ಸೋಮವಾರ, ಮೇ 10, 2021
19 °C

ಒಂದು ಕ್ರಾಂತಿಕಾರಕ ಮಸೂದೆಯ ಸುತ್ತ…

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಒಂದು ಕ್ರಾಂತಿಕಾರಕ ಮಸೂದೆಯ ಸುತ್ತ…

ಕಳೆದ ಶುಕ್ರವಾರ ಕರ್ನಾಟಕ ವಿಧಾನಸಭೆಯಲ್ಲಿ ಅಪರೂಪದ ಭಾವುಕ ವಾತಾವರಣವಿತ್ತು. ‘ಕರ್ನಾಟಕ ಭೂಸುಧಾರಣಾ  (ತಿದ್ದುಪಡಿ) ವಿಧೇಯಕ-2016’ ಮಂಡಿಸುತ್ತಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಒಂದು ಹಂತದಲ್ಲಿ ಭಾವಾವೇಶಕ್ಕೊಳಗಾದರು. ಅವತ್ತು ಹತ್ತಿರದಿಂದ ಅವರನ್ನು ನೋಡಿದವರು ಹೇಳುವಂತೆ ಅವರ ಕಣ್ಣು ತುಂಬಿಬಂದಿದ್ದವು. ‘ಬಡ ಕೃಷಿ ಕಾರ್ಮಿಕರು ತಾವು ನೆಲೆನಿಂತ ಅಂಗೈ ಅಗಲ ಜಾಗ ತಮ್ಮದು ಎಂದು ಹೇಳಿಕೊಳ್ಳುವಂತಿಲ್ಲ ಅಂದರೆ; ಅವರು ಎಷ್ಟೋ ವರ್ಷಗಳಿಂದ ಬದುಕಿರುವ ಜಾಗ ತಮ್ಮದಲ್ಲ ಅನ್ನುವಂತಾದರೆ ನಾವು ಎಂಥ ಪ್ರಜಾಪ್ರಭುತ್ವ ಇಟ್ಟುಕೊಂಡಿದೀವಿ?’ ಅಂದರು ತಿಮ್ಮಪ್ಪ. ಕಳೆದ ವರ್ಷ ವಿಧಾನಸಭೆಯ ಸ್ಪೀಕರ್ ಹುದ್ದೆ ಬಿಟ್ಟು, ಪಕ್ಷದ ಮೇಲೆ ಒತ್ತಡ ಹೇರಿ ಕಂದಾಯ ಮಂತ್ರಿಯಾದಾಗ ಜನರ ಲೇವಡಿಗೊಳಗಾಗಿದ್ದ ಕಾಗೋಡು ತಿಮ್ಮಪ್ಪನವರಿಗೆ ತಾವು ಮಂತ್ರಿಯಾದದ್ದು ಸಾರ್ಥಕವಾಯಿತು ಎನ್ನಿಸಿರಬೇಕು.

ಈ ಮಸೂದೆಗೆ ಶಾಸನಸಭೆಯಲ್ಲಿ ಹೆಚ್ಚಿನ ವಿರೋಧವಿರಲಿಲ್ಲ. ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್ ‘ಇದು ಪ್ರಗತಿಪರ ಮಸೂದೆ’ ಎಂದರು;  ಮುಖ್ಯಮಂತ್ರಿಯವರು ‘ಪ್ರಗತಿಪರ ಅಲ್ಲ; ಇದು ಕ್ರಾಂತಿಕಾರಕ ಮಸೂದೆ’ ಅಂದರು. ನಡುವೆ ಯಾರೋ ‘ರೆವಲ್ಯೂಷನರಿ’ ಅಂದರು. ‘ಅದನ್ನೇ ಕನ್ನಡದಲ್ಲಿ ಕ್ರಾಂತಿಕಾರಕ ಅನ್ನೋದು’ ಎಂದ ಮುಖ್ಯಮಂತ್ರಿಗಳು, ‘ವಿಧಾನಮಂಡಲದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ’ ಅಂದರು. ‘ಅವತ್ತು ಭೂಸುಧಾರಣೆ ಕಾಯ್ದೆ ಬಂದಾಗ ದೇವರಾಜ ಅರಸರು ಆ ಸ್ಥಾನದಲ್ಲಿದ್ದರು; ಇವತ್ತು ನೀವು ಈ ಸ್ಥಾನದಲ್ಲಿದ್ದೀರಿ. ಇದೊಂದು ಚಾರಿತ್ರಿಕ ಸನ್ನಿವೇಶ’ ಅಂದರು ಕಾಗೋಡು. ‘ಕಾಗೋಡು ಸತ್ಯಾಗ್ರಹ’ ನಡೆದಾಗ ತಿಮ್ಮಪ್ಪ ಇನ್ನೂ ಬಾಲಕ; ತಮ್ಮ ಹೆಸರಲ್ಲಿ ಕಾಗೋಡನ್ನು ಸೇರಿಸಿಕೊಂಡು ಸದಾ ಕಾಗೋಡು ಸತ್ಯಾಗ್ರಹವನ್ನು ನೆನಪಿಗೆ ತರುವ ತಿಮ್ಮಪ್ಪನವರು ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡರ ಕಾಗೋಡು ಹೋರಾಟ ನಡೆದ ಎಷ್ಟೋ ವರ್ಷಗಳ ನಂತರ ಕರ್ನಾಟಕದಲ್ಲಿ ಭೂ ಸುಧಾರಣೆಯ ಮಸೂದೆ ಬಂದಾಗ ಅದರ ತಯಾರಿಯಲ್ಲಿ ಸಕ್ರಿಯವಾಗಿದ್ದರು.

ಈಗಿನ ಮಸೂದೆ ಬರಲು ಮುಖ್ಯ ಕಾರಣರಾದ ಮಾಯಕೊಂಡದ ಶಾಸಕ ಶಿವಮೂರ್ತಿ ನಾಯ್ಕ್‌ ಅವರನ್ನಂತೂ ಕರ್ನಾಟಕದ ತಳ ಸಮುದಾಯಗಳು-ಅಥವಾ ಲೋಹಿಯಾ ಅವರು ಹೇಳುವ ‘ತಬ್ಬಲಿ ಜಾತಿಗಳು’- ತಪ್ಪದೇ ಅಭಿನಂದಿಸಬೇಕು; ಕಳೆದ ಕೆಲವು ವರ್ಷಗಳಿಂದ ಶಿವಮೂರ್ತಿ ಕರ್ನಾಟಕದುದ್ದಕ್ಕೂ ಅಡ್ಡಾಡಿ ಈ ಕುರಿತ ದಾಖಲೆಗಳನ್ನು ಕಲೆ ಹಾಕಿದ್ದರು. ವಿಧಾನಸಭೆಯ ಅಧಿವೇಶನಗಳಲ್ಲಿ ಪದೇಪದೇ ಈ ವಿಷಯ ಎತ್ತುತ್ತಿದ್ದರು. ಕೆಲವರು ‘ಇದೇನಿದು ಹುಚ್ಚು!’ ಎಂದು ಅವರನ್ನು ಕಂಡು ನಗುತ್ತಿದ್ದರು. ಲಂಬಾಣಿ ಸಮುದಾಯದಲ್ಲಿ ಹುಟ್ಟಿದ ಶಿವಮೂರ್ತಿಯವರಿಗೆ ತಮ್ಮ ಸಮುದಾಯದ ಕಷ್ಟಗಳ ಅರಿವಿತ್ತು. ಅದರ ಜೊತೆಗೇ ಗೊಲ್ಲರಹಟ್ಟಿಗಳು, ವಡ್ಡರಹಟ್ಟಿಗಳು, ಹಾಡಿಗಳು ಮುಂತಾದ ಕಡೆಗಳಲ್ಲಿ ಈ ಬಗೆಯ ಮನೆಗಳಲ್ಲಿ ವಾಸಿಸುತ್ತಾ, ಹಕ್ಕುಪತ್ರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಸಮುದಾಯಗಳ  ಕಷ್ಟ ಕುರಿತೂ ಅವರು ಅಧ್ಯಯನ ಮಾಡಿದರು. 2015ರ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಿದ ಶಿವಮೂರ್ತಿ ನಂತರ ಅದನ್ನು ಹಿಂದೆ ಪಡೆದರು. ಅದಕ್ಕೆ ಮೊದಲೇ ಸರ್ಕಾರ ನಿವೃತ್ತ ಕೆ.ಎ.ಎಸ್. ಅಧಿಕಾರಿ ನರಸಿಂಹಯ್ಯನವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು; ಸಮಿತಿ ಇಂಥ 8,239 ಹಟ್ಟಿ, ಹಾಡಿಗಳ ಅಂದಾಜು ವಿವರಗಳನ್ನು ಕಲೆ ಹಾಕಿ ವರದಿಯೊಂದನ್ನು ಸಿದ್ಧಪಡಿಸಿತು. ಇದೀಗ ಆ ವರದಿಯ ಶಿಫಾರಸುಗಳು ಮಸೂದೆಯಾಗಿ ಬಂದಿವೆ.

ಈ ಅಂಕಣ ಅಚ್ಚಿಗೆ ಹೋಗುವ ದಿನ ಕಾಗೋಡು ತಿಮ್ಮಪ್ಪನವರನ್ನು ಕಂಡಾಗ, ಈ ಬಗೆಗಿನ  ಹಲವು ವಿವರಗಳನ್ನು ಕೊಟ್ಟರು: ‘ಯಾವ ಯಾವ ಹಟ್ಟಿಗಳು, ಹಾಡಿಗಳು ಈಗ  ಕಂದಾಯ ದಾಖಲೆಗಳಲ್ಲಿ ಇಲ್ಲವೋ ಅವುಗಳನ್ನು ಅಸಲಿ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ಒಪ್ಪಿ ಈಗಾಗಲೇ ಅಂಥ ಮುನ್ನೂರು ಗ್ರಾಮಗಳನ್ನು ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಇವು ಅಸಲಿ ಗ್ರಾಮಗಳಾದ ತಕ್ಷಣ ಈ ಗ್ರಾಮಗಳ ವ್ಯಾಪ್ತಿಯಲ್ಲಿರುವ ಖಾಸಗಿ ಜಮೀನಿನಲ್ಲಿ ಕೃಷಿ ಕಾರ್ಮಿಕರು ಮನೆ ಕಟ್ಟಿಕೊಂಡು ಸಾಮಾನ್ಯ ನಿವಾಸಿಯಾಗಿ ವಾಸ ಮಾಡುತ್ತಿದ್ದರೆ, ಅಂಥವರನ್ನು ಆ ಮನೆ ಹಾಗೂ ಆ ಮನೆ ಸುತ್ತಲ ಜಾಗದ ಹಕ್ಕುದಾರನನ್ನಾಗಿ ಮಾಡುವುದು ಈ ವಿಧೇಯಕದ ಉದ್ದೇಶ’.

ಅರವತ್ತು ವರ್ಷಗಳ ಕೆಳಗೆ ಕಾಗೋಡು ಸತ್ಯಾಗ್ರಹದಿಂದ ಚರ್ಚೆಗೆ ಬಂದ ಗೇಣಿದಾರ ರೈತರಿಗೆ ಭೂಮಿಯ ಒಡೆತನದ ಪ್ರಶ್ನೆ ‘ಉಳುವವನೇ ಹೊಲದೊಡೆಯ’ ಕಾನೂನಾಗಿ ಬರಲು ಬಹಳ ಸಮಯ ಬೇಕಾಯಿತು. ಕರ್ನಾಟಕದಲ್ಲಿ ಭೂಸುಧಾರಣೆಗೆ ಸಂಬಂಧಿಸಿದ ಎರಡು ಕ್ರಾಂತಿಕಾರಿ ಮಸೂದೆಗಳ ಮಂಡನೆಯ ಸಂದರ್ಭದಲ್ಲೂ ತಾವು ಸದನದಲ್ಲಿ ಇದ್ದುದನ್ನು ಕಾಗೋಡು ತಿಮ್ಮಪ್ಪನವರು ನೆನೆಸಿಕೊಂಡಾಗ ಅವರಲ್ಲಿ ಧನ್ಯತೆಯ ಭಾವವಿತ್ತು. ‘ನಲವತ್ತು ವರ್ಷಗಳ ಕೆಳಗೆ ದೇವರಾಜ ಅರಸು, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ‘ಉಳುವವನೇ ಹೊಲದೊಡೆಯ’ ಕಾನೂನು ತಂದಾಗ ಸದನದ ಸಲಹಾ ಸಮಿತಿಯಲ್ಲಿ ನಾನೂ ಇದ್ದೆ. ಈಗ ದುಡಿಯುವ ವರ್ಗದ ಕೃಷಿಕಾರ್ಮಿಕನಿಗೆ ಮನೆಯ ಹಕ್ಕಿನ ಕಾನೂನು ಮಾಡುವಾಗಲೂ ನಾನಿದ್ದೇನೆ’ ಎಂದರು ಕಾಗೋಡು.

ಕಳೆದ ಸೋಮವಾರ ವಿಧಾನಪರಿಷತ್ತಿನಲ್ಲೂ ಈ ಮಸೂದೆ ಪಾಸಾಯಿತು. ‘ಈ ವಿಧೇಯಕ ಜಾರಿಗೆ ಬರುವ ವೇಳೆಗೆ ಸರ್ಕಾರ ಮುನ್ನೂರು ಗ್ರಾಮಗಳನ್ನು ಗುರುತಿಸಿದೆ ಹಾಗೂ ಇದು ಮುಂದುವರಿಯುತ್ತದೆ. ಇದರಿಂದ ಅನುಕೂಲ ಪಡೆಯುವ ಕುಟುಂಬಗಳು ಎರಡು, ಮೂರು ಲಕ್ಷ ಆಗಬಹುದು’ ಎಂದರು ಕಾಗೋಡು. ಇದರ ಜೊತೆಗೇ ಬಗರ್ ಹುಕುಂ ಜಮೀನುಗಳ ಹಕ್ಕು ಪತ್ರಗಳ ವಿತರಣೆಯೂ ಬೇಗ ಆಗಬಹುದೇ ಎಂದು ಕೇಳಿದೆ. ಈ ಸಂಬಂಧ ಈಗ ಇರುವ ಅರ್ಜಿಗಳ ವಿಲೇವಾರಿಯನ್ನು ತ್ವರಿತಗೊಳಿಸುವ ಕಡೆಗೆ ಅವರ ಗಮನವಿತ್ತು.

ಮೊನ್ನೆ ಈ ಮಸೂದೆ ಸರ್ವಾನುಮತದಿಂದ ಒಪ್ಪಿತವಾದಂತೆ ಕಂಡರೂ ಚರ್ಚೆಯ ನೆಪದಲ್ಲಿ ಇದನ್ನು ಮುಂದೂಡಬಯಸಿದ ಹಿತಾಸಕ್ತ ಒತ್ತಡಗಳೂ ಇದ್ದವು. ಜಮೀನುದಾರರ ಹಿತ ರಕ್ಷಿಸುವ ವರ್ಗಗಳ ಸಣ್ಣ ದನಿಗಳೂ ಇದ್ದವು. ಆದರೆ ಮಸೂದೆಗೆ  ಬೆಂಬಲ ಮಾತ್ರ ದೊಡ್ಡ ಮಟ್ಟದಲ್ಲೇ ಇತ್ತು. ಅದರಲ್ಲೂ ತರುಣ ಶಾಸಕ ರಾಜೀವ ಕುಡಚಿಯವರ ಖಚಿತ ಒತ್ತಾಯ ಹಾಗೂ ದೃಢ ನಿಲುವು ಕೂಡ ಈ ಮಸೂದೆಯ  ಚರ್ಚೆಯಲ್ಲಿ ಮುಖ್ಯ ಪರಿಣಾಮ ಬೀರಿವೆ ಎಂಬುದನ್ನು ಮರೆಯುವಂತಿಲ್ಲ.

ಈ ಮಸೂದೆ ಬಂದದ್ದರ ಹಿನ್ನೆಲೆಯಲ್ಲಿ ಹಾವನೂರ್ ಆಯೋಗದಿಂದೀಚೆಗೆ ಕರ್ನಾಟಕದ ಸಾಮಾಜಿಕ ನ್ಯಾಯದ ಚಿಂತನೆಯಲ್ಲಿ ಆಗಿರುವ ಮುಖ್ಯ ಬೆಳವಣಿಗೆಗಳನ್ನೂ ಗಮನಿಸಬೇಕು. ಮೊನ್ನೆ ವಿಧಾನಸಭೆಯಲ್ಲಿ ಮಂಡಿತವಾದ ಮಸೂದೆಯ ಬೇರುಗಳು ಅರಸು ಕಾಲದ ಭೂಸುಧಾರಣೆಯಲ್ಲಿ ಇರುವಂತೆಯೇ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ  ರವಿವರ್ಮಕುಮಾರ್ ಆಯೋಗದ ವರದಿ-2000ದಲ್ಲೂ ಇದ್ದವು: ‘ಜನಾಂಗೀಯ ಹಟ್ಟಿ, ಕೇರಿ, ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಮೂಲಕ ಪ್ರತ್ಯೇಕತೆ, ಜಾತಿಭೇದ ನೀತಿಯನ್ನು ತೊಡೆದು ಹಾಕುವ’ ಮಹತ್ವದ ಶಿಫಾರಸನ್ನೂ ‘ರವಿವರ್ಮಕುಮಾರ್ ವರದಿ’ ಮಾಡಿತ್ತು. ಎಲ್ಲ ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ನಾಗರಿಕ ಸೌಲಭ್ಯಗಳನ್ನು ವಿಸ್ತರಿಸಿ, ಕುಡಿಯುವ ನೀರು, ನೈರ್ಮಲ್ಯ, ಆಸ್ಪತ್ರೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲು ಶಾಸನಗಳನ್ನು ಮಾಡುವಂತೆ ವರದಿ ಶಿಫಾರಸು ಮಾಡಿತ್ತು. ಇಂಥ ಹಟ್ಟಿಗಳ ಪಟ್ಟಿಯಲ್ಲಿ ಲಂಬಾಣಿಗಳು, ಉಪ್ಪಾರರು, ವಡ್ಡರು, ಹೊಲೆಯರ ಹಟ್ಟಿಗಳೂ ಸೇರಿದ್ದವು.

ಮೊನ್ನೆ ಕರ್ನಾಟಕದ ವಿಧಾನಸಭೆ-ವಿಧಾನ ಪರಿಷತ್ತುಗಳೆರಡೂ 2016ರ ಕರ್ನಾಟಕ ಭೂಸುಧಾರಣೆ (ತಿದ್ದುಪಡಿ) ಮಸೂದೆಯನ್ನು ಒಪ್ಪಿದ್ದರ ಹಿನ್ನೆಲೆಯಲ್ಲಿ ಈ ಬಗೆಯ ಚಿಂತನೆಗಳೆಲ್ಲ ಇದ್ದವು. ಈ ಮಸೂದೆಯ  ಸಾಧ್ಯತೆಗಳು ಸರಿಯಾಗಿ ವಿಸ್ತಾರವಾದರೆ, ಹಂದಿ ಜೋಗಿ, ಹಂದಿಗೊಲ್ಲರ ಹಟ್ಟಿಗಳು ಕೂಡ ಇದರ ಪ್ರಯೋಜನ ಪಡೆಯಬಲ್ಲವೆಂದು ತೋರುತ್ತದೆ. ಜೊತೆಗೆ, ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಒಂಟಿ ಮನೆಗಳಲ್ಲಿರುವ ಇಂಥ ಅನೇಕ ಸಮುದಾಯಗಳು ಈ ಮಸೂದೆಯಿಂದ  ಪ್ರಯೋಜನ ಪಡೆಯಬಲ್ಲವು. ಹಾಗೆಯೇ ಒಂದು ಪ್ರದೇಶದಲ್ಲಿ ಬಹುಕಾಲ ವಾಸಿಸುವ ಅಲೆಮಾರಿ ಸಮುದಾಯಗಳಿಗೂ ಈ ಮಸೂದೆ  ನೆರವಾಗುವ ಸಾಧ್ಯತೆಯನ್ನೂ ನಾವು ವ್ಯವಸ್ಥಿತವಾಗಿ ಚರ್ಚಿಸಬೇಕು.

ಇಂಥದೊಂದು ಮಹತ್ವದ ಮಸೂದೆ  ಬಂದಾಗ ಅನಕ್ಷರಸ್ಥ ಸಮುದಾಯಕ್ಕೆ ಅದರ ಫಲ ಲಭಿಸದಂತೆ ಮಾಡುವ ಶಕ್ತಿಗಳು ತಕ್ಷಣ ಜಾಗೃತವಾಗುತ್ತವೆ. ಅರಸು ಕಾಲದಲ್ಲಿ ಭೂಸುಧಾರಣೆಯ ಮಸೂದೆ ಬಂದಾಗ ಬಂಗಾರಪ್ಪನವರು ಸಾವಿರಾರು ಗೇಣಿದಾರರಿಗೆ ಈ ಸುಧಾರಣೆಯ ಫಲ ದೊರಕುವಂತೆ ನ್ಯಾಯವಾದಿಯಾಗಿ ದುಡಿದಿದ್ದರು. ಹಾಗೆ ಇವತ್ತು ಕೂಡ ತಳಸಮುದಾಯಗಳಿಂದ ಬಂದ ತರುಣ ತರುಣಿಯರು, ನ್ಯಾಯವಾದಿಗಳು, ಸಂಘಟಕರು ಈ ಸಮುದಾಯಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಸಾಮಾಜಿಕ ಚಳವಳಿಗಳ ಚಿಂತನೆ ಸರ್ಕಾರದ ಯೋಜನೆಯ ಭಾಗವಾದ ಮೇಲೆ ಅದರ ಸಮರ್ಥ ಜಾರಿಯ ಹೊಣೆ ಮತ್ತೆ ಸಾಮಾಜಿಕ ಚಳವಳಿಗಳ ಮೇಲೇ ಇರುತ್ತದೆ ಎಂಬುದನ್ನು ಮರೆಯದಿರೋಣ.

ಕೊನೆ ಟಿಪ್ಪಣಿ: ವಸಾಹತುಶಾಹಿ ಮತ್ತು ಜಾತಿಪದ್ಧತಿ

ಇವತ್ತು ಈ ಮಸೂದೆಯ  ಮೂಲಕ ಮನೆಯ ಹಕ್ಕುಪತ್ರ ಪಡೆಯಲಿರುವವರಲ್ಲಿ ಈ ದೇಶದ ಮೂಲನಿವಾಸಿಗಳ ಈಚಿನ ತಲೆಮಾರುಗಳಿಗೆ ಸೇರಿದವರೂ ಇದ್ದಾರೆ. ಇವರ ತಾತ, ಮುತ್ತಾತಂದಿರು ನೆಲೆ ಕಳೆದುಕೊಂಡದ್ದು ಬ್ರಿಟಿಷ್ ವಸಾಹತುಶಾಹಿಯ ಕಾಲದಲ್ಲಿ. ಈ ವಸಾಹತುಶಾಹಿ ಧೋರಣೆ ಹಾಗೂ ಮನಸ್ಥಿತಿ ಆನಂತರದ ನಮ್ಮ ಸರ್ಕಾರಗಳು ಹಾಗೂ ಅಧಿಕಾರಶಾಹಿಗಳಲ್ಲೂ ಮುಂದುವರಿಯಿತು. 1990ರ ಜುಲೈ ತಿಂಗಳಲ್ಲಿ ವಿಧಾನಸಭೆಯಲ್ಲಿ ಎಂ.ಡಿ.ನಂಜುಂಡಸ್ವಾಮಿಯವರು ಗುಡ್ಡಗಾಡಿನಲ್ಲಿ ವಾಸಿಸುತ್ತಿದ್ದ ಗೌಳಿ ಸಮಾಜದ ಜನರ ಅಹವಾಲು ಕುರಿತು ಮಾತಾಡುತ್ತಾ ಹೇಳಿದ ಮಾತು:  ‘ನನಗೆ ಹಿಂದಿನ ಚರಿತ್ರೆಯ ಮಾತು ನೆನಪಿಗೆ ಬರುತ್ತದೆ. ಈ ದೇಶಕ್ಕೆ ಬಂದಾಗ ಇಲ್ಲಿನ ಎಲ್ಲವನ್ನೂ ತೋರಿಸಿ ‘ಇದೆಲ್ಲ ನನ್ನದೇ’ ಎಂದ ತೈಮೂರ್ ಭಾಷೆಗೂ ನಮ್ಮ ಸರ್ಕಾರಗಳ ಭಾಷೆಗೂ ಏನೂ ವ್ಯತ್ಯಾಸ ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ಭಾಷೆಯೂ ಹಾಗೇ ಇದೆ. ಇದನ್ನು ನಾನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ಹಳಿಯಾಳದಲ್ಲಿ ನಾನು ಪ್ರವಾಸ ಮಾಡುತ್ತಿದ್ದಾಗ ಅಲ್ಲಿ ಕಾಡಿನಲ್ಲಿ ಬದುಕುವಂಥ ಗೌಳಿ ಜನರು ಸಿಕ್ಕರು. ತಮ್ಮ ತಾತ, ಮುತ್ತಾತನ ಕಾಲದಿಂದಲೂ ಗುಡ್ಡಗಾಡಿನಲ್ಲಿ ಬದುಕಿರುವಂಥ ಜನ ಅವರು. ಅಲ್ಲಿ ಈಗ ಅರಣ್ಯ ಇಲಾಖೆಯವರು ಬಂದು ‘ನೀವು ಈ ಜಾಗ ಖಾಲಿ ಮಾಡಿ. ಈ ಅರಣ್ಯ ನಮ್ಮದು’ ಎಂದರಂತೆ. ನಾನು ಗೌಳಿ ಜನಾಂಗದವರಿಗೆ ಹೇಳಿದೆ: ‘ಬ್ರಿಟಿಷರು ಬರುವುದಕ್ಕಿಂತ ಮುಂಚೆ ಈ ಗುಡ್ಡ ನಮ್ಮದು ಎಂದು ನೀವು ಹೇಳಿ; ಅಥವಾ ತೈಮೂರ್ ಬರುವುದಕ್ಕಿಂತ ಹಿಂದಿನಿಂದ ಈ ಗುಡ್ಡ ನಮ್ಮದು, ನಿಮ್ಮದಲ್ಲ ಎಂದು ಹೇಳಿ. ಈ ಗುಡ್ಡ ರಾಮಕೃಷ್ಣ ಹೆಗಡೆಯವರದಲ್ಲ; ವೀರೇಂದ್ರ ಪಾಟೀಲರದಲ್ಲ, ರಾಜಶೇಖರಮೂರ್ತಿಯವರದೂ ಅಲ್ಲ’. ಗುಡ್ಡಗಾಡುಗಳ ಮೂಲನಿವಾಸಿಗಳಿಗೆ ಹೀಗೆ ಹೇಳಿದ್ದ ಎಂ.ಡಿ.ಎನ್., ಸರ್ಕಾರ ನಡೆಸುವವರಿಗೆ ಹೇಳಿದ ಮಾತು: ‘ಈ ದೇಶದಲ್ಲಿ ನೀವು ಈಗ ಸಾಮ್ರಾಜ್ಯಶಾಹಿಗಳಲ್ಲ; ನಿಮ್ಮ ಯೋಜನೆಯಲ್ಲಿರುವಂಥ ಸಾಮ್ರಾಜ್ಯಶಾಹಿ ಅಂಶಗಳನ್ನು ತೆಗೆದುಹಾಕಿ’.

ಕರ್ನಾಟಕದ ಸಾಮಾಜಿಕ ನ್ಯಾಯದ ಹೋರಾಟಗಳು, ಮಸೂದೆಗಳು, ಚಿಂತನೆಗಳು ಒಂದೆಡೆ ಬ್ರಿಟಿಷರ ವಸಾಹತುಶಾಹಿ ಕಾನೂನಿನ ವಿರುದ್ಧ ಇವತ್ತಿಗೂ ಹೋರಾಡುವುದರ ಜೊತೆಗೇ ಸಾವಿರಾರು ವರ್ಷಗಳಿಂದ ಜಾತಿಪದ್ಧತಿ ಪೋಷಿಸಿದ ಪ್ರತ್ಯೇಕತೆಗಳ  ವಿರುದ್ಧವೂ ಹೋರಾಡಬೇಕಾದ ಸ್ಥಿತಿಯಿದೆ. ಇಂಥ ಪ್ರಗತಿಪರ ಚಿಂತನೆ-ಯೋಜನೆಗಳ ವಿರುದ್ಧ ಬಾಯಿಗೆ ಬಂದದ್ದು ಹೇಳುವ ವಿಕೃತರು ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಜಾತಿವ್ಯವಸ್ಥೆಯ ಅನೈತಿಕ ಕೂಸುಗಳು ಎಂಬ ಬಗ್ಗೆ ಯಾರಿಗೂ ಅನುಮಾನ ಬೇಡ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.