5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಐಪಿಎಲ್‌ ಎಂಬ ‘ಕಳ್ಳಬಟ್ಟಿ ’ !

ರಾಮಚಂದ್ರ ಗುಹಾ
Published:
Updated:
ಐಪಿಎಲ್‌ ಎಂಬ ‘ಕಳ್ಳಬಟ್ಟಿ ’ !

ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2008ರಲ್ಲಿ ಶುರುವಾದಾಗ, ಅದನ್ನು ಹೀಗಳೆದು ನಾನು ಅಂಕಣ ಬರೆದಿದ್ದೆ. ಟೆಸ್ಟ್‌ ಕ್ರಿಕೆಟ್ಟನ್ನು ಸಿಂಗಲ್‌ ಮಾಲ್ಟ್‌ ವಿಸ್ಕಿಗೆ ಹೋಲಿಸಿ, ಏಕದಿನ ಕ್ರಿಕೆಟ್‌ ಪಂದ್ಯವನ್ನು ದೇಸಿ ಮದ್ಯದಂತೆ ಎಂದು ಬರೆದಿದ್ದ ನಾನು, ಐಪಿಎಲ್‌ ಕ್ರಿಕೆಟ್ಟನ್ನು ಕಳ್ಳಬಟ್ಟಿ ಸಾರಾಯಿಯಂತೆ ಎಂದು ಕರೆದಿದ್ದೆ. ಮಾಲ್ಟ್‌ ವಿಸ್ಕಿಯ ಹದವಾದ ರುಚಿಯನ್ನು ಗುಟುಕರಿಸುತ್ತೇವಲ್ಲ, ಹಾಗೆಯೇ ಟೆಸ್ಟ್‌ ಪಂದ್ಯದ ಪ್ರತಿ ಗುಟುಕೂ ಸವಿಯಾದದ್ದು. ಸುದೀರ್ಘ ಇನಿಂಗ್ಸ್‌ನಲ್ಲಿ ಹೊಮ್ಮುವ ಅದ್ಭುತವಾದ ಹೊಡೆತಗಳು, ವಿಕೆಟ್‌ ಬೀಳುವ ಪರಿ, ಹಿಡಿಯುವ ಕಷ್ಟವಾದ ಕ್ಯಾಚ್‌ಗಳು ಎಲ್ಲವೂ ಸ್ಮೃತಿಪಟಲದಲ್ಲಿ ದಾಖಲಾಗುತ್ತವೆ. ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ರೋಚಕ ತಿರುವುಗಳಾದರೂ ನೆನಪಿನಲ್ಲಿ ಉಳಿಯುತ್ತವೆ. ಆದರೆ ‘ಟ್ವೆಂಟಿ–20’ಯಲ್ಲಿ ‘ಹೊಡಿ ಬಡಿ’ ಎನ್ನುವುದು ಬಿಟ್ಟರೆ ಬೇರೆ ಏನೂ ನೆನಪಿನಲ್ಲಿ ಉಳಿಯುವುದಿಲ್ಲ.ನಾನು ಆಗ ಬರೆದಿದ್ದ ಅಂಕಣವನ್ನು ಕ್ರೀಡಾ ಆರ್ಥಿಕ ತಜ್ಞ ಸ್ಟೀಫನ್‌ ಜಿಂಗ್‌ಮಾನ್‌ಸ್ಕಿ ಓದಿದ್ದರು. ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ನಿಗದಿಗೆ ಸಲಹೆ ನೀಡಲು ಭಾರತಕ್ಕೆ ಬಂದಿದ್ದ ಅವರು ಬೆಂಗಳೂರಿಗೂ ಭೇಟಿ ಕೊಟ್ಟಿದ್ದರು. ಆಗ ಚುಟುಕು ಕ್ರಿಕೆಟ್‌ನ ರೋಚಕ ಅಂಶಗಳನ್ನು ನನಗೆ ಮನದಟ್ಟು ಮಾಡಿಸಲು ಯತ್ನಿಸಿದ್ದರಾದರೂ, ನಾನು ಅದರಿಂದ ಪ್ರಭಾವಿತ ಆಗಲಿಲ್ಲ. ಅವರು ತಮ್ಮ ಬ್ಯಾಗ್‌ನಿಂದ ನನಗೊಂದು ಉಡುಗೊರೆ ತೆಗೆದು ಕೊಟ್ಟರು. ಅಮೆರಿಕದಿಂದ ತಂದಿದ್ದ ಅಪರೂಪದ ಸ್ಕಾಚ್‌ ವಿಸ್ಕಿ ಅದು. ಅದೂ ಟೆಸ್ಟ್‌ ಪಂದ್ಯಗಳಂತೆ; ನನ್ನ ಪಾಲಿಗೆ ಒಳ್ಳೆಯ ಉಡುಗೊರೆ.ಟ್ವೆಂಟಿ–20 ಕ್ರಿಕೆಟ್‌ ಪಂದ್ಯವನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಲೇ ಇದ್ದೇನೆ. ‘ಕ್ರಿಕೆಟಿಂಗ್‌’ ದೃಷ್ಟಿಯಿಂದ ನನಗೆ ಅದು ಹಿಡಿಸುವುದಿಲ್ಲ. ಕ್ರಮೇಣ ಈ ಪ್ರಕಾರದ ಕ್ರಿಕೆಟ್ಟನ್ನು ರಾಜಕೀಯ ದೃಷ್ಟಿಕೋನದಿಂದ ಗಮನಿಸಿ, ವಿಶ್ಲೇಷಿಸಲು ಆರಂಭಿಸಿದೆ. ಭಾರತದ ಜನಪ್ರಿಯ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶಕ್ಕೆ ಹೇಳಿಕೊಳ್ಳಲು ಒಂದೇ ಒಂದು ಐಪಿಎಲ್‌ ತಂಡವಿಲ್ಲ. ಮಹಾರಾಷ್ಟ್ರಕ್ಕೆ ಎರಡು ತಂಡಗಳಿವೆ. ಭಾರತದ ಶ್ರೀಮಂತ ಪ್ರದೇಶಗಳಿಗೇ ಈ ಕ್ರಿಕೆಟ್‌ ಮೀಸಲು ಎಂಬ ಧೋರಣೆಗೆ ಇದು ಕನ್ನಡಿ ಹಿಡಿಯುತ್ತದೆ. ಆರ್ಥಿಕ ಬದಲಾವಣೆಯ ಲಾಭ ಪಡೆದ ಜಿಲ್ಲೆಗಳು, ನಗರಗಳಿಗೆ ಐಪಿಎಲ್‌ ಸೀಮಿತವಾಗಿರುವುದು ಸ್ಪಷ್ಟ.ಫ್ರಾಂಚೈಸ್‌ಗಳು ಭಾಗಿಯಾಗುವ ಆಟಗಾರರ ಹರಾಜು, ಬಿಸಿಸಿಐ (ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಇಷ್ಟದಂತೆ ಗುಟ್ಟುಗುಟ್ಟಾಗಿ ನಡೆಯುತ್ತದೆ. ಉದ್ಯಮಶೀಲತೆ ಹಾಗೂ ನಿರ್ವಹಣೆ ಕೌಶಲದಿಂದ ಹೆಸರು ಮಾಡಿರುವ ಟಾಟಾ, ಇನ್ಫೊಸಿಸ್, ಮಹೀಂದ್ರ ಮೊದಲಾದ ಕಂಪೆನಿಗಳು ಐಪಿಎಲ್‌ನಿಂದ ದೂರವೇ ಉಳಿದಿವೆ.ಇನ್ನೊಂದು ಕಡೆ, ರಾಜಕಾರಣಿಗಳನ್ನು ರೂಪಿಸುವಂಥ, ತಮ್ಮಿಷ್ಟದ ಯೋಜನೆಗಳ ಒಪ್ಪಂದಕ್ಕೆ ಅನುಮತಿ ಪಡೆಯುವಂಥ ಚಾಣಾಕ್ಷ  ಸಂಸ್ಥೆಗಳು ತಂಡಗಳ ಒಡೆತನ ಪಡೆದು ಬೀಗುತ್ತಿವೆ. ಅಂಥ ಸಂಸ್ಥೆಗಳ ಮಾಲೀಕರಲ್ಲಿ ಒಬ್ಬ ಏರ್‌ಲೈನ್ಸ್ ಸಂಸ್ಥೆ ಪ್ರಾರಂಭಿಸಿ, ನೌಕರರಿಗೆ ತಿಂಗಳುಗಟ್ಟಲೆ ಸಂಬಳ ಕೊಡದೆ ಸತಾಯಿಸಿದ. ಏಕಕಾಲದಲ್ಲಿ ಕ್ರಿಕೆಟಿಗರನ್ನು, ತನಗಿಷ್ಟ ಬಂದ ಹಡಗನ್ನು, ಬಂಗಲೆಗಳನ್ನು ಕೊಂಡುಕೊಂಡ ಪುರುಷೋತ್ತಮನೂ ಅವನೇ. ಅಕ್ರಮ ವ್ಯವಹಾರಗಳ ಹಲವು ಕಂಪೆನಿಗಳನ್ನು ಕಟ್ಟಿದ ಇನ್ನೊಬ್ಬನಿಗೂ ಐಪಿಎಲ್ ತಂಡದ ಮಾಲೀಕತ್ವದ ಸುಖ. ಉತ್ತರ ಭಾರತದ ಅತಿ ಭ್ರಷ್ಟ ರಾಜಕಾರಣಿಯೊಬ್ಬನ ಥೈಲಿ (ಬ್ಯಾಗ್ ಮ್ಯಾನ್) ಇವನೆಂದೇ ಅನೇಕರು ಬಣ್ಣಿಸುತ್ತಾರೆ.ಸ್ವಜನ ಪಕ್ಷಪಾತ ಹಾಗೂ ಘೋರ ಅವಿವೇಕಕ್ಕೆ ಉದಾಹರಣೆ ಬಿಸಿಸಿಐನ ಈಗಿನ ಅಧ್ಯಕ್ಷರೇ (ಮಾಜಿ ಕಾರ್ಯದರ್ಶಿ) ಒಂದು ತಂಡದ ಪರೋಕ್ಷ ಮಾಲೀಕರಾದದ್ದು. ಅಲೆಕ್ಸ್ ಫರ್ಗ್ಯೂಸನ್ ಏಕಕಾಲದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕ ಹಾಗೂ ಇಂಗ್ಲಿಷ್ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿದ್ದರಲ್ಲ; ಇದೂ ಹಾಗೆಯೇ. ಸ್ವಜನಪಕ್ಷಪಾತ ಇಷ್ಟಕ್ಕೇ ನಿಲ್ಲುವುದಿಲ್ಲ. ಟೆಲಿವಿಷನ್ ವೀಕ್ಷಕ ವಿವರಣೆಗಾರರನ್ನೂ ಬಿಸಿಸಿಐ ಆಯ್ಕೆ ಮಾಡುತ್ತದೆ. ಯಾರು ತನ್ನ ಮೂಗಿನ ನೇರಕ್ಕೇ ವರ್ತಿಸುತ್ತಾರೋ ಅಂಥವರಿಗೇ ಅದು ಮಣೆ ಹಾಕುತ್ತದೆ. ಸ್ವತಂತ್ರ ಮನಸ್ಥಿತಿ ಇರುವವರನ್ನು ದೂರ ಇಡುತ್ತದೆ.ಐಪಿಎಲ್‌ಗೆ ನನ್ನಂಥ ಮುದಿಗೊಡ್ಡುಗಳು ಬೇಕಾಗಿಲ್ಲ. ಮಧ್ಯಮವರ್ಗದ ಅನೇಕ ಉದಯೋನ್ಮುಖ ಸದಸ್ಯರು ಅದರ ಜೊತೆ ಕೊಂಡಿ ಬೆಸೆದುಕೊಂಡಿದ್ದಾರೆ. ಹೊಸ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸುದೀರ್ಘ ಅವಧಿ ಕೆಲಸ ಮಾಡುವ ಯುವಕರಿಗೂ ಅದು ಇಷ್ಟವಾಗಿದೆ. ಟೆಸ್ಟ್ ಪಂದ್ಯ ನೋಡಲು ಅವರಿಗೆ ಕಾಲಾವಕಾಶ ಇಲ್ಲ. ಐದು ದಿನ ರಜಾ ತೆಗೆದುಕೊಂಡು ಕ್ರಿಕೆಟ್ ನೋಡುವ ಆಸಕ್ತಿಯೂ ಅವರಿಗಿಲ್ಲ. ಏಕದಿನ ಕ್ರಿಕೆಟ್ ಪಂದ್ಯ ‘ವರ್ಕಿಂಗ್ ಡೇ’ ನಡೆದರೆ ಅದನ್ನು ನೋಡುವುದೂ ಅವರಿಗೆ ಕಷ್ಟ. ಆದರೆ  ಅಂಥ ಮನಸ್ಥಿತಿಯವರಿಗೆ ಐಪಿಎಲ್‌ ಹೇಳಿ ಮಾಡಿಸಿದ ಕ್ರಿಕೆಟ್. ಸಂಜೆ ಏಳು ಗಂಟೆಯ ನಂತರ ಅದು ಶುರುವಾಗುತ್ತದೆ. ಮಧ್ಯರಾತ್ರಿಗೆ ಮೊದಲೇ ಮುಗಿಯುತ್ತದೆ. ಒಂದೆರಡು ಪೆಗ್ ಮದ್ಯ ಹೀರುತ್ತಾ, ಮನೆಯಲ್ಲೇ ಟಿ.ವಿ. ಎದುರು ಕುಳಿತು ಈ ಕ್ರಿಕೆಟ್ ನೋಡಬಹುದು ಅಥವಾ ಕ್ರೀಡಾಂಗಣಕ್ಕೆ ಸಂಸಾರ ಸಮೇತರಾಗಿಯೋ, ಸ್ನೇಹಿತರ ಜೊತೆಗೋ ಹೋಗಿ ಅಲ್ಲಿಯೂ ಕುಡಿಯುತ್ತಾ, ಮಜಾ ಅನುಭವಿಸುತ್ತಾ ಕ್ರಿಕೆಟ್ ಕಣ್ತುಂಬಿಕೊಳ್ಳಬಹುದು.ಗ್ಲ್ಯಾಮರ್ ಲೋಕದ ಜೊತೆಗೆ ಸಂಬಂಧ ಇರುವುದರಿಂದಲೂ ಐಪಿಎಲ್ ಆಕರ್ಷಕವಾಗಿ ಕಾಣುತ್ತಿದೆ. ಕೋಲ್ಕತ್ತ ತಂಡದ ಮಾಲೀಕ ಭಾರತದ ಅತಿ ಹೆಚ್ಚು ಜನಪ್ರಿಯ ನಾಯಕ ನಟನಾದ ಶಾರುಖ್ ಖಾನ್. ಜೈಪುರ ಹಾಗೂ ಮೊಹಾಲಿ ಮೂಲದ ಎರಡು ತಂಡಗಳ ಮಾಲೀಕತ್ವದ ಪಾಲುದಾರರಲ್ಲಿ ಕ್ರಮವಾಗಿ ಇಬ್ಬರು ನಟಿಯರಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕ ಅತ್ಯಾಡಂಬರ ವ್ಯಕ್ತಿತ್ವದ, ಮದ್ಯದ ದೊರೆ ವಿಜಯ್ ಮಲ್ಯ. ಮುಂಬೈ ಇಂಡಿಯನ್ಸ್ ತಂಡದ ಒಡೆಯ ಭಾರತದ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ. ಅವರ ಪತ್ನಿ ನೀತಾ ಡಗ್‌ಔಟ್‌ನಲ್ಲಿ ಕುಳಿತು ತಮ್ಮ ತಂಡದ ಆಟಗಾರರನ್ನು ಸದಾ ಹುರಿದುಂಬಿಸುತ್ತಾ ಇರುತ್ತಾರೆ. ಕ್ರಿಕೆಟ್ ನೋಡುವ ಆಸೆಯ ಜೊತೆಗೆ ಇಂಥ ಧನವಂತರನ್ನು, ಸಿನಿಮಾ ಸ್ಟಾರ್‌ಗಳನ್ನು ನೋಡಲು ಜನ ಕ್ರೀಡಾಂಗಣಕ್ಕೆ ಧಾವಿಸುತ್ತಾರೆ. ಪಂದ್ಯಗಳು ಮುಗಿದ ಮೇಲೆ ನಡುರಾತ್ರಿ ಮೀರಿದ ಹೊತ್ತಿನಲ್ಲೂ ಪಾರ್ಟಿಗಳು ನಡೆಯುತ್ತವೆ. ಅವುಗಳ ಸಣ್ಣ ಸಣ್ಣ ವಿವರಗಳನ್ನು ಟ್ಯಾಬ್ಲಾಯ್ಡ್‌ಗಳು ಅನೂಚಾನವಾಗಿ ವರದಿ ಮಾಡುತ್ತಿರುತ್ತವೆ.ಈ ವಾರ ಐಪಿಎಲ್‌ನ ಏಳನೇ ಆವೃತ್ತಿಯ ಪಂದ್ಯಗಳು ಪ್ರಾರಂಭವಾದವು. ಕಳೆದ ವರ್ಷಗಳಲ್ಲಿ ಟೂರ್ನಿ ಕ್ರಿಕೆಟೇತರ ಕಾರಣಗಳಿಂದ ಸುದ್ದಿ ಮಾಡಿದ್ದೇ ಹೆಚ್ಚು. ವಿಕಿಪೀಡಿಯಾದಲ್ಲಿ ‘Controversies involving the Indian premier league’ ಎಂದು ಟೈಪಿಸಿದರೆ ಲಿಂಕ್‌ಗಳ ಉದ್ದಪಟ್ಟಿ ಮೂಡುತ್ತದೆ.ಭಾರತ ಸರ್ಕಾರಕ್ಕೆ ತೆರಿಗೆ ಬಾಕಿ ಉಳಿಸಿ ತೊಂದರೆ ಮಾಡಿಕೊಂಡದ್ದು, ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ತಮಗೆ ಅನುಕೂಲವಾಗುವಂತೆ ಮಾತ್ರ ಬರೆಯಬೇಕೆಂದು ತಾಕೀತು ಮಾಡಿದ ಪ್ರಸಂಗ, ಮೊದಲ ಮೂರು ವರ್ಷ ಐಪಿಎಲ್ ಉಸ್ತುವಾರಿ ವಹಿಸಿ ಆಮೇಲೆ ಬಿಸಿಸಿಐನ ಸಹೋದ್ಯೋಗಿಗಳಿಂದಲೇ ಲಲಿತ್ ಮೋದಿ ಹೊರ ದಬ್ಬಿಸಿಕೊಂಡದ್ದು, ಕ್ರಿಕೆಟ್ ಮಂಡಳಿಯ ಜೊತೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಉದ್ಭವಿಸಿ ಎರಡು ತಂಡಗಳ ಜೊತೆ ಒಪ್ಪಂದವನ್ನು ರದ್ದುಪಡಿಸಿದ ಘಟನೆ, ಒಬ್ಬ ಅಂತರರಾಷ್ಟ್ರೀಯ ಆಟಗಾರನೂ ಸೇರಿದಂತೆ ಎಂಟು ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿ ಅಮಾನತ್ತುಗೊಂಡ ದ್ದು, ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಬುಕ್‌ಮೇಕರ್‌ಗಳ ಜೊತೆ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಬಂಧನಕ್ಕೆ ಒಳಗಾದದ್ದು... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಾರ್ಟಿಗಳಲ್ಲಿ ಅನುಚಿತವಾಗಿ ವರ್ತಿಸಿದಕ್ಕೋ ಅಥವಾ ನಿಷೇಧಿತ ಮದ್ದು ಸೇವಿಸಿದ್ದಕ್ಕೋ ಕೆಲವು ಆಟಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಆಮೇಲೆ ಬಿಡುಗಡೆ ಮಾಡಿದ ಘಟನೆಗಳೂ ನಡೆದಿವೆ.ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ಐಪಿಎಲ್ ಅನ್ನು ಅಲಂಕರಿಸಿವೆ. ಕೆಲವೇ ವರ್ಷಗಳಲ್ಲಿ ಐಪಿಎಲ್ ಅಭಿವೃದ್ಧಿಗೊಂಡಿರುವ ರೀತಿ ನೋಡಿದರೆ ಕೆಟ್ಟ ಪ್ರಚಾರ ಎಂಬುದು ಈ ಜಗತ್ತಿನಲ್ಲಿ ಸಹಜ ಆಗಿಬಿಟ್ಟಿದೆಯೇನೋ ಎನ್ನುವ ಅನುಮಾನ ಹುಟ್ಟುತ್ತದೆ. ೨೦೧೧ರಲ್ಲಿ ಸುಮಾರು ಆರು ಕೋಟಿ ಜನ ಈ ಟೂರ್ನಿಯನ್ನು ನೋಡಿದರು. ಪ್ರಚಾರದ ಹಕ್ಕು ಪಡೆದಿದ್ದ ಚಾನೆಲ್ ಅಂದಾಜು ೧೦ ಸಾವಿರ ಕೋಟಿ ರೂಪಾಯಿ ಆದಾಯ ಗಳಿಸಿತು. ಜಾಹೀರಾತುಗಳ ಬೆಲೆ ಗಗನಕ್ಕೇರಿತು. ೨೦೧೨ರಲ್ಲಿ ಐಪಿಎಲ್‌ನ ಅಂತಿಮ ಹಂತದ ಪಂದ್ಯಗಳಿಗೆ ಐದು ಸೆಕೆಂಡ್ ಅವಧಿಯ ಜಾಹೀರಾತು ದರ ಐದು ಲಕ್ಷ ರೂಪಾಯಿ. ಇಂಡಿಯಾ-–ಶ್ರೀಲಂಕಾ ಪಂದ್ಯಕ್ಕೆ ಈ ದರ ಒಂದೂವರೆ ಲಕ್ಷ ರೂಪಾಯಿ ಇದ್ದರೆ, ಲಂಡನ್ ಒಲಿಂಪಿಕ್ಸ್‌ಗೆ ಕೇವಲ ೫೦ ಸಾವಿರ ರೂಪಾಯಿ ಇತ್ತು. ಅಲ್ಲಿಗೆ ಜಾಹೀರಾತು ದರ ಯಾವ ಪ್ರಮಾಣದಲ್ಲಿ ಏರಿತು ಎನ್ನುವುದನ್ನು ಅಂದಾಜು ಮಾಡಬಹುದು.ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳ ಅಭಿಮಾನಿಗಳು ವಿವಿಧ ಸಾಮಾಜಿಕ ಸ್ತರಗಳು, ಭೌಗೋಳಿಕ ಪರಿಸರಗಳಲ್ಲಿ ಇದ್ದಾರೆ. ಆದರೆ ಐಪಿಎಲ್‌ ಅಭಿಮಾನಿಗಳಲ್ಲಿ ಮಧ್ಯಮವರ್ಗದವರು, ನಗರ ನಾಗರಿಕರೇ ಹೆಚ್ಚು. ಐಪಿಎಲ್‌ ವಾಣಿಜ್ಯಿಕವಾಗಿ ಯಶಸ್ಸನ್ನು ಕಂಡಿದೆ ಎನ್ನುವುದು ಸತ್ಯ. ನಗರಗಳ ಮಟ್ಟಿಗೆ ಅದು ಸಾಮಾಜಿಕವಾಗಿ ಕೂಡ ಯಶಸ್ವಿಯಾಗಿದೆ. ಮುಂಚೆ ಟೆಸ್ಟ್‌ ಕ್ರಿಕೆಟ್‌ ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳು ಇದ್ದಂತೆ ಈಗ ಟ್ವೆಂಟಿ–20 ‘ಭಾರತೀಯ ಕ್ರೀಡೆ’ ಎನಿಸಿಕೊಂಡಿದೆ. ನಿತ್ಯ ಬಳಕೆಯ ಮಾತಿನಲ್ಲೂ ಟ್ವೆಂಟಿ–20 ಕ್ರಿಕೆಟ್‌ ಎನ್ನುವುದು ರೂಪಕವಾಗಿಯೋ, ಉಪಮೆಯಾಗಿಯೋ ಹಾಸುಹೊಕ್ಕಾಗಿದೆ.ಆಗಸ್ಟ್‌ 2012ರಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯಾದಾಗ ವಿಧಾನಸಭಾ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿಯಿತ್ತು. ಆಗ ಆ ಮುಖ್ಯಮಂತ್ರಿ, ‘ನನಗಿರುವುದು ತುಂಬಾ ಕಡಿಮೆ ಸಮಯ. ಇದು ಟ್ವೆಂಟಿ–20 ಕ್ರಿಕೆಟ್‌ ಪಂದ್ಯವಿದ್ದಂತೆ. ನಾನು ಬೇಗ ಸ್ಕೋರ್‌ ಮಾಡಬೇಕು. ಬರೀ ಒಂದೊಂದು ರನ್‌ ಓಡಿದರೆ ಪ್ರಯೋಜನವಿಲ್ಲ. ಬೌಂಡರಿಗಳು, ಸಿಕ್ಸರ್‌ಗಳನ್ನು ಹೊಡೆಯಲೇಬೇಕು’  ಎಂದು ಪ್ರತಿಕ್ರಿಯಿಸಿದ್ದರು. ಕಡಿಮೆ ಅವಧಿಯಲ್ಲಿ ಯೋಜನೆಗಳನ್ನು ಬೇಗ ಜಾರಿಗೆ ತರಬೇಕು ಎನ್ನುವುದನ್ನು ಹೇಳಲು ಅವರು ರೂಪಕವಾಗಿ ಐಪಿಎಲ್‌ ಕ್ರಿಕೆಟ್ಟನ್ನು ಉಪಯೋಗಿಸಿದ್ದರು.ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಸದಸ್ಯನಾದ ನನಗೆ ಬೆಂಗಳೂರಿನ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ನ ಎಲ್ಲಾ ಪಂದ್ಯಗಳ ಟಿಕೆಟ್‌ ಪುಕ್ಕಟೆಯಾಗಿ ಸಿಗುತ್ತದೆ. ಆದರೂ ನಾನು ಇದುವರೆಗೆ ಒಂದು ಪಂದ್ಯವನ್ನೂ ನೋಡಿಲ್ಲ. ಇತ್ತೀಚೆಗೆ ನಡೆದ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ನ ಕೆಲವು ಪಂದ್ಯಗಳನ್ನು ಟಿ.ವಿ.ಯಲ್ಲಿ ನೋಡಿದೆ. ಆಟಗಾರರು ತಂತಮ್ಮ  ದೇಶಗಳನ್ನು ಪ್ರತಿನಿಧಿಸುವ ಪೋಷಾಕು ತೊಟ್ಟು ಆಡಿದರು ಹಾಗೂ ಅಂಬಾನಿ ಅಥವಾ ಮಲ್ಯ ಅವರ ಮುದ್ದಿನ ಸಾಕುನಾಯಿಗಳಂತೆ ವರ್ತಿಸಲಿಲ್ಲ ಎನ್ನುವ ಕಾರಣಕ್ಕೆ ಆ ಪಂದ್ಯಗಳನ್ನು ನೋಡಿದ್ದು. ಕಲಾತ್ಮಕವಾದ ಲೆಗ್‌ಸ್ಪಿನ್‌ ಬೌಲಿಂಗ್‌ಗೆ ಸಂದ ಯಶಸ್ಸನ್ನು ಕಂಡು ಖುಷಿಯಾಯಿತು.ಎರಡು ದೇಶಗಳ ನಡುವೆ ನಡೆದರೆ ಈ ಕ್ರಿಕೆಟ್‌ ಕುರಿತು ಮಾತನಾಡಲು ಒಂದಿಷ್ಟು ವಿಷಯಗಳು ಸಿಗಬಹುದು. ಆದರೆ ಐಪಿಎಲ್‌ ಹಾಗಲ್ಲ. ಅದು ಒಡ್ಡತನದ, ಸಾಮಾಜಿಕ ಕೆಡುಕಿನ ರಹದಾರಿಯಾಗಿಯಷ್ಟೆ ಕಾಣುತ್ತಿದೆ. ನಾನು ಮೊದಲೇ ಹೇಳಿದಂತೆ ಕಳ್ಳಬಟ್ಟಿ ಸಾರಾಯಿ ಕುಡಿದರೆ ನಾಲಗೆ ಮೇಲೆ ಕೆಟ್ಟ ರುಚಿ ಉಳಿದುಬಿಡುತ್ತದೆ. ಹಾಗೆಯೇ ಈ ಐಪಿಎಲ್‌.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry