ಗುರುವಾರ , ಮೇ 6, 2021
23 °C

ಒಡೆಯುವವರು ಮತ್ತು ಬೆಸೆಯುವವರ ನಡುವೆ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಒಡೆಯುವವರು ಮತ್ತು ಬೆಸೆಯುವವರ ನಡುವೆ

ಮೂವತ್ತೈದು ವರ್ಷದ ಸೈಯದ್ ಹುಸೇನ್ ಹದಿನಾರು ವರ್ಷ ದುಬೈನಲ್ಲಿ ಕೆಲಸ ಮಾಡಿ ದಕ್ಷಿಣ ಕನ್ನಡದ ತಮ್ಮೂರು ಹೆಜಮಾಡಿಗೆ ಬಂದರು. ಇಡೀ ಜಿಲ್ಲೆಯ ವಾತಾವರಣ ಬದಲಾಗಿತ್ತು; ದಕ್ಷಿಣ ಕನ್ನಡ ಕೋಮುದ್ವೇಷದ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿತ್ತು. ಇದಕ್ಕೇನಾದರೂ ಉತ್ತರ ಹುಡುಕಬೇಕೆಂದುಕೊಂಡ ಹುಸೇನ್, ಐಪಿಎಲ್ ಮಾದರಿಯಲ್ಲಿ ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್ ಸಂಘಟಿಸಿದರು. ಈ ಕುರಿತು ‘ದ ಹಿಂದೂ’ ಪತ್ರಿಕೆಯ ಮುಖಪುಟದಲ್ಲಿ ಬಂದ ‘ಕಮ್ಯುನಲ್ ಟೆನ್ಷನ್ ಹಿಟ್ ಫಾರ್ ಎ ಸಿಕ್ಸ್’ ಎಂಬ ವರದಿ ಓದಿದಾಗ, ಇಂಡಿಯಾದಲ್ಲಿ ಕೋಮುವಾದದ ಕಿಚ್ಚಿನಿಂದ ಹೊರಬರುವ ಹಾದಿಗಳು ರೂಪುಗೊಳ್ಳುತ್ತಲೇ ಇರುತ್ತವೆಂಬ ಆಶಾವಾದ ಮೂಡತೊಡಗಿತು. ಜನರನ್ನು ಒಡೆಯುವ ನೀಚರ ನಡುವೆ, ಜನರಲ್ಲಿ ನೆಮ್ಮದಿ ಮೂಡಿಸಬಲ್ಲವರು ಕೂಡ ಹುಟ್ಟುತ್ತಲೇ ಇರುತ್ತಾರೆ. ಈ ದಿಸೆಯಲ್ಲಿ ಜಾತ್ಯತೀತ ಮನಸ್ಸುಗಳು ಹಾಗೂ ಸಂಘಟನೆಗಳು ಒಂದೆಡೆಯಿಂದ ಹೊರಟರೆ, ಹುಸೇನ್ ಇನ್ನೊಂದು ದಿಕ್ಕಿನಿಂದ ಹೊರಟರು. ಸುತ್ತಮುತ್ತಲ ಊರುಗಳ ಹುಡುಗರ ಕ್ರಿಕೆಟ್ ತಂಡಗಳನ್ನು ಕಲೆ ಹಾಕಿದರು. ಈ ತಂಡಗಳ ವಿಶೇಷವೆಂದರೆ, ಒಂದು ತಂಡದಲ್ಲಿ ಒಂದು ಧರ್ಮಕ್ಕೆ ಸೇರಿದವರು ಏಳು ಜನಕ್ಕಿಂತ ಹೆಚ್ಚು ಜನ ಇರಬಾರದು. ತಂಡದಲ್ಲಿ ಕೊನೆಯಪಕ್ಷ ನಾಲ್ಕು ಜನರಾದರೂ ಇತರ ಧರ್ಮಕ್ಕೆ ಸೇರಿದವರಿರಬೇಕು.  

ಹುಸೇನರ ಐಡಿಯಾ ಸರಳವಾಗಿತ್ತು: ‘ಕ್ರಿಕೆಟ್ ಪಂದ್ಯದಲ್ಲಿ ಒಂದು ಟೀಮ್ ಗೆಲ್ಲಬೇಕಾದರೆ ಟೀಮಿನಲ್ಲಿ ಒಬ್ಬರಿಗೊಬ್ಬರು ಹೆಗಲೆಣೆಯಾಗಲೇಬೇಕಾಗುತ್ತದೆ. ಜೊತೆಯ ಆಟಗಾರ ಯಾವ ಧರ್ಮದವನು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಂಡದ ಆಟಗಾರರ ನಡುವೆ ಸಂಬಂಧ ಮೂಡುತ್ತದೆ.’  ‘ಫ್ರೆಂಡ್ಸ್ ಹೆಜಮಾಡಿ’ ಆಯೋಜಿಸಿದ ಮೊದಲ ಟೂರ್ನಿಯಲ್ಲಿ ‘ಸ್ಟಾರ್ಸ್ ಕೋಡಿ’ ಟೀಮ್ ‘ಸೌಹಾರ್ದ ಟ್ರೋಫಿ’ ಗೆದ್ದಿತು. ಗೆದ್ದ ತಂಡದ ಹುಡುಗರ ಗ್ರೂಪ್ ಫೋಟೊದಲ್ಲಿ ಹಬ್ಬಿದ್ದ ನಿರಾಳ ನಗೆ ನೋಡಿದಾಗ ಈ ಸೌಹಾರ್ದ ನಗೆ ದೇಶದ ತುಂಬ ಹಬ್ಬಿಕೊಳ್ಳಲಿ ಎನ್ನಿಸಿತು. ಮುಕ್ತವಾಗಿ ಯೋಚಿಸಬಲ್ಲ ಎಲ್ಲ ಧರ್ಮಗಳ ಹೊಸ ತಲೆಮಾರಿನ ಹುಡುಗ, ಹುಡುಗಿಯರು ಮನಸ್ಸು ಮಾಡಿದರೆ ಈ ಕೆಲಸ ಅಸಾಧ್ಯವೇನಲ್ಲ.

ನಾವೆಲ್ಲ ಬಲ್ಲಂತೆ ಇಂಡಿಯಾದ ಸಾಮಾನ್ಯ ಜನರಲ್ಲಿ ಸಹಜವಾಗಿಯೇ ಈ ಸಹಬಾಳ್ವೆಯ ಸ್ಪಿರಿಟ್ ಇದೆ. ನಿತ್ಯ ದುಡಿದು ಒಟ್ಟಿಗೆ ಬದುಕಬೇಕಾದ ಜನರಿಗೆ ಈ ಬಗೆಯ ಸೌಹಾರ್ದದ ಪಾಠಗಳನ್ನು ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ನಿಜವಾದ ಅರ್ಥದಲ್ಲಿ ಸುಶಿಕ್ಷಿತರಾದ ಹಿಂದೂಗಳಿಗಾಗಲೀ ಮುಸ್ಲಿಮರಿಗಾಗಲೀ ಈ ಪಾಠಗಳನ್ನು ಕಲಿಸಬೇಕಾಗಿಲ್ಲ. ಮುಕ್ತವಾಗಿ ಒಂದೆಡೆ ಕಲಿಯುವ ಹುಡುಗ ಹುಡುಗಿಯರ ಮನಸ್ಸಿನಲ್ಲಿ ಇಂಥ ಕ್ಷುಲ್ಲಕ ಪ್ರಶ್ನೆಗಳಿರುವುದಿಲ್ಲ. ಸಮಾಜದಲ್ಲಿ ಕೋಮುಕಾಯಿಲೆ ಹಬ್ಬತೊಡಗಿದಾಗ ಮಾತ್ರ ಎಳೆಯರಲ್ಲೂ ಹೀನಧೋರಣೆ ಮೂಡತೊಡಗುತ್ತದೆ. ಈ ಸಮಸ್ಯೆ ಹೆಚ್ಚತೊಡಗಿರುವುದು ಮಧ್ಯಮ ವರ್ಗದ ಶಿಕ್ಷಿತರ ದುರಹಂಕಾರದಿಂದ; ಬಹುಸಂಖ್ಯಾತತೆಯ ಠೇಂಕಾರದಿಂದ; ಕೋಮುದ್ವೇಷವನ್ನು ಪೋಷಿಸುವ ರಾಜಕೀಯ ಪಕ್ಷಗಳು, ಗುಂಪುಗಳಿಂದ. ಇಂಥವರಿಗೆ ಮುಸ್ಲಿಮರು ಮನುಷ್ಯರಂತೆಯೇ ಕಾಣುವುದಿಲ್ಲ. ನಾವು ನಿತ್ಯ ನೋಡುವ ಶಿಕ್ಷಣ ಸಂಸ್ಥೆಗಳಲ್ಲಿ, ಸರ್ಕಾರಿ ಉದ್ಯೋಗಗಳ ವಲಯಗಳಲ್ಲಿ ಮುಸ್ಲಿಂ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆಯಿದೆಯಲ್ಲವೆ ಎಂದು ಕೊಂಚ ಸಹಾನುಭೂತಿ ತೋರಿಸಿದರೆ ಸಾಕು, ಅದರ ಬಗ್ಗೆ ಸಿನಿಕತೆ, ಅಸಹನೆ ತೋರುವ ಹಿಂದೂ ‘ಸುಶಿಕ್ಷಿತ’ರನ್ನೇ ಹೆಚ್ಚು ಕಾಣುತ್ತೇವೆ. ಒಂದು ಸಮುದಾಯಕ್ಕೆ ಉತ್ತಮ ಉದ್ಯೋಗದ ಅವಕಾಶವೇ ಇಲ್ಲವಾದರೆ, ಅಲ್ಲಿ ಎಂಥ ಅಭದ್ರತೆ ಮುತ್ತುತ್ತದೆ ಎಂಬುದನ್ನು ಅರಿಯಲು ಇಂಥವರು ತಯಾರಿರುವುದಿಲ್ಲ.

ಹಾಗೆಯೇ, ಮುಸ್ಲಿಮರಿಗೆ ತಕ್ಕ ರಾಜಕೀಯ ಪ್ರಾತಿನಿಧ್ಯ ಸಿಕ್ಕದೇ ಹೋದರೆ ಅವರು ತಮ್ಮ ದೂರುದುಮ್ಮಾನಗಳನ್ನು ಯಾರಲ್ಲಿ ಹೇಳಿಕೊಳ್ಳಬೇಕು ಎಂಬ ಬಗ್ಗೆ ನಮ್ಮ ಬಹುತೇಕ ರಾಜಕೀಯ ಪಕ್ಷಗಳು ಕೂಡ ಗಂಭೀರವಾಗಿ ಯೋಚಿಸುವುದಿಲ್ಲ. ಮಂತ್ರಿ ತನ್ವೀರ್ ಸೇಠರ ಮನೆಯ ಎದುರು ಬೆಳಗ್ಗೆ ಏಳು ಗಂಟೆಗೇ ಬಂದು ನಿಂತು ರೇಷನ್ ಕಾರ್ಡಿನ ಸಮಸ್ಯೆಯಿಂದ ಹಿಡಿದು ಬಗೆಬಗೆಯ ಸಮಸ್ಯೆಗಳವರೆಗೂ ಅವರಲ್ಲಿ ದುಃಖ ತೋಡಿಕೊಳ್ಳಲು ಕಾದಿರುವ ಬಡ ಮುಸ್ಲಿಮರನ್ನಾಗಲೀ, ಇನ್ನಿತರ ಶ್ರಮಜೀವಿ ಮುಸ್ಲಿಮರನ್ನಾಗಲೀ ಒಮ್ಮೆ ನೋಡಿದವರಿಗೂ ಮುಸ್ಲಿಮರ ಬಗೆಗಿನ ಕಲ್ಪಿತ ಪೂರ್ವಗ್ರಹಗಳು ಕರಗಿಹೋಗಬಲ್ಲವು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿ ಹೋಗಿ ನೋಡಿ: ಸಾವಿರಾರು ಜನ ಅಸಹಾಯಕ ಮುಸ್ಲಿಂ ಹೆಂಗಸರು ಡಾಕ್ಟರುಗಳಿಗಾಗಿ ಕಾಯುತ್ತಾ ಕೂತಿರುತ್ತಾರೆ. ಸರ್ಕಾರಿ ಆಸ್ಪತ್ರೆಯಿಲ್ಲದಿದ್ದರೆ ಅವರು ಎಲ್ಲಿಗೆ ಹೋಗಬೇಕಾಗಿತ್ತು?  ಸಂದರ್ಶನವೊಂದರಲ್ಲಿ ಜನರಲ್ ಮೆರಿಟ್ ಲಿಸ್ಟಿನಲ್ಲಿರುವ ಮುಸ್ಲಿಂ ಹುಡುಗನನ್ನು ಆಯ್ಕೆದಾರರು ಕೋಮು ಪೂರ್ವಗ್ರಹದಿಂದ ಕೈಬಿಟ್ಟರೆ ಆತ ಏನು ಮಾಡಬೇಕು? ಮುಸ್ಲಿಂ ಸಮುದಾಯದಿಂದ ಬಂದ, ಉರ್ದು ಮಾತಾಡುವ ಮಹಿಳಾ ಡಾಕ್ಟರುಗಳೇ ಇಲ್ಲದಿದ್ದರೆ ಮುಸ್ಲಿಂ ಮಹಿಳೆಯರು ತಮ್ಮ ಸಮಸ್ಯೆಯನ್ನು ಯಾವ ಭಾಷೆಯಲ್ಲಿ ಹೇಳಿಕೊಳ್ಳಬೇಕು? ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಹೋದರೆ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಗತಿಯೇನು? ಸರ್ಕಾರಿ ಉದ್ಯೋಗಗಳಲ್ಲಿ ಕಡಿತ ಮಾಡುತ್ತಾ ಹೋದರೆ, ಬಡ ಮುಸ್ಲಿಂ ಯುವಕರು ಉದ್ಯೋಗಕ್ಕಾಗಿ ಎಲ್ಲಿ ಹೋಗಬೇಕು? ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರೇ ಇಲ್ಲದಿದ್ದರೆ ಆ ಸಮುದಾಯಗಳ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳುವವರಾರು? ಇಂಥ ನೂರಾರು ಜೀವನ್ಮರಣದ ಪ್ರಶ್ನೆಗಳಿವೆ. ಮಂಗ್ಳೂರ ವಿಜಯ ಅನುವಾದಿಸಿರುವ ‘ನಮ್ಮನು ನಾವರಿಯದೆ…’ (ಸಂಬುದ್ಧ ಪ್ರಕಾಶನ) ಪುಸ್ತಕ ಮುಸ್ಲಿಂ ಸಮುದಾಯದ ಪ್ರಾಮಾಣಿಕ ಆತ್ಮಾವಲೋಕನ ಹಾಗೂ ಮುಸ್ಲಿಮರ ನಿಜವಾದ ಕಷ್ಟಗಳನ್ನು ಅಂಕಿಅಂಶ ಸಮೇತ ದಾಖಲಿಸುತ್ತದೆ. ಇಂಥ ಪುಸ್ತಕಗಳು ಎತ್ತುವ ಪ್ರಶ್ನೆಗಳನ್ನು ‘ಮುಸ್ಲಿಂ ಪರ’ ಎನ್ನಲಾಗುವ ಪಕ್ಷಗಳಾದರೂ ಪ್ರಾಮಾಣಿಕವಾಗಿ ಕೈಗೆತ್ತಿಕೊಳ್ಳಬೇಕು.

ಇವತ್ತು ಕೋಮುವಾದಿ ಪಕ್ಷಗಳು, ಸಂಘಟನೆಗಳು ಸುಳ್ಳುಗಳ ಪ್ರಚಾರದ ಮೂಲಕ ಮುಸ್ಲಿಂವಿರೋಧಿ ಭಾವನೆಗಳನ್ನು ಬಿತ್ತುವುದನ್ನೇ ತಮ್ಮ ರಾಜಕಾರಣವನ್ನಾಗಿ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಇವರ ಜೊತೆಗೆ ಸಾಮಾಜಿಕ ಮಾಧ್ಯಮಗಳನ್ನು ಇದಕ್ಕಾಗಿಯೇ ಬಳಸುವ ಹೊಟ್ಟೆತುಂಬಿದವರ ಶನಿಸಂತಾನವೂ ಸೇರಿಕೊಂಡಿದೆ. ಈಚೆಗೆ ಅಮೆರಿಕದಲ್ಲಿ ಜನಾಂಗೀಯ ದ್ವೇಷಕ್ಕೆ ಈಡಾದ ನಂತರ, ಅಲ್ಲಿ ನೆಲೆಸಿರುವ ಹಿಂದೂಗಳು ಮೊದಲ ಬಾರಿಗೆ ‘ಅಲ್ಪಸಂಖ್ಯಾತರ ಅಭದ್ರತೆ’ ಎಂಬ ಪದ ಬಳಸತೊಡಗಿದರು. ಇವರಲ್ಲನೇಕರು ಈ ಹಿಂದೆ ಇಂಡಿಯಾದ ಅಲ್ಪಸಂಖ್ಯಾತರ ವಿರುದ್ಧ ತಾವು ಮಾಡಿರುವ ದ್ವೇಷಬಿತ್ತನೆಯ  ದುಷ್ಪರಿಣಾಮ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಇರಾಕ್, ಇರಾನ್ ಮುಂತಾದ ಮುಸ್ಲಿಂ ಪ್ರಧಾನ ರಾಷ್ಟ್ರಗಳ ಮೇಲೆ ತನ್ನ ಆಧಿಪತ್ಯ ಸ್ಥಾಪಿಸಲು ಅಮೆರಿಕ ಕಾಲಕಾಲಕ್ಕೆ ಆ ರಾಷ್ಟ್ರಗಳ ಮೇಲೆ ಭೀಕರ ಅಪಪ್ರಚಾರ ಮಾಡುತ್ತಿರುತ್ತದೆ; ಈ ಸುಳ್ಳನ್ನು ಅಮೆರಿಕಪರ ವಾಚಾಳಿಗಳು ಎಲ್ಲ ದೇಶಗಳ ಮುಸ್ಲಿಮರ ವಿರುದ್ಧ ತಿರುಗಿಸುತ್ತಿರುತ್ತಾರೆ. ಇಸ್ಲಾಮಿಕ್ ರಾಷ್ಟ್ರದ ಹೆಸರಿನಲ್ಲಿ ನಡೆಯುವ ದಾಳಿಗಳ ಅಪರಾಧವನ್ನು ಜಗತ್ತಿನ ಎಲ್ಲ ಮುಸ್ಲಿಮರ ತಲೆಗೆ ಕಟ್ಟುವ ಧೋರಣೆ ಕೂಡ ಮುಸ್ಲಿಮರಿಗೆ ಉಸಿರು ಕಟ್ಟಿಸುತ್ತದೆ. ಜೊತೆಗೆ, ಮುಸ್ಲಿಮರಲ್ಲಿ ಉದಾರವಾದಿ ನಾಯಕತ್ವ ಕಡಿಮೆಯಾಗುತ್ತಾ ಬಂದಂತೆ, ಉಗ್ರಭಾಷೆಯನ್ನಾಡುವ ನಾಯಕರೇ ಹೊಸ ತಲೆಮಾರಿನ ಮುಸ್ಲಿಂ ಹುಡುಗರಿಗೆ ಆದರ್ಶವಾಗಿ ಕಾಣತೊಡಗಿದರಂತೂ, ಮುಸ್ಲಿಮರ ಬಿಕ್ಕಟ್ಟು ಇನ್ನಷ್ಟು ಹೆಚ್ಚತೊಡಗುತ್ತದೆ. ಈ ದೃಷ್ಟಿಯಿಂದ, ಕಳೆದ ವರ್ಷ ಬೆಂಗಳೂರಿನಲ್ಲಿ ಇಸ್ಲಾಂ ಧರ್ಮಪ್ರಚಾರಕನೊಬ್ಬ ಉದ್ರೇಕಕಾರಿ ಭಾಷಣಗಳನ್ನು ಮಾಡಿ ಹುಡುಗರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆಂದು ಮುಸ್ಲಿಮರೇ ದೂರು ನೀಡಿದ ಪ್ರಸಂಗ ಮಹತ್ವದ್ದಾಗಿದೆ. ಈ ನಡೆ ಹೊಸ ತಲೆಮಾರಿನ ಮುಸ್ಲಿಮರಿಗೆ ಮಾದರಿಯಾಗಬೇಕು.

ಇಂಥ ಬಿಕ್ಕಟ್ಟಿನ ವೇಳೆಯಲ್ಲಿ, ಸಮಾಜದಲ್ಲಿ ಪೂರ್ವಗ್ರಹಗಳನ್ನು, ಸುಳ್ಳನ್ನು ಹಬ್ಬಿಸುವ ಸೈತಾನ ಕಾರ್ಖಾನೆಗಳ ಎದುರು ಆತ್ಮಸಾಕ್ಷಿ ಇರುವ ಇನ್ನಿತರ ಸಮುದಾಯಗಳ ಸಜ್ಜನರು ಸುಮ್ಮನಿರಬಾರದು. ದಲಿತರ ಮೇಲೆ ಮಾಡಲಾಗುತ್ತಿದ್ದ, ಇವತ್ತಿಗೂ ಮಾಡುತ್ತಿರುವ ಅಪಪ್ರಚಾರಗಳು ಹಾಗೂ ಹಲ್ಲೆಗಳು ಅಲ್ಪಸಂಖ್ಯಾತರೆಡೆಗೆ ವಿಸ್ತರಿಸುತ್ತಿರುವ ಬೆಳವಣಿಗೆಯನ್ನು ಕಳೆದ ಕೆಲವು ದಶಕಗಳಿಂದ ನೋಡುತ್ತಿದ್ದೇವೆ. ಗೋರಕ್ಷಣೆಯ ಕ್ಷುದ್ರರಾಜಕಾರಣಕ್ಕೆ ದಲಿತರು ಮತ್ತು ಮುಸ್ಲಿಮರೇ ಬಲಿಯಾಗುತ್ತಿರುವುದಕ್ಕೆ ಈ ಎರಡು ಸಮುದಾಯಗಳ ವಿರುದ್ಧ ಯೋಜಿತ ಸಂಚುಗಳೇ ಕಾರಣವೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಮುಸ್ಲಿಮರ ಕೀಳರಿಮೆ, ಅಭದ್ರತೆ, ಆತಂಕಗಳನ್ನು ಕುರಿತು ಜವಾಬ್ದಾರಿಯುತ ಬುದ್ಧಿಜೀವಿ ವಲಯ ಆಗಾಗ್ಗೆ ಮಾತಾಡುತ್ತಾ ಬಂದಿದ್ದರೂ ನಮ್ಮ ರಾಜಕೀಯ ನಾಯಕರು ಆ ಬಗ್ಗೆ ಚಿಂತಿಸುವುದನ್ನು ಹಾಗೂ ಜನರಿಗೆ ಮನದಟ್ಟಾಗುವಂತೆ ಮಾತಾಡುವುದನ್ನು ಬಿಟ್ಟು ಬಹಳ ಕಾಲವಾಗಿದೆ. ಧಾರ್ಮಿಕ ನಾಯಕರಲ್ಲಂತೂ ನಿಡುಮಾಮಿಡಿ ಸ್ವಾಮೀಜಿ, ಗದುಗಿನ ತೋಂಟದಾರ್ಯರನ್ನು ಬಿಟ್ಟರೆ ಈ ಕುರಿತು ಮಾತಾಡಿ ಬಹುಸಂಖ್ಯಾತರನ್ನು ತಿದ್ದುವವರು ಕಡಿಮೆ. ಶಾಲಾಕಾಲೇಜುಗಳಲ್ಲಿ ಕೋಮು ವಿಷಬೀಜ ಬಿತ್ತುವ ದುಷ್ಟ ಮೇಷ್ಟರುಗಳ ನಡುವೆ ಕೆಲವಾದರೂ ಶಿಕ್ಷಕ, ಶಿಕ್ಷಕಿಯರು ಸಮಾನತೆ, ಸಹಬಾಳ್ವೆಗಳ ಅರ್ಥವನ್ನು ಹೇಳುತ್ತಿರುತ್ತಾರೆ ಎಂಬುದೇ ಕೊಂಚ ನೆಮ್ಮದಿ ತರುವ ಅಂಶ.  ಇಂಥವರ ಸಂತತಿ ಹೆಚ್ಚಲಿ. ಅದರ ಜೊತೆಗೇ ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ಲೇಖಕಲೇಖಕಿಯರು ಕೂಡ ಜಾತ್ಯತೀತತೆಯನ್ನು ಖಚಿತವಾಗಿ ನಂಬಿ ಬರೆಯುತ್ತಿದ್ದಾರೆ. ಇವರ ಜೊತೆ ಸೇರಿ ಹೊಸ ದಿಕ್ಕಿನಲ್ಲಿ ಯೋಚಿಸಬಲ್ಲ ಮುಸ್ಲಿಂ, ಕ್ರಿಶ್ಚಿಯನ್ ತರುಣ ತರುಣಿಯರು ಹೊಸ ನುಡಿಗಟ್ಟಿನಲ್ಲಿ ಮಾತಾಡತೊಡಗಿದರೆ ಹೆಜಮಾಡಿಯ ಕ್ರಿಕೆಟ್ ಟೂರ್ನಿಯ ಯುವಚೈತನ್ಯ ಎಲ್ಲೆಡೆ ಹಬ್ಬಬಹುದು. ಅವತ್ತು ಸೌಹಾರ್ದ ಕಪ್ ಟೂರ್ನಿಯ ಸುದ್ದಿ ಪ್ರಕಟವಾದ ದಿನವೇ ಮತ್ತೊಂದು ಸುದ್ದಿಯೂ ಪತ್ರಿಕೆಗಳಲ್ಲಿತ್ತು. ಗೋರಕ್ಷಣೆಯ ನೆಪದಲ್ಲಿ ದಲಿತರು ಹಾಗೂ ಮುಸ್ಲಿಮರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಬೇಕಾದುದನ್ನು ಕುರಿತಂತೆ ಸುಪ್ರೀಂ ಕೋರ್ಟು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮುಂತಾದ ರಾಜ್ಯಗಳಿಗೆ ನೋಟಿಸ್ ಕೊಟ್ಟಿತ್ತು. ಇಂಡಿಯಾವನ್ನು ನಿರಂತರವಾಗಿ ವಿಭಜಿಸಿ ಲಾಭ ಪಡೆಯಲು ಮತೀಯವಾದಿಗಳು, ಉಗ್ರಗಾಮಿಗಳು ಹೂಂಕರಿಸುತ್ತಿರುವ ಹೊತ್ತಿನಲ್ಲೇ ಇಲ್ಲಿ ಸನ್ಮತಿ ಬಿತ್ತುವ ವಲಯಗಳ ಪ್ರಯತ್ನಗಳತ್ತಲೂ ಗಮನವಿಟ್ಟು ನೋಡಬೇಕು. ಆಗ ನಮ್ಮ ಸಣ್ಣಪುಟ್ಟ ಪ್ರಯತ್ನಗಳ ಮೂಲಕವೂ ಈ ಕೆಲಸ ಮಾಡಬಹುದು ಎಂಬ ನಂಬಿಕೆ ಗಟ್ಟಿಯಾಗತೊಡಗುತ್ತದೆ. ಜಾತ್ಯತೀತತೆಯ ತತ್ವವನ್ನು ಬಿಟ್ಟರೆ ಇಂಡಿಯಾದ ಏಕತೆಗೆ ಬೇರೆ ಮಾರ್ಗವೇ ಇಲ್ಲ. ಜಾತ್ಯತೀತತೆಯಿಲ್ಲದೆ ಮುಸ್ಲಿಮರಷ್ಟೇ ಅಲ್ಲ, ದಲಿತರು, ಹಿಂದುಳಿದವರು, ಮಹಿಳೆಯರೂ ಸೇರಿದಂತೆ ಯಾವ ದಮನಿತ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಕ್ಕುವುದು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಸದಾ ಒತ್ತಿ ಹೇಳುತ್ತಿರಲೇಬೇಕಾಗುತ್ತದೆ.

ಕೊನೆ ಟಿಪ್ಪಣಿ:  ಮಾತೃಭೂಮಿಯ ಮತ್ತೊಂದು ಮುಖ

ಬಹುಕಾಲ ಸೌದಿ ಅರೇಬಿಯಾದಲ್ಲಿದ್ದ ‘ಆರಾಧ್ಯ’ ಬೆಂಗಳೂರಿಗೆ ಬಂದು ನೆಲೆಸಿ ಮಕ್ಕಳನ್ನು ಬೆಳೆಸಿಕೊಂಡು ನೆಮ್ಮದಿಯಾಗಿರೋಣವೆಂದು ಮನೆ ಕಟ್ಟಿಸತೊಡಗಿದರು. ಆದರೆ ನಾಲ್ಕೈದು ತಿಂಗಳಲ್ಲಿ ಇಲ್ಲಿ ನಿತ್ಯ ಪ್ರಸಾರವಾಗುವ, ಪ್ರಕಟವಾಗುವ ಅಪರಾಧ ಸುದ್ದಿಗಳನ್ನು, ಕೋಮುಗಲಭೆಗಳನ್ನು ನೋಡಿ ಮಕ್ಕಳು ಇಲ್ಲಿ ಹೇಗೆ ಬೆಳೆಯುತ್ತಾರೋ ಎಂದು ಆತಂಕಕ್ಕೀಡಾದರು. ಇಂಥದೆಲ್ಲ ಯಾವುದೂ ಕಣ್ಣಿಗೆ ಬೀಳದ ಸೌದಿಯ ಸ್ವಾತಂತ್ರ್ಯಹೀನ ಸ್ಥಿತಿಯೇ ಮಕ್ಕಳಿಗೆ ಸೂಕ್ತವೇನೋ ಅನ್ನಿಸತೊಡಗಿತು! ಒಂದು ದಿನ ದಾರಿಯಲ್ಲಿ ಯಾವುದೋ ಜಗಳದ ನಡುವೆ ಹಿಂದಿ ಭಾಷೆಯಲ್ಲಿ ಮಾತಾಡಿದ ಆರಾಧ್ಯರನ್ನು ಮುಸ್ಲಿಂ ಎಂದುಕೊಂಡ ದಾರಿಹೋಕನೊಬ್ಬ ಸುಮ್ಮಸುಮ್ಮನೆ ಅವರಿಗೆ ಧಮಕಿ ಹಾಕತೊಡಗಿದಾಗಲಂತೂ ಇಂಡಿಯಾದ ಕೋಮುಭಾವನೆಯ ಕ್ರೌರ್ಯದ ನೇರ ಪರಿಚಯವಾಯಿತು. ‘ಆರಾಧ್ಯ’ ಇಂಡಿಯಾ ಬಿಡಲು ತಯಾರಾದರು. ಆದರೆ ಆ ಲಕ್ಷುರಿ ಇಲ್ಲಿ ಬದುಕಲೇಬೇಕಾದವರಿಗೆ ಇರುವುದಿಲ್ಲವಲ್ಲ. ಕೋಮುವಾದಿ ಭಾವನೆಯನ್ನು ನಿತ್ಯ ಪೋಷಿಸುವ ಶಕ್ತಿಗಳ ವಿರುದ್ಧ ‘ಆರಾಧ್ಯ’ ತಮ್ಮ ಬರವಣಿಗೆಯ ಮೂಲಕವಾದರೂ ದನಿಯೆತ್ತಿದರೆ, ಈ ನೆಲದಲ್ಲಿ ಅವರ ಮಕ್ಕಳೂ ಇನ್ನಿತರ ಧರ್ಮಗಳ ಜನರ ಮಕ್ಕಳೂ ಒಟ್ಟಿಗೇ ಇರುವ ವಾತಾವರಣವನ್ನಾದರೂ ಸೃಷ್ಟಿಸಬಹುದಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.