ಐರೋಪ್ಯ ಒಕ್ಕೂಟ: ಕೊನೆ ಇಲ್ಲದ ಸಂಕಟ

7

ಐರೋಪ್ಯ ಒಕ್ಕೂಟ: ಕೊನೆ ಇಲ್ಲದ ಸಂಕಟ

ಡಿ. ಮರಳೀಧರ
Published:
Updated:

ಯೂರೋಪ್ ಒಕ್ಕೂಟದಲ್ಲಿನ ಗೊಂದಲ ಮತ್ತು ಅನಿಶ್ಚಿತತೆಗಳು ಸದ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಕಳೆದ ವಾರ ಘಟಿಸಿದ ಬೆಳವಣಿಗೆಗಳು ಸಾಕಷ್ಟು ಏರಿಳಿತದಿಂದ ಕೂಡಿದ್ದವು. ಗ್ರೀಕ್‌ನ ಸಾಲದ ಬಿಕ್ಕಟ್ಟಿಗೆ ಸಂಬಂಧಿಸಿದ ಯಾರೊಬ್ಬರ ನಿಯಂತ್ರಣಕ್ಕೆ ಸಿಗದ ವಿದ್ಯಮಾನಗಳು ಈ ಗೊಂದಲಗಳಿಗೆಲ್ಲ ಮೂಲ ಕಾರಣ. ಬಿಕ್ಕಟ್ಟು ಬಗೆಹರಿಸಬೇಕಾದ ಮಹತ್ವದ ಕಾಲ ಘಟ್ಟದಲ್ಲಿ, ಒಕ್ಕೂಟದ ಹಿರಿಯಣ್ಣರೆಲ್ಲ ಈ ಬಿಕ್ಕಟ್ಟು ಮುಂದೂಡಲು  ಯತ್ನಿಸಿದ್ದರು. ಒಂದು ಹಂತದಲ್ಲಿ ಬಿಕ್ಕಟ್ಟು ಬಗೆಹರಿಯಿತು ಎನ್ನುವ ಭಾವನೆಯೂ ಬಲವಾಗಿ ಮೂಡಿತ್ತು. ಹೀಗಾಗಿ ವಿಶ್ವದಾದ್ಯಂತ ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದವು. ಬಂಡವಾಳ ಹೂಡಿಕೆದಾರರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಷೇರು ಬೆಲೆಗಳೂ ಏರಿಕೆ ಕಂಡಿದ್ದವು. ದಿವಾಳಿ ಹಂತಕ್ಕೆ ತಲುಪಿರುವ ಗ್ರೀಕ್‌ನ ಆರ್ಥಿಕ ಬಿಕ್ಕಟ್ಟು ಬಗೆಹರಿಸಲು ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮತ್ತು ಹಣಕಾಸಿನ ನೆರವು ಕಡಿತ ಕ್ರಮಗಳನ್ನು ಕೈಗೊಳ್ಳಲು ಯೂರೋಪ್ ಬ್ಯಾಂಕ್‌ಗಳಿಗೂ ಸೂಚಿಸಲಾಗಿತ್ತು.ಆದರೆ, ಈ ನೆಮ್ಮದಿಯ ಭ್ರಾಂತಿಯು ಬಹಳ ದಿನ ಉಳಿಯಲಿಲ್ಲ. ಹಣಕಾಸಿನ ನೆರವಿನ ಕೊಡುಗೆ  ಘೋಷಣೆಯಾಗಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಮುನ್ನವೇ, `ಈ ನೆರವಿನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ದೇಶದ ಪ್ರಜೆಗಳ ಜನಾಭಿಪ್ರಾಯ ಸಂಗ್ರಹಣೆಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ~ ಎಂದು ಗ್ರೀಕ್ ಪ್ರಕಟಿಸಿ ಆಘಾತ ನೀಡಿತ್ತು. ಈ ಅನಿರೀಕ್ಷಿತ ಬೆಳವಣಿಗೆಯು ಜಾಗತಿಕ ಹಣಕಾಸು ಪರಿಸ್ಥಿತಿಗೆ ನಿಜವಾಗಿಯೂ ಆಘಾತಕಾರಿಯಾಗಿತ್ತು. ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯೂ ನಿರೀಕ್ಷಿತ ಮಟ್ಟದಲ್ಲಿಯೇ ಇತ್ತು. ಷೇರು ಮಾರುಕಟ್ಟೆಯಲ್ಲಿನ ಉತ್ಸಾಹವು ತಕ್ಷಣಕ್ಕೆ ಕೊಚ್ಚಿಕೊಂಡು ಹೋಗಿತ್ತು, `ಏಕರೂಪದ ಯೂರೊ~ ದೇಶಗಳ ಮುಖಂಡರು ಗ್ರೀಕ್‌ನ ಈ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಹಾರ ಕೊಡುಗೆ ಒಪ್ಪಿಕೊಳ್ಳುವ ಈ ಹಿಂದಿನ ನಿಲುವಿಗೆ ಗ್ರೀಕ್ ಬದ್ಧವಾಗಿರುವಂತೆ ಮಾಡಲು ತೀವ್ರ ಚಟುವಟಿಕೆಗಳು ಮತ್ತು ಸಂಧಾನ ಮಾತುಕತೆ, ಮನವೊಲಿಕೆ ಯತ್ನಗಳೂ ನಡೆದವು. ಅನಿರೀಕ್ಷಿತವಾಗಿ ಉದ್ಭವವಾದ ಈ ಹೊಸ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಪರಿಹರಿಸಲು ನಡೆದ ಹೊಸ ಪ್ರಯತ್ನಗಳೂ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಗ್ರೀಕ್ ದೇಶವು ವಿಶ್ವದ ಗಮನ ಸೆಳೆಯುವಂತಾಗಲು ಅದು ಯೂರೋಪ್ ಒಕ್ಕೂಟದ ಸದಸ್ಯ ದೇಶವಾಗಿರುವುದೇ ಮುಖ್ಯ ಕಾರಣ. ಗ್ರೀಕ್‌ನಷ್ಟೇ ಗಾತ್ರ ಮತ್ತು ವಿಸ್ತೀರ್ಣ ಹೊಂದಿದ ಇತರ ಯಾವುದೇ ದೇಶವು  ಜಾಗತಿಕ ಅರ್ಥ ವ್ಯವಸ್ಥೆ ಮೇಲೆ ಇಷ್ಟು ಗಂಭೀರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆಗಳು ಇರುವ ಬಗ್ಗೆ ನನಗೆ ಅನುಮಾನಗಳಿವೆ. ಫ್ರಾನ್ಸ್‌ನ ಕಾನ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ `ಜಿ-20~ ದೇಶಗಳ ಶೃಂಗಸಭೆಯಲ್ಲಿಯೂ ಗ್ರೀಕ್‌ಗೆ ಸಂಬಂಧಿಸಿದ ವಿದ್ಯಮಾನಗಳೇ ಪ್ರಮುಖವಾಗಿ ಚರ್ಚೆಗೆ ಒಳಗಾಗಿ ಇತರ ಮಹತ್ವದ ಸಂಗತಿಗಳು ನೇಪಥ್ಯಕ್ಕೆ ಸರಿದಿದ್ದವು. ಸಾಕಷ್ಟು ಚರ್ಚೆ, ಸಂಧಾನ ಮಾತುಕತೆಗಳು ನಡೆದರೂ ಗ್ರೀಕ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಶೃಂಗಸಭೆಯೂ ವಿಫಲಗೊಂಡಿತು. `ಗ್ರೀಕ್ ಬಿಕ್ಕಟ್ಟಿನ ಕಾರಣಕ್ಕೆ ಶೃಂಗಸಭೆಯಲ್ಲಿ ಹಲವಾರು ಮಹತ್ವದ ವಿಷಯಗಳನ್ನು ಚರ್ಚಿಸಲು ಸಾಧ್ಯವಾಗಲೇ ಇಲ್ಲ~ ಎಂದು ವಿಶ್ವದ ಹಲವಾರು ಮುಖಂಡರು ಈ ಸಂದರ್ಭದಲ್ಲಿ ತಮ್ಮ ಸಿಟ್ಟು ಮತ್ತು ಹತಾಶೆಗಳನ್ನೂ ಕೂಡ ವ್ಯಕ್ತಪಡಿಸಿದರು. ಗ್ರೀಕ್‌ಗೆ ನೆರವಾಗಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ಪ್ರಕಟಿಸಿದ ಹಣಕಾಸು ನೆರವಿಗೆ `ಜಿ-20~ ದೇಶಗಳು ಕೈಜೋಡಿಸುವ ಬಗ್ಗೆ ಬದ್ಧತೆ ಪ್ರಕಟಿಸಬೇಕು ಎನ್ನುವುದು ಶೃಂಗಸಭೆಯ ನಿರೀಕ್ಷೆಯಾಗಿತ್ತು. ಸದಸ್ಯ ದೇಶಗಳು ನೀಡುವ ನೆರವನ್ನು ಸಾಲ ಮತ್ತು ಪರಿಹಾರ ನೆರವಿಗೆ ಬಳಸಿಕೊಳ್ಳಲು `ಜಿ-20~ ಗುಂಪು ನಿರ್ಧರಿಸಿತ್ತು. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಗ್ರೀಕ್, ಯೂರೋಪ್ ಒಕ್ಕೂಟದಲ್ಲಿ ಮುಂದುವರೆಯುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆಯೂ ನಮಗೆ ಇಲ್ಲಿ ಎದುರಾಗುತ್ತದೆ. ಇಂತಹ ಸಾಧ್ಯತೆ ಕುರಿತ ಅಪಸ್ವರವು ಈಗ ದೊಡ್ಡ ಕೂಗಾಗಿ ಪರಿವರ್ತನೆಗೊಂಡಿದೆ.  ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಟೆಲಿವಿಷನ್ ಚರ್ಚಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಫ್ರಾನ್ಸ್ ಮತ್ತು ಜರ್ಮನಿಯ ಹಲವಾರು ವೀಕ್ಷಕರು, `ಗ್ರೀಕ್ ಪರಿಹಾರ ಕೊಡುಗೆ~ ಬಗ್ಗೆ ದೂರವಾಣಿ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರೀಕ್‌ನ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವುದನ್ನು ತಡೆಯಲು ಅದನ್ನು ಐರೋಪ್ಯ ಒಕ್ಕೂಟದಿಂದ ಬೇರ್ಪಡಿಸಬೇಕು ಎಂದು ವೀಕ್ಷಕರೊಬ್ಬರು ತೀವ್ರವಾಗಿ ಒತ್ತಾಯಿಸಿದ್ದರು. ಇಂತಹ ಕಠಿಣ ನಿರ್ಧಾರಕ್ಕೆ ಬರುವುದಕ್ಕೆ ಯೂರೋಪ್‌ನ ಅನೇಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರೀಕ್‌ನ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಬಹುದಾಗಿದೆ. ಜತೆಗೆ, ಅದಕ್ಕೆ ಬೇಕಾದ ಹಣಕಾಸು ಸಂಪನ್ಮೂಲ ತಮ್ಮ ಬಳಿ ಇದೆ ಎನ್ನುವುದು ಅವರ ಧೋರಣೆಯಾಗಿದೆ. ಐರೋಪ್ಯ ಒಕ್ಕೂಟದಲ್ಲಿ ಉದ್ಭವಿಸಿರುವ ಈ ಆರ್ಥಿಕ ಮತ್ತು ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸಾಮಾನ್ಯ ಕರೆನ್ಸಿಯಾಗಿರುವ `ಯೂರೊ~ ಸಾಕಷ್ಟು ಸದೃಢವಾಗಿದೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. 1990ರ ದಶಕದಲ್ಲಿ ಪ್ರತಿಸ್ಪರ್ಧಿ ಅಮೆರಿಕದ ಬಲಿಷ್ಠ  ಕರೆನ್ಸಿ ಡಾಲರ್ ಎದುರು `ಯೂರೊ~ವನ್ನು ಸಾಮಾನ್ಯ ಕರೆನ್ಸಿಯಾಗಿ ಪರಿಗಣಿಸಲಾಗಿತ್ತು. ಇಂತಹ ನಿರ್ಧಾರದ ಉದ್ದೇಶ ಸ್ವಾಗತಾರ್ಹವಾಗಿತ್ತು. ಆದರೆ, ಈ ಯೋಜನೆಯು ನಿರೀಕ್ಷಿಸಿದ ಮಟ್ಟದಲ್ಲಿ ಕಾರ್ಯಗತಗೊಳ್ಳಲಿಲ್ಲ. ಯೂರೋಪ್ ಒಕ್ಕೂಟದ ಅರ್ಥ ವ್ಯವಸ್ಥೆಯು ಸಾಧಾರಣ ಮಟ್ಟದ ಅಭಿವೃದ್ಧಿ ದರದ ಜತೆಗೆ ಗೊತ್ತುಗುರಿ ಇಲ್ಲದೇ ಸಾಗಿತ್ತು. ಒಕ್ಕೂಟದ ಸದಸ್ಯ ದೇಶಗಳು ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ಭಾರಿ ಪ್ರಮಾಣದಲ್ಲಿ ಸಾಲ ಸಂಗ್ರಹಿಸಲು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದವು. ಅವುಗಳ ಉದ್ದೇಶ  ಒಳ್ಳೆಯದೇ ಆಗಿತ್ತು. ಆದರೆ, ತುಳಿದಿದ್ದ ಮಾರ್ಗ ಮಾತ್ರ ಅಪಾಯಕಾರಿಯಾಗಿತ್ತು. ಸುಲಭವಾಗಿ ಸಾಲ ಸಿಗುವಾಗ ಎಲ್ಲವೂ ಸರಿಯಾಗಿತ್ತು, ಜತೆಗೆ ಎಲ್ಲರೂ ಸಂತೃಪ್ತರಾಗಿದ್ದರು. ವಿವಿಧ ದೇಶಗಳ ಈ ಹಿಂದಿನ ಕರೆನ್ಸಿಗಳಿಗೆ ಹೋಲಿಸಿದರೆ ಏಕರೂಪದ ಕರೆನ್ಸಿಯಾಗಿದ್ದ `ಯೂರೊ~ ಬಲಿಷ್ಠವಾಗಿದ್ದರಿಂದ ಸಾಲ ಮತ್ತು ಸಾಲದ ಬಳಕೆ ಉದ್ದೇಶಗಳು ನಿರೀಕ್ಷಿತ ರೀತಿಯಲ್ಲಿಯೇ ಸಾಗಿದ್ದವು. ಆದರೆ, ಇಂತಹ ಕಾರ್ಯಕ್ರಮಗಳ ಹಿಂದೆ ಆರ್ಥಿಕ ಅಶಿಸ್ತು ಇತ್ತು. ಆರ್ಥಿಕ ಅಶಿಸ್ತಿನ ಹಾದಿ ತುಳಿದದ್ದೇ ಇಂದಿನ ಹಣಕಾಸಿನ ಬಿಕ್ಕಟ್ಟಿನ ಮೂಲ ಎನ್ನುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಮುಂದೊಂದು ದಿನ ಈ ಸಮಸ್ಯೆ ದೊಡ್ಡ ಬಿಕ್ಕಟ್ಟಿಗೆ ಹಾದಿ ಮಾಡಿಕೊಡಲಿದೆ ಎನ್ನುವುದನ್ನು ಐರೋಪ್ಯ ಒಕ್ಕೂಟದ ಬಲಿಷ್ಠ ಆರ್ಥಿಕ ದೇಶಗಳು ಊಹಿಸದೇ ಹೋದವು. ಬಿಕ್ಕಟ್ಟು ತಡೆಗಟ್ಟಲು ಮತ್ತು ನಿರ್ವಹಣೆಗೆ ಕೈಗೊಂಡ ಅರೆ ಮನಸ್ಸಿನ ಕ್ರಮಗಳು ಯಾವುದೇ ಫಲ ನೀಡದೇ ಹೋದವು. ಹಣಕಾಸಿನ ಬಿಕ್ಕಟ್ಟು ಬಗೆಹರಿಸಲು ಒಕ್ಕೂಟದ ಸದಸ್ಯ ದೇಶಗಳ ಆರ್ಥಿಕ ಸಂಪನ್ಮೂಲ ಸಾಕಾಗುವುದಿಲ್ಲ ಎನ್ನುವುದೂ ಆನಂತರವಷ್ಟೇ ಮನವರಿಕೆಯಾಯಿತು.ಈ ಆರ್ಥಿಕ ಅಸ್ತವ್ಯಸ್ತತೆಯನ್ನು ಯಾರು ಸರಿಪಡಿಸಬಲ್ಲರು ಮತ್ತು ಈ ಬಿಕ್ಕಟ್ಟಿನಿಂದ ಒಕ್ಕೂಟವನ್ನು ಪಾರು ಮಾಡುವ ಸಾಮರ್ಥ್ಯ ಯಾವ ದೇಶಕ್ಕೆ ಇದೆ ಎನ್ನುವ ಪ್ರಶ್ನೆಗಳೂ ಇಲ್ಲಿ ಉದ್ಭವವಾಗುತ್ತವೆ. ಒಂದು ಲಕ್ಷ ಕೋಟಿ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಮೀಸಲು ಹೊಂದಿರುವ ಚೀನಾ, ಈ ಬಿಕ್ಕಟ್ಟು ಬಗೆಹರಿಸಲು ಆಸಕ್ತಿ ವಹಿಸುವುದೇ ಅಥವಾ `ಜಿ-20~ ಗುಂಪಿನ ಇತರ ದೇಶಗಳು ನೆರವಿನ ಹಸ್ತ ಚಾಚಲಿವೆಯೇ. ಇದುವರೆಗೂ ಇಂತಹ ಯಾವುದೇ ಸಾಧ್ಯತೆಗಳು ಸ್ಪಷ್ಟವಾಗಿಲ್ಲ.   ತೀವ್ರ ಸ್ವರೂಪದ ಸಾಲದ ಸುಳಿಗೆ ಸಿಲುಕಿದ್ದರೂ, ಐರೋಪ್ಯ ಒಕ್ಕೂಟವು ಈಗಲೂ ಧೈರ್ಯದಿಂದಲೇ ಇದೆ, ಬಿಕ್ಕಟ್ಟು ಬಗೆಹರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. `ಆದದ್ದು ಆಗಿ ಹೋಯಿತು. ಈಗ ತಪ್ಪನ್ನು ಸರಿಪಡಿಸಲು ಯತ್ನಿಸೋಣ~ ಎನ್ನುವುದು ಒಕ್ಕೂಟದ ಸದಸ್ಯ ದೇಶಗಳ ನಿಲುವಾಗಿದೆ. ಹಣ ಪಾವತಿಸದ ಸಮಸ್ಯೆಗೆ ಅರ್ಥಶಾಸ್ತ್ರಜ್ಞರು ಒಂದು ಪರಿಹಾರ ಸೂತ್ರ ಸೂಚಿಸಿದ್ದಾರೆ. ಬಾಂಡ್‌ಗಳ ಮುಖ ಬೆಲೆಯ ಅರ್ಧದಷ್ಟು ಮೊತ್ತವನ್ನು ಕೈಬಿಡುವುದರಿಂದ ಹಣಕಾಸಿನ ಬಿಕ್ಕಟ್ಟಿನ ತೀವ್ರತೆಯನ್ನು ಕೆಲ ಮಟ್ಟಿಗೆ ತಗ್ಗಿಸಬಹುದು ಎನ್ನುವುದು ಅವರ ಸಲಹೆಯಾಗಿದೆ. ಬ್ಯಾಂಕ್‌ಗಳ ಪಾಲಿಗೆ  ಬೇರೆ ಆಯ್ಕೆಗಳೇ ಇಲ್ಲದಿರುವಾಗ ಇಂತಹ ಸಲಹೆ ಒಪ್ಪಿಕೊಳ್ಳದೇ ಅನ್ಯ ಮಾರ್ಗವೇ ಇಲ್ಲ. ಇದರಿಂದ ಅವುಗಳ ಹಣಕಾಸು ಸದೃಢತೆ ಕಡಿಮೆಯಾಗಲಿದ್ದು, ಸಾಲಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಐರೋಪ್ಯ ಒಕ್ಕೂಟದಲ್ಲಿನ ಈ ಸಾಲದ ಬಿಕ್ಕಟ್ಟಿನ ಬಿರುಗಾಳಿ ಇತ್ತೀಚೆಗೆ ಜೋರಾಗಿ ಬೀಸುತ್ತಿರುವ ಸಂದರ್ಭದಲ್ಲಿಯೇ ನಾನು ಸ್ಪೇನ್, ಪೋರ್ಚುಗಲ್ ಮತ್ತು ಇಟಲಿಗೆ ಭೇಟಿ ನೀಡುವ ಅವಕಾಶ ಒದಗಿ ಬಂದಿತ್ತು. ಈ ಮೂರೂ ದೇಶಗಳಲ್ಲಿನ ಮೂಲ ಸೌಕರ್ಯಗಳು ಅತ್ಯುತ್ತಮವಾಗಿವೆ. ಅಲ್ಲಿನ ಅಭಿವೃದ್ಧಿಯ ಚಿತ್ರಣ ಕಂಡಾಗ, ಈ ದೇಶಗಳ ಹಣಕಾಸಿನ ಪರಿಸ್ಥಿತಿಯು ವಿಶ್ವದಾದ್ಯಂತ ತಲ್ಲಣ ಮೂಡಿಸುವಷ್ಟು ಪ್ರಮಾಣದಲ್ಲಿ ಹದಗೆಟ್ಟಿರುವುದು ಕಂಡು ಅಚ್ಚರಿ ಮೂಡಿಸುತ್ತದೆ.  ಜನರಲ್ಲಿ ಮನೆ ಮಾಡಿರುವ ಹತಾಶೆ ಪ್ರವೃತ್ತಿಯನ್ನು ಯಾರೇ ಆದರೂ ಕಾಣಬಹುದು. ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ ನಿರುದ್ಯೋಗವು ಶೇ 25 ರಿಂದ ಶೇ 30ರಷ್ಟಿದೆ. ನಾನು ಭೇಟಿ ಮಾಡಿದ ಬಹುತೇಕ ಯುವಕ - ಯುವತಿಯರಲ್ಲಿ ಬಹುಸಂಖ್ಯಾತರು ಉದ್ಯೋಗ ಇಲ್ಲದವರಾಗಿದ್ದರು, ಇಲ್ಲವೇ ಅರೆಕಾಲಿಕ ಉದ್ಯೋಗದಲ್ಲಿದ್ದರು. ಅರೆಕಾಲಿಕ ಉದ್ಯೋಗ ಅವಕಾಶಗಳೂ ಸೀಮಿತ ಸಂಖ್ಯೆಯಲ್ಲಿವೆ. ಉದ್ಯೋಗ ಅವಕಾಶಗಳಿಗೆ ಸಂಬಂಧಿಸಿದಂತೆಯೂ ಈ ದೇಶಗಳಲ್ಲಿ ಸಾಕಷ್ಟು ಗೊಂದಲದ ವಾತಾವರಣ ಇರುವುದು ನನ್ನ ಅನುಭವಕ್ಕೆ ಬಂದಿತ್ತು. ಸರಕು ಮತ್ತು ಸೇವೆಗಳಿಗೆ ತುಂಬ ಕಡಿಮೆ ಪ್ರಮಾಣದ ಬೇಡಿಕೆ ಇರುವ ಹಿನ್ನೆಲೆಯಲ್ಲಿ, ಅನೇಕ ಕೈಗಾರಿಕೆಗಳು ವಾರದಲ್ಲಿ ಕೇವಲ ಮೂರು ಅಥವಾ ನಾಲ್ಕು ದಿನಗಳ ಕಾಲ ಮಾತ್ರ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿವೆ. ಪೋರ್ಚುಗಲ್‌ನಲ್ಲಿನ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಇಟಲಿಯಲ್ಲಿನ ವಾಣಿಜ್ಯ ವಹಿವಾಟು ಪರಿಸ್ಥಿತಿಯೂ ಸಾಕಷ್ಟು ವಿಷಮಿಸಿದೆ. ಬ್ಯಾಂಕ್‌ಗಳು ಸಾಲ ನೀಡುವ ಸ್ಥಿತಿಯಲ್ಲಿಯೇ ಇಲ್ಲ. ವಿದ್ಯುತ್ ಮತ್ತು ಇತರ ಸೇವೆಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಲೇ ಇದೆ. ಅನೇಕ ಕೈಗಾರಿಕೆಗಳು ಕಡಿಮೆ ವೆಚ್ಚದ ದೇಶಗಳಿಗೆ ಸ್ಥಳಾಂತರಗೊಳ್ಳಲು ಇಲ್ಲವೇ ಬಾಗಿಲು ಹಾಕುವ ಆಲೋಚನೆ ಮಾಡುತ್ತಿವೆ.  ಈ ದೇಶಗಳಲ್ಲಿನ ಒಟ್ಟಾರೆ ಹಣಕಾಸು ಪರಿಸ್ಥಿತಿ ತೀವ್ರ ನಿರಾಶಾದಾಯಕವಾಗಿದೆ. ಆದರೆ, ಯಾವೊಬ್ಬ ಉದ್ಯಮಿಯು `ಯೂರೊ~ ಮೊದಲಿನ ದಿನಗಳಿಗೆ ಮರಳಿ ಹೋಗಲು ಇಷ್ಟಪಡುವುದಿಲ್ಲ. ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರ ಸದಸ್ಯ ದೇಶಗಳಿಗೆ ಮತ್ತು ವೈಯಕ್ತಿಕವಾಗಿ ಉದ್ಯಮಿಗಳಿಗೆ ಆಗಿರುವ  ಪ್ರಯೋಜನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. `ಸದ್ಯದ ಈ ಆರ್ಥಿಕ ಬಿಕ್ಕಟ್ಟಿಗೆ ಸರ್ಕಾರಗಳೇ ಸಂಪೂರ್ಣ ಹೊಣೆಯಾಗಿವೆ~ ಎಂದೂ ಅವರು ದೂಷಿಸುತ್ತಾರೆ.  ಯೂರೋಪ್ ಒಕ್ಕೂಟದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿನ ಬಗ್ಗೆ ನನ್ನ ಅಂದಾಜು ಸರಳವಾಗಿದೆ. ಈ ದೇಶಗಳು ತಮ್ಮ ಹಾಸಿಗೆಗಿಂತ ಹೆಚ್ಚು ಉದ್ದಕ್ಕೆ ಕಾಲು ಚಾಚಿರುವುದೇ ಬಿಕ್ಕಟ್ಟಿಗೆ ಮುಖ್ಯ ಕಾರಣ. ನಾಗರಿಕರಿಗೆ ಗರಿಷ್ಠ ಗುಣಮಟ್ಟದ ಜೀವನ ಶೈಲಿ ಒದಗಿಸಲು ಎಗ್ಗಿಲ್ಲದೇ ಸಾಮಾಜಿಕ ವೆಚ್ಚ ಮಾಡಿವೆ. ಆರ್ಥಿಕ ವೃದ್ಧಿ ದರ ತುಂಬ ನಿಧಾನವಾಗಿರುವುದು ಮತ್ತು ಸರ್ಕಾರದ ವೆಚ್ಚಕ್ಕೆ ಅನುಗುಣವಾಗಿ ತೆರಿಗೆಗಳನ್ನು ಹೆಚ್ಚಿಸಿರಲಿಲ್ಲ.  ಕಠಿಣ ಹಣಕಾಸು ಕ್ರಮಗಳನ್ನು ಕೈಗೊಳ್ಳಲು ಮತ್ತು ಬಜೆಟ್ ಅನ್ನು ಸಮತೋಲನಗೊಳಿಸಲು ಸರ್ಕಾರಗಳು ಮುಂದಾಗಲಿಲ್ಲ. ಅದರ ಫಲಿತಾಂಶವನ್ನೇ ನಾವು ಈಗ ಕಾಣುತ್ತಿದ್ದೇವೆ.ಕಠಿಣ ಹಣಕಾಸು ಕ್ರಮಗಳನ್ನು ಕೈಗೊಳ್ಳದೇ, ಕೇವಲ ತಾತ್ಪೂರ್ತಿಕವಾಗಿ ತೇಪೆ ಹಚ್ಚುವ ಕ್ರಮಗಳಿಂದ ಯಾವುದೇ ಪುರುಷಾರ್ಥ ಸಾಧ್ಯವಾಗುವುದಿಲ್ಲ. ರಾಜಕೀಯ ಮುಖಂಡರು ಗೋಡೆ ಮೇಲಿನ ಸ್ಪಷ್ಟ ಬರಹವನ್ನು ಅರ್ಥೈಸಿಕೊಳ್ಳದಿರುವುದು ಕಂಡು ನಿಜಕ್ಕೂ ಅಚ್ಚರಿಯಾಗುತ್ತದೆ.

ನಿಮ್ಮ ಅನಿಸಿಕೆಗಳನ್ನು ತಿಳಿಸಿ: ((editpagefeedback@prajavani.co.in))

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry