ಒಂದು ನಾಟಕ, ಒಂದು ಸಿನಿಮಾ

7

ಒಂದು ನಾಟಕ, ಒಂದು ಸಿನಿಮಾ

ಎಸ್.ಆರ್. ರಾಮಕೃಷ್ಣ
Published:
Updated:
ಒಂದು ನಾಟಕ, ಒಂದು ಸಿನಿಮಾ

ವಟಿಕುಟೀರ ತಂಡದವರು ಎರಡು ನಾಟಕಗಳನ್ನು ಸೆಪ್ಟೆಂಬರ್ ೧೧ ಮತ್ತು ೧೨ರಂದು ರಂಗ ಶಂಕರದಲ್ಲಿ ಆಡಿದರು. ಕುಟುಂಬ ಸಂಬಂಧಗಳ ಬಗೆಗಿನ ಎರಡು ಲಲಿತ ಪ್ರಬಂಧಗಳನ್ನು ಆಧರಿಸಿ ಕಿರಣ್ ವಟಿ ನಿರ್ದೇಶಿಸಿದ ಜಂಟಿ ನಾಟಕ ಒಂದು ಗಂಟೆಯ ಇಂಟಿಮೇಟ್ ಥಿಯೇಟರ್ ಅನುಭವ ಕೊಟ್ಟಿತು. ಅಪ್ಪ, ಅಮ್ಮಂದಿರ ವಾತ್ಸಲ್ಯದ ಸೂಕ್ಷ್ಮ, ಸೆಂಟಿಮೆಂಟಲ್ ಅಂಶಗಳನ್ನು ಹಿಡಿದು ಮಾಡಿದ ಕಥನವೇ ‘ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು’ ಮತ್ತು ‘ಶ್ರಧ್ಧ’. ಮೊದಲ ಬಾರಿಗೆ ರಂಗದ ಮೇಲೆ ಬಂದ ‘ಶ್ರಧ್ಧ’ ಲಲಿತ ಪ್ರಬಂಧ ಬರೆದ ಶ್ರೀನಿವಾಸ ವೈದ್ಯರೂ ಪ್ರದರ್ಶನ ನೋಡಲು ಬಂದಿದ್ದರು. ವಾತ್ಸಲ್ಯದ ಸಂಬಂಧಗಳನ್ನು ‘ಕಣ್ಣೀರಿನ ಸಂಬಂಧಗಳು’ ಎಂದು ವರ್ಣಿಸಿದರು. ‘ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು’ ಕಥೆ ಬರೆದವರು ವಸುಧೇಂದ್ರ. ಮೂರು ನಟರು (ಗಣೇಶ್ ಶೆಣೈ, ಕೀರ್ತಿಭಾನು, ಹರೀಶ್ ಸೋಮಯಾಜಿ), ಒಬ್ಬ ನಟಿ (ಪ್ರಾಚಿ ರವಿಚಂದ್ರ), ಇಬ್ಬರು ತಂತ್ರಜ್ಞರು (ಬೆಳಕು ನಿರ್ವಹಿಸಿದ ಸುನಿಲ್, ಸಂಗೀತ ಒದಗಿಸಿದ ಸತೀಶ್ ಕೆ.ಎಸ್.) ಸೇರಿ ಚೊಕ್ಕವಾಗಿ ಆಡಿದ ಈ ನಾಟಕ ಕನ್ನಡ ಸಾಹಿತ್ಯದ ನಾಟಕೇತರ ಪ್ರಕಾರಗಳ ಉತ್ತಮ ಕೃತಿಗಳು ರಂಗಕ್ಕೆ ರೂಪಾಂತರಗೊಳ್ಳುವ ಸಂಪ್ರದಾಯವನ್ನು ಮುಂದುವರಿಸುತ್ತದೆ. ಬೆಂಗಳೂರಿನಲ್ಲಿ ಕನ್ನಡ ನಾಟಕ ತಂಡಗಳಿಗೆ ಇರುವ ಇತಿಮಿತಿಯಲ್ಲಿ ಈ ಸೈಜಿನ ಹವ್ಯಾಸಿ ತಂಡ ಎಂಥ ಆಟ ಸಮರ್ಪಕವಾಗಿ ಪ್ರದರ್ಶಿಸಲು ಸಾಧ್ಯ ಎಂದು ತೋರಿಸಿಕೊಡುತ್ತದೆ. ಅಬ್ಬಯ್ಯ ನಾಯ್ಡು ಸಿನಿಮಾ, ಗುರುರಾಜ ಹೊಸಕೋಟೆ ಹಾಡಿನ ತಾಯಿಯ ಬಗೆಗಿನ ಪಾಪ್ಯುಲಿಸ್ಟ್ ಗೋಳು ಈ ನಾಟಕದಲ್ಲಿ ಒಂದು ಚೂರೂ ಇಲ್ಲ. ಹಾಸ್ಯ, ವಿಷಾದ ಎರಡೂ ಭಾವಗಳನ್ನು ಅತಿರೇಕವಿಲ್ಲದ, ಆತ್ಮೀಯ ನಟನೆಯ ಮೂಲಕ ತೋರಿಸುವ ನಾಟಕ ಬ್ರಾಹ್ಮಣ ಮಧ್ಯಮ ವರ್ಗದ ಪ್ರಿಡಿಕ್ಟಬಿಲಿಟಿಯಿಂದ ಮಾತ್ರ ಮುಕ್ತವಾಗಿಲ್ಲ.ಕನ್ನಡ ಚಿತ್ರರಂಗದ ನಿರ್ಮಾಣದ ಹಳೆಯ ಮಾದರಿಗೆ ಸವಾಲಾಗಿರುವ ಲೂಸಿಯಾ ಚಿತ್ರವನ್ನೂ ಹೋದ ವಾರ ನೋಡಿದೆ. ಅದರ ನಿರ್ದೇಶಕ ಪವನ್ ಕುಮಾರ್ ನಮ್ಮ ಸಿನಿಮಾ ರಂಗದಲ್ಲಿ ಭದ್ರವಾಗಿ ಬೇರೂರಿರುವ ನಂಬಿಕೆಗಳನ್ನು ಮೀರಿ ಹೊಸ ಸಾಧ್ಯತೆಗಳಿವೆಯೇ ಎಂದು ಹುಡುಕ ಹೊರಟಿದ್ದಾರೆ. ಜನರಿಂದಲೇ ದುಡ್ಡು ಎತ್ತಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ, ಸಿನಿಮಾ ನಾಟಕಕ್ಕಿಂತ ದೊಡ್ಡ ಜೂಜು. ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸಲು ಚಿತ್ರವೊಂದನ್ನು ಆಯ್ಕೆ ಮಾಡಲು ನೇಮಕವಾಗಿರುವ ತಂಡ ‘ಲೂಸಿಯ’ ಚಿತ್ರವನ್ನು ೨೦ ಚಿತ್ರಗಳ ಪೈಕಿ ನೋಡುತ್ತದಂತೆ. ಮಾಡಿದ್ದನ್ನೇ ಮಾಡುವ, ಹಿಟ್ ಚಿತ್ರದಲ್ಲಿ ಏನೋ ಗುಪ್ತ ಸೂತ್ರ ಅಡಗಿದೆ ಎಂದು ನಂಬುವ ಚಿತ್ರರಂಗದಲ್ಲಿ ಪವನ್ ಕುಮಾರ್ ಮಾಡಿರುವ ಸಾಹಸ ದೊಡ್ಡದು. ‘ಲೂಸಿಯಾ’ದಲ್ಲಿ ಇನ್‌ಸ್ಪೆಕ್ಟರ್ ಪಾತ್ರ ಮಾಡಿರುವ ಗೆಳೆಯ ಕೃಷ್ಣ ಮೊನ್ನೆ ಸಿಕ್ಕಾಗ ಹೇಳಿದರು: ‘ಪವನ್ ಪಟ್ಟ ಕಷ್ಟ, ಅನುಭವಿಸಿದ ಅವಮಾನ, ಅನನುಭವಿ ಹೊಸಬರನ್ನು ಸೆಟ್ ಮೇಲೆ ನಡೆಸಿಕೊಂಡ ರೀತಿ, ಎಲ್ಲವೂ ನಾನು ಬಲ್ಲೆ. ಚಿತ್ರದ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುವುದನ್ನು ಬಿಟ್ಟು ಬೇರೇನನ್ನೂ ಹೇಳಲಾರೆ’.  ಕನಸು- ನನಸಿನ ಅಂತರ, ಅದಲು ಬದಲಾಗುವಿಕೆಯನ್ನು ಸ್ವಾರಸ್ಯವಾಗಿ ಶೋಧಿಸುವ ಲೂಸಿಯಾ ನಮ್ಮ ಹೃದಯಕ್ಕೆ ಅಪೀಲ್ ಆಗಲು ಅದರ ತಂತ್ರಗಾರಿಕೆ ಬಿಡುವುದಿಲ್ಲ. ಸತೀಶ್ ನೀನಾಸಂ ನಟನೆಯ, ಕನಸು -ನನಸಿನ ಸ್ವಾಭಾವಿಕತೆಯನ್ನು ನಿರ್ದೇಶಕನ ಬುಧ್ಧಿವಂತಿಕೆ ಎಲ್ಲೋ ಹೈಜಾಕ್ ಮಾಡಿಬಿಟ್ಟಿದೆ ಎಂದು ನನಗೆ ಅನಿಸಿತು. ಆದರೂ ಇಂಥ ಪ್ರಯೋಗ ಮಾಡುವ ಪವನ್ ಕುಮಾರ್ ತಂಡದ ಧೈರ್ಯ ಇಷ್ಟ ಆಯಿತು. ಒಂದು ಹೊಸ ರೀತಿಯ, ಬೆಂಗಳೂರಿನ ನಗರದ ಅನುಭವವನ್ನು ಹೇಳುವ ಸಿನಿಮಾ ಟ್ರೆಂಡ್ ಹುಟ್ಟುಹಾಕುವ ಶಕ್ತಿಯನ್ನು ಲೂಸಿಯಾ ಪಡೆದಿರಬಹುದೇ?ವೊಂಗ್ ಕರ್ ವಾಯ್ ಎಂಬ ಹಾಂಗ್ ಕಾಂಗ್ ನಿರ್ದೇಶಕ ಆ ನಗರದ ಅನುಭವಗಳನ್ನು, ಸಂಬಂಧಗಳನ್ನು ಸ್ಟೈಲಿಶ್ ಆಗಿ ಚಿತ್ರಿಸುವುದಕ್ಕೆ ಹೆಸರಾಗಿದ್ದಾರೆ. ಸಾಧ್ಯವಾದರೆ ಅವರ ‘ಚುಂಗ್ ಕಿಂಗ್ ಎಕ್ಸ್‌ಪ್ರೆಸ್‌’ ಮತ್ತು ‘ಇನ್ ದಿ ಮೂಡ್ ಫಾರ್ ಲವ್’ ಎಂಬ ಅವರ ಚಿತ್ರಗಳನ್ನು ನೋಡಿ. ಜಾಗತೀಕರಣ ನಂತರದ ಬೆಂಗಳೂರಿನ ಅನುಭವ ಕೂಡ ವಿಶಿಷ್ಟವಾಗಿ, ಒಂದು ಪ್ರಕಾರದ ಸಿನಿಮಾಕ್ಕೆ ಬೇಕಾದ ಕಚ್ಚಾ ವಸ್ತುವನ್ನು ಒದಗಿಸುವ ಶಕ್ತಿ ಹೊಂದಿದೆ. ಮುಂಬೈ, ಚೆನ್ನೈ, ಕೋಲ್ಕತ್ತಾದಂಥ ಯಾವ ಮಹಾನಗರವೂ ಬದಲಾಗದಷ್ಟು ಬೆಂಗಳೂರು ಬದಲಾಗಿದೆ, ತಲ್ಲಣಗೊಂಡಿದೆ. ಬೆಂಗಳೂರಿನ ಕನ್ನಡೇತರರು ಕನ್ನಡ ಸಿನಿಮಾ ನೋಡುವುದಿಲ್ಲ ಎಂಬ ದೂರು ಇದೆ. ಈ ನಗರದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿರುವುದರಿಂದ ಕನ್ನಡೇತರರು ನೋಡಿದಾಗ ಮಾತ್ರ ಇಲ್ಲಿ ಕನ್ನಡ ಸಿನಿಮಾ ಗಟ್ಟಿಯಾಗಿ ಉಳಿದುಕೊಳ್ಳಬಹುದೇನೋ. ಪವನ್ ಕುಮಾರ್ ಮಾಡಿರುವ ಒಂದು ಒಳ್ಳೆಯ ಕೆಲಸ ಲೂಸಿಯಾಗೆ ಇಂಗ್ಲಿಷ್ ಸಬ್-ಟೈಟಲ್ ಹಾಕಿರುವುದು. ಬೆಂಗಳೂರಿನ ಎಲ್ಲರಲ್ಲೂ ಕುತೂಹಲ, ಆಸಕ್ತಿ ಹುಟ್ಟಿಸುವ, ಮಲ್ಟಿಪ್ಲೆಕ್ಸ್‌ಗಳಲ್ಲಿ ಇತರ ಭಾಷೆಗಳಿಗೆ ಸರಿಸಾಟಿಯಾಗಿ ಓಡುವ ಕನ್ನಡ ಚಿತ್ರಗಳ ಟ್ರೆಂಡ್ ಇಂಥ ಪ್ರಯೋಗಗಳಿಂದ ಪ್ರೇರಿತವಾಗಿ ಶುರುವಾದರೆ ಚೆನ್ನಾಗಿರುತ್ತದೆ, ಅಲ್ಲವೆ?ಜುಬಿನ್ ಮೆಹ್ತಾ ಅನುಭವಿಸಿದ ವಿರೋಧ

ಕಾಶ್ಮೀರದ ಶ್ರೀನಗರದಲ್ಲಿ ಮೊನ್ನೆ ಜುಬಿನ್ ಮೆಹ್ತಾ ಅವರ ನೂರು ಸಂಗೀತಗಾರರ ಸಿಂಫೊನಿ ಆರ್ಕೆಸ್ಟ್ರ ಬಂದು ಸಂಗೀತದ ಕಾರ್ಯಕ್ರಮ ಕೊಟ್ಟಿತು. ಮೆಹ್ತಾ ಭಾರತ ಮೂಲದ, ಹೊರಗೆ ನೆಲೆಸಿದ, ಮೇರು ಪ್ರತಿಭೆಯೆನಿಸಿಕೊಂಡ ಆರ್ಕೆಸ್ಟ್ರ ಕಂಡಕ್ಟರ್. ಕಾಶ್ಮೀರದ ಹಲವು ಭಾರತ ವಿರೋಧಿ ಗುಂಪುಗಳು ಕಾರ್ಯಕ್ರಮವನ್ನು ವಿರೋಧಿಸಿದ್ದವು.ಪದಗಳೇ ಇಲ್ಲದ ಸಂಗೀತವೂ ಕೂಡ ವಿರೋಧ ಎದುರಿಸುವ ಸಂಭವಿರುತ್ತದೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ. ರಾಕ್ ಸಂಗೀತದ ಅಬ್ಬರ, ಈಚಿನ ಪಾಪ್ ಸಂಗೀತದ ಲೈಂಗಿಕ ಪ್ರತಿಮೆಗಳು ಯಾವುದೂ ಇರದ ಜುಬಿನ್ ಮೆಹ್ತಾ ಅವರ ವೆಸ್ಟೆರ್ನ್ ಕ್ಲಾಸಿಕಲ್ ಸಂಗೀತದಲ್ಲಿ ಇರುವುದಿಲ್ಲ. ಅವರದು ವಾದ್ಯ ಸಂಗೀತ. ಭಾಷೆಯೇ ಇಲ್ಲದ, ಸಾಹಿತ್ಯವೇ ಇಲ್ಲದ ಸಂಗೀತವೂ ಏನೇನೋ ಅರ್ಥಗಳನ್ನು ಹೊಮ್ಮಿಸಿ, ವಿರೋಧಕ್ಕೆ ಗುರಿಯಾಗುತ್ತದೆ ಎಂದು ಸಾಮಾನ್ಯವಾಗಿ ನಾವು ಊಹಿಸಿರುವುದಿಲ್ಲ.ಸೊವಿಯತ್‌ ರಷ್ಯದಲ್ಲಿ ಅವರದೇ ಪ್ರದೇಶದ ನಿಧಾನ ಗತಿಯ ಸಂಗೀತವನ್ನು ಸರ್ಕಾರ ಹತ್ತಿಕ್ಕಲು ತುಂಬ ಶ್ರಮ ಪಟ್ಟಿತು. ಅಂತ ಸಂಗೀತದಿಂದ ಜನ ಜಿಗುಪ್ಸೆಗೆ ಒಳಗಾಗುತ್ತಾರೆ ಎಂದು ಆಳುವವರ ನಂಬಿಕೆ. ಹಲವು ಸಂಗೀತಗಾರರನ್ನು ಸರ್ಕಾರ ಮೂಲೆಗುಂಪಾಗಿಸಿತು. ಹುರುಪಿನ ಸಂಗೀತ ರಚಿಸಲು ಸಂಗೀತಗಾರರನ್ನು ನೇಮಿಸಿತು. ಚೀನಾದಲ್ಲಿ ಟಿಬೆಟನ್ ಪ್ರಾರ್ಥನೆಯ ಹಾಡುಗಳನ್ನು ಹಾಡುವುದನ್ನು ಸಹಿಸುವುದಿಲ್ಲ. ಭಾಷೆಯೇ ಇಲ್ಲದಿದ್ದರೂ ಎಷ್ಟೋ ಸಂದರ್ಭದಲ್ಲಿ ಸಂಗೀತ ಯಾರೂ ಎನಿಸದ ಅರ್ಥಗಳನ್ನು ಪಡೆದುಕೊಂಡುಬಿಡುತ್ತದೆ. ಇಂಡೆಕ್ಸ್ ಆನ್ ಸೆನ್ಸಾರ್ಶಿಪ್ ಎಂಬ ಬ್ರಿಟಿಷ್ ಮೂಲದ ಪತ್ರಿಕೆ ೧೯೯೮ರಲ್ಲಿ ಒಂದು ಸಂಚಿಕೆ ಮಾಡಿ ಇದರ ಬಗ್ಗೆ ತುಂಬ ಆಶ್ಚರ್ಯದ ಸಂಗತಿಗಳನ್ನು ಹೊರಗೆಡವಿತು. ಸಂಗೀತ ಏನು ಹೇಳುತ್ತಿರುತ್ತದೆ ಎಂದು ತಿಳಿಯಲು ಸಾಧ್ಯವಾಗದ ಕಾರಣವೇ ಆಳುವವರಿಗೆ ಅದರ ಬಗ್ಗೆ ಅಷ್ಟು ಭಯ ಎಂದು ಆ ಪತ್ರಿಕೆಯ ಸಂಪಾದಕರ ವಿಶ್ಲೇಷಣೆ.ಇಂಥ ರಾಗಕ್ಕೆ ಇಂಥ ಭಾವ ಎಂದು ನಮ್ಮ ಸಂಗೀತ ಕಲಿಸುವ ಕೆಲವು ವಿದ್ವಾಂಸರು ಹೇಳುತ್ತಿರುತ್ತಾರೆ. ಆದರೆ ಕ್ಲಾಸಿಕಲ್ ಸಂಗೀತ ಅಮೂರ್ತವಾಗಿರುತ್ತದೆ. ಒಂದು ರಾಗದ ಅರ್ಥ ಏನು ಎಂದು ಹೇಳುವುದು ಕಷ್ಟ. ಯಾರಾದರು ಸತ್ತಾಗ ಆಕಾಶವಾಣಿಯಲ್ಲಿ ಬಿತ್ತರಿಸುವ ‘ಶೋಕದ’ ಸಾರಂಗಿ ವಾದ್ಯ ನನ್ನಂಥ  ಕೆಲವರಿಗೆ ಧ್ಯಾನದ, ಖುಷಿಯ ಸಂಗೀತವಾಗಿ ಗೋಚರಿಸುವ ಸಾಧ್ಯತೆ ಇದೆ. ಖುಷಿಯ ಹಣೆಪಟ್ಟಿ ಹೊತ್ತ ಎಷ್ಟೋ ಸಿನಿಮಾ ಹಾಡುಗಳು ಅಭಿರುಚಿ ಹೀನತೆಯಿಂದ ಡಿಪ್ರೆಸಿಂಗ್ ಆಗಿ ಕೇಳುವ ಸಾಧ್ಯತೆಯೂ ಇದೆ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry