ಕಣ್ಣರಿಯದೊಡೇಂ ಕರುಳರಿಯದೆ

7

ಕಣ್ಣರಿಯದೊಡೇಂ ಕರುಳರಿಯದೆ

Published:
Updated:
ಕಣ್ಣರಿಯದೊಡೇಂ ಕರುಳರಿಯದೆ

ಬಂಡೀಪುರದಲ್ಲಿ ಕಾಡುನಾಯಿಗಳ ಜಾಡನ್ನರಿಸಿ ಅಲೆಯುತ್ತಿರುವಾಗ ಒಂದು ದಿನ, ಡಾ. ಇಳೆಂಗೋವನ್ ಕರೆ ಮಾಡಿದರು. ತಮಿಳುನಾಡಿನ ಮುದುಮಲೈ ಅರಣ್ಯದಲ್ಲಿ ವಿಶೇಷ ಕಾರ್ಯಕ್ರಮ ಆರಂಭವಾಗಿರುವುದಾಗಿ, ತಮಿಳುನಾಡಿನ ಖಾಸಗಿ ಒಡೆತನದಲ್ಲಿರುವ ಎಲ್ಲಾ ಸಾಕಾನೆಗಳನ್ನು, ಅವುಗಳ ಮಾವುತರನ್ನು ಒಂದೆಡೆ ಸೇರಿಸಿ ತರಬೇತಿ ಮತ್ತು ಪುನಃಶ್ಚೇತನ ಶಿಬಿರ ನಡೆಸುತ್ತಿರುವುದಾಗಿ, ಒಮ್ಮೆ ಭೇಟಿ ಕೊಡುವಂತೆ ಆಹ್ವಾನಿಸಿದರು.ಡಾ. ಇಳೆಂಗೋವನ್ ವನ್ಯಜೀವಿ ವೈದ್ಯ. ಭಾರತದ ಮಟ್ಟಿಗೆ ಅಷ್ಟೇನು ಪ್ರಗತಿ ಕಾಣದ ವನ್ಯಜೀವಿ ಚಿಕಿತ್ಸಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಜನ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಕಾಡುಪ್ರಾಣಿಗಳ ಶರೀರ ವಿಜ್ಞಾನವನ್ನು ಅರಿಯುವ ಆಸಕ್ತಿಯಿಂದ ಕಾಡಿನಲ್ಲೇ ನೆಲೆಸಿದವರು.

ಆನೆ ಕಾಡಿನಲ್ಲಿ ದೀರ್ಘಕಾಲ ನೆಲೆಸಿ, ಕಾಡಾನೆಗಳ ಬದುಕನ್ನು ಅಲ್ಪಸ್ವಲ್ಪ ತಿಳಿದಿದ್ದರಿಂದ, ನಮಗೆ ಆ ಸಾಕಾನೆಗಳ ಶಿಬಿರಕ್ಕೆ ಹೋಗಬೇಕೆನಿಸಲಿಲ್ಲ. ಕಾರಣವಿಷ್ಟೆ. ಕಾಡಾನೆಗಳ ಬದುಕನ್ನು ಹತ್ತಿರದಿಂದ ಗಮನಿಸಿದ ಬಳಿಕ ಸಾಕಾನೆಗಳು, ಅದರಲ್ಲೂ ಹೆಣ್ಣಾನೆಗಳು ದುರಂತನಾಯಕಿಯರಂತೆ ಕಾಣತೊಡಗುತ್ತವೆ.ಆನೆ, ಆನೆಯಾಗುವ ಮುನ್ನ ತಾನು ಆನೆ ಎಂಬುದನ್ನು ಅರಿಯಬೇಕು. ಅಮ್ಮನ ಕಾಲಡಿಯಲ್ಲಿ ತೆವಳುತ್ತಾ ಕಾಡನ್ನು ಸುತ್ತಬೇಕು. ಕಿವಿಯನ್ನು ತೆರೆದಿಟ್ಟು ಕಾಡಿನಭಾಷೆಯನ್ನು ಆಲಿಸಬೇಕು. ಅಮ್ಮನ ಸೂಚನೆ, ಎಚ್ಚರಿಕೆಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ತನ್ನ ಹತ್ತಾರು ಅಕ್ಕ, ತಂಗಿ, ಚಿಕ್ಕಮ್ಮಂದಿರ ಸ್ಪರ್ಶ, ವಾಸನೆಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಅಜ್ಜಿಯಿಂದ ಸಮಾಜದ ನಡೆ, ನುಡಿಗಳನ್ನು ಮರಿ ಆನೆ ಕಲಿಯಬೇಕು. ತನ್ನ ಪರಿಸರದ ಅಕ್ಷಾಂಶ–ರೇಖಾಂಶಗಳನ್ನೆಲ್ಲ ಮನನ ಮಾಡಿಕೊಳ್ಳುತ್ತಾ ತನ್ನ ಮಣ್ಣಿನ ವಾಸನೆಯನ್ನು ಗ್ರಹಿಸಬೇಕು. ಮಿತ್ರರಾರು, ಶತ್ರುಗಳಾರು, ಯಾವುದು ವಿಷ, ಯಾವುದು ಆಹಾರ ಎಂದೆಲ್ಲ ಅರಿತುಕೊಳ್ಳಬೇಕು. ಬೆಳೆದ ಬಳಿಕ ಬಿದಿರಿನ ಮೆಳೆಗಳನ್ನು ಬುಡಮೇಲು ಮಾಡಿ, ನಿಂತ ಮರಗಳನ್ನು ಉರುಳಿಸಿ, ಕೆರೆಗಳಲ್ಲಿ ಇಳಿದು, ನದಿಗಳಲ್ಲಿ ಮುಳುಗಿ ಕಾಡಿನಲ್ಲಿ ಅಂಡಲೆಯಬೇಕು. ಆಗಷ್ಟೆ ಅದು ಆನೆಯಾಗುತ್ತದೆ.ಆದರೆ ಸಾಕಾನೆಗಳಾದಾಗ, ಅವುಗಳಿಗೆ ಈ ಯಾವ ಶಿಕ್ಷಣ, ಅನುಭವಗಳು ಇರುವುದಿಲ್ಲ. ದೇಗುಲಗಳಲ್ಲಿ, ಮಠಗಳಲ್ಲಿ, ಮೃಗಾಲಯಗಳಲ್ಲಿ ಏಕಾಂಗಿಯಾಗಿ, ತಬ್ಬಲಿಯಾಗಿ ಬದುಕುತ್ತವೆ. ತಮ್ಮ ಭಾಷೆ ಗೊತ್ತಿಲ್ಲದವರೊಂದಿಗೆ ಜೀವನಪರ್ಯಂತ ಸಂವಾದ ಮಾಡಲೇಬೇಕಾದ ಸಂಕಷ್ಟ ಅವುಗಳದು. ಇದಲ್ಲದೆ ಟನ್‌ಗಳಟ್ಟಲೆ ತೂಗುವ ದೈತ್ಯಾಕಾರದ ಆನೆಗಳ ಎಷ್ಟೋ ಮಾತುಗಳು ಮನುಷ್ಯನ ಕಿವಿಗೆ ಕೇಳುವುದೇ ಇಲ್ಲ. ಆದರೆ ಕಾಡಿನಲ್ಲಿ ಅವು ಅದೇ ಸೂಕ್ಷ್ಮ ತರಂಗದ ಭಾಷೆ ಬಳಸಿ ಎರಡು ಕಿ.ಮೀ. ದೂರದಲ್ಲಿರುವ ಮತ್ತೊಂದು ಆನೆಯೊಂದಿಗೆ ನಿರಾಯಾಸವಾಗಿ ಸಂಭಾಷಿಸಬಲ್ಲವು. ಹಾಗಾಗಿ, ಸಾಕಾನೆಗಳಾದಾಗ ಭಾಷೆ ತಿಳಿದಿದ್ದರೂ ಮೂಕರಾಗಿ ಉಳಿಯುತ್ತವೆ.ಸುಡು ಬೇಸಿಗೆಯಲ್ಲಿ ದೇಗುಲಗಳ ಕಾದ ಚಪ್ಪಡಿಯಲಿ ನಿಂತು, ನೆರಳಿಲ್ಲದ ಡಾಂಬರ್ ರಸ್ತೆಗಳಲ್ಲಿ ನಡೆಯುತ್ತಾ, ಮಂತ್ರಿಗಳ–ಗಣ್ಯರ ಕೊರಳಿಗೆ ಹಾರತುರಾಯಿಗಳನ್ನು ಹಾಕುತ್ತಾ ಬದುಕು ನೂಕಬೇಕು. ಸಂಸ್ಕೃತಿ, ನಂಬಿಕೆ, ಧಾರ್ಮಿಕ ನಡವಳಿಕೆಗಳ ಹೆಸರಿನಲ್ಲಿ ಮನುಷ್ಯನ ನೂರೆಂಟು ಡಾಂಭಿಕ ಆಚಾರಗಳನ್ನು ನೆರವೇರಿಸುತ್ತಾ ಖಾಸಗಿ ಬದುಕನ್ನು ತ್ಯಾಗ ಮಾಡಬೇಕು.ಸಂಕೀರ್ಣ ಕುಟುಂಬ ವ್ಯವಸ್ಥೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವ ಹೆಣ್ಣಾನೆಗಳ ಏಕಾಂತದ ದುಃಖದುಮ್ಮಾನಗಳು ನಮಗೆಂದೂ ಅರ್ಥವಾಗುವುದಿಲ್ಲ. ಅವು ತಮ್ಮ ಹುಟ್ಟುಗುಣಗಳನ್ನೆಲ್ಲ ಬದಿಗಿಟ್ಟು, ಮಾವುತನ ಆಜ್ಞೆಗಳಿಗೆ ಪೂರಕವಾಗಿ ಹೆಜ್ಜೆಹಾಕುತ್ತಾ ಸಾಗಬೇಕಾದ ಬದುಕು ಕರುಣಾಜನಕವಾಗಿರುತ್ತದೆ. ಹಾಗಾಗಿ ಕಾಡಿನ ಹೆಣ್ಣಾನೆಗಳನ್ನು ಹಿಡಿದು ಪಳಗಿಸಿ ನಮ್ಮ ಹೆಬ್ಬುಬ್ಬೆಗೆ ಬಳಸುವ ಈ ಪರಿಕಲ್ಪನೆಯ ಅಮಾನವೀಯ ಸಂಸ್ಕೃತಿ ನಮಗೆ ಎಂದಿಗೂ ಇಷ್ಟವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಕಾನೆಗಳ ಶಿಬಿರಕ್ಕೆ ಹೋಗಲಿಚ್ಛಿಸಿರಲಿಲ್ಲ. ಆದರೆ ಮತ್ತೆ ಇಳೆಂಗೋವನ್ ಕರೆ ಮಾಡಿದಾಗ ಸೌಜನ್ಯಕ್ಕಾಗಿ ಮುದುಮಲೈನತ್ತ ಹೊರಟೆವು.ಕಾಡಿನ ನಡುಭಾಗದಲ್ಲಿ ಹರಿದಿದ್ದ ಮೋಹಕ ಮೊಯಾರ್ ನದಿಯ ದಂಡೆಯಲ್ಲಿ ಆ ಶಿಬಿರ ಸಜ್ಜಾಗಿತ್ತು. ಆಕಸ್ಮಿಕವಾಗಿ ಕಾಡಾನೆಗಳು ನುಸುಳಿ ದಾಂಧಲೆ ಸೃಷ್ಟಿಸಬಹುದೆಂಬ ಮುನ್ನೆಚ್ಚರಿಕೆಯಿಂದ ಹದಿನೈದು ಎಕರೆಯಷ್ಟಿದ್ದ ಶಿಬಿರಕ್ಕೆ ಸೌರಬೇಲಿಯನ್ನು ಅಳವಡಿಸಿದ್ದರು. ಶಿಬಿರದ ಮುಖ್ಯದ್ವಾರಕ್ಕೆ

‘ಡಾ. ಜೆ. ಜಯಲಲಿತಾ ಸಾಕಾನೆಗಳ ಪುನಶ್ಚೇತನ ಶಿಬಿರ’ ಎಂಬ ದೊಡ್ಡ ಫಲಕವಿತ್ತು. ತಮಿಳುನಾಡಿನಲ್ಲಿ ಕ್ಯಾಂಟೀನ್, ನೀರು, ಫ್ಯಾನ್, ಮಿಕ್ಸಿ, ಟಿ.ವಿ., ಸಿಮೆಂಟ್‌ಗಳೆಲ್ಲ ಅಮ್ಮನ ಹೆಸರಿನಲ್ಲಿರುವಾಗ ಫಲಕದಲ್ಲಿದ್ದ ಹೆಸರು ಅಚ್ಚರಿ ಮೂಡಿಸಲಿಲ್ಲ.ಶಿಬಿರದ ಒಂದು ಬದಿಯಲ್ಲಿ ಬಣ್ಣಬಣ್ಣದ ಪೆಂಡಾಲ್‌ಗಳ ಮಳಿಗೆಗಳಿದ್ದವು. ಮಳಿಗೆಗಳಲ್ಲಿ ಆನೆಗಳ ಔಷಧದ ಅಂಗಡಿ, ವೈದ್ಯರ ತಪಾಸಣೆ ಕೇಂದ್ರ, ಆನೆಗಳ ತೂಕವನ್ನು ಅಳೆಯುವ ಯಂತ್ರ, ಮಾವುತರ ಕ್ಯಾಂಟೀನ್, ಆನೆಗಳಿಗೆ ಆಹಾರ ಸಿದ್ಧಪಡಿಸುವ ವಿಸ್ತಾರವಾದ ಅಡುಗೆಮನೆ ಇತ್ತು. ಅಲ್ಲಿ ಚಟುವಟಿಕೆ ಬಿರುಸಿನಿಂದ ಸಾಗಿತ್ತು. ಆನೆಗಳ ತೂಕವನ್ನು ಅಳೆಯುವವರು, ದೈಹಿಕ ತಪಾಸಣೆ ಮಾಡಿ ಔಷಧಿಗಳನ್ನು ಸೂಚಿಸುವ ವೈದ್ಯರು, ಮಾವುತರಿಗೆ ಔಷಧಿಗಳನ್ನು ವಿತರಿಸುವ ಸಿಬ್ಬಂದಿ, ದೊಡ್ಡ ದೊಡ್ಡ ಕೊಪ್ಪರಿಕೆಗಳಲ್ಲಿ ಆನೆಗಳಿಗೆ ಸಿದ್ಧಪಡಿಸುತ್ತಿದ್ದ ಅಡುಗೆಯನ್ನು ಮೇಜಿನ ಮೇಲೆ ನಿಂತು ಉದ್ದದ ದೊಣ್ಣೆಗಳಿಂದ ತಿರುವುತ್ತಿದ್ದ ಕಾಡು ಕುರುಬರು – ಎಲ್ಲವೂ ತಮಾಷೆಯಾಗಿ ಕಂಡಿತು.ಶಿಬಿರದಲ್ಲಿ ಅರವತ್ತಕ್ಕೂ ಹೆಚ್ಚು ಆನೆಗಳಿದ್ದವು. ಅವುಗಳ ಹಣೆಯ ಮೇಲೆ ರಂಗೋಲಿ ಬಿಡಿಸಿದಂತೆ ನಾನಾ ಬಗೆಯ ನಾಮಗಳು, ಪಟ್ಟೆಗಳು, ಸಂಕೇತಗಳಾಗಿ ನಮೂದಾಗಿದ್ದವು. ಆನೆಗಳು ಪ್ರತಿನಿಧಿಸುವ ದೇಗುಲಗಳ ಧರ್ಮ–ಪಂಥವನ್ನು ಅವು ಪ್ರತಿನಿಧಿಸುತ್ತಿದ್ದವು. ಆದರೆ ಆ ಆನೆಗಳೆಲ್ಲ ಆನೆಗಳಂತೆಯೇ ವರ್ತಿಸುತ್ತಿದ್ದವು. ನಾಗರಿಕ ಸಮಾಜದ ಕಟ್ಟುಪಾಡುಗಳನ್ನು ಮೀರಿದ ಜೀವಿಗಳಿಗೆ ಸಮುದಾಯ, ಧರ್ಮ, ಪಂಥ, ಪಂಗಡ, ಒಳಪಂಗಡಗಳನ್ನು ಆರೋಪಿಸಿದ್ದುದು ನಮಗೆ ಸರಿಕಾಣಲಿಲ್ಲ.ಶಿಬಿರದ ಮೇಲಧಿಕಾರಿಗಳೊಬ್ಬರು ಟೂರಿಸ್ಟ್ ಗೈಡ್‌ನಂತೆ ಎಲ್ಲವನ್ನು ವಿವರಿಸತೊಡಗಿದರು. ಆನೆಯಿಂದ ಆನೆಗೆ ಸಾಗುತ್ತಾ ಅವುಗಳ ಮೂಲ ದೇಗುಲಗಳನ್ನು ತಿಳಿಸುತ್ತಾ, ಬಂಡೆಯಂತೆ ಗುಂಡಾಗಿದ್ದ ಒಂದು ಆನೆಯ ಬಳಿ ನಿಂತರು. ಮುಖ್ಯಮಂತ್ರಿ ಅವರ ಸ್ವಂತ ಪರಿಕಲ್ಪನೆಯಾಗಿ ಅರಳಿದ ಈ ಶಿಬಿರಕ್ಕೆ ಇದೇ ಆನೆ ಕಾರಣವಾಯಿತೆಂದು, ಯಾವುದೋ ದೇಗುಲಕ್ಕೆ ಭೇಟಿ ಇತ್ತಾಗ ಹೆಜ್ಜೆ ಇರಿಸಿ, ಪೂಜೆ ಪುನಸ್ಕಾರಗಳನ್ನು ಈಡೇರಿಸಲು ಪ್ರಯಾಸಪಡುತ್ತಿದ್ದ ಈ ಆನೆಯನ್ನು ಕಂಡು ಮರುಗಿದರೆಂದು, ಅದರ ಸಮಸ್ಯೆಯನ್ನರಿತಾಗ ಈ ಶಿಬಿರದ ಪರಿಕಲ್ಪನೆ ಮೂಡಿತೆಂದು ತಿಳಿಸಿದರು.ಅದರ ವಯಸ್ಸಿಗೆ ಎರಡು ಟನ್ ತೂಗಬೇಕಿದ್ದ ಆನೆ ನಾಲ್ಕೂವರೆ ಟನ್ ಮೀರಿತ್ತು. ಯಾವುದೇ ದೈಹಿಕ ಪರಿಶ್ರಮವಿಲ್ಲದೆ ಭಕ್ತರು ನೀಡುತ್ತಿದ್ದ ಹಣ್ಣು ಹಂಪಲುಗಳನ್ನು ತಿನ್ನುವುದನ್ನಷ್ಟೆ ಕಸುಬು ಮಾಡಿಕೊಂಡಿದ್ದರಿಂದ ಅದರ ತೂಕ ಅಳತೆಗೆ ಮೀರಿ ಹೆಚ್ಚಿ, ಅದು ಆನೆಯ ಆಕಾರವನ್ನು ಕಳೆದುಕೊಂಡಿತ್ತು. ಜಯಲಲಿತಾ ಅವರಿಗೆ ಆ ಶಿಬಿರವನ್ನು ಆರಂಭಿಸುವ ಪೂರ್ವಾಲೋಚನೆಗೆ ಆ ಆನೆಯ ತೂಕ ಪ್ರೇರೇಪಿಸಿದ್ದು ಅಚ್ಚರಿ ಎನಿಸಲಿಲ್ಲ.ಸರದಿಯಲ್ಲಿ ಹತ್ತಾರು ಆನೆಗಳು ಮಾಯಾರ್ ನದಿಯಲ್ಲಿ ಮುಳುಗುತ್ತಿದ್ದವು. ನೀರು ಉಕ್ಕುವುದು ಬೋರ್‌ವೆಲ್‌ಗಳಿಂದ ಮಾತ್ರ ಎಂದು ತಿಳಿದಿದ್ದ ಆ ಆನೆಗಳಿಗೆ ಹರಿಯುವ ನದಿಯನ್ನು ಮೊದಲ ಬಾರಿಗೆ ಕಂಡು ರೋಮಾಂಚನವಾಗಿರಬಹುದು. ಅವುಗಳಿಗೆ ಸ್ನಾನ ಮುಗಿದ ನಂತರ ಹೊಳೆಯಿಂದ ಹೊರಗೆ ಬರಲು ಮನಸ್ಸೇ ಇರುತ್ತಿರಲಿಲ್ಲ. ಹಾಗಾಗಿ, ಅವು ಮಾವುತನ ಆಜ್ಞೆಗಳನ್ನು ಕೆಲಮೊಮ್ಮೆ ತಿರಸ್ಕರಿಸುವ ಧೈರ್ಯ ಕೂಡ ಮಾಡುತ್ತಿದ್ದವು.ಆಗ ಡಾ. ಇಳೆಂಗೋವನ್ ಶಿಬಿರಕ್ಕೆ ಬಂದರು. ಸರಪಳಿಗಳಿಂದ ಬಿಗಿದಿದ್ದ ಆನೆಗಳನ್ನು ತೋರುತ್ತಾ ಅವುಗಳು ಎದುರಿಸುತ್ತಿರುವ ದೈಹಿಕ ಸಮಸ್ಯೆಗಳನ್ನು ವಿವರಿಸಿದರು. ಹೆಚ್ಚಿನ ಆನೆಗಳು ವ್ಯಾಯಾಮದ ಕೊರತೆಯನ್ನು ಎದುರಿಸುತ್ತಿದ್ದವು. ಹಾಗೆ ಸಾಗುತ್ತಿದ್ದಾಗ ಒಂದು ಆನೆಯ ಮಗ್ಗುಲಲ್ಲಿ ಪುಟ್ಟ ಎತ್ತೊಂದು ಮೆಲಕು ಹಾಕುತ್ತಾ ಮಲಗಿತ್ತು. ‘ಇದೇನು, ಆನೆಗಳ ನಡುವೆ ಈ ಎತ್ತು’ ಎಂದು ಪ್ರಶ್ನೆ ಕೇಳುವ ಮುನ್ನವೇ ಅವರು ನಗುತ್ತಾ ಮಾವುತನನ್ನು ಕರೆದರು.ಆತ ಕತೆಯನ್ನು ಪ್ರಾರಂಭಿಸಿದ. ಆ ಎತ್ತು ಮತ್ತು ಆನೆ ಒಂದೇ ದೇವಸ್ಥಾನಕ್ಕೆ ಸೇರಿದ್ದೆಂದು, ಹಲವಾರು ವರ್ಷಗಳಿಂದ ಒಂಟಿಯಾಗಿದ್ದ ಎತ್ತು ಮತ್ತು ಆನೆ ಆಪ್ತ ಸ್ನೇಹಿತರಾದರೆಂದು, ಎತ್ತು ಬಾರದೆ ಆನೆ ಎಲ್ಲೂ ಬರಲೊಪ್ಪುವುದಿಲ್ಲ, ಅದರಿಂದಾಗಿ ಎತ್ತನ್ನು ಜೊತೆಯಲ್ಲಿ ಕರೆತರಬೇಕಾಯಿತೆಂದು ತಿಳಿಸಿದ. ಎಂತಹ ದುರಂತ. ಅರ್ಥವಾಗದ ಪರಸ್ಪರ ಬೇರೆ ಬೇರೆ ಭಾಷೆಗಳನಾಡುವ ಎರಡು ಜೀವಿಗಳ ಸ್ನೇಹ! ಒಂಟಿತನವನ್ನು ಮರೆಯುವ ಅಸಹಾಯಕತೆಯ ಸ್ನೇಹ... ಆ ಸ್ನೇಹದ ಹಿನ್ನೆಲೆ ಅರ್ಥವಾದಾಗ ಮನಕಲಕಿತು.ಮುಂದೆ ಎರಡು ಪ್ಲಾಸ್ಟಿಕ್ ದಂತಗಳನ್ನು ಒಂದು ಹೆಣ್ಣಾನೆಯ ಸೊಂಡಿಲಿನ ಬಳಿ ಹಿಡಿದ ಮಾವುತನೊಬ್ಬ, ಅಲ್ಲಿಗೆ ಬಂದವರೊಡನೆ ಫೋಟೋಗೆ ಫೋಸ್ ನೀಡುತ್ತಿದ್ದ. ಆಗಷ್ಟೆ ತಮಿಳುನಾಡಿನ ದೇವಸ್ಥಾನದ ಆನೆಗಳೆಲ್ಲ ಹೆಣ್ಣಾನೆಗಳೆಂದು ನಮಗೆ ತಿಳಿಯಿತು.ನಾಲ್ಕಾರು ಆನೆಗಳನ್ನು ದಾಟಿದ ಬಳಿಕ ಇಳೆಂಗೋವನ್ ಆನೆಯೊಂದರ ಮುಂದೆ ನಿಂತರು. ಪಶುವೈದ್ಯರ ವಾಸನೆಗೆ ನಡುಗುತ್ತಾ ಮಡಚಿ ಮುದ್ದೆಯಾಗುವ ಸಾಕಾನೆಗಳ ಸ್ವಭಾವಕ್ಕೆ ವ್ಯತಿರಿಕ್ತವಾಗಿ, ಅದು ತಲೆ ಆಡಿಸುತ್ತಾ, ತಳಮಳಿಸುತ್ತಾ ನಿಂತಿತು. ಆಗ ಇಳೆಂಗೋವನ್ ಮಾವುತನನ್ನು ಕರೆದು ಬಿಗಿದಿದ್ದ ಸರಪಳಿಯನ್ನು ಬಿಚ್ಚುವಂತೆ ಹೇಳಿದರು. ಸರಪಳಿ ಸಡಿಲಗೊಳ್ಳುವ ಸೂಚನೆ ದೊರೆತಾಗಲೇ ಅದು ಚಡಪಡಿಸತೊಡಗಿತು. ನಂತರ ನಂಬಲಾಗದ ಸನ್ನಿವೇಶ, ಜಾತ್ರೆಯಲ್ಲಿ ಹರಡಿದಂತಿದ್ದ ಅರವತ್ತು ಆನೆಗಳ ನಡುವೆ ಅದು ನುಸುಳಿ ಘೀಳಿಡುತ್ತಾ ಓಡಲಾರಂಭಿಸಿತು. ಉಳಿದ ಆನೆಗಳು ಸೊಂಡಿಲನ್ನು ಚಾಚಿ ಬೆದರಿದಂತೆ ಕಂಡ ಆನೆಯನ್ನು ಸಂತೈಸಲು ಪ್ರಯತ್ನಿಸಿದಂತೆ ಕಂಡವು. ಎಲ್ಲವನ್ನೂ ನಿರ್ಲಕ್ಷಿಸಿ ಓಡಿದ ಆ ಆನೆ, ಮರಗಳಿಗೆ ಕಟ್ಟಿದ್ದ ಹತ್ತಾರು ಆನೆಗಳನ್ನು ಸುತ್ತಿ ಬಳಸಿ ಮತ್ತೊಂದು ತುದಿಯಲಿದ್ದ ಒಂದು ನಿರ್ದಿಷ್ಟ ಆನೆಯತ್ತ ಬಂದು ನಿಂತಿತು.ಆ ಕ್ಷಣ ಅತೀವ ಉದ್ವೇಗಗೊಳಗಾದಂತೆ ಕಂಡ ಅವು, ಉದ್ದನೆಯ ಸೊಂಡಿಲುಗಳನ್ನು ಚಾಚಿ ಪರಸ್ಪರ ಅಪ್ಪಿಕೊಂಡವು. ಕಿವಿಗಳನ್ನು ಪಟಪಟನೆ ಬಡಿಯುತ್ತಾ ಗಟ್ಟಿಯಾಗಿ ಸದ್ದು ಮಾಡಿದವು. ತಲೆಗಳನ್ನು, ಭುಜಗಳನ್ನು ಪರಸ್ಪರ ಉಜ್ಜಿಕೊಳ್ಳುತ್ತ ಕೆಳಸ್ತರದಲ್ಲಿ ಗುಡುಗಿದಂತೆ ಸದ್ದು ಮಾಡಿ, ಕಿವಿಗಳನ್ನು ಕಣ್ಣುಗಳನ್ನು ಸ್ಪರ್ಶಿಸಿಕೊಂಡವು. ಅವು ಯಾವುದೋ ಮಾಸಿದ ನೆನಪುಗಳನ್ನು ನೆನಪಿಸಿಕೊಂಡವೋ ಅಥವ ಅಷ್ಟೂ ವರ್ಷಗಳ ಏಕಾಂತದ ನೋವನ್ನು ಹಂಚಿಕೊಂಡವೋ ನಮಗೆ ತಿಳಿಯಲಿಲ್ಲ. ಆ ಸದ್ದುಗಳು ಶಿಬಿರವನ್ನು ದಾಟಿ ಕಾಡನ್ನು ಸೇರಿತ್ತು.ನಂತರ ಸೊಂಡಿಲಿನಲ್ಲಿ ಒಂದನ್ನೊಂದು ಬಳಸಿ ಏನನ್ನೋ ಮಾತನಾಡಿಕೊಳ್ಳತೊಡಗಿದವು. ಸೊಂಡಿಲಿನ ತುದಿಗಳೆರಡು, ಯಾವುದೋ ಕೇಳದ ನಾದಕ್ಕೆ ಆಡುತ್ತಿದ್ದಂತೆ ಒಟ್ಟಿಗೆ ತೂಗತೊಡಗಿದವು. ಅವುಗಳ ಕಣ್ಣುಗಳಲ್ಲೇನೊ ಹೊಳಪಿತ್ತು, ನೋವಿತ್ತು. ಆ ದೃಶ್ಯ ಸಂಪೂರ್ಣವಾಗಿ ಅರ್ಥವಾಗದಿದ್ದರೂ ನಮ್ಮನ್ನು ತಲ್ಲಣಗೊಳಿಸಿತ್ತು. ನಾವಷ್ಟೇ ಅಲ್ಲ, ಕ್ಯಾಂಪಿನಲ್ಲಿದ್ದ ಆನೆಗಳೆಲ್ಲ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ, ಕಿವಿಗಳನ್ನು ಅರಳಿಸಿ ಅತ್ತ ಮುಖಮಾಡಿ ನಿಂತವು.

ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಆಗಮಿಸಿದ ಮಾವುತ ಬರಲೊಪ್ಪದ ಆನೆಯನ್ನು ಬೆದರಿಸಿ, ಸ್ನಾನದ ಸಮಯವೆಂದು ನದಿಯತ್ತ ಎಳೆದೊಯ್ದ.ಕುತೂಹಲ ತಡೆಯಲಾಗದೆ ಮರುದಿನ ಅದೇ ಪ್ರಯೋಗ ಮುಂದುವರೆಸಿದೆವು. ಮತ್ತೆ ಅದೇ ನಡವಳಿಕೆಯ ಪುನಾರಾವರ್ತನೆ. ಎರಡು ಆನೆಗಳ ಪೂರ್ವಾಪರ ತಿಳಿಯಲು ಇಳೆಂಗೋವನ್ ಇಬ್ಬರು ಮಾವುತರಿಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾ ಸಾಗಿದರು. ತಾನು ಮಾವುತನಾಗಿ ಕೆಲಸಕ್ಕೆ ಸೇರುವ ಮುನ್ನವೇ ಈ ಆನೆ ದೇಗುಲದಲ್ಲಿತ್ತೆಂದು ಒಬ್ಬ ತಿಳಿಸಿದರೆ, ತನ್ನ ತಂದೆ ಆರು ವರ್ಷಗಳ ಹಿಂದೆ ತೀರಿಕೊಂಡ ಬಳಿಕ ತಾನು ಮಾವುತನಾದೆನೆಂದು ಮತ್ತೊಬ್ಬ ತಿಳಿಸಿದ. ರಹಸ್ಯವನ್ನು ಭೇದಿಸಲು ಪೂರಕವಾದ ಸಾಕ್ಷ್ಯಗಳು ದೊರೆಯಲಿಲ್ಲ.ಇಲ್ಲಿ ನಮ್ಮ ಕುತೂಹಲಕ್ಕೆ ಕಾರಣವಾದದ್ದು, ಸಹಜಪರಿಸರದಲ್ಲಿ ಆನೆಗಳ ಸಂಘಜೀವನದ ಸಂಕೀರ್ಣ ವ್ಯವಸ್ಥೆ. ಕುಟುಂಬ ವ್ಯವಸ್ಥೆಯ ಆನೆಗಳಲ್ಲಿ ಹತ್ತಾರು ಕುಟುಂಬಗಳು ಸೇರಿ ಒಂದು ವಂಶ ರೂಪುಗೊಂಡಿರುತ್ತದೆ. ಆಗೊಮ್ಮೆ ಈಗೊಮ್ಮೆ ಕುಟುಂಬ ಕುಟುಂಬಗಳು ಪರಸ್ಪರ ಭೇಟಿಯಾದಾಗ ಒಂದುಗೂಡಿ ಕ್ಷೇಮಕುಶಲಗಳನ್ನು ಹಂಚಿಕೊಂಡು ಮತ್ತೆ ಬೇರೆಯಾಗಿ ಸಾಗುತ್ತವೆ. ವಂಶಸಂಬಂಧಿಗಳ ಹೊರತಾಗಿ ಬೇರೆ ಆನೆಗಳು ಎದುರಾದಾಗ ಆತಂಕಗೊಂಡು ದೂರ ನಿಲ್ಲುತ್ತವೆ. ಅವುಗಳ ನಡುವೆ ಸೌಹಾರ್ದ ಸಂಬಂಧಗಳಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆ ಎರಡು ಆನೆಗಳ ವಿಚಿತ್ರ ಸ್ವಭಾವ ನಿಗೂಢವಾಗಿಯೇ ಉಳಿಯಿತು.ಶಿಬಿರ ಮುಗಿದು ಆನೆಗಳು ಲಾರಿ ಏರಿ ತಮ್ಮ ತಮ್ಮ ದೇಗುಲಗಳಿಗೆ ತೆರಳಿದವು. ಎರಡು ತಿಂಗಳ ಬಳಿಕ ಇಳೆಂಗೋವನ್ ಆ ದೇಗುಲಗಳಿಗೆ ಹೋಗಿ ಆನೆಗಳ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸಿದರು. ಯಾವ ಮಾಹಿತಿಯೂ ಲಭ್ಯವಾಗಲಿಲ್ಲ. ಮುಜರಾಯಿ ಇಲಾಖೆಯ ಫೈಲ್‌ಗಳನ್ನು ಶೋಧಿಸಿದರು. ಅವುಗಳ ನಿರ್ವಹಣಾ ವೆಚ್ಚದ ಹೊರತಾಗಿ ಮತ್ಯಾವ ವಿವರಗಳು ದೊರಕಲಿಲ್ಲ.ಬಳಿಕ ತಮಿಳುನಾಡಿನ ಅರಣ್ಯ ಇಲಾಖೆಯ ಸಾಕಾನೆಗಳ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು. ಒಂದೆರಡು ತಿಂಗಳ ಅವಿರತ ಪ್ರಯತ್ನದ ಬಳಿಕ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಆ ಎರಡು ಆನೆಗಳು ಹುಟ್ಟಿ ಬೆಳೆದಿದ್ದು ಮುದುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ. ಅವುಗಳಿಗೆ ಸುಮಾರು 6–8 ವರ್ಷಗಳಿದ್ದಾಗ ಯಾವುದೋ ದೇವಸ್ಥಾನದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಅವುಗಳನ್ನು ಕೊಡುಗೆಯಾಗಿ ನೀಡಿತ್ತು. ಸಹೋದರಿಯರಂತೆ ಮಾಯಾರ್ ನದಿಯಲ್ಲಿ ಕಾಡುಕುರುಬರ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ ಅವು, ನಾಲ್ಕುನೂರು ಕಿಲೋಮೀಟರ್ ದೂರದ ಶಿವಗಂಗಾ ಮತ್ತು ರಾಮನಾಡ್ ಜಿಲ್ಲೆಗಳನ್ನು ತಲುಪಿದ್ದವು. ದೇವಾಲಯದಲ್ಲಿ ತಿರುಪೂರ್ ಶಿವಗಾಮಿಯಾಗಿ, ಕುಂಡರ ಗುಡಿ ಲಕ್ಷ್ಮಿಯಾಗಿ ಮರುನಾಮಕರಣಗೊಂಡಿದ್ದವು.

ಆ ನಂತರದ ಇಪ್ಪತ್ತೇಳು ವರ್ಷಗಳ ಕಾಲ ಆ ಎರಡು ಹೆಣ್ಣಾನೆಗಳು ಪರಸ್ಪರ ಭೇಟಿಯಾಗಿರಲೇ ಇಲ್ಲ!ಇದಾದ ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜಯಲಲಿತಾ ಸೋತಿದ್ದರು. ಕರುಣಾನಿಧಿ ಅಧಿಕಾರಕ್ಕೆ ಬಂದರು. ಹಿಂದಿನ ಸರ್ಕಾರದ ಕಾರ್ಯಸೂಚಿಗಳೆಲ್ಲ ಬದಲಾದವು. ಸಾಕಾನೆಗಳ ಶಿಬಿರವೂ ರದ್ದಾಯಿತು. ಶಿವಗಾಮಿ ಮತ್ತು ಲಕ್ಷ್ಮಿ ಮತ್ತೆ ಭೇಟಿಯಾಗಲೇ ಇಲ್ಲ.ಮರೆತುಹೋಗಿದ್ದ ಈ ಘಟನೆ ನೆನಪಿಗೆ ಬಂದಿದ್ದು ‘ಪ್ರಜಾವಾಣಿ’ಯಲ್ಲಿನ ‘50 ವರ್ಷಗಳ ಹಿಂದೆ’ ನೆನಪಿನಂಗಳವನ್ನು ಓದಿದಾಗ. 1966ನೇ ಇಸವಿ. ಹೈನುಗಾರಿಕೆ ಉದ್ಯಮಕ್ಕೆ ನೆರವು ಹಸ್ತ ನೀಡಿದ ಡಚ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ, ಆನೆಯ ಮರಿಯೊಂದನ್ನು ನೆನಪಿನ ಕಾಣಿಕೆಯಾಗಿ ನೀಡಿದರು ಎಂಬ ಸುದ್ದಿ.ಬಹುಶಃ ನೆದರ್ಲೆಂಡ್ ಸೇರಿದ ಬಳಿಕ ಆ ಆನೆ ಮರಿಯ ಹೆಸರು ಜೂಲಿಯಾ ಆಗಿರಬಹುದು. ಸದಾ ಕೊರೆಯುವ ಚಳಿಯಲ್ಲಿ ಗಡಗಡ ನಡುಗುತ್ತಾ ಕುಳಿತಿದ್ದಿರಬಹುದು. ನೆನಪಾದಾಗ ತನ್ನ ಅವ್ವನೊಂದಿಗೋ ಅಕ್ಕನೊಂದಿಗೋ ಮಾತನಾಡಲು ಯತ್ನಿಸಿರಬಹುದು. ಆದರೆ ಅದರ ಧ್ವನಿ ಎರಡು ಕಿಲೋಮೀಟರ್ ದಾಟುವುದಿಲ್ಲ. ನಾಗರಹೊಳೆ ಕಾಡಿನಿಂದ ನೆದರ್ಲೆಂಡ್ ನಾಲ್ಕು ಸಾವಿರದ ಐದುನೂರು ಮೈಲಿ ದೂರದಲ್ಲಿದೆ.ಮಾನವ ತನ್ನ ವಿಕಾಸದ ಹಾದಿಯಲ್ಲಿ ಅರಳಿ ನಾಗರಿಕ ಪ್ರಪಂಚವನ್ನು ಸೃಷ್ಟಿಸಿ ಜಗತ್ತಿನ ಶಾಂತಿಗಾಗಿ ಧರ್ಮಗಳನ್ನು ಹುಟ್ಟುಹಾಕಿ ಮಾನವೀಯತೆಯನ್ನು ಬೋಧಿಸಿದ್ದು, ಆಧ್ಯಾತ್ಮಿಕತೆಯನ್ನು ಕಂಡುಕೊಂಡಿದ್ದು ನಿಜ. ಅದರೊಂದಿಗೆ ಕ್ರೌರ್ಯ, ಅಪರಾಧ, ಅಸಮಾನತೆ, ಅಮಾನವೀಯತೆಯನ್ನು ಸಹ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry