ಕನ್ನಡಕ್ಕೆ ಒಬ್ಬನೇ ರಾಜಕುಮಾರ

7

ಕನ್ನಡಕ್ಕೆ ಒಬ್ಬನೇ ರಾಜಕುಮಾರ

ಐ.ಎಂ.ವಿಠಲಮೂರ್ತಿ
Published:
Updated:
ಕನ್ನಡಕ್ಕೆ ಒಬ್ಬನೇ ರಾಜಕುಮಾರ

ಭಾರತೀಯ ಸಿನಿಮಾಕ್ಕೆ ನೂರು ವರ್ಷ ತುಂಬಿದ ನೆನಪಿಗಾಗಿ ಹಲವಾರು ಆಚರಣೆಗಳು ನಡೆಯುತ್ತಿವೆ. ನಾನು ಮೊದಲ ಸಲ ಸಿನಿಮಾ ನೋಡಿದ ನೆನಪು ಈ ಸಂದರ್ಭ ದಲ್ಲಿ ಸುರಳಿಯಾಗಿ ಬಿಚ್ಚಿಕೊಳ್ಳುತ್ತಿದೆ. ಜೀವನ ದಲ್ಲಿ ಮೊದಲ ಬಾರಿಗೆ ರಜತ ಪರದೆ ಕಂಡ ಆ ಕ್ಷಣ ಅದೇನೋ ರೋಮಾಂಚನ, -ಸಡಗರ.ನನಗಾಗ ಆರೋ, ಏಳೋ ವರ್ಷಗಳು ಆಗಿದ್ದಿ ರಬಹುದು. ನಮ್ಮೂರು ಐರವಳ್ಳಿಯಿಂದ ಬೇಲೂರಿನಲ್ಲಿ ನಡೆಯುವ ದನಗಳ ಜಾತ್ರೆಗೆ ಎತ್ತಿನ ಗಾಡಿಯಲ್ಲಿ ಹೆಂಗಸರು, ಮಕ್ಕಳನ್ನು ಕರೆದುಕೊಂಡು ಹೋಗುವ ರೂಢಿ ಇತ್ತು. ನಮ್ಮ ಮನೆಯಿಂದ ಸಾಮಾನ್ಯವಾಗಿ ಈ ರೀತಿ ಯಾರೂ ಹೋಗುತ್ತಿರಲಿಲ್ಲ ಅಥವಾ ಯಾರನ್ನೂ ಕಳುಹಿಸುತ್ತಿರಲಿಲ್ಲ.

ನಾನು, ನನ್ನ ಅಕ್ಕ ಜಯಕ್ಕ ಊರಿನ ಅವರಿವರ ಗಾಡಿಗಳು ಹೋಗುವುದನ್ನು ತಿಳಿದು ಮನೆಯಲ್ಲಿ ದುಂಬಾಲು ಬಿದ್ದು, ಒಪ್ಪಿಗೆ ಪಡೆದು ಹೋಗುವುದೊಂದೇ ಮಾರ್ಗವಾಗಿತ್ತು. ನಮ್ಮ ತಂದೆಯವರಿಂದ ಒಪ್ಪಿಗೆ ಪಡೆಯುವುದು  ಸುಲಭದ ವಿಷಯವಾಗಿರಲಿಲ್ಲ. ಆದರೂ ಒಂದು ದಿನ ನಮ್ಮ ತಾಯಿಯವರ ಶಿಫಾರಸಿನಿಂದ ಒಪ್ಪಿಗೆ ಪಡೆದು ಬೇಲೂರಿಗೆ ಹೋಗುವ ಗಾಡಿ ಯನ್ನೇರಿದೆ. ಎತ್ತಿನ ಗಾಡಿಯಲ್ಲಿ ೩–೪ ಗಂಟೆಗಳ ಪ್ರಯಾಣ.ಬೇಲೂರಿನಲ್ಲಿದ್ದ ಟೂರಿಂಗ್ ಟಾಕೀಸ್‌ನಲ್ಲಿ ‘ಅಣ್ಣ ತಂಗಿ’ ಸಿನಿಮಾ. ನನ್ನನ್ನು ನಡೆಸಿಕೊಂಡು ಹೋದರೆ ಟಿಕೆಟ್‌ಗೆ ಹಣ ಕೊಡಬೇಕಾಗುತ್ತದೆ ಎಂದು ನಮ್ಮೂರ ಗೌರಕ್ಕ ದೊಡ್ಡಮ್ಮ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡು ಅವರು ಗೌಟಿಕಿ ಕಟ್ಟಿದ್ದ ಸೆರಗಿನಲ್ಲಿ ನನ್ನನ್ನು ಸಂಪೂರ್ಣವಾಗಿ ಮುಚ್ಚಿ ಬಿಟ್ಟರು. ಟಿಕೆಟ್ ಕೌಂಟರ್ ಬಳಿ ಬಂದಾಗ ಲಂತೂ ನಾನು ಯಾರನ್ನೂ ಮತ್ತು ನನ್ನನ್ನು ಯಾರೂ ನೋಡಲಾಗದ ಸ್ಥಿತಿ. ಉಸಿರಾಡಲೂ ಕಷ್ಟ. ಅವರ ಬೆವರಿನ ಕಮಟುವಾಸನೆ ನನ್ನಲ್ಲಿ ಸಿನಿಮಾ ನೋಡುವ ಆಸೆಯನ್ನೇ ಇಂಗಿಸಿಬಿಟ್ಟಿತ್ತು. ಈ ‘ಮುಚ್ಚಿಡುವ’ ಕೆಲಸ ೨–-೩ ನಿಮಿಷಗಳಲ್ಲಿ ಮುಗಿದು ಟೆಂಟಿನೊಳಗೆ ಹೋಗಿ ಚಾಪೆಯ ಮೇಲೆ ಕುಳಿತೆವು.‘ನಮೋ ವೆಂಕಟೇಶ ನಮೋ ತಿರುಮಲೇಶ’ ಹಾಡು ಮುಗಿದ ತಕ್ಷಣ ರಜತ ಪರದೆ ಮೇಲೆ ಸಿನಿಮಾ ಶುರುವಾಯ್ತು. ರಾಜ್‌ಕುಮಾರ್‌, ಬಿ.ಸರೋಜಾದೇವಿ, ಲೀಲಾವತಿ, ನರಸಿಂಹ ರಾಜು ಮೊದಲಾದವರ ಮೊದಲ ದರ್ಶನ ವಾಯ್ತು. ‘ಬಂಡಿ ತಕ್ಕೊಂಡು, ರೈಲು ತಕ್ಕೊಂಡು ನಮ್ಮ ಪುಟ್ಟವ್ವ ಬತ್ತಾಳೆ’ ಎಂದು ನರಸಿಂಹರಾಜು ಕುಣಿದಾಡಿ ಹೇಳುವ ಮಾತುಗಳು, ಹಾಸ್ಯದ ದೃಶ್ಯಗಳು.

ಎತ್ತಿನಗಾಡಿ ಪ್ರಯಾಣದ ಆಯಾಸ ದಿಂದ ಆಗಾಗ ತೂಕಡಿಸುತ್ತಿದ್ದೆ. ಉಳಿದಂತೆ ಸಿನಿಮಾದಲ್ಲಿ, ಎಲ್ಲ ಕನಸಿನಂತೆ ಬಂದು ಹೋಗಿ ಏನು ನಡೆಯಿತೆಂಬುದನ್ನು ಸಂಪೂರ್ಣವಾಗಿ ಗ್ರಹಿಸಲು ಆಗಲಿಲ್ಲ. ಆದರೆ, ತೆರೆಯ ಮೇಲೆ ಅಂದು ನೋಡಿದ ರಾಜ್‌ಕುಮಾರ್‌ ಅವರನ್ನು ಮುಂದಿನ ೪೦-–೫೦ ವರ್ಷಗಳ ಕಾಲ ಬಿಡದೇ ಮತ್ತೆ ಮತ್ತೆ ನೋಡುವ, ಆಗಾಗ ಮಾತ ನಾಡುವ, ಜೊತೆಯಲ್ಲಿ ಊಟ ಮಾಡುವ, ಸಮಯ ಸಿಕ್ಕಾಗಲೆಲ್ಲ ಹರಟುವ ಭಾಗ್ಯ ನನ್ನದಾಯಿತು.ರಾಜ್‌ಕುಮಾರ್‌ ಅವರ ಕುರಿತಾಗಿ ರಚನೆ ಯಾದ ಸಾಹಿತ್ಯ ಬೆಟ್ಟದಷ್ಟಿದೆ.  ಅವರ ವ್ಯಕ್ತಿತ್ವದ ವಿರಾಟ್ ರೂಪವನ್ನು ಕನ್ನಡದ ಜನತೆ ಮುಂದೆ ಯಾರೂ ಹೊಸದಾಗಿ ತೆರೆದಿಡುವ ಅಗತ್ಯವಿಲ್ಲ. ಹೊಸ ವಿಷಯ ಹೇಳುತ್ತೇನೆ ಎನ್ನುವ ಭ್ರಮೆ ಕೂಡ ನನಗಿಲ್ಲ. ಸರ್ಕಾರದ ಅಧಿಕಾರಿಯಾಗಿ ಅವರ ಜೊತೆ ಅನುಭವಿಸಿದ ಒಡನಾಟದ ಕ್ಷಣಗ ಳನ್ನು ನೆನಪಿಸಿಕೊಳ್ಳುವುದಷ್ಟೇ ನನ್ನ ಅಪೇಕ್ಷೆ.ರಾಜ್‌ಕುಮಾರ್‌ ಅವರನ್ನು ಪ್ರತ್ಯಕ್ಷವಾಗಿ ನೋಡುವ ಮೊದಲ ಅವಕಾಶ ಸಿಕ್ಕಿದ್ದು ನಾನು ವಾರ್ತಾ ಇಲಾಖೆಯ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ. ವಾರ್ತಾ ಇಲಾಖೆಯ ನೌಕರ ಚನ್ನ ಮತ್ತು ಉಪನಿರ್ದೇಶಕ ಶಿವರಾಂ ಜೊತೆ ಸದಾಶಿವನಗರದ ಅವರ ಮನೆಗೆ ಹೋದೆ. ರಾಜ್‌ಕುಮಾರ್‌ ಅವರನ್ನು ನೂರಾರು ಚಿತ್ರ ಗಳಲ್ಲಿ ನೋಡಿದ್ದ ನನ್ನ ಪಾಲಿಗೆ ಅವರನ್ನು ಪ್ರತ್ಯಕ್ಷ ವಾಗಿ ನೋಡಿ ಮಾತನಾಡಿದ ಆ ಗಳಿಗೆ ಬದುಕಿನ ಒಂದು ದಿವ್ಯಕ್ಷಣ.ಅವರ ಸರಳತೆ, ಆತ್ಮೀಯತೆ, ನಿಷ್ಕಲ್ಮಷ ನೋಟ, ಸವಿಯಾದ ಕನ್ನಡ ಮಾತು, ನನ್ನ ಮೈದಡವಿ ಮುಟ್ಟಿ ವಿಚಾರಿಸಿದ ರೀತಿ ಕಂಡಾಗ ಅವರ ಚಿತ್ರಗಳಲ್ಲಿ ನಾನು ಅವರನ್ನು ನೋಡಿದಂತೆ, ಅವರೂ ನನ್ನನ್ನು ನೂರಾರು ಬಾರಿ ನೋಡಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಚಿರಪರಿಚಿತ ಭಾವ.ಸಿನಿಮಾ ಇಲ್ಲವೇ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದರೂ ಸರ್ಕಾರಕ್ಕೆ ರಾಜ್‌ಕುಮಾರ್‌ ಅವರ ಬೆಂಬಲ ಸದಾ ಇರುತ್ತಿತ್ತು. ಬೆಟ್ಟದಂತಿದ್ದ ಸಮಸ್ಯೆ ಅವರ ಪ್ರವೇಶ ಮಾತ್ರದಿಂದ ಮಂಜಿ ನಂತೆ ಕರಗಿ ಹೋಗುತ್ತಿತ್ತು. ಅವರು ಒಂದು ಮಾತು ಆಡಿದರೆ ‘ಇಲ್ಲ’ ಎನ್ನುವ ಶಕ್ತಿ ಸರ್ಕಾರ ಕ್ಕಾಗಲೀ, ಸಿನಿಮಾ ಕ್ಷೇತ್ರದವರಿಗಾಗಲೀ ಯಾರಿಗೂ ಇರಲಿಲ್ಲ.

‘ಇಲ್ಲ’ ಎನ್ನುವಂತಹ ನ್ಯಾಯ ಕೊಡುವುದು ಅವರ ಜಾಯಮಾನವೂ ಅಗಿರಲಿಲ್ಲ. ಕಲಾವಿದರ ಪಾಲಿಗಂತೂ ಅವರ ಮಾತೆಂದರೆ ವೇದವಾಕ್ಯ. ರಿಮೇಕ್ ಸಿನಿಮಾ ಗಳಿಗೆ ಸಬ್ಸಿಡಿ ಕೊಡಬಾರದು ಎನ್ನುವ ಸರ್ಕಾರದ ನಿಲುವನ್ನು ರಾಜ್‌ಕುಮಾರ್‌ ನಿರ್ಭಿಡೆಯಿಂದ ಬೆಂಬಲಿಸಿದ್ದರು.ನಮ್ಮ ನೆಲದ ಈ ಹೆಮ್ಮೆಯ ಕಲಾವಿದ ಎಂತಹ ಸಂದರ್ಭದಲ್ಲೂ ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿಯಲಿಲ್ಲ. ಪಕ್ಕದ ರಾಜ್ಯಗಳ ದೊಡ್ಡ ಕಲಾವಿದರು ವೃತ್ತಿ ಬದುಕಿನ ಉತ್ತುಂಗ ದಲ್ಲಿ ಇದ್ದಾಗ ರಾಜಕೀಯದ ಕೆಸರಿನಲ್ಲಿ ಮುಳುಗಿದರೆ, ರಾಜ್‌ಕುಮಾರ್‌ ಮಾತ್ರ ಸಿನಿಮಾ ಜಗತ್ತು ಬಿಟ್ಟು ಆಚೀಚೆ ನೋಡಲಿಲ್ಲ. ಎಂತಹ ಒತ್ತಡ ಬಂದರೂ ರಾಜಕೀಯದ ತಂಟೆಗೆ ಹೋಗಲಿಲ್ಲ.

ಯಾವ ಪಕ್ಷದ ಕಡೆಗೂ ವಾಲಲಿಲ್ಲ. ತಮ್ಮ ಪರಿಶುಭ್ರವಾದ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆಯನ್ನೂ ಅಂಟಿಸಿಕೊಳ್ಳಲಿಲ್ಲ. ದಶಕಗಳ ಕಾಲ ಅಭಿನಯವೊಂದನ್ನೇ ತಪಸ್ಸಿನಂತೆ ಧ್ಯಾನಿಸಿದ ಮಹಾನ್ ಕಲಾವಿದ ಅವರು. ತೊಡುತ್ತಿದ್ದ ಹಾಲುಬಣ್ಣದ ಬಟ್ಟೆಯಷ್ಟೇ ಪರಿಶುಭ್ರ ವ್ಯಕ್ತಿತ್ವ ಅವರದ್ದಾಗಿತ್ತು.ಕರ್ನಾಟಕದ ಏಕೀಕರಣಕ್ಕೆ ಹಲವಾರು ಮಹನೀಯರು ದುಡಿದಿದ್ದಾರೆ. ಆದರೆ, ರಾಜ್ಯದ ಸಾಂಸ್ಕೃತಿಕ ಏಕೀಕರಣಕ್ಕೆ ಐದು ದಶಕಗಳಿಗೂ ಹೆಚ್ಚು ಕಾಲ ದುಡಿದ ಶ್ರೇಯಸ್ಸು ರಾಜ್‌ಕುಮಾರ್‌ ಅವರಿಗೆ ಸಲ್ಲಬೇಕು. ಅವರು ಮಾತನಾಡುತ್ತಿದ್ದ ಕನ್ನಡ ಇಡೀ ಕರ್ನಾಟಕದ ಜನರಿಗೆ ಅರ್ಥವಾಗುತ್ತಿತ್ತು. ಗೋಕಾಕ್ ಚಳವಳಿ ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅವರು ನಾಡಿನಲ್ಲಿ ಭಾವ ಸಂಚಲನವನ್ನು ಉಂಟು ಮಾಡಿದರು.

ಅರೆನಿದ್ರಾವಸ್ಥೆಯಲ್ಲಿದ್ದ ಕನ್ನಡಿಗರನ್ನು ಬಡಿದೆಬ್ಬಿಸಿದರು. ಜಾತಿ, ಮತ, ಧರ್ಮ, ವರ್ಗ, ಭಾಷೆ, ಪ್ರಾಂತ್ಯ ಎಲ್ಲವನ್ನೂ ಮೀರಿ ನಾಡನ್ನು ಒಗ್ಗೂಡಿಸಿದ ಕಲಾವಿದ ಅವರು. ಗುಡಿಸಿಲಿನಲ್ಲಿ ಇದ್ದ ಕಟ್ಟ ಕಡೆಯ ವ್ಯಕ್ತಿಯಿಂದ ವಿಧಾನಸೌಧದಲ್ಲಿ ಕುಳಿತು ರಾಜ್ಯದ ಆಡಳಿತ ನಡೆಸಿದ ಮುಖ್ಯಮಂತ್ರಿವರೆಗೆ ಎಲ್ಲರ ಪ್ರೀತಿಗೆ ಪಾತ್ರರಾದ ವ್ಯಕ್ತಿ. ಹೀಗೆ ಎಲ್ಲ ಗೆರೆ-–ಗಡಿಗಳೂ ಅಳಿಸಿಹೋಗಿ ನಾಡಿಗೆ ನಾಡೇ ಒಬ್ಬ ವ್ಯಕ್ತಿಯನ್ನು ಆರಾಧ್ಯ ದೈವವನ್ನಾಗಿ ಹೊತ್ತು ಮೆರೆದ ಬೇರೆ ಉದಾಹರಣೆ ಇಲ್ಲ. ಎಲ್ಲ ಅರ್ಥದಲ್ಲೂ ರಾಜ್‌ಕುಮಾರ್‌ ಕನ್ನಡದ ರಾಯಭಾರಿ.ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಯಾಗಿದ್ದಾಗ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾಸನದಲ್ಲಿ ಏರ್ಪಡಿಸ ಲಾಗಿತ್ತು. ವಾರ್ತಾ ಇಲಾಖೆ ನಿರ್ದೇಶಕನಾಗಿದ್ದ ನಾನು ಸಮಾರಂಭ ಸಂಘಟಿಸುವ ಹೊಣೆ ಹೊತ್ತಿದ್ದೆ. ‘ಚಂದನ’ ವಾಹಿನಿ ನಿರ್ದೇಶಕರಾಗಿದ್ದ ಎನ್.ಜಿ.ಶ್ರೀನಿವಾಸ್ ಮೊದಲ ಬಾರಿಗೆ ಕಾರ್ಯ ಕ್ರಮದ ನೇರ ಪ್ರಸಾರ ಮಾಡಲು ಒಪ್ಪಿದ್ದರು. ಸಮಾರಂಭಕ್ಕೆ ರಾಜ್‌ಕುಮಾರ್‌ ಅವರನ್ನು ಆಹ್ವಾನಿಸಿದ್ದೆ.

ಸಂತೋಷದಿಂದಲೇ ಬಂದರು. ಗೊರೂರು ನೀರಾವರಿ ಬಂಗಲೆಯಲ್ಲಿ ಎಚ್.ಡಿ. ರೇವಣ್ಣ ಭರ್ಜರಿ ಭೋಜನದ ವ್ಯವಸ್ಥೆ ಮಾಡಿ ದ್ದರು. ಆ ಔತಣವನ್ನು ರಾಜ್‌ಕುಮಾರ್‌ ಆನಂದ ದಿಂದ ಸವಿದರು. ಸಂಜೆ ಸಮಾರಂಭದಲ್ಲಿ ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರೊಡ ಗೂಡಿ ನೃತ್ಯವನ್ನೂ ಮಾಡಿದರು.ಒಳ್ಳೆಯ ಊಟವನ್ನು ರಾಜ್‌ಕುಮಾರ್‌ ಬಹುವಾಗಿ ಆಸ್ವಾದಿಸುತ್ತಿದ್ದರು. ಗೆಳೆಯ ಶ್ರೀನಿವಾಸ ಕಪ್ಪಣ್ಣ ಒಮ್ಮೆ ಊಟಕ್ಕೆ ಆಹ್ವಾನಿಸಿ ದ್ದರು. ಕಪ್ಪಣ್ಣ, ರಾಜ್‌ಕುಮಾರ್‌ ಮತ್ತು ನನ್ನ ಕುಟುಂಬದ ಸದಸ್ಯರು ಒಟ್ಟಾಗಿ ಸೇರಿದ್ದೆವು. ನೆಲದ ಮೇಲೆ ಕುಳಿತೇ ಊಟ ಮಾಡಿದೆವು. ಊಟದ ಬಳಿಕ ಕೈತೊಳೆಯಲು ಸಾಬೂನು ಕೊಡಲು ಹೋದಾಗ ಅವರು ಹೇಳಿದ್ದೇನು ಗೊತ್ತೆ? ‘ಊಟ ಮಾಡಿದ ಕೈಯನ್ನು ಸಾಬೂನಿ ನಿಂದ ತೊಳೆಯಬಾರದು. ಊಟದ ಪರಿಮಳ ಕೆಲಕಾಲ ಕೈಯಲ್ಲಿ ಹಾಗೇ ಇರಬೇಕು’ ಎಂದ ಅವರು, ಕೈಯಿಂದ ಆ ಊಟದ ಪರಿಮಳವನ್ನು ಸುದೀರ್ಘವಾಗಿ ಎಳೆದುಕೊಂಡು ‘ಆಹಾ’ ಎಂಬ ಉದ್ಗಾರ ತೆಗೆದರು!ವಾರ್ತಾ ಇಲಾಖೆಯ ಚನ್ನ, ರಾಜ್‌ಕುಮಾರ್‌ ಅವರ ಬಲಗೈ ಬಂಟ. ಸದಾಶಿವನಗರದಲ್ಲಿ ವಾಕಿಂಗ್ ಹೋದಾಗ ನಡೆದ ಘಟನೆಯನ್ನು ನನ್ನ ಎದುರೂ ಹೇಳಿದ್ದ. ಮಫ್ಲರ್ ಸುತ್ತಿಕೊಂಡು ವಾಕಿಂಗ್ ಮುಗಿಸಿ ಬರುತ್ತಿದ್ದ ರಾಜ್‌ಕುಮಾರ್‌ ಅವರಿಗೆ ದಾರಿಯಲ್ಲಿ ಒಳ್ಳೆಯ ಊಟದ ಪರಿಮಳ ತಡೆದು ನಿಲ್ಲಿಸಿತು. ಆ ಪರಿಮಳ ಎಲ್ಲಿಂದ ಬರುತ್ತದೆ ಎನ್ನುವುದನ್ನು ಪತ್ತೆ ಹಚ್ಚಿದರು. ಕಟ್ಟಡ ಕಾರ್ಮಿಕರೊಬ್ಬರ ಶೆಡ್‌ನಲ್ಲಿ ಆ ಅಡುಗೆ ಸಿದ್ಧವಾಗುತ್ತಿತ್ತು. ಊಟವನ್ನು ಪಡೆದು ಬಲುಪ್ರೀತಿಯಿಂದ ಚಪ್ಪರಿಸಿದ ರಾಜ್‌ಕುಮಾರ್‌ ಆ ಕಾರ್ಮಿಕ ಕುಟುಂಬಕ್ಕೆ ಭಕ್ಷೀಸು ಕೊಟ್ಟರು.ರಾಜ್‌ಕುಮಾರ್‌ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ. ಬದಲಾಗಿ ಹಾಸ್ಯಪ್ರಜ್ಞೆ ಮೆರೆಯುತ್ತಿದ್ದರು. ಒಮ್ಮೆ ನಾನು, ‘ಮಂಡಿ ನೋವು ಹೇಗಿದೆ’ ಎಂದು ಪ್ರಶ್ನಿಸಿದಾಗ, ‘ಅಯ್ಯೊ, ಅದೆಲ್ಲಿ ಹೋಗುತ್ತೆ, ಬಾಳಿನ ಸ್ನೇಹಿತನಾಗಿ ಬಿಟ್ಟಿದೆ. ಪಾರ್ವತಿ ತರಹ ಸದಾ ಜೊತೆಗಿರುತ್ತೆ’ ಎಂದು ನಗುನಗುತ್ತಾ ಹೇಳಿದರು. ರಾಜ್‌ಕುಮಾರ್‌ ಅವರ ನೆರಳಿನಂತೆ ಇದ್ದವರು ಪಾರ್ವತಮ್ಮ. ಯಾವಾಗಲೂ ಅವರಿಗೆ ‘ಪಾರ್ವತಿ’ ಜೊತೆಯಲ್ಲಿರಬೇಕು. ನಿರ್ಣಾಯಕ ಘಟ್ಟದಲ್ಲಿ ಅವರ ಸಲಹೆ ಬೇಕೇಬೇಕು.ದೆಹಲಿ ಕನ್ನಡ ಸಂಘ ಕಟ್ಟಲಿದ್ದ ಸಭಾಂಗಣದ ಸಹಾಯಾರ್ಥ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಾಡಾಗಿತ್ತು. ಬೆಂಗಳೂರಿನಿಂದ ರಾಜ್‌ಕುಮಾರ್‌ ಮತ್ತು ನಾನು ಜೊತೆಯಾ ಗಿಯೇ ಪ್ರಯಾಣ ಬೆಳೆಸಿದೆವು. ವಿಮಾನದಲ್ಲಿ ಎರಡೂವರೆ ಗಂಟೆಗಳ ಕಾಲ ನಡೆದ ನಮ್ಮ ಸಂವಾದ ಇನ್ನೂ ತಲೆಯಲ್ಲಿ ಗುಂಯ್‌ಗುಡು ತ್ತಿದೆ. ಆ ಕ್ಷಣದಲ್ಲಿ ನಾನು ಎಲ್ಲ ಅರ್ಥದಲ್ಲೂ ಗಾಳಿಯಲ್ಲಿ ತೇಲುತ್ತಿದ್ದೆ. ಒಬ್ಬ ಸರ್ಕಾರಿ ಅಧಿಕಾರಿ ಹಾಕುವ ಶ್ರಮ, ಎದುರಿಸುವ ಸಂಕಷ್ಟ ಗಳ ಕುರಿತು ಅವರಿಗೆ ಚೆನ್ನಾಗಿ ಅರಿವಿತ್ತು.

‘ನೀವೇಕೆ ಸಿನಿಮಾದಲ್ಲಿ ನಟಿಸಬಾರದು’ ಎಂಬ ಅವರ ಆಗಿನ ಪ್ರಶ್ನೆ ಈಗಷ್ಟೇ ಕೇಳಿದಂತೆ ಹಸಿರಾಗಿದೆ. ‘ನಿಜವಾಗಿಯೂ ಒಳ್ಳೆಯ ಮನುಷ್ಯ ನಾಗಿ ಬಾಳಲು ಸಾಧ್ಯವೇ’ ಎಂದಾಗ, ಕ್ಷಣಕಾಲ ಮೌನ ವಹಿಸಿದ ರಾಜ್‌ಕುಮಾರ್‌, ಬಳಿಕ ಕೊಟ್ಟ ಉತ್ತರ ತುಂಬಾ ಔಚಿತ್ಯಪೂರ್ಣವಾಗಿತ್ತು. ‘ಒಳ್ಳೆಯ ಪಾರ್ಟ್ ಮಾಡುವುದು ಸುಲಭ. ಒಳ್ಳೆಯ ಮನುಷ್ಯನಾಗಿ ಬಾಳುವುದು ಬಹಳ ಕಷ್ಟ’ ಎಂದು ಹೇಳಿದ್ದರು.ರಾಜ್‌ಕುಮಾರ್‌ ಅವರ ಸಿನಿಮಾ ನೋಡುತ್ತಾ, ಹಾಡು ಕೇಳುತ್ತಾ ಬೆಳೆದ ನಮ್ಮ ಪೀಳಿಗೆ ಜನರಿಗೆ ಅವರಿಲ್ಲದೆ ಶೂನ್ಯ ಸೃಷ್ಟಿಯಾಗಿ ಒಂದು ರೀತಿಯ ಅನಾಥ ಪ್ರಜ್ಞೆ ಕಾಡುತ್ತಿದೆ. ಕನ್ನಡಿಗರ ಭಾವನೆಗಳಿಗೆ ಧ್ವನಿಯಾಗಿದ್ದ ಅಂತಹ ಬೇರೊಬ್ಬ ನಾಯಕ ಇಲ್ಲ. ಕರ್ನಾಟಕ, ಕನ್ನಡ ಮತ್ತು ಕನ್ನಡ ಸಿನಿಮಾ ರಂಗ ಮೂರಕ್ಕೂ ಅವರೊಬ್ಬ ಪ್ರಶ್ನಾತೀತ ನಾಯಕನಾಗಿದ್ದರು.ರಾಜ್‌ಕುಮಾರ್‌ ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅದರಿಂದ ಪ್ರಶಸ್ತಿಗಳ ಮೌಲ್ಯ ಹೆಚ್ಚಾ ಯಿತೇ ವಿನಃ ಪ್ರಶಸ್ತಿಗಳಿಂದ ಅವರೇನೂ ಪಡೆಯ ಬೇಕಾಗಿರಲಿಲ್ಲ. ಅವರ ಹೆಸರಿನ ಹಿಂದೆ ಯಾವ ಬಿರುದು ಬಾವಲಿಗಳು ಬೇಕಾಗಿಲ್ಲ. ಕನ್ನಡದ ಈ ಧ್ರುವತಾರೆ ಇಲ್ಲವಾದ ಮೇಲೆ ನಮ್ಮ ಅನಿಕೇತನ ಸಂಸ್ಥೆಯಿಂದ ‘ರಾಜ್ ನಮನ’ ಕಾರ್ಯಕ್ರಮ ವನ್ನು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದೆವು. ನಾಡಿನ ಹೆಸರಾಂತ ಕಲಾವಿದರು ಪಾಲ್ಗೊಂಡು ಚಿತ್ರ ಬಿಡಿಸಿದರು. ಹಾಡು ಹೇಳಿದರು.

ಸಾಹಿತಿಗಳು ಆ ಮೇರು ಕಲಾವಿದನ ಬಾಳಿನ ಪುಟಗಳನ್ನು ತೆರೆದಿಟ್ಟರು. ಅವರು ತೀರಿಹೋದಾಗ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಈ ಕಾರ್ಯಕ್ರಮ ವೇದಿಕೆಯಾಯ್ತು. ಕಂಠೀರವ ಸ್ಟುಡಿಯೊ ಆವರಣದಲ್ಲಿ ರಾಜ್‌ಕುಮಾರ್‌ ಅವರ ಸ್ಮಾರಕ ನಿರ್ಮಾಣದ ಪ್ರಸ್ತಾವ ಬಂತು. ಆಗ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ. ಸರ್ಕಾರದ ಕಾರ್ಯದರ್ಶಿಯಾಗಿದ್ದ ನಾನು ಕಂಠೀರವ ಸ್ಟುಡಿಯೊಕ್ಕೂ ಚೇರ್‌ಮನ್‌ ಆಗಿದ್ದೆ. ಪಾರ್ವತಮ್ಮ ಅವರ ಜೊತೆ ಚರ್ಚಿಸಿ ರಾಜ್‌ಕುಮಾರ್‌ ಸ್ಮಾರಕ ಟ್ರಸ್ಟ್‌ ರಚನೆಗೆ ಸಹಕರಿಸಿದ್ದಲ್ಲದೆ ಟ್ರಸ್ಟ್‌ಗೆ ಅಗತ್ಯವಾದ ಜಾಗ ಹಸ್ತಾಂತರ ಮಾಡಿಕೊಟ್ಟೆ.

ರಾಜ್ ಅವರು ಇಲ್ಲವಾಗಿ ಇಷ್ಟು ದಿನಗಳು ಕಳೆದ ಮೇಲೂ ಅವರ ಮೇಲಿನ ಜನರ ಪ್ರೀತಿ ಹೇಗಿದೆ ಎನ್ನುವುದಕ್ಕೆ ಉದಾಹರಣೆ ಬೇಕೆ? ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಕಾಲಕ್ಕೆ ಸಭಿಕರಲ್ಲಿ ಗದ್ದಲದ ವಾತಾವರಣ. ಎಷ್ಟು ಮನವಿ ಮಾಡಿಕೊಂಡರೂ ಪ್ರಯೋಜನ ಆಗಲಿಲ್ಲ. ತಕ್ಷಣ ರಾಜ್‌ಕುಮಾರ್‌ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಯನ್ನು ಹಾಡಿಸಿದೆವು. ಸಭೆಯಲ್ಲಿ ಸೂಜಿ ಬಿದ್ದರೂ ಕೇಳುವ ಮೌನ. ರಾಜ್‌ಕುಮಾರ್‌ ಎಂದರೆ ಜನರಿಗೆ ಅಂತಹ ಚುಂಬಕ ಶಕ್ತಿ.ರಾಜ್‌ಕುಮಾರ್‌ ಅವರ ಉಪಸ್ಥಿತಿ ಮಾತ್ರ ದಿಂದ ನಮ್ಮ ನಾಡಿಗೆ ಅದೆಂತಹ ಉಮೇದಿ. ಅವರಿಲ್ಲದ ರಾಜ್ಯೋತ್ಸವ ಸಪ್ಪೆ. ಅವರಿಲ್ಲದೆ ಸೃಷ್ಟಿಯಾದ ಆ ಶೂನ್ಯ ಇಂದಿಗೂ ಹಾಗೇ ಉಳಿದಿದೆ. ಕವಿವಾಣಿಯಂತೆ ಹೇಳುವುದಾದರೆ ‘ನಾಡಿನ ಪುಣ್ಯ ಪುರುಷ ರೂಪದಲ್ಲಿ ಹೋಗಿದೆ’!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry