ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ!

7

ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ!

ಐ.ಎಂ.ವಿಠಲಮೂರ್ತಿ
Published:
Updated:
ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ!

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ‘Education makes a good man better, but it makes a badman worse’ ಎಂದು.  ಇದು ಇಂಗ್ಲಿಷ್‌ನ ಗಾದೆಯೋ ಅಥವಾ ರೋಮನ್‌ ತತ್ತ್ವಜ್ಞಾನಿಯ ಹೇಳಿಕೆಯೋ ಎಂಬುದರ ಕುರಿತು ಜಿಜ್ಞಾಸೆ ಇದೆ. ಈ ಮಾತು ಎಷ್ಟು ಜನರಿಗೆ ಅನ್ವಯಿಸುತ್ತದೆ ಎಂಬುದು ವೈಯಕ್ತಿಕ ಅನುಭವಕ್ಕೆ ಬಿಟ್ಟ ವಿಚಾರ.ಆದರೆ, ಆಡಳಿತ ಕ್ಷೇತ್ರದಲ್ಲಿ ಇದು ಬಹಳಷ್ಟು ಜನರಿಗೆ ಅನ್ವಯಿಸುತ್ತದೆ. ಅದನ್ನೇ ಸ್ವಲ್ಪ ವಿಸ್ತರಿಸಿ ಕೆಟ್ಟವರ ಕೈಗೆ ಅಧಿಕಾರ ಸಿಕ್ಕರೆ ಅವರು ಅತೀ ದುಷ್ಟರಾಗುತ್ತಾರೆ. ಒಳ್ಳೆಯವರ ಕೈಗೆ ಅಧಿಕಾರ ಸಿಕ್ಕರೆ ಅವರು ಉತ್ತಮವಾಗಿ ಕಾರ್ಯ ನಿರ್ವ ಹಿಸುತ್ತಾರೆ ಎಂದು ಹೇಳಬಹುದು. ಮುಖ್ಯ ಕಾರ್ಯದರ್ಶಿಗಳ ಹುದ್ದೆಗೆ ಏರುವಷ್ಟು ಪ್ರತಿಭೆ ಇದ್ದವರೂ ಲೋಕಾಯುಕ್ತ ದಾಳಿಗೆ ಒಳಗಾಗು ವಷ್ಟರ ಮಟ್ಟಿಗೆ ಅವ್ಯವಹಾರಗಳಲ್ಲಿ ತೊಡಗಿ ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಳ್ಳುತ್ತಾರೆ.ದೇಶದಲ್ಲೇ ಪ್ರತಿಷ್ಠಿತವಾದ ಐ.ಐ.ಟಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಐ.ಎ.ಎಸ್‌.ನಲ್ಲಿ ಉತ್ತಮ ಶ್ರೇಣಿಯಲ್ಲಿ ಆಯ್ಕೆಯಾಗಿ ಬಂದವರೂ ಭ್ರಷ್ಟತೆಯಲ್ಲಿ ತೊಡಗಿ, ಸರ್ಕಾರಿ ಆಡಳಿತದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಸಂಕಷ್ಟಕ್ಕೆ ಸಿಲುಕುತ್ತಾರೆ. ಬಹಳಷ್ಟು ಜನ ಮೇಧಾವಿ ಎಂಜಿನಿಯರ್‌ಗಳದು ಕೂಡ ಇದೇ ಹಣೆಬರಹ. ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿ ಅಧಿಕಾರಿಗಳು ಕಾಣಸಿಗುತ್ತಾರೆ.ಬಹಳಷ್ಟು ಜನ ಕಡುಬಡತನದಿಂದ ಬಂದು ಕಷ್ಟದಲ್ಲಿ ಶಿಕ್ಷಣ ಪಡೆದು,  ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ, ಅದನ್ನೆಲ್ಲ ಮರೆತು ತಮಗೆ ಬದುಕು ಕೊಟ್ಟಿರುವ ಸರ್ಕಾರಕ್ಕೇ ದ್ರೋಹ ಬಗೆಯುತ್ತಾರೆ; ಅನ್ಯಾಯ ಮಾಡು ತ್ತಾರೆ.  ಕಾನೂನು ತಿರುಚಿ, ಬಡವರ ಮತ್ತು ಅಮಾಯಕರ ಶೋಷಣೆ ಮಾಡುತ್ತಾರೆ. ನನ್ನ ಸೇವಾವಧಿಯಲ್ಲಿ ಇಂತಹ ಹಲವಾರು ಪ್ರಕರಣ ಗಳನ್ನು ನೋಡಿದ್ದೇನೆ.  ಕಾನೂನು ಒಂದಲ್ಲ ಒಂದು ದಿನ ಅಂಥವರ ಬೆನ್ನು ಹತ್ತುತ್ತದೆ ಎನ್ನು ವುದಕ್ಕೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ.ಬರೀ ಮುಖ್ಯಮಂತ್ರಿ ಅಥವಾ ಮಂತ್ರಿಗಳು ತಪ್ಪು ಮಾಡುವುದು ಸಾಧ್ಯವಿಲ್ಲ. ಯಾವುದೇ ಒಂದು ವಿಷಯದ ಕುರಿತು ತೀರ್ಮಾನ ಆಗ ಬೇಕಾದರೆ ಹಲವಾರು ಹಂತಗಳಲ್ಲಿ ಹಲವಾರು ಅಧಿಕಾರಿಗಳು, ಕಡತಗಳನ್ನು ಪರಿಶೀಲಿಸಿ, ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಕಾನೂನಿನ ವಿಶ್ಲೇ ಷಣೆ ನಂತರ ಕಡತಗಳು ಅಂತಿಮ ತೀರ್ಮಾನಕ್ಕೆ ಮುಖ್ಯಮಂತ್ರಿ ಅಥವಾ ಸಚಿವರ ಬಳಿಗೆ ಬರು ತ್ತವೆ. ಅದೆಲ್ಲ ಸಮರ್ಪಕವಾಗಿ ನಡೆದು ಅಧಿಕಾರಿ ಗಳು ಸರಿಯಾದ, ನಿಷ್ಪಕ್ಷಪಾತ ಅಭಿಪ್ರಾಯ ನೀಡಿದರೆ ಯಾವ ಮಂತ್ರಿಯೂ ಕಾನೂನು ಬಾಹಿರ ಮತ್ತು ರಾಜ್ಯದ ಹಿತಕ್ಕೆ ಧಕ್ಕೆ ಉಂಟು ಮಾಡುವ ನಿರ್ಣಯ ತೆಗೆದುಕೊಳ್ಳುವುದು ಸುಲಭವಲ್ಲ.ಜಿಲ್ಲಾಮಟ್ಟದಲ್ಲಿ ಸಹ ಈ ರೀತಿ ಹಲವಾರು ಪ್ರಕರಣಗಳು ನಡೆಯುತ್ತವೆ. ನಾನು ವಿಜಾಪುರ ಜಿಲ್ಲಾಧಿಕಾರಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಭೂಸ್ವಾಧೀನದಲ್ಲಿ ಅಕ್ರಮ ಎಸಗಿದ್ದ ಅಧಿಕಾರಿಗಳ ಕುರಿತು ವಿಚಾ ರಣೆ ನಡೆಸಿ, ಅವರ ವಿರುದ್ಧ ವರದಿ ನೀಡಿದ್ದೆ. ಅವರಿಗೆ ಸರ್ಕಾರದ ಮಟ್ಟದಲ್ಲಿ ದಯಾಭಿಕ್ಷೆ ಸಿಕ್ಕಿತ್ತು. ಅದರಲ್ಲಿ ಕೆಲವರು ಈಗ ‘ಗಣಿ ಹಗರಣ’ ದಲ್ಲಿ ಸಿಲುಕಿ ಜೈಲಿಗೆ ಹೋಗಲು ಸಿದ್ಧರಾಗಿದ್ದಾರೆ. ಲೋಕಾಯುಕ್ತ ದಾಳಿ ನಡೆಸಿದ ಹಲವಾರು ಅಧಿ ಕಾರಿಗಳ ವಿರುದ್ಧ ವರದಿ ನೀಡಿದ್ದರೂ ಅವರೆಲ್ಲ ಬಡ್ತಿ ಪಡೆದು ಆಯಕಟ್ಟಿನ ಹುದ್ದೆಗಳಲ್ಲಿ ವಿಜೃಂಭಿ ಸುತ್ತಿದ್ದಾರೆ.ವಿಜಾಪುರ ಜಿಲ್ಲೆಯಲ್ಲಿ ನಡೆದ ಒಂದು ಪ್ರಕ ರಣ ನನ್ನನ್ನು ಆಘಾತಗೊಳಿಸಿತ್ತು ಮತ್ತು ಇಂತಹ ಪ್ರಕರಣಗಳು ಇಡೀ ರಾಜ್ಯದಲ್ಲಿ ಎಷ್ಟು ನಡೆದಿರ ಬಹುದು ಎಂದು ನನ್ನನ್ನು ಆತಂಕಕ್ಕೆ ಈಡು ಮಾಡಿತು. ಜಿಲ್ಲಾಧಿಕಾರಿಗಳ ಕಚೇರಿಗೆ ಬಹಳಷ್ಟು ಅರ್ಜಿಗಳು ಬರುತ್ತವೆ. ಪ್ರತಿದಿನ ನೂರಾರು ಜನ ಅಹವಾಲು, ತೊಂದರೆ, ತಕರಾರು, ದೂರು ನೀಡಲು ಈ ಅರ್ಜಿಗಳ ಮೊರೆ ಹೋಗುತ್ತಾರೆ. ಮೂಗರ್ಜಿಗಳೂ (ಅನಾಮಧೇಯ ಪತ್ರಗಳು) ದೊಡ್ಡ ಪ್ರಮಾಣದಲ್ಲೇ ಹರಿದು ಬರುತ್ತವೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವಷ್ಟು ಮೂಗ ರ್ಜಿಗಳು ಬೇರೆ ಯಾವ ಜಿಲ್ಲೆಯಲ್ಲೂ ಬರುವು ದಿಲ್ಲ ಎಂಬುದು ನನ್ನ ಅನುಭವದಿಂದ ಕಂಡು ಕೊಂಡ ಸತ್ಯ. ಈ ಎಲ್ಲ ಅರ್ಜಿಗಳನ್ನು ನಾನು ತಪ್ಪದೇ ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಆಡಳಿತ ನಿರ್ವಹಣೆಯಲ್ಲಿ ಮೌಖಿಕವಾದ ದೂರುಗಳಿಗಿಂತ ಪತ್ರಗಳ ಮುಖೇನ ತಿಳಿಸುವ ವಿಷಯ ಬಹು ಪ್ರಮುಖ ಎಂಬುದು ನನ್ನ ಬಲವಾದ ನಂಬಿಕೆ.ಗೃಹ ಕಚೇರಿಯಲ್ಲಿ ತಡರಾತ್ರಿ ಅಥವಾ ನಸುಕಿ ನಲ್ಲಿ ಎದ್ದು ಆ ಪತ್ರಗಳನ್ನು  ಓದುತ್ತಿದ್ದೆ. ಅಂತಹ ಪತ್ರಗಳಲ್ಲಿ ಬಾಗಲಕೋಟೆ ಉಪವಿಭಾಗಕ್ಕೆ ಸಂಬಂಧಿಸಿದ ಒಂದು ದೂರು  ಸಹ ಸೇರಿತ್ತು. ಆ ಪತ್ರದಲ್ಲಿ ಮಹಿಳೆಯೊಬ್ಬಳು ತನಗೆ ಭೂ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಯೆಂದೂ ವಕೀಲರು ಮತ್ತು ಎ.ಸಿ ಸಾಹೇಬರು ಅನ್ಯಾಯ ಮಾಡಿದ್ದಾರೆಂದೂ ದೂರಿದ್ದಳು. ಆ ಪತ್ರವನ್ನು ನನ್ನ ಟೂರ್‌ ಫೈಲ್‌ನಲ್ಲಿ ಇಟ್ಟು ಕೊಂಡು ನಾನೇ ವಿಚಾರಣೆ ಮಾಡಲು ನಿರ್ಧರಿಸಿದೆ.ಬಾಗಲಕೋಟೆ ಪ್ರವಾಸದ ವೇಳೆಯಲ್ಲಿ ಉಪ ವಿಭಾಗಾಧಿಕಾರಿ (ಎ.ಸಿ) ಕಚೇರಿಗೆ ಭೇಟಿ ನೀಡಿ, ಸಂಬಂಧಿಸಿದ ಭೂಸ್ವಾಧೀನ ಕಡತ ತೋರಿಸಲು ಕೇಳಿದೆ. ಅಲ್ಲಿ ಎ.ಸಿ.ಯಾಗಿದ್ದ ಎಸ್‌.ಎನ್‌. ಹುನಗುಂಟೇಕರ್‌ ಸೇರಿದಂತೆ ಎಲ್ಲರೂ ಸ್ವಲ್ಪ ಗಾಬರಿಯಾದಂತೆ ಕಂಡರು. ಅದು ರೆಕಾರ್ಡ್‌ಗೆ ಹೋಗಿದೆ ಎಂದು ಉತ್ತರಿಸಿದರು. ನಾನೇ ರೆಕಾರ್ಡ್‌ ರೂಮ್‌ಗೆ ಹೋಗಲು ಎದ್ದು ನಿಂತಾಗ ಕಡತ ತರಲು ಒಳಗೆ ಹೋದರು. ಐದು ನಿಮಿಷಗಳಲ್ಲಿ ಕಡತ ನನ್ನ ಟೇಬಲ್‌ ಮೇಲಿತ್ತು. ಕಡತ ಓದುತ್ತಿದ್ದಂತೆ ದಿಗ್ಭ್ರಮೆಗೆ ಒಳಗಾದೆ. ನಾನು ನೋಡುತ್ತಿರುವುದು ನಿಜವೋ ಸುಳ್ಳೋ ಮತ್ತು ಈ ರೀತಿ ಸರ್ಕಾರಕ್ಕೆ ಮೋಸ ಮಾಡಲು ಒಬ್ಬ ಎ.ಸಿ ಮಟ್ಟದ ಅಧಿಕಾರಿಗೆ ಎಷ್ಟು ಧೈರ್ಯ ಎಂಬ ಪ್ರಶ್ನೆಗಳು ಧುತ್ತನೇ ಎದ್ದು ಕಾಡಲು ಆರಂಭಿಸಿದವು.ನಂಬಿಕೆ ಮೇಲೆ ಆಡಳಿತ ನಿರ್ವ ಹಣೆ ಮಾಡಬೇಕೆಂಬ ನನ್ನ ಮೂಲ ಸಿದ್ಧಾಂತಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಈ ಘನಘೋರ ಕೃತ್ಯ ಎಸಗಿದ ಅಪರಾಧಿ ಅಧಿಕಾರಿಗಳು ನನ್ನ ಮುಂದೆ ನಿಂತಿದ್ದರು. ‘ಏಕೆ ಹೀಗೆ ಮಾಡಿದಿರಿ’ ಎಂದರೆ ಒಬ್ಬರೂ ಬಾಯೇ ಬಿಡುತ್ತಿಲ್ಲ. ಕಚೇರಿಯಲ್ಲಿ ಸ್ಮಶಾನಮೌನ.ಜಿಲ್ಲಾಧಿಕಾರಿ ಎಂದರೆ ಇಡೀ ಜಿಲ್ಲೆಯ ಸರ್ಕಾ ರದ ಆಸ್ತಿಗಳಿಗೆ ಸಂಪೂರ್ಣ ಜವಾಬ್ದಾರ.  ಆ ಭಾರವನ್ನು ಹೊರಲು ಹಲವಾರು ಅಧಿಕಾರಿಗಳ ಮತ್ತು ಸಿಬ್ಬಂದಿಯ ನೆರವು ಇರುತ್ತದೆ. ಅದರಲ್ಲಿ ಉಪವಿಭಾಗಾಧಿಕಾರಿ ಹುದ್ದೆ ಬಹಳ ಪ್ರಮುಖ ವಾದದ್ದು.ನೇರವಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡುವ ಈ ಅಧಿಕಾರಿ ಐಎಎಸ್‌ ಕಿರಿಯ ಇಲ್ಲವೇ ಕೆಎಎಸ್‌ ಶ್ರೇಣಿಗೆ ಸೇರಿರುತ್ತಾರೆ. ಒಂದು ಉಪವಿಭಾಗದ ಆಗು–ಹೋಗುಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರ ಒದಗಿಸುತ್ತಾರೆ. ಕರ್ನಾಟಕ ಕಂದಾಯ ಕಾಯ್ದೆಯಲ್ಲಿ ಹಲವಾರು ಪ್ರಮುಖ ಕಾನೂನುಗಳ ಅನುಷ್ಠಾನದ ಜವಾ ಬ್ದಾರಿ ಹೊಂದಿರುತ್ತಾರೆ. ಅದರಲ್ಲಿ ಕರ್ನಾಟಕ ಭೂಸ್ವಾಧೀನ ಕಾಯ್ದೆ ಕೂಡ ಒಂದು. ಜತೆಗೆ ದಂಡಾಧಿಕಾರಿಗಳ ಅಧಿಕಾರವೂ ಅವರಿಗೆ ಇರುತ್ತದೆ. ಕಾನೂನಿನ ಅನ್ವಯ ಸ್ವಾಧೀನಪಡಿಸಿ ಕೊಂಡ ರೈತರ ಜಮೀನಿನ ಮೌಲ್ಯ ನಿರ್ಧರಿಸಿ, ಆ ಮೊತ್ತವನ್ನು ಜಮೀನಿನ ಮಾಲೀಕರಿಗೆ ವಿತರಿಸುವ ಕರ್ತವ್ಯ ಅವರದಾಗಿರುತ್ತದೆ.ಹುನಗುಂದ ತಾಲ್ಲೂಕಿನ ದನ್ನೂರು ಎಂಬ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಒಂದು ಕೆರೆ ನಿರ್ಮಿಸಲು ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ನಿಗದಿ ಗೊಳಿಸಿದ ಪರಿಹಾರ ಮೊತ್ತ ಕಡಿಮೆ ಎನ್ನುವುದು ರೈತರ ದೂರಾಗಿತ್ತು. ಕಾನೂನಿನ ಅನ್ವಯ, ಪ್ರತಿಭಟನೆಯೊಂದಿಗೆ ಪರಿಹಾರ ಪಡೆದು ಪ್ರಕರಣವನ್ನು ಹೆಚ್ಚಿನ ಪರಿಹಾರ ನಿಗದಿಗೊಳಿ ಸಲು ನ್ಯಾಯಾ ಲಯಕ್ಕೆ ಕಳುಹಿಸಲಾಗಿತ್ತು. ಪ್ರಕರಣ ಕೈಗೆತ್ತಿ ಕೊಂಡ ನ್ಯಾಯಾಲಯ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಹೆಚ್ಚಿನ ಪ್ರಮಾಣದ ಪರಿಹಾರವನ್ನು ಎಲ್ಲ ರೈತರೂ ಪಡೆದು ಪ್ರಕರಣ ಮುಕ್ತಾಯವಾಗಿತ್ತು.ಒಬ್ಬ ವಕೀಲರ ಹುನ್ನಾರದಿಂದ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿತು. ನಮಗೆ ಕೊಟ್ಟಿರುವ ಪರಿಹಾರ ಸಮರ್ಪಕವಿಲ್ಲವೆಂದು ಒಂದು ಅರ್ಜಿ ಬರೆ ಯಿಸಿ ಎಲ್ಲ ರೈತರಿಂದ ಸಹಿ ಹಾಕಿಸಿ ಎ.ಸಿ ಕಚೇರಿಗೆ ಕೊಟ್ಟರು (ಈ ಮಧ್ಯೆ ಜಮೀನು ಕಳೆದುಕೊಂಡ ರೈತನೊಬ್ಬ ಮೃತನಾಗಿ ಅವನ ಇಬ್ಬರು ಪತ್ನಿ ಯರು ಈ ಪರಿಹಾರದ ಹಣಕ್ಕಾಗಿ ಜಗಳ ಶುರು ಮಾಡಿದರು. ವಕೀಲರು ಒಬ್ಬ ಪತ್ನಿಗೆ ಪರಿಹಾರ ಕೊಡಿಸಿ ಇನ್ನೊಬ್ಬರಿಗೆ ಏನೂ ಕೊಡಲಿಲ್ಲ. ಅದ ರಿಂದ ಸಿಟ್ಟಾದ ಮಹಿಳೆ ಈ ಮೂಗರ್ಜಿ ಬರೆಸಿದ್ದಳು).ಈ ಹಿಂದೆ ನ್ಯಾಯಾಲಯದಲ್ಲಿ ತೀರ್ಮಾನಿ ಸಲಾದ ಪ್ರಕರಣವನ್ನೇ ಹೊಸದರಂತೆ ಪುನಃ ಪ್ರಾರಂಭಿಸಿ, ಅದಕ್ಕೆ 5–6 ವರ್ಷಗಳ ಬಡ್ಡಿ ಲೆಕ್ಕ ಹಾಕಿ ಹಣವನ್ನು ಠೇವಣಿ ಇಡಲು ಎ.ಸಿ ಸಾಹೇ ಬರು ವಿಜಾಪುರದಲ್ಲಿದ್ದ ಸಣ್ಣ ನೀರಾವರಿ ಇಲಾ ಖೆಯ ಮುಖ್ಯ ಎಂಜಿನಿಯರ್‌ ಕಚೇರಿಗೆ ಪತ್ರ ಬರೆದಿದ್ದರು. ಆ ಪತ್ರ ಬರೆದಿದ್ದು ಆ ತಿಂಗಳ ಎರ ಡನೇ ಶುಕ್ರವಾರ. ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಅವರು ಎರಡನೇ ಶನಿ ವಾರ ಕಚೇರಿಗೆ ರಜೆ ಇದ್ದರೂ ಸೋಮವಾರವೇ ಅಷ್ಟೂ ಮೊತ್ತವನ್ನು ಎ.ಸಿ ಕಚೇರಿಗೆ ತಲುಪಿಸಿ ದ್ದರು.ಮಂಗಳವಾರದಿಂದ ಶುಕ್ರವಾರದೊಳಗೆ ಸುಮಾರು 28ರಿಂದ 30 ಲಕ್ಷ ರೂಪಾಯಿ ಎಲ್ಲ ರಿಗೂ ವಿತರಣೆ ಮಾಡಲಾಗಿತ್ತು. 21 ವರ್ಷಗಳ ಹಿಂದಿನ ಈ 30 ಲಕ್ಷ ರೂಪಾಯಿ ಇವತ್ತಿನ ` 2.5 ಕೋಟಿಗೆ ಸಮಾನ ಎಂದು ಪರಿಗಣಿಸ ಬಹುದು. ಈ ರೀತಿ ಕ್ಷಿಪ್ರ ವೇಗದಲ್ಲಿ ನೀರಾವರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಕೊಡುವ ಕಾರ್ಯ ನಿರ್ವ ಹಿಸಿದ ಇನ್ನೊಂದು ಉದಾಹರಣೆಯನ್ನು ನಾನು ನೋಡಿಲ್ಲ.ಅಲ್ಲಿ ನಡೆದ ಹಗಲು ದರೋಡೆ ನನ್ನನ್ನು ಅಧೀರನನ್ನಾಗಿಸಿತು. ಓದಿದ್ದನ್ನೇ ಪುನಃ ಓದಿ ನೋಡಿ, ಹಿರಿಯ ಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸಿ ಒಂದು ಸವಿವರವಾದ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದೆ. ಮುಖ್ಯ ಕಾರ್ಯದರ್ಶಿಯವರಿಗೆ ಮಾತನಾಡಿ ವಿಷಯ ತಿಳಿಸಿದೆ. ಒಂದೇ ಪ್ರಕರಣಕ್ಕೆ ಹೀಗೆ ಮೂರು ಬಾರಿ ಪರಿಹಾರ ವಿತರಿಸಲು ಹೇಗೆ ಸಾಧ್ಯ? ಯಾರೂ ನಂಬಲು ಸಾಧ್ಯವಿರಲಿಲ್ಲ. ಇಷ್ಟಕ್ಕೂ ದನ್ನೂರಿನಲ್ಲಿ ಕೆರೆ ನಿರ್ಮಾಣವಾಗಲೇ ಇಲ್ಲ. ಅಲ್ಲಿ ಕೆರೆ ನಿರ್ಮಿ ಸುವುದು ‘ಫೀಸಿಬಲ್‌ ಅಲ್ಲ’ ಅಂತ ಇಷ್ಟೆಲ್ಲ ಕರ್ಮ ಕಾಂಡಕ್ಕೆ ಕಾರಣವಾಗಿದ್ದ ನೀರಾವರಿ ಇಲಾಖೆ ತೀರ್ಮಾನಿಸಿತು. ಎಂದೂ ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ ವಿತರಿಸಿ ಸಣ್ಣ ನೀರಾವರಿ ಇಲಾಖೆ ದೊಡ್ಡ ದಾಖಲೆ ನಿರ್ಮಿಸಿತ್ತು.ಅಂದಿನ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ವರದಿ ನಂಬ ಲಾಗದೆ ‘ಏನು ಡಿ.ಸಿಯವರೇ ನಿಮ್ಮ ವರದಿ ಸರಿ ಇದೆಯಾ, ಹೀಂಗ್‌ ಹ್ಯಾಂಗ್‌ ಆಗಲಿಕ್ಕ ಸಾಧ್ಯ?’ ಎಂದು ಏರು ಧ್ವನಿಯಲ್ಲಿ ಕೇಳಿದರು. ‘ನಾನೂ ಇದನ್ನು ನಂಬಲಿಕ್ಕೆ ಇಷ್ಟಪಡುವುದಿಲ್ಲ. ಆದರೆ, ಆಗಿರುವುದು ನಿಜ’ ಎಂದು ಉತ್ತರಿಸಿದೆ. ನನ್ನ ವರದಿ ಕುರಿತು ವಿಧಾನಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು. ಹುನಗುಂಟೇಕರ್‌ ಸೇರಿದಂತೆ ಬಾಗಲಕೋಟೆ ಕಚೇರಿಯ ಹಲವು ನೌಕರರು ಅಮಾನತುಗೊಂಡರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತು. ಸುಮಾರು ವರ್ಷಗಳ ಕಾಲ ನಾನು ಲೋಕಾ ಯುಕ್ತ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಬೇಕಾಯಿತು. ಕೊನೆಗೂ ಸರ್ಕಾರ, ಹುನಗುಂಟೇಕರ್‌ ಅವರನ್ನು ಸೇವೆಯಿಂದ ವಜಾಗೊಳಿಸಿತು.ಇದೇ ಸಂದರ್ಭದಲ್ಲಿ ಜಮಖಂಡಿ ಎ.ಸಿ ಯಾಗಿದ್ದ ದೆಹಲಿ ಮೂಲದ ಅತ್ಯಂತ ಚಾಣಾಕ್ಷ ಯುವ ಐಎಎಸ್‌ ಅಧಿಕಾರಿಯೊಬ್ಬರು ಕೇಂದ್ರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ತಂದೆಗೆ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಭೂಮಿ ಖರೀದಿಗೆ ಅನುಮತಿ ನೀಡಿದ ಘಟನೆ ನನಗೆ ನೆನಪಾಗುತ್ತಿದೆ.ಭೂಮಿಯ ವಿಷಯದಲ್ಲಿ ರೈತರು ಶೋಷ ಣೆಗೆ ಒಳಗಾಗುವುದು, ಮೋಸ ಹೋಗುವುದು ಸಾಮಾನ್ಯವಾಗಿದೆ. ಬೇನಾಮಿ ಹೆಸರಿನಲ್ಲಿ ಭೂಮಿ ಹಂಚಿಕೆಯಾಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಐಎಡಿಬಿಯಿಂದ ಎಷ್ಟು ಭೂಮಿ ಹಂಚಿಕೆಯಾಗಿದೆ, ಎಷ್ಟು ಕೈಗಾರಿಕೆಗಳು ಬಂದಿವೆ ಇವೇ ಮೊದಲಾದ ಸಂಗತಿಗಳ ಕುರಿತು ಆಡಿಟ್‌ ನಡೆಯುವುದು ಅಗತ್ಯವಾಗಿದೆ.ಸ್ವಂತ ಜಮೀನಿನ ಬಳಕೆಗೆ ರೈತ ಇಷ್ಟೊಂದು ಶೋಷಣೆಗೆ ಒಳಗಾಗಬೇಕೇ?  ಕಂದಾಯ ಇಲಾ ಖೆಯ ಹಲವಾರು ಕಾನೂನುಗಳು ರೈತರಿಗೆ ಸಹ ಕಾರಿಯಾಗುವ ಬದಲು ಅಧಿಕಾರಿಗಳ ದುರ್ಬುದ್ಧಿಯಿಂದ ಅವರನ್ನು ಶೋಷಣೆಗೆ ಒಳ ಪಡಿಸುತ್ತಿವೆ. ‘ಸಕಾಲ’ದಂತಹ ಸೌಲಭ್ಯ ಒದಗಿಸಿ ರುವ ಸರ್ಕಾರ ಈ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾನೂನು ಸರಳ ಗೊಳಿಸಿ ರೈತರನ್ನು ಶೋಷಣೆಯಿಂದ ಮುಕ್ತಿ ಗೊಳಿಸಲು ಇದು ಸಕಾಲ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry