ಭಾನುವಾರ, ಜೂನ್ 7, 2020
29 °C

ಒಂದು ಉತ್ತಮ ಫೋನ್

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಒಂದು ಉತ್ತಮ ಫೋನ್

ಯಾವುದೇ ಫೋನಿನ ಅಥವಾ ಗ್ಯಾಜೆಟ್‌ನ ಬಗ್ಗೆ ವಿಮರ್ಶೆ ಬರೆಯುವಾಗ ನಾವು ಗಮನಿಸ ಬೇಕಾದುದು ಅದು ನೀಡುವ ಬೆಲೆಗೆ ತಕ್ಕುದೇ ಎಂದು. ಆ ಮಟ್ಟಿಗೆ ಹೇಳುವುದಾದರೆ ಹೋನರ್‌ನವರ ಬಹುತೇಕ ಫೋನ್‌ಗಳು ನೀಡುವ ಬೆಲೆಗೆ ಉತ್ತಮ ಉತ್ಪನ್ನಗಳೇ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಹೋನರ್ ವ್ಯೂ 10 (Honor 10 View) ಎಂಬ ಸ್ಮಾರ್ಟ್‌ಫೋನನ್ನು.

ಎಲ್ಲ ಹೋನರ್ ಫೋನ್‌ಗಳಂತೆ ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಇದನ್ನು ಬಹುತೇಕ ಸುಮಾರು ಆರು ತಿಂಗಳುಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ ಹೋನರ್ 8 ಪ್ರೋದ ಉತ್ತರಾಧಿಕಾರಿ ಎನ್ನಬಹುದು. ಇದು 5.99 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ. ಇತ್ತೀಚೆಗೆ ಬರುತ್ತಿರುವ ಬಹುತೇಕ ಮೇಲ್ದರ್ಜೆ ಫೋನ್‌ಗಳಂತೆ ಇದು ಕೂಡ ಅಂಚು ರಹಿತ (bezelless) ಫೋನ್. ಅಂದರೆ ಇದರ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮ ಎಂದರ್ಥ. ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಲೋಹದ ದೇಹವಿದೆ ಹಾಗೂ ಇದರ ಹಿಂಭಾಗ ಸ್ವಲ್ಪ ನುಣುಪಾಗಿದೆ. ಗಾತ್ರ ದೊಡ್ಡದಾಗಿರುವುದರಿಂದ ಮತ್ತು ನುಣುಪಾಗಿರುವುದರಿಂದ ಕೈಯಿಂದ ಜಾರಿ ಬೀಳುವ ಭಯವಿದೆ. ಹಾಗೆ ಬೀಳಬಾರದು ಎಂದು ಅವರೇ ಒಂದು ಅಧಿಕ ಪ್ಲಾಸ್ಟಿಕ್ ಕವಚ ನೀಡಿದ್ದಾರೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ-ಸಿ ನಮೂನೆಯ ಕಿಂಡಿಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೊ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೊ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಬಳಸಲು ನೀವು ಯುಎಸ್‌ಬಿ-ಸಿ ನಮೂನೆಯ ಓಟಿಜಿ ಕೇಬಲ್ ಅಥವಾ ಅಡಾಪ್ಟರ್ ಕೊಳ್ಳಬೇಕು. ಫ್ರೇಂನ ಕೆಳಭಾಗದಲ್ಲಿ ಒಂದು ಗ್ರಿಲ್‌ ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದ ಮೂಲೆಯಲ್ಲಿ ಕ್ಯಾಮೆರಾ ಇದೆ. ಮುಂಭಾಗದ ಕೆಳಗೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಮೇಲ್ಭಾಗದಲ್ಲಿ ಅವಕೆಂಪು ದೂರನಿಯಂತ್ರಕ (infrared remote control) ಕಿಂಡಿಯಿದೆ.

ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಇವರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್) ವಿಶೇಷ ಸವಲತ್ತಿದೆ. ಅದು ವೈಡ್ ಅಪೆರ್ಚರ್. ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆ ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆ ಸ್ಪಷ್ಟಮಾಡಬಹುದು. ಕೆಲವೊಮ್ಮೆ ಫೋಕಸ್ ಮಾಡಲು ಸ್ವಲ್ಪ ಒದ್ದಾಡುತ್ತದೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಇದೆ. ಫೋಟೊಗಳು ಚೆನ್ನಾಗಿಯೇ ಮೂಡಿಬರುತ್ತವೆ.

ಎಲ್ಲ ಹೋನರ್ ಫೋನ್‌ಗಳ ಕ್ಯಾಮೆರಾದಂತೆ ಇದರ ಕ್ಯಾಮೆರಾದ ಒಂದು ಪ್ರಮುಖ ಬಾಧಕ ಎಂದರೆ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಇದರಲ್ಲಿರುವುದು 5.99 ಇಂಚು ಗಾತ್ರದ 1080x 2160 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ನಿಜಕ್ಕೂ ಚೆನ್ನಾಗಿದೆ. 32-38 ಸಾವಿರ ರೂಪಾಯಿ ಬೆಲೆಯ ಒನ್‌ಪ್ಲಸ್ ಫೋನಿನಷ್ಟೇ ಇದರ ವೇಗವೂ ಇದೆ. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ಉತ್ತಮವಾಗಿವೆ.

ಅಧಿಕ ಶಕ್ತಿ ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಈ ಬೆಲೆಗೆ ಹೋಲಿಸಿದರೆ ಆಡಿಯೊ ಇಂಜಿನ್ ಇನ್ನೂ ಸ್ವಲ್ಪ ಚೆನ್ನಾಗಿದ್ದರೆ ಒಳ್ಳೆಯದಿತ್ತು. ಹೋನರ್ 8 ಪ್ರೋ ಫೋನಿನಂತೆ ಇದು ಅಧಿಕ ಬಿಸಿಯಾಗುವುದಿಲ್ಲ.

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಂಪನಿಯವರು ಹೇಳಿಕೊಂಡಂತೆ ಇದರ ಕೃತಕ ಬುದ್ಧಿಮತ್ತೆಯಲ್ಲಿ (Artificial Intelligence). ನಿಮ್ಮ ಮುಖವನ್ನು ಅದು ಗುರುತು ಹಿಡಿಯಬಲ್ಲುದು. ಮುಖವನ್ನೇ ಪಾಸ್‌ವರ್ಡ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮುಖ ಪತ್ತೆಹಚ್ಚುವಿಕೆಯ ವೇಗ ಒನ್‌ಪ್ಲಸ್‌ನಷ್ಟಿಲ್ಲ. ಕಡಿಮೆ ಬೆಳಕಿನಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ.

ಇದರಲ್ಲಿ ಅತ್ಯುತ್ತಮವಾದ ಅನುವಾದ ಕಿರುತಂತ್ರಾಂಶ ಇದೆ. ಆದರೆ ಅದರಲ್ಲಿ ಕನ್ನಡ ಭಾಷೆಯ ಸೌಲಭ್ಯವಿಲ್ಲ. ಇಂಗ್ಲಿಷಿನಿಂದ ಹಿಂದಿ ಭಾಷೆಗೆ ತುಂಬ ಚೆನ್ನಾಗಿ ಅನುವಾದ ಮಾಡುವುದು ಮಾತ್ರವಲ್ಲ ಅದನ್ನು ಉಚ್ಛರಿಸುತ್ತದೆ ಕೂಡ. ಕನ್ನಡದ ಆಯ್ಕೆ ಸದ್ಯಕ್ಕೆ ಬರುವಂತೆಯೂ ಇಲ್ಲ. ಯಾಕೆಂದರೆ ಅದನ್ನು ನೀಡಿದವರು ಮೈಕ್ರೋಸಾಫ್ಟ್ ಕಂಪನಿಯವರು ಹಾಗೂ ಅವರು ಸದ್ಯಕ್ಕೆ ಕನ್ನಡದ ಅನುವಾದ ಸೌಲಭ್ಯವನ್ನು ತಯಾರಿಸುತ್ತಿಲ್ಲ.

ಈ ಫೋನಿನ ಇನ್ನೊಂದು ಹೆಚ್ಚುಗಾರಿಕೆಯೆಂದರೆ ಎರಡು ಸಿಮ್‌ಗಳಲ್ಲೂ 4ಜಿ ಮತ್ತು ವಿಒಎಲ್‌ಟಿಇ (VoLTE) ಸೌಲಭ್ಯವಿರುವುದು. ಒಂದು ಸಿಮ್‌ನಲ್ಲಿ ಮಾತನಾಡುತ್ತಿರುವಾಗ ಇನ್ನೊಂದು ಸಿಮ್‌ಗೆ ಕರೆ ಬಂದರೆ ಅದನ್ನು ಈ ಸಿಮ್‌ಗೇ ವರ್ಗಾಯಿಸುವ ಸವಲತ್ತಿದೆ. ನಿಜಕ್ಕೂ ಈ ಫೋನ್ ಎರಡು ಸಿಮ್‌ ವಿಭಾಗದಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಫೋನ್ ಎನ್ನಬಹುದು. ಬ್ಯಾಟರಿ ಸುಮಾರು ಒಂದೂವರೆ ದಿನ ಬಾಳಿಕೆ ಬರುತ್ತದೆ. ಈ ಫೋನಿನಲ್ಲಿ ವೇಗವಾಗಿ ಚಾರ್ಜ್ ಆಗುವ ಸವಲತ್ತು ಇದೆ. ಇದು ನಿಜಕ್ಕೂ ನೀಡುವ ಬೆಲೆಗೆ ಅತ್ಯುತ್ತಮ ಫೋನ್.

ವಾರದ ಆ್ಯಪ್

ಉಪಯುಕ್ತ ಸಲಕರಣೆಗಳು

ಹಲವು ಸಲಕರಣೆ ಹಾಗೂ ಸವಲತ್ತುಗಳನ್ನು ಒಂದೇ ಕಿರುತಂತ್ರಾಂಶದಲ್ಲಿ ಪಡೆಯಬೇಕಾದರೆ ನಿಮಗೆ ಈ ಕಿರುತಂತ್ರಾಂಶ (ಆ್ಯಪ್) ಬೇಕು. ಇದನ್ನು ಪಡೆಯಲು ನೀವು ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Smart Tools: Compass, Calculator, Ruler, Bar Code ಎಂದು ಹುಡುಕಬೇಕು ಅಥವಾ http://bit.ly/gadgetloka317 ಜಾಲತಾಣಕ್ಕೆ ಭೇಟಿ ನೀಡಬೇಕು.

ಇದರಲ್ಲಿ ಸುಮಾರು 40ರಷ್ಟು ಸಲಕರಣೆ ಗಳಿವೆ. ಕೆಲವು ಇಂತಿವೆ – ಫ್ಲಾಶ್ ಲೈಟ್, ಕ್ಯೂಆರ್ ಕೋಡ್ ಸ್ಕ್ಯಾನರ್, ಕಂಪಾಸ್, ಅಳತೆಪಟ್ಟಿ, ಸ್ಪಿರಿಟ್ ಲೆವೆಲ್, ಸ್ಪೀಡೋಮೀಟರ್, ಇತ್ಯಾದಿ.

ಗ್ಯಾಜೆಟ್ ಪದ

Touch screen= ಸ್ಪರ್ಶಸಂವೇದಿ ಪರದೆ

ಕೈಬೆರಳು ಅಥವಾ ಸ್ಟೈಲಸ್ ಕಡ್ಡಿಯ ಸ್ಪರ್ಶ ವನ್ನು ಗ್ರಹಿಸಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವ ಹಾಗೂ ಸೂಕ್ತ ಕೆಲಸ ಮಾಡಲು ಅನುವು ಮಾಡಿಕೊಡುವ ಪರದೆ. ಇದರಲ್ಲಿ ಎರಡು ನಮೂನೆ.

ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಯನ್ನು ಬಳಸಲು ಒಂದು ಸ್ಟೈಲಸ್ ಕಡ್ಡಿ ಬೇಕು. ಈ ಮಾದರಿಯ ಪರದೆಗಳ ಬಳಕೆ ಈಗ ಕಡಿಮೆಯಾಗಿದೆ. ಕೆಪಾಸಿಟಿವ್ ಪರದೆಯನ್ನು ಬೆರಳನ್ನು ಬಳಸಿ ಉಪಯೋಗಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.