ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

7

ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

ನಾಗೇಶ ಹೆಗಡೆ
Published:
Updated:
ಕಂಪನಿಗಳ ಮುಷ್ಟಿಯಲ್ಲಿ ಸಕ್ಕರೆ, ಸೀರಿಯಲ್

ಸಿಹಿ ಸುದ್ದಿಯಿಂದಲೇ ಹೊಸ ವರ್ಷದ ಈ ಅಂಕಣವನ್ನು ಆರಂಭಿಸೋಣ: ಹೈದರಾಬಾದಿನಲ್ಲಿ ಮೂರು ದಿನಗಳ ‘ವಿಶ್ವ ಸಿಹಿ ಹಬ್ಬ’ ನಾಡಿದ್ದು ಆರಂಭವಾಗಲಿದೆ. ಹದಿನೈದು ದೇಶಗಳ ಕಜ್ಜಾಯ ಕಲಾವಿದರ ಸಿಹಿತಿಂಡಿಗಳ ಪ್ರದರ್ಶನ ಅಲ್ಲಿರುತ್ತದೆ. ನಮ್ಮ ದೇಶದ 25 ರಾಜ್ಯಗಳಿಂದಲೂ ಮಿಠಾಯಿ ತಯಾರಕರು ಸೇರಲಿದ್ದಾರೆ. ಸಾವಿರಾರು ವೈವಿಧ್ಯಮಯ ಸಿಹಿ ಖಾದ್ಯಗಳ ಪ್ರಾತ್ಯಕ್ಷಿಕೆ, ಪ್ರದರ್ಶನ, ಮಾರಾಟ ನಡೆಯಲಿದೆ. ಇದು ವಿಶ್ವಮಟ್ಟದ ಮೊದಲ ಹಬ್ಬವೆಂದು ಹೇಳುತ್ತ, ತೆಲಂಗಾಣ ಪ್ರವಾಸೋದ್ಯಮ ಇಲಾಖೆ ಸಿಕಂದರಾಬಾದ್‍ನ ವಿಶಾಲ ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆಸಿದೆ.

ಈಗ ತುಸು ಕಹಿ ಸುದ್ದಿ: ಅಮೆರಿಕದಲ್ಲಿ ಇದೇ ಜನವರಿಯಿಂದ ಹೊಸ ಕಾನೂನೊಂದು ಜಾರಿಗೆ ಬರುವುದಿತ್ತು. ಹೋಟೆಲ್‍ಗಳ ತಿಂಡಿಪಟ್ಟಿಯಲ್ಲಿ ಸಕ್ಕರೆ ಅಂಶ ಎಷ್ಟಿದೆ ಎಂಬುದನ್ನು ತೋರಿಸಬೇಕಿತ್ತು; ಎಲ್ಲ ಬಗೆಯ ಆಹಾರ ಡಬ್ಬಗಳ ಮೇಲೆ ‘ಸೇರಿಸಿದ ಸಕ್ಕರೆ’ ಎಷ್ಟಿದೆ ಎಂಬುದನ್ನು ಮುದ್ರಿಸಬೇಕಿತ್ತು. ಸಕ್ಕರೆ ಸೇವನೆಯನ್ನು ಕಮ್ಮಿ ಮಾಡಲು ಅಂಥದ್ದೊಂದು ಕಾನೂನನ್ನು ಜಾರಿಗೆ ತರಬೇಕೆಂದು ವೈದ್ಯ ವಿಜ್ಞಾನಿಗಳು, ಪೋಷಕಾಂಶ ತಜ್ಞರು ಮತ್ತು ಜಾಗೃತ ಬಳಕೆದಾರರು ಐದು ವರ್ಷಗಳಿಂದ ಶ್ರಮಿಸುತ್ತಿದ್ದರು. ಅದು ಜಾರಿಗೆ ಬಾರದಂತೆ ಕಂಪನಿಗಳು ಇನ್ನಿಲ್ಲದ ಲಾಬಿ ಮಾಡುತ್ತಿದ್ದವು. ಆದರೂ ಕಾನೂನು ರೂಪುಗೊಂಡು ಇನ್ನೇನು ಜಾರಿಗೆ ಬಂತು ಎನ್ನುವಾಗ ಟ್ರಂಪ್ ಸರ್ಕಾರ ಜಾರಿಕ್ರಮವನ್ನು ಮುಂದೂಡಿದೆ. ಸದ್ಯಕ್ಕೆ ಕಂಪನಿಗಳೇ ಗೆದ್ದಿವೆ; ಸಿಹಿ ಹಂಚುವ ಕಾಯಕವನ್ನು ಎಂದಿನಂತೆ ಮುಂದುವರೆಸಿವೆ.

ಸಕ್ಕರೆಗೆ ನಿರ್ಬಂಧ ಹಾಕಬೇಕೆಂದು ಅಲ್ಲಿನ ಸಾಮಾಜಿಕ ಹಿತಚಿಂತಕರು ಯತ್ನಿಸುವುದು ಏಕೆಂದರೆ ಅತೀವ ಸಿಹಿ ಸೇವನೆಯಿಂದ ಬೊಜ್ಜು ಮತ್ತು ಹೃದ್ರೋಗವೂ ಜಾಸ್ತಿಯಾಗುತ್ತಿದ್ದು ಅಮೆರಿಕನ್ನರ ಸಾವಿಗೆ ಅದೇ ಅತಿಮುಖ್ಯ ಅಂಶವಾಗಿದೆ ಎಂದು ಪೋಷಕಾಂಶ ತಜ್ಞರು ಹೇಳುತ್ತಲೇ ಇದ್ದರು. ಸಕ್ಕರೆಯಿಂದ ಹಲ್ಲು ಹುಳುಕಾಗುತ್ತದೆ, ಬೊಜ್ಜು ಬೆಳೆಯುತ್ತದೆ, ರಕ್ತನಾಳಗಳಲ್ಲಿ ಜಿಡ್ಡು ಸೇರಿಕೊಂಡು ಹೃದಯದ ತೊಂದರೆ ಬರುತ್ತದೆ. ಸಕ್ಕರೆ ಕಾಯಿಲೆ ಇಲ್ಲದ, ಅಷ್ಟೇನೂ ದಪ್ಪ ಇಲ್ಲದವರಿಗೂ ಸಿಹಿಯ ಅತಿ ಸೇವನೆ ಅಪಾಯಕರ ಎಂದು ವೈದ್ಯರು ಹೇಳುತ್ತಾರೆ. ಉತ್ಪಾದಿತ ಸಕ್ಕರೆಯ ಬಳಕೆ ಯಾವ ದೇಶದಲ್ಲಿ ಹೆಚ್ಚಿಗೆ ಇರುತ್ತದೊ ಅಲ್ಲಿ ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಕೂಡ ಹೆಚ್ಚಿಗೆ ಇರುತ್ತದೆ ಎಂಬುದು ಅಂಕಿ ಅಂಶಗಳಲ್ಲಿ ಸಾಬೀತಾಗಿದೆ.

ಸಕ್ಕರೆ ದೇಹಕ್ಕೆ ಬೇಕು ನಿಜ. ಆದರೆ ಅದು ಜೀವಸತ್ವ, ಖನಿಜಾಂಶ, ನಾರಿನಂಶ ಮತ್ತಿತರ ಪೋಷಕಾಂಶಗಳ ಜೊತೆಯಲ್ಲಿರಬೇಕು. ನಾವು ನಿತ್ಯ ಸೇವಿಸುವ ದವಸಧಾನ್ಯ, ಹಣ್ಣು, ತಕರಾರಿ, ಗಡ್ಡೆಗೆಣಸುಗಳಲ್ಲಿ ಅಂಥ ಸಿಹಿ (ಗ್ಲೂಕೋಸ್) ಅಂಶ ಇದ್ದೇ ಇರುತ್ತದೆ. ಆದರೆ ಉತ್ಪಾದಿತ (ಫ್ರಕ್ಟೋಸ್) ಸಕ್ಕರೆ ಹಾಗಲ್ಲ, ಅದು ‘ಖಾಲಿ ಕ್ಯಾಲೊರಿ’ಯನ್ನು ದೇಹಕ್ಕೆ ತುಂಬುತ್ತದೆ. ಅಂಥ ಸಕ್ಕರೆ ಕರುಳಿಗೆ ಹೋಗಿ ಅಲ್ಲಿಂದ ನೇರ ಯಕೃತ್ತಿನಲ್ಲಿ ಶೇಖರವಾಗಿ ಅಲ್ಲಿ ಜಿಡ್ಡಿನ, ಕೊಬ್ಬಿನ (ಫ್ಯಾಟ್) ಕಣಗಳಾಗಿ ರಕ್ತನಾಳಕ್ಕೆ ಬರುತ್ತದೆ. ಅಲ್ಲಿ ಇಲ್ಲಿ, ವಿಶೇಷವಾಗಿ ಸೊಂಟದ ಸುತ್ತ, ತೊಡೆ-ತೋಳುಗಳಲ್ಲಿ ಜಮಾ ಆಗುತ್ತದೆ. ಫ್ರಕ್ಟೋಸ್ ಸಕ್ಕರೆಯ ಇನ್ನೊಂದು ವಿಲಕ್ಷಣತೆ ಏನೆಂದರೆ ‘ಈಗ ಇಷ್ಟು ಸಾಕು’ ಎಂಬ ಸಿಗ್ನಲ್ ಮಿದುಳಿಗೆ ತಲುಪುವುದೇ ಇಲ್ಲ.

ಬೆಣ್ಣೆ, ತುಪ್ಪ, ವನಸ್ಪತಿ ಡಾಲ್ಡಾ, ಖಾದ್ಯತೈಲಗಳ ಸೇವನೆ ಹೆಚ್ಚಿದಾಗ ಬೊಜ್ಜು ಬರುತ್ತದೆ ಎಂದು ಹಿಂದೆಲ್ಲ ಭಾವಿಸಲಾಗಿತ್ತು. ಆದರೆ ಅಂಥ ಕೊಬ್ಬಿನ ಆಹಾರವನ್ನು ಕೈಬಿಟ್ಟವರಿಗೂ ಬೊಜ್ಜು ಹೆಚ್ಚಾಗುವುದೇಕೆಂದು ವಿಜ್ಞಾನಿಗಳು ಸಂಶೋಧನೆಗೆ ತೊಡಗಿದಾಗ ಸಕ್ಕರೆಯೆಂಬ ಖಳನಾಯಕ ಪ್ರತ್ಯಕ್ಷನಾದ. ಸಕ್ಕರೆಯ ಬಗ್ಗೆ ಬ್ರಿಟಿಷ್ ವಿಜ್ಞಾನಿ ಜಾನ್ ಯುಡ್ಕಿನ್ 1972ರಲ್ಲೇ ಬರೆದ ‘ಶುಭ್ರ ಬಿಳಿಯ ಉಗ್ರ ವಿಷ’ ಎಂಬರ್ಥದ (ಪ್ಯೂರ್ ವ್ಹೈಟ್ ಅಂಡ್ ಡೆಡ್ಲೀ) ಗ್ರಂಥ ಸಾಕಷ್ಟು ಸಂಚಲನ ಮೂಡಿಸಿದ್ದು ಈಗಲೂ ನೆಟ್‍ನಲ್ಲಿ ನೋಡಲು ಸಿಗುತ್ತದೆ. ಸಕ್ಕರೆಯ ಕರಾಳ ಮುಖಗಳ ಬಗ್ಗೆ ಯೂಟ್ಯೂಬ್‍ನಲ್ಲಿ ನೂರಾರು ವಿಡಿಯೊಗಳಿವೆ. ಅಧಿಕೃತ ಮತ್ತು ನಿಖರ ವೈಜ್ಞಾನಿಕ ವಿಡಿಯೊಗಳಿಗಾಗಿ ಕ್ಯಾಲಿಫೋರ್ನಿಯಾ ವಿ.ವಿಯೇ ನಡೆಸುವ ಟಿ.ವಿ ಚಾನೆಲ್‍ನ ವಿಡಿಯೊಗಳನ್ನು ನೋಡಬಹುದು. ಸಿಹಿಯ ಈ ಎಲ್ಲ ದುರ್ಗುಣಗಳ ಬಗ್ಗೆ ಗೊತ್ತಿದ್ದವರು ನೇರವಾಗಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಲಾಡು, ಹೋಳಿಗೆ, ಕೇಕ್ ಅಥವಾ ಗುಲಾಬ್ ಜಾಮೂನ್ ತಿನ್ನುವುದಿಲ್ಲ; ಪೆಪ್ಸಿ, ಕೋಕೊಕೊಲಾ ಅಥವಾ ಹಣ್ಣಿನ ಕೃತಕ ಪೇಯಗಳನ್ನೂ ಸೇವಿಸುವುದಿಲ್ಲ. ಸಕ್ಕರೆ ಇಲ್ಲದ ಚಹ/ಕಾಫಿಯನ್ನೇ ಕುಡಿಯುತ್ತಾರೆ. ‘ಆದರೂ ತೂಕ ಇಳೀತಾ ಇಲ್ಲ’ ಎಂದು ಗೊಣಗುತ್ತಿರುತ್ತಾರೆ. ಅದಕ್ಕೆ ಕಾರಣ ಏನೆಂದರೆ, ಅವರು ಸೇವಿಸುವ ಅನೇಕ ಬಗೆಯ ಸಿದ್ಧ ಆಹಾರಗಳಲ್ಲಿ (ಬ್ರೆಡ್, ಕೆಚಪ್, ನೂಡ್ಲ್, ಜೋಳದ ಅವಲಕ್ಕಿ, ಓಟ್ಸ್ ಇತ್ಯಾದಿಗಳಲ್ಲಿ) ಸಕ್ಕರೆಯನ್ನು ಗುಪ್ತವಾಗಿ ಸೇರಿಸಿರುತ್ತಾರೆ. ಅವು ಮೇಲ್ನೋಟಕ್ಕೆ ಸಿಹಿ ಇರುವುದಿಲ್ಲ ಆದರೆ ತಿನ್ನಲು ರುಚಿಕರವಾಗಿರುತ್ತವೆ. ಹೇಗೆ ಅವು ರುಚಿಕರ ಆಗಿರುತ್ತವೆ ಗೊತ್ತೆ? ಸಕ್ಕರೆಯನ್ನು ಒಂದು ನಿಗದಿತ ಪ್ರಮಾಣದಲ್ಲಿ ಆಹಾರಕ್ಕೆ ಸೇರಿಸಿದಾಗ ಅದಕ್ಕೆ ಗರಿಷ್ಠ ರುಚಿ ಬರುತ್ತದೆ. ಯಾವ ತಿಂಡಿಗೆ ಅಥವಾ ಪೇಯಕ್ಕೆ ಎಷ್ಟು ಪ್ರಮಾಣದ ಸಕ್ಕರೆ ಸೇರಿಸಬೇಕೆಂದು ಕಂಪನಿಗಳ ವಿಜ್ಞಾನಿಗಳು ಪಕ್ಕಾ ಮಾಡಿಕೊಂಡಿರುತ್ತಾರೆ. ಅಂಥ ಕುರುಕಲು ತಿಂಡಿಯನ್ನೊ ರೆಡಿ ಖಾದ್ಯಗಳನ್ನೊ ಅಥವಾ ಮಾಲ್‍ಗಳಲ್ಲಿ ಆಕರ್ಷಕ ಡಬ್ಬಗಳಲ್ಲಿ ಸಿಗುವ ತರಾವರಿ ಆಹಾರ ವಸ್ತುಗಳನ್ನೊ ಬಳಸುವವರಿಗೆ ತಾವೆಷ್ಟು ಸಕ್ಕರೆ ತಿನ್ನುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ.

ಒಂದೆಡೆ ಬಳಕೆದಾರರ ಹಿತವನ್ನು ಬಯಸುವ ವಿಜ್ಞಾನಿಗಳು. ಇನ್ನೊಂದು ಕಡೆ ಕಂಪನಿಗಳ ಲಾಭಕ್ಕಾಗಿ ಶ್ರಮಿಸುವ ವಿಜ್ಞಾನಿಗಳು. ನಾವು ಯಾರನ್ನು ನಂಬಬೇಕು? ಹಿಂದೆಲ್ಲ ಈ ದ್ವಂದ್ವ ಇರಲಿಲ್ಲ. ಅಂಗಡಿಗಳಲ್ಲಿ ಸಿಗುವ ಕಾಳುಕಡಿ, ಉಪ್ಪು, ಬೆಲ್ಲ ತಂದು ಮನೆಯಲ್ಲೇ ಸಂಸ್ಕರಿಸಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಈಗ ಯಾರಿಗೂ ಬಿಡುವಿಲ್ಲ. ಸೀರಿಯಲ್ ನೋಡುವ ಗೃಹಿಣಿಯ ಅಡುಗೆ ಮನೆಯಲ್ಲಿ ಬ್ರೆಕ್‍ಪಾಸ್ಟ್ ಸೀರಿಯಲ್ (cereal ತೃಣಧಾನ್ಯಗಳು) ಬಂದಿರುತ್ತವೆ. ಅಡುಗೆಯ ರಗಳೆಗಳನ್ನು ಕಂಪನಿಗಳು ಕಮ್ಮಿ ಮಾಡುತ್ತಿವೆ. ಜೋಳ, ಗೋಧಿ, ರಾಗಿ, ಬಾರ್ಲಿ, ಅಕ್ಕಿ, ಸೆಜ್ಜೆ ಇತ್ಯಾದಿಗಳನ್ನು ಸಂಸ್ಕರಿಸಿ, ಮೊಳಕೆ ಬರಿಸಿ, ಅದಕ್ಕೆ ಅವು ಹೆಚ್ಚುವರಿ ಖನಿಜಾಂಶ, ನಾರು, ಪ್ರೋಟೀನು ಜೊತೆಗೆ ಇನ್ನಿಲ್ಲದ ಗುಣವಿಶೇಷಗಳನ್ನು, ಪರಿಮಳವನ್ನು ಸೇರಿಸಿ, ಪ್ಯಾಕೆಟ್‍ಗಳಲ್ಲಿ ತುಂಬಿ, ಆಕರ್ಷಕ ಲೇಬಲ್, ರಕ್ಷಾಕವಚ ಅಂಟಿಸುತ್ತವೆ. ಮಕ್ಕಳನ್ನೂ ಮರುಳು ಮಾಡುವಂತೆ ಸಿನಿಮಾ/ ಕ್ರೀಡಾ ಜಗತ್ತಿನ ಖ್ಯಾತರ ಜಾಹೀರಾತಿನೊಂದಿಗೆ ಬಿಡುಗಡೆ ಮಾಡುತ್ತವೆ. ಇತ್ತ ಮಾಲ್‍ಗಳಲ್ಲಿ ಸಂಸ್ಕರಿತ ಆಹಾರ ಪ್ಯಾಕೆಟ್‍ಗಳ ಅಟ್ಟಣಿಗೆಗಳು ವಿಸ್ತರಿಸುತ್ತ ಹೋಗುತ್ತವೆ.

ಕಂಪನಿ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವವರು ಯಾರು? ಸಿನಿಮಾಕ್ಕೆ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಇದ್ದ ಹಾಗೆ, ಈ ‘ಸಂಸ್ಕರಿತ ಆಹಾರ’ಕ್ಕೂ ಒಂದು ಸೆನ್ಸಾರ್ ಮಂಡಳಿ ಇದೆ ಗೊತ್ತೆ? ಭಾರತದಲ್ಲಿ ಅದಕ್ಕೆ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ’ (fssai) ಎನ್ನುತ್ತಾರೆ. ಅಲ್ಲಿನವರು ಪರೀಕ್ಷಿಸಿ ಲೈಸೆನ್ಸ್ ಕೊಟ್ಟ ನಂತರವೇ ಕಂಪನಿಗಳು ತಮ್ಮ ವಸ್ತುಗಳನ್ನು ಮಾರಾಟಕ್ಕೆ ಬಿಡಬಹುದು. ನಾವು ಖರೀದಿಸುವ ಬಹುತೇಕ ಎಲ್ಲ ಬಗೆಯ ಆಹಾರಗಳ ಪ್ಯಾಕೆಟ್ ಮತ್ತು ಬಾಟಲಿಗಳ ಮೇಲೆ ಅಧಿಕೃತ (fssai) ಮುದ್ರೆ ಮತ್ತು ಲೈಸನ್ಸ್ ನಂಬರ್ ಇರುವುದನ್ನು ಗಮನಿಸಬಹುದು. ಈ fssai ಮುದ್ರೆ ಇದ್ದರೆ ಅಂಥ ಆಹಾರ ಸುರಕ್ಷಿತ ಎಂಬ ಭರವಸೆ ನಮಗಿತ್ತು. ಆ ಭರವಸೆ ಪೊಳ್ಳೆಂದು ಇದೀಗ ಎರಡು ವಾರಗಳ ಹಿಂದೆ ಸರ್ಕಾರದ್ದೇ ಅಧಿಕೃತ ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಸುರಕ್ಷಾ ಪರೀಕ್ಷೆ ಮಾಡುವ ಮೊದಲೇ ಮಾರುಕಟ್ಟೆಗೆ ಅವುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸುರಕ್ಷಾ ನಿಯಮಗಳನ್ನೇ ಸಡಿಲಿಸಲಾಗಿದೆ. ಆಹಾರವನ್ನು ಪರೀಕ್ಷೆ ಮಾಡಬೇಕಾದ 72 ಲ್ಯಾಬ್‍ಗಳ ಪೈಕಿ 65ಕ್ಕೆ ಮಾನ್ಯತೆಯೇ ಇಲ್ಲ. ‘ಅದಕ್ಷತೆ, ನಿಧಾನಗತಿ, ಕಾನೂನುಗಳ ಅವಗಣನೆ ಇವೆಲ್ಲ ಪ್ರಾಧಿಕಾರದ ವ್ಯವಸ್ಥೆಯಲ್ಲಿ ಅಂತರ್ಗತವಾಗಿವೆ’ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಆಹಾರ ಸುರಕ್ಷಾ ಪ್ರಾಧಿಕಾರದಲ್ಲಿ ವಿಜ್ಞಾನಿಗಳಿಗಿಂತ ಆಡಳಿತ ಯಂತ್ರದ ಪಾರುಪತ್ಯವೇ ಜಾಸ್ತಿ ಇರುತ್ತದೆ. ಅದರ ಮುಖ್ಯಸ್ಥ ಪವನ್ ಅಗರ್ವಾಲ್ ಕೂಡ ಐಎಎಸ್ ಅಧಿಕಾರಿಯೇ. ಹಾಗಿದ್ದರೆ ವಿಜ್ಞಾನಿಗಳನ್ನೇ ಅಷ್ಟೆತ್ತರಕ್ಕೆ ಕೂರಿಸಿದರೆ ಆದೀತೆ? ಮಲೇಶ್ಯದ ಒಂದು ಉದಾಹರಣೆ ನೋಡಿ: ಅದು ಏಷ್ಯ ಖಂಡದಲ್ಲೇ ಅತಿ ದಢೂತಿಗಳ ದೇಶ ಎಂಬ ಕುಖ್ಯಾತಿ ಪಡೆದಿದೆ. ಅಲ್ಲಿನ ಅರ್ಧಕ್ಕರ್ಧ ಪ್ರಜೆಗಳು ಅಗತ್ಯಕ್ಕಿಂತ ಜಾಸ್ತಿ ತೂಕ ಇದ್ದವರೇ ಆಗಿದ್ದಾರೆ. ಈ ಮೂರು ದಶಕಗಳಲ್ಲಿ ಅಲ್ಲಿ ಡಾ. ಟೀ ಇ ಸಿಯಾಂಗ್ ಹೆಸರಿನ ಪೋಷಕಾಂಶ ತಜ್ಞನೇ ಅತಿ ಪ್ರತಿಷ್ಠಿತ ವಿಜ್ಞಾನಿ ಎಂದು ಖ್ಯಾತಿ ಗಳಿಸಿದ್ದ. ಮಲೇಶ್ಯದ ಪೋಷಕಾಂಶ ಸಂಘದ ಮುಖ್ಯಸ್ಥನಾಗಿ ಅದೆಷ್ಟೊ ವೈಜ್ಞಾನಿಕ ಲೇಖನಗಳನ್ನು ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸಿ ಮೆರೆದಿದ್ದ. ಕಂಪನಿಗಳ ಎಲ್ಲ ಆಹಾರ ಪ್ಯಾಕೇಜ್ ಮೇಲೂ ಪೋಷಕಾಂಶಗಳ ಮಾಹಿತಿ ಕಡ್ಡಾಯ ಇರಲೇಬೇಕೆಂದು ಕಾನೂನು ಜಾರಿಗೆ ಬರಲು ಆತನೇ ಕಾರಣವಾಗಿದ್ದ. ಅಲ್ಲಿನ ಆಹಾರ ವಿಷಯಗಳ ಮಟ್ಟಿಗೆ ಆತನೇ ದೇವರು ಎಂಬಷ್ಟು ಎತ್ತರಕ್ಕೆ ಆತ ಬೆಳೆದಿದ್ದ. ಮೊಳಕೆ ಬರಿಸಿದ ಬಾರ್ಲಿಯ (ಮಾಲ್ಟೆಡ್) ಪೇಯವನ್ನು ಬೆಳಗಿನ ತಿಂಡಿಯೊಂದಿಗೆ ಸೇವಿಸಿದ ಮಕ್ಕಳು ದಿನವಿಡೀ ಚುರುಕಾಗಿರುತ್ತಾರೆ, ಟಿ.ವಿ ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕೂರುವುದಿಲ್ಲ ಎಂದು ಆತ ಬರೆದ ‘ವೈಜ್ಞಾನಿಕ’ ಪ್ರಬಂಧದ ಬಗ್ಗೆ ಈಚೆಗೆ, ಡಿಸೆಂಬರ್ 23ರ ನ್ಯೂಯಾರ್ಕ್ ಟೈಮ್ಸ್ ವರದಿಯೊಂದು ವಿಜ್ಞಾನಿಗಳ ನೈತಿಕತೆಯನ್ನು ಪ್ರಶ್ನಿಸುವಂತಿತ್ತು. ಟೀ ಮಹಾಶಯ ತನ್ನ ಸಂಶೋಧನೆಗೆ ನೆಸ್ಲೆ ಕಂಪನಿಯಿಂದ ಧನಸಹಾಯ ಪಡೆಯುತ್ತಿದ್ದ ಅಷ್ಟೇ ಅಲ್ಲ, ತಾನು ಸಿದ್ಧಪಡಿಸಿದ ಪ್ರಬಂಧವನ್ನು ನೆಸ್ಲೆ ಕಂಪನಿಗೆ ಮೊದಲು ತೋರಿಸಿ ಅಲ್ಲಿಂದ ಅನುಮತಿ ಸಿಕ್ಕಮೇಲೆ ಅದನ್ನು ಪ್ರಕಟನೆಗೆ ಕಳಿಸುತ್ತಿದ್ದ. ಅಂದಹಾಗೆ, ನೆಸ್ಲೆ ಕಂಪನಿಯ ‘ಮೈಲೊ’ ಹೆಸರಿನ ತಿಂಡಿಪುಡಿ ಮಲೇಶ್ಯದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ದೇಶದಲ್ಲಿ ಕಂಪನಿಗಳ- ವಿಜ್ಞಾನಿಗಳ ಸಖ್ಯ ಹೇಗೂ ಇರಲಿ, ಕಬ್ಬು ಸಕ್ಕರೆಯಿಂದಾಗಿ ಪರಿಸರದ ಮೇಲಿನ ಒತ್ತಡ, ರಾಜಕೀಯ ಮೇಲಾಟ, ನೀರಿಗಾಗಿ ಜಗಳ -ಜೊತೆಗೆ ಬೊಜ್ಜೂ ಹೆಚ್ಚುತ್ತಿದೆ.

ಇಷ್ಟೆಲ್ಲ ಹಿನ್ನೆಲೆಯೊಂದಿಗೆ ಸಿಕಂದರಾಬಾದಿನ ಸಿಹಿಹಬ್ಬಕ್ಕೆ ನೀವೂ ಹೋಗಬಹುದು. ನಮ್ಮ ಪಾಕ ಪರಂಪರೆಯಲ್ಲಿ ಸಿಹಿ ತಿಂಡಿಗಳಿಗೆ ಪರಮೋಚ್ಚ ಸ್ಥಾನವಿದೆ. ಹಬ್ಬ, ಸಂಭ್ರಮಗಳ ಸಂಕೇತವಾದ ಕಜ್ಜಾಯಗಳಿಗೆ ಜಾತಿ, ಧರ್ಮಗಳ ಕಟ್ಟಳೆ ಇಲ್ಲ. ಅವು ಕಲೆ, ಪರಿಶ್ರಮ, ಪಾರಂಪರಿಕ ಜ್ಞಾನ, ಪ್ರಯೋಗಶೀಲತೆಗಳ ಪ್ರತೀಕ. ಮಲೆನಾಡಿನ ಆಲೆಮನೆಗಳ ಬಳಿ ಈ ದಿನಗಳಲ್ಲಿ ‘ಪಾತ್ರೆಯ ಹೊರಗಡೆ ಬೇಯಿಸುವ’ ವಿಶಿಷ್ಟ ಸಿಹಿತಿಂಡಿ ‘ತೊಡೆದೇವು’ ಅಲ್ಲೂ ಸಿಗಬಹುದು. ಈ ಮೇಳದ ಇನ್ನೊಂದು ವಿಶೇಷ ಏನೆಂದರೆ, ಅಲ್ಲಿ ಹೋಟೆಲ್‍ಗಳಿಗೆ, ಬೇಕರಿಗಳಿಗೆ, ಸಿದ್ಧಸಿಹಿ ತಯಾರಕರಿಗೆ ಅವಕಾಶವಿಲ್ಲ. ನಾವು ಸೇವಿಸುವ ಸಿಹಿತಿಂಡಿಗಳಿಗೂ ಸದಾ ಅಂಥದ್ದೇ ಬೇಲಿ ಹಾಕಿಕೊಂಡರೆ ನಾವು ಸುರಕ್ಷಿತ.

ಸರಳ ಜೀವನ ನಡೆಸುತ್ತಿದ್ದ ಸಾಕ್ರೆಟೀಸ್ ಆಗಾಗ ಸಂತೆಗೆ ಹೋಗುತ್ತಿದ್ದನಂತೆ. ತನಗೆ ಅನಗತ್ಯವಾಗಿರುವ ಏನೇನು ಅಲ್ಲಿಗೆ ಬಂದಿವೆಯೆಂದು ನೋಡಲು! ಸಂಕ್ರಾಂತಿಯ ರಜೆಯಲ್ಲಿ ಹಬ್ಬಕ್ಕೆ ಹೋಗಿಬನ್ನಿ, ನಮಸ್ಕಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry