ಸೋಮವಾರ, ಮಾರ್ಚ್ 8, 2021
31 °C

ಒನ್ ಪ್ಲಸ್ ಎಕ್ಸ್: ಮಧ್ಯಮ ಬೆಲೆಗಿದು ಉತ್ತಮ ಫೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒನ್ ಪ್ಲಸ್ ಎಕ್ಸ್: ಮಧ್ಯಮ ಬೆಲೆಗಿದು ಉತ್ತಮ ಫೋನ್

ಒನ್‌ಪ್ಲಸ್ ಕಂಪೆನಿ ಒಂದು ವಿಶೇಷ ರೀತಿಯ ಮಾರಾಟದ ವಿಧಾನವನ್ನು ತನ್ನದಾಗಿಸಿಕೊಂಡು ಆ ಮೂಲಕ ಮಾರುಕಟ್ಟೆಯಲ್ಲಿ ಒಂದು ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಮೊದಲಿಗೆ ಒನ್‌ ಪ್ಲಸ್ ಒನ್‌, ನಂತರ ಒನ್‌ ಪ್ಲಸ್ ಟು ಫೋನ್‌ಗಳನ್ನು ಈ ಮಾದರಿಯಲ್ಲಿ ಮಾರಿ ತುಂಬ ಜನಪ್ರಿಯವಾಯಿತು. ಅದೇನೆಂದರೆ ಈ ಫೋನ್‌ಗಳನ್ನು ಕೊಳ್ಳಬೇಕಾದರೆ ಯಾರಾದರೂ ನಿಮ್ಮನ್ನು ಆಹ್ವಾನಿಸಬೇಕು. ಈ ವಿಧಾನದಿಂದಾಗಿ ಒನ್‌ ಪ್ಲಸ್ ಫೋನ್ ಉಳ್ಳವರು ಇಲ್ಲದವರನ್ನು ಹೆಮ್ಮೆಯಿಂದ ನೋಡುವಂತೆ ಮಾಡಿತ್ತು. ಈಗ ಒನ್‌ ಪ್ಲಸ್ ಒನ್‌ ಮತ್ತು ಟು ಫೋನ್‌ಗಳು ಆಹ್ವಾನವಿಲ್ಲದೇ ದೊರೆಯುತ್ತಿವೆ. ಆದರೆ ಈಗ ಹೊಸದಾಗಿ ಬಂದಿರುವ ಒನ್‌ ಪ್ಲಸ್ ಎಕ್ಸ್ (Oneplus X) ಬೇಕಿದ್ದರೆ ಆಹ್ವಾನ ಬೇಕು. ಇದು ನಮ್ಮ ಈ ವಾರದ ಗ್ಯಾಜೆಟ್.ಗುಣವೈಶಿಷ್ಟ್ಯಗಳು

2.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಕ್ವಾಲ್ಕಾಂ ಸ್ನಾಪ್‌ಡ್ರ್ಯಾಗನ್ (Qualcomm© Snapdragon™ 801) ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 330 ಪ್ರೊಸೆಸರ್, 3+16 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಆನ್-ದ-ಗೋ (USB OTG) ಇದೆ. 5 ಇಂಚು ಗಾತ್ರದ 1080x 1920 ಪಿಕ್ಸೆಲ್ ರೆಸೊಲೂಶನ್ನಿನ ಓಎಲ್‌ಇಡಿ ಪರದೆ, ಗೊರಿಲ್ಲ-3 ಗಾಜು, f/2.2 ಅಪೆರ್ಚರ್‌ನ ಲೆನ್ಸ್ ಉಳ್ಳ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಇನ್ನೊಂದು ಸ್ವಂತೀ ಕ್ಯಾಮೆರಾ, ಕ್ಯಾಮೆರಾಗೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ವಿಡಿಯೊ ಚಿತ್ರೀಕರಣ, 2,525mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 140 x 69 x 6.9 ಮಿ.ಮೀ ಗಾತ್ರ, 138 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಆಂಡ್ರಾಯ್ಡ್‌ 5.1.1 ಆಕ್ಸಿಜನ್ 2.1.3, ಎಫ್ಎಂ ರೇಡಿಯೊ ಇದೆ, ಎನ್ಎಫ್‌ಸಿ ಇಲ್ಲ, ಇತ್ಯಾದಿ. ಬೆಲೆ ₹16,999.ಒನ್‌ ಪ್ಲಸ್ ಎಕ್ಸ್‌ನ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಬಲಬದಿಯಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿಯಿದೆ. ಕೆಳಭಾಗದಲ್ಲಿ ಮೈಕ್ರೋಯುಎಸ್‌ಬಿ ಕಿಂಡಿಯಿದೆ. ಎಡಭಾಗದಲ್ಲಿ ಒನ್‌ ಪ್ಲಸ್‌ ಟುವಿನಲ್ಲಿರುವಂತೆಯೇ ಒಂದು ವಿಶೇಷ ಬಟನ್ ಇದೆ. ಅದನ್ನು ಸೂಚನೆಗಳನ್ನು ಆನ್ ಅಥವಾ ಆಫ್  ಮಾಡಲು ಬಳಸಬಹುದು. ಕೆಲಸ ಮಾಡುತ್ತಿರುವಾಗ ಅಥವಾ ಸಭೆಯಲ್ಲಿದ್ದಾಗ ಯಾವುದೇ ಕರೆ, ಸಂದೇಶ ಬರಬಾರದು ಎಂದಿದ್ದಲ್ಲಿ ಈ ಬಟನ್ ಮೂಲಕ ಹಾಗೆ ಆಯ್ಕೆ ಮಾಡಿಕೊಳ್ಳಬಹುದು. ಹಿಂಭಾಗದ ಕವಚ ತೆಗೆಯಲು ಸಾಧ್ಯವಿಲ್ಲ.ಅಂತೆಯೇ ಬ್ಯಾಟರಿ ಬದಲಿಸುವಂತಿಲ್ಲ. ಎರಡು ಸಿಮ್ ಹಾಕಲು ಹೊರಬರುವ ಚಿಕ್ಕ ಟ್ರೇ ಎಡಭಾಗದಲ್ಲಿದೆ. ಎರಡು ನ್ಯಾನೊ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಬಹುದು. ನಾಲ್ಕೂ ಬದಿಗಳನ್ನು ಆವರಿಸಿರುವ ಲೋಹದ ಫ್ರೇಂ ತುಂಬ ಚೆನ್ನಾಗಿದೆ. ಹಿಂಭಾಗದ ಕವಚ ತುಂಬ ನಯವಾಗಿದ್ದು ಕೈಯಿಂದ ಜಾರಿ ಬೀಳುವ ಭಯವಿದೆ. ಕಂಪೆನಿಯವರೇ ನೀಡಿರುವ ಹೆಚ್ಚಿಗೆಯ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡರೆ ಈ ಭಯವಿಲ್ಲ. ಒಟ್ಟಿನಲ್ಲಿ ಕೈಯಲ್ಲಿ ಹಿಡಿಯುವ ಮತ್ತು ಬಳಸುವ ಅನುಭವ ಚೆನ್ನಾಗಿದೆ. ಒಂದು ಮೇಲ್ದರ್ಜೆಯ ಫೋನನ್ನು ಕೈಯಲ್ಲಿ ಹಿಡಿದ ಭಾವನೆ ಬರುತ್ತದೆ. ಹಿಂಭಾಗದ ಕವಚಕ್ಕೆ ಸೆರಾಮಿಕ್ ಲೇಪವಿರುವ ಇನ್ನೊಂದು ದುಬಾರಿ ಮಾದರಿಯೂ ಲಭ್ಯವಿದೆ. ಅದಕ್ಕೆ 23,000 ರೂ. ಬೆಲೆಯಿದೆ!ಕೆಲಸದ ವೇಗ ತೃಪ್ತಿದಾಯಕವಾಗಿದೆ. ಎಲ್ಲ ನಮೂನೆ ಆಟಗಳನ್ನು ಆಡುವ ಅನುಭವ ಚೆನ್ನಾಗಿದೆ. ವಿಡಿಯೊ ವೀಕ್ಷಣೆಯೂ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ಬ್ಯಾಟರಿ ಬಳಕೆ ಚೆನ್ನಾಗಿದೆ. ಓಎಲ್‌ಇಡಿ ಪರದೆ ಆಗಿರುವುದರಿಂದ ಕಡಿಮೆ ಬ್ಯಾಟರಿ ಬಳಕೆ ಮಾಡುತ್ತದೆ. ಸಾಯಂಕಾಲದ ತನಕ ಬ್ಯಾಟರಿ ಬಾಳಿಕೆ ಬರುತ್ತದೆ.  13 ಮೆಗಾಪಿಕ್ಸೆಲ್‌ನ f/2.2 ಲೆನ್ಸ್‌ನ ಪ್ರಾಥಮಿಕ ಕ್ಯಾಮೆರಾ ಚೆನ್ನಾಗಿದೆ. ಕ್ಯಾಮೆರಾಕ್ಕೆ ಫ್ಲಾಶ್ ಕೂಡ ಇದೆ. ಅತಿ ಕಡಿಮೆ ಬೆಳಕಿನಲ್ಲೂ ತೃಪ್ತಿದಾಯಕವಾಗಿ ಫೋಟೊ ತೆಗೆಯಬಹುದು. ಎದುರುಗಡೆಯ 8 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾದ ಫಲಿತಾಂಶವೂ ಚೆನ್ನಾಗಿಯೇ ಇದೆ. ಸ್ಮಾರ್ಟ್‌ಫೋನ್ ಫೋಟೊಗ್ರಫಿಗೋಸ್ಕರವೆಂದೇ ಈ ಫೋನಿನ ಕ್ಯಾಮೆರಾ ಮತ್ತು ಸಂಬಂಧಿತ ತಂತ್ರಾಂಶಗಳನ್ನು ತಯಾರಿಸಲಾಗಿದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ.ಒಟ್ಟಿನಲ್ಲಿ ಕ್ಯಾಮೆರಾಕ್ಕೆ ಪೂರ್ತಿ ಮಾರ್ಕು ನೀಡಬಹುದು. ಆದರೂ ಒಂದು ಸಣ್ಣ ಕಿರಿಕಿರಿಯೆಂದರೆ ಕ್ಯಾಮೆರಾದ ಸ್ಥಾನ. ಅದು ಹಿಂಭಾಗದ ಮೇಲ್ಭಾಗದಲ್ಲಿದೆ. ಫೋನನ್ನು ಕ್ಯಾಮೆರಾದಂತೆ ಬಳಸುವಾಗ ಬೆರಳು ಲೆನ್ಸ್ ಅನ್ನು ಮುಚ್ಚದಂತೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆಂಡ್ರಾಯ್ಡ್‌ 5.1.1 ಜೊತೆ ಆಕ್ಸಿಜನ್ ಓಎಸ್ ಇದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ನೀಡುವ ಹಣಕ್ಕೆ ಸಂಪೂರ್ಣ ತೃಪ್ತಿ ನೀಡುವ ಫೋನ್. ಆದರೆ ಆಹ್ವಾನದ ಮೂಲಕ ಮಾತ್ರವೇ ಕೊಳ್ಳಬೇಕು ಎಂಬ ತಾಪತ್ರಯವಿದೆ.ವಾರದ ಆ್ಯಪ್

ನಿಮ್ಮ ಫೋಟೊವನ್ನು ಫ್ರೇಂನೊಳಗೆ ಹಾಕುವುದು, ತಾಜ್‌ಮಹಲ್ ಮುಂದೆ ನಿಂತ ಭಾವನೆ ಬರುವಂತೆ ಮಾಡುವುದು, ಹಲವು ಫೋಟೊಗಳನ್ನು ಒಟ್ಟು ಸೇರಿಸಿ ಕೊಲ್ಯಾಜ್ ಮಾಡುವುದು –ಇವೆಲ್ಲ ಮಾಡಲು ಹಲವು ಕಿರುತಂತ್ರಾಂಶಗಳಿವೆ (ಆ್ಯಪ್). ಅಂತಹ ಒಂದು ಕಿರುತಂತ್ರಾಂಶವನ್ನು ನೀವು ನಿಮ್ಮ ಆಂಡ್ರಾಯ್ಡ್‌ ಫೋನಿಗೆ ಹಾಕಿಕೊಳ್ಳಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ PIP Camera - Photo Editor ಎಂದು ಹುಡುಕಬೇಕು. ಇದರಲ್ಲಿ ನಾನು ಈಗಾಗಲೇ ತಿಳಿಸಿದ ಎಲ್ಲ ಸವಲತ್ತುಗಳಿವೆ. ಅವುಗಳಲ್ಲಿ ತುಂಬ ಜನಪ್ರಿಯವಾದುದೆಂದರೆ ನಿಮ್ಮ ಫೋಟೊವನ್ನು ಬಾಟಲಿಯೊಳಗೆ ಹಾಕುವುದು!ಗ್ಯಾಜೆಟ್ ಸುದ್ದಿ

ಆಪ್ಟಿಕಲ್ ಝೂಮ್ ಕ್ಯಾಮೆರಾ ಇರುವ ತೆಳು ಫೋನ್


ಏಸುಸ್ ಕಂಪೆನಿಯವರು 3x ಆಪ್ಟಿಕಲ್ ಝೂಮ್‌ ಲೆನ್ಸ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದಾರೆ. ಅದರ ಹೆಸರು ಏಸುಸ್ ಝೆನ್‌ಫೋನ್ ಝೂಮ್. ಝೂಮ್ ಲೆನ್ಸ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇದೇ ಪ್ರಥಮ ಅಲ್ಲ. ಆದರೆ ಈ ಫೋನಿನ ವೈಶಿಷ್ಟ್ಯವೆಂದರೆ ಇದರ ಝೂಮ್ ಲೆನ್ಸ್ ಹೊರಗೆ ಬರುವುದಿಲ್ಲ. ಆದ್ದರಿಂದ ಅದು ಈಗ ಮಾರುಕಟ್ಟೆಯಲ್ಲಿ ಇರುವ ಫೋನ್‌ಗಳಲ್ಲಿ ಝೂಮ್ ಲೆನ್ಸ್ ಒಳಗೊಂಡ ಕ್ಯಾಮೆರಾ ಇರುವ ಅತಿ ತೆಳುವಾದ ಫೋನ್ ಎಂಬ ಖ್ಯಾತಿ ಪಡೆದಿದೆ. ಇದರ ಝೂಮ್ ಲೆನ್ಸ್ ಪೆರಿಸ್ಕೋಪ್ ತತ್ವವನ್ನು ಬಳಸುತ್ತದೆ. ಅಂದರೆ ಲೆನ್ಸ್‌ನ ಅಂಗಗಳು ಫೋನಿನ ಒಳಗೆಯೇ ಚಲಿಸುತ್ತವೆ. ಇತರೆ ಝೂಮ್ ಲೆನ್ಸ್ ಕ್ಯಾಮೆರಾಗಳಂತೆ ಅವು ಹೊರಗೆ ಬರುವುದಿಲ್ಲ. ಈ ಕ್ಯಾಮೆರಾ ಫೋನಿನ ವಿಮರ್ಶೆಯನ್ನು ಸದ್ಯದಲ್ಲೇ ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗುವುದು.ಗ್ಯಾಜೆಟ್ ಸಲಹೆ

ನಮಿತ ಕುಮಾರರ ಪ್ರಶ್ನೆ: ಕೆಲವು ಲ್ಯಾಪ್‌ಟಾಪ್‌ಗಳು ಫ್ರೀಡಾಸ್ (Free DOS) ಸಮೇತ ದೊರೆಯುತ್ತಿವೆ. ಹಾಗೆಂದರೇನು? ಅದನ್ನು ಬಳಸಿ ಆಟೋಕ್ಯಾಡ್, ಸಾಲಿಡ್‌ಎಡ್ಜ್ ಇತ್ಯಾದಿಗಳನ್ನು ಬಳಸಬಹುದೇ?

ಉ:
ಮೈಕ್ರೋಸಾಫ್ಟ್ ಕಂಪೆನಿಯವರು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (Operating System –OS) ತಯಾರಿಸುವುದಕ್ಕೆ ಮೊದಲು ಡಾಸ್ (DOS –Disk Operating System) ಅನ್ನು ತಯಾರಿಸಿದ್ದರು. ತುಂಬ ಹಳೆಯ ಗಣಕಗಳು ಅದನ್ನು ಬಳಸುತ್ತಿದ್ದವು. ಡಾಸ್ ಈಗ ಲಭ್ಯವಿಲ್ಲ. ಅದೂ ಅಲ್ಲದೆ ಅದನ್ನು ಬಳಸಬೇಕಿದ್ದರೆ ಮೈಕ್ರೋಸಾಫ್ಟ್ ಕಂಪೆನಿಗೆ ಹಣ ನೀಡಬೇಕು. ಮೈಕ್ರೋಸಾಫ್ಟ್‌ಡಾಸ್‌ಗೆ ಬದಲಿಯಾಗಿ ಮುಕ್ತ ತಂತ್ರಾಂಶ ಸಮುದಾಯದವರು ತಯಾರಿಸಿದ್ದು ಫ್ರೀ ಡಾಸ್.ಇದು ಸಂಪೂರ್ಣ ಮುಕ್ತ ತಂತ್ರಾಂಶ. ಹಳೆಯ ಡಾಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ತಂತ್ರಾಂಶ, ಆಟಗಳನ್ನು ಈಗಲೂ ಆಡಬೇಕೆನ್ನುವವರು ಫ್ರೀ ಡಾಸ್ ಬಳಸಬಹುದು. ಲ್ಯಾಪ್‌ಟಾಪ್‌ನ ಬೆಲೆ ಕಡಿಮೆ ಮಾಡಲು ಕೆಲವರು ವಿಂಡೋಸ್ ಬದಲಿಗೆ ಇದನ್ನು ನೀಡುತ್ತಿದ್ದರು. ಆದರೆ ಇದನ್ನು ಬಳಸಿ ವಿಂಡೋಸ್ ಆವೃತ್ತಿಯಲ್ಲಿ ಕೆಲಸ ಮಾಡುವ ಆಟೋಕ್ಯಾಡ್‌, ಸಾಲಿಡ್‌ಎಡ್ಜ್‌ನಂತಹ ತಂತ್ರಾಂಶಗಳನ್ನು ಉಪಯೋಗಿಸಲು ಸಾಧ್ಯವಿಲ್ಲ. ಡಾಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಟೋಕ್ಯಾಡ್‌ನ ತುಂಬ  ಹಳೆಯ ಆವೃತ್ತಿ ಕೆಲಸ ಮಾಡಲೂಬಹುದು.ಗ್ಯಾಜೆಟ್ ತರ್ಲೆ

ಸ್ವಂತೀ ಕವನ

ಬಾರೇ ಗೆಳತಿ

ಅಲ್ಲೇ ಯಾಕೆ ಕುಳಿತಿ

ನನ್ ಪಕ್ಕ ಬಾ ಈಗ ಏನಂತಿ

ತೆಗೆಯೋಣ ನಾವೊಂದು ಸ್ವಂತೀ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.