ಒಳ್ಳೆ ದಿನಗಳು ಬರುವುದು ಎಂದು?

7

ಒಳ್ಳೆ ದಿನಗಳು ಬರುವುದು ಎಂದು?

ಎ.ಸೂರ್ಯ ಪ್ರಕಾಶ್
Published:
Updated:

ಭಾರತದ ಸಂಸತ್ತು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಳಕಳಿಯು ಹಲವು ವರ್ಷಗಳಿಂದ ವ್ಯಕ್ತವಾಗುತ್ತಿದೆ. ಆದರೆ, ದೇಶದ ಪ್ರಜಾತಂತ್ರ ವ್ಯವಸ್ಥೆಯ ಅತ್ಯುನ್ನತ ಸಂಸ್ಥೆಯಾದ ಸಂಸತ್ತು ಎರಡು ವಾರಗಳ ಹಿಂದೆ, ಕೇಂದ್ರ ಬಜೆಟ್‌ಗೆ ಅನುಮೋದನೆ ನೀಡುವ ವೇಳೆ ಇಳಿದ ಮಟ್ಟವನ್ನು ಈ ಸಂಸ್ಥೆಯ ಬಗ್ಗೆ ಅತಿಹೆಚ್ಚು ಅನುಮಾನಗಳನ್ನು ಹೊಂದಿರುವವರೂ ನಿರೀಕ್ಷಿಸಿರಲಿಕ್ಕಿಲ್ಲ.

ಸಂಸತ್ತಿನ ಬಜೆಟ್‌ ಅಧಿವೇಶನ ಸಾಮಾನ್ಯವಾಗಿ ಆರಂಭವಾಗುವುದು ರೈಲ್ವೆ ಬಜೆಟ್ ಮಂಡನೆ, ರೈಲ್ವೆ ಇಲಾಖೆಯ ಕಾರ್ಯವೈಖರಿ ಕುರಿತ ವಿಸ್ತೃತ ಚರ್ಚೆ ಮತ್ತು ರೈಲ್ವೆ ಬಜೆಟ್‌ನಲ್ಲಿನ ಪ್ರಸ್ತಾವಗಳಿಗೆ ಅನುಮೋದನೆ ನೀಡುವ ಮೂಲಕ. ಕೇಂದ್ರ ಬಜೆಟ್‌ಗೆ ಸಂಸತ್ತು ಅನುಮೋದನೆ ನೀಡುವ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿಹಂಚಿಕೆಯಾಗುತ್ತದೆ. ಇದು ಪ್ರತಿ ಬಾರಿಯೂ ಫೆಬ್ರುವರಿ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೆ ನಡೆಯುತ್ತದೆ. ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರ, ಸಂಸತ್ತಿನ ಎರಡೂ ಸದನಗಳ ಕಲಾಪಗಳಲ್ಲಿ ಕೆಲವು ದಿನಗಳನ್ನು ಬಜೆಟ್ ಮೇಲಿನ ಚರ್ಚೆಗಾಗಿ ಮೀಸಲಿಡಲಾಗುತ್ತದೆ. ಇದಾದ ನಂತರ ವಿವಿಧ ಸಚಿವಾಲಯಗಳ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ಹಿಂದೆಲ್ಲ ಈ ಬೇಡಿಕೆಗಳ ಬಗ್ಗೆ ಹಲವು ವಾರಗಳವರೆಗೆ ಚರ್ಚೆ ನಡೆಯುತ್ತಿತ್ತು. ಇದು ಪೂರ್ಣಗೊಂಡ ನಂತರ, ಸದನಗಳು ಧನವಿನಿಯೋಗ ಮಸೂದೆಯನ್ನು ಚರ್ಚಿಸಿ ಅದಕ್ಕೆ ಅನುಮೋದನೆ ನೀಡುತ್ತದೆ. ಕೊನೆಯ ಹಂತದಲ್ಲಿ ಹಣಕಾಸು ಮಸೂದೆಗೆ ಅನುಮೋದನೆ ನೀಡಲಾಗುತ್ತದೆ.

ಈ ಸಂಪ್ರದಾಯವನ್ನು ಬೆಳೆಸಿರುವುದು ಸಂಸತ್ತನ್ನು ಸಕ್ರಿಯವಾಗಿ ಇರಿಸುವ ಉದ್ದೇಶದಿಂದ ಮಾತ್ರವೇ ಅಲ್ಲ. ಸಂವಿಧಾನ ನೀಡಿರುವ ಮಾರ್ಗದರ್ಶನವನ್ನು ಪಾಲಿಸುವ ಆಶಯವೂ ಇದರ ಹಿಂದಿದೆ. ಕೇಂದ್ರದ ವಾರ್ಷಿಕ ಹಣಕಾಸು ವಿವರ, ಸಚಿವಾಲಯಗಳ ಬೇಡಿಕೆಗಳು, ವೆಚ್ಚಗಳು ಹಾಗೂ ಪೂರಕ ಬೇಡಿಕೆಗಳಿಗೆ ಸರ್ಕಾರ ಸಂಸತ್ತಿನ ಅನುಮತಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ, ಲೇಖಾನುದಾನದ ಬಗ್ಗೆ ಸಂವಿಧಾನದ 112 ಮತ್ತು 119ನೇ ವಿಧಿಗಳಲ್ಲಿ ವಿವರ ಇದೆ.

ಬಜೆಟ್‌ ಮಂಡನೆ ಆದ ನಂತರ, ಸರ್ಕಾರದ ವೆಚ್ಚಗಳು ಮತ್ತು ತೆರಿಗೆ ಪ್ರಸ್ತಾವಗಳನ್ನು ಕಾರ್ಯರೂಪಕ್ಕೆ ತರಲು ಧನವಿನಿಯೋಗ ಮತ್ತು ಹಣಕಾಸು ಮಸೂದೆಗಳಿಗೆ ಸಂಸತ್ತು ಅನುಮೋದನೆ ನೀಡುವವರೆಗಿನ ನಡುವಿನ ಸಮಯದಲ್ಲಿ ಬಜೆಟ್‌ಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಲು ಸಂಸದರಿಗೆ ಕನಿಷ್ಠ ನಾಲ್ಕು ಬಾರಿ ಅವಕಾಶ ದೊರೆಯುತ್ತದೆ. ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್ ಮತ್ತು ಸಚಿವಾಲಯಗಳ ಬೇಡಿಕೆಗಳ ಬಗ್ಗೆ ಲೋಕಸಭೆಯು 1986-87ರಲ್ಲಿ ತೆಗೆದುಕೊಂಡ ಸಮಯದ ಬಗ್ಗೆ ಎಂ.ಎನ್. ಕೌಲ್ ಮತ್ತು ಎಸ್.ಎಲ್. ಶಕ್ದರ್ ಅವರ ‘Practice and Procedure of Parliament’ ಕೃತಿಯಲ್ಲಿನ ಒಂದು ಕೋಷ್ಟಕವು ಹಲವು ವಿಷಯಗಳನ್ನು ತಿಳಿಸುತ್ತದೆ. ಆ ವರ್ಷ ಲೋಕಸಭೆಯು ರೈಲ್ವೆ ಬಜೆಟ್ ಮತ್ತು ರೈಲ್ವೆ ಇಲಾಖೆಯ ಬೇಡಿಕೆಗಳ ಬಗ್ಗೆ 19 ಗಂಟೆಗಳ ಕಾಲ ಚರ್ಚಿಸಿತು, ಕೇಂದ್ರದ ಸಾಮಾನ್ಯ ಬಜೆಟ್‌ನ ಚರ್ಚೆಗಾಗಿ ಸರಿಸುಮಾರು 20 ಗಂಟೆ ವಿನಿಯೋಗಿಸಿತು. ಬೇರೆ ಬೇರೆ ಸಚಿವಾಲಯಗಳ ಬೇಡಿಕೆಗಳ ಬಗ್ಗೆ 92 ಗಂಟೆ ಚರ್ಚಿಸಿತು. ಒಟ್ಟಾರೆಯಾಗಿ ಬಜೆಟ್ಟಿನ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಲು ಲೋಕಸಭೆಯ 130 ಗಂಟೆ ವಿನಿಯೋಗಿಸಿತು. ಎರಡು ಸದನಗಳನ್ನು 1952ರಲ್ಲಿ ರಚಿಸಿದ ನಂತರದ ದಿನಗಳಲ್ಲಿ ಸಂಸತ್ತು ಈ ಹೊಣೆಯನ್ನು ಹೇಗೆ ನಿಭಾಯಿಸಿದೆ ಎಂಬುದರ ಪ್ರಾತಿನಿಧಿಕ ರೂಪದಲ್ಲಿದೆ 1986-87ರಲ್ಲಿ ಬಜೆಟ್ ಪ್ರಕ್ರಿಯೆಯ ವಿವಿಧ ಆಯಾಮಗಳ ಕುರಿತು ನಡೆದ ಚರ್ಚೆ.

ಆ ವರ್ಷ ನಡೆದ ಚರ್ಚೆಯನ್ನು ಈ ವರ್ಷ ಲೋಕಸಭೆಯಲ್ಲಿ ಬಜೆಟ್ ಪ್ರಕ್ರಿಯೆ ಹೇಗೆ ನಡೆಯಿತು ಎಂಬುದರ ಜೊತೆ ಹೋಲಿಸಿ ನೋಡಬೇಕು. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾದ ನಂತರ, ಬಜೆಟ್ ಮೇಲೆ ಫೆಬ್ರುವರಿ 7 ಮತ್ತು 8ರಂದು ಸಾಮಾನ್ಯ ಚರ್ಚೆ ನಡೆಯಿತು. ಇದು ನಡೆದಿದ್ದು ಅಂದಾಜು 12 ಗಂಟೆಗಳಷ್ಟು. ಇದಾದ ನಂತರ, ಬೇರೆ ಬೇರೆ ಸಚಿವಾಲಯಗಳ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವಾಲಯಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಎರಡೂ ಸದನಗಳ ಕಲಾಪವನ್ನು ಎಂದಿನ ಪದ್ಧತಿಯಂತೆ ಮುಂದೂಡಲಾಯಿತು. ಎರಡೂ ಸದನಗಳ ಕಲಾಪ ಮಾರ್ಚ್‌ 5ರಂದು ಪುನಃ ಆರಂಭವಾಯಿತು. ಅಲ್ಲಿಂದ, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇಟ್ಟು ಆಂಧ್ರಪ್ರದೇಶದ ಸಂಸದರು ನಡೆಸಿದ ಗದ್ದಲದಿಂದಾಗಿ, ಒಂದು ಪ್ರತಿಮೆಯನ್ನು ಹಾನಿಗೊಳಿಸಲಾಯಿತು ಎಂದು ತಮಿಳುನಾಡಿದ ಸಂಸದರು ನಡೆಸಿದ ಗದ್ದಲದ ಕಾರಣದಿಂದಾಗಿ ಮತ್ತು ಇನ್ನಿತರ ಪ್ರತಿಭಟನೆಗಳ ಕಾರಣದಿಂದಾಗಿ ಎರಡೂ ಸದನಗಳ ಕಲಾಪ ನಡೆದಿಲ್ಲ.

ಗೊಂದಲಗಳು ಕೊನೆಗೊಳ್ಳುವ ಸೂಚನೆ ಕಾಣದಿದ್ದಾಗ, ಕೇಂದ್ರ ಬಜೆಟ್ ಬಗ್ಗೆ ಚರ್ಚಿಸಲು ಸಂಸತ್ತಿನ ಸಮಯವನ್ನು ಸಂಸದರು ಬಳಸಿಕೊಳ್ಳುವ ಲಕ್ಷಣಗಳು ಕಾಣಿಸದಿದ್ದಾಗ ಸಚಿವಾಲಯವಾರು ಬೇಡಿಕೆಗಳು, ಧನವಿನಿಯೋಗ ಮಸೂದೆ ಮತ್ತು ಹಣಕಾಸು ಮಸೂದೆಯನ್ನು ಮತಕ್ಕೆ ಹಾಕುವ ತೀರ್ಮಾನವನ್ನು ಲೋಕಸಭೆಯ ಸ್ಪೀಕರ್‌ ಕೈಗೊಂಡರು.

ಸ್ಪೀಕರ್‌ ಅವರು ಆ ದಿನ, ಸಚಿವಾಲಯವಾರು ಅನುದಾನಗಳ ಬೇಡಿಕೆ ಮಸೂದೆಯನ್ನು 12.03ಕ್ಕೆ ಕೈಗೆತ್ತಿಕೊಂಡರು. ಹಣಕಾಸು ಮಸೂದೆಯಲ್ಲಿನ ಬೇಡಿಕೆಗಳ ಬಗ್ಗೆ ಸದಸ್ಯರು ವ್ಯಕ್ತಪಡಿಸಿದ ವಿರೋಧಗಳನ್ನು ಮೊದಲು ಕೈಗೆತ್ತಿಕೊಂಡರು (cut motion). ನಿರ್ದಿಷ್ಟವಾದ ಬೇಡಿಕೆಯೊಂದಕ್ಕೆ ಸಂಬಂಧಿಸಿದಂತೆ ತಮಗಿರುವ ಅಸಮಾಧಾನವನ್ನು ವಿರೋಧ ಪಕ್ಷಗಳ ಸದಸ್ಯರು ಈ ನಿಲುವಳಿ ನಿರ್ಣಯದ (cut motion) ಮೂಲಕ ವ್ಯಕ್ತಪಡಿಸುತ್ತಾರೆ. ನಿರ್ದಿಷ್ಟ ವಿಷಯದ ಕುರಿತ ತೀವ್ರ ವಿರೋಧ ಈ ನಿಲುವಳಿಯಲ್ಲಿ ಇರುತ್ತದೆ. ಹಾಗಾಗಿ, ಇದನ್ನು ಸೋಲಿಸುವುದು ಆಡಳಿತ ಪಕ್ಷಕ್ಕೆ ಅನಿವಾರ್ಯ. ಎಲ್ಲ ನಿಲುವಳಿಗಳನ್ನು ಮತಕ್ಕೆ ಹಾಕಲಾಯಿತು, ಅವೆಲ್ಲಕ್ಕೂ ಸೋಲಾಯಿತು. ಸಚಿವಾಲಯವಾರು ಅನುದಾನಗಳ ಬೇಡಿಕೆಗಳನ್ನೆಲ್ಲ ಮತಕ್ಕೆ ಹಾಕುತ್ತಿರುವುದಾಗಿ ಸ್ಪೀಕರ್ 12.04ಕ್ಕೆ ಪ್ರಕಟಿಸಿದರು. ಬೇಡಿಕೆಗಳಿಗೆ ಸದನ ಅಂಗೀಕಾರ ನೀಡಿತು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಧನವಿನಿಯೋಗ ಮಸೂದೆಯನ್ನು 12.05ಕ್ಕೆ ಮಂಡಿಸಿದರು. ಅದನ್ನು ಖಂಡ ಖಂಡವಾಗಿ ಪರಿಗಣಿಸಿದ ಸದನ, ಮಸೂದೆಗೆ ಅಂಗೀಕಾರ ನೀಡಿತು. ಹಣಕಾಸು ಸಚಿವರು 12.06ಕ್ಕೆ ಹಣಕಾಸು ಮಸೂದೆಯನ್ನು ಅನುಮೋದನೆಗಾಗಿ ಮಂಡಿಸಿದರು. ಈ ಮಸೂದೆಯ ವಿಚಾರವಾಗಿ ತುಸು ಹೆಚ್ಚಿನ ಸಮಯ ವಿನಿಯೋಗ ಆಯಿತು.

ಏಕೆಂದರೆ ಈ ಮಸೂದೆಗೆ ಸರ್ಕಾರದ ಕಡೆಯಿಂದ 21 ತಿದ್ದುಪಡಿಗಳನ್ನು ಸೂಚಿಸಲಾಗಿತ್ತು, ಹೊಸದಾಗಿ ಮೂರು ಅಂಶಗಳನ್ನು ಸೇರಿಸಬೇಕಿತ್ತು. ಇದಾಗಿ, ಬಜೆಟ್‌ಗೆ ಸಂಬಂಧಿಸಿದ ಇನ್ನೊಂದು ವಿಷಯಕ್ಕೆ ಸದನ ಒಪ್ಪಿಗೆ ನೀಡಿದ ನಂತರ 12.38ಕ್ಕೆ ಕಲಾಪವನ್ನು ಮುಂದೂಡಲಾಯಿತು. ಇದನ್ನು ಬೇರೆ ರೀತಿಯಲ್ಲಿ ಹೇಳಬೇಕು ಎಂದಾದರೆ, ಸರ್ಕಾರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳ ಬೇಡಿಕೆಗಳಿಗೆ ಅನುಮೋದನೆ ನೀಡಲು ಲೋಕಸಭೆಯು ಕೇವಲ ಒಂದು ನಿಮಿಷ ವಿನಿಯೋಗಿಸಿತು. ಈ ಕೆಲಸಕ್ಕೆ ಮೊದಲು 80ರಿಂದ 100 ಗಂಟೆ ವಿನಿಯೋಗ ಮಾಡಲಾಗುತ್ತಿತ್ತು.

ಒಟ್ಟಾರೆಯಾಗಿ, ಬಜೆಟ್‌ಗೆ ಸಂಬಂಧಿಸಿದ ಕೆಲಸಗಳಿಗೆ ಲೋಕಸಭೆಯು ಕೇವಲ 12 ತಾಸು 35 ನಿಮಿಷಗಳಷ್ಟು ಸಮಯ ವಿನಿಯೋಗ ಮಾಡಿತು. ಇದೇ ಕೆಲಸಗಳಿಗೆ ಹಿಂದೆಲ್ಲ ಅಂದಾಜು 130 ಗಂಟೆಗಳನ್ನು ವಿನಿಯೋಗಿಸಲಾಗುತ್ತಿತ್ತು. ಸಂವಿಧಾನ ಹೇಳಿರುವ ಪ್ರಾಥಮಿಕ ಜವಾಬ್ದಾರಿಯನ್ನು ಸಂಸತ್ತು ಕೈಬಿಟ್ಟಿದೆ ಎಂಬುದು ಇದರ ಅರ್ಥ. ಮಾರ್ಚ್‌ 14ರಂದು ನಡೆದ ವಿದ್ಯಮಾನಗಳು ಇನ್ನಷ್ಟು ಬೇಸರ ಉಂಟುಮಾಡುತ್ತವೆ. ಹಿಂದೆಲ್ಲ, ಅನುದಾನಗಳ ಬೇಡಿಕೆಗಳ ಪೈಕಿ ಕನಿಷ್ಠ ಶೇಕಡ 40ರಷ್ಟನ್ನು ಸಂಸತ್ತಿನಲ್ಲಿ ಚರ್ಚಿಸಲಾಗುತ್ತಿತ್ತು. ಈ ಪ್ರಮಾಣ ಹತ್ತು ವರ್ಷಗಳ ಹಿಂದೆ ಶೇಕಡ 25ರಷ್ಟಕ್ಕೆ ಕುಸಿಯಿತು. ಈ ವರ್ಷ ಒಂದೇ ಒಂದು ಬೇಡಿಕೆ ಬಗ್ಗೆಯೂ ಚರ್ಚೆ ನಡೆಯಲಿಲ್ಲ. ಅಂದಹಾಗೆ, ಈ ವರ್ಷದ ಬಜೆಟ್‌ನಲ್ಲಿ ಸರ್ಕಾರದ ಒಟ್ಟು ವೆಚ್ಚ ₹ 24.42 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸದಸ್ಯರ ಬಳಿ ಮತ್ತೆ ಮತ್ತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅದು ಹೆಚ್ಚಿನ ಫಲ ನೀಡಿಲ್ಲ. ಕಲಾಪಗಳಿಗೆ

ಅಡ್ಡಿಪಡಿಸುವುದು ಮುಂದುವರಿದರೆ ಜನಸಾಮಾನ್ಯರು ಕಾನೂನು ನಿರೂಪಕರ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ ಎಂದು ನಾಯ್ಡು ಅವರು ತುಸು ರೇಗಿದ ದನಿಯಲ್ಲೇ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಬಜೆಟ್‌ನ ಪರಿಶೀಲನೆ ನಡೆಸಲು ಸಮಯ ಮತ್ತು ಮನಸ್ಸು ಸಂಸತ್ತಿಗೆ ಇಲ್ಲ ಎಂದಾದರೆ ತನ್ನ ಅಸ್ತಿತ್ವವನ್ನು, ತನಗಾಗಿ ಮೀಸಲಿಟ್ಟಿರುವ ಬೃಹತ್ ಮೊತ್ತವನ್ನು ಸಮರ್ಥಿಸಿಕೊಳ್ಳುವುದೂ ಅದಕ್ಕೆ ಕಷ್ಟವಾಗುತ್ತದೆ. ಮುಂದೆ ಒಳ್ಳೆಯ ಕಾಲ ಬಂದೀತೇ? ನಾವು ಕುತೂಹಲದಿಂದ ಕಾದು ನೋಡಬೇಕು.

(ಲೇಖಕ ‘ಪ್ರಸಾರ ಭಾರತಿ’ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry