ಬುಧವಾರ, ನವೆಂಬರ್ 13, 2019
18 °C

ಕಣದಲ್ಲಿ ವಿದೂಷಕ, ವಿದೂಷಕಿಯರು

ಗಂಗಾಧರ ಮೊದಲಿಯಾರ್
Published:
Updated:
ಕಣದಲ್ಲಿ ವಿದೂಷಕ, ವಿದೂಷಕಿಯರು

ಚಿತ್ರರಂಗಕ್ಕೂ ರಾಜಕೀಯ ಪ್ರವೇಶಕ್ಕೂ ನಂಟು ಇದೆಯೇ? ಎಂದು ಪ್ರಶ್ನಿಸಿಕೊಂಡಾಗ ಅದಕ್ಕೆ ಒಂದು ಇತಿಹಾಸವಿರುವುದು ಕಂಡುಬರುತ್ತದೆ. ಕನ್ನಡ ಚಿತ್ರರಂಗಕ್ಕೂ, ರಾಜ್ಯದ ರಾಜಕೀಯಕ್ಕೂ ಸಂಬಂಧ, ಸಂಪರ್ಕ ಇದೆಯೇ ಎಂದು ಪ್ರಶ್ನಿಸಿಕೊಂಡಾಗ ಯಾವ ಬಾದರಾಯಣ ಸಂಬಂಧವೂ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಲದ ಚುನಾವಣೆಯಲ್ಲಿ ನಟ ನಟಿಯರು ಕಣಕ್ಕಿಳಿದು ಏದುಸಿರು ಬಿಡುವುದನ್ನು ಕಂಡರೆ ರಾಜ್ಯದ ಜನರೂ ಸಿನಿಮಾ ಮಂದಿಯನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಕಾಣುತ್ತಿಲ್ಲ.ಸಿನಿಮಾ ನಟ ನಟಿಯರನ್ನು ರಾಜಕೀಯ ರಂಗದಲ್ಲಿ ಪ್ರೋತ್ಸಾಹಿಸಬೇಕು, ನಟನೊಬ್ಬ ಮುಖ್ಯಮಂತ್ರಿಯಾಗಬೇಕು ಎನ್ನುವ ಹವಾಮಾನ ತಮಿಳುನಾಡಿನಲ್ಲಿದೆ. ಆಂಧ್ರದಲ್ಲಿದೆ. ಆದರೆ ಕರ್ನಾಟಕದ ಚಿತ್ರರಂಗದಲ್ಲಿ ಅಂತಹ ಪ್ರಬುದ್ಧ ವ್ಯಕ್ತಿತ್ವವನ್ನು ರಾಜಕೀಯ ಕ್ಷೇತ್ರ ಕಾಣಲೇ ಇಲ್ಲ. ನಟನೊಬ್ಬ ಇಲ್ಲವೇ ನಟಿಯೊಬ್ಬಳು ರಾಜಕೀಯ ಪಕ್ಷವೊಂದನ್ನು ಕಟ್ಟಿ, ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳುವಷ್ಟು ಸಾಮರ್ಥ್ಯವನ್ನು ಹೊಂದಿಲ್ಲ.ಎಲ್ಲ ನಟ ನಟಿಯರಿಗೆ ಅಂತಹ `ಪ್ರಭಾವ' ಇಲ್ಲ. ರಾಜಕೀಯ ಪ್ರವೇಶಿಸುವ ಕಲಾವಿದರು ಗೆದ್ದ ಎತ್ತಿನ ಬಾಲ ಹಿಡಿಯುವಂತೆ, ರಾಷ್ಟ್ರೀಯ ಪಕ್ಷಗಳಿಗೆ ನುಸುಳಿ, ರಾಷ್ಟ್ರೀಯ ಪಕ್ಷಗಳ ಪ್ರಭಾವಳಿಯ ಮೂಲಕ ಗೆಲುವು ಸಾಧಿಸಲು ಪ್ರಯತ್ನಿಸುತ್ತಾರೆ. ಇಲ್ಲವೇ ರಾಷ್ಟ್ರೀಯ ಪಕ್ಷಗಳ ವರ್ಚಸ್ವಿ ನಾಯಕನ ನೆರಳನ್ನು ಅವಲಂಬಿಸುತ್ತಾರೆ. ತಮ್ಮ ಸ್ವಂತ ಸಾಮರ್ಥ್ಯದಲ್ಲೇ ನಂಬಿಕೆಯಿಲ್ಲದಿರುವುದರಿಂದಲೇ ನಮ್ಮ ಕಲಾವಿದರು ಚುನಾವಣೆಯಲ್ಲಿ ಇತರ ಎದುರಾಳಿ ಅಭ್ಯರ್ಥಿಗಳ ಮುಂದೆ ತರಗೆಲೆಗಳಂತಾಗುತ್ತಾರೆ.ತಮಿಳುನಾಡಿನಲ್ಲಿ ಸಿನಿಮಾ ಮಂದಿ ರಾಜಕೀಯಕ್ಕಿಳಿದರೆ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತಾರೆ. ಏತಕ್ಕಾಗಿ ನಾನು ರಾಜಕೀಯಕ್ಕೆ ಬಂದೆ ಎನ್ನುವ ಬದ್ಧತೆಯನ್ನು ತೋರಿಸಿಕೊಡುತ್ತಾರೆ. ಹೀಗಾಗಿಯೇ ಕರುಣಾನಿಧಿ, ಜಯಲಲಿತಾ ಅವರ ನೇತೃತ್ವದಲ್ಲಿ ಪಕ್ಷಗಳ ಪ್ರಭಾವವನ್ನು ಮೀರಿ ಮತ್ತೊಬ್ಬ ನಟ ವಿಜಯಕಾಂತ್, ಒಂದು ಹೊಸ ಪಕ್ಷವನ್ನೇ ಕಟ್ಟಿ ಅದನ್ನು ಸವಾಲಿನ ರೂಪದಲ್ಲಿ ಬೆಳೆಸಿದರು.ಶ್ರಮ, ಬದ್ಧತೆ ಇದ್ದುದರಿಂದಲೇ ವಿಜಯಕಾಂತ್ ಅವರು ಈಗ ಪ್ರತಿಪಕ್ಷ ನಾಯಕರಾಗುವಷ್ಟು ಸಮರ್ಥರಾದರು. ಕನ್ನಡ ನಟ ನಟಿಯರಿಗೆ ಇಂತಹ ಬದ್ಧತೆಯಾಗಲಿ, ಪಕ್ಷ ಕಟ್ಟುವ ಚಿಂತನಾಶೀಲತೆಯಾಗಲಿ ಇಲ್ಲ ಎನ್ನುವುದನ್ನು ಇದುವರೆಗಿನ ನಡವಳಿಕೆಗಳನ್ನು ಗಮನಿಸಿಯೇ ಹೇಳಬಹುದು. ಕಾಂಗ್ರೆಸ್ ನಟ ದರ್ಶನ್ ಅವರ ನಡವಳಿಕೆಯನ್ನೇ ಗಮನಿಸಿ, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ, ಮಹದೇವಪುರ ಕ್ಷೇತ್ರದಲ್ಲಿ ಬಿ.ಜೆ.ಪಿ. ಪರ, ಕಿತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಪಕ್ಷ, ದರ್ಶನ್ ಅವರನ್ನು ಪಕ್ಷದ `ಸ್ಟಾರ್ ಪ್ರಚಾರಕ' ಎಂದು ನೇಮಿಸಿಕೊಂಡಿದೆ. ಈ ಸಂಬಂಧ ಈಗಾಗಲೇ ಪ್ರಕಟಣೆಯನ್ನೂ ಹೊರಡಿಸಿದೆ. ಸ್ಟಾರ್ ಪ್ರಚಾರಕ ಎಂದು ನೇಮಿಸಿಕೊಳ್ಳುವ ಮುನ್ನ ಕಾಂಗ್ರೆಸ್ ಪಕ್ಷದ ನೀತಿ ನಿಯಮಗಳನ್ನು ದರ್ಶನ್ ಅವರಿಗೆ ಹೇಳಲಾಗಿರುತ್ತದೆ. ಆದರೂ ಎಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎನ್ನುವುದು ರಾಜಕೀಯ ಕ್ಷೇತ್ರದ ಹಾಸ್ಯಾಸ್ಪದ ಸನ್ನಿವೇಶವಾಗಿದೆ. ಕಲಾವಿದರು ಈ ರೀತಿಯ ಅರೆಬೆಂದ ಮನಸ್ಥಿತಿಯಲ್ಲಿರುವುದರಿಂದಲೇ ಕರ್ನಾಟಕದ ಮತದಾರರು ಸಿನಿಮಾ ಜನರನ್ನು ನಂಬುತ್ತಿಲ್ಲ.ರಕ್ಷಿತಾ ಮತ್ತು ಪೂಜಾಗಾಂಧಿ ರಾಜಕೀಯ ಅರೆಪಕ್ವತೆಗೆ ಮತ್ತೊಂದು ಉದಾಹರಣೆ. ಚಿತ್ರ ನಟ ನಟಿಯರು ಸಾರ್ವಜನಿಕರ ಮುಂದೆ ನಗೆಪಾಟಲಿಗೆ ಈಡಾಗುವುದೇ ಹೀಗೆ. ಎಲ್ಲ ರಾಜಕೀಯ ಪಕ್ಷಗಳು ನಟಿಯರನ್ನು ತಮ್ಮ ತಮ್ಮ ಪಕ್ಷಗಳ ಸ್ಟಾರ್ ಪ್ರಚಾರಕಿಯರನ್ನಾಗಿ ಮಾಡಿಕೊಳ್ಳಲು ಹಂಬಲಿಸುತ್ತವೆ.ಪಕ್ಷದ ಪ್ರಚಾರ ಕಾರ್ಯ ನಡೆಯುವಾಗ, ಈ ನಟಿಯರನ್ನು ವೇದಿಕೆಯ ಮೇಲೆ ಕೂರಿಸಿದರೆ ಅವರನ್ನು ನೋಡಲಾದರೂ ಜನ ಬಂದು ಸೇರುತ್ತಾರೆ ಎನ್ನುವುದು ರಾಜಕೀಯ ಪಕ್ಷಗಳ ಸ್ವಾರ್ಥವಾಗಿರುತ್ತದೆ. ಪಕ್ಷದ ನಾಯಕನ ಬಳಿ ಕೊಳೆಯುತ್ತಿರುವಷ್ಟು ಇರುವ ಆಸ್ತಿ ಮತ್ತು ಅವನ ವರ್ಚಸ್ಸಿನ ಬಲದಿಂದ ಯಾವುದಾದರೂ ಸುರಕ್ಷಿತ ಕ್ಷೇತ್ರದಲ್ಲಿ ನಿಂತು ಸುನಾಯಾಸವಾಗಿ ವಿಧಾನ ಸೌಧ ಪ್ರವೇಶಿಸಬಹುದು ಎನ್ನುವ ಸ್ವಾರ್ಥ ನಟ, ನಟಿಯರಲ್ಲಿರುತ್ತದೆ.ಹೀಗಾಗಿ ಕೆಲ ತಿಂಗಳ ಹಿಂದೆ ನಟ ನಟಿಯರ ದಂಡು ಏಕಕಾಲಕ್ಕೆ ಹಲವಾರು ಪಕ್ಷಗಳ ಬಾಗಿಲಿನತ್ತ ನುಗ್ಗಿತು. ನಟಿ ರಕ್ಷಿತಾ ಅವರನ್ನು ಬಿ. ಎಸ್. ಆರ್. ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷೆಯಾಗಿ ಸ್ವೀಕರಿಸಿತು. ಚುನಾವಣೆಯಲ್ಲಿ ಸ್ಪರ್ಧಿಸಲು ಚಾಮರಾಜನಗರದಲ್ಲಿ ಟಿಕೇಟನ್ನು ನೀಡಲಾಯಿತು. ಆದರೆ ಕೊನೆಗಳಿಗೆಯಲ್ಲಿ ರಣರಂಗದಿಂದ ಪಲಾಯನ ಮಾಡಿದ ರಕ್ಷಿತಾ ಜೆ. ಡಿ. ಎಸ್. ಸೇರಿಕೊಂಡರು. ರಾಷ್ಟ್ರೀಯ ಪಕ್ಷಗಳ ನಾಯಕರು ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಆಡಿರಬಹುದಾದ ಎಲ್ಲ `ಆಟ'ಗಳನ್ನು ನಟಿ ಪೂಜಾಗಾಂಧಿ ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದು ಈ ಚುನಾವಣೆ ಕಾಲದ ಅತಿ ದೊಡ್ಡ ಪ್ರಸಂಗ ಎಂದು ಪರಿಭಾವಿಸಬಹುದು.ಜೆ. ಡಿ. ಎಸ್. ಸೇರುವಾಗ ಪೂಜಾಗಾಂಧಿಯವರಿಗೆ ಕುಮಾರಸ್ವಾಮಿ ಅವರೇ ಅತಿ ದೊಡ್ಡ ನಾಯಕರೆನಿಸಿದ್ದರು. ತಲೆಯ ಮೇಲೆ ಹೊರೆಯನ್ನು ಹೊತ್ತು, ವಿವಿಧ ನಿಲುವುಗಳ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವಾಗ ಅವರಿಗೆ ಚನ್ನಪಟ್ಟಣ ಕ್ಷೇತ್ರದ ಮೇಲೆ ಕಣ್ಣಿತ್ತು. ಪಕ್ಷ ಸಿದ್ಧಾಂತ, ಪಕ್ಷಕ್ಕಾಗಿ ದುಡಿಯುವುದಕ್ಕಿಂತ ಹೆಚ್ಚಾಗಿ ಗೆದ್ದು ಶಾಸಕಿಯಾಗಬೇಕೆನ್ನುವುದೇ ಎಲ್ಲ ನಟಿಯರ ಆಸೆ.ಸುಮ್ಮನೆ ಪ್ರಚಾರ ಮಾಡುವವರು ಎಂ.ಎಲ್.ಸಿ. ಮಾಡಬೇಕು ಎನ್ನುವ ಷರತ್ತು ವಿಧಿಸಿ, ಭರವಸೆ ಪಡೆದಿರುತ್ತಾರೆ. ಇಲ್ಲವೇ ಮುಂದೆ ನಿಗಮ, ಮಂಡಳಿ ಅಧ್ಯಕ್ಷೆ ಸ್ಥಾನವನ್ನಾದರೂ ಬಳುವಳಿಯಾಗಿ ಪಡೆಯುವ ಆಶ್ವಾಸನೆ ಪಡೆದಿರುತ್ತಾರೆ. (ಒಂದು ಕಾಲದಲ್ಲಿ ಹೆಸರಾಂತ ನಟಿಯಾಗಿದ್ದು, ಈಗಲೂ ಚಟುವಟಿಕೆಯಿಂದ ಇರುವ ನಟಿಯೊಬ್ಬರನ್ನು ಬಿ.ಎಸ್.ಆರ್. ಪಕ್ಷಕ್ಕೆ ಬರುವಂತೆ ಆಹ್ವಾನಿಸಲಾಯಿತು. ಆ ನಟಿ ಒಡ್ಡಿದ ಸವಾಲು ಕೇಳಿ ಸ್ವಂತ ಪಕ್ಷ ಕಟ್ಟಿರುವ ನಾಯಕರೇ ದಿಗಿಲು ಬಿದ್ದರಂತೆ.ಪಕ್ಷ ಸೇರುವ ಮುಂಚೆ ಎರಡು ಕೋಟಿ ರೂಪಾಯಿ ಡಿಪಾಜಿಟ್ ಕೊಡಬೇಕು, ತಿಂಗಳಿಗೆ ಇಪ್ಪತ್ತೈದು ಲಕ್ಷ ಸಂಭಾವನೆ ಕೊಡಬೇಕು, ಚುನಾವಣೆ ಸಮಯದಲ್ಲಿ ಪ್ರಚಾರ ಕಾರ್ಯಕ್ಕೆ ಹೋಗಲು ಹೆಲಿಕಾಪ್ಟರ್ ಕೊಡಬೇಕು ಎಂಬ ಷರತ್ತುಗಳನ್ನು ಕೇಳಿ ಪಕ್ಷದ ಅಧ್ಯಕ್ಷರು ಸುಸ್ತಾಗಿ ವಾಪಸು ಬಂದರಂತೆ. ಈಗ ಆ ನಟಿ ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ). ಜೆ.ಡಿ.ಎಸ್.ನಲ್ಲಿ ಚನ್ನಪಟ್ಟಣವೇ ನನ್ನ ಮನೆ ಎಂದು ಹೇಳಿದ ಪೂಜಾಗಾಂಧಿ, ಅಲ್ಲಿನ ವಿದ್ಯಮಾನಗಳನ್ನು ಕಂಡು ಅತಿ ಶೀಘ್ರದಲ್ಲೇ ಕೆ.ಜೆ.ಪಿ.ಗೆ ಸೇರ್ಪಡೆಯಾದದ್ದು ಒಂದು ವಿಕ್ರಮ. ಎರಡೇ ತಿಂಗಳಲ್ಲಿ ಕೆ.ಜೆ.ಪಿ. ತೊರೆದು ಬಿ.ಎಸ್.ಆರ್. ಪಕ್ಷಕ್ಕೆ ಜಿಗಿದದ್ದು ಗಿನ್ನಿಸ್ ದಾಖಲೆ.ಬಿ.ಎಸ್.ಆರ್. ಪಕ್ಷಕ್ಕೆ ಸೇರುವ ನಾಯಕಿಯರೆಲ್ಲಾ ಬಳ್ಳಾರಿ, ರಾಯಚೂರು, ಗದಗದಿಂದ ಸ್ಪರ್ಧಿಸುವ ಆಲೋಚನೆಯಲ್ಲಿರುತ್ತಾರೆ. ಶ್ರೀರಾಮುಲು ಅವರ ವರ್ಚಸ್ಸು ಈ ಕ್ಷೇತ್ರಗಳಲ್ಲಿರುವುದರಿಂದ ಗೆಲ್ಲುವುದು ಸುಲಭ ಎಂಬುದು ಅವರ ಎಣಿಕೆಯಾಗಿರುತ್ತದೆ ಎನ್ನುವುದನ್ನು ಯಾರಾದರೂ ಊಹಿಸಬಹುದು.ರಾಯಚೂರಿನಲ್ಲಿ ಕನ್ನಡ ಚಿತ್ರಗಳಿಗಿಂತ ತೆಲುಗು ಚಿತ್ರಗಳಿಗೇ ಹೆಚ್ಚು ಮನ್ನಣೆ. ಪೂಜಾಗಾಂಧಿ ಅಭಿನಯದ ಬಹುತೇಕ ಚಿತ್ರಗಳನ್ನು ರಾಯಚೂರು ಕ್ಷೇತ್ರದ ಮತದಾರರು ನೋಡಿದ್ದಾರೋ ಇಲ್ಲವೋ ತಿಳಿಯದು. ಇಂತಹ ಕ್ಷೇತ್ರದಲ್ಲಿ ಪೂಜಾ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ ಈ ದಿಲ್ಲಿ ಹುಡುಗಿ. ರಾಯಚೂರಿನಲ್ಲಿ ಪೂಜಾಗಾಂಧಿ ಹೇಗೆ ಅಸಂಗತವೋ, ಹಿಂದಿ, ತಮಿಳು ಚಿತ್ರಗಳನ್ನಷ್ಟೇ ನೋಡುವ ಶಿವಾಜಿನಗರದಲ್ಲಿ ರಮ್ಯಾ ಅವರ ಪ್ರಚಾರ ಕಾರ್ಯವೂ ಅಷ್ಟೇ ಅಸಂಗತವಾಗಿ ಕಾಣುತ್ತದೆ.ಸಿನಿಮಾ ನಟ, ನಟಿಯರನ್ನು ನಂಬಬಾರದು ಎಂದು ಕರ್ನಾಟಕದ ಮತದಾರರು ನಿರ್ಧಾರ ಮಾಡಲು ಮುಖ್ಯ ಕಾರಣ ಅಂಬರೀಷ್ ಇರಬಹುದು. ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಏಣಿ ಏರಿದ ಅಂಬರೀಷ್ ಜಾತಿ ಬಲೆಯೊಳಗಿಂದ ಹೊರ ಬರದೆ ಹೋದದ್ದು ದುರ್ದೈವ. ಅವರ ರಾಜಕಾರಣ ಮಂಡ್ಯಕ್ಕೆ ಮೀಸಲಾದದ್ದು ಅವರ ಮಿತಿ. ಹಲವು ಸೋಲುಗಳ ಬಳಿಕ, ಗೆದ್ದರೂ ಅಂಬರೀಷ್ ಸೋತವರಂತೆಯೇ ವರ್ತಿಸಿದ್ದು ಅವರ ಅಧಃಪತನಕ್ಕೆ ಕಾರಣವಾಯಿತು.ಬೆಂಗಳೂರಿನಲ್ಲಿ ವಾಸ, ಮಂಡ್ಯದಲ್ಲಿ ರಾಜಕಾರಣ. ಮತದಾರರಿಗೆ ಸುಲಭವಾಗಿ ಭೇಟಿಯಾಗುವುದೇ ಕಷ್ಟ. ಕೇಂದ್ರ ಸಚಿವರಾದರೂ ಅದನ್ನು ಒಪ್ಪಿಕೊಳ್ಳಲಾಗದಷ್ಟು ಆಲಸೀತನ. ಇವೆಲ್ಲಾ ಅವರ ವರ್ಚಸ್ಸನ್ನು ಕಡಿಮೆ ಮಾಡಿದವು. ಅಂಬರೀಷ್ ಅವರಲ್ಲಿ ಈಗ ಚುನಾವಣೆ ಎಂದರೆ ಭಯ ಕಾಡುತ್ತಿದೆ. ಸುಲಭವಾಗಿ ಗೆಲ್ಲಬಹುದಾದ ಶ್ರೀರಂಗಪಟ್ಟಣ ಕ್ಷೇತ್ರವೇ ಬೇಕೆಂದು ಅವರು ಹಟ ಹಿಡಿಯಲು ಕಾರಣವೇನು? ಜನಪ್ರಿಯ ನಟನೊಬ್ಬ ತನ್ನ ನೆಲೆಯನ್ನು ರಾಜ್ಯದ ಉದ್ದಗಲಕ್ಕೂ ಕಂಡುಕೊಳ್ಳಬೇಕೇ? ಮಂಡ್ಯ, ಚನ್ನಪಟ್ಟಣಕ್ಕೆ ಸೀಮಿತಗೊಳಿಸಿಕೊಳ್ಳಬೇಕೇ? ದರ್ಶನ್, ಯಶ್ ಇವರುಗಳೂ ಕೂಡ ಇಂತಹ ಸೀಮಿತಕ್ಕೆ ಒಳಗಾಗುತ್ತಿರುವುದು ಅವರ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿ ನಡೆ. ಅಂಬರೀಷ್ ಇಂತಹ ಆಪಾದನೆಗಳಿಂದ ಮುಕ್ತರಾಗಲು, ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಸ್ಥಳಾಂತರವಾಗಿದ್ದಾರೆ. ಇನ್ನು ಮುಂದೆ ಇಲ್ಲೇ ನೆಲೆ ನಿಂತು ನಿಮ್ಮ ಸೇವೆ ಮಾಡುತ್ತೇನೆ ಎಂದು ಅಂಗಲಾಚುತ್ತಿದ್ದಾರೆ. ಜನರೇ ರೆಬೆಲ್ ಆದರೆ ರೆಬೆಲ್ ಸ್ಟಾರ್ ಏನು ಮಾಡಬೇಕು?ಉಮಾಶ್ರೀ, ಬಿ. ಸಿ. ಪಾಟೀಲ್, ಮಯೂರ್ ಪಟೇಲ್, ಮದನ್ ಪಟೇಲ್, ಬಿ. ಸಿ. ಯೋಗೇಶ್ವರ್, ಆನಂದ ಅಪ್ಪುಗೋಳ್, ಗುರುಕಿರಣ್, ನರೇಂದ್ರಬಾಬು ಮೊದಲಾದ ಚಿತ್ರ ಮಂದಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಭಾವನಾ, ಮಾಳವಿಕಾ, ಶ್ರುತಿ, ಜಗ್ಗೇಶ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ಗೆದ್ದು ಬಂದವರು, ಇದ್ದು ಬಂದವರು ಚಿತ್ರರಂಗಕ್ಕೆ ಏನೂ ಮಾಡಲಿಲ್ಲ, ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎನ್ನುವುದನ್ನು ಇಡೀ ಚಿತ್ರರಂಗ ಹೇಳುತ್ತದೆ.ಚಿತ್ರರಂಗದಲ್ಲಿ ಕಾಲ ಮುಗಿದವರು, ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವುದು ಪ್ರತೀತಿ. ಆದುದರಿಂದ ಚಿತ್ರರಂಗ ಚುನಾವಣೆಯನ್ನೂ, ಅಲ್ಲಿ ಕಣಕ್ಕಿಳಿದವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ರಾಜಕಾರಣಿಗಳಂತೂ ಚಲನಚಿತ್ರ ನಟ ನಟಿಯರನ್ನು ವಿದೂಷಕ, ವಿದೂಷಕಿಯರಂತೆ ಕಾಣುತ್ತಿದ್ದಾರೆ. ಜನ ಸೇರಿಸಲು ಅವರನ್ನು ಬಳಸಿಕೊಳ್ಳುತ್ತಾರೆ.ಹಣ ಕೊಟ್ಟರೆ ಯಾವ ಪಕ್ಷದಲ್ಲಾದರೂ ಪಕ್ಷ ಬದಲಿಸಿ, ನೀತಿ ಬದಲಿಸಿ ಪ್ರಚಾರಕ್ಕೆ ಬರುತ್ತಾರೆ ಎಂದು ಭಾವಿಸಿದ್ದಾರೆ. ಪೂಜಾಗಾಂಧಿ, ದರ್ಶನ್ ಅವರ ಉದಾಹರಣೆ ಇರುವವರೆಗೂ ರಾಜಕಾರಣಿಗಳ ಈ ಭಾವನೆಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ.

 

ಪ್ರತಿಕ್ರಿಯಿಸಿ (+)