅನುಸಾರ ನಮ್ಮ ಆಟವನ್ನು ಶುರು ಮಾಡುವುದು ಎಂದು?’ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry