ಒಲಿಂಪಿಕ್ ಕೋಟಿಯ ಸುತ್ತಮುತ್ತ

ಗುರುವಾರ , ಜೂಲೈ 18, 2019
27 °C

ಒಲಿಂಪಿಕ್ ಕೋಟಿಯ ಸುತ್ತಮುತ್ತ

ಗೋಪಾಲ ಹೆಗಡೆ
Published:
Updated:

`ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ~ ಗಡಿಬಿಡಿ ಭಾರತ ಕ್ರೀಡಾರಂಗಕ್ಕೆ ಹೊಸತೇನಲ್ಲ. ಮುಂದಿನ ವರ್ಷ ಅಂದರೆ 2012ರಲ್ಲಿ, ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳ ತಯಾರಿಗಾಗಿ 258 ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಪ್ರಕಟಿಸಿದೆ. ಕ್ರೀಡಾಪಟುಗಳ ತರಬೇತಿಗಾಗಿ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ಇದು ಮೊದಲ ಸಲ. ಒಳ್ಳೆಯದೇ.

 

ಆದರೆ ಈ `ತಯಾರಿ~ ಸ್ವಲ್ಪ ತಡವಾಯಿತೇ? ಕಳೆದ ವರ್ಷ ನಡೆದ ನವದೆಹಲಿಯ ಕಾಮನ್‌ವೆಲ್ತ್ ಹಾಗೂ ಚೀನಾದ ಗುವಾಂಗ್ ಜೌ ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ತೋರಿದ ಉತ್ತಮ ಸಾಧನೆ ಕ್ರೀಡಾ ಇಲಾಖೆಯ ಕಣ್ಣು ತೆರೆಸಿರಬೇಕು.

 

ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಗಳಲ್ಲೂ ಪದಕ ಗೆಲ್ಲಬಹುದೆಂಬ ಭರವಸೆ ಮೂಡಿರುವುದರಿಂದಲೇ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಧೈರ್ಯ ಬಂದಿರಬೇಕು.ಆದರೆ ಒಲಿಂಪಿಕ್ ತಯಾರಿ ಅಷ್ಟು ಸುಲಭ ಅಲ್ಲ. ಎಲ್ಲ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಒಂದು ಒಲಿಂಪಿಕ್ಸ್ ಮುಗಿದ ಕೂಡಲೇ ಮುಂದಿನ ಒಲಿಂಪಿಕ್ಸ್‌ಗೆ ಅಭ್ಯಾಸ ಆರಂಭಿಸುತ್ತಾರೆ. ಒಲಿಂಪಿಕ್ ಚಿನ್ನದ ಪದಕಕ್ಕೆ ನಾಲ್ಕು ವರ್ಷಗಳ ಪರಿಶ್ರಮ ಬೇಕು.ಭಾರತವೂ ಪದಕ ಗೆಲ್ಲುವ ಸಾಧ್ಯತೆ ಇರುವ ಕ್ರೀಡೆಗಳಲ್ಲಿ ಎರಡು ವರ್ಷಗಳ ಹಿಂದೆಯೇ ಅಭ್ಯಾಸ ಆರಂಭಿಸಬೇಕಿತ್ತು. ಅಥವಾ ಏಷ್ಯನ್ ಕ್ರೀಡೆಗಳು ಮುಗಿದ ಕೂಡಲೇ ಒಲಿಂಪಿಕ್ ತರಬೇತಿ ಶಿಬಿರ ಆರಂಭವಾಗಿದ್ದರೆ ಕ್ರೀಡಾಪಟುಗಳಿಗೂ ಸಮಯ ಸಿಗುತ್ತಿತ್ತು. ಬಹುಶಃ ಕಾಮನ್‌ವೆಲ್ತ್ ಕ್ರೀಡೆಗಳ ಹಗರಣಗಳಿಂದಾಗಿ ಒಲಿಂಪಿಕ್ಸ್ ಮರೆತುಹೋಗಿರ ಬಹುದು.

 

ಆದರೆ ಕಾಮನ್‌ವೆಲ್ತ್ ಅಥವಾ ಏಷ್ಯನ್ ಕ್ರೀಡೆಗಳ ಮಟ್ಟಕ್ಕೂ ಒಲಿಂಪಿಕ್ ಕ್ರೀಡೆಗಳ ಮಟ್ಟಕ್ಕೂ ಬಹಳ ವ್ಯತ್ಯಾಸ ಇದೆ. ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ನೂರು ಪದಕ ಗೆಲ್ಲುವ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಹತ್ತರ ಹತ್ತಿರ ಬರುವುದೂ ಕಷ್ಟ. ಹಾಕಿಯಲ್ಲಂತೂ ಭಾರತ ತಂಡ ಅರ್ಹತೆ ಗಳಿಸಲೇ ಒದ್ದಾಡುವ ಪರಿಸ್ಥಿತಿ ಇದೆ.ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದವರು ಯಾರೂ ಇಲ್ಲ. ಅಂದರೆ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್‌ಗಾಗಿ ಪಕ್ಕಾ ತಯಾರಿಯನ್ನು ಎಂದೂ ಮಾಡೇ ಇಲ್ಲ ಎಂದು ಹೇಳಬಹುದು.

ತರಬೇತಿ ನೀಡಲು ವಿದೇಶೀ ತರಬೇತಿದಾರರನ್ನು ಕರೆಸುವುದೂ ಹೊಸತೇನಲ್ಲ.

 

ಆದರೆ ಈ ಬಾರಿ ಅವರಿಗೆ ಹೆಚ್ಚಿನ ಸಂಭಾವನೆ ಕೊಡಲಾಗುತ್ತಿದೆ. ಅವರಿಗಾಗಿ 20 ಕೋಟಿ ರೂಪಾಯಿ ತೆಗೆದಿಡಲಾಗಿದೆ. ಇವರಿಗೆ ಭಾಷೆಯಿಂದ ಹಿಡಿದು ಎಲ್ಲ ರೀತಿಯ ಸಹಾಯ ಮಾಡುವ ಭಾರತೀಯ ತರಬೇತಿದಾರರಿಗೆ ಎಷ್ಟು ಹಣ ಕೊಡಲಾಗುವುದು ಎಂಬುದನ್ನು ಇಲಾಖೆ ಪ್ರಕಟಿಸಿಲ್ಲ. ಒಂದು ವೇಳೆ ಈ ಸಂಭಾವನೆಯಲ್ಲಿ ಬಹಳ ವ್ಯತ್ಯಾಸ ಇದ್ದರೆ ಅದು ದೇಶೀಯ ತರಬೇತುದಾರರ ಉತ್ಸಾಹವನ್ನು ಕಡಿಮೆ ಮಾಡುವುದು ಖಂಡಿತ.ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯೋಚನೆ ಮಾಡುವಾಗ ಅನುಭವಿ ತರಬೇತಿದಾರರನ್ನು ಕರೆಸುವುದು ತಪ್ಪೇನಲ್ಲ. ಆದರೆ ಇದುವರೆಗೆ ದುಡಿದಿರುವ, ಒಂದು ಹಂತದವರೆಗೆ ಕ್ರೀಡಾಪಟುಗಳನ್ನು ಬೆಳೆಸಿದ ದೇಶೀಯ ತರಬೇತಿದಾರರನ್ನು ಕಡೆಗಣಿಸುವುದು ಸಮಂಜಸವಲ್ಲ. ಅಲ್ಲದೇ ವಿದೇಶೀ ತರಬೇತಿದಾರರ ಜೊತೆ ಕ್ರೀಡಾಪಟುಗಳು ವ್ಯವಹರಿಸುವುದೂ ಅಷ್ಟು ಸುಲಭ ಅಲ್ಲ. ಮುಖ್ಯ ತೊಂದರೆ ಭಾಷೆ.

 

ಹೆಚ್ಚಿನ ಕ್ರೀಡಾಪಟುಗಳಿಗೆ ಇಂಗ್ಲಿಷ್ ಬರುವುದಿಲ್ಲ. ಇಂಗ್ಲಿಷೇತರ ರಾಷ್ಟ್ರಗಳ ತರಬೇತಿದಾರರಿಗೂ ಇಂಗ್ಲಿಷ್ ಬರುವುದಿಲ್ಲ. ಈ ತೊಡಕಿನಿಂದ ಹೊರಬರುವುದು ಇಬ್ಬರಿಗೂ ಬಹಳ ಕಷ್ಟವಾಗುತ್ತದೆ. ಆಗ ಭಾರತೀಯ ತರಬೇತಿದಾರರು ಇಬ್ಬರ ನಡುವಣ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ. ಈ ಸಮಸ್ಯೆಯ ಜೊತೆಗೆ ಒಂದು ವರ್ಷದೊಳಗೆ ಕ್ರೀಡಾಪಟುಗಳ ಗುಣಮಟ್ಟವನ್ನು ಸುಧಾರಿಸುವುದು ದೊಡ್ಡ ಸವಾಲೇ ಆಗಿರುತ್ತದೆ.ವಿದೇಶೀ ತರಬೇತಿದಾರರ ಕಸರತ್ತು ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಲಂಡನ್ ಒಲಿಂಪಿಕ್ಸ್ ಸಿದ್ಧತೆಯ ಪ್ರಕಟನೆಯ ಮರುದಿನವೇ ಹಾಕಿ ತಂಡದ ಗೋಳಿನ ಕಥೆಯೊಂದು ಪ್ರಕಟವಾಗಿತ್ತು. ಅದರಲ್ಲಿ ಹೊಸತೇನೂ ಇಲ್ಲದಿದ್ದರೂ ಸಂದರ್ಭ ಅದಕ್ಕೆ ಮಹತ್ವ ತಂದುಕೊಟ್ಟಿತ್ತು.

 

ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಆಟಗಾರರಿಗೆ ಸೂಕ್ತ ವಸತಿ ಸೌಕರ್ಯ ಒದಗಿಸಿಕೊಡದಿದ್ದುದು ಆ ಆಟದ ದುಸ್ಥಿತಿಗೆ ಮತ್ತೊಮ್ಮೆ ಕನ್ನಡಿ ಹಿಡಿದಿತ್ತು. ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಗೆಲ್ಲಬೇಕೆಂದು ಬಯಸುವ ನಾವು ಆಟಗಾರರನ್ನು ಮಾತ್ರ ಎಂದಿಗೂ ಗೌರವದಿಂದ ಕಂಡಿಲ್ಲ.

 

(ಭಾರತ ಹಾಕಿ ತಂಡ ಲಂಡನ್ ಒಲಿಂಪಿಕ್ಸ್‌ಗೆ ಇನ್ನೂ ಅರ್ಹತೆ ಗಳಿಸಿಲ್ಲ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ  ಭಾರತ ಅರ್ಹತೆ ಗಳಿಸಿರಲಿಲ್ಲ.) ಕ್ರಿಕೆಟ್‌ಪಟುಗಳಿಗೆ ಸಿಗುವ ಪಂಚತಾರಾ ಸೌಲಭ್ಯಗಳು ಬೇಡ, ಕನಿಷ್ಠ ಸೌಕರ್ಯಗಳು ಇರುವ ಸ್ವಚ್ಛ ಹೊಟೆಲ್‌ಗಳಲ್ಲಾದರೂ ಹಾಕಿ ಆಟಗಾರರನ್ನು ಉಳಿಸಬೇಕಲ್ಲವೇ?ಒಂದು ಕೋಣೆಯಲ್ಲಿ ಎಂಟು ಮಂದಿ ಆಟಗಾರರನ್ನು ತುರುಕುವುದೆಂದರೆ ಅವರೇನು ಕುರಿಗಳೇ? ಆಟಗಾರರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಸಂಘಟಕರಿಗೆ ದುಡ್ಡು ಹೊಡೆಯಲು ಆಗುವುದಿಲ್ಲ.ದಶಕಗಳಿಂದ ಇದೇ ಪರಿಸ್ಥಿತಿಯಲ್ಲಿರುವ ಹಾಕಿ ಆಟಗಾರರು ಹಾಗೂ ಇತರ ಕ್ರೀಡಾಪಟುಗಳು `ಬಕರಾ~ಗಳಂತೆ ತಲೆತಗ್ಗಿಸಿ ನಿಂತರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವೇ? ಆಟಗಾರರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು, ನಂತರ ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಬೇಕು.ಕ್ರೀಡಾ ಇಲಾಖೆ ಮೊದಲು ಈ ಕೊಳಕು ವ್ಯವಸ್ಥೆಯನ್ನು ಸುಧಾರಿಸುವ ಯತ್ನಕ್ಕೆ ಕೈ ಹಾಕಬೇಕು. ಹೊಸ ಕ್ರೀಡಾ ನೀತಿಯಲ್ಲಿ ಕ್ರೀಡಾ ಸೌಕರ್ಯಗಳ ಬಗ್ಗೆ ಒತ್ತು ಕೊಡಲಾಗಿದೆ.

 

ಆದರೆ ಭಾರತ ಒಲಿಂಪಿಕ್ ಸಂಸ್ಥೆಯೂ ಸೇರಿದಂತೆ ಹೆಚ್ಚು ಕಡಿಮೆ ಎಲ್ಲ ಕ್ರೀಡಾ ಮಂಡಳಿಗಳು ಕ್ರೀಡಾ ನೀತಿಯನ್ನು ವಿರೋಧಿಸುತ್ತಿವೆ. ಈ ಗಲಾಟೆಯಲ್ಲಿ ಬಡವಾಗುತ್ತಿರುವ ಕ್ರೀಡಾಪಟುಗಳ ಬಗ್ಗೆ ಯಾರಿಗೂ ಗಮನ ಇಲ್ಲ. ಹಾಕಿ ಆಟಗಾರರು, ಅಥ್ಲೀಟುಗಳು ಎಷ್ಟೇ ಕಷ್ಟ ಬಂದರೂ ಬಾಯಿಮುಚ್ಚಿಕೊಂಡು ಅನುಭವಿಸುತ್ತಲೇ ಇದ್ದಾರೆ.

 

ಆಗೊಮ್ಮೆ ಈಗೊಮ್ಮೆ ಕೆಲವು ಆಟಗಾರರು ಪ್ರತಿಭಟಿಸಿದರೂ ಯಾವ ಪ್ರಯೋಜನವೂ ಆಗಿಲ್ಲ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಿದ್ದ ಜಾವೆಲಿನ್ ಎಸೆತಗಾರ ಕಾಶೀನಾಥ್ ನಾಯಕ, ತರಬೇತಿ ಶಿಬಿರಗಳ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.`ಕೆಲವರಿಗೆ ಮಾತ್ರ ಹಾಲು ಕೊಟ್ಟು ಬೇಡವಾದವರಿಗೆ ಬರೀ ನೀರು ಕೊಡುತ್ತಾರೆ~ ಎಂದು ತಮಗಾದ ತಾರತಮ್ಯದ ನೋವನ್ನು ತೋಡಿಕೊಂಡಿದ್ದರು. ಹದಿನೇಳು ವರ್ಷಗಳ ಹಿಂದೆ ಹಿರೊಷಿಮಾದಲ್ಲಿ ನಡೆದ ಏಷ್ಯನ್ ಕ್ರೀಡೆಗಳ ಸಮಯದಲ್ಲಿ ಓಟಗಾರ ಬಹದ್ದೂರ್ ಪ್ರಸಾದ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಇದೇ ರೀತಿ ಭಾರತ ಕ್ರೀಡಾರಂಗದಲ್ಲಿ ತುಂಬಿರುವ ರಾಡಿಯನ್ನು ತೋರಿಸಿದ್ದರು.

 

`ನನ್ನಿಂದ ಪದಕ ಮಾತ್ರ ನಿರೀಕ್ಷಿಸುವ ಮೇಲ್ಜಾತಿಯ ತರಬೇತಿದಾರರು, ನಾನು ಹಿಂದುಳಿದ ಜಾತಿಗೆ ಸೇರಿದವನೆಂದು ನನ್ನೊಡನೆ ಊಟಕ್ಕೆ ಕುಳಿತುಕೊಳ್ಳುತ್ತಿರಲಿಲ್ಲ~ ಎಂದು ಅವರು ಹೇಳುವಾಗ ಕಣ್ಣಲ್ಲಿ ನೀರು ಬಂದಿತ್ತು. ಈಗಲೂ ನಮ್ಮ ಅಥ್ಲೀಟುಗಳಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿಲ್ಲ. ಹಣ ಯಾರ ಜೇಬಿಗೆ ಹೋಗುತ್ತಿದೆ ಎಂಬುದೂ ಎಲ್ಲರಿಗೆ ಗೊತ್ತಿದೆ.

 

ಒಬ್ಬ ಕಲ್ಮಾಡಿಯನ್ನು ಜೈಲಿಗೆ ಹಾಕುವುದರಿಂದ ಸ್ವಲ್ಪ ಹೆದರಿಕೆ ಮೂಡಬಹುದಾದರೂ ಇನ್ನೂ ಇರುವ ನೂರಾರು ಕಲ್ಮಾಡಿಗಳನ್ನು ನಿಯಂತ್ರಿಸುವುದು ಬಹಳ ಕಷ್ಟ. 258 ಕೋಟಿ ರೂಪಾಯಿಗಳಲ್ಲಿ ಅರ್ಧದಷ್ಟಾದರೂ ಆಟಗಾರರ ತಯಾರಿಗೆ ಉಪಯೋಗವಾದರೆ ಅದೇ ದೊಡ್ಡ ಪುಣ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry