ಒಬ್ಬನಿಂದಲೇ ಸಾಧ್ಯವಾಗುವಂಥದ್ದು

7

ಒಬ್ಬನಿಂದಲೇ ಸಾಧ್ಯವಾಗುವಂಥದ್ದು

ಗುರುರಾಜ ಕರ್ಜಗಿ
Published:
Updated:

ಇದೊಂದು ಸತ್ಯ ಘಟನೆ ಎಂದು ಕೇಳಿದ್ದೇನೆ. ಇದು ಒಬ್ಬ ಪುಟ್ಟ ಹುಡುಗನ ಕಥೆ. ಅವನ ಹೆಸರು ಟ್ರೆವರ್. ಅವನಿಗೆ ಸುಮಾರು ಹದಿಮೂರು ವರ್ಷ ವಯಸ್ಸು. ಅವನೂ ಆ ವಯಸ್ಸಿನ ಬಾಲಕರ ಹಾಗೆಯೇ ಇದ್ದವನು. ಯಾವ ವಿಶೇಷತೆಯೂ ಕಾಣುತ್ತಿರಲಿಲ್ಲ.

ಒಂದು ದಿನ ಆತ ರಾತ್ರಿ ದೂರದರ್ಶನದ ಕಾರ್ಯಕ್ರಮ ನೋಡುತ್ತಿರುವಾಗ ವಾರ್ತೆಯ ಒಂದು ತುಣುಕು ಅವನ ಮನಸ್ಸನ್ನು ಸೆರೆ ಹಿಡಿಯಿತು. ತಾನು ಬದುಕಿದ್ದ ಫಿಲೆಡೆಲ್ಫಿಯಾ ಪ್ರದೇಶದ ಸುತ್ತಮುತ್ತ ಇದ್ದ ಅನೇಕ ಮನೆಮಾರು ಇಲ್ಲದ ಜನ ಹೇಗೆ ರಸ್ತೆಯ ಬದಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದರು.

ರಾತ್ರಿ ಚಳಿ ಕೊರೆಯುತ್ತಿದ್ದಾಗ ಹೊದ್ದುಕೊಳ್ಳಲು ಏನೂ ಇಲ್ಲದೇ ಕೈಗಳನ್ನು ಮೊಣಕಾಲು ಸಂದಿಯಲ್ಲಿ ತೂರಿಸಿಕೊಂಡು, ದೇಹವನ್ನೆಲ್ಲ ಮುದ್ದೆ ಮಾಡಿಕೊಂಡು, ಕಟಕಟನೇ ನಡುಗುತ್ತಿದ್ದ ಆ ಜನರ ಕಷ್ಟವನ್ನು ವಿವರಿಸುತ್ತಿದ್ದುದನ್ನು ಟ್ರೆವರ್ ಕಂಡ. ಅವನಿಗೆ ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ. ತಲೆಯಲ್ಲಿ ಕೊರೆತ ಪ್ರಾರಂಭವಾಗಿತ್ತು.

ತನಗೆ ಬೆಚ್ಚನೆಯ ಮನೆಯಿದೆ, ತಂದೆ ತಾಯಿಯರು ಸ್ಥಿತಿವಂತರು. ಇವನಿಗೆ ಬೇಕಾದಷ್ಟು ಬೆಚ್ಚನೆಯ ಬಟ್ಟೆಗಳಿವೆ. ಆದರೆ ಪಾಪ! ಆ ರಸ್ತೆಯ ಬದಿಗೆ ಮಲಗಿಕೊಂಡವರಿಗೆ ಇದಾವುದೂ ಇಲ್ಲ. ಉಳಿದ ಹುಡುಗರ ಹಾಗೆ ಟಿ.ವಿ. ನೋಡಿ, ನೋಡಿದ್ದನ್ನು ಮರೆತು ಬಿಡಬಹುದಾಗಿತ್ತು. ಆದರೆ ಯಾಕೋ ಟ್ರೆವರ್‌ನಿಗೆ ಸಮಾಧಾನವಾಗಲಿಲ್ಲ.

ತಾನು ಅವರಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸತೊಡಗಿದ. ಆಗ ಅವನಿಗೆ ನೆನಪಾಯಿತು, ತಮ್ಮ ಕಾರಿನ ಗ್ಯಾರೇಜಿನಲ್ಲಿ ತಾವು ಬಳಸದೇ ಇದ್ದ, ಬಳಸಿ ಬಿಟ್ಟ ಅನೇಕ ರಗ್ಗುಗಳಿವೆ, ಹೊದಿಕೆಗಳಿವೆ. ತಂದೆಯ ಬಳಿ ಹೋಗಿ ಅವನ್ನು ಆ ಬಡಜನರಿಗೆ ಕೊಡಬಹುದೇ ಎಂದು ಕೇಳಿದ. ತಂದೆಗೆ ಆಶ್ಚರ್ಯ! ತಮಗೇ ಹೊಳೆಯದ ಈ ವಿಚಾರ ಮಗುವಿಗೆ ಬಂದದ್ದು ಸಂತೋಷವೂ ಆಯಿತು.

ತಂದೆ ಮಗ ಸೇರಿ ಎಲ್ಲ ಬಟ್ಟೆಗಳನ್ನು ಗುಡ್ಡೆ ಹಾಕಿಕೊಂಡು ಕಾರಿನಲ್ಲಿ ಹೋಗಿ ಆ ಜನರಿಗೆ ಕೊಟ್ಟು ಬಂದರು. ಆದರೆ ಅಷ್ಟೊಂದು ಜನಕ್ಕೆ ಇಷ್ಟೇ ಹೊದಿಕೆಗಳು ಹೇಗೆ ಸಾಕಾದವು? ರಾತ್ರಿ ಆ ಹುಡುಗನಿಗೆ ಸ್ವಲ್ಪ ತೃಪ್ತಿ ಎನ್ನಿಸಿದರೂ ಹೊದಿಕೆ ಸಿಗದೇ ಹೋದ ಜನರ ಮುಖದಲ್ಲಿನ ನಿರಾಸೆ ಅವನನ್ನು ಕಾಡತೊಡಗಿತು.

ಈ ಕೊಡುವುದರಲ್ಲಿರುವ ಸಂತೋಷ ಸಾಂಕ್ರಾಮಿಕವಾದದ್ದು. ಮತ್ತೆ ಮತ್ತೆ ಹಾಗೆಯೇ ಮಾಡುವಂತೆ ಪ್ರೇರೇಪಿಸುತ್ತದೆ. ಮರುದಿನ ಟ್ರೆವರ್ ತನ್ನ ಮನೆಯ ಹತ್ತಿರವೇ ಇದ್ದ ದೊಡ್ಡ ಅಂಗಡಿ ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಹೋದ. ಅಲ್ಲಿ ಪುಟ್ಟ ಪುಟ್ಟ ಬೋರ್ಡುಗಳನ್ನು ತನ್ನ ಕೈಯಿಂದಲೇ ಬರೆದು ಅಂಟಿಸಿ ಬಂದ.

ಅದರಲ್ಲಿ ಯಾರಾದರೂ ಬಟ್ಟೆಗಳನ್ನು ಈ ಹೊದಿಕೆಗಳನ್ನು ಅನಾಥ ಜನರಿಗೆ ದಾನ ಮಾಡುವುದಾದರೆ ತಲುಪಿಸಬೇಕೆಂದು ಕೇಳಿ ತನ್ನ ಮನೆಯ ವಿಳಾಸ ನೀಡಿದ. ಜಗತ್ತಿನಲ್ಲಿ ಕರುಣೆಯುಳ್ಳ, ಸಹಾಯಮಾಡುವ ಮನಸ್ಸುಳ್ಳ ಜನ ಸಾಕಷ್ಟಿದ್ದಾರೆ. ಆದರೆ ಅವರಿಗೆ ಎಲ್ಲಿ, ಯಾರಿಗೆ ಸಹಾಯ ಮಾಡಬೇಕೆಂಬ ವಿಷಯ ತಿಳಿದಿಲ್ಲ. ಮರುದಿನ ಮತ್ತು ಮತ್ತೆರಡು ದಿನಗಳಲ್ಲಿ ಟ್ರೆವರ್‌ನ ಮನೆಯ ಗ್ಯಾರೇಜಿನಲ್ಲಿ ಹಿಡಿಸಲಾಗದಷ್ಟು ಬಟ್ಟೆಗಳು ಬಂದವು.

ಅವುಗಳನ್ನು ಹೋಗಿ ದೀನರಿಗೆ ಹಂಚಿ ಬಂದ.ಆದರೆ ಈ ಸಹಾಯ ಮಾಡಲು ಬಯಸುವ ಜನರ ಪ್ರವಾಹ ನಿಲ್ಲಲಿಲ್ಲ. ಟ್ರೆವರ್‌ನ ತಂದೆ ಇದಕ್ಕಾಗಿ ಮತ್ತೊಂದು ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಯಿತು. ಆದಾದ ನಂತರ ಮತ್ತೊಂದು ಕಟ್ಟಡ, ಆಮೇಲೆ ಮತ್ತೊಂದು ಹೀಗೆಯೇ ಬೆಳೆಯುತ್ತ ಹೋಯಿತು.

ತಮಗೆ ಆಶ್ಚರ್ಯವಾಗಬಹುದು, ಈಗ ಫಿಲೆಡೆಲ್ಫಿಯಾ ಪ್ರದೇಶದಲ್ಲಿ ಹೀಗೆ ನಿರ್ಗತಿಕರಿಗೆ ಸಹಾಯ ಮಾಡಲು ಆಹಾರ ಮತ್ತು ಹೊದಿಕೆಗಳ ಸಂಗ್ರಹಕ್ಕೆ ಹಲವಾರು ವಿಶೇಷ ಗೋದಾಮುಗಳು ನಿರ್ಮಾಣವಾಗಿವೆ. ದೀನರ ದೇಹಗಳಿಗೆ ಹೊದ್ದಿಕೆ ದೊರೆತಿದೆ, ಹೊಟ್ಟೆಗೆ ಆಹಾರ ದೊರೆಯುತ್ತಿದೆ. ಇದೆಲ್ಲ ಸಾಧ್ಯವಾದದ್ದು ಒಬ್ಬ ಪುಟ್ಟ ಹುಡುಗನ ಹೃದಯದ ತುಡಿತದಿಂದ.

ನಾನೊಬ್ಬನೇ ಏನು ಮಾಡಬಲ್ಲೆ. ಜಗತ್ತಿನಲ್ಲಿ ಎಷ್ಟೊಂದು ಜನ ದೀನರಿದ್ದಾರೆ, ತೊಂದರೆಗೆ ಒಳಗಾದವರಿದ್ದಾರೆ, ನನ್ನಿಂದ ಏನಾದೀತು ಎಂದು ಕೈ ಚೆಲ್ಲಿ ಕುಳಿತುಕೊಳ್ಳಬೇಕು ಎನ್ನಿಸಿದಾಗ ಪುಟ್ಟ ಬಾಲಕ ಟ್ರೆವರ್‌ನ ಚಿತ್ರ, ಅವನ ಪರಿಶ್ರಮ ಕಣ್ಣುಮುಂದೆ ಬರಬೇಕು. ನಾನು ಒಬ್ಬನೇ ಏನೂ ಮಾಡಲಾರೆ.

ಆದರೆ ಏನಾದರೂ ಮಾಡಬೇಕೆಂದು ಒಬ್ಬನೇ ಮನಸ್ಸು ಮಾಡಿದರೆ ನೂರಾರು, ಸಾವಿರಾರು ಕೈಗಳು ಜೊತೆಗೂಡಿಯಾವು. ಅಸಾಧ್ಯ ಸಾಧ್ಯ ಮಾಡಿಸಿಯಾವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry