ಒಂದೊಳ್ಳೆ ಸ್ಮಾರ್ಟ್‌ ಟಿ.ವಿ

7

ಒಂದೊಳ್ಳೆ ಸ್ಮಾರ್ಟ್‌ ಟಿ.ವಿ

ಯು.ಬಿ. ಪವನಜ
Published:
Updated:
ಒಂದೊಳ್ಳೆ ಸ್ಮಾರ್ಟ್‌ ಟಿ.ವಿ

ಶಿಯೋಮಿ ಕಂಪನಿಯ ಹಲವು ಉತ್ಪನ್ನಗಳನ್ನು, ಅದರಲ್ಲೂ ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳನ್ನು ಈ ಅಂಕಣದಲ್ಲಿ ಹಲವು ಸಲ ವಿಮರ್ಶೆ ಮಾಡಲಾಗಿದೆ. ಇತ್ತೀಚೆಗೆ ಅದು ಮೂರು ಮಾದರಿಗಳಲ್ಲಿ ಸ್ಮಾರ್ಟ್‌ಟಿ.ವಿ.ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರಲ್ಲಿ ನಾವು ವಿಮರ್ಶೆ ಮಾಡು ತ್ತಿರುವುದು ಶಿಯೋಮಿ ಎಂಐ ಟಿವಿ 4ಎ 43 (Xiaomi Mi LED Smart TV 4A 43) ಸ್ಮಾರ್ಟ್‌ಟಿ.ವಿ.ಯನ್ನು.

ಈ ಟಿ.ವಿ.ಯ ರಚನೆ ಮತ್ತು ವಿನ್ಯಾಸ ಉತ್ತಮವಾಗಿದೆ. ಪರದೆಗಿಂತ ತುಂಬ ಹೆಚ್ಚಿನ ದೇಹ ಇದಕ್ಕಿಲ್ಲ. ದಪ್ಪವೂ ಅಷ್ಟೆ. ಕಡಿಮೆ ಎಂದರೆ ಸುಮಾರು 6 ಮಿ.ಮೀ. ಇದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಅದಕ್ಕೆ ಅವರು ಒಂದು ಪಟ್ಟಿ (ಫ್ರೇಂ) ನೀಡಿರುವುದರಿಂದ ನಿಜವಾದ ದಪ್ಪ ಗೊತ್ತಾಗುವುದಿಲ್ಲ. ಈ ಪಟ್ಟಿ ಇರುವುದು ‌ಉತ್ತಮವೇ. ಇದರಿಂದಾಗಿ ಪರದೆಗೆ ಹಾನಿಯಾಗುವುದನ್ನು ತಡೆಗಟ್ಟಬಹುದು. ಪ್ರಮುಖ ಎಲೆಕ್ಟ್ರಾನಿಕ್ ಭಾಗಗಳು ಇರುವ ಅಂಗ ಸ್ವಲ್ಪ ದಪ್ಪ ಇದೆ. ಇದರೊಳಗೆ ಸ್ಪೀಕರುಗಳಿವೆ ಹಾಗೂ ಇದರ ಒಂದು ಪಕ್ಕದಲ್ಲಿ ಕಿಂಡಿಗಳಿವೆ. ಇದನ್ನು ಗೋಡೆಗೆ ನೇತುಹಾಕಬಹುದು ಅಥವಾ ಇದರ ಸ್ಟ್ಯಾಂಡ್ ಮೇಲೆ ಇಡಬಹುದು. ಮನೆಯಲ್ಲಿ ನೋಡಲು ಸುಂದರವಾಗಿ ಕಾಣಿಸುತ್ತದೆ. ಅತಿ ದೊಡ್ಡದೂ ಅಲ್ಲದ, ಅತಿ ಚಿಕ್ಕದೂ ಅಲ್ಲದ ಗಾತ್ರ ಎನ್ನಬಹುದು.

ಹಿಂದುಗಡೆ ಕೆಳಭಾಗದಲ್ಲಿರುವ ದಪ್ಪದ ಭಾಗದಲ್ಲಿ ಪವರ್ ಕೇಬಲ್, ಯುಎಸ್‌ಬಿ, ಎಚ್‌ಡಿಎಂಐ, ಆಡಿಯೊ, ಇಥರ್‌ನೆಟ್ ಪೋರ್ಟ್, ಇತ್ಯಾದಿ ಕಿಂಡಿಗಳು ಇವೆ. ಈ ಕಿಂಡಿಗಳಿಗೆ ಕೇಬಲ್ ಜೋಡಿಸಿಯೇ ನಂತರ ಟಿ.ವಿ.ಯನ್ನು ಗೋಡೆಗೆ ನೇತುಹಾಕುವುದು ಸೂಕ್ತ. ಮೊದಲು ಗೋಡೆಗೆ ನೇತುಹಾಕಿದರೆ ನಂತರ ಈ ಕಿಂಡಿಗಳಿಗೆ ಕೇಬಲ್ ಜೋಡಿಸಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ನನಗೆ ವಿಮರ್ಶೆಗೆ ಬಂದ ಟಿ.ವಿ.ಯ ಪೆಟ್ಟಿಗೆಯಲ್ಲಿ ಗೋಡೆಗೆ ನೇತುಹಾಕಲು ಬೇಕಾದ ಜೋಡಣೆಗಳು ಇರಲಿಲ್ಲ. ಮೇಜಿನ ಅಥವಾ ಟಿ.ವಿ. ಸ್ಟ್ಯಾಂಡಿನ ಮೇಲೆ ಇಡಲು ಬೇಕಾದ ಕಾಲುಗಳು ಇದ್ದವು. ಅದನ್ನು ಜೋಡಿಸಿ ಇಟ್ಟರೆ ಸುಂದರವಾಗಿ ಕಾಣುತ್ತದೆ.

ಇದೊಂದು ಆ್ಯಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯ ಮೂಲಕ ಕೆಲಸ ಮಾಡುವ ಸ್ಮಾರ್ಟ್‌ಟಿ.ವಿ. ಇದು ಬಹುಮಟ್ಟಿಗೆ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಫೋನ್ ಅನ್ನು ಮೊದಲ ಬಾರಿಗೆ ಪ್ರಾರಂಭಿಸಿದಾಗ ನಡೆದುಕೊಳ್ಳುವ ರೀತಿಯಲ್ಲೇ ನಡೆದುಕೊಳ್ಳುತ್ತದೆ. ಅಂದರೆ ಅದು ಕೆಲವು ಆಯ್ಕೆಗಳನ್ನು ಹೊಂದಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನೆಯಲ್ಲಿ ಅಂತರಜಾಲ ಸಂಪರ್ಕ, ಅದೂ ಉತ್ತಮ ವೇಗದ ಬ್ರಾಡ್‌ಬ್ಯಾಂಡ್ ಇಲ್ಲದಿದ್ದಲ್ಲಿ ಈ ಟಿ.ವಿ. ಮಾಮೂಲಿ ಟಿ.ವಿ. ಆಗುತ್ತದೆಯೆ ವಿನಾ ಸ್ಮಾರ್ಟ್‌ಟಿ.ವಿ. ಆಗುವುದಿಲ್ಲ. ಅಂತರಜಾಲದ ಮೂಲಕ ಸಂಪರ್ಕ ಮಾಡಿದಾಗ ನಿಮಗೆ ನೂರಾರು ಟಿ.ವಿ. ಚಾನೆಲ್‌ಗಳು ಉಚಿತವಾಗಿ ದೊರೆಯುತ್ತವೆ. ಕಂಪನಿಯವರು ಹೇಳಿಕೊಂಡ ಪ್ರಕಾರ ಸುಮಾರು 5 ಲಕ್ಷ ಗಂಟೆಗಳಷ್ಟು ಹೂರಣ ಉಚಿತವಾಗಿ ದೊರೆಯುತ್ತವೆ.

ಒಂದು ರೀತಿಯಲ್ಲಿ ಇದನ್ನು ದೊಡ್ಡ ಗಾತ್ರದ ಆ್ಯಂಡ್ರಾಯ್ಡ್ ಸಾಧನ ಎಂದೂ ಹೇಳಬಹುದು. ಆ್ಯಂಡ್ರಾಯ್ಡ್‌ನ ಹಲವು ಆ್ಯಪ್‌ಗಳು ಇದರಲ್ಲಿವೆ. ಆದರೂ ಕೆಲವು ಅತೀ ಅಗತ್ಯದ ಆ್ಯಪ್‌ಗಳು ಇಲ್ಲ. ಉದಾಹರಣೆಗೆ ಅಂತರಜಾಲ ವೀಕ್ಷಣೆ ಮಾಡಲು ಬೇಕಾದ ಬ್ರೌಸರ್. ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಾಕಿಕೊಳ್ಳುವ ಸೌಲಭ್ಯ ನೀಡಿಲ್ಲ. ಕಿರುತಂತ್ರಾಂಶಗಳ apk ಫೈಲ್‌ಗಳನ್ನು ಎಲ್ಲಿಂದಾದರೂ (ಉದಾ – apkpure.com) ತಂದು ಇದಕ್ಕೆ ಹಾಕಿದರೂ ಹಲವು apk ಫೈಲ್‌ಗಳನ್ನು ಇದು ಕೆಲಸ ಮಾಡಲು ಬಿಡುವುದಿಲ್ಲ. ಉದಾಹರಣೆಗೆ ಗೂಗಲ್‌ ಪ್ಲೇ ಸ್ಟೋರ್, ಕ್ರೋಮ್, ಫೈರ್‌ಫಾಕ್ಸ್ ಬ್ರೌಸರ್‌ಗಳು, ಹಲವು ಆಟಗಳು, ಇತ್ಯಾದಿ. InBrowser ಮಾತ್ರ ನಾನು ಕಂಡುಕೊಂಡಂತೆ ಇದರಲ್ಲಿ ಕೆಲಸ ಮಾಡುವ ಬ್ರೌಸರ್.

ಈ ಟಿ.ವಿ.ಗೆ ಹಲವು ನಮೂನೆಯಲ್ಲಿ ಜೋಡಣೆಗಳನ್ನು ಮಾಡಬಹುದು. ಉದಾಹರಣೆಗೆ ವೈಫೈ ಮತ್ತು ಎಥರ್‌ನೆಟ್. ಅಂತರಜಾಲ ಸಂಪರ್ಕ ಪಡೆದರೆ ಮಾತ್ರ ಇದರ ಸಂಪೂರ್ಣ ಶಕ್ತಿ ಅನುಭವಿಸಬಹುದು. ಬ್ಲೂಟೂತ್ ಸೌಲಭ್ಯ ನೀಡಿಲ್ಲ.

ಕಂಪನಿಯವರೇ ನೀಡಿದ ವಿಡಿಯೊ ಪ್ಲೇಯರ್‌ ಬಳಸಿ ನೋಡಿದಾಗ ಎಲ್ಲ ನಮೂನೆಯ ವಿಡಿಯೊ ಫೈಲ್‌ಗಳು ಪ್ಲೇ ಆಗಲಿಲ್ಲ. ಉದಾಹರಣೆಗೆ mkv. ವಿಎಲ್‌ಸಿ (VLC) ಪ್ಲೇಯರ್‌ನ apk ಫೈಲ್ ಅನ್ನು ಇನ್‌ಸ್ಟಾಲ್ ಮಾಡಿ ಅದರ ಮೂಲಕ ಪ್ಲೇ ಮಾಡಿದಾಗ ಎಲ್ಲ ನಮೂನೆಯ ಫೈಲ್‌ಗಳು ಪ್ಲೇ ಆದವು. ಪರದೆಯ ರೆಸೊಲ್ಯೂಶನ್ ಮತ್ತು ಗುಣಮಟ್ಟ ಉತ್ತಮವಾಗಿದೆ. ಬಣ್ಣಗಳ ಪುನರುತ್ಪತ್ತಿ ಉತ್ತಮ ಮತ್ತು ನೈಜವಾಗಿದೆ. ಹೈಡೆಫಿನಿಶನ್ ವಿಡಿಯೊಗಳನ್ನು ವೀಕ್ಷಿಸುವ ಅನುಭವವೂ ಚೆನ್ನಾಗಿದೆ. 4k ರೆಸೊಲೂಶನ್‌ನ ವಿಡಿಯೊಗಳನ್ನು ಅವರೇ ನೀಡಿದ ಆ್ಯಪ್ ಮೂಲಕ ಪ್ಲೇ ಮಾಡಲಾಗುವುದಿಲ್ಲ. ಆದರೆ ವಿಎಲ್‌ಸಿ ಮೂಲಕ ಪ್ಲೇ ಮಾಡಬಹುದು. ಮನೆಯ ಡಿಟಿಎಚ್‌ನಲ್ಲಿ ಹೈಡೆಫಿನಿಶನ್ ಚಾನೆಲ್‌ಗಳಿದ್ದರೆ ಅವುಗಳ ವೀಕ್ಷಣೆಗೆ ಇದು ಉತ್ತಮ ಟಿ.ವಿ.

ಇದರ ಆಡಿಯೊ ಇಂಜಿನ್ ಸುಮಾರಾಗಿದೆ. ಹಲವು ಆಯ್ಕೆ ಗಳೂ ಇವೆ. ಆದರೆ ಇದರಲ್ಲಿರುವ ಸ್ಪೀಕರುಗಳ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಉತ್ತಮ ಧ್ವನಿ ಬೇಕಿದ್ದಲ್ಲಿ ಪ್ರತ್ಯೇಕ ಆಂಪ್ಲಿಫೈಯರ್ ಮತ್ತು ಸ್ಪೀಕರುಗಳು ಇದ್ದಲ್ಲಿ ಅದಕ್ಕೆ ಜೋಡಿಸುವುದೇ ಉತ್ತಮ.

ಇದರಲ್ಲಿ ಡಿಎಲ್‌ಎನ್‌ಎ ಇದೆ. ಅಂದರೆ ಈ ಟಿ.ವಿ.ಯನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಇನ್ನೊಂದು ಪರದೆಯಾಗಿ ಕೂಡ ಬಳಸಬಹುದು. ಹಾಗೆ ಬಳಸಬೇಕಾದರೆ ಟಿ.ವಿ. ಮತ್ತು ಫೋನ್ ಎರಡೂ ಒಂದೇ ವೈಫೈ ಜಾಲದಲ್ಲಿ ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಅಥವಾ ಟ್ಯಾಬ್ಲೆಟ್‌ಗಳಲ್ಲಿರುವ ಫೋಟೊಗಳನ್ನು ಚಿಕ್ಕ ಪರದೆಯಲ್ಲಿ ವೀಕ್ಷಿಸುವ ಬದಲಿಗೆ ಈ ಟಿ.ವಿ.ಯನ್ನು ಫೋನಿಗೆ ಇನ್ನೊಂದು ಪರದೆಯನ್ನಾಗಿಸಿ ದೊಡ್ಡ ಗಾತ್ರದಲ್ಲಿ ವೀಕ್ಷಿಸಬಹುದು. ಫೋನಿನಿಂದ ವಿಡಿಯೊ ಪ್ಲೇ ಮಾಡಬಹುದು. ಗಣಕಕ್ಕೆ ಮಾನಿಟರ್ ಆಗಿಯೂ ಬಳಸಬಹುದು. ನೀವು ಸ್ವಲ್ಪ ತಾಂತ್ರಿಕ ಪರಿಣತರಾಗಿದ್ದರೆ ಕಸರತ್ತುಗಳನ್ನು ಮಾಡಿ ಇದರಲ್ಲಿ ಹಲವು ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ ಯುಎಸ್‌ಬಿ ಕೀಬೋರ್ಡ್‌ ಮತ್ತು ಮೌಸ್ ಜೋಡಿಸಿ ಕೆಲಸ ಮಾಡುವುದು.

 

ವಾರದ ಆ್ಯಪ್: ಹಚ್ಚೆ ಹಚ್ಚಿಸಿಕೊಳ್ಳುವವರಿಗೆ

ಇತ್ತೀಚೆಗೆ ಯುವಜನರಲ್ಲಿ ಹಚ್ಚೆ ಹಚ್ಚಿಸಿಕೊಳ್ಳುವ ಹುಚ್ಚು ಹೆಚ್ಚಾಗಿದೆ. ಹಲವು ನಮೂನೆಯ ಹಚ್ಚೆಗಳ ವಿನ್ಯಾಸಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಯಾವ ವಿನ್ಯಾಸ ನಿಮ್ಮ ದೇಹದ ಯಾವ ಅಂಗದ ಮೇಲೆ ಹೇಗೆ ಕಾಣಿಸಬಹುದು ಎಂದು ತಿಳಿಯಬೇಕೇ? ಅದಕ್ಕೂ ಕಿರು ತಂತ್ರಾಂಶಗಳಿವೆ (ಆ್ಯಪ್).

ಅಂತಹ ಒಂದು ಕಿರು ತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ INKHUNTER - try tattoo designs ಎಂದು ಹುಡುಕಬೇಕು ಅಥವಾ http://bit.ly/gadget loka322 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ನಿಮ್ಮ ದೇಹದಲ್ಲಿ ಯಾವ ಅಂಗದ ಮೇಲೆ ಹಚ್ಚೆ ಹಚ್ಚಿಸಕೊಳ್ಳಬೇಕೆಂದು ಕೊಂಡಿದ್ದೀರೋ ಆ ಅಂಗದ ಫೋಟೊ ತೆಗೆದು ಅದರ ಮೇಲೆ ಹಚ್ಚೆಯನ್ನು ವರ್ಧಿತ ವಾಸ್ತವದ (augmented reality) ಮೂಲಕ ನೋಡುವ ಸವಲತ್ತೂ ಇದೆ. ಹಚ್ಚೆಪ್ರಿಯರಿಗೆ ಉಪಯುಕ್ತವಾದ ಕಿರುತಂತ್ರಾಂಶವಿದು.

ಗ್ಯಾಜೆಟ್ ಪದ: ಇ-ಬುಕ್ ರೀಡರ್ (e-book reader)

ಇ-ಬುಕ್ ರೀಡರ್ ಎಂಬುದು ಒಂದು ಕೈಯಲ್ಲಿ ಹಿಡಿದು ವಿ-ಪುಸ್ತಕ ಗಳನ್ನು ಓದುವ ಸಾಧನ. ಇದನ್ನು ಪ್ರಮುಖವಾಗಿ ಇ-ಬುಕ್ ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳನ್ನು ಓದುವುದಕ್ಕಾಗಿ ವಿನ್ಯಾಸ ಮಾಡಲಾಗಿದೆ. ಪರದೆಯ ಮೇಲೆ ಪಠ್ಯವನ್ನು ತೋರಿಸಬಲ್ಲ ಯಾವುದೇ ಸಾಧನವು ಇ-ಬುಕ್ ರೀಡರ್ ಆಗಿ ಕೆಲಸ ಮಾಡಬಲ್ಲುದು.

ಆದರೆ ವಿ-ಪುಸ್ತಕಗಳನ್ನು ಓದಲೆಂದೇ ವಿನ್ಯಾಸ ಮಾಡಿದ ಸಾಧನ ಗಳು ಪ್ರಖರ ಬೆಳಕಿನಲ್ಲಿ ಓದಲು ಉತ್ತಮವಾಗಿರುತ್ತವೆ ಮತ್ತು ಕಡಿಮೆ ಬ್ಯಾಟರಿ ಕೋಶ ಬಳಕೆ ಮಾಡುತ್ತವೆ. ಒಂದು ಇ-ಬುಕ್ ರೀಡರ್‌ನಲ್ಲಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿಡಬಹುದು. (ಕನ್ನಡ ವಿಕಿಪೀಡಿಯದಿಂದ)

ಗ್ಯಾಜೆಟ್ ಸಲಹೆ

ಶಶಾಂಕ ಲಿಂಬಿಕಾಯಿ ಅವರ ಪ್ರಶ್ನೆ: ರೆಡ್‌ಮಿ ನೋಟ್ 4 ಮೊಬೈಲ್‌ನಲ್ಲಿ ಆ್ಯಂಡ್ರಾಯ್ಡ್ ಆವೃತ್ತಿ 7ರಿಂದ ಆವೃತ್ತಿ 6ಕ್ಕೆ ಬದಲಾಯಿಸುವುದು ಹೇಗೆ?

ಉ: ಇದನ್ನು ಮಾಡಲು ನೀವು ಸ್ವಲ್ಪ ತಾಂತ್ರಿಕ ಪರಿಣತ ರಾಗಿರಬೇಕು. ಸಾಮಾನ್ಯವಾಗಿ ಎಲ್ಲರೂ ತಂತ್ರಾಂಶವನ್ನು ನವೀಕರಿಸುತ್ತಾರೆ. ಆದರೆ ನೀವು ಹಿಮ್ಮೊಗ ಚಲಿಸಲು ಸಲಹೆ ಕೇಳುತ್ತಿದ್ದೀರ. http://en.miui.com/download-309.html ಜಾಲತಾಣದಲ್ಲಿ ಎಲ್ಲ ROMಗಳು ದೊರೆಯುತ್ತವೆ.

ನಿಮಗೆ ಬೇಕಾದ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ. ಅದನ್ನು ನಿಮ್ಮ ಫೋನ್‌ಗೆ ಫ್ಲಾಶ್ ಮಾಡುವುದು ಹೇಗೆ ಎಂಬುದನ್ನೂ ಅದೇ ಜಾಲತಾಣ ದಲ್ಲಿ ವಿವರಿಸಿದ್ದಾರೆ. ಅದರಂತೆ ಮಾಡಬೇಕು. ಮೊದಲು ನಿಮ್ಮ ಫೋನನ್ನು ಸಂಪೂರ್ಣ ಬ್ಯಾಕ್‌ಅಪ್ ಮಾಡಿಕೊಳ್ಳಲು ಮರೆಯದಿರಿ.

ಗ್ಯಾಜೆಟ್ ತರ್ಲೆ: ಇ-ಬುಕ್ ರೀಡರ್‌ಗೆ ಪುಸ್ತಕದ ವಾಸನೆ

ಇ-ಬುಕ್ ರೀಡರ್‌ಗಳ ಒಂದು ಪ್ರಮುಖ ಕೊರತೆಯೆಂದರೆ ಅವುಗಳು ಹೊಸ ಪುಸ್ತಕದ ವಾಸನೆಯನ್ನು ಸೂಸುವುದಿಲ್ಲ ಎಂದು. ಈ ಕೊರತೆಯನ್ನು ನೀಗಿಸಲು ಇ-ಬುಕ್ ರೀಡರ್‌ ಮೇಲೆ ಸಿಂಪಡಿಸಲು ಪುಸ್ತಕದ ವಾಸನೆಯನ್ನು ಸೂಸುವ ಸುವಾಸನಾ ದ್ರವ್ಯ ತಯಾರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry