ಒತ್ತಡದಲ್ಲಿ ಷೇರುಪೇಟೆ ವಹಿವಾಟು

7

ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಕೆ. ಜಿ. ಕೃಪಾಲ್
Published:
Updated:
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಮಾರ್ಚ್ 9, 2017 ರಂದು ಷೇರುಪೇಟೆ ಹೆಗ್ಗುರುತಾದ ಸೆನ್ಸೆಕ್ಸ್  28,815 ರಲ್ಲಿತ್ತು. ಅದು ವಾರ್ಷಿಕ ಕನಿಷ್ಠವಾಗಿತ್ತು.  ಆ ಹಂತದಿಂದ ಪುಟಿದೆದ್ದು  ಜನವರಿ 2018 ರಲ್ಲಿ 36 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ಅಂದರೆ ಸುಮಾರು 7,600 ಪಾಯಿಂಟುಗಳಷ್ಟು ಏರಿಕೆ ಪ್ರದರ್ಶಿಸಿ ನಂತರ  ಸುಮಾರು ಮೂರು ಸಾವಿರ ಪಾಯಿಂಟುಗಳ ಇಳಿಕೆಗೊಳಪಟ್ಟಿದೆ. ಸಾಮಾನ್ಯವಾಗಿ ಪ್ರತಿ  ವರ್ಷ ಫೆಬ್ರುವರಿ ಮತ್ತು ಮಾರ್ಚ್ ತಿಂಗಳು ಹೆಚ್ಚಿನ ಮಾರಾಟದ ಒತ್ತಡವನ್ನು ಎದುರಿಸುವ ತಿಂಗಳುಗಳಾಗಿವೆ. ಇದಕ್ಕೆ ಕಾರಣ ಬಜೆಟ್‌ನಲ್ಲಿರುವ ಅಂಶಗಳಾಗಿರಬಹುದು,  ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವ ಕಾರಣವಿರಬಹುದು,  ವರ್ಷಾಂತ್ಯದ ಹೊಂದಾಣಿಕೆಯಾಗಿರಬಹುದು, ಅಥವಾ ಲಾಭದ ನಗದೀಕರಣವಿರಬಹುದು. ಇವೆಲ್ಲವುಗಳ ಪ್ರಭಾವದಿಂದ ಮಾರಾಟದ ಒತ್ತಡ ಹೆಚ್ಚಾಗಿ ಉತ್ತಮ ಕಂಪನಿಗಳಾದಿಯಾಗಿ ಎಲ್ಲವೂ ಕುಸಿತಕ್ಕೊಳಗಾಗುತ್ತವೆ.  ಪೇಟೆಯಲ್ಲಿ ಪೂರೈಕೆ ಹೆಚ್ಚುವುದರಿಂದ ಬೆಲೆ ಕುಸಿತಕ್ಕೊಳಗಾಗುವುದು. ಇದು ಸಹಜ ಬೆಳವಣಿಗೆ. ಬ್ಯಾಂಕಿಂಗ್ ವಲಯದಲ್ಲಿ ಉಂಟಾಗಿರುವ ಗೊಂದಲ ಆ ವಲಯದ ಷೇರುಗಳನ್ನು ಧರೆಗಿಳಿಸಿದೆ. ಅಮೆರಿಕದ ಎಫ್‌ಡಿಎ ಕ್ರಮದಿಂದ ಲುಪಿನ್, ಸನ್ ಫಾರ್ಮಾ, ಡಾಕ್ಟರ್ ರೆಡ್ಡಿ ಲ್ಯಾಬ್ ನಂತಹ ಕಂಪನಿಗಳು ಕುಸಿತ ಕಂಡಿವೆ. ಅಮೆರಿಕ ಆಡಳಿತವು ಉಕ್ಕು ಮತ್ತು ಅಲ್ಯುಮಿನಿಯಂ ಆಮದು ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡ ಕಾರಣ ಆ ವಲಯದ ಷೇರುಗಳು ಕುಸಿತ ಕಂಡಿವೆ. ಸಾಮಾನ್ಯವಾಗಿ ನಕಾರಾತ್ಮಕ ಅಂಶಗಳು ಪೇಟೆ ಕುಸಿತದಲ್ಲಿದ್ದಾಗ ಹೆಚ್ಚು ಪ್ರಚಲಿತದಲ್ಲಿರುತ್ತವೆ.   ಏರಿಕೆಯಲ್ಲಿದ್ದಾಗ ನಿರ್ಲಕ್ಷಕ್ಕೊಳಗಾಗುತ್ತವೆ.

ಒಂದು ವಾರವೆಂದರೆ ಅದು ಷೇರುಪೇಟೆಯ ದೃಷ್ಟಿಯಲ್ಲಿ ಈಗಿನ ಸಮಯದಲ್ಲಿ ಅದು ದೀರ್ಘವಾದುದಾಗಿದೆ. ಪೇಟೆಯ ಅಗ್ರಮಾನ್ಯ ಕಂಪನಿಗಳಾದ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಪವರ್ ಫೈನಾನ್ಸ್, ಬಲರಾಂಪುರ್ ಚಿನ್ನಿ, ದಿವಾನ್ ಹೌಸಿಂಗ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಟಾಟಾ ಮೋಟರ್ಸ್,  ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮುಂತಾದವುಗಳು ವಾರ್ಷಿಕ ಕನಿಷ್ಠಕ್ಕೆ ಕುಸಿದುದಲ್ಲದೆ ಆಕರ್ಷಕ ಲಾಭಾಂಶ ವಿತರಿಸಿದ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ ಆಯಿಲ್ ಇಂಡಿಯಾದಂತಹ ಕಂಪನಿಗಳು ಸಹ ಹೆಚ್ಚು ಮಾರಾಟಕ್ಕೊಳಗಾದವು.

ಕಳೆದ ತಿಂಗಳು ಆಟೊ ವಲಯದ ಕಂಪನಿಗಳ ಮಾರಾಟದ ಅಂಕಿ ಅಂಶಗಳನ್ನು ಪ್ರಕಟಿಸಿವೆ.  ಆದರೂ ಪೇಟೆಯ ವಾತಾವರಣವು ಈ ಷೇರುಗಳು ಲಾಭ ಮಾಡಿಕೊಳ್ಳದಂತೆ ಮಾಡಿದೆ.  ಮಾರುತಿ ಸುಜುಕಿ ಸುಮಾರು ಮುನ್ನೂರು ರೂಪಾಯಿಗಳಷ್ಟು ಇಳಿಕೆ ದಾಖಲಿಸಿದರೆ ಟಾಟಾ ಮೋಟರ್ಸ್ ಷೇರು ₹370ರ ಸಮೀಪದಿಂದ ₹340 ರ ಸಮೀಪಕ್ಕೆ ಕುಸಿಯಿತು. ಆದರೆ ಅಶೋಕ್ ಲೇಲ್ಯಾಂಡ್  ಮಾತ್ರ  ₹147ರ ಗಡಿ ದಾಟಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.

ಹಿಂದಿನ ವಾರದಲ್ಲಿ ನಿರಂತರವಾಗಿ ಕುಸಿಯುತ್ತಿದ್ದ ವಕ್ರಾಂಗಿ ಲಿಮಿಟೆಡ್ ಈ ವಾರ ತನ್ನ ಚಲನೆಯ ದಿಸೆ ಬದಲಿಸಿ ಸುಮಾರು ಶೇ 26 ರಷ್ಟು ಏರಿಕೆ ಕಂಡಿದೆ.  ಕಳೆದ ತ್ರೈಮಾಸಿಕ ಫಲಿತಾಂಶ ಪ್ರೋತ್ಸಾಹದಾಯಿಕವಾಗಿಲ್ಲ ಎಂಬ ಕಾರಣಕ್ಕೆ ₹344 ರವರೆಗೂ ಕುಸಿದ ಷೇರಿನ ಬೆಲೆ ನಂತರ ₹393 ರವರೆಗೂ ಪುಟಿದೆದ್ದಿದೆ.

ಈ ತಿಂಗಳ 12 ರಿಂದ 23 ರವರೆಗೂ ಪ್ರತಿ ಒಂದು ಷೇರಿಗೆ ₹150 ರಂತೆ ಹಿಂದೆಕೊಳ್ಳಲಿರುವ ಬಲರಾಂಪುರ್ ಚಿನ್ನಿ ಷೇರಿನ ಬೆಲೆಯು ಒಂದು ವಾರದಲ್ಲಿ ₹117 ರ ಸಮೀಪದಿಂದ ₹85 ರ ಸಮೀಪಕ್ಕೆ ಕುಸಿದಿದೆ.

ಟಾಟಾ ಸ್ಟೀಲ್  ಕಂಪನಿಯ ಹಕ್ಕಿನ ಷೇರು ವಿತರಣೆಯು ಕೊನೆಗೊಂಡ ನಂತರ ಷೇರಿನ ಬೆಲೆ ಹೆಚ್ಚು ಮಾರಾಟಕ್ಕೊಳಗಾಗಿದೆ. 2010 ರಲ್ಲಿ   ₹610 ರಂತೆ ವಿತರಣೆ ಮಾಡಿದ ನಂತರ ಷೇರಿನ ಬೆಲೆ 2015 ರಲ್ಲಿ ₹200 ರ ಸಮೀಪಕ್ಕೆ ಕುಸಿದು ನಂತರ ಈ ವರ್ಷದ ಜನವರಿಯಲ್ಲಿ ₹790ರ ಗಡಿ ದಾಟಿ ದಾಖಲೆ ನಿರ್ಮಿಸಿದೆ.

ವಾರದ ಆರಂಭಿಕ ದಿನದಲ್ಲಿ ಬಿ ಇ ಎಂ ಎಲ್ ಕಂಪನಿ ಷೇರಿನ ಬೆಲೆ ₹1,418 ರಲ್ಲಿದ್ದು  ಅಂದು ಕೇಂದ್ರ ಸರ್ಕಾರ  ಈ ಕಂಪನಿಯಲ್ಲಿ ಹೊಂದಿರುವ  ಭಾಗಿತ್ವದಲ್ಲಿ ಶೇ 26ನ್ನು  ಮಾರಾಟ ಮಾಡಿ ಷೇರು ವಿಕ್ರಯಕ್ಕೆ ನಿರ್ಧರಿಸಿದೆ ಎಂಬ ಸುದ್ಧಿ ಹೊರಬಂದಿತು.  ಅಲ್ಲಿಂದ ನಿರಂತರವಾಗಿ ಇಳಿಕೆ ಕಂಡು ಶುಕ್ರವಾರ ₹1,085 ರವರೆಗೂ ಕುಸಿದು ₹1,110 ರ ಸಮೀಪ ಕೊನೆಗೊಂಡಿದೆ.

ಪೇಟೆಯು ಇಷ್ಟರ ಮಟ್ಟಿಗೆ ನಿರುತ್ಸಾಹಮಯವಾಗಿದ್ದರೂ ಸ್ಮಾಲ್ ಕ್ಯಾಪ್ ವರ್ಲ್ಡ್ ಫಂಡ್ 4.37 ಲಕ್ಷ ಮಯೂರ್ ಯುನಿಕೋಟ್ ಷೇರುಗಳನ್ನು, 5.25 ಲಕ್ಷ ನವೀನ್ ಫ್ಲೋರಿನ್ ಷೇರುಗಳನ್ನು ಖರೀದಿಸಿರುವುದು, ಪೇಟೆಯ ಬಗ್ಗೆ ಇರುವ ನಂಬಿಕೆಗೆ ಹಿಡಿದ ಕನ್ನಡಿಯಾಗಿದೆ. ಪೇಟೆಯಲ್ಲಿ ಲಭ್ಯವಾಗುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ತಂತ್ರಗಾರಿಕೆ ಬಲ್ಲ ಸ್ಥಳೀಯ ವಿಮಾ ಸಂಸ್ಥೆ ಎಲ್‌ಐಸಿ ಆಫ್ ಇಂಡಿಯಾ,  ಅಶೋಕ್ ಲೇಲ್ಯಾಂಡ್‌ನ  ಶೇ 2.04ರಷ್ಟರ ಭಾಗಿತ್ವವನ್ನು ಮಾರಾಟಮಾಡಿ ಲಾಭದ ನಗದೀಕರಣ ಮಾಡಿಕೊಂಡಿದೆ. ಸದ್ಯಕ್ಕೆ ಅಶೋಕ್ ಲೇಲ್ಯಾಂಡ್  ಷೇರು ವಾರ್ಷಿಕ ಗರಿಷ್ಠದಲ್ಲಿದೆ.

ಕಂಪನಿಗಳಾದ ವಿಡಿಯೊಕಾನ್, ಬಿಎಸ್‌ ಲಿಮಿಟೆಡ್‌ಗಳು ಸೇರಿ ಐದು ಕಂಪನಿಗಳು ಸತತವಾಗಿ ಎರಡು ವರ್ಷ ನಿಯಮ ರೀತಿ ಸಲ್ಲಿಸಬೇಕಾದ ವರದಿ ಸಲ್ಲಿಸದ ಕಾರಣ ಅವುಗಳನ್ನು 13 ರಿಂದ ಜೆಡ್ ಗುಂಪಿಗೆ ವರ್ಗಾಯಿಸಲಾಗಿದೆ.

ಹೊಸ ಷೇರಿನ ವಿಚಾರ

* ಇತ್ತೀಚಿಗೆ ಪ್ರತಿ ಷೇರಿಗೆ ₹270 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಎಚ್‌ಜಿ ಇನ್ಫ್ರಾ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿ 9 ರಿಂದ ಬಿ ಗುಂಪಿನಲ್ಲಿ  ವಹಿವಾಟಿಗೆ ಬಿಡುಗಡೆಯಾಗಿದೆ. ಆರಂಭಿಕ ದಿನದ ವಹಿವಾಟಿನಲ್ಲಿ ಷೇರಿನ ಬೆಲೆ ₹276  ರಿಂದ ₹252 ರವರೆಗೂ ಏರಿಳಿತ ಪ್ರದರ್ಶಿಸಿ ₹267.75 ರಲ್ಲಿ ವಾರಾಂತ್ಯ ಕಂಡಿದೆ.

* ಬಂಧನ್ ಬ್ಯಾಂಕ್ ಲಿಮಿಟೆಡ್ ಕಂಪನಿ ಪ್ರತಿ ಷೇರಿಗೆ ₹370 ರಿಂದ ₹375 ರ ಅಂತರದಲ್ಲಿ ಮಾರ್ಚ್ 15 ರಿಂದ 19 ರವರೆಗೂ ಆರಂಭಿಕ ಷೇರು ವಿತರಣೆ  ಮಾಡಲಿದೆ.  ಅರ್ಜಿಯನ್ನು 40  ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಸರ್ಕಾರಿ ವಲಯದ ಮಿನಿ ನವರತ್ನ ಹೆಗ್ಗಳಿಕೆಯ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿ ಮಾರ್ಚ್ 13 ರಿಂದ 15 ರವರೆಗೂ ಪ್ರತಿ ಷೇರಿಗೆ ₹413 ರಿಂದ ₹428 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದ್ದು, ಅರ್ಜಿಯನ್ನು 35 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.  ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 10ರ ರಿಯಾಯ್ತಿ ನೀಡಲಿದೆ.

* ನವರತ್ನ ಕಂಪನಿ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಪ್ರತಿ ಷೇರಿಗೆ ₹1,215 ರಿಂದ ₹1,240 ರ ಅಂತರದಲ್ಲಿ ಮಾರ್ಚ್ 16 ರಿಂದ 20 ರವರೆಗೂ ಆರಂಭಿಕ ಷೇರು ವಿತರಿಸಲಿದೆ.  ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 25ರ ರಿಯಾಯ್ತಿ ನೀಡಲಿದೆ.  ಅರ್ಜಿಯನ್ನು 12 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಮುಖಬೆಲೆ ಸೀಳಿಕೆ ವಿಚಾರ

* ಶಿವಾಲಿಕ್ ರಾಸಾಯನ ಲಿ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹5ಕ್ಕೆ ಸೀಳಲಿದೆ.

* ಲುಮ್ಯಾಕ್ಸ್ ಆಟೊ ಟೆಕ್ನಾಲಜಿಸ್ ಕಂಪನಿ 23 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

**

ವಾರದ ಮುನ್ನೋಟ

ಮುಂದಿನ ದಿನಗಳಲ್ಲಿ ಕಂಪನಿಗಳು ಪಾವತಿಸಿದ ಮುಂಗಡ ತೆರಿಗೆ ಪ್ರಮಾಣ ಹೊರಬೀಳಲಿದ್ದು ಅದರ ಆಧಾರದ ಮೇಲೆ ಕಂಪನಿಗಳು ಗಳಿಸಬಹುದಾಗಿರುವ ಲಾಭದ ಪ್ರಮಾಣವು ಷೇರಿನ ಬೆಲೆಗಳ ಮೇಲೆ ನೇರ ಪ್ರಭಾವ ಬೀರಲಿದೆ.  ಈಗಾಗಲೇ ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಅನೇಕ ನಕಾರಾತ್ಮಕ ಅಂಶಗಳಿಂದ ಕುಸಿತ ಕಂಡಿವೆ. ಒಂದು ಸಣ್ಣ ಸಕಾರಾತ್ಮಕ ಸುದ್ಧಿಯು ಪೇಟೆಯ ದಿಸೆಯನ್ನು ಬದಲಿಸಬಹುದು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಮತ್ತು ಹಣದುಬ್ಬರದ ಪ್ರಭಾವ ಕೂಡ ಕಂಡು ಬರಲಿದೆ. ವಹಿವಾಟುದಾರರು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಐಐಪಿ ಅಂಕಿ ಅಂಶಗಳನ್ನು ಎದುರು ನೋಡುತ್ತಿದ್ದಾರೆ.

ಕಂಪನಿಗಳಾದ ಬಿಇಎಂಎಲ್, ಬಲರಾಂಪುರ್ ಚಿನ್ನಿ, ಎಂಎಂಟಿಸಿ, ಆರ್‌ಇಸಿ, ಪವರ್ ಫೈನಾನ್ಸ್ ಕಾರ್ಪೊರೇಷನ್, ಟಾಟಾ ಮೋಟರ್ಸ್, ಕ್ಲಾರಿಯಂಟ್ ಕೆಮಿಕಲ್ಸ್, ಆಯಿಲ್ ಇಂಡಿಯಾ (1:2 ಅನುಪಾತದ ಬೋನಸ್ ನೊಂದಿಗೆ),  ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ (1:1 ರ ಅನುಪಾತದ ಬೋನಸ್ ನೊಂದಿಗೆ) ಗೇಲ್ ಇಂಡಿಯಾ (1:3 ರ ಅನುಪಾತದ ಬೋನಸ್‌ನೊಂದಿಗೆ), ಎಲ್‌ಐಸಿ ಹೌಸಿಂಗ್ ಫೈನಾನ್ಸ್, ದಿವಾನ್ ಹೌಸಿಂಗ್ ಫೈನಾನ್ಸ್,  ರಿಲಯನ್ಸ್ ಇನ್ಫ್ರಾ, ರಿಲಯನ್ಸ್ ಕ್ಯಾಪಿಟಲ್, ಲುಪಿನ್, ಸಿಪ್ಲಾ, ಸನ್ ಫಾರ್ಮಾ, ಗ್ಲೆನ್ ಮಾರ್ಕ್ ಫಾರ್ಮ ಮುಂತಾದ ಅಗ್ರಮಾನ್ಯ ಕಂಪನಿಗಳು ಉತ್ತಮ ಹೂಡಿಕೆ ಕಂಪನಿಗಳಾಗಿ ಹೂಡಿಕೆಗೆ ಯೋಗ್ಯವೆನಿಸುವಂತಿವೆ.

**

739 ಅಂಶ – ಸೂಚ್ಯಂಕದ ಇಳಿಕೆ

474 ಅಂಶ – ಮಧ್ಯಮ ಶ್ರೇಣಿ ಸೂಚ್ಯಂಕದ ಇಳಿಕೆ

779 ಅಂಶ – ಕೆಳ ಮಧ್ಯಮ ಶ್ರೇಣಿ ಸೂಚ್ಯಂಕದ ಇಳಿಕೆ

₹ 280 ಕೋಟಿ – ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡಿದ ಷೇರುಗಳ ಮೌಲ್ಯ

₹ 131 ಕೋಟಿ – ಸ್ವದೇಶಿ ವಿತ್ತೀಯ ಸಂಸ್ಥೆಗಳು ಖರೀದಿಸಿದ ಷೇರುಗಳ ಮೌಲ್ಯ

₹ 142.73  ಲಕ್ಷ ಕೋಟಿ – ಷೇರುಪೇಟೆ ಬಂಡವಾಳ ಮೌಲ್ಯ

→ 9886313380 (ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry