ಮಂಗಳವಾರ, ಜೂನ್ 22, 2021
28 °C

ಐಟಿಗೆ ಕವಿದ ಕಾರ್ಮೋಡ: ಹೊಸ ಫಸಲಿನ ಭರವಸೆ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಐಟಿಗೆ ಕವಿದ ಕಾರ್ಮೋಡ: ಹೊಸ ಫಸಲಿನ ಭರವಸೆ

ಭಾರತದ ಮಾಧ್ಯಮಗಳಿಗೆ ಐಟಿ ಉದ್ಯಮದ ಬಗ್ಗೆ ಒಂದು ವಿಲಕ್ಷಣ ಕುತೂಹಲವಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಭಾರತೀಯ ಮಧ್ಯಮ ವರ್ಗಕ್ಕೆ ಐಟಿ ಉದ್ಯೋಗದ ಕುರಿತಂತೆ ಇರುವ ಸೆಳೆತ ಇದರಲ್ಲಿ ದೊಡ್ಡ ಪಾತ್ರವಹಿಸಿದೆ. ಈ ಕಾರಣದಿಂದಾಗಿಯೇ ಮಾಧ್ಯಮಗಳಲ್ಲಿ ‘ಅಪಘಾತದಲ್ಲಿ ಟೆಕಿ ಸಾವು’ ಬಗೆಯ ಶೀರ್ಷಿಕೆಗಳು ಕಾಣಿಸಿಕೊಳ್ಳುವುದು. ಬೇರಾವ ಉದ್ಯಮದಲ್ಲಿ ದುಡಿಯುತ್ತಿರುವವರಿಗೂ ಈ ‘ಮನ್ನಣೆ’ ಇಲ್ಲ. ಇದೇ ಕಾರಣದಿಂದ ಭಾರತೀಯ ಐಟಿ ಉದ್ಯಮದ ಬಿಕ್ಕಟ್ಟು ಚಿತ್ರ ವಿಚಿತ್ರ ಬಗೆಯಲ್ಲಿ ಸುದ್ದಿಯಾಗುತ್ತಿದೆ.

ಇತ್ತೀಚೆಗೆ ರಾಷ್ಟ್ರ ಮಟ್ಟದ ದಿನಪತ್ರಿಕೆಯೊಂದು ಮದುವೆ ಮಾರುಕಟ್ಟೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳ ಬೇಡಿಕೆ ಕಡಿಮೆಯಾಗಿರುವುದನ್ನು ವರದಿ ಮಾಡಿತ್ತು. ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ಕೃಷಿ ಕ್ಷೇತ್ರ ಎದುರಿಸಿದ ಬಿಕ್ಕಟ್ಟಿನ ಪರಿಣಾಮ ಸಾವಿರಾರು ರೈತರ ಆತ್ಮಹತ್ಯೆಗಳಲ್ಲಿ ಕಾಣಿಸಿಕೊಂಡಿದ್ದರೂ ರೈತರಿಗಾಗಿ ಆಪ್ತಸಲಹಾ ಕೇಂದ್ರವೊಂದು ಆರಂಭಗೊಂಡಿರಲಿಲ್ಲ. ಆದರೆ ಕೆಲಸ ಕಳೆದುಕೊಳ್ಳುವ ಐಟಿ ಉದ್ಯೋಗಿಗಳನ್ನು ಖಿನ್ನತೆಯಿಂದ ಕಾಪಾಡಲು ಬೇಕಾದ ಆಪ್ತ ಸಲಹಾ ಕೇಂದ್ರಗಳು ಆರಂಭಗೊಂಡಿವೆ. ಈ ಬೆಳವಣಿಗೆಯನ್ನು ಬೇರೆ ಉದ್ಯಮಗಳಿಗೆ ಇಲ್ಲದ್ದು ಐಟಿಗೇಕೆ ಎಂಬ ಅಸಹನೆಯಿಂದ ಕಾಣುವ ಅಗತ್ಯವಿಲ್ಲ. ಆದರೆ ಐಟಿ ಉದ್ಯಮದ ಕುರಿತ ರಮ್ಯ ಕಲ್ಪನೆಗಳಿಂದ ಹೊರಬಂದು ಈಗಿನ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಂತೂ ಇದ್ದೇ ಇದೆ.

ಭಾರತದ ಔದ್ಯಮಿಕ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಈ ಬಗೆಯ ಬಿಕ್ಕಟ್ಟನ್ನು ಅನೇಕ ಉದ್ಯಮಗಳು ವಿವಿಧ ಕಾಲಘಟ್ಟಗಳಲ್ಲಿ ಅನುಭವಿಸಿವೆ. ಸದ್ಯದ ಐಟಿ ಬಿಕ್ಕಟ್ಟನ್ನು ಹೋಲುವಂಥದ್ದೇ ಒಂದು ಬಿಕ್ಕಟ್ಟನ್ನು 18ನೇ ಶತಮಾನದ ಉತ್ತರಾರ್ಧದಲ್ಲಿಯೂ ಭಾರತ ಅನುಭವಿಸಿತ್ತು. ಆಗ ಬಿಕ್ಕಟ್ಟನ್ನು ಎದುರಿಸಿದ್ದ ಭಾರತದ ಹತ್ತಿ ಬಟ್ಟೆಯ ಉದ್ಯಮ. ಅಗ್ಗದ ದರದಲ್ಲಿ ಗುಣಮಟ್ಟದ ಉತ್ಪನ್ನ ಲಭ್ಯವಿದೆ ಎಂಬ ಕಾರಣಕ್ಕಾಗಿಯೇ ಹತ್ತಿ ಬಟ್ಟೆಯ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ಇನ್ನೂ ಅಗ್ಗದ ಬಟ್ಟೆ ದೊರೆಯಲು ಆರಂಭಿಸಿದಾಗ ಕುಸಿಯಿತು. ಅಂದು ಕಳೆದುಕೊಂಡದ್ದನ್ನು ಭಾರತ ಈ ತನಕ ಪಡೆಯಲೇ ಇಲ್ಲ.

ಭಾರತಕ್ಕೆ ವ್ಯಾಪಾರಕ್ಕೆಂದು ಬಂದಿದ್ದ ಈಸ್ಟ್ ಇಂಡಿಯಾ ಕಂಪೆನಿ ಇಲ್ಲಿಂದ ಸಾಗಿಸುತ್ತಿದ್ದ ಸಂಬಾರ ಪದಾರ್ಥಗಳ ಜೊತೆಗೆ ಇದ್ದ ಮತ್ತೊಂದು ಮುಖ್ಯ ವಸ್ತು ಹತ್ತಿ ಬಟ್ಟೆ. ಅದರ ಗುಣಮಟ್ಟ ಮತ್ತು ವಿನ್ಯಾಸಗಳೆರಡೂ ಇಂಗ್ಲೆಂಡ್‌ನಲ್ಲಿ ಜನಪ್ರಿಯವಾಗಿದ್ದವು. ಮೊದಲ ಮಹಾಯುದ್ಧದ ಕಾಲದಲ್ಲಿ ಯೂರೋಪಿನ ಇತರೆಡೆಗಳಿಂದ ಇಂಗ್ಲೆಂಡಿಗೆ ವಲಸೆ ಬಂದಿದ್ದವರ ಮೂಲಕ ಇಂಗ್ಲೆಂಡಿನಲ್ಲಿಯೂ ಜವಳಿ ಉದ್ಯಮ ಆರಂಭವಾಗಿತ್ತು. ಆದರೆ ಅದರ ಉತ್ಪನ್ನಗಳು ಬೆಲೆ, ಗುಣಮಟ್ಟ ಅಥವಾ ವಿನ್ಯಾಸಗಳಲ್ಲಿ ಭಾರತದಲ್ಲಿ ತಯಾರಾದ ಬಟ್ಟೆಯ ಜೊತೆಗೆ ಸ್ಪರ್ಧಿಸುವಂತೆ ಇರಲಿಲ್ಲ.

ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಬಟ್ಟೆಯನ್ನು ಹೇಗೆ ಖರೀದಿಸುತ್ತಿತ್ತು ಎಂಬುದಕ್ಕೆ ಸಂಬಂಧಿಸಿದ ವಿವರಗಳು ರಮೇಶ್ ಚಂದ್ರ ದತ್ತ ಅವರು ಬರೆದಿರುವ ‘ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ’ದಲ್ಲಿವೆ. 1901ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ನಡೆಸಿದ ಕ್ರೌರ್ಯದ ವಿವರಗಳಿವೆ. ನೇಕಾರರ ಹಳ್ಳಿಗಳಿಗೆ ಹೋಗುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿಯ ತಂಡ ಬಟ್ಟೆಗೆ ಒಂದು ಬೆಲೆ ನಿಗದಿಪಡಿಸಿ ಖರೀದಿಸಲು ಮುಂದಾಗುತ್ತಿತ್ತು. ಆ ಬೆಲೆಗೆ ಮಾರಲು ಸಾಧ್ಯವಿಲ್ಲ ಎಂದ ನೇಕಾರರಿಗೆ ಛಡಿ ಏಟು ಬೀಳುತ್ತಿತ್ತು. ಬಂಗಾಳದ ಮಸ್ಲಿನ್ ಬಟ್ಟೆ ನೇಕಾರರು ತಮ್ಮ ಕಸುಬಿಗೆ ಅತ್ಯಂತ ಅಗತ್ಯವಾಗಿದ್ದ ಹೆಬ್ಬೆರಳನ್ನೇ ಕತ್ತರಿಸಿ ನೇಕಾರಿಕೆಯಿಂದಲೇ ದೂರ ಉಳಿದು ಪ್ರತಿಭಟಿಸಿದ ಘಟನೆಯನ್ನು ಲೇಖಕರು ವಿವರಿಸುತ್ತಾರೆ. ಈ ವಿವರಗಳನ್ನು ಅವರು ಸಂಗ್ರಹಿಸಿರುವುದು ವಿಕ್ಟೋರಿಯಾ ರಾಣಿಯ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ಕ್ರೌರ್ಯಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯ ವೇಳೆ ಕಂಪೆನಿಯ ನೌಕರರು ನೀಡಿದ ಹೇಳಿಕೆಗಳಲ್ಲಿ.

ಈ ಬಗೆಯ ಕ್ರೌರ್ಯ ಮತ್ತಿತರ ತಂತ್ರಗಳ ಮೂಲಕ ಅಗ್ಗದ ದರದಲ್ಲಿ ಇಂಗ್ಲೆಂಡಿಗೆ ಬಟ್ಟೆ ಸಾಗಿಸುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿ ಮುಂದೆ ಇಂಗ್ಲೆಂಡಿನಿಂದಲೇ ಭಾರತಕ್ಕೆ ಬಟ್ಟೆ ತರಲಾರಂಭಿಸಿದ್ದು ಮತ್ತೊಂದು ಕಥೆ. ಕೈಗಾರಿಕಾ ಕ್ರಾಂತಿಯ ಕಾಲಘಟ್ಟದಲ್ಲಿ ನಡೆದ ಯಾಂತ್ರಿಕ ಆವಿಷ್ಕಾರಗಳು ಇಂಗ್ಲೆಂಡಿನಲ್ಲಿ ಹತ್ತಿ ಬಟ್ಟೆ ತಯಾರಿಕೆಯ ಹೊಸ ಯುಗವನ್ನೇ ಆರಂಭಿಸಿಬಿಟ್ಟವು. ಈಸ್ಟ್ ಇಂಡಿಯಾ ಕಂಪೆನಿಯ ಕ್ರೌರ್ಯವನ್ನೂ  ಕಡಿಮೆ ಕೂಲಿಗೆ ದುಡಿಯಬಲ್ಲ ಭಾರತದ ನೇಕಾರರನ್ನೂ ಯಂತ್ರಗಳು ಸೋಲಿಸಿಬಿಟ್ಟವು. ವಿಶ್ವ ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಾದ ಬಟ್ಟೆಗೆ ಇದ್ದ ಪ್ರಾಮುಖ್ಯ ಇಲ್ಲವಾಯಿತು.

ಭಾರತದ ಐಟಿ ಸೇವಾ ಉದ್ಯಮದ ಉಬ್ಬರ ಮತ್ತು ಈಗಿನ ಇಳಿತಗಳೆರಡೂ ಈಸ್ಟ್ ಕಂಪೆನಿಯ ಕಾಲಘಟ್ಟದ ಭಾರತೀಯ ಬಟ್ಟೆ ಉದ್ಯಮವನ್ನೇ ಹೋಲುತ್ತಿವೆ. ಒಂದು ಕಾಲದಲ್ಲಿ ಕಡಿಮೆ ಸಂಬಳಕ್ಕೆ ದೊರೆಯುತ್ತಿದ್ದ ಎಂಜಿನಿಯರುಗಳು ಮಾಡುತ್ತಿದ್ದ ಕೆಲಸವನ್ನು ಮಾಡಲು ಈಗ ತಂತ್ರಾಂಶಗಳಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಗಳಿಗೆ ಇಂಥದ್ದೊಂದು ಸ್ಥಿತಿಯ ಮುನ್ಸೂಚನೆಗಳಿರಲಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಭಾರತದಲ್ಲಿ ದೊರೆಯುತ್ತಿದ್ದ ಅಗ್ಗದ ಎಂಜಿನಿಯರಿಂಗ್ ಕೌಶಲವನ್ನು ಬಳಸಿಕೊಳ್ಳಲು ತೋರಿದ ಜಾಣ್ಮೆಗೆ ನಮ್ಮ ಐಟಿ ಉದ್ಯಮಿಗಳ ಸೃಜನಶೀಲತೆ ಮುಗಿದದ್ದು ಈಗಿನ ಸಮಸ್ಯೆಯ ಮೂಲ.

ಐಟಿ ಉದ್ಯಮ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಅದರ ಸುತ್ತ ಇರುವ ಇತರ ಸಮಸ್ಯೆಗಳೂ ಚರ್ಚೆಯಾಗುತ್ತಿವೆ. ವಸಾಹತು ಕಾಲದ ಬಟ್ಟೆಯ ಉದ್ಯಮದ ಬಿಕ್ಕಟ್ಟಿನ ಕುರಿತೂ ಇಂಥದ್ದೇ ಚರ್ಚೆಗಳು ನಡೆದಿದ್ದವು. ವಿಕ್ಟೋರಿಯಾ ರಾಣಿಯ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ಕ್ರೌರ್ಯದ ಬಗೆಗಿನ ತನಿಖೆಯ ವರದಿ ಇಂಗ್ಲೆಂಡಿನ ಸಂಸತ್ತಿನಲ್ಲಿ ಮಂಡನೆಯಾದಾಗ ಅಂದಿನ ಕೆಲವು ‘ಸಜ್ಜನ ಸಂಸದ’ರು ಈಸ್ಟ್ ಇಂಡಿಯಾ ಕಂಪೆನಿಯ ಕ್ರೌರ್ಯದ ಬಗ್ಗೆ ಮಾತನಾಡಿದ್ದರು. ಆದರೆ ದೇಶವೊಂದನ್ನು ವಸಾಹತನ್ನಾಗಿಸಿಕೊಂಡ ಕ್ರೌರ್ಯದ ಬಗ್ಗೆ ಮೌನವಾಗಿದ್ದರು. ಈಗ ನಮ್ಮಲ್ಲಿ ಐಟಿ ಬಿಕ್ಕಟ್ಟಿನ ಕುರಿತು ನಡೆಯುತ್ತಿರುವ ಚರ್ಚೆಯೂ ಹಾಗೆಯೇ ಇದೆ. ಅಗ್ಗದ ದರದ ಸೇವೆಯನ್ನು ಒದಗಿಸುವುದಕ್ಕೆ ಬೇಕಿರುವ ಸವಲತ್ತುಗಳನ್ನು ಕಲ್ಪಿಸುವಲ್ಲಿ ನಮ್ಮ ನೀತಿ ನಿರೂಪಕರಿಗಿದ್ದ ಉತ್ಸಾಹ ಈ ಉದ್ಯಮವನ್ನು ಸೃಜನಶೀಲವಾಗಿ ಮತ್ತು ಸುಸ್ಥಿರವಾಗಿ ಬೆಳೆಸುವುದಕ್ಕೆ ಇರಲಿಲ್ಲ.

ಅಡಿಕೆಗೆ ಬೆಲೆ ಬಂತು ಎಂದು ಬಯಲು ಸೀಮೆಯ ರೈತರು ಅಡಿಕೆ ಬೆಳೆಯಲು ಹೊರಟಂತೆ ಮಧ್ಯಮ ವರ್ಗದ ಮಂದಿ ತಮ್ಮ ಮಕ್ಕಳನ್ನು ಎಂಜಿನಿಯರಿಂಗ್ ಕಾಲೇಜುಗಳಿಗೆ ಸೇರಿಸಲು ಹೊರಟರು. ಈ ಆಸೆಯನ್ನೇ ಬಂಡವಾಳವಾಗಿಸಿಕೊಂಡು ನಾಯಿಕೊಡೆಗಳಂತೆ ಎಂಜಿನಿಯರಿಂಗ್ ಕಾಲೇಜುಗಳು ಹುಟ್ಟಿಕೊಂಡವು. ಇವುಗಳಿಗೆ ಅನುಮತಿಯನ್ನು ಕೊಟ್ಟ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ವಿಶ್ವವಿದ್ಯಾಲಯಗಳು ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಕಾಯುವ ತಮ್ಮ ಜವಾಬ್ದಾರಿಯನ್ನೇ ಮರೆತುಬಿಟ್ಟವು. ಐಟಿ ಉದ್ಯಮದ ಪ್ರಮುಖರೂ ಈ ಸಮಸ್ಯೆ ಬಗ್ಗೆ ಬಹುಕಾಲ ಮಾತನಾಡಿರಲಿಲ್ಲ. ಯಾವ ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಸರಿ ನಮ್ಮ ಕೆಲಸಕ್ಕೆ ಬೇಕಾದಂತೆ ನಾವೇ ರೂಪಿಸಿಕೊಳ್ಳುತ್ತೇವೆ ಎಂಬ ಅಹಂ ಅವರಲ್ಲಿತ್ತು. ಇವರ ವರ್ತನೆ ಒಂದು ಬಗೆಯಲ್ಲಿ 18ನೇ ಶತಮಾನದ ಉತ್ತರಾರ್ಧದ ಈಸ್ಟ್ ಇಂಡಿಯಾ ಕಂಪೆನಿಯ ನೀತಿಗಳನ್ನೇ ಹೋಲುತ್ತಿತ್ತು. ಭಾರತದಲ್ಲಿ ಅಗ್ಗಕ್ಕೆ ದೊರೆಯುವುದನ್ನು ರಫ್ತು ಮಾಡಿ ಲಾಭಗಳಿಸುವ ವ್ಯಾಪಾರೀ ತಂತ್ರ. ಇನ್ನು ನಮ್ಮ ನೀತಿ ನಿರೂಪಕರದ್ದು ‘ಅಭಿವೃದ್ಧಿ ಮಾರ್ಗ’. ಹಾಗಾಗಿ ಅವರಿಗೆ ಐಟಿ ಉದ್ಯಮಕ್ಕೆ ತೆರಿಗೆ ರಜೆಗಳನ್ನು ಕೊಡುವ ನೀತಿಯಲ್ಲಿ ಇದ್ದ ಆಸಕ್ತಿ ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟದ ಬಗ್ಗೆ ಇರಲಿಲ್ಲ.

ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ಎಂಬುದು ಉದ್ಯೋಗ ವಿನಿಮಯ ಕೇಂದ್ರದಂತಾಯಿತು. ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳೂ ಕೂಡಾ ತಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಕ್ಯಾಂಪಸ್ ನೇಮಕಾತಿಯಲ್ಲಿ ಅವರನ್ನು ಯಾವ ಕಂಪೆನಿ ಆರಿಸಿಕೊಂಡಿತು ಎಂಬುದರ ಮೂಲಕ ಅಳೆಯ ತೊಡಗಿದವು. ಮಾಧ್ಯಮಗಳಂತೂ ವಿದ್ಯಾರ್ಥಿಗಳ ಹೊಸ ಆವಿಷ್ಕಾರದ ಬಗ್ಗೆ ವಿವರಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ದೊರೆಯಲಿರುವ ಸಂಭಾವ್ಯ ಸಂಬಳದ ಬಗ್ಗೆ ಹೇಳಿದವು. ಈಗ ಭಾರತದ ಐಟಿ ಕ್ಷೇತ್ರದ ಉದ್ಯೋಗಿಗಳು ಹೊಸ ಸವಾಲನ್ನು ಎದುರಿಸಲಾಗದೆ ಆತ್ಮಹತ್ಯೆಯ ಕುರಿತು ಆಲೋಚಿಸುವಂತಾಗಿರುವುದರಲ್ಲಿ ಈ ಎಲ್ಲವೂ ಇವೆ.

ಇತಿಹಾಸದಿಂದ ಕಲಿಯಬೇಕು ಎಂಬ ಮಾತುಗಳನ್ನು ಹೇಳುವಾಗಲೆಲ್ಲಾ ನಾವು ರಾಜಕೀಯ ಇತಿಹಾಸವನ್ನೇ ಗಮನದಲ್ಲಿ ಇಟ್ಟುಕೊಂಡಿರುತ್ತೇವೆ. ಔದ್ಯಮಿಕ ಇತಿಹಾಸದಲ್ಲಿಯೂ ನಮಗೆ ಪಾಠಗಳಿರಬಹುದು ಎಂದು ನಾವು ಭಾವಿಸುವುದೇ ಇಲ್ಲ. ಈಸ್ಟ್ ಇಂಡಿಯಾ ಕಂಪೆನಿಯ ಆಮದಿನ ಹೊಡೆತಕ್ಕೆ ನಲುಗಿಹೋಗಿದ್ದ ಬಟ್ಟೆ ಉದ್ಯಮವನ್ನು ಗಾಂಧಿ ಒಂದು ಸಂಕೇತವಾಗಿ ಬಳಸಿಕೊಂಡು ಸ್ವಾತಂತ್ರ್ಯ ಚಳವಳಿಯನ್ನೇ ಕಟ್ಟಿದರು ಎಂಬುದು ನಮಗೆ ನೆನಪಾಗಬೇಕಾಗಿದೆ. ಗಾಂಧೀಜಿ ಚರಕಕ್ಕೆ ಮರುಜೀವ ನೀಡಲು ಹೊರಟಾಗ ಅವರಿಗೊಂದು ಚರಕವೂ ಲಭ್ಯವಿರಲಿಲ್ಲವಂತೆ. ಅದನ್ನವರು ಹುಡುಕಿ ತಂದು ಅದಕ್ಕೆ ಜೀವ ನೀಡಿದ್ದು ಚರಕವನ್ನು ಪುನರಾವಿಷ್ಕರಿಸಿದಷ್ಟೇ ದೊಡ್ಡ ಕೆಲಸವಾಗಿತ್ತು. ಈ ಸೃಜನಶೀಲ ಕ್ರಿಯೆಯ ಮೂಲಕ ಗಾಂಧೀಜಿ ಭಾರತವೇಕೆ ವಸಾಹತು ಶಾಹಿಯಿಂದ ಬಿಡುಗಡೆ ಪಡೆಯಬೇಕೆಂಬುದನ್ನು ಜನಸಾಮಾನ್ಯರಿಗೂ ವಿವರಿಸಿದರು.

ಈಗ ಎದುರಾಗಿರುವ ಐಟಿ ಕ್ಷೇತ್ರದ ಬಿಕ್ಕಟ್ಟನ್ನು ಒಂದು ಸವಾಲು ಎಂದು ಭಾವಿಸುವುದರ ಬದಲಿಗೆ ಸಾಧ್ಯತೆ ಎಂದು ಪರಿಗಣಿಸುವ ಅಗತ್ಯವಿದೆ. ಅತ್ಯಂತ ಪ್ರತಿಭಾವಂತ ಮನಸ್ಸುಗಳನ್ನು ಅಗ್ಗದ ಸಂಬಳಕ್ಕೆ ಲಭ್ಯರಿರುವ ಎಂಜಿನಿಯರುಗಳನ್ನಾಗಿ ಬದಲಾಯಿಸುತ್ತಿದ್ದ ವ್ಯವಸ್ಥೆಯೊಂದು ಕುಸಿಯುವ ಅಗತ್ಯವಿತ್ತು. ಅದು ಈ ಮೂಲಕ ಸಂಭವಿಸಿದೆ ಎಂದು ಭಾವಿಸಿ ಮುಂದುವರಿದರೆ ಹೊಸ ಸಾಧ್ಯತೆಗಳು ಗೋಚರವಾಗುತ್ತವೆ. ಅಷ್ಟೇ ಅಲ್ಲ ಔದ್ಯಮಿಕ ಸೃಜನಶೀಲತೆಯನ್ನು ಉದ್ದೀಪಿಸುವ ಹೊಸ ತಲೆಮಾರೊಂದರ ಸೃಷ್ಟಿಗೂ ಇದು ಅವಕಾಶ ಕಲ್ಪಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.