ಕಡಿಮೆ ಅಂಕದ ರುದ್ರನಾಟಕ

7

ಕಡಿಮೆ ಅಂಕದ ರುದ್ರನಾಟಕ

ಡಾ. ಆಶಾ ಬೆನಕಪ್ಪ
Published:
Updated:
ಕಡಿಮೆ ಅಂಕದ ರುದ್ರನಾಟಕ

ನಪಾಸಾಗುವ ಅಥವಾ ಕಡಿಮೆ ಅಂಕ ಗಳಿಸಿ ಕೀಳರಿಮೆ ಅನುಭವಿಸುವ ವಿದ್ಯಾರ್ಥಿಗಳು, ಅವರ ಸಮಸ್ಯೆಯನ್ನು ಗುರ್ತಿಸದ ಪೋಷಕರು ಮತ್ತು ಬೋಧಕರು ನಮ್ಮಂದಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಸಮಸ್ಯೆಯನ್ನು ಯಾರೂ ಅರ್ಥಮಾಡಿಕೊಳ್ಳದ ಕಾರಣಕ್ಕೆ ಹತಾಶೆಗೆ ಒಳಗಾದವರಿಗೆ, ನಿರ್ದಿಷ್ಟ ಕಲಿಕಾ ಅಸಾಮರ್ಥ್ಯ (ಎಸ್‌ಎಲ್‌ಡಿ), ಅಗೋಚರ ಅಂಗವೈಕಲ್ಯ ಹೊಂದಿರುವ ಎಲ್ಲಾ ಮಕ್ಕಳು ಮತ್ತು ಅವರ ಪೋಷಕರಿಗೆ ಈ ಲೇಖನ ಅರ್ಪಣೆ.ಪ್ರತಿ ವರ್ಷ ಮಾರ್ಚ್-ಮೇ ತಿಂಗಳವರೆಗಿನ ಅವಧಿ ನನ್ನ ನೆಮ್ಮದಿಯನ್ನು ಕಲಕುವ ಕಾಲ. ಈ ಅವಧಿಯಲ್ಲಿ ಪರೀಕ್ಷಾ ಒತ್ತಡ ಮತ್ತು ಅನುತ್ತೀರ್ಣತೆಯಿಂದ ಆಸ್ಪತ್ರೆಗೆ ದಾಖಲಾಗುವ ಮಕ್ಕಳು ಹೆಚ್ಚು. ಕೆಲವರ ಪಾಲಿಗೆ `ಆತ್ಮಹತ್ಯೆ'ಯೇ ಉತ್ತರ. ಪ್ರೌಢವಯಸ್ಸಿಗೆ ಅಡಿಯಿಡುವ ಈ ಯುವಜೀವಗಳು ಪ್ರಾರಂಭದಲ್ಲಿಯೇ ಕಮರಿಹೋಗುತ್ತವೆ.ಬೆಂಗಳೂರಿನ ಬಸವನಗುಡಿಯ `ದಿ ಹೋಂ ಸ್ಕೂಲ್' ಏಳನೇ ತರಗತಿವರೆಗೆ ಕಲಿಕೆಗೆ ಅವಕಾಶ ಇರುವ ಶಾಲೆ. ಇದು ಒಂದು ಬಗೆಯಲ್ಲಿ `ಮನೆ ಶಾಲೆ'ಯೇ ಹೌದು. ಕೆಲವೇ ಕೆಲವು ವಿಭಾಗಗಳು ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಯ ವೈಶಿಷ್ಟ್ಯ.ಒಂದು ಮಗುವಿನ ತಾಯಿ ತನ್ನ ಮಗನ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ ತರಲು ಹೋದಾಗ- ಆಗಿನ ಪ್ರಾಂಶುಪಾಲರಾಗಿದ್ದ ದಿ. ವೆಂಕಟಾಚಲ, `ನಿಮ್ಮ ಮಗು ಅಸಾಧಾರಣ ಪ್ರತಿಭಾವಂತ. ನೋಡುತ್ತಿರಿ, ಆತ ಎಷ್ಟು ಎತ್ತರಕ್ಕೆ ಏರುತ್ತಾನೆಂದು' ಎಂದು ಹೇಳಿದ್ದರು. ತಾಯಿ ಮತ್ತು ಮಗು ಇಬ್ಬರೂ ಸಂತೋಷದಿಂದ ಮನೆಗೆ ಹಿಂದಿರುಗಿದ್ದರು.ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಗೆ ಸಮೀಪದಲ್ಲೇ ಇರುವ ಪ್ರೌಢಶಾಲೆಗೆ ಮಗನನ್ನು ಸೇರಿಸಲು ಉದ್ದೇಶಿಸಿದರು. ಉತ್ತಮ ಅಂಕಗಳನ್ನು ಗಳಿಸಿದ್ದರೂ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಮಗನನ್ನು ದಾಖಲಿಸಲು ಪ್ರಭಾವ ಬಳಸಬೇಕಾಯಿತು. ಆ ಹುಡುಗನಿಗೆ ಹೊಸ ಶಾಲೆ ಸ್ವಲ್ಪವೂ ಹಿಡಿಸಲಿಲ್ಲ. ಅಲ್ಲಿನ ಶಿಕ್ಷಕರು ಮನೆ ಶಾಲೆಯವರಂತೆ ಮೃದು ಹೃದಯಿಗಳಾಗಿರಲಿಲ್ಲ. ಬಹುಶಃ ಅದು ಪ್ರೌಢಶಾಲೆಯಾಗಿದ್ದರಿಂದ ಈ ಬಿಗಿ ವಾತಾವರಣ ಇರಬೇಕು.ಪೋಷಕರು-ಶಿಕ್ಷಕರ ಸಭೆ ಸಂದರ್ಭದಲ್ಲಿ- `ವರ್ಗಾಯಿತ ವಿದ್ಯಾರ್ಥಿ'ಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಸ್ಥಿತಿ ಎಂದು ಪೋಷಕರಿಗೆ ಹೇಳಲಾಯಿತು. ಪೋಷಕರು ತಮ್ಮ ಮಗನ ಕಲಿಕೆ ಸುಧಾರಿಸಲಿ ಎಂದು ಟ್ಯೂಷನ್‌ಗೆ ಕಳುಹಿಸಲು ನಿರ್ಧರಿಸಿದರು. ಅಲ್ಲಿ ಕೂಡ, ಶಾಲಾ ಕೊಠಡಿಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದರು.ಮಗನ ಕಿರುಪರೀಕ್ಷೆ ಮತ್ತು ಮಧ್ಯವಾರ್ಷಿಕ ಪರೀಕ್ಷೆಯ ಫಲಿತಾಂಶದಿಂದ ಪೋಷಕರು ಪ್ರಯಾಸಪಡುವಂತಾಯಿತು. ಅಂತಿಮ ಪರೀಕ್ಷೆ ಬರೆಯಲು ವಿಶೇಷ ತರಬೇತಿ ನೀಡಲಾಯಿತು. ಮಗು ಮತ್ತು ಶಿಕ್ಷಕರ ನಡುವೆ ನಿರಂತರ ಸಂಘರ್ಷ ನಡೆಯುತ್ತಿದ್ದದ್ದು ಹೇಳಿದ್ದನ್ನು ಆತ ಬರೆದುಕೊಳ್ಳುತ್ತಿಲ್ಲವೆಂಬ ಕಾರಣಕ್ಕೆ! ಪಠ್ಯಪುಸ್ತಕದಲ್ಲಿರುವ ವಿಷಯಗಳೇ ಈ ನೋಟ್ಸ್‌ಗಳಲ್ಲಿ ಇರುವುದು ಎನ್ನುವುದು ಆತನ ಅಭಿಪ್ರಾಯ.ಶಾಲಾ ಅಧಿಕಾರಿಗಳು ಟಿ.ಸಿ. ಕೊಟ್ಟು ಕಳುಹಿಸುವುದಾಗಿ ಬೆದರಿಕೆ ಹಾಕಿದರು. ಒಂದು ವರ್ಷದ ಬಳಿಕ ಕೊನೆಗೂ ಶಿಕ್ಷಕರು ಮತ್ತು ಪೋಷಕರ ನಡುವಿನ ಘರ್ಷಣೆ ತಿಳಿಯಾದಂತಾಯಿತು.`ಎಸ್‌ಎಲ್‌ಡಿ' ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರು ಸಾಮಾನ್ಯವಾಗಿ ಪದೇ ಪದೇ ಹೇಳುವುದು `ಒಂದು ವೇಳೆ ಎಲ್ಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮೌಖಿಕವಾಗಿದ್ದರೆ ನನ್ನ ಮಗ ಇಡೀ ಶಾಲೆಯಲ್ಲೇ ಅತಿ ಬುದ್ಧಿವಂತ ವಿದ್ಯಾರ್ಥಿಯಾಗಿರುತ್ತಿದ್ದ.' ಈ ಮಕ್ಕಳು ಮೌಖಿಕವಾಗಿ ಚುರುಕಾಗಿದ್ದರೂ ಲಿಖಿತ ಕಾರ್ಯಗಳಲ್ಲಿ ಹಿಂದಿರುತ್ತಾರೆ.ಈ ಮಗು 9ನೇ ತರಗತಿ ತಲುಪಿದ್ದ. ಆತನ ವಯಸ್ಸು 14. ಶಿಶುವೈದ್ಯರ ಪ್ರಕಾರ ಇದು ತಾರುಣ್ಯದ ಪ್ರಕ್ಷುಬ್ಧತೆ ಮೊಳಕೆಯೊಡೆಯುವ ಕಾಲ. ಹಾರ್ಮೋನುಗಳು ಮಕ್ಕಳ ದೇಹದಲ್ಲಿ ಅಲ್ಲೋಲ ಕಲ್ಲೋಲ ಮಾಡುವ ಸಮಯ. ಓದಿನಲ್ಲಿ ನಿರಾಸಕ್ತಿ ಮತ್ತು ಶಿಕ್ಷಕರಿಂದ ಪ್ರೇರಣೆ ಕೊರತೆ ಈ ಮಗುವಿಗೆ ಶಾಲೆಯ ಕುರಿತು ತಿರಸ್ಕಾರ ಹುಟ್ಟಲು ಕಾರಣವಾಯಿತು.ಶಾಲೆಯಿಂದ ತಪ್ಪಿಸಿಕೊಳ್ಳಲು ಕಾರಣಗಳನ್ನು ನೀಡತೊಡಗಿದನು. ತಳಮಳಗೊಂಡ ಪೋಷಕರಿಗೆ ಪ್ರತಿದಿನವೂ ಒತ್ತಡವಾದರೆ, ಪ್ರತಿ ಪರೀಕ್ಷೆಯೂ ಹಿಂಸೆಯಾಗತೊಡಗಿತು. ಅವರು ಇದಕ್ಕೆ ಪರ್ಯಾಯವೇನಾದರೂ ಇದೆಯೇ ಎಂದು ಹುಡುಕತೊಡಗಿದರು. ಮಗ 9ನೇ ತರಗತಿ ಉತ್ತೀರ್ಣನಾದದ್ದು ಪೋಷಕರಿಗೆ ನೆಮ್ಮದಿ ತಂದಿತು. ಬಳಿಕ ಎದುರಾದದ್ದು 10ನೇ ತರಗತಿ ಪಬ್ಲಿಕ್ ಪರೀಕ್ಷೆ. ಟ್ಯೂಷನ್‌ಗೆ ತೆರಳಲು ನಿರಾಕರಿಸುತ್ತಿದ್ದ ಮಗನಿಗೆ ಸಹಾಯ ಮಾಡಲು ಪೋಷಕರು ರಜೆ ತೆಗೆದುಕೊಂಡರು.10ನೇ ತರಗತಿ ಫಲಿತಾಂಶ ಹೊರಬಂತು. ಪಾಪದ ಹುಡುಗ ಗಣಿತದಲ್ಲಿ ಅನುತ್ತೀರ್ಣನಾಗಿದ್ದ. ನಪಾಸಾದ ಅವನು ತೀವ್ರ ಖಿನ್ನನಾಗಿದ್ದ ತಲೆ ಮರೆಸಿಕೊಂಡಿದ್ದ. ಎಲ್ಲಿದ್ದಾನೆ ಎನ್ನುವುದು ಸುಮಾರು 18 ಗಂಟೆಗೂ ಅಧಿಕ ಕಾಲ ಪತ್ತೆಯಾಗಿರಲಿಲ್ಲ.ಶಾಲೆ ಶುರುವಾದಾಗಿನಿಂದ ಈ ಹುಡುಗನೇ 10ನೇ ತರಗತಿಯಲ್ಲಿ ಫೇಲಾದ ಮೊದಲ ವಿದ್ಯಾರ್ಥಿ ಎಂದು ಶಾಲಾ ಆಡಳಿತದವರು ರೇಗಾಡಿದರು. ತಂದೆತಾಯಿಯರು ಮುಜುಗರ ಹಾಗೂ ಅವಮಾನಕ್ಕೆ ಒಳಗಾದರು. ಮಗನನ್ನು ಹುಡುಕಿ ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ತಿಳಿ ಹೇಳಿ ಮನವೊಲಿಸಿದರು.ಬಿಟಿಎಂ ಲೇಔಟ್‌ನಲ್ಲಿ ಟ್ಯುಟೋರಿಯಲ್ ನಡೆಸುತ್ತಿದ್ದ ಖ್ಯಾತ ಗಣಿತ ಶಿಕ್ಷಕ ಪ್ರೊ. ನಿಜಗುಣ ಸ್ವಾಮಿ ಸಹಾಯಕ್ಕೆ ಮುಂದೆ ಬಂದರು. ಅವರು ಈ ಮಗುವಿನಲ್ಲಿ `ಸಮಸ್ಯೆಯೊಳಗೆ ಸಮಸ್ಯೆಗಳು (ಅನೇಕಾನೇಕ ಸಮಸ್ಯೆಗಳು)' ಇರುವುದನ್ನು ಅವರು ಪತ್ತೆಹಚ್ಚಿದರು. ವೈಯಕ್ತಿಕ ತರಬೇತಿ ಬಳಿಕ ಆತ ಸಪ್ಲಿಮೆಂಟರಿಯಲ್ಲಿ 70ಕ್ಕೂ ಅಧಿಕ ಅಂಕ ಗಳಿಸಿ ಉತ್ತೀರ್ಣನಾದ.ತಾಯಿಯ ವಿರೋಧದ ನಡುವೆಯೂ ಈ ಮಗುವಿಗೆ ವಿಜ್ಞಾನ ವಿಭಾಗವನ್ನು ಆಯ್ದುಕೊಳ್ಳುವ ಬಯಕೆ (ಇದು ಆತನ ಗೆಳೆಯರ ಸಲಹೆ ಕೂಡ). ಎಸ್‌ಎಸ್‌ಎಲ್‌ಸಿ ಮಂಡಳಿಯ ನಿರ್ದೇಶಕರಾಗಿದ್ದ ಭಾಸ್ಕರಯ್ಯ ಅವರ ಸಹಾಯದಿಂದ ಸೌತ್ ಎಂಡ್ ಸರ್ಕಲ್‌ನ ಜೂನಿಯರ್ ಕಾಲೇಜು ಒಂದರಲ್ಲಿ ಪ್ರವೇಶ ಗಿಟ್ಟಿಸಿಕೊಂಡನು. 24 ತಿಂಗಳ ಈ ಪದವಿ ಪೂರ್ವ ಶಿಕ್ಷಣ ಮತ್ತಷ್ಟು ಕಹಿಯಿಂದ ಕೂಡಿತ್ತು. ತರಗತಿಯಲ್ಲಿ ವಿದ್ಯಾರ್ಥಿಗಳು ತುಂಬಿರುತ್ತಿದ್ದರು.ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲ. ವಿಷಣ್ಣ ಮನಸ್ಥಿತಿಯ ಹುಡುಗ ಶಾಲಾ ಕೊಠಡಿಯೊಳಗಿನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಪ್ರಾರಂಭಿಸಿದ. ತರಗತಿಯೊಳಗಿನ ಪರೀಕ್ಷೆಯಾದ್ದರಿಂದ ಮೊದಲ ಪಿಯುಸಿಯನ್ನು ತೇರ್ಗಡೆಯಾದ. ನಂತರದ್ದು ಎರಡನೇ ಪಿಯುಸಿ. ನಮಗೆಲ್ಲರಿಗೂ ತಿಳಿದಿರುವಂತೆ ಎರಡನೇ ಪಿಯುಸಿ ಅಂಕ ಮಕ್ಕಳ ಭವಿಷ್ಯದ ಬದುಕಿನ ಕುಂಡಲಿ ಇದ್ದಂತೆ. ಪೋಷಕರು ಮಗುವಿನ ಮೇಲೆ ಒತ್ತಡ ಬೀಳದಂತೆ ಒತ್ತಾಯ ಮಾಡದಿದ್ದರೂ ಕಡೇ ಪಕ್ಷ ಆತ ಪಾಸಾದರೆ ಸಾಕು ಎಂದು ಬಯಸಿದ್ದರು.ಎಸ್‌ಎಲ್‌ಡಿಯ ಮಗುವಿನಲ್ಲಿ ವಿಶೇಷ ಸಾಮರ್ಥ್ಯವಿರುತ್ತದೆ. ಶಿಕ್ಷಣವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಟ್ಟದ ಪ್ರದರ್ಶನ ಅವರಲ್ಲಿ ಕಾಣಬಹುದು. ಈ ಮಕ್ಕಳು, ಇತರ ಸಹಜ ಮಕ್ಕಳಿಗಿಂತ ಚೆನ್ನಾಗಿ ಚಲನಚಿತ್ರಗಳು, ಟೀವಿ ಕಾರ್ಯಕ್ರಮ ಮತ್ತು ಸಂಗೀತವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಹೆಚ್ಚು ಚುರುಕು. ಆಟೋಟಗಳಲ್ಲಿ ಅವರದೇ ನಾಯಕತ್ವ.ಪ್ರಬಂಧ ಸ್ಪರ್ಧೆ, ಭಾಷಣ, ನೆನಪಿನ ಶಕ್ತಿ ಪರೀಕ್ಷೆಯಂಥ ಇತ್ಯಾದಿ ಚಟುವಟಿಕೆಗಳಲ್ಲೂ ಮುಂದು. ಕಂಪ್ಯೂಟರ್ ಜ್ಞಾನದಲ್ಲಿ ಜಾಣರು. ಹೀಗಾಗಿಯೇ ಅವರು ಓದಿನಲ್ಲಿ ತುಂಬಾ ಹಿಂದೆ ಬಿದ್ದಾಗಲೂ ಅನುಕಂಪ ಗಿಟ್ಟದಿರುವುದು ಮತ್ತು ದಡ್ಡ ಅಥವಾ ಮೊಂಡ ಎಂಬ ಹಣೆಪಟ್ಟಿಯೊಂದಿಗೆ ಶಿಕ್ಷೆಗೆ ಒಳಗಾಗುವುದು.ಈ ಹುಡುಗ ಕೂಡ ಕಂಪ್ಯೂಟರ್ ಜ್ಞಾನದಲ್ಲಿ ಬುದ್ಧಿವಂತ. ಕಂಪ್ಯೂಟರ್ ಕುರಿತ ಎಲ್ಲಾ ತರಗತಿಗಳಿಗೂ ಹಾಜರಾಗುತ್ತಿದ್ದ. ಮಾತ್ರವಲ್ಲ, ಶಿಕ್ಷಕರು ಮತ್ತು ಪೋಷಕರ ಅಪನಂಬಿಕೆಗೆ ವಿರುದ್ಧವಾಗಿ ಶಾಲೆಯ ಎಲ್ಲಾ ವಾರ್ಷಿಕ ಚಟುವಟಿಕೆಗಳಲ್ಲೂ ಸಂಪೂರ್ಣವಾಗಿ ತೊಡಗಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಿದ್ದ. ಶಾಲೆಯ ವಾರ್ಷಿಕ ಚಟುವಟಿಕೆಯಲ್ಲಿ ಈ ಮಗುವಿನ ಕಲ್ಪನೆಯ ಮತ್ತು ವಿನ್ಯಾಸದಲ್ಲಿ ಮೂಡಿದ ಗ್ರಾಫಿಕ್‌ಗಳು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟ ಸಾಧುಕೋಕಿಲ ಅವರ ಪ್ರಶಂಸೆಗೆ ಪಾತ್ರವಾಗಿತ್ತು.ಪೋಷಕರು ಮಗನ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾದುಕುಳಿತಿದ್ದರು. ಅವನು ಗಣಿತದಲ್ಲಿ ಶೋಚನೀಯವಾಗಿ ಅನುತ್ತೀರ್ಣನಾಗಿದ್ದ. ಆಗ ಆತನ ವಯಸ್ಸು 17. ಒಂದೆಡೆ ಪ್ರಾಯದ ಸಮಸ್ಯೆಗಳೊಂದಿಗೆ ಘರ್ಷಣೆ, ಇನ್ನೊಂದೆಡೆ ಕೆಳಮಟ್ಟದ ಶೈಕ್ಷಣಿಕ ಸಾಧನೆಯಿಂದಾಗಿ ಆತ ತೀವ್ರ ಖಿನ್ನತೆಗೆ ತಲುಪಿದ. ಒತ್ತಡಕ್ಕೆ ಬಿದ್ದ ಪೋಷಕರು ಕುರುಡಾಗಿ ನಿರ್ಧಾರಗಳನ್ನು ತೆಗೆದುಕೊಳ್ಳತೊಡಗಿದರು. ಏಕೈಕ ಮಗನ ಮೇಲೆ ನಿಗಾ ಇಡಲು ಪ್ರಾರಂಭಿಸಿದರು.ಆತನ ಅಜ್ಜ ದಿನವಿಡೀ ನಿಗಾ ವಹಿಸುವುದು ಮಾತ್ರವಲ್ಲ, ನಿಮ್ಹಾನ್ಸ್‌ನಲ್ಲಿ ಡಾ. ಶೋಭಾ ಶ್ರೀನಾಥ್ ಮತ್ತವರ ತಂಡ ತಪಾಸಣೆ ನಡೆಸುವಾಗಲೂ ಆತನ ಜೊತೆಗಿದ್ದರು. ಇಲ್ಲಿಯೂ ಆತ ಬಹು ಬುದ್ಧಿವಂತ ಎಂಬ ತೀರ್ಪು ಹೊರಬಂತು. ಸೋತ ಪೋಷಕರು ಗಣಿತ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಲಾಗದ ತಮ್ಮ ಏಕೈಕ ಮಗನಲ್ಲಿ `ಬುದ್ಧಿವಂತಿಕೆ' ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳದಾದರು.ಶಿಶುವೈದ್ಯ ತಜ್ಞೆ ಡಾ. ನಳಿನಿ ಸುಬ್ಬಯ್ಯ ಮಗುವನ್ನು ಮನೋವಿಶ್ಲೇಷಕಿ ಮತ್ತು ವೈಟ್‌ಫೀಲ್ಡ್‌ನ ಸಾಯಿಬಾಬಾ ಮಂದಿರದಲ್ಲಿ ನೆಲೆಸಿರುವ ಭಕ್ತೆ ಪೆಟ್ರಿಷಿಯಾ ಅವರಲ್ಲಿ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಆರು ಅವಧಿಗಳ ಬಳಿಕ ಆಕೆಯೂ ಮಗುವನ್ನು ಬುದ್ಧಿವಂತ ಎಂದು ಘೋಷಿಸಿದರು! ಆತ ಎಲ್ಲಾ ಯುಕ್ತ ಪರೀಕ್ಷೆಗಳನ್ನು ಶೇ 100 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ.ಆತನ ಮಿದುಳು ತಂತುವಿನಲ್ಲಿ ಸಮಸ್ಯೆಯಿದ್ದು, ಪರೀಕ್ಷೆಗಳ ಪ್ರತಿ ಹಂತವೂ ಅದು ಸರಿಹೊಂದಲು ಸಹಕಾರಿಯಾಗಿದೆ ಎಂಬುದನ್ನು ಅವರು ಗುರುತಿಸಿದ್ದರು. ತಡಕಲಿಕೆಯ ದೌರ್ಬಲ್ಯ (ಎಲ್‌ಡಿ), ಅಂತಿಮವಾಗಿ ಅದು ನರಮನೋವೈಜ್ಞಾನಿಕ ಆಧಾರದಲ್ಲಿ ಸಮಸ್ಯೆ ಹೊಂದಿದೆ ಎಂಬುದನ್ನು ಸಾಬೀತುಮಾಡಿತು. ಎಸ್‌ಎಲ್‌ಡಿ ಮಕ್ಕಳ ಮಿದುಳು ತಂತು ತಪ್ಪಾಗಿ ಬೆಸೆದಿರುತ್ತವೆ. ಹೀಗಾಗಿ ಸಹಜ ಮಕ್ಕಳಂತೆ ಕಲಿಕೆ ಪ್ರತಿಕ್ರಿಯೆಯ ಕೆಲವು ಅಂಶಗಳನ್ನು ಗ್ರಹಿಸಲು ಅವರು ಅಸಮರ್ಥರಾಗಿರುತ್ತಾರೆ.ಗಣಿತದಲ್ಲಿ ಅನುತ್ತೀರ್ಣನಾದ ಬಳಿಕ ಹುಡುಗ ನಿರಂತರವಾಗಿ ಆರು ಸಪ್ಲಿಮೆಂಟರಿ ಪರೀಕ್ಷೆಗಳನ್ನು ತೆಗೆದುಕೊಂಡ. ಪೋಷಕರು ದೊಡ್ಡ ಮೊತ್ತಕ್ಕೆ ಮನೆಪಾಠವನ್ನೂ ಪ್ರಯತ್ನಿಸಿದರು. ಅದೂ ಕೂಡ ನೆರವಿಗೆ ಬರಲಿಲ್ಲ. ಅವರ ಪಾಲಿನ ಆಪದ್ಭಾಂದವ ಆಗಿದ್ದು ಎ.ಜಿ. ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಂತ್ ಆರ್ಯ. ಎನ್. ಆರ್. ಕಾಲೋನಿಯ ಬಳಿ ವಾಸವಾಗಿದ್ದ ಸುಭಾಷ್ ದೇಸಾಯಿ ಅವರ ಬಳಿ ಈ ತರುಣನನ್ನು ಕರೆದೊಯ್ದರು.ಗಣಿತದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ `ಶ್ರೇಷ್ಠ ಶಿಕ್ಷಕ' ಎಂದೇ ಹೆಚ್ಚೂ ಕಡಿಮೆ ಅವರು ಜನಪ್ರಿಯ. ಅವರು ಅದ್ಭುತ ಶಿಕ್ಷಕ ಮಾತ್ರವಲ್ಲ, ಅದಕ್ಕೂ ಮಿಗಿಲಾಗಿ ಖಿನ್ನತೆಗೆ ಒಳಗಾದ ವಿದ್ಯಾರ್ಥಿಗಳಿಗೆ ಸ್ನೇಹಿತ ಮತ್ತು ಆಪ್ತಸಲಹೆಗಾರ ಕೂಡ.ಈ ಎಲ್ಲಾ ಪ್ರಯತ್ನಗಳಲ್ಲಿ ಈ ತರುಣನಿಗೆ ಏನಾಯಿತು? ಶಿಕ್ಷಣದ ಮುಖ್ಯವಾಹಿನಿಯನ್ನು ಪೂರೈಸಿ ಆತನ ಸಹಪಾಠಿಗಳು ತಮ್ಮ ವೃತ್ತಿಬದುಕಿನ ಜಾಡು ಹಿಡಿಯುತ್ತಿದ್ದರು. ಹೆಚ್ಚೂ ಕಡಿಮೆ ಆತನ ಯಾವ ಸ್ನೇಹಿತರೂ ಜೊತೆಯಲ್ಲಿ ಉಳಿದಿರಲಿಲ್ಲ. ಆತ ಅಕ್ಷರಶಃ ಬೀದಿಗಳಲ್ಲಿ ಬದುಕು ಕಳೆಯತೊಡಗಿದ. ಕೆಲವು ಉತ್ತಮ ಕೆಲವು ಕೆಟ್ಟ ಬೀದಿ ಗೆಳೆಯರು ಜೊತೆಗೂಡಿದರು. ಬೀದಿ ಬದುಕಿನಲ್ಲಿನ ಕಹಿ ಸಾಕಷ್ಟು ಕಲಿಸಿತು. ತನ್ನ ಜೀವನಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದು ಮಾತ್ರವಲ್ಲ, ಒಂದಕ್ಕಿಂತ ಇನ್ನೊಂದು ಕಷ್ಟವೆನಿಸತೊಡಗಿತು.ಹೋಮ ಹವನಾದಿಗಳ ಮೂಲಕ ಪೋಷಕರು ದೇವರ ಮೊರೆ ಹೋದರು. ಜ್ಯೋತಿಷಿಗಳನ್ನು ಭೇಟಿ ಮಾಡಿದರು, ದೇವಸ್ಥಾನ, ವ್ರತ, ಬೇರೆಯವರು ಹೇಳಿದ್ದನ್ನೆಲ್ಲವನ್ನೂ ಅವರು ಮಾಡಿದರು. ಸಂಕಷ್ಟದಲ್ಲಿರುವ ಮಗನ ಜೀವನಕ್ಕಾಗಿ ಆತನ ತಾಯಿ ಗಣಿತಕ್ಕೆ ವಿನಾಯಿತಿ ನೀಡುವಂತೆ ಕೋರಲು ಪಿಯು ಮಂಡಳಿ ನಿರ್ದೇಶಕ ಗೊನಾಲ್ ಭೀಮಪ್ಪ ಅವರನ್ನು ಭೇಟಿ ಮಾಡಿದರು. ಆದರೆ ಅವರೂ ಅಸಹಾಯಕರಾಗಿದ್ದರು. ಪೋಷಕರು ಆ ಎರಡು ವರ್ಷಗಳನ್ನು ನಿದ್ದೆಯಿಲ್ಲದೆಯೇ ಕಳೆದರು.ಕೊನೆಗೂ ಆರನೇ ಪ್ರಯತ್ನದಲ್ಲಿ ಗಣಿತವನ್ನು ಪಾಸು ಮಾಡಿದಾಗ, ಮಗ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಂತೆ ಪೋಷಕರಿಗೆ ಅನಿಸಿತ್ತು. ಇಂದು 26ರ ಹರೆಯದ ಈ ಯುವಕ ಹಲವು ಹೆಚ್ಚುವರಿ ಕೋರ್ಸ್‌ಗಳ ಅರ್ಹತೆ ಜೊತೆಗೆ ಎಂಬಿಎ ಮುಗಿಸುತ್ತಿದ್ದಾನೆ. ತನ್ನ ದೌರ್ಬಲ್ಯವನ್ನು, ಸಮಾಜದ ಪ್ರತಿಕೂಲತೆಯನ್ನು ಎದುರಿಸಿದ ಆತ `ನ್ಯೂರೊ ಲಿಂಗ್ಯುಸ್ಟಿಕ್' ಪ್ರೋಗ್ರಾಮಿಂಗ್‌ನಲ್ಲಿ (ಎನ್‌ಎಲ್‌ಪಿ- ಮಿದುಳು ತಂತುಗಳ ಸರಿಪಡಿಸುವಿಕೆ) ಪರಿಣತನಾಗಿದ್ದಾನೆ. ಸಂಸ್ಥೆಯೊಂದರ ಮೂಲಕ ಈ ಸಮಸ್ಯೆಯುಳ್ಳ ಅಸಂಖ್ಯಾತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೆರವಾಗಿದ್ದಾನೆ.ಇದೇ ಬಗೆಯ ತೊಂದರೆಯುಳ್ಳ ಮಗುವಿನ ಪೋಷಕರು, `ನನ್ನ ಒಬ್ಬನೇ ಮಗನನ್ನು ಕಳೆದುಕೊಳ್ಳುತ್ತಿದ್ದೆ, ನಿಮ್ಮ ಮಗನಿಂದಾಗಿ ಆತ ಉಳಿದಿದ್ದಾನೆ. ಇಂಥ ಮಗನನ್ನು ವಿಶ್ವಕ್ಕೆ ನೀಡಿದ ನೀವು ಮಹಾನ್ ತಾಯಿ. ಸಮಾಜಕ್ಕೆ ಇಂಥ ಕಾಣಿಕೆ ಕೊಟ್ಟಿದ್ದಕ್ಕೆ ನಿಮಗೆ ಕೃತಜ್ಞತೆ' ಎಂದು ಹೇಳಿದ್ದನ್ನು ಆತನ ತಾಯಿ ನೆನಪಿಸಿಕೊಳ್ಳುತ್ತಾರೆ.ದುರ್ಬಲ ಶೈಕ್ಷಣಿಕ ಸಾಧನೆ (ಪಿಎಸ್‌ಪಿ)ಯಂಥ ಅಗೋಚರ ಸಮಸ್ಯೆಯಿಂದ ಶೇ 20ರಷ್ಟು ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಎಂದು ಶಾಲಾ ಸಮೀಕ್ಷೆಯೊಂದು ಹೇಳುತ್ತದೆ. ಕಳಪೆ ಅಂಕ ಪಡೆಯುವುದನ್ನು ಒಂದು ರೋಗ ಲಕ್ಷಣ ಎಂಬಂತೆ ಗುರುತಿಸುವ ಅಗತ್ಯವಿದೆ. ಯಾವ ಮಕ್ಕಳೂ ಉದ್ದೇಶಪೂರ್ವಕವಾಗಿ ಶಾಲೆಯಲ್ಲಿ ಕಳಪೆ ಸಾಧನೆ ಮಾಡುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ಮಗುವಿನ ಶೈಕ್ಷಣಿಕ ಸಾಧನೆ ಉತ್ತಮವಾಗಿಲ್ಲದಿದ್ದರೆ ಅದಕ್ಕೆ ಸೂಕ್ತ ಕಾರಣಗಳಿದ್ದು, ಅದನ್ನು ವಿಶ್ಲೇಷಿಸುವುದೂ ಅಗತ್ಯ.ಎಸ್‌ಎಲ್‌ಡಿಯ ಮಕ್ಕಳಲ್ಲಿನ ಶೈಕ್ಷಣಿಕ ಕೌಶಲ್ಯದ ಕೊರತೆಗಳು ಯಾವುವೆಂದರೆ:

ಓದುವುದು/ ಗ್ರಹಿಕೆ ಸಾಮರ್ಥ್ಯ, ಬರವಣಿಗೆ/ ಕಾಗುಣಿತ, ಗಣಿತ. ಶೈಕ್ಷಣಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರ ಎಂದಾದಾಗ ಇವುಗಳನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಶಿಕ್ಷಣ ಮಂಡಳಿಗಳು ಈ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಗುರುತಿಸುತ್ತವೆ ಮತ್ತು ಅವರ ಮನವಿಗೆ ಅನುಕಂಪದ ಆಧಾರದಲ್ಲಿ ಸ್ಪಂದಿಸುತ್ತವೆ. ಪೋಷಕರು ಇದನ್ನು ಅರಿತುಕೊಳ್ಳಬೇಕು ಮತ್ತು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು.ಡಿಸ್ಲೆಕ್ಸಿಯಾ (ಓದುವ ಸಮಸ್ಯೆ) ಹೊಂದಿರುವ ಮಕ್ಕಳಿಗೆ ಎರಡನೇ ಹಾಗೂ ಮೂರನೇ ಭಾಷೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ.ಮಂಡಳಿ ಪರೀಕ್ಷೆಗಳಲ್ಲಿ ಹೆಚ್ಚುವರಿ ಸಮಯಕ್ಕೆ ಅವಕಾಶವಿರುತ್ತದೆ.

ಬರೆಯಲು ಅಸಮರ್ಥರಾದ ಮಕ್ಕಳಿಗೆ (ಡಿಸ್‌ಗ್ರೇಫಿಯಾ) ಬರಹಗಾರರನ್ನು ಬಳಸುವ ಅವಕಾಶವಿರುತ್ತದೆ.ಲೆಕ್ಕ ಮಾಡಲು ಸಾಧ್ಯವಿಲ್ಲದ (ಡಿಸ್ಕಲ್ಸುಲಿಯಾ) ಮಕ್ಕಳಿಗೆ ಕ್ಯಾಲ್ಕ್ಯುಲೇಟರ್ ಬಳಸಲು ಅವಕಾಶವಿದೆ.ಕಲಿಯಲು ಕಷ್ಟವಾದ ವಿಷಯದ ಬದಲು ಮತ್ತೊಂದು ವಿಷಯವನ್ನು ಆಯ್ದುಕೊಳ್ಳಬಹುದು. ಉದಾಹರಣೆ: ಗಣಿತದ ಬದಲು, ವಿದ್ಯಾರ್ಥಿ/ನಿ ತನ್ನ ಆಯ್ಕೆಯ ವಿಷಯವನ್ನು ತೆಗೆದುಕೊಳ್ಳಬಹುದು.ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಲ್ಲಿ (ಡಿಡಿಡಿ.್ಞಟಜಿ.ಟ್ಟಜ) ಇದಕ್ಕಾಗಿಯೇ ವಿಶೇಷ ಪಠ್ಯಕ್ರಮವಿದೆ.10ನೇ ತರಗತಿಯಿಂದ ಮುಂದಿನ ಓದಿಗಾಗಿ ಗಣಿತದಿಂದ ವಿನಾಯಿತಿ ಪಡೆಯಲು ಹೋರಾಡಿದ ಪುಣೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಮತ್ತು ಶಿಶುತಜ್ಞೆಡಾ. ಮೃದುಲಾ ಫಡ್ಕೆ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಅವರ ಹೋರಾಟದಿಂದಾಗಿ ಅನೇಕ ಮಕ್ಕಳು ಮುಖ್ಯವಾಹಿನಿಗೆ ಬರಲು ಕಾರಣವಾಯಿತು. ಶಾಲೆ/ಕಾಲೇಜುಗಳಲ್ಲಿ ತರಗತಿ ತಪ್ಪಿಸುತ್ತಿದ್ದ ಮಕ್ಕಳ ಸಂಖ್ಯೆ ಇಳಿಮುಖವಾಯಿತು. ಬೀದಿ ಮಕ್ಕಳ ಸಂಖ್ಯೆ ಕಡಿಮೆಯಾಯಿತು.ಆತ್ಮಹತ್ಯೆಗೆ ಮುಂದಾಗುವ ವಿದ್ಯಾರ್ಥಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿತು. ಈ ಅವಿಸ್ಮರಣೀಯ ಸಾಧನೆ ಮಾಡಿದ ಅವರ ಪಾದಗಳನ್ನು ಪೂಜ್ಯಭಾವದಿಂದ ಸ್ಪರ್ಶಿಸಿದ್ದೆ. 2012ರಲ್ಲಿ ಗುರಗಾಂವ್‌ನಲ್ಲಿ ನಡೆದ ಶಿಶುವೈದ್ಯರ ವಾರ್ಷಿಕ ಸಮ್ಮೇಳನದಲ್ಲಿ ಅವರನ್ನು ಭೇಟಿ ಮಾಡಿ ಅವರ ಸಾಧನೆಯನ್ನು ಕೊಂಡಾಡಿದೆ; ಆಗ ಅವರು ಹೇಳಿದ್ದು- `ಆಶಾ ನನಗೀಗ 80 ವರ್ಷ ದಾಟಿದೆ. ನನ್ನಲ್ಲಿ ಉತ್ಸಾಹ ಉಳಿದಿಲ್ಲ. ಈ ಹೊಣೆಯನ್ನು ನನ್ನಿಂದ ನೀವು ಪಡೆದುಕೊಳ್ಳಬೇಕು'.ಎಸ್‌ಎಲ್‌ಡಿ (ಬಲಗಣ್ಣು ಕುರುಡತನ) ಹೊಂದಿದ್ದ ನನ್ನ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರನ್ನು ನಾನು ಗುರುತಿಸಿದೆ. ಪೋಷಕರ ಪ್ರೋತ್ಸಾಹದೊಂದಿಗೆ ಅವರು ಶೈಕ್ಷಣಿಕ ಚಟುವಟಿಕೆಯಲ್ಲಿ ಮುಂದಿದ್ದರು.

ಕಳಪೆ ಶೈಕ್ಷಣಿಕ ಸಾಧನೆ ಮಾಡುವ ವಿದ್ಯಾರ್ಥಿಗಳಿಗಾಗಿ ಇರುವ ಕೋರ್ಸ್‌ನಲ್ಲಿ ನಾನು ರಾಷ್ಟ್ರೀಯ ಮಟ್ಟದ ತರಬೇತುಗಾರ್ತಿ. ನನ್ನ ಸ್ನಾತಕೋತ್ತರ ಪದವಿಯ ಪ್ರತಿ ಬ್ಯಾಚ್‌ಗೂ ತರಬೇತಿ ನೀಡುವುದು ಮುಖ್ಯವೆಂದು ಭಾವಿಸಿದ್ದೇನೆ. ಇದರಿಂದ ಕಳಪೆ ಅಂಕ ಪಡೆದ ವಿದ್ಯಾರ್ಥಿಯನ್ನು ಅವರು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ನೀಡುತ್ತಾರೆ ಎಂಬ ನಂಬಿಕೆ.

ಪ್ರಿಯ ಓದುಗರೆ, `ಕಳಪೆ ಅಂಕ'ದ ಸಮಸ್ಯೆಯನ್ನು ಗುರುತಿಸಿ ಈ ವಿಶೇಷ ಮಕ್ಕಳ ಸುಧಾರಣೆಗಾಗಿ ಸಂಘಟಿತ ಪ್ರಯತ್ನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಹೊಣೆ ನಮ್ಮೆಲ್ಲರದು.ಅದಾಗ ತಾನೇ ದಿನದ ಕೆಲಸ ಮುಗಿಸುತ್ತಿದ್ದೆ. ವಿಧವೆ ತಾಯಿಯೊಬ್ಬರು ಅಳುತ್ತಾ ಒಳಬಂದು, `ಡಾಕ್ಟ್ರೇ, ದಯವಿಟ್ಟು ಸಹಾಯ ಮಾಡಿ, ಶಾಲೆಯ ಆಡಳಿತ ಮಂಡಳಿ ನನ್ನ ಮಗ ಸುಹಾಸನಿಗೆ ಟಿ.ಸಿ ನೀಡಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry