ಐರೋಪ್ಯ ಒಕ್ಕೂಟದಿಂದ ಕಲಿಯಬೇಕಾದ ಪಾಠಗಳು

7

ಐರೋಪ್ಯ ಒಕ್ಕೂಟದಿಂದ ಕಲಿಯಬೇಕಾದ ಪಾಠಗಳು

ಡಿ. ಮರಳೀಧರ
Published:
Updated:
ಐರೋಪ್ಯ ಒಕ್ಕೂಟದಿಂದ ಕಲಿಯಬೇಕಾದ ಪಾಠಗಳು

ಸರಿಯಾಗಿ ಒಂದು ವರ್ಷದ ಹಿಂದೆ  ಐರೋಪ್ಯ ಒಕ್ಕೂಟದ  ಬಿಕ್ಕಟ್ಟು ಪರಾಕಾಷ್ಠೆಗೆ ಮುಟ್ಟಿದ್ದಾಗ ನಾನು ಆ ಬಗ್ಗೆ ಇದೇ ಅಂಕಣದಲ್ಲಿ ಲೇಖನ ಬರೆದಿದ್ದೆ. ಅನೇಕ ವಿಶ್ಲೇಷಕರು ಮತ್ತು ನಿರಾಶಾವಾದಿಗಳು ಈ ಒಕ್ಕೂಟವು ಬಹಳ ದಿನ ಬಾಳಲಾರದು ಎಂದೇ ಭವಿಷ್ಯ ನುಡಿದಿದ್ದರು. ದಿವಾಳಿ ಅಂಚಿಗೆ ತಲುಪಿದ್ದ ಗ್ರೀಸ್ ದೇಶದ ಅರ್ಥ ವ್ಯವಸ್ಥೆಯು ಈ ವಾದವನ್ನು ಬಲವಾಗಿ ಪುಷ್ಟೀಕರಿಸುತ್ತಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ  ಪೋರ್ಚುಗೀಸ್, ಇಟಲಿ, ಗ್ರೀಸ್ ಮತ್ತು ಸ್ಪೇನ್‌ಗಳಲ್ಲಿ (ಪಿಐಜಿಎಸ್-ಪಿಗ್ಸ್ ದೇಶಗಳು) ಹಣಕಾಸು ಬಿಕ್ಕಟ್ಟಿನ ಒತ್ತಡ ಗರಿಷ್ಠ ಮಟ್ಟದಲ್ಲಿತ್ತು, ಈ ದೇಶಗಳ ಅರ್ಥ ವ್ಯವಸ್ಥೆ ದಿವಾಳಿ ಅಂಚಿಗೆ ತಲುಪಿತ್ತು.

 

ಯೂರೋಪ್ ವಲಯದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದ ಇತರ ದೇಶಗಳು ಒದಗಿಸಿದ ತುರ್ತು ನೆರವಿನಿಂದ  `ಪಿಗ್ಸ್~ ದೇಶಗಳ ಅರ್ಥವ್ಯವಸ್ಥೆಯು ಗಮನಾರ್ಹವಾಗಿ ಸುಧಾರಿಸಿತು. ಸಂಕಷ್ಟ ಪರಿಸ್ಥಿತಿಯೂ ಕೆಲ ಮಟ್ಟಿಗೆ ತಹಬದಿಗೆ ಬಂದಿತು.ಸಾಲದ ಬಿಕ್ಕಟ್ಟಿಗೆ ಸಿಲುಕಿ ದಿವಾಳಿ ಅಂಚಿನಿಂದ ಹೊರ ಬರಲು ಹರಸಾಹಸ ಮಾಡುತ್ತಿದ್ದ ಈ ವಲಯದ ಇತರ ದೇಶಗಳೂ ಅಪ್ರಿಯ ಮತ್ತು  ಕಠಿಣವಾದ ಆರ್ಥಿಕ ಮಿತವ್ಯಯ ಕ್ರಮಗಳ ಮೂಲಕ ಉಳಿವಿನ ಹೋರಾಟ ಮುಂದುವರೆಸಿದ್ದವು. ಅಂತಹ ಹೋರಾಟದಿಂದ ಕೊನೆಗೂ ಚೇತರಿಕೆಯ ಹಾದಿಗೆ ಮರಳಲು ಸಾಧ್ಯವಾಗಿರುವುದು ಇತ್ತೀಚಿಗೆ ನನ್ನ ಅನುಭವಕ್ಕೆ ಬಂದಿತು.ವಾರದ ಹಿಂದೆ ನಾನು ಇಟಲಿಗೆ ಭೇಟಿ ಕೊಟ್ಟಾಗ ಅಲ್ಲಿನ ವಾಸ್ತವ ಪರಿಸ್ಥಿತಿ  ನೋಡಲು ನನಗೆ ಸಾಧ್ಯವಾಯಿತು.ಇಟಲಿಯಲ್ಲಿ ಇಳಿದ ಕ್ಷಣದಿಂದಲೇ  ಅಲ್ಲಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದು ನನ್ನ ಅನುಭವಕ್ಕೆ ಬಂದಿತು. ವಿಮಾನ ನಿಲ್ದಾಣದ ಕಾರು ಪಾರ್ಕಿಂಗ್ ತಾಣದಲ್ಲಿ ಕಂಡು ಬಂದ ಕಾರುಗಳ ಸಂಖ್ಯೆಯೇ ಬದಲಾದ ಅರ್ಥ ವ್ಯವಸ್ಥೆಗೆ ಕನ್ನಡಿ ಹಿಡಿದಿತ್ತು.ವಿಮಾನ ನಿಲ್ದಾಣದಿಂದ ಹೊರ ಹೋಗುವ ಬಾಗಿಲುಗಳಲ್ಲಿ ಸಾಕಷ್ಟು ಪ್ರಯಾಣಿಕರು ಇರುವುದೂ ಎಲ್ಲವೂ ಬದಲಾಗುತ್ತಿದೆ ಎನ್ನುವುದನ್ನು ಸೂಚಿಸುವಂತಿತ್ತು. ಕೆಲ ತಿಂಗಳ ಹಿಂದೆ   ಜರ್ಮನಿಗೆ ಭೇಟಿ ನೀಡಿದ್ದ ನನಗೆ ಅಲ್ಲಿಯೂ ಇದೇ ಬಗೆಯ ಚಟುವಟಿಕೆಗಳು ಅನುಭವಕ್ಕೆ ಬಂದಿದ್ದವು.ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜನವಿರೋಧಿ ಕಠಿಣ ಕ್ರಮಗಳು ಅರ್ಥ ವ್ಯವಸ್ಥೆ ಮತ್ತು ಜನರ ಮೇಲೆ ನಿಜವಾಗಿಯೂ ಪರಿಣಾಮ ಬೀರಿದ್ದು ಎದ್ದು ಕಾಣುತ್ತಿತ್ತು. ಜನರು ಹಣ ವೆಚ್ಚ ಮಾಡುವ ವಿಧಾನದಲ್ಲಿಯೂ ಗಮನಾರ್ಹ ಬದಲಾವಣೆಗಳು ಆಗಿದ್ದವು. ಈ ಭೇಟಿ ಸಂದರ್ಭದಲ್ಲಿ ನಾನು ಮಿಲಾನ್ ನ ಕೆಲ ಉದ್ಯಮಿಗಳನ್ನು ಭೇಟಿ ಮಾಡುವ  ಕಾರ್ಯಕ್ರಮವೂ ಇತ್ತು. ಅಲ್ಲಿ ನನಗೆ ಹೆಚ್ಚಿನ ವಿವರಗಳು ದೊರೆತವು.ಆರಂಭದ ಉಭಯ ಕುಶಲೋಪರಿ ನಂತರ ನಾನು ಅವರೊಂದಿಗೆ ವ್ಯಾಪಾರದ ಬಗ್ಗೆ ಗಂಭೀರ ಸಮಾಲೋಚನೆಗೆ ತೊಡಗಿಕೊಂಡಾಗ, ವಹಿವಾಟಿನ ಗಾತ್ರವು ಗಮನಾರ್ಹವಾಗಿ ಕಡಿಮೆ ಆಗಿರುವ ಬಗ್ಗೆ ಅವರೆಲ್ಲ ದೂರಿದರು. ಅವರಲ್ಲಿ ಅನೇಕರು  ತಮ್ಮಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿದ್ದರು.

 

ಸರಕುಗಳ ಉತ್ಪಾದನೆ / ತಯಾರಿಕೆ ಪ್ರಮಾಣವನ್ನೂ ತಗ್ಗಿಸಿದ್ದರು. ಸರಕುಗಳ ಅಪಾರ ಪ್ರಮಾಣದ ಸಂಗ್ರಹವು ಅವರ ಬಳಿ ಬಿಕರಿಯಾಗದೇ ಹಾಗೆಯೇ ಉಳಿದಿತ್ತು. ಗ್ರಾಹಕರಿಂದ ಬರಬೇಕಾದ ಹಣವು ಇಂದು - ನಾಳೆ ಬರಬಹುದು ಎನ್ನುವ  ನಿರೀಕ್ಷೆಯಲ್ಲಿದ್ದರು.ಸರಕುಗಳ ಮಾರಾಟ ಪ್ರಮಾಣ ತಗ್ಗಿರುವುದರಿಂದ ಅವರೆಲ್ಲರ ವ್ಯಾಪಾರ - ವಹಿವಾಟು ನಷ್ಟದಲ್ಲಿಯೇ ನಡೆದಿತ್ತು. ಬ್ಯಾಂಕ್‌ಗಳ ಬಳಿ ಸಾಕಷ್ಟು ನಗದು ಇದ್ದರೂ, ಉದ್ದಿಮೆದಾರರು ಮತ್ತೆ ಸಾಲದ ಸುಸ್ತಿದಾರರು ಆಗಬಹುದು ಎಂಬ ಭೀತಿಯಿಂದ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ.ಇವರೆಲ್ಲರ ವಹಿವಾಟಿನಲ್ಲಿ ಹಿಂದೊಮ್ಮೆ ಕಂಡು ಬಂದಿದ್ದ ಆಕ್ರಮಣಕಾರಿ  ಧೋರಣೆ ಈ ಬಾರಿ ಕಾಣೆಯಾಗಿತ್ತು. ವ್ಯಾಪಾರ - ವಹಿವಾಟನ್ನು ಹೇಗಾದರೂ ಮಾಡಿ ಉಳಿಸಿಕೊಂಡು ಹೋಗುವುದೇ ಅವರ ಸದ್ಯದ ಆದ್ಯತೆಯಾಗಿತ್ತು.ಆನಂತರ ನಮ್ಮ ನಡುವಿನ ಚರ್ಚೆಯು  ಒಟ್ಟಾರೆ ಐರೋಪ್ಯ ಒಕ್ಕೂಟದ ಪ್ರಸ್ತುತತೆ ಸುತ್ತ ಗಿರಕಿ ಹೊಡೆಯಲು ಆರಂಭಿಸಿದಾಗ, ಸದಸ್ಯ ದೇಶಗಳಲ್ಲಿ ಬಳಕೆಯಲ್ಲಿ ಇರುವ ಕರೆನ್ಸಿ `ಯೂರೊ~ದ ಉಪಯುಕ್ತತೆ ಬಗ್ಗೆ ಅವರಲ್ಲಿ ಒಮ್ಮತಾಭಿಪ್ರಾಯ ವ್ಯಕ್ತವಾಯಿತು.

ಭವಿಷ್ಯದಲ್ಲಿ ಯಾವುದೇ ದೇಶದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಾಮಾನ್ಯ ಕರೆನ್ಸಿಯು ಕಡ್ಡಾಯವಾಗಿ ಇರಲೇಬೇಕು ಎನ್ನುವುದು ಐರೋಪ್ಯ ಒಕ್ಕೂಟದ ಪ್ರತಿಯೊಂದು ದೇಶದ ಜನರ ಅನುಭವಕ್ಕೆ ಬಂದಿದೆ.

 

ಆರ್ಥಿಕ ನೆರವಿಗೆ ಅದೊಂದು ಪೂರ್ವ ಷರತ್ತಾಗಿರಬೇಕು ಎನ್ನುವುದೂ ಮನದಟ್ಟಾಗಿದೆ. ಸಾಮಾನ್ಯ ಕರೆನ್ಸಿ `ಯೂರೊ~ ಬದಲಿಗೆ ಪ್ರತ್ಯೇಕ ಕರೆನ್ಸಿ ಹೊಂದಬೇಕು ಎನ್ನುವ ಆಲೋಚನೆಯೇ ತಮ್ಮ ಪಾಲಿಗೆ ಅನಾಹುತಕಾರಿ ಎನ್ನುವುದೂ ಈ ದೇಶಗಳಿಗೆ ಈಗ ಮನವರಿಕೆಯಾಗಿದೆ. `ಯೂರೊ~, ಒಕ್ಕೂಟದ ಸದಸ್ಯ ದೇಶಗಳಲ್ಲಿ ಸಮಾನತೆಯ ಭಾವನೆ ಮೂಡಿಸುವಲ್ಲಿ ಸಫಲವಾಗಿದೆ.ಯೂರೋಪ್ ಒಕ್ಕೂಟದಲ್ಲಿ ಕಂಡು ಬಂದಿರುವ ಈ ಆರ್ಥಿಕ ಚೇತರಿಕೆಯು ಭಾರತದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಪಾಲಿಗೂ ವಿಪುಲ ಅವಕಾಶಗಳನ್ನು ಒದಗಿಸಿದೆ.ಯೂರೋಪ್‌ನ ಆರ್ಥಿಕ  ಪುನಶ್ಚೇತನವು ಭಾರತದ ವಾಣಿಜ್ಯ ವಹಿವಾಟಿನ ಸ್ಪರ್ಧಾತ್ಮಕತೆಯನ್ನೂ ಹೆಚ್ಚಿಸಲು ನೆರವಾಗಿದೆ. ಕಡಿಮೆ ವೆಚ್ಚದ ಉತ್ಪನ್ನಗಳನ್ನು ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳಿಗೆ ಪೂರೈಸುವುದು ಮತ್ತು ಗುತ್ತಿಗೆ ಪಡೆದುಕೊಳ್ಳುವುದರ ಮೂಲಕ ಭಾರತ ಲಾಭ ಮಾಡಿಕೊಳ್ಳಲು ಈಗ ಸಾಧ್ಯವಾಗಲಿದೆ.ಈಗಾಗಲೇ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳ ಮಾರುಕಟ್ಟೆಗೆ ಚೀನಾದ ಸರಕುಗಳು ಪ್ರವೇಶ ಮಾಡಿದ್ದರೂ, ಇತರ ಹಲವಾರು ದೇಶಗಳಿಗೂ ತಮ್ಮ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ವಿಸ್ತರಿಸಲು ಸಾಕಷ್ಟು ಅವಕಾಶಗಳು ಇದ್ದೇ ಇವೆ.

ಯೂರೋಪ್‌ನಲ್ಲಿ ಸರಕುಗಳ ಉತ್ಪಾದನಾ ವೆಚ್ಚ ದುಬಾರಿ ಆಗಿರುವುದರಿಂದ ಅಲ್ಲಿನ ಉದ್ಯಮಿಗಳು ಪೂರ್ವದ ದೇಶಗಳತ್ತ ದೃಷ್ಟಿ ಹರಿಸುತ್ತಿದ್ದಾರೆ.ಉದ್ಯಮಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿಯೂ  ಜಂಟಿ ಯೋಜನೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವರ್ಗಾವಣೆ ಮೂಲಕ ಹೊಸ  ಅವಕಾಶಗಳ ಹುಡುಕಾಟದಲ್ಲಿ ಇದ್ದಾರೆ. ನನಗನಿಸುವ ಮಟ್ಟಿಗೆ ಇಂತಹ ಅವಕಾಶ ಈ ಹಿಂದೆ ಒದಗಿ ಬಂದಿರಲಿಲ್ಲ.ಯೂರೋಪ್‌ನಲ್ಲಿ ಹೊಸದಾಗಿ ಉದ್ಯಮ ವಹಿವಾಟು ಆರಂಭಿಸಲು ಮತ್ತು ಪಾಲುದಾರಿಕೆಯಡಿ ವಹಿವಾಟು ವಿಸ್ತರಿಸಲು ಈಗ ಹೊಸ, ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.ನಾನು ಇಳಿದ ಹೋಟೆಲ್‌ನಲ್ಲಿ ಓಡಾಡುವಾಗ, ಅತಿಥಿಗಳನ್ನು ಸ್ವಾಗತಿಸುವ ವಿಭಾಗದಲ್ಲಿ ಕಾರ್ಯನಿರ್ವಹಿಸುವ  ವ್ಯಕ್ತಿಯೊಬ್ಬ ಮಾತಿಗೆ ಸಿಕ್ಕ. ಇದಕ್ಕೂ ಮೊದಲು ಆತ ಎಲೆಕ್ಟ್ರಾನಿಕ್ಸ್‌ಗಳ ವಹಿವಾಟಿನಲ್ಲಿ ಯಶಸ್ವಿ ಉದ್ಯಮಿ ಆಗಿದ್ದ ಎನ್ನುವುದು ಆತನ ಮಾತಿನಿಂದ ತಿಳಿದು ಬಂದಿತು.ಹತ್ತು ವರ್ಷಗಳ ಕಾಲ ಇಂತಹ ವಹಿವಾಟನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಆತ, ವಹಿವಾಟಿನ ಉದ್ದೇಶಕ್ಕೆ  ಭಾರತಕ್ಕೂ ಭೇಟಿ ನೀಡಿದ್ದ. ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳು ಸಾಲದ ಸುಳಿಗೆ ಸಿಲುಕಿದ್ದರಿಂದ  ಆತ ತನ್ನ ವಹಿವಾಟನ್ನೇ ಮುಚ್ಚುವ ಅನಿವಾರ್ಯತೆ ಎದುರಾಗಿತ್ತು. ಜೀವನೋಪಾಯಕ್ಕೆ ಆತ ಸ್ವಂತ ಉದ್ದಿಮೆ ತ್ಯಜಿಸಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ.ತನ್ನ ಬದುಕನ್ನು ಯಾವುದೇ ತೊಂದರೆ ಇಲ್ಲದೇ ಸುಗಮವಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗಿರುವ  ಬಗ್ಗೆ ಆತನಲ್ಲಿ ಸಂತೃಪ್ತ ಭಾವ ಇತ್ತು. ಇದು ತನ್ನ ಅದೃಷ್ಟ ಎಂದೇ ಆತ ಪರಿಗಣಿಸಿದ್ದ. ತನ್ನ ಈ ಮೊದಲಿನ ಉದ್ದಿಮೆಯಲ್ಲಿ ಕೆಲಸಕ್ಕೆ ಇದ್ದವರು ಕೆಲಸ ಕಳೆದುಕೊಂಡು, ಜೀವನ ನಡೆಸಲು ಸೂಕ್ತ ಉದ್ಯೋಗವೂ ಇಲ್ಲದೇ ಪರಿತಪಿಸುವುದನ್ನೂ ಆತ ದುಗುಡದಿಂದಲೇ ಹೇಳಿಕೊಂಡ.ಅನೇಕರು ನಗರಗಳಲ್ಲಿ ಜೀವನ ಸಾಗಿಸುವುದೂ ದುಸ್ತರವಾಗಿ ಪಾಲಕರ ಜತೆ ಇರಲು ಮರಳಿ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ ಎಂದೂ ಆತ ನೋವು ತೋಡಿಕೊಂಡ.

ನಗರದಲ್ಲಿನ ಸರ್ವ ಸರಕು ಸರಣಿ ಮಳಿಗೆಗಳು (ಮಾಲ್) ಸರಕುಗಳಿಂದ ಭರ್ತಿಯಾಗಿರುವುದೂ ನನ್ನ ಅನುಭವಕ್ಕೆ ಬಂದಿತು. ಎಲ್ಲ ಸಣ್ಣ ಮತ್ತು ದೊಡ್ಡ ಮಳಿಗೆಗಳಲ್ಲಿ ಭಾರಿ ರಿಯಾಯ್ತಿ ಕಡಿತದ ಕೊಡುಗೆ ಇತ್ತು.

 

ನಾನು ಭೇಟಿ ನೀಡಿದ ಅಂಗಡಿ -ಮಳಿಗೆಗಳಲ್ಲೆಲ್ಲ ಬೆಲೆ ಕಡಿತದ ಆಮಿಷ ಎದುರುಗೊಳ್ಳುತ್ತಿತ್ತು. ಆದರೆ ಆಟೊಮೊಬೈಲ್ ಷೋರೂಂಗಳು ಮಾತ್ರ ಬಾಗಿಲು ಹಾಕಿದ್ದವು. ದೊಡ್ಡ ಪ್ರಮಾಣದ ಖರೀದಿಗೆ ಜನರು ಇನ್ನೂ ಮನಸ್ಸು ಮಾಡಿಲ್ಲದಿರುವುದು ಮತ್ತು ಬಿಕ್ಕಟ್ಟಿನ ಆತಂಕ ಇನ್ನೂ ದೂರವಾಗಿರದಿರುವುದು  ಇದರಿಂದ ವೇದ್ಯವಾಗುತ್ತದೆ.ಈ ಎಲ್ಲ ವಿದ್ಯಮಾನಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಉಳಿತಾಯ ಮತ್ತು ವೆಚ್ಚದ ಪ್ರವೃತ್ತಿ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಿರುವುದನ್ನು ಸೂಚಿಸುತ್ತವೆ.

ಯೂರೋಪ್ ದೇಶಗಳು ಅನಗತ್ಯ ವೆಚ್ಚಕ್ಕೆ ಕಡಿವಾಣ ವಿಧಿಸುತ್ತಿದ್ದರೆ,  ನಮ್ಮಲ್ಲಿನ ರಾಜಕಾರಣಿಗಳು ಸಬ್ಸಿಡಿಗಳನ್ನೇ ತಮ್ಮ ಚುನಾವಣಾ ರಾಜಕೀಯಕ್ಕೆ ನೆಚ್ಚಿಕೊಂಡಿರುವುದನ್ನು ಪದೇ, ಪದೇ ಸಾಬೀತುಪಡಿಸುತ್ತಿದ್ದಾರೆ.

ಈಗ ಯೂರೋಪ್ ದೇಶಗಳಲ್ಲಿ ಕಂಡು ಬರುತ್ತಿರುವ ಪರಿಸ್ಥಿತಿಗೆ ವ್ಯತಿರಿಕ್ತವಾದ ಬೆಳವಣಿಗೆಗಳೇ ನಮ್ಮಲ್ಲಿ ಕಂಡು ಬರುತ್ತಿವೆ.ಈ ಸಬ್ಸಿಡಿಗಳು ಮತ್ತು ಹಲವಾರು ರಿಯಾಯಿತಿಗಳನ್ನು ದಾನವಾಗಿ ಪಡೆಯುವುದು ತಮ್ಮ ಹಕ್ಕು ಎನ್ನುವ ಭಾವನೆ ಜನರಲ್ಲಿ ಈಗ ಮನೆ ಮಾಡಿದೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಬೇಕಾಬಿಟ್ಟಿಯಾಗಿ  ಹಮ್ಮಿಕೊಂಡಿದ್ದರಿಂದಲೇ ಆರ್ಥಿಕವಾಗಿ ಪ್ರಗತಿಪಥದಲ್ಲಿದ್ದ ಅನೇಕ ದೇಶಗಳು ಹಣಕಾಸು ಬಿಕ್ಕಟ್ಟಿನ ಪ್ರಪಾತದ ಅಂಚಿಗೆ ತಲುಪುವಂತಾಗಿತ್ತು.ಕೆಲ ದಿನಗಳ ಹಿಂದೆಯಷ್ಟೇ ಇದ್ದ ಒಳ್ಳೆಯ ದಿನಗಳು ಈಗ ಬರೀ ಬಿಸಿಲ್ಗುದುರೆಯಷ್ಟೆ. ಮಿತವ್ಯಯದ ಕ್ರಮಗಳು ಕಹಿ ಗುಳಿಗೆಗಳು. ಅವುಗಳನ್ನು ಸಹಿಸಿಕೊಳ್ಳಲು  ಜನ ಸಾಮಾನ್ಯರಿಗೆಆಗುತ್ತಿಲ್ಲ ಎನ್ನುವುದು ಯೂರೋಪ್‌ನ ಬಹುತೇಕ ಸರ್ಕಾರಗಳಿಗೆ ಅನುಭವಕ್ಕೆ ಬರುತ್ತಿದೆ. ಸುಲಭವಾಗಿ ದೊರೆಯುತ್ತಿದ್ದ ಬ್ಯಾಂಕ್ ಸಾಲಗಳು ಅಂತಿಮವಾಗಿ ತಮಗೇ ಮುಳುವಾಗುತ್ತಿರುವುದೂ ಅವುಗಳ ಅನುಭವಕ್ಕೆ ಬರುತ್ತಿದೆ. ದೀರ್ಘಾವಧಿಯಲ್ಲಿ ಉದ್ಭವಿಸುವ ಗೊಂದಲ / ಆರ್ಥಿಕ ಅವ್ಯವಸ್ಥೆಗಳಿಗೆ ಬದಲಾಗಿ ಸರ್ಕಾರದ ಖರ್ಚು - ವೆಚ್ಚಗಳಲ್ಲಿ ಹಣಕಾಸು ಶಿಸ್ತು ರೂಢಿಸಿಕೊಳ್ಳುವುದೇ ಹೆಚ್ಚು ಪ್ರಯೋಜನಕಾರಿ ಎನ್ನುವ ಸತ್ಯ ಅವುಗಳಿಗೆ ಮನವರಿಕೆ ಆಗುತ್ತಿದೆ.ನಮ್ಮಲ್ಲೂ ಕೇಂದ್ರ ಸರ್ಕಾರ ಹಲವಾರು ಸಬ್ಸಿಡಿಗಳಿಗೆ ಕಡಿವಾಣ ಹಾಕುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಹಣಕಾಸು ಶಿಸ್ತಿನತ್ತ ಹೆಜ್ಜೆ ಹಾಕುತ್ತಿದೆ ಎಂದೇ ನನಗೆ ಭಾಸವಾಗುತ್ತದೆ.ಐರೋಪ್ಯ ಒಕ್ಕೂಟದಲ್ಲಿನ ಬೆಳವಣಿಗೆಗಳನ್ನೆಲ್ಲ ಇಡೀ ವಿಶ್ವ ಎಚ್ಚರಿಕೆಯಿಂದ ಗಮನಿಸುತ್ತಿದೆ. ಭಾರತವೂ ಅಲ್ಲಿನ ವಿದ್ಯಮಾನಗಳಿಂದ, ಅನುಭವಗಳಿಂದ ಹಲವಾರು ಪಾಠಗಳನ್ನು ಕಲಿಯಬೇಕಾಗಿದೆ. ಒದಗಿ ಬರುತ್ತಿರುವ ಅವಕಾಶಗಳನ್ನೂ ಬಾಚಿಕೊಳ್ಳಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry