ಮಂಗಳವಾರ, ಮೇ 18, 2021
22 °C

ಐಪಿಎಲ್ ಜ್ವರದ ಆರ್ಥಿಕ ಪ್ರಯೋಜನಗಳು

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಇಂಡಿಯನ್ ಪ್ರೀಮಿಯರ್ ಲೀಗ್‌ನ  (ಐಪಿಎಲ್) ಋತು ಮತ್ತೆ ಮರಳಿ ಬಂದಿದ್ದು, ಈಗಾಗಲೇ ಅರ್ಧ ಹಾದಿ ಕ್ರಮಿಸುವ ಹಂತದಲ್ಲಿ ಇದೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಕ್ರಿಕೆಟ್ ಪ್ರೇಮಿಗಳ ಮನಕ್ಕೆ ತಂಪೆರಚುವುದು `ಐಪಿಎಲ್~ ಸಂಪ್ರದಾಯ ಆಗಿಬಿಟ್ಟಿದೆ.ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೂ `ಟ್ವೆಂಟಿ-20~ ಕ್ರಿಕೆಟ್ ಸದ್ದುಗದ್ದಲದಲ್ಲಿ ಮುಳುಗಿವೆ. ಕ್ರಿಕೆಟ್ ಪ್ರೇಮಿಗಳ ಸ್ಮೃತಿಪಟಲದಲ್ಲಿ ಮರೆತೇ ಹೋಗಿದ್ದ ಅನೇಕ ಕ್ರಿಕೆಟ್ ಕಲಿಗಳು ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ.  ಪಂದ್ಯಗಳನ್ನು ಸಂಘಟಿಸಿದ ಪರಿ ಬಗ್ಗೆಯಂತೂ ವಿವಾದಗಳು ಇದ್ದೇ ಇವೆ.ಪ್ರತಿಯೊಂದು ಪಂದ್ಯ, ಆಟಗಾರರ ಆಟದ ಶೈಲಿ, ಅಳವಡಿಸಿಕೊಂಡ ತಂತ್ರ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಪರಿಣತ ಅಭಿಪ್ರಾಯ ನೀಡುವಲ್ಲಿ ಮಗ್ನರಾಗಿದ್ದಾರೆ. ದಿನಗಳು ಉರುಳಿದಂತೆ, `ಐಪಿಎಲ್~ ಸುತ್ತಲೇ ಗಿರಕಿ ಹೊಡೆಯುವ ಚರ್ಚೆಗಳು ಎಲ್ಲೆಡೆ ತಾರಕಕ್ಕೆ ಏರುತ್ತಿದ್ದು, ಮನೆ - ಮನೆಗಳಲ್ಲಿ ಕೂಡ ಕ್ರಿಕೆಟ್ ಕುರಿತ ಮಾತು - ಚರ್ಚೆಗಳೇ ಹೆಚ್ಚಾಗುತ್ತಿವೆ.ಐದು ವರ್ಷಗಳ ಹಿಂದೆ ಭಾರಿ ನಿರೀಕ್ಷೆಯೊಂದಿಗೆ `ಐಪಿಎಲ್~ಗೆ ಚಾಲನೆ ದೊರೆತಿತ್ತು. ಸಾಕಷ್ಟು ಟೀಕಾಕಾರರು ಇಂತಹ  ಕ್ರಿಕೆಟ್‌ಗೆ ಭವಿಷ್ಯವೇ ಇಲ್ಲ ಎಂದು ಟೀಕಿಸಿದ್ದರು. ಅಸ್ತಿತ್ವಕ್ಕೆ ಬಂದಷ್ಟೇ ವೇಗವಾಗಿ `ಐಪಿಎಲ್~ ಕಣ್ಮರೆಯಾಗುತ್ತದೆ ಎಂದೂ ಕಟಕಿಯಾಡಿದ್ದರು.ಕಳೆದ ಐದು ವರ್ಷಗಳಲ್ಲಿ ದೇಶಿ ಕ್ರಿಕೆಟ್ ಪಿಚ್ ಮೇಲೆ ಲೆಕ್ಕವಿಲ್ಲದಷ್ಟು ರನ್‌ಗಳು ಹರಿದಿವೆ. ವಿಕೆಟ್‌ಗಳೂ ಪತನಗೊಂಡಿವೆ. ಅಬ್ಬರ, ಆಡಂಬರದಿಂದ ಕೂಡಿರುವ ಈ ಬಗೆಯ ಕ್ರಿಕೆಟ್, ಕ್ರೀಡಾಭಿಮಾನಿಗಳ ಮನದಲ್ಲಿ ಆಳವಾಗಿ ಬೇರೂರಿದ್ದು, ಸಾಕಷ್ಟು ಆರ್ಥಿಕ ಲಾಭಗಳನ್ನೂ ಒಳಗೊಂಡಿದೆ.`ಐಪಿಎಲ್~ ಹಿಂದೆ ಮುಂದೆ ನಡೆಯುವ ಹಲವಾರು ಬಗೆಯ ಆರ್ಥಿಕ ಚಟುವಟಿಕೆಗಳು ಸಾವಿರಾರು ಕೋಟಿಗಳ ವಹಿವಾಟಿಗೆ ಕಾರಣವಾಗಿರುವುದು ಈಗಾಗಲೇ ಸಾಬೀತಾಗಿದೆ.ದೇಶದ ಅರ್ಥ ವ್ಯವಸ್ಥೆಯು ಚೇತರಿಕೆ ಹಾದಿಯಲ್ಲಿ ಇರುವಾಗಲೇ `ಐಪಿಎಲ್~ ಹೆಸರಿನಲ್ಲಿ ಹಣದ ಹೊಳೆ ಹರಿಯುತ್ತಿರುವುದು ಕಾಕತಾಳೀಯವಾಗಿದೆ.

`ಐಪಿಎಲ್~ನಲ್ಲಿ ಭಾಗಿಯಾಗಿರುವ ಪಾಲುದಾರರೆಲ್ಲರೂ ಗಮನಾರ್ಹ ಪ್ರಮಾಣದಲ್ಲಿ ಆರ್ಥಿಕ ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರಾಯೋಜಕರೆಲ್ಲರೂ ಹಣ ಬಾಚಿಕೊಳ್ಳುತ್ತಿದ್ದಾರೆ. ಇದು ಎಲ್ಲರ ಪಾಲಿಗೂ ಅನುಭವಕ್ಕೆ ಬಂದಿದೆ.ವಯಸ್ಸು, ಲಿಂಗ, ಧರ್ಮ, ಪ್ರದೇಶದ ಭೇದವಿಲ್ಲದೇ ಇಡೀ ದೇಶವೇ ಕ್ರಿಕೆಟ್ ಪಂದ್ಯಗಳಲ್ಲಿ ಆಸಕ್ತಿ ತಳೆದಿದೆ. ಕ್ರಿಕೆಟ್ ನಿಜವಾಗಿಯೂ ದೇಶ ಬಾಂಧವರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವಲ್ಲಿ ಸಫಲವಾಗಿದೆ. `ಐಪಿಎಲ್~ ನಿಧಾನವಾಗಿ ಜನರ ಬದುಕನ್ನು ಆಕ್ರಮಿಸುತ್ತ ಹೊರಟಿದ್ದರೂ, ಗ್ರಹಿಕೆ ಮಾತ್ರ ವಿಭಿನ್ನವಾಗಿದೆ.ಕ್ರಿಕೆಟ್, `ಐಪಿಎಲ್~ನಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸುವ ಸಾಮಾನ್ಯ ಎಳೆಯಾಗಿದ್ದರೂ, ಇದರ ವಹಿವಾಟಿನ ಸ್ವರೂಪ ಮಾತ್ರ ತುಂಬ ಸಂಕೀರ್ಣವಾಗಿದೆ. `ಐಪಿಎಲ್~ ಜತೆ ಸಂಬಂಧ ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ತನ್ನದೇ ಕಾರ್ಯತಂತ್ರ ರೂಪಿಸಿಕೊಂಡು ಹಣದ ಥೈಲಿ ಎಣಿಸುತ್ತಿದೆ.ಯಾವುದೇ ಒಂದು ಕ್ರೀಡಾಂಗಣಕ್ಕೆ ಭೇಟಿ ನೀಡಿ ಆಟ ವೀಕ್ಷಿಸಿ ಸಂಭ್ರಮಿಸಿದಾಗ, ಇಷ್ಟು ದೊಡ್ಡ ಪ್ರಮಾಣದ ಕ್ರೀಡಾಕೂಟ ವ್ಯವಸ್ಥೆ ಮಾಡಿರುವ ಸಂಘಟಕರ ಪರಿಶ್ರಮವು ಮಂತ್ರಮುಗ್ಧಗೊಳಿಸುತ್ತದೆ. ಅಲ್ಲಿನ ವ್ಯವಸ್ಥೆಗಳೆಲ್ಲ ಕ್ರೀಡಾಭಿಮಾನಿಗಳನ್ನು ಬೆರಗುಗೊಳಿಸುತ್ತವೆ.ನನ್ನ ತಲೆಮಾರಿನವರು ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಸ್ಟ್ಯಾಂಡ್‌ನಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸಿದ್ದಕ್ಕೂ, `ಐಪಿಎಲ್~ ಪಂದ್ಯಗಳಿಗೂ ಹೋಲಿಸಿದರೆ ಅಜಗಜಾಂತರ ಇರುವುದು ಕಂಡು ಬರುತ್ತದೆ.ದೇಶದ ಪ್ರತಿಷ್ಠಿತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಈ ವಿಶಿಷ್ಟ ಪರಿಕಲ್ಪನೆಯ `ಐಪಿಎಲ್~ಗೆ ಐದು ವರ್ಷಗಳ ಹಿಂದೆ ಚಾಲನೆ ನೀಡಿದೆ. `ಬಿಸಿಸಿಐ~ನ ಪದಾಧಿಕಾರಿಗಳಲ್ಲಿ ಒಬ್ಬರು `ಐಪಿಎಲ್~ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ `ಐಪಿಎಲ್~ ಒಟ್ಟಾರೆ ಸ್ವರೂಪದ ಬಗ್ಗೆಯೂ ನಾನು ಇಲ್ಲಿ ಸಂಕ್ಷಿಪ್ತವಾಗಿ ಸಿಂಹಾವಲೋಕನ ಮಾಡಿರುವೆ.ಈ ಬಗೆಯ ಕ್ರಿಕೆಟ್ ಪಂದ್ಯಗಳಲ್ಲಿ  ಪ್ರಮುಖ ಎಂಟು ನಗರಗಳಿಗೆ ಸೇರಿದ ತಂಡಗಳು ಭಾಗಿಯಾಗಿವೆ. ಆನಂತರ ಎರಡು ತಂಡಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತಾದರೂ, ಅದರಲ್ಲಿ ಒಂದು ತಂಡವನ್ನು ಈಗ ಕೈಬಿಡಲಾಗಿದೆ.ತಂಡಗಳನ್ನು ಪಾಲುದಾರಿಕೆ ಆಧಾರದ ಮೇಲೆ ಐದು ವರ್ಷಗಳ ಅವಧಿಗೆ ಮಾರಾಟ ಮಾಡಲಾಗಿದೆ. ಮೊದಲ ಐದು ವರ್ಷಗಳಿಗೆ 350 ಕೋಟಿಯಿಂದ  550 ಕೋಟಿ ರೂಪಾಯಿಗಳವರೆಗೆ ಪ್ರತಿಯೊಂದು ತಂಡವನ್ನು ಹರಾಜು ಹಾಕಲಾಗಿದೆ. ಇಷ್ಟು ದೊಡ್ಡ ಮೊತ್ತದ ಹರಾಜು ಪ್ರಕ್ರಿಯೆ ಕಂಡು ಅನೇಕರು ಹುಬ್ಬೇರಿಸಿರಲಿಕ್ಕೂ ಸಾಕು.9 ಮತ್ತು 10ನೇ ತಂಡ ಸೇರ್ಪಡೆ ಮಾಡುವಾಗ, ತಂಡದ ಹರಾಜಿನ ಮೊತ್ತ  2500 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಿತ್ತು. ಇದು `ಐಪಿಎಲ್~ ಕಳೆದ ಐದು ವರ್ಷಗಳಲ್ಲಿ ಸಾಧ್ಯ ಮಾಡಿರುವ ಯಶಸ್ಸಿಗೆ, ವಹಿವಾಟಿನ ಮತ್ತು ಲಾಭದ ಮೊತ್ತಕ್ಕೆ ಕನ್ನಡಿ ಹಿಡಿಯುತ್ತದೆ.`ಬಿಸಿಸಿಐ~ ಇತ್ತೀಚೆಗೆ ಜಾಗತಿಕ ಪ್ರಸಾರ ಹಕ್ಕುಗಳಿಗಾಗಿ 3850 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಕೂಡ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.`ಐಪಿಎಲ್~ನ ಇತರ ವರಮಾನ ಮೂಲಗಳಿಂದಲೂ ಗಮನಾರ್ಹ ಮೊತ್ತ ಹರಿದು ಬರುತ್ತದೆ. ಟಿಕೆಟ್ ಮಾರಾಟ, ಕ್ರೀಡಾಂಗಣದ ಒಳಭಾಗದಲ್ಲಿನ ಜಾಹೀರಾತುಗಳು, ಪ್ರಚಾರದಿಂದಲೂ ಸಾಕಷ್ಟು ವರಮಾನ ಸಂಗ್ರಹಗೊಳ್ಳುತ್ತದೆ.`ಐಪಿಎಲ್~ ಸುತ್ತಮುತ್ತ ನಡೆಯುವ ಹತ್ತಾರು ಚಟುವಟಿಕೆಗಳಿಂದಲೂ ಕೋಟ್ಯಂತರ ರೂಪಾಯಿಗಳ ವರಮಾನ ಇದೆ. `ಬಿಸಿಸಿಐ~ ರಾಜ್ಯಗಳ ಕ್ರಿಕೆಟ್ ಸಂಘ - ಸಂಸ್ಥೆಗಳ ಜತೆ ವರಮಾನ ಹಂಚಿಕೆಗೆ ವ್ಯವಸ್ಥೆ ಮಾಡಿಕೊಂಡಿದೆ.ಈ ಮೊದಲಿನ ಎಂಟು ತಂಡಗಳ ಜತೆಗಿನ ಪಾಲುದಾರಿಕೆ ಒಪ್ಪಂದವು ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ. ತಂಡಗಳನ್ನು ಎರಡನೇ ಬಾರಿಗೆ ಹರಾಜು ಹಾಕುವಾಗ ಕೇಳಿ ಬರಲಿರುವ ಹರಾಜಿನ ಮೊತ್ತ ಎಷ್ಟು ಇರಬಹುದು ಎನ್ನುವುದು ಸದ್ಯಕ್ಕಂತೂ ಎಣಿಕೆಗೆ ಸಿಗದು.ತಂಡಗಳ ಹರಾಜಿನಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವ ಬಗ್ಗೆ ನನಗೇನೂ ವಿಶ್ವಾಸ ಇಲ್ಲ. ಆದರೆ, ಇತರ ವಲಯಗಳಲ್ಲಿ `ಎಫ್‌ಡಿಐ~ ಹರಿವು ಕಡಿಮೆಯಾಗಿರುವಾಗ `ಐಪಿಎಲ್~ನಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡುವುದಾದರೆ ಅದೊಂದು  ಉತ್ತಮ ನಿರ್ಧಾರವಾದೀತು.`ಐಪಿಎಲ್~ ನಡೆಯುವ ಕ್ರೀಡಾಂಗಣಕ್ಕೆ ಭೇಟಿ ನೀಡಿದರೆ,  ಪಂದ್ಯಗಳ ಸುತ್ತಮುತ್ತ ನಡೆಯುವ ಆರ್ಥಿಕ ಚಟುವಟಿಕೆಗಳ ವ್ಯಾಪಕತೆಯು ಪ್ರತಿಯೊಬ್ಬರ ಅನುಭವಕ್ಕೆ ಬರುತ್ತದೆ.

ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿರುವ ಕ್ರಿಕೆಟ್ ಆಟಗಾರರು, ತರಬೇತುದಾರರು, ಫಿಜಿಯೊಥೆರಪಿಸ್ಟ್, ಆಟಗಾರರನ್ನು ಹುರಿದುಂಬಿಸುವ ಚೆಲುವೆಯರು, ಅತ್ಯಾಧುನಿಕ ವಿದ್ಯುನ್ಮಾನ ಪರಿಕರಗಳು, ಅಲಂಕೃತಗೊಂಡ ಕ್ರೀಡಾಂಗಣಗಳು, ಕ್ರೀಡಾಪ್ರೇಮಿಗಳ ಜಿಹ್ವಾ ಚಾಪಲ್ಯ ತಣಿಸುವ ಬಗೆ ಬಗೆಯ ತಿಂಡಿ ತಿನಿಸುಗಳು, ಸಿನಿಮಾ ತಾರೆಯರ ಉಪಸ್ಥಿತಿ, ಉದ್ಯಮ ದಿಗ್ಗಜರು, ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ತಮ್ಮ ಮೆಚ್ಚಿನ ಕ್ರೀಡಾಪಟುಗಳ ಆಟ ನೋಡಿ ಆನಂದಿಸಲು ಬಂದಿರುವ ಕ್ರೀಡಾಭಿಮಾನಿಗಳಿಂದ ತುಂಬಿ ತುಳುಕುವ ಕ್ರೀಡಾಂಗಣದಲ್ಲಿ ಮನರಂಜನೆಯ ಮಹಾಪೂರವೇ ಹರಿಯುತ್ತಿರುತ್ತದೆ. ಇವೆಲ್ಲವೂ ಬೇರೆ ಬೇರೆ ಸ್ವರೂಪದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನಕಾರಿಯಾಗಿಯೇ  ಇರುತ್ತವೆ.ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ವೈಯಕ್ತಿಕ ನೆಲೆಯಲ್ಲಿ ಮಾಡಿಕೊಳ್ಳುವ ವ್ಯವಸ್ಥೆಗಳು, ರೆಸ್ಟೋರಂಟ್ಸ್‌ಗಳಲ್ಲಿಯೂ ಪಂದ್ಯಗಳನ್ನು ವೀಕ್ಷಿಸಲು ಗ್ರಾಹಕರಿಗೆ ಮಾಡಿರುವ ವಿಶೇಷ ಸೌಲಭ್ಯಗಳು, ಸ್ನೇಹಿತರು ಒಂದೆಡೆ ಕಲೆತು ಪಂದ್ಯಗಳನ್ನು ವೀಕ್ಷಿಸುವುದು, `ಐಪಿಎಲ್~ಗೆ ಸಂಬಂಧಿಸಿದಂತೆ ವಾರಾಂತ್ಯದಲ್ಲಿನ ಮೋಜಿನ ಔತಣಕೂಟಗಳು ದೇಶದ ಅನೇಕ ಭಾಗಗಳಲ್ಲಿ ಕಂಡು ಬರುತ್ತಿವೆ.ಸ್ವಂತ ರಾಜ್ಯದ ತಂಡಗಳ ಪಂದ್ಯ ನಡೆಯುವ ಸಮಯದಲ್ಲಿ, ಕ್ರೀಡಾಭಿಮಾನಿಗಳು ತಮ್ಮೆಲ್ಲ ಇತರ ಚಟುವಟಿಕೆಗಳಿಗೆ ಎರಡನೆಯ ಆದ್ಯತೆ ನೀಡುತ್ತಾರೆ. ಪ್ರವಾಸೋದ್ಯಮ, ಹೋಟೆಲ್ ಮುಂತಾದವು ಕೂಡ ಈ ನೆಪದಲ್ಲಿ ಭರ್ಜರಿ ವಹಿವಾಟು ನಡೆಸುತ್ತವೆ.ಟೆಲಿವಿಷನ್ ಮತ್ತು ಮೊಬೈಲ್ ಸೇವಾ ಸಂಸ್ಥೆಗಳೂ ಕ್ರಿಕೆಟ್ ಹೆಸರಿನಲ್ಲಿ ತಮ್ಮ ವರಮಾನ ಹೆಚ್ಚಿಸಿಕೊಳ್ಳುತ್ತವೆ. ವಿಶೇಷ ಕ್ರೀಡಾ ಸಾಫ್ಟ್‌ವೇರ್, ಸಾಮಾಜಿಕ ಸಂಪರ್ಕ ತಾಣಗಳು ಸೇರಿದಂತೆ ಪಂದ್ಯಗಳ ವಿಶ್ಲೇಷಕರು ಕೂಡ ಕೈತುಂಬ ಹಣ ಸಂಪಾದಿಸುತ್ತಾರೆ.`ಐಪಿಎಲ್~ ಸುತ್ತಮುತ್ತ ನಡೆಯುವ ಆರ್ಥಿಕ ಚಟುವಟಿಕೆಗಳು ಮತ್ತು ಅವುಗಳಿಂದ ಆಗುವ ಹಣಕಾಸಿನ ಲಾಭಗಳನ್ನು ನಿಖರವಾಗಿ ಅಂದಾಜು ಮಾಡುವುದು ತುಂಬ ಕಷ್ಟಕರ. ಮನರಂಜನಾ ತೆರಿಗೆ ಮೂಲಕ ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸಕ್ಕೂ ಸಾಕಷ್ಟು ವರಮಾನ ಹರಿದು ಬರುತ್ತದೆ.ಇಷ್ಟು ದೊಡ್ಡಮಟ್ಟದ ಕ್ರೀಡಾಕೂಟ ಸಂಘಟಿಸುವುದರಿಂದ ಸಾಕಷ್ಟು ವಿಷಯಗಳನ್ನೂ ಕಲಿಯಬಹುದಾಗಿದೆ. ಈ ಅನುಭವವನ್ನು ಇತರ ದೇಶಗಳ ಜತೆಗೂ ಹಂಚಿಕೊಳ್ಳಲು ಸಾಧ್ಯ. ಕಾಮನ್‌ವೆಲ್ತ್ ಕ್ರೀಡಾಕೂಟ ಜತೆ `ಐಪಿಎಲ್~ ಹೋಲಿಕೆ ಮಾಡಿದರೆ ನಾವು ಸಾಕಷ್ಟು ಪಾಠ ಕಲಿಯಬಹುದು.ಅನೇಕ ಉದಯೋನ್ಮುಖ ಕ್ರಿಕೆಟ್ ಆಟಗಾರರು, ಕ್ರಿಕೆಟ್‌ಅನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ `ಐಪಿಎಲ್~ ಸಾಕಷ್ಟು ಸ್ಪೂರ್ತಿ ನೀಡುತ್ತಿದೆ. ಇದರಿಂದ ಕ್ರಿಕೆಟ್ ಲೋಕದಲ್ಲಿ ದೇಶವನ್ನು ಪ್ರತಿನಿಧಿಸಲು ಯುವ ಮತ್ತು ಸ್ಪರ್ಧಾತ್ಮಕ ಆಟಗಾರರು ದೇಶದ ಮೂಲೆ ಮೂಲೆಗಳಿಂದ ನಿರಂತರವಾಗಿ ಬರುತ್ತಲೇ ಇರುತ್ತಾರೆ.ದೇಶಿ ಆಟಗಾರರು ಅಂತರರಾಷ್ಟ್ರೀಯ ಖ್ಯಾತಿಯ ಆಟಗಾರರ ಜತೆ ಬೆರೆತು ವಿಶಿಷ್ಟ ಅನುಭವ ತಮ್ಮದಾಗಿಸಿಕೊಳ್ಳಲೂ ಇದರಿಂದ ಸಾಧ್ಯವಾಗುತ್ತದೆ. `ಐಪಿಎಲ್~ನ ಯಶಸ್ಸು, `ಬಿಸಿಸಿಐ~ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ್ಲ್ಲಲಿಯೂ ವಿಶೇಷ ಸ್ಥಾನಮಾನವನ್ನೂ ನೀಡಲಿದೆ.ಅಂತಿಮವಾಗಿ `ಐಪಿಎಲ್~ ಬಗ್ಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸುವುದಾದರೆ, ಈ `ಟ್ವೆಂಟಿ-20~ ಕ್ರಿಕೆಟ್, ಅಭಿಮಾನಿಗಳಲ್ಲಿ ಸಾಕಷ್ಟು ಮನರಂಜನೆ, ಸಂತಸ ಮತ್ತು ಹಿತಾನುಭವ ನೀಡುತ್ತಿದೆ. ಆರ್ಥಿಕ ಪ್ರಯೋಜನಗಳ ಜತೆ, ಜತೆಗೆ- ಜನರಿಗೆ, ದೇಶಕ್ಕೆ ಮತ್ತು ದೇಶಿ ಅರ್ಥ ವ್ಯವಸ್ಥೆಗೂ ಗೆಲುವಿನ ಅನುಭವ ನೀಡುತ್ತಿದೆ ಎನ್ನಬಹುದು.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.