ಶುಕ್ರವಾರ, ಜೂನ್ 25, 2021
21 °C

ಕನ್ನಡದ ಮಕ್ಕಳಿಗೆ ಬೇಕಿರುವ ಕಂಪ್ಯೂಟರ್ ಶಿಕ್ಷಣ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಕನ್ನಡದ ಮಕ್ಕಳಿಗೆ ಬೇಕಿರುವ ಕಂಪ್ಯೂಟರ್ ಶಿಕ್ಷಣ

ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಅನೇಕಾನೇಕ ಪ್ರಾಚೀನ ನಿರ್ಣಯಗಳ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಯಾಗಿರುವ ‘ಕನ್ನಡವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಂದರ್ಭದಲ್ಲಿ ಪ್ರಸ್ತುತಗೊಳಿಸುವ’ ನಿರ್ಣಯವನ್ನು ಈ ಬಾರಿಯೂ ಮಂಡಿಸಲಾಗುತ್ತದೆ. ಸಮ್ಮೇಳನದ ಉಳಿದ ನಿರ್ಣಯಗಳಂತೆ ಇದನ್ನೂ ಮತ್ತೆ ಮುಂದಿನ ವರ್ಷದ ಸಮ್ಮೇಳನದಲ್ಲಿ ನೆನಪಿಸಿಕೊಳ್ಳಲಾಗುತ್ತದೆ.

ಈ ಮಧ್ಯೆ ಸಾಮಾನ್ಯ ಕನ್ನಡಿಗರು ತಮ್ಮ ಅಂಗೈಯಲ್ಲಿರುವ ಸ್ಮಾರ್ಟ್ ಫೋನ್‌ನಲ್ಲಿ ಕನ್ನಡದಲ್ಲೇ ವಾಟ್ಸ್ ಆಪ್ ಮೆಸೇಜುಗಳನ್ನು ಕಳುಹಿಸುತ್ತಾ, ಫೇಸ್‌ಬುಕ್ ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡುತ್ತಾ, ಕೆಎಸ್‌ಆರ್‌ಟಿಸಿ ಅವತಾರ್‌ನಲ್ಲಿ ಟಿಕೆಟ್ ಬುಕ್ ಮಾಡುತ್ತಾ, ಗೂಗಲ್ ಮ್ಯಾಪ್ಸ್‌ನಲ್ಲಿ ಹಾದಿ ಕಂಡುಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿದ್ದಾರೆ. ಇದೆಲ್ಲಾ ಸಂಭವಿಸಿದ್ದು ಯಾವುದೇ ಬಗೆಯ ಸಮ್ಮೇಳನ ನಿರ್ಣಯಗಳಿಂದಲೋ ಸರ್ಕಾರಿ ಯೋಜನೆಗಳಿಂದಲೋ ಅಲ್ಲ. ಸ್ಮಾರ್ಟ್ ಫೋನ್ ತಯಾರಕರಿಂದ ಆರಂಭಿಸಿ ಅದರಲ್ಲಿ ಕಾರ್ಯನಿರ್ವಹಿಸುವ ಆ್ಯಪ್ ಅರ್ಥಾತ್ ಕಿರುತಂತ್ರಾಂಶಗಳ ನಿರ್ಮಾತೃಗಳು ಕಂಡುಕೊಂಡ ಒಂದು ವ್ಯಾಪಾರಿ ಸಾಧ್ಯತೆಯಿಂದಾಗಿ. ಈ ವ್ಯಾಪಾರಿ ಸಾಧ್ಯತೆ ಕನ್ನಡದ ತನಕ ತಲುಪುವ ಹೊತ್ತಿಗೆ ಎಷ್ಟು ತಡವಾಗಿರುತ್ತದೆ ಎಂದರೆ ಇಂಗ್ಲಿಷ್ ಅಕ್ಷರಗಳನ್ನು ಬಲ್ಲವರಿಗೆ ಈ ಎಲ್ಲಾ ಸವಲತ್ತುಗಳು ಕನ್ನಡದಲ್ಲಿ ದೊರೆತರೂ ಅಷ್ಟೇ ದೊರೆಯಿದ್ದರೂ ಅಷ್ಟೇ ಎಂಬ ಸ್ಥಿತಿ ಇರುತ್ತದೆ.

ಈ ಸಮಸ್ಯೆಯ ಮೂಲ ಕಾರಣವಿರುವುದು ನಮ್ಮ ನೀತಿ ನಿರೂಪಣೆಯಲ್ಲಿ ಕಾಣುವ ಆಲಸಿತನದಲ್ಲಿ. ತಂತ್ರಜ್ಞಾನದ ವಿಷಯದಲ್ಲಿ ಭಾರತೀಯರಷ್ಟೇನೂ ಪರಿಣತರಲ್ಲದ ಅರಬ್ ದೇಶಗಳಲ್ಲಿಯೂ ಒಂದು ಸಾಫ್ಟ್‌ವೇರ್ ಮಾರಾಟವಾಗಬೇಕಾದರೆ ಅಲ್ಲಿನ ಭಾಷೆಯಲ್ಲಿ ಅದು ಲಭ್ಯವಿರಬೇಕಾಗುತ್ತದೆ. ಫ್ರೆಂಚರು, ಜರ್ಮನ್ನರು, ಕೊರಿಯನ್ನರು, ಚೀನೀಯರಂತೂ ಈ ವಿಷಯದಲ್ಲಿ ಮೂಲಭೂತವಾದಿಗಳು. ಆದರೆ ಭಾರತದಲ್ಲಿ ಎಲ್ಲವೂ ಮೊದಲು ಇಂಗ್ಲಿಷ್‌ನಲ್ಲಿ ಬಂದು ಇನ್ನು ತಮ್ಮ ಸರಕುಗಳನ್ನು ಮಾರಾಟ ಮಾಡುವುದಕ್ಕೆ ಬೇಕಿರುವಷ್ಟು ಇಂಗ್ಲಿಷ್ ಬಲ್ಲವರಿಲ್ಲ ಎಂಬುದು ಖಚಿತವಾಗುವ ತನಕ ಭಾರತೀಯ ಭಾಷೆಗಳ ಸವಲತ್ತು ಯಾವ ಎಲೆಕ್ಟ್ರಾನಿಕ್ ಪರಿಕರಗಳಲ್ಲೂ ದೊರೆಯುವುದಿಲ್ಲ. ಸ್ಮಾರ್ಟ್‌ಫೋನುಗಳನ್ನು ಬಿಡಿ ಮನೆಬಳಕೆಯ ಅದೆಷ್ಟು ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ಕನ್ನಡವನ್ನು ನಾವು ಕಾಣುತ್ತೇವೆ? ಟಿ.ವಿ.ಯ ಮೆನುವಿನಲ್ಲಿ ಕನ್ನಡ ಕಾಣಿಸದೇ ಇರುವುದಕ್ಕೆ ತಾಂತ್ರಿಕ ಮಿತಿಗಳೇನೂ ಇಲ್ಲ. ಆದರೂ ಅದು ಲಭ್ಯವಿಲ್ಲ. ತಾನು ಖರೀದಿಸುವ ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ಕನ್ನಡದ ಸವಲತ್ತು ಕಡ್ಡಾಯವಾಗಿ ಇರಬೇಕು ಎಂಬ ನೀತಿಯೊಂದನ್ನು ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿದ್ದರೆ ಈ ಸಮಸ್ಯೆ ಏಕೀಕರಣದ ಕಾಲದಲ್ಲಿಯೇ ಬಗೆಹರಿದುಬಿಡುತ್ತಿತ್ತು. ಏಕೆಂದರೆ ಸರ್ಕಾರವೇನೂ ಸಣ್ಣ ಗ್ರಾಹಕನಲ್ಲ!

ಬೌದ್ಧಿಕತೆಯ ಅಗತ್ಯವಿಲ್ಲದ ತಂತ್ರಜ್ಞಾನದ ಸಂದರ್ಭದಲ್ಲಿ ನಾವು ತೋರಿದ ಆಲಸಿತನ ಈಗ ದೊಡ್ಡದೊಂದು ಸಮಸ್ಯೆಯಾಗಿ ನಮ್ಮೆದುರು ನಿಂತಿದೆ. ಅಮೆಜಾನ್ ತಯಾರಿಸಿರುವ ಕಿಂಡಲ್ ಎಂಬ ಇ-ಪುಸ್ತಕ ಓದುವ ಉಪಕರಣದಲ್ಲಿ ಕನ್ನಡ ಓದುವುದಕ್ಕೆ ಬೇಕಿರುವ ಮೂಲಸೌಕರ್ಯವಿದ್ದರೂ ಕಿಂಡಲ್‌ಗಾಗಿ ಕನ್ನಡ ಪುಸ್ತಕಗಳನ್ನು ರೂಪಿಸುವುದಕ್ಕೆ ಅಮೆಜಾನ್ ಬಿಡುವುದಿಲ್ಲ. ಇದರ ವಿರುದ್ಧ ಕನ್ನಡದ ಎಲ್ಲಾ ಪ್ರಮುಖ ಲೇಖಕರೂ ಒಟ್ಟಾಗಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಈಗ ಧ್ವನಿಗೆ ಸ್ಪಂದಿಸುವ ಎಲೆಕ್ಟ್ರಾನಿಕ್ ಉಪಕರಣಗಳು ಮಾರುಕಟ್ಟೆಗೆ ಬರುತ್ತಿವೆ. ಇವೆಲ್ಲವೂ ಅರ್ಥ ಮಾಡಿಕೊಳ್ಳುವುದು ಇಂಗ್ಲಿಷನ್ನು ಮಾತ್ರ. ಕನ್ನಡ ಅರ್ಥಮಾಡಿಕೊಳ್ಳುವ ಉಪಕರಣಗಳು ಬರುವ ಹೊತ್ತಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ನಮ್ಮ ಮಕ್ಕಳು ದೊಡ್ಡವರಾಗಿರುತ್ತಾರೆ. ಅವರಿಗೆ ಅದು ಬೇಕಾಗಿಯೂ ಇರುವುದಿಲ್ಲ. ಕನ್ನಡ ಮಾಧ್ಯಮದಲ್ಲೇ ಓದಿ ಬಂದಿರುವ ನಮಗೆಂದಾದರೂ ಟಿ.ವಿ.ಯ ಮೆನುವಿನಲ್ಲಿ, ವಾಶಿಂಗ್ ಮೆಷೀನ್‌ನ ಮೆನುವಿನಲ್ಲಿ ಕನ್ನಡ ಬೇಕು ಅನ್ನಿಸಿದ್ದಿದೆಯೇ?

ಈ ಪ್ರಶ್ನೆಗೆ ನಾವೇನು ಉತ್ತರ ಕಂಡುಕೊಳ್ಳುತ್ತೇವೆ ಎಂಬುದು ‘ಕನ್ನಡವನ್ನು ತಂತ್ರಜ್ಞಾನದಲ್ಲಿ ಪ್ರಸ್ತುತವಾಗಿಸುವ’ ಮಟ್ಟಿಗೆ ಬಹಳ ಮುಖ್ಯವಾಗುತ್ತದೆ. ಕನ್ನಡದಲ್ಲಿ ಬಳಕೆದಾರರ ಕೈಪಿಡಿಯನ್ನೂ ಕೊಡದ ಅನೇಕ ಕಂಪೆನಿಗಳ ಉಪಕರಣಗಳನ್ನು ಇಂಗ್ಲಿಷ್‌ನ ಅರಿವೇ ಇಲ್ಲದ ನಮ್ಮ ಅನೇಕ ತಾಯಂದಿರು ಬಳಸುತ್ತಿಲ್ಲವೇ? ಈಗೇಕೆ ಅದರ ಬಗ್ಗೆ ಯೋಚನೆ ಎಂಬುದು ನಮ್ಮ ಉತ್ತರವಾಗಿದ್ದರೆ ಅದೇ ನಮ್ಮ ಸಮಸ್ಯೆ ಮತ್ತು ಅದರ ಪರಿಹಾರಗಳೆರಡನ್ನೂ ಸೂಚಿಸುತ್ತಿರುತ್ತದೆ.

ಇಂಗ್ಲಿಷ್ ಗೊತ್ತಿಲ್ಲದೆ ಇಂಗ್ಲಿಷ್ ಮೆನು ಹೊಂದಿರುವ ಟಿ.ವಿ. ವಾಶಿಂಗ್ ಮೆಶಿನ್, ಮಿಕ್ಸಿ ಇಂಥ ಯಾವುದನ್ನು ಬೇಕಾದರೂ ಬಳಸಬಹುದು. ಅಂದರೆ ಈ ಯಂತ್ರಗಳಲ್ಲಿರುವ ಮೆನುವಿನಲ್ಲಿರುವ ಭಾಷೆ ಅವರಿಗೆ ಮುಖ್ಯವೇ ಆಗಿಲ್ಲ. ನಿರ್ದಿಷ್ಟ ನಾಬ್ (Knob) ಅನ್ನು ನಿರ್ದಿಷ್ಟ ರೀತಿಯಲ್ಲಿ ತಿರುಗಿಸಿದರೆ ಏನಾಗುತ್ತದೆ ಎಂಬುದು ಅವರಿಗೆ ಗೊತ್ತಿರುತ್ತದೆ. ನಿರ್ದಿಷ್ಟ ಆಯ್ಕೆಯನ್ನು ಆರಿಸಿಕೊಂಡರೆ ಅದರ ಪರಿಣಾಮವೇನು ಎಂಬುದರ ಅರಿವು ಅವರಿಗಿರುತ್ತದೆ.

ಇಂಥ ಎಲ್ಲಾ ಯಂತ್ರಗಳಲ್ಲಿರುವುದು ನೆನಪಿನಲ್ಲಿ ಇಟ್ಟುಕೊಳ್ಳಬಹುದಾದಷ್ಟು ಆಯ್ಕೆಗಳು. ಟಿ.ವಿ.ಯ ಮೆನುವಿನಲ್ಲಿ ಇವುಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟಿದ್ದರೂ ಒಂದಕ್ಕೊಂದು ಸಂಬಂಧಕಲ್ಪಿಸಿ ನೆನಪಿಟ್ಟುಕೊಳ್ಳುವುದರಿಂದ ಅದೂ ಕಷ್ಟವಾಗುವುದಿಲ್ಲ.

ಇದನ್ನು ಇನ್ನೂ ಒಂದು ಸರಳ ಉದಾಹರಣೆಯಲ್ಲಿ ವಿವರಿಸಬಹುದು. ಸ್ಮಾರ್ಟ್ ಫೋನ್‌ನ ಮೆನುವಿನಲ್ಲಿರುವ ಪಠ್ಯದ ಕುರಿತು ಏನೇನೂ ಅರಿಯದ ಪುಟ್ಟ ಮಕ್ಕಳು ದೊಡ್ಡವರಿಗಿಂತ ಚೆನ್ನಾಗಿ ಅದನ್ನು ಬಳಸುತ್ತಾರೆ. ತಮಗೆ ಬೇಕಿರುವ ಗೇಮ್‌ಗಳನ್ನು ಆಡುತ್ತಾರೆ. ಎಷ್ಟೋ ಬಾರಿ ಹಿರಿಯರಿಗೆ ಹೇಳಿಕೊಡುವಷ್ಟು ತಜ್ಞತೆಯನ್ನೂ ಪಡೆದಿರುತ್ತಾರೆ. ಇದೆಲ್ಲಾ ಹೇಗೆ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಅರೆ ಕ್ಷಣ ಯೋಚಿಸಿದರೆ ಅದನ್ನು ಕನ್ನಡಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯೊಂದನ್ನು ದುಡಿಸಿಕೊಂಡರೆ ‘ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಪ್ರಸ್ತುತವಾಗಿಸುವ’ ಕೆಲಸ ಬಹಳ ಸುಲಭವಾಗುತ್ತದೆ.

ಕಂಪ್ಯೂಟರ್ ತಂತ್ರಜ್ಞಾನ ಎಂಬುದು ಉಳಿದ ತಂತ್ರಜ್ಞಾನಗಳಂತಲ್ಲ. ಇದರಲ್ಲಿ ಹಾರ್ಡ್‌ವೇರ್‌ನಷ್ಟೇ ಮುಖ್ಯವಾದುದು ಸಾಫ್ಟ್‌ವೇರ್ ಕೂಡಾ. ಮಿಕ್ಸಿ ಅಥವಾ ಅಂಥ ಇತರ ಯಾವುದೇ ಉಪಕರಣಗಳಲ್ಲಿರುವ ಹಾರ್ಡ್‌ವೇರ್ ಅನ್ನು ಅರ್ಥಮಾಡಿಕೊಳ್ಳುವುದು ಸುಲಭ. ಅದನ್ನು ಬಿಚ್ಚಿಟ್ಟರೆ ಯಾವ ಭಾಗ ಹೇಗೆ ತಿರುಗತ್ತದೆ. ಅದು ಮತ್ತೇನನ್ನು ತಿರುಗಿಸುತ್ತದೆ ಎಂಬುದೆಲ್ಲಾ ತಿಳಿಯುತ್ತದೆ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಪೋನ್ ಬಿಚ್ಚಿಟ್ಟರೆ ಇಷ್ಟು ಸುಲಭದಲ್ಲಿ ಅರ್ಥವಾಗುವಂಥದ್ದೇನೂ ಅಲ್ಲಿರುವುದಿಲ್ಲ. ಇನ್ನು ಸಾಫ್ಟ್‌ವೇರ್ ಅದು ಮತ್ತೊಂದು ನಿಗೂಢ ತರ್ಕಗಳ ಲೋಕ. ಇವುಗಳನ್ನು ರೂಪಿಸುವುದಕ್ಕೆ ಬಳಸುವ ತರ್ಕಬದ್ಧ ಆದೇಶಗಳನ್ನು ರೋಮನ್ ಅಕ್ಷರದಲ್ಲಿ ಬರೆಯಲಾಗುತ್ತದೆ ಎಂಬುದು ನಿಜವಾದರೂ ಅದನ್ನು ‘ಇಂಗ್ಲಿಷ್ ಭಾಷೆ’ಯಲ್ಲಿ ಬರೆಯಲಾಗುವುದಿಲ್ಲ. ಕೆಲವು ಆದೇಶಗಳು ಇಂಗ್ಲಿಷ್ ಭಾಷೆಯಲ್ಲಿ ನಿರ್ದಿಷ್ಟ ಅರ್ಥವನ್ನು ಧ್ವನಿಸುತ್ತದೆಯಾದರೂ ಅದನ್ನು ನಮ್ಮ ಮಕ್ಕಳು ಸ್ಮಾರ್ಟ್‌ಪೋನ್ ಬಳಸುವುದನ್ನು ಕಲಿಯುವ ತರ್ಕದಲ್ಲೇ ಕಲಿಯಬಲ್ಲರು.

ಅವರು ಹೀಗೆ ಕಲಿಯುವುದಕ್ಕೆ ಶಾಲೆಯಲ್ಲಿ ಕಂಪ್ಯೂಟರ್ ಇರಬೇಕಾಗಿಲ್ಲ. ಅಷ್ಟೇಕೆ ಸ್ಮಾರ್ಟ್ ಫೋನ್ ಕೂಡಾ ಇರಬೇಕಾಗಿಲ್ಲ. ಅದಕ್ಕೆ ಬೇಕಿರುವುದು ಅವರೊಳಗಿನ ಕುತೂಹಲಕ್ಕೆ ಒಂದಷ್ಟು ನೀರೆರೆದು ಗೊಬ್ಬರ ಹಾಕುವ ಕೆಲಸ ಮಾಡಬೇಕು. ಅವರು ನಿತ್ಯ ತೊಡಗಿಕೊಳ್ಳುವ ಕೆಲಸದಲ್ಲಿ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅಕ್ಕ ಅಥವಾ ಮಾವನ ಬಳಿ ಇರುವ ಸ್ಮಾರ್ಟ್ ಫೋನ್ ಹೇಗೆ ಬಳಕೆಯಾಗಬಹುದು ಎಂಬುದನ್ನು ಮೊದಲಿಗೆ ಕಲಿಸಬೇಕು. ಈ ಹಂತದಲ್ಲಿ ಸಹಜವಾಗಿಯೇ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಮಕ್ಕಳೊಳಗೆ ಜನಿಸುತ್ತದೆ. ಈ ಹಂತದ ನಂತರ ಸಣ್ಣದೊಂದು ಆ್ಯಪ್ ರೂಪಿಸುವುದಕ್ಕೆ ಬೇಕಿರುವ ತರ್ಕಬದ್ಧ ಆದೇಶಗಳ ಕುರಿತು ಹೇಳಿಕೊಟ್ಟರೆ ಅದನ್ನು ಪ್ರಯೋಗಿಸುವುದಕ್ಕೆ ಬೇಕಿರುವ ಫೋನ್ ಅಥವಾ ಕಂಪ್ಯೂಟರನ್ನು ಮಕ್ಕಳು ಹುಡುಕಿಕೊಳ್ಳುತ್ತಾರೆ.

ನಿಜವಾದ ಕನ್ನಡದ ಕೆಲಸ ಆರಂಭವಾಗುವುದು ಈ ಹಂತದಲ್ಲಿ. ಮಕ್ಕಳು ತಾವು ರೂಪಿಸುವ ತಂತ್ರಾಂಶದ ಮೆನುವನ್ನು ಖಂಡಿತವಾಗಿಯೂ ಇಂಗ್ಲಿಷ್ ನಲ್ಲಿ ರೂಪಿಸುವುದಿಲ್ಲ. ಏಕೆಂದರೆ ಅದು ಮಾಡುವ ಕೆಲಸವನ್ನು ಅವರಿಗೆ ವಿವರಿಸಲು ಸಾಧ್ಯವಿರುವುದು ಕನ್ನಡದಲ್ಲಿ ಮಾತ್ರ. ಸಹಜವಾಗಿಯೇ ಮೆನು ಕನ್ನಡದಲ್ಲಿರುತ್ತದೆ. ಅದನ್ನು ರೂಪಿಸುವ ವಿಧಾನವನ್ನು ಅವರು ಕಲಿತಿರುವುದೂ ಕನ್ನಡದ ಮೂಲಕವೇ. ‘ಕನ್ನಡದಲ್ಲಿ ಜ್ಞಾನಸೃಷ್ಟಿ’ ಎಂಬ ಬಹಳ ಸಂಕೀರ್ಣವಾದ ಪರಿಕಲ್ಪನೆಯ ಬಗ್ಗೆ ತಲೆಕೆಡಿಸಿಕೊಳ್ಳದೆಯೇ ಅವರು ಕನ್ನಡವನ್ನು ಜ್ಞಾನಾಧಾರಿತ ಉತ್ಪನ್ನವೊಂದನ್ನು ಸೃಷ್ಟಿಸುವ ಭಾಷೆಯನ್ನಾಗಿ ಮಾರ್ಪಡಿಸಿರುತ್ತಾರೆ.

ಇದೇನು ಆದರ್ಶವಾದಿ ತರ್ಕವಲ್ಲ. ಫಿನ್ಲೆಂಡ್‌ನ ಶಾಲೆಗಳ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಇದನ್ನು ಮಾಡಿ ತೋರಿಸಿವೆ. ಕನ್ನಡಕ್ಕೂ ಫಿನ್ನಿಶ್ ಭಾಷೆಗೂ ಇರುವ ಏಕೈಕ ವ್ಯತ್ಯಾಸವೆಂದರೆ ಫಿನ್ನಿಶ್ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲಾಗುತ್ತದೆ. ಆ ಭಾಷೆಯ 26 ಅಕ್ಷರಗಳನ್ನು ನಮ್ಮ ಮಕ್ಕಳಿಗೆ ಬಹಳ ಸಣ್ಣ ವಯಸ್ಸಿಗೆ ನಾವೂ ಕಲಿಸಿರುತ್ತೇವೆ. ಫಿನ್ಲೆಂಡ್‌ನ ಮಕ್ಕಳು ಕಂಪ್ಯೂಟರ್ ಪ್ರೋಗ್ರಾಮಿಂಗ್ ಅನ್ನು ಬಹಳ ಸಣ್ಣ ವಯಸ್ಸಿಗೇ ಕಲಿಯುತ್ತಾರೆ. ಆದರೆ ಅದು ಶಾಲೆಯಲ್ಲಿ ಒಂದು ವಿಷಯವಲ್ಲ. ಅದು ಅವರು ಕಲಿಯುವ ಇತರ ವಿಷಯಗಳ ಭಾಗವಾಗಿ ಬರುತ್ತದೆ. ತಂತ್ರಜ್ಞಾನವನ್ನು ನಿರ್ದಿಷ್ಟ ಸಂದರ್ಭಕ್ಕೆ ಅನ್ವಯಿಸಿ ಕಲಿಯುತ್ತಾ ಹೋಗುತ್ತಾರೆ. ಹೀಗೆ ಕಲಿತಾಗಲಷ್ಟೇ ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಲೀನಕ್ಸ್‌ನಂಥ ಆಪರೇಟಿಂಗ್ ಸಿಸ್ಟಂ ಅನ್ನು ರೂಪಿಸಿದ್ದು ಒಬ್ಬ ಫಿನ್ನಿಶ್ ವಿದ್ಯಾರ್ಥಿ ಎಂಬುದನ್ನು ನೆನಪಿಸಿಕೊಂಡರೆ ತಂತ್ರಜ್ಞಾನ ಶಿಕ್ಷಣದಲ್ಲಿ ಫಿನ್ಲೆಂಡ್ ಇಟ್ಟ ಹೆಜ್ಜೆಗಳು ಎಷ್ಟು ದೃಢವಾದವು ಎಂಬುದು ಅರ್ಥವಾಗುತ್ತದೆ. ಕನ್ನಡದ ಸಂದರ್ಭದಲ್ಲಿಯೂ ಇಂಥ ದೃಢಹೆಜ್ಜೆಗಳನ್ನು ಇಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.