ಸೋಮವಾರ, ಮಾರ್ಚ್ 8, 2021
29 °C

ಏಸಸ್ ಝೆನ್‌ಫೋನ್ 2 ಡಿಲಕ್ಸ್ ಅತ್ಯುತ್ತಮ ಕೆಲಸದ ವೇಗ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಏಸಸ್ ಝೆನ್‌ಫೋನ್ 2 ಡಿಲಕ್ಸ್ ಅತ್ಯುತ್ತಮ ಕೆಲಸದ ವೇಗ

ಏಸಸ್ ಕಂಪೆನಿಯ ಎಲ್ಲವನ್ನೂ ಒಂದರಲ್ಲೇ ಅಡಕವಾಗಿರುವ ಗಣಕ, ಎರಡು ಸ್ಮಾರ್ಟ್‌ಫೋನ್‌ಗಳ ವಿಮರ್ಶೆ ಇದೇ ಅಂಕಣದಲ್ಲಿ ಬಂದಿತ್ತು. ಭಾರತದ ಬಗ್ಗೆ ಈ ಕಂಪೆನಿ ಈಗ ಅಧಿಕ ಉತ್ಸಾಹ ತೋರಿಸುತ್ತಿದೆ. ಈ ಕಂಪೆನಿ ಮಾತ್ರವಲ್ಲ, ಎಲೆಕ್ಟ್ರಾನಿಕ್ ಮತ್ತು ಇತರೆ ಉತ್ಪನ್ನಗಳನ್ನು ತಯಾರಿಸುತ್ತಿರುವ ಬಹುತೇಕ ಎಲ್ಲ ಕಂಪೆನಿಗಳೂ ಭಾರತದ ಕಡೆಗೆ ಆಸಕ್ತಿಯಿಂದ ಧಾವಿಸುತ್ತಿವೆ.ಕೆಲವು ಕಂಪೆನಿಗಳು ಭಾರತದಲ್ಲೇ ತಮ್ಮ ಉತ್ಪನ್ನಗಳ ತಯಾರಿ ಪ್ರಾರಂಭಿಸಿವೆ. ಇದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಭಾರತದಲ್ಲೇ ತಯಾರಿಸಿ ಎಂಬ ಯೋಜನೆಯೂ ಕಾರಣವಾಗಿದೆ. ನೀವು ಕೊಳ್ಳುವ ಏಸಸ್ ಫೋನ್ ಭಾರತದಲ್ಲೇ ತಯಾರಾಗಿರುವ ಸಾಧ್ಯತೆಯೂ ಇದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಏಸಸ್ ಝೆನ್‌ಫೋನ್ 2 ಡಿಲಕ್ಸ್ (ZenFone2 Deluxe) ಎಂಬ ಸ್ಮಾರ್ಟ್‌ಫೋನನ್ನು.ಗುಣವೈಶಿಷ್ಟ್ಯಗಳು

2.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel Atom Quad Core Z3580),  4 + 64/128 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಸೌಲಭ್ಯ, 1920x1080 ಪಿಕ್ಸೆಲ್ ರೆಸೊಲೂಶನ್‌ನ 5.5 ಇಂಚು ಗಾತ್ರದ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ-3 ಗಾಜು, 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾ, ಪ್ರಾಥಮಿಕ ಕ್ಯಾಮೆರಾಕ್ಕೆ ಎರಡು ಫ್ಲಾಶ್‌ಗಳು, 2ಜಿ ಮತ್ತು 2ಜಿ/3ಜಿ/4ಜಿ ಎರಡು ಮೈಕ್ರೋಸಿಮ್, ಯುಎಸ್‌ಬಿ ಓಟಿಜಿ, 77.2 x 152.5 x 3.9~10.9 ಸೆ.ಮೀ. ಗಾತ್ರ, 170 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್‌ಎಂ ರೇಡಿಯೊ, ಎನ್‌ಎಫ್‌ಸಿ, 3000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಇತ್ಯಾದಿ. ಇದರ ಜೊತೆ ವಿಶೇಷವಾದ, ಪ್ರತ್ಯೇಕವಾದ ಝೆನ್‌ಫ್ಲಾಶ್ ಇದೆ. 64 ಗಿಗಾಬೈಟ್ ಮೆಮೊರಿಯ ಮಾದರಿಯ ಮಾರುಕಟ್ಟೆ ಬೆಲೆ ಅಂದಾಜು ₹20 ರಿಂದ ₹23 ಸಾವಿರ.

ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಇತರೆ ಝೆನ್‌ಫೋನ್-2 ಫೋನ್‌ಗಳಂತೆಯೇ ಇದೆ. ಹಿಂಭಾಗ ಬದಿಗಳಲ್ಲಿ ತೆಳ್ಳಗಾಗಿದ್ದು ಮಧ್ಯದಲ್ಲಿ ದಪ್ಪಗಾಗಿದೆ. ಅಂದರೆ ಬಹುಮಟ್ಟಿಗೆ ತಲೆದಿಂಬಿನಂತೆ ಎನ್ನಬಹುದು. ಹಿಂಭಾಗದ ಪ್ಲಾಸ್ಟಿಕ್ ಕವಚ ತೆಗೆಯಬಹುದು. ಆಗ ಮೈಕ್ರೊಸಿಮ್ ಮತ್ತು ಮೈಕ್ರೊಎಸ್‌ಡಿ ಕಾರ್ಡ್‌ಗಳನ್ನು ಹಾಕುವ ಜಾಗ ಕಂಡುಬರುತ್ತದೆ. ಆದರೂ ಬ್ಯಾಟರಿ ಮಾತ್ರ ತೆಗೆಯಲು ಸಾಧ್ಯವಿಲ್ಲ. ಹಿಂದಿನ ಕವಚ ಸ್ವಲ್ಪ ವಿಚಿತ್ರವಾಗಿದ್ದು ವಜ್ರಕ್ಕೆ ಹೊಳಪು ನೀಡಲು ಪಟ್ಟಿ ಪಟ್ಟಿಯಂತೆ ಕೆತ್ತುತ್ತಾರಲ್ಲ, ಅದೇ ಮಾದರಿಯಲ್ಲಿದೆ.

ಇದು ಯಾಕೆ ಹೀಗಿದೆ ಗೊತ್ತಿಲ್ಲ. ನನಗಂತೂ ಈ ವಿನ್ಯಾಸ ಹಿಡಿಸಲಿಲ್ಲ. ಇದರ ವಾಲ್ಯೂಮ್ ಬಟನ್ ಹಿಂಭಾಗದಲ್ಲಿದ್ದು, ಕ್ಯಾಮೆರಾದ ಕೆಳಗೆ ಇದೆ.ಇದು ನಿಜಕ್ಕೂ ಉತ್ತಮ ವಿನ್ಯಾಸ. ಮಾತನಾಡುವಾಗ ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಸುಲಭ. ಕೆಲವು ಎಲ್‌ಜಿ ಫೋನ್‌ಗಳಲ್ಲೂ ಈ ರೀತಿ ಇದೆ. ಕ್ಯಾಮೆರಾದ ಪಕ್ಕದಲ್ಲಿ ಎರಡು ಎಲ್‌ಇಡಿ ಫ್ಲಾಶ್‌ಗಳಿವೆ. ಮೇಲ್ಗಡೆ ಆನ್/ಆಫ್ ಬಟನ್ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಫೋನನ್ನು ನಿದ್ದೆಯಿಂದ ಎಬ್ಬಿಸಲು ಪರದೆಯ ಮೇಲೆ ಎರಡು ಸಲ ಕುಟ್ಟಿದರೆ ಸಾಕು. ಅಂದರೆ ಇದರ ಆನ್/ಆಫ್ ಬಟನ್‌ನ ಬಳಕೆ ಕಡಿಮೆ ಎಂದು ಹೇಳಬಹುದು. ದೇಹ ಗಡುಸಾಗಿಲ್ಲ ಎಂಬುದೊಂದು ಕೊರತೆ ಇದೆ. ಹಿಂಭಾಗದ ಕವಚದ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲ. ಕಡಿಮೆ ಬೆಲೆಯ ಪ್ಲಾಸ್ಟಿಕ್ ಅನ್ನಿಸುತ್ತದೆ. ಕೈಯಲ್ಲಿ ಹಿಡಿದಾಗ ದುಬಾರಿ ಫೋನ್ ಎಂಬ ಭಾವನೆ ಬರುವುದಿಲ್ಲ. 20 ಸಾವಿರಕ್ಕಿಂತ ಮೇಲ್ಪಟ್ಟು ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ರಚನೆ ಮತ್ತು ವಿನ್ಯಾಸ ತೃಪ್ತಿ ನೀಡುವುದಿಲ್ಲ.ಝೆನ್‌ಫೊನ್ ಬಹುಶಃ 4 ಗಿಗಾಬೈಟ್ ಮೆಮೊರಿ ಅಳವಡಿಸಿದ ಪ್ರಥಮ ಫೋನ್ ಇರಬೇಕು. ಹಾಗೆಂದು ಅವರು ಅದರ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಕೆಲಸದ ವೇಗ ಅತ್ಯುತ್ತಮವಾಗಿದೆ. ಪರದೆಯಲ್ಲಿ ಐಕಾನ್‌ಗಳನ್ನು ಸರಿವುದು, ಬ್ರೌಸಿಂಗ್, ಇತರೆ ಎಲ್ಲ ಕೆಲಸಗಳನ್ನು ಮಾಡುವ ವೇಗ, ಎಲ್ಲ ತೃಪ್ತಿದಾಯಕವಾಗಿದೆ. ಆಟಗಳನ್ನು ಆಡುವ ಅನುಭವ ಅತ್ಯುತ್ತಮವಾಗಿದೆ. ಮೂರು ಆಯಾಮಗಳ ಆಟ ಮತ್ತು ಇತರೆ ಕಿರುತಂತ್ರಾಂಶ (ಉದಾ - ಮಾನವ ದೇಹದ ಪ್ರತ್ಯನುಕರಣೆ) ಬಳಕೆಗೆ ಇದು ಉತ್ತಮ ಫೋನ್. ಅಂದ ಹಾಗೆ ಇದರಲ್ಲಿ ಬಳಕೆಯಾಗಿರುವುದು ಸಾಮಾನ್ಯವಾಗಿ ನೆಟ್‌ಬುಕ್‌ಗಳಲ್ಲಿ ಬಳಸುವ ಇಂಟೆಲ್ ಆಟಮ್ ಪ್ರೊಸೆಸರ್.ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದು ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ಯಾವುದೇ ಅಡೆತಡೆಯಿಲ್ಲದೆ ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೊ ಇಂಜಿನ್ ಕೂಡ ಉತ್ತಮವಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿರುವ ಯಾವುದಾದರೂ ಉತ್ತಮ ಇಯರ್‌ಫೋನ್ ಜೋಡಿಸಿದರೆ ಉತ್ತಮ ಸಂಗೀತ ಆಲಿಸುವ ಅನುಭವ ನಿಮ್ಮದಾಗುವುದು. ಚೆನ್ನಾಗಿರುವ ಆಡಿಯೊ ಇಂಜಿನ್, ಉತ್ತಮ ಗುಣಮಟ್ಟದ ಹೈಡೆಫಿನಿಶನ್ ಪರದೆ, ಶಕ್ತಿಶಾಲಿಯಾದ ಪ್ರೊಸೆಸರ್ ಇವೆಲ್ಲ ಜೊತೆಗೂಡಿ ನಿಮಗೆ ಉತ್ತಮ ಅನುಭವ ನೀಡುತ್ತವೆ.ಈ ಫೋನಿನಲ್ಲಿರುವ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್‌ನದು. ಎರಡು ಎಲ್‌ಇಡಿಗಳ ಫ್ಲಾಶ್ ಇದೆ. ಕ್ಯಾಮೆರಾದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬಂತು. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಎಚ್‌ಡಿಆರ್, ಕಡಿಮೆ ಬೆಳಕು, ರಾತ್ರಿ, ಸ್ವಂತೀ, ಇತ್ಯಾದಿ ಹಲವು ಸೌಲಭ್ಯಗಳಿವೆ. ಪ್ರಾಥಮಿಕ ಕ್ಯಾಮೆರಾವನ್ನೇ ಬಳಸಿ ಸ್ವಂತೀ ತೆಗೆಯಬಹುದು. ವಿಡಿಯೊ ಚಿತ್ರೀಕರಣವೂ ತೃಪ್ತಿದಾಯಕವಾಗಿದೆ. ಆದರೆ 4k ವಿಡಿಯೊ ಚಿತ್ರೀಕರಣ ಇಲ್ಲ. ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾತ್ರ ಸಾಧ್ಯ.ಈ ಫೋನಿನ ಜೊತೆ ಝೆನ್‌ಫ್ಲಾಶ್ ಎಂಬ ಇನ್ನೊಂದು ಫ್ಲಾಶ್ ನೀಡಿದ್ದಾರೆ. ಅದನ್ನು ಮೈಕ್ರೊಯುಎಸ್‌ಬಿ ಕಿಂಡಿ ಮೂಲಕ ಕ್ಯಾಮೆರಾಕ್ಕೆ ಜೋಡಿಸಬಹುದು. ಆಗ ನೀವು ಇತರೆ ಕ್ಯಾಮೆರಾಗಳಿಗೆ ಫ್ಲಾಶ್ ಜೋಡಿಸಿದಂತೆ ಇದಕ್ಕೂ ಫ್ಲಾಶ್ ಜೋಡಿಸಿ ಫೋಟೊಗ್ರಫಿ ಮಾಡಬಹುದು. ಈ ಫ್ಲಾಶ್ ಸ್ವಲ್ಪ ಶಕ್ತಿದಾಯಕವಾಗಿದೆ. ಆದರೆ ಕೈಪಿಡಿಯಲ್ಲಿ ಈ ಫ್ಲಾಶ್ ಬಳಕೆಯ ಬಗ್ಗೆ ಯಾವುದೇ ವಿವರ ನೀಡಿಲ್ಲ. ಈ ಝೆನ್‌ಫ್ಲಾಶ್ ಬೇರೆ ಸ್ಮಾರ್ಟ್‌ಫೋನ್‌ಗಳ ಜೊತೆ ಕೆಲಸ ಮಾಡುವುದಿಲ್ಲ.ಆಂಡ್ರಾಯ್ಡ್‌ 5.0 ಆಧಾರಿತ ಫೋನ್ ಆಗಿರುವುದರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಅಷ್ಟು ಮಾತ್ರವಲ್ಲ. ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಜೊತೆಗೆ ಅವರದೇ ಕೀಲಿಮಣೆಯೂ ಇದೆ. ಬ್ಯಾಟರಿಯ ವಿಷಯದಲ್ಲಿ ಮಾತ್ರ ಇದರ ಕ್ಷಮತೆ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ವೇಗವಾಗಿ ಚಾರ್ಜ್ ಏನೋ ಆಗುತ್ತದೆ. ಆದರೆ ಜೊತೆಗೆ ವೇಗವಾಗಿ ಖಾಲಿಯೂ ಆಗುತ್ತದೆ.***

ವಾರದ ಆ್ಯಪ್

ಕನ್ನಡ ವ್ಯಾಕರಣ ಕಲಿಯಿರಿ

ಕನ್ನಡ ವ್ಯಾಕರಣ ಕಲಿಯಬೇಕೇ? ನಾಮಪದ, ಕ್ರಿಯಾಪದ, ಸಂಧಿ, ಸಮಾಸ, ವಿರೋಧ ಪದ, ಇತ್ಯಾದಿ ಕಲಿಯಬೇಕೇ? ನೀವು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುತ್ತಿದ್ದೀರಾ? ಅದಕ್ಕೆ ತಯಾರಿ ಮಾಡಬೇಕೇ? ಇತ್ತೀಚೆಗಿನ ಆಗು ಹೋಗುಗಳ ಬಗ್ಗೆ ಮಾಹಿತಿ ಬೇಕೇ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದಾದಲ್ಲಿ ನಿಮಗೆ ಈ ಕಿರುತಂತ್ರಾಂಶ (ಆ್ಯಪ್) ಬೇಕು. ಇದು ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Learn Kannada English Grammar ಎಂದು ಹುಡುಕಬೇಕು. ಇದನ್ನು ಪ್ರತಿ ದಿನ ಅಂತರಜಾಲಕ್ಕೆ ಸಂಪರ್ಕಿಸಿ ಆಗಾಗಿನ ಮಾಹಿತಿ, ಸುದ್ದಿಗಳನ್ನು ಪಡೆದು ನವೀಕರಿಸಿಕೊಳ್ಳುತ್ತಿರಬಹುದು.***

ಗ್ಯಾಜೆಟ್ ಸುದ್ದಿ

ಅತಿ ದುಬಾರಿ ಹೆಡ್‌ಫೋನ್

ಅತ್ಯುತ್ತಮ ಗುಣಮಟ್ಟದ ಹೆಡ್‌ಫೋನ್‌ಗಳನ್ನು ತಯಾರಿಸಲು ಪ್ರಖ್ಯಾತವಾದ ಸೆನ್‌ಹೈಸರ್ ಕಂಪೆನಿ ಈಗ ತುಂಬ ದುಬಾರಿಯಾದ ಮತ್ತು ಅತ್ಯಾಧುನಿಕವಾದ ಹೆಡ್‌ಫೋನ್ ಅನ್ನು ಘೋಷಿಸಿದೆ. 90ರ ದಶಕದಲ್ಲಿ ಓರ್‌ಫಿಯಸ್ ಹೆಸರಿನಲ್ಲಿ ತುಂಬ ದುಬಾರಿಯಾದ ತುಂಬ ಮೇಲ್ಮಟ್ಟದ ಹೆಡ್‌ಫೋನ್‌ಗಳನ್ನು ತಯಾರಿಸಿದ್ದ ಸೆನ್‌ಹೈಸರ್ ಕಂಪೆನಿ ಈಗ ಇನ್ನೂ ಒಂದು ಹಂತ ಮುಂದೆ ಹೋಗಿ ಅದೇ ಶ್ರೇಣಿಯಲ್ಲಿ ಇನ್ನೂ ಮೇಲ್ಮಟ್ಟದ ಹೆಡ್‌ಫೋನ್ ಘೋಷಿಸಿದೆ.ಈ ಹೆಡ್‌ಫೋನ್‌ ಜೊತೆ ಹಳೆಯ ಮಾದರಿಯ ನಿರ್ವಾತ ಟ್ಯೂಬ್‌ಗಳಿಂದ ಮಾಡಿದ ಆ್ಯಂಪ್ಲಿಫೈಯರ್ ಇದೆ. ಹೆಡ್‌ಫೋನಿನ ಡಯಾಫ್ರಾಂ (ಕಂಪಿಸುವ ಪರದೆ) ಅನ್ನು ವಿಶೇಷ ಚಿನ್ನ ಮತ್ತು ಪ್ಲಾಟಿನಂ ಲೇಪಿತ ವಸ್ತುವಿನಿಂದ ತಯಾರಿಸಿದ್ದಾರೆ. ಇದರ ಧ್ವನಿಯ ಪುನರುತ್ಪತ್ತಿಯ ಕಂಪನಾಂಕದ ವ್ಯಾಪ್ತಿ 8 Hzನಿಂದ 100 kHz ತನಕ. ಸಂಗೀತ ಮತ್ತು ಶಬ್ದದ ಅನುಪಾತ (signal-to-noise ratio) 0.01%. ಇಷ್ಟು ಮೇಲ್ಮಟ್ಟದ ಹೆಡ್‌ಫೋನಿನ ಬೆಲೆ ಎಷ್ಟಿರಬಹುದು? ಊಹಿಸಿ ನೋಡೋಣ? ಕೇವಲ 55000 ಅಮೆರಿಕನ್ ಡಾಲರ್ ಅಂದರೆ ಸುಮಾರು 36 ಲಕ್ಷ ರೂಪಾಯಿಗಳು. ಇದು 2016ರ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ತಲುಪುವ ನಿರೀಕ್ಷೆ ಇದೆ. ಇದನ್ನು ಕೊಳ್ಳಬೇಕಿದ್ದರೆ ಈಗಿನಿಂದಲೇ ಅಷ್ಟು ಹಣ ಸಂಗ್ರಹಿಸಲು ಯೋಜನೆ ಮಾಡಬಹುದು.***

ಗ್ಯಾಜೆಟ್ ಸಲಹೆ

ವಾದಿರಾಜರ ಪ್ರಶ್ನೆ: ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್‌ನಲ್ಲಿ ಇರುವ ಕೀಲಿಮಣೆ ಬಹಳ ಚೆನ್ನಾಗಿದೆ.  ಕನ್ನಡದಲ್ಲಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಪಠ್ಯವನ್ನು ಊಡಿಸಲು ಬಹಳ ಸುಲಭ. T9 ಅಲ್ಲದೆ ವಾಕ್ಯಗಳ ಸಲಹೆ (predictions) ಸಹ ಇದೆ. ಆದರೆ ಇದು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಲಭ್ಯವಿಲ್ಲ. ಬೇರೆ ಕಂಪೆನಿಗಳ ಮೊಬೈಲ್‌ಗಳಲ್ಲಿ ಇದನ್ನು ಸ್ಥಾಪಿಸುವ ಬಗೆ ಹೇಗೆ? ಬೇರೆ ಎಲ್ಲಿಂದ download ಮಾಡಿಕೊಳ್ಳಬಹುದು ತಿಳಿಸಿ.

ಉ: ಸ್ಯಾಮ್‌ಸಂಗ್‌ನವರ ಕೀಲಿಮಣೆಯನ್ನು ಬೇರೆ ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸ್ವಲ್ಪ ಹತ್ತಿರದ ಕೀಲಿಮಣೆ ವಿನ್ಯಾಸವಿರುವ Indic Keyboard ಅನ್ನು ನೀವು ಗೂಗಲ್‌ ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದನ್ನು ತಯಾರಿಸಿದ್ದು ಸ್ವತಂತ್ರ ಮಲಯಾಳಂ ಕಂಪ್ಯೂಟಿಂಗ್ ಸಂಸ್ಥೆ. ಇದೇ ಹೆಸರಿನಲ್ಲಿ ಗೂಗಲ್‌ ಕೀಲಿಮಣೆಯೂ ಇದೆ. ಅದರ ವಿನ್ಯಾಸ ಬೇರೆ.***

ಗ್ಯಾಜೆಟ್ ತರ್ಲೆ

ನಿಮ್ಮನ್ನು ಯಾರೂ ವಿಚಾರಿಸಿಕೊಳ್ಳುತ್ತಿಲ್ಲವೇ? ನೀವು ಯಾರಿಗೂ ಬೇಡ ಎಂಬ ಭಾವನೆ ಬರುತ್ತಿದೆಯೇ? ಚಿಂತೆ ಬೇಡ. ಎಲ್ಲ ಜಾಲಮಳಿಗೆಗಳಲ್ಲಿ ನಿಮ್ಮ ಹೆಸರು, ಫೋನು, ಇಮೇಲ್ ನೋಂದಾಯಿಸಿ. ನಂತರ ನೋಡಿ. ನೀವು ಯಾಕೆ ನಮ್ಮಲ್ಲಿ ಕಾಣಿಸಿಕೊಂಡಿಲ್ಲ ಎಂದು ಎಲ್ಲರೂ ವಿಚಾರಿಸುತ್ತಿರುತ್ತಾರೆ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.