ಕಡಿಮೆ ಬೆಲೆಯ ಸಾಧನಗಳು

7

ಕಡಿಮೆ ಬೆಲೆಯ ಸಾಧನಗಳು

ಯು.ಬಿ. ಪವನಜ
Published:
Updated:
ಕಡಿಮೆ ಬೆಲೆಯ ಸಾಧನಗಳು

ಬ್ರೋನಿಕ್ಸ್ ಕಂಪನಿ ಕಡಿಮೆ ಬೆಲೆಗೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳಲ್ಲಿ ಪವರ್‌ಬ್ಯಾಂಕ್, ಬ್ಲೂಟೂತ್ ಇಯರ್‌ಫೋನ್, ಬ್ಲೂಟೂತ್ ಸ್ಪೀಕರುಗಳು ಸೇರಿವೆ. ಅವರ ಉತ್ಪನ್ನಗಳು ಕಡಿಮೆ ಬೆಲೆಯವು ಮಾತ್ರವಲ್ಲ ಬೆಲೆಗೆ ತಕ್ಕ ಗುಣಮಟ್ಟದವೂ ಆಗಿವೆ. ಅಂದರೆ, ಹೇಳಿಕೊಳ್ಳುವಂತಹ ಉತ್ತಮ ಗುಣಮಟ್ಟದವೇನಲ್ಲ. ಅವರ ಉತ್ಪನ್ನಗಳ ಇನ್ನೂ ಒಂದು ವೈಶಿಷ್ಟ್ಯವೇನೆಂದರೆ, ಕಡಿಮೆ ಬೆಲೆಯ ಸಾಧನಗಳಲ್ಲಿ ಒಂದರಲ್ಲೇ ಹಲವು ಸೌಲಭ್ಯಗಳನ್ನು ನೀಡಿರುವುದು. ಉದಾ ಹರಣೆಗೆ, ಪವರ್‌ಬ್ಯಾಂಕ್, ಟಾರ್ಚ್, ಬ್ಲೂಟೂತ್ ಸ್ಪೀಕರು ಮತ್ತು ಎಫ್.ಎಂ. ರೇಡಿಯೊ ಇವಿಷ್ಟೂ ಒಂದೇ ಸಾಧನದಲ್ಲಿ ಇವೆ. ಈ ಸಲ ಅಂತಹ ಒಂದು ಸಾಧನ ಮತ್ತು ಒಂದು ಬ್ಲೂಟೂತ್ ಸ್ಪೀಕರುಗಳ ವಿಮರ್ಶೆ.

ಝೆಬ್ರೋನಿಕ್ಸ್ ಎಸ್ಟೀಮ್

ಇದು ಒಂದು ವಿಶೇಷ ಗ್ಯಾಜೆಟ್. ಇದನ್ನು ಮುಖ್ಯವಾಗಿ ಅವರು ಪವರ್‌ಬ್ಯಾಂಕ್ ಎಂದು ಮಾರುತ್ತಿದ್ದಾರೆ. ಆದರೆ ಇದರಲ್ಲಿ ಪವರ್‌ಬ್ಯಾಂಕ್ ಜೊತೆ ಎಲ್‌ಇಡಿ ಟಾರ್ಚ್, ಬ್ಲೂಟೂತ್ ಸ್ಪೀಕರ್, ಎಫ್.ಎಂ. ರೇಡಿಯೊ, ಮೈಕ್ರೋಎಸ್‌ಡಿ ಕಾರ್ಡ್ ಹಾಕಿ ಸಂಗೀತ ಪ್ಲೇ ಮಾಡುವುದು –ಇಷ್ಟೆಲ್ಲ ಸವಲತ್ತುಗಳಿವೆ. ಆದ್ದರಿಂದ ಇದಕ್ಕೆ ಅವರು 6-in-1 ಎಂದು ಕರೆದಿದ್ದಾರೆ. ಇದು ಕಪ್ಪು ಬಣ್ಣದಲ್ಲಿದ್ದು‌ ಟಾರ್ಚಿನಾಕಾರದಲ್ಲಿದೆ. ಮಧ್ಯಭಾಗದಲ್ಲಿ ನಾಲ್ಕು ಬಟನ್‌ಗಳಿವೆ. ಪ್ರಮುಖ ಬಟನ್ ಆನ್/ಆಫ್ ಆಗಿ, ಕರೆ ಬಂದಾಗ ಸ್ವೀಕರಿಸಲು, ಮಾತು ನಿಲ್ಲಿಸಲು, ಸಂಗೀತ ಆಲಿಸುತ್ತಿದ್ದಾಗ ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಪ್ಲೇ ಮಾಡಲು, ಹಲವು ಸೌಲಭ್ಯಗಳನ್ನು ಬದಲಾಯಿಸಲು –ಹೀಗೆ ಹಲವು ಕೆಲಸಗಳನ್ನು ಮಾಡಲು ಬಳಕೆಯಾಗುತ್ತದೆ. + ಮತ್ತು – ಎಂದು ಬರೆದ ಬಟನ್‌ಗಳು ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಹಾಗೂ ಹಿಂದಿನ ಅಥವಾ ಮುಂದಿನ ಹಾಡಿಗೆ ಹೋಗಲು ಬಳಕೆಯಾಗುತ್ತವೆ. ಟಾರ್ಚ್ ಆನ್/ಆಫ್ ಮಾಡಲು ನಾಲ್ಕನೆ ಬಟನ್ ಬಳಕೆ ಯಾಗುತ್ತದೆ. ಇದರ ಟಾರ್ಚ್ ಬಲ್ಬ್ ಇರುವ ತಲೆಯನ್ನು ತೆಗೆದರೆ ಯುಎಸ್‌ಬಿ ಕಿಂಡಿ ಮತ್ತು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಕಿಂಡಿಗಳು ಗೋಚರಿಸುತ್ತವೆ. ಯುಎಸ್‌ಬಿ ಕಿಂಡಿ ಮೂಲಕ ಚಾರ್ಜ್ ಮಾಡಬಹುದು ಮತ್ತು ಅದನ್ನೇ ಬಳಸಿ ಇತರೆ ಸಾಧನಗಳಿಗೆ ಚಾರ್ಜ್ ಮಾಡಬಹುದು.

ಟಾರ್ಚ್ ಚೆನ್ನಾಗಿದೆ. ಬೆಳಕು ಪ್ರಖರವಾಗಿದೆ. ಸ್ಪೀಕರ್, ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ. ಆದರೆ ಇದು ಮೋನೊ. ಬ್ಲೂಟೂತ್ ವಿಧಾನದಲ್ಲಿ ತೃಪ್ತಿಕರವಾಗಿ ಕೆಲಸ ಮಾಡುತ್ತದೆ. ಮೈಕ್ರೊಎಸ್‌ಡಿ ಕಾರ್ಡಿನಿಂದ ಸಂಗೀತವನ್ನೂ ಸರಿಯಾಗಿ ಪ್ಲೇ ಮಾಡುತ್ತದೆ. ಎಫ್.ಎಂ.ರೇಡಿಯೊ ಶಕ್ತಿಶಾಲಿಯಾಗಿಲ್ಲ. ಇದು ಪವರ್‌ಬ್ಯಾಂಕ್ ಆಗಿ ಅಷ್ಟೇನೂ ಶಕ್ತಿಶಾಲಿಯಾದುದಲ್ಲ. ಒಟ್ಟಿನಲ್ಲಿ, ನೀಡುವ ಹಣಕ್ಕೆ ಸರಿಯಾದ ಗ್ಯಾಜೆಟ್ ಎನ್ನಬಹುದು.

ಝೆಬ್ರೋನಿಕ್ಸ್ ಮಾಸ್ಟ್ರೊ

ಇದನ್ನು ಝೆಬ್ರೋನಿಕ್ಸ್‌ನವರು ಬ್ಲೂಟೂತ್ ಸ್ಪೀಕರ್ ಎಂದು ಮಾರುತ್ತಿದ್ದಾರೆ. ನೋಡಲು ಸುಂದರವಾಗಿದೆ. ವೃತ್ತಾಕಾರದಲ್ಲಿದ್ದು ಬಟ್ಟೆಯ ಹೊದಿಕೆಯಿದೆ. ನಿಮ್ಮ ಮೇಜಿನ ಮೇಲೆ ಇಟ್ಟರೆ ಕಾಣಲು ಅಂದವಾಗಿದೆ. ಹಿಂದುಗಡೆ ಆನ್/ಆಫ್ ಬಟನ್, ಯುಎಸ್‌ಬಿ ಮತ್ತು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಕಿಂಡಿಗಳಿವೆ. ವೃತ್ತಾಕಾರದಲ್ಲಿದ್ದರೂ ಇದರಲ್ಲಿ ಎರಡು ಎರಡು ಸ್ಪೀಕರುಗಳಿವೆ. ಅಂದರೆ ಇದು ಸ್ಟೀರಿಯೊ. ಮುಂದುಗಡೆ ಮೂರು ಬಟನ್‌ಗಳಿವೆ.

ಎಡಗಡೆಯಿಂದ ಮೊದಲ ಬಟನ್ ಹಲವು ಕೆಲಸಗಳನ್ನು ಮಾಡುತ್ತದೆ. ಅವುಗಳೆಂದರೆ - ಆನ್/ಆಫ್ ಆಗಿ, ಕರೆ ಬಂದಾಗ ಸ್ವೀಕರಿಸಲು, ಮಾತು ನಿಲ್ಲಿಸಲು, ಸಂಗೀತ ಆಲಿಸುತ್ತಿದ್ದಾಗ ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಪ್ಲೇ ಮಾಡಲು, ಹಲವು ಸೌಲಭ್ಯಗಳನ್ನು ಬದಲಾಯಿಸಲು. ಅಂದರೆ ಅದನ್ನು ಒಮ್ಮೆ ಒತ್ತಿದರೆ ಬ್ಲೂಟೂತ್, ಮತ್ತೊಮ್ಮೆ ಒತ್ತಿದರೆ ಎಫ್.ಎಂ. ರೇಡಿಯೊ, ಇತ್ಯಾದಿ. + ಮತ್ತು – ಎಂದು ಬರೆದ ಬಟನ್‌ಗಳು ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಹಾಗೂ ಹಿಂದಿನ ಅಥವಾ ಮುಂದಿನ ಹಾಡಿಗೆ ಹೋಗಲು ಬಳಕೆಯಾಗುತ್ತವೆ. ಸ್ಪೀಕರಿನ ಧ್ವನಿ ಪರವಾಗಿಲ್ಲ. ಸ್ಪೀಕರಿನ ಗಾತ್ರಕ್ಕೆ ಹೋಲಿಸಿದರೆ ವಾಲ್ಯೂಮ್ ಸ್ವಲ್ಪ ಜಾಸ್ತಿ ಇದೆ. ಧ್ವನಿಯಲ್ಲಿ ಅದ್ಭುತ ಗುಣಮಟ್ಟವೇನೂ ಇಲ್ಲ. ಇದರ ಬೆಲೆ ಕೇವಲ ₹1,699 ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರಲ್ಲೂ ಎಫ್.ಎಂ. ರೇಡಿಯೊದ ಶಕ್ತಿ ಚೆನ್ನಾಗಿಲ್ಲ. ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ. ಇದು ಸ್ಟಿರಿಯೊ. ಬ್ಲೂಟೂತ್ ವಿಧಾನದಲ್ಲಿ ತೃಪ್ತಿಕರವಾಗಿ ಕೆಲಸ ಮಾಡುತ್ತದೆ. ಮೈಕ್ರೊಎಸ್‌ಡಿ ಕಾರ್ಡಿನಿಂದ ಸಂಗೀತವನ್ನೂ ಸರಿಯಾಗಿ ಪ್ಲೇ ಮಾಡುತ್ತದೆ. ಒಟ್ಟಿನಲ್ಲಿ ನೀಡುವ ಹಣಕ್ಕೆ ಸರಿಯಾದ ಗ್ಯಾಜೆಟ್.

ಗ್ಯಾಜೆಟ್ ಸಲಹೆ

ಕೃಷ್ಣಮೂರ್ತಿಯವರ ಪ್ರಶ್ನೆ: ನನ್ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ GT-I9082 ಫೋನ್ ಇದೆ. ಇದರಲ್ಲಿ 4G ಸೌಲಭ್ಯ ಬರುವಂತೆ ಮಾಡುವುದು ಹೇಗೆ?

ಉ: ಸಾಧ್ಯವಿಲ್ಲ. ಆ ಫೋನಿನಲ್ಲಿ ಅದಕ್ಕೆ ಬೇಕಾದ ಯಂತ್ರಾಂಶವಿಲ್ಲ.

ಗ್ಯಾಜೆಟ್ ಪದ : Glyph = ಅಕ್ಷರಭಾಗ

ಗಣಕದಲ್ಲಿ ಪಠ್ಯ ಮಾಹಿತಿಯನ್ನು ತೋರಿಸಲು ಅಥವಾ ಮುದ್ರಿಸಲು ಬಳಕೆಯಾಗುವುದು ಅಕ್ಷರಶೈಲಿ ಅರ್ಥಾತ್ ಫಾಂಟ್. ಅಕ್ಷರದ ಒಂದು ತುಂಡು ಅಥವಾ ಭಾಗವನ್ನು ಅಕ್ಷರಭಾಗ ಅಥವಾ ಗ್ಲಿಫ್ ಎನ್ನುತ್ತಾರೆ. ಸರಳವಾಗಿ ಹೇಳುವುದಾದರೆ ಅಕ್ಷರಭಾಗಗಳು (ಗ್ಲಿಫ್‌ಗಳು) ಸೇರಿ ಅಕ್ಷರಶೈಲಿ (ಫಾಂಟ್) ಆಗುತ್ತದೆ. ಇಂಗ್ಲಿಷಿನಲ್ಲಿ ಒಂದು ಅಕ್ಷರವನ್ನು ತೋರಿಸುವ ಅಕ್ಷರಭಾಗ ಅದೇ ಅಕ್ಷರವಾಗಿರುತ್ತದೆ. ಆದರೆ ಭಾರತೀಯ ಭಾಷೆಗಳಲ್ಲಿ ಹಲವು ಅಕ್ಷರಭಾಗಗಳು ಸೇರಿ ಒಂದು ಅಕ್ಷರವಾಗುತ್ತದೆ.

ವಾರದ ಆ್ಯಪ್:  ಪದಗುಚ್ಛ

ಕೆಲವು ಪದಗಳನ್ನು ಒಟ್ಟುಗೂಡಿಸಿ ಅವುಗಳ ಕೊಲಾಜ್ ಮಾಡಿ ಒಂದು ಸುಂದರ ಕಲಾಕೃತಿಯಂತೆ ತೋರಿಸುವುದನ್ನು ಗಮನಿಸಿರಬಹುದು. ನಿಮಗೂ ಅಂಥ ಕಲಾಕೃತಿ ರಚಿಸಬೇಕೇ? ಹಾಗಿದ್ದರೆ ನೀವು ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Word Cloud ಎಂದು ಹುಡುಕಬೇಕು ಅಥವಾ http://bit.ly/gadgetloka319 ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮಗೆ ಬೇಕಾದ ಪದಗಳನ್ನು ದಾಖಲಿಸಿ, ನಿಮಗಿಷ್ಟವಾದ ಬಣ್ಣ, ಫಾಂಟ್, ಗಾತ್ರಗಳನ್ನು ಆಯ್ಕೆ ಮಾಡಿದರೆ ನಿಮ್ಮ ಪದಗುಚ್ಛ ಸಿದ್ಧ. ಪದಗಳನ್ನು ಕನ್ನಡದಲ್ಲೂ ನೀಡಬಹುದು. ಹೀಗೆ ಸಿದ್ಧವಾದ ಕಲಾಕೃತಿಯನ್ನು ಫೋನಿನ ಗ್ಯಾಲರಿಯಲ್ಲಿ ಉಳಿಸಬಹುದು, ಇಮೇಲ್, ವಾಟ್ಸ್‌ಆ್ಯಪ್ ಇತ್ಯಾದಿಗಳ ಮೂಲಕ ಹಂಚಲೂ ಬಹುದು. ಒಂದು ಉತ್ತಮ ಕಿರುತಂತ್ರಾಂಶ (ಆ್ಯಪ್) ಎಂಬುದರಲ್ಲಿ ಸಂದೇಹವಿಲ್ಲ.

***

ಗ್ಯಾಜೆಟ್ ಸುದ್ದಿ: ಸ್ಮಾರ್ಟ್‌ ಹೇರ್‌ಬ್ರಶ್

ಎಲ್ಲವೂ ಸ್ಮಾರ್ಟ್ ಆಗುತ್ತಿರುವಾಗ ನೀವು ಬಳಸುವ ಬಾಚಣಿಗೆ, ಅಲ್ಲ, ಹೇರ್‌ಬ್ರಶ್ ಕೂಡ ಸ್ಮಾರ್ಟ್ ಆದರೆ ಚೆನ್ನಾಗಿತ್ತಲ್ಲವೆ? ಹೌದು. ಅಂತಹ ಬ್ರಶ್ ತಯಾರಾಗಿದೆ. ಅದನ್ನು ಒಮ್ಮೆ ಕೂದಲಿನ ಮೇಲೆ ಓಡಾಡಿಸಿದರೆ ಸಾಕು. ಅದಕ್ಕೆ ಸಂಪರ್ಕವಾಗಿರುವ ಸ್ಮಾರ್ಟ್‌ಫೋನ್ ಕಿರುತಂತ್ರಾಂಶದಲ್ಲಿ (ಆ್ಯಪ್) ನಿಮ್ಮ ಕೂದಲಿನ ಗುಣವೈಶಿಷ್ಟ್ಯಗಳು, ಅಂದರೆ ಅದು ದಪ್ಪವೇ, ತೆಳ್ಳಗೆಯೇ, ಒಣಗಿದೆಯೇ, ಒದ್ದೆಯಾಗಿದೆಯೇ, ನೇರವಾಗಿದೆಯೇ, ಗುಂಗುರು ಗುಂಗುರಾಗಿದೆಯೇ, ಇತ್ಯಾದಿ ಮಾಹಿತಿ ನೀಡುತ್ತದೆ. ನಂತರ ನಿಮ್ಮ ಕೂದಲಿನ ಸೌಂದರ್ಯವನ್ನು ವೃದ್ಧಿಸಲು ಏನು ಮಾಡಬಹುದು ಎಂಬ ಸಲಹೆಯನ್ನೂ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry