ಕಬ್ಬಿನ ಲಾರಿ ಕೊಟ್ಟ ಸಿಹಿ ಊಟ

7

ಕಬ್ಬಿನ ಲಾರಿ ಕೊಟ್ಟ ಸಿಹಿ ಊಟ

Published:
Updated:

ನಮ್ಮೂರಿನ ಮೂಲಕ ಕಬ್ಬಿನ ಲಾರಿಗಳು ಭದ್ರಾವತಿ ಫ್ಯಾಕ್ಟರಿಗೆ ಹೋಗುತ್ತಿದ್ದವು. ನಮ್ಮೂರ ಸುತ್ತಮುತ್ತ ಕಬ್ಬುಗಿಬ್ಬು ಬೆಳೆಯುತ್ತಿರಲಿಲ್ಲ. ಈ ಕಾರಣಕ್ಕೆ ನಮಗದು ಅಪರೂಪದ ವಸ್ತು ಎನಿಸಿತ್ತು. ನಾವು ಶಾಲೆಗೆ ಹೋಗುವ ದಾರಿಯಲ್ಲೇ ಕಬ್ಬಿನ ಲಾರಿಗಳು ಓಡಾಡುತ್ತಿದ್ದವು. ನಮಗೋ ಕಬ್ಬೆಂದರೆ ಪಂಚಪ್ರಾಣ. ಏನೇನೋ ತಿನ್ನಬೇಕು ಎನ್ನುವ ವಯಸ್ಸಲ್ಲವೇ ಅದು! ಆದರೆ, ನಮ್ಮ ಜೇಬಿಗೋ, ನಯಾಪೈಸೆ ಮಡಗಿಕೊಳ್ಳುವಷ್ಟೂ ಯೋಗ್ಯತೆ ಇರಲಿಲ್ಲ.ಹೀಗಾಗಿ, ಬಿಟ್ಟಿಯಾಗಿ ಸಿಗೋ ಯಾವುದನ್ನೂ ಬಿಡುತ್ತಿರಲಿಲ್ಲ. ಊರಲ್ಲಿನ ಮದುವೆ, ತಿಥಿ ಊಟಗಳೆಲ್ಲವೂ ನಮ್ಮ ಹಕ್ಕಾಗಿದ್ದವು. ವಿಶೇಷ ಆಮಂತ್ರಣದ ಅಗತ್ಯವೂ ನಮಗಿರಲಿಲ್ಲ. ನಾವೇ ಹುಡುಕಿಕೊಂಡು ಹೋಗಿ ಸೇಡು ತೀರಿಸಿಕೊಳ್ಳುತ್ತಿದ್ದೆವು. ಈ ಕೆಲಸಕ್ಕೇ ನಮ್ಮ ಗ್ಯಾಂಗು ಸದಾ ಸಿದ್ಧವಿರುತ್ತಿತ್ತು. ಹೇಳಿಕೇಳಿ ನಾವು ಸರ್ಕಾರಿ ಶಾಲೆಯ ಬಡ ಮಕ್ಕಳಲ್ಲವೇ?ಈ ಕಬ್ಬಿನ ಲೋಡು ಲಾರಿಗಳು ಬಸರಿ ಹೆಂಗಸಿನಂತೆ ನಿಧಾನವಾಗಿ ಹೋಗುತ್ತಿದ್ದವು. ಅದರಲ್ಲೂ ನಮ್ಮ ಶಾಲೆಯ ಎದುರಿನ ರಸ್ತೆ ಎತ್ತರವಾಗಿತ್ತು.  ಅವುಗಳ ವೇಗ ಅಲ್ಲಿ ಮತ್ತಷ್ಟೂ ತಗ್ಗುತ್ತಿತ್ತು. ಉಬ್ಬಸದವರ ಹಾಗೆ ಕೆಮ್ಮುತ್ತಾ, ಗ್ಯಾಸ್ಟ್ರಿಕ್ ಇದ್ದವರ ಹಾಗೆ ಬುಸ್ ಎಂದು ಹೊಗೆ ಬಿಡುತ್ತಾ, ಅತಿ ನಿಧಾನವಾಗಿ ಚಲಿಸುತ್ತಿದ್ದವು. ಇದು ನಮಗೆ ವರದಾನವಾಗಿತ್ತು. ರೀಸಸ್ ಲೀಝರ್‌ಗೆ ಬಿಟ್ಟಾಗ ಈ ಲಾರಿಗಳೇನಾದರೂ ಕಂಡರೆ ಬೆನ್ನತ್ತಿ ಬಿಡುತ್ತಿದ್ದೆವು. ಅವುಗಳ ಹಿಂದೆ ಓಡಿ ಹೋಗಿ ಕಬ್ಬನ್ನು ಮುರಿದು ತಿನ್ನುವುದೇ ಆಗೊಂದು ಶೋಕಿಯಾಗಿತ್ತು.ಲಾರಿಯವರು ಕಬ್ಬಿನ ಹೊರೆಗಳಿಗೆ ಬಾವಿ ಹಗ್ಗ ಬಿಗಿದಿರುತ್ತಿದ್ದರು. ಇಷ್ಟು ಗಟ್ಟಿಯಾಗಿ ಕಟ್ಟಿದ್ದರೆ ಕಬ್ಬನ್ನು ಮುರಿದು ತೆಗೆಯುವುದು ಬಲು ತ್ರಾಸಿನ ಕೆಲಸ. ಕಬ್ಬು ಅಷ್ಟು ಸುಲಭಕ್ಕೆ ಕಿತ್ತುಕೊಂಡು ಬರುವುದಿಲ್ಲ. ಈ ಗಡಿಬಿಡಿಯಲ್ಲಿ ಕಬ್ಬಿನ ಸಿಬಿರು ಚುಚ್ಚಿದರಂತೂ ರಕ್ತವೇ ಕಿತ್ತು ಬರುತ್ತದೆ. ಅದರಲ್ಲೂ ಚಲಿಸುವ ಲಾರಿಯ ಬೆನ್ನತ್ತಿ ಕಬ್ಬು ಕೀಳುವುದಂತೂ ದುಸ್ಸಾಹಸವೇ ಸರಿ. ನಾನು ನನ್ನ ಗೆಳೆಯರು ಇಂಥದ್ದೆಲ್ಲಾ ಮಾಡಲು ಹೋಗಿ ಜಾರಿ ಬಿದ್ದು ಮಂಡಿ, ಮುಸುಡಿ ಒಡೆದುಕೊಂಡಿದ್ದೆವು. ಆದರೂ ನಮಗೆ ಬುದ್ಧಿ ಬಂದಿರಲಿಲ್ಲ.ಲಾರಿಯ ಮೈಯಿಂದ ಹೊರಗೆ ಚಾಚಿದ ಒಂದೆರಡು ಗಣ್ಣಿನ ತುಂಡು ಕಬ್ಬುಗಳನ್ನಷ್ಟೇ ನಾವು ಕೀಳಲು ಸಾಧ್ಯವಾಗುತ್ತಿತ್ತು. ಆ ಸಣ್ಣ ತುಂಡುಗಳನ್ನೇ ಜಜ್ಜಿ ಹಂಚಿ ತಿನ್ನುತ್ತಿದ್ದೆವು. ಆ ತುಣುಕುಗಳು ಒಂದು ಬಾಯಿಗೂ ಸಾಕಾಗುತ್ತಿರಲಿಲ್ಲ. ಹೀಗಾಗಿ, ಲಾರಿಯ ಮೇಲತ್ತಿ ಕಬ್ಬಿನ ಉದ್ದುದ್ದ ಕೋಲುಗಳನ್ನು ಕದಿಯುವ ಕೆಲಸ ಮಾಡತೊಡಗಿದೆವು.  ನಮ್ಮ ಅದೃಷ್ಟಕ್ಕೆ ನಮ್ಮ ಶಾಲೆಯ ಏರುದಾರಿ ಮುಗಿಯುವ ತುದಿಯಲ್ಲಿ ಮಲಯಾಳಿ ಕಾಕನ ಹೋಟೆಲಿತ್ತು. ಕೆಲ ಲಾರಿ, ಬಸ್ಸು, ಕಾರುಗಳು ಅಲ್ಲಿ ಟೀ, ತಿಂಡಿಗೆಂದು ನಿಲ್ಲುತ್ತಿದ್ದವು.ಆ ಜಾಗಕ್ಕೆ ಕಬ್ಬಿನ ಲಾರಿ ಬಂದು ನಿಂತಿತೆಂದರೆ ನಮಗೆ ಬಂಪರ್ ಲಾಟರಿ. ಲಾರಿ ಹತ್ತಿ ಕಬ್ಬನ್ನು ಕಿತ್ತು ಬಿಡುತ್ತಿದ್ದೆವು. ನಮ್ಮ ಈ ದಂಧೆ  ಹೀಗೆ ಸಲೀಸಾಗಿ ನಡೆಯುವಾಗ ಒಂದು ದಿನ... ‘ಥೂ ಬೇವರ್ಸಿ, ಈ ಕಬ್ಬಿನ್ ಟ್ರಿಪ್ಪಿಗೆ ಮಾತ್ರ ಬರಬಾರ್‍್ದು ಕಣೋ. ಈ ___ ಮಕ್ಕಳು ಇಸ್ಕೂಲ್ ಹುಡುಗ್ರೂದು ಕಾಟ ಜಾಸ್ತಿ. ಮಾನ ಮರ್ಯಾದೆ ಬಿಟ್ಬಿಟ್ಟಿ ಕಬ್ಬುಗೆ ಕೀಳ್ತಾವೆ. ದಾರಿ ಗಂಟ ಹುಡುಗ್ರು ಹಿಂಗ್ ದನಾಗೆ ತಿಂದಂಗೆ ತಿಂದ್ ಬಿಟ್ರೆ ನಾವು ಫ್ಯಾಕ್ಟರಿ ಯಜಮಾನಂಗೆ ಏನ್ ಜವಾಬು ಕೊಡ್ಬೇಕು ಹೇಳು. ಈ ಊರ್‍್ದು ಶಾಲೇದು ಹುಡುಗ್ರು ಪಕ್ಕಾ ನಮ್ಮಕ್‌ಹರಾಮ್ ನನ್ಮಕ್ಕಳು ಕಣೋ. ಮೈಗೆ ಮರತ್ರೆ ಮುಂಡಾನೇ ಮೋಚ್ ಬಿಡ್ತಾವೆ. ಹುಶಾರಾಗಿರು.ಕೈಗೆ ಸಿಕ್ಬಿಟ್ರೆ ಮೂತಿ ನೋಡ್ದೆ ಚಚ್ಚಿ ಹಾಕ್ಬಿಡು.  ಈ ಸೈತಾನ್‌ಗಳ ಕಾಟದಲ್ಲಿ ನೆಟ್ಟಗೆ ನಾಸ್ಟನೂ ಮಾಡಂಗಿಲ್ಲ’ ಎಂದು ಡ್ರೈವರಪ್ಪ ಕ್ಲೀನರ್‌ಗೆ ಎಚ್ಚರಿಸುತ್ತಿದ್ದ. ಹೀಗೆ ಮಾತಾಡುತ್ತಿದ್ದ ಅವರಿಬ್ಬರು ಹೋಟೆಲೊಳಗೆ ತೊಲಗುವುದನ್ನೇ ಕಾಯುತ್ತಿದ್ದೆವು.  ನನ್ನ ದುರಾದೃಷ್ಟವೋ ಏನೋ ಗೊತ್ತಿಲ್ಲ. ಮಾಮೂಲಿಯಾಗಿ ಲಾರಿ ಹತ್ತುವ ಓಂಕಾರಿ ಅವತ್ತು ರಜೆಯಲ್ಲಿದ್ದ. ಹೀಗಾಗಿ, ಗೆಳೆಯರೆಲ್ಲಾ ಸೇರಿ ಮುಖ್ಯ ದರೋಡೆಕೋರನ ಪಟ್ಟವನ್ನು ನನಗೇ ಕಟ್ಟಿದರು.‘ಲೇ ಕಲಿ, ಇವತ್ತು ನೀನು ಲಾರಿ ಹತ್ತು. ಉದ್ದುದ್ದ ಕಬ್ಬನ್ನ ಆ ಸೈಡಿನಿಂದ ಎಳೆದೆಳೆದು ಬಿಸಾಕು. ನಾವು ಎತ್ಕೊಂಡು ಹೋಗಿ ಸ್ಟಾಕ್ ಮಾಡ್ತೀವಿ. ಆಮೇಲೆ ಮಾಮೂಲಿಯಂಗೆ ಹಿಸ್ಸೆ ಮಾಡ್ಕೊಳ್ಳೋಣ. ಪ್ಲೀಸ್ ಇವತ್ತು ನೀನೆ ಹತ್ತಮ್ಮ’ ಎಂದು ಹುರಿದುಂಬಿಸಿದರು. ಅವರ ಮಾತಿನಿಂದ ಭಂಡಧೈರ್ಯ ಬಂದು ಸರಿ ಆಯ್ತೆಂದು ಒಪ್ಪಿಕೊಂಡೆ. ಡ್ರೈವರ್, ಕ್ಲೀನರ್ ಬರೋದನ್ನ ನೋಡಲು ಕೇಶವನ ಕಣ್ಣನ್ನು ಕಾವಲಿಗೆ ಇಟ್ಟಿದ್ದೆವು. ಲಾರಿಯ ಒಂದು ಬದಿಯಿಂದ ಹಗ್ಗ ಹಿಡಿದ ನಾನು ಚಕಚಕ ಮೇಲೆ ಹತ್ತಿಬಿಟ್ಟೆ. ಕಬ್ಬಿನ ರಾಶಿಯೇ ಅಲ್ಲಿ ಬಾಯಿ ತೆರೆದು ನನಗಾಗಿ ಕಾಯುತ್ತಿತ್ತು.ಎಳೆಎಳೆದಂತೆ ಉದ್ದುದ್ದ ಕಬ್ಬಿನ ಕೋಲುಗಳು ಕಿತ್ತು ಬಂದವು. ಕೆಳಗೋ, ನನ್ನ ಗೆಳೆಯರ ಗುಂಪು ತಕಪಕ ಕುಣಿಯುತ್ತಿದ್ದರು. ಕಬ್ಬನ್ನು ಎಳೆದೆಳೆದು ಅವರತ್ತ ಎಸೆದೆ. ಎಲ್ಲವನ್ನೂ ಬಾಚಿಕೊಂಡರು. ಒಬ್ಬೊಬ್ಬರೂ ಒಂದೊಂದು ಕಬ್ಬಿನ ಹೊರೆ ಮಾಡಿಕೊಂಡರು. ನನಗಾಗಿ ಕಾಯುತ್ತಾರೆ ಎಂದುಕೊಂಡರೆ, ಕಳ್ಳರು ಮತ್ತಗೆ ಅಲ್ಲಿಂದ ಕಂಬಿಕಿತ್ತರು. ಇನ್ನು ಇಳಿಯೋಣ ಎನ್ನುವಷ್ಟರಲ್ಲಿ ನನ್ನೂರಿನ ಹಿರಿತಲೆಯ ಜನ ಕಾಣಿಸಿಕೊಂಡರು. ನನ್ನ ಕಳ್ಳತನ ನೋಡಿ ಅವರು ಬೈದು ಬುದ್ಧಿ ಹೇಳುತ್ತಾರೆ ಎಂದು ಭಾವಿಸಿದೆ. ಆದರೆ, ಅವರೆಷ್ಟು ಒಳ್ಳೆಯವರೆಂದರೆ ಬೈಯುವ ಬದಲು ನನ್ನ ಕಳ್ಳತನಕ್ಕೆ ಬೆಂಬಲ ಸೂಚಿಸಿದರು. ‘ನಮ್ಮ ಕಡೆಗೂ ಒಂದಿಷ್ಟು ಕಿತ್ತು ಬಿಸಾಕಪ್ಪ’ ಎಂದು ಮಕ್ಕಳಂತೆ ಕೇಳತೊಡಗಿದರು.ಅದೇ, ಹಿಗ್ಗಿನಿಂದ ಮತ್ತಷ್ಟು ಸ್ಫೂರ್ತಿಗೊಂಡು ಕಬ್ಬಿನ ಕೋಲುಗಳನ್ನು ಎಳೆದೆಳೆದು ಕೆಳಗೆ ನಿಂತು ಅಂಗಲಾಚುವ ಜನರ ಕಡೆಗೆ ಎಸೆಯತೊಡಗಿದೆ. ಕಬ್ಬಿನ ಜಲ್ಲೆ ಸಿಕ್ಕವರೆಲ್ಲಾ ಸಿಕ್ಕಾಪಟ್ಟೆ ಸಂಭ್ರಮಪಟ್ಟರು. ಪುಕ್ಸಟ್ಟೆ ಮಾಲು ಸಿಕ್ಕಾಗ ಜನ ಅದೆಷ್ಟು ಸಂತೋಷ ಪಡುತ್ತಾರೆ ಅನ್ನೋದು ನನಗೆ ಗೊತ್ತಾಗಿದ್ದು ಆಗಲೇ. ಒಂದೇ ಬೇಸರವೆಂದರೆ, ಕಬ್ಬು ಪಡೆದ ಯಾವ ಫಲಾನುಭವಿಯೂ ಒಂದು ಸಣ್ಣ ಕೃತಜ್ಞತೆಯನ್ನೂ ನನಗೆ ಸಲ್ಲಿಸಲಿಲ್ಲ. ಕಬ್ಬು ಸಿಕ್ಕಂತೆ ಜಾಗ ಖಾಲಿ ಮಾಡಿದರು.ಮುಖ್ಯ ದರೋಡೆಕೋರನಾದ ನನಗೆ ಕೆಳಗೊಂದು ಭರ್ಜರಿ ಪಾಲೇ ಕಾಯ್ತಾ ಇರುತ್ತೆ ಅಂತ ತಪ್ಪಾಗಿ ಊಹಿಸಿಕೊಂಡಿದ್ದೆ. ನೋಡಿದರೆ ನನ್ನ ದುಶ್ಮನ್ ಗೆಳೆಯರೂ ನಾಪತ್ತೆಯಾಗಿದ್ದರು. ಅಷ್ಟರಲ್ಲಿ ಲಾರಿ ಹತ್ರ ಏನೋ ಗದ್ದಲವಾಗುತ್ತಿದೆ ಎಂದು ಡ್ರೈವರ್ ಮತ್ತು ಕ್ಲೀನರ್ ಹೋಟೆಲ್ಲಿನಿಂದ ಈಚೆಗೆ ಬಿರುಗಾಳಿಯಂತೆ ಓಡಿ ಬಂದರು. ಕಣ್ಣೆದುರಿಗೇ ನಡೀತಿದ್ದ ಹಗಲು ದರೋಡೆ ನೋಡಿದ ಅವರಿಬ್ಬರೂ ಕರೆಂಟ್ ಹೊಡೆದ ಕಾಗೆಗಳಂತೆ ನಿಂತುಬಿಟ್ಟರು.ಸುತ್ತ ನೆರೆದು ಕಬ್ಬು ಜಗಿಯುತ್ತಿದ್ದ, ಕೆಳಗಡೆಯಿಂದ ನನ್ನ ದರೋಡೆಗೆ ಪ್ರೋತ್ಸಾಹ ಕೊಡುತ್ತಿದ್ದ ತಲೆಗಳಿಗೆಲ್ಲಾ ಹಲ್ಕಾಭಾಷೆ ಬಳಸಿ ಬೈದು ಓಡಿಸಿದರು. ಲಾರಿ ಮೇಲೆ ನಿಂತು ವೀರಾಧಿವೀರನಂತೆ ಪೋಸು ಕೊಡುತ್ತಿದ್ದ ನನ್ನ ಜಂಘಾಬಲವೇ ಅವರ ಕೆಂಗಣ್ಣು ಕಂಡು ಕುಸಿದು ಹೋಯಿತು. ಅವರು ನನ್ನ  ಹಿಡಿದು ನುರಿಯುವುದು ನೂರಕ್ಕೆ ನೂರು ಖಾತ್ರಿ ಎನಿಸಿತು.ಲಾರಿ ಮೇಲೆ ದಾನಶೂರ ಕರ್ಣನಂತೆ ನಿಂತಿದ್ದ ನನ್ನನ್ನು ಒಮ್ಮೆ ಡ್ರೈವರಪ್ಪ ಹಾಗೂ ಕ್ಲೀನರಣ್ಣ ಇಬ್ಬರೂ ಕೆಕ್ಕರಿಸಿ ನೋಡಿದರು. ಅವರ ಮುಖದಲ್ಲಿ ಸಿಟ್ಟು ಹೊಗೆಯಾಡುತ್ತಿತ್ತು. ಇಬ್ಬರ ಮುಖದಲ್ಲಿ ಕರುಣೆ ಗಿರಣೆ ಏನಾದರೂ ಉಕ್ಕಬಹುದಾ ಎಂದು ನೋಡಿದೆ. ಊಹ್ಞೂ ಅದರ ಸಣ್ಣ ಸುಳಿವೂ ಕಾಣುತ್ತಿರಲಿಲ್ಲ. ಲಾರಿಯ ಯಾವ ಕಡೆಯಿಂದ ನಾನು ಕೆಳಗಿಳಿದು ಓಡಲೆತ್ನಿಸಿದರೂ ಅವರ ಕೈಗೆ ಸಿಕ್ಕಿ ಬೀಳುತ್ತಿದ್ದೆ. ಹೀಗಾಗಿ ಏನು ಮಾಡಬೇಕು ಅನ್ನೋದೇ ತೋಚಲಿಲ್ಲ.ಪುಕ್ಸಟ್ಟೆ ಕಬ್ಬು ತಿಂದವರು ಏನಾದರೂ ನನ್ನ ಸಹಾಯಕ್ಕೆ ಬರಬಹುದಾ ಎಂದು ನೋಡಿದೆ. ಆದರೆ ಆ ಸಜ್ಜನರು ‘ಮುಖ ಏನ್ ನೋಡ್ತೀರಾ. ಆ ಕಳ್ಳನ್ಮಗಂಗೆ ಹಿಡಿದು ನಾಲ್ಕು ತದುಕ್ರಿ’ ಎಂದು ಡ್ರೈವರಪ್ಪನಿಗೆ ಪ್ರೋತ್ಸಾಹ ನೀಡತೊಡಗಿದರು. ‘ಎಲಾ ಪಾಪಿಗಳಾ’ ಎಂದು ಮನದಲ್ಲೇ ಬೈದುಕೊಂಡೆ. ಕೆಳಗೆ ರಪ್ಪಂತ ಹಾರೋಣ ಎಂದರೆ ನೆಲ ತುಂಬಾ ಆಳದಲ್ಲಿ ಕಾಣುತ್ತಿತ್ತು. ದೂರದಲ್ಲಿ ನನ್ನ ಗೆಳೆಯರು ಸೊಗಸಾಗಿ ನಿಂತುಕೊಂಡು ಕಬ್ಬನ್ನು ಕಚಪಚ ಎಂದು ಜಗಿಯುತ್ತಿದ್ದರು.ಈಗ ಹೊಡೆತ ಬೀಳುವುದು ಖಾತ್ರಿ ಅಂತಾದ ಮೇಲೆ ಕೆಳಗೆ ಇಳಿಯಲು ಹೋಗಲೇ ಇಲ್ಲ. ಕ್ಲೀನರ್ ಇಲ್ಲವೇ ಡ್ರೈವರ್‌ನೇ ಮೇಲತ್ತಿ ಬರಲಿ. ಆಗ ಮತ್ತೊಂದು ದಿಕ್ಕಿನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋದರಾಯಿತು ಎಂದು ಪ್ಲಾನ್ ಹಾಕಿಕೊಂಡೆ. ಅವರೋ ಬಲು ಬುದ್ಧಿವಂತರು. ಪರಸ್ಪರ ತಮ್ಮೊಳಗೆ ಏನೋ ಕಸಪಿಸ ಮಾತಾಡಿಕೊಂಡರು. ನಾನು ‘ನನ್ನ ಕ್ಷಮಿಸುವ ಇರಾದೆ ಅವರಿಬ್ಬರಿಗೂ ಬಂದಿರಲೂಬಹುದು. ಅವರಿಗೂ ಮಕ್ಕಳು ಮರಿ ಅಂತಿರಲ್ಲವೇ?’ ಎಂದುಕೊಂಡೆ. ಆದರೆ ಅದು ಹಾಗಾಗಿರಲಿಲ್ಲ. ಆ ಐನಾತಿಗಳಿಬ್ಬರು ದೊಡ್ಡ ಡೇಂಜರ್ ಪ್ಲಾನನ್ನೇ ರೂಪಿಸಿಕೊಂಡಿದ್ದರು.ಡ್ರೈವರ್ ತಕ್ಷಣ ಲಾರಿ ಹತ್ತಿದವನೆ ಗಾಡಿಯನ್ನು ಸ್ಟಾರ್ಟ್‌ಮಾಡಿ ಓಡಿಸಲು ಶುರುಮಾಡಿಕೊಂಡ. ನಾನು ಕೆಳಗೇ ಇಳಿಯದಂತೆ ಗದರಿಸುತ್ತಿದ್ದ ಕ್ಲೀನರ್ ಲಾರಿಯ ಜೊತೆಗೆ ಓಡುತ್ತಿದ್ದ. ನಾನು ಕೆಳಗೆ ಹಾರಲೂ ಅವಕಾಶ ಆಗದಂತೆ ನನ್ನೆಡೆಗೆ ಕಲ್ಲು ಬೀರುತ್ತಿದ್ದ. ಯಾವಾಗ ಲಾರಿಯ ವೇಗ ಕೊಂಚ ಹೆಚ್ಚಾಯಿತೋ ಆಗ ಕ್ಲೀನರ್ ಹಾರಿ ಲಾರಿಯೊಳಗೆ ಹತ್ತಿಕೊಂಡ. ಈಗ ಲಾರಿ ಸಾಕಷ್ಟು ಜೋರಾಗಿ ಓಡತೊಡಗಿತ್ತು. ಇನ್ನು ನಾನು ಇಳಿಯುವುದು ಸಾಧ್ಯವೇ ಇರಲಿಲ್ಲ. ಅಕ್ಷರಶಃ ನನ್ನನ್ನು ಕಿಡ್‌ನ್ಯಾಪ್ ಮಾಡಿದ್ದರು. ಲಾರಿಯ ವೇಗ ಹೆಚ್ಚಾದಂತೆ ನನ್ನ ಅಳುವೂ ತೀವ್ರವಾಗತೊಡಗಿತು. ಅಬ್ಬಬ್ಬೋ ಎಂದು ಕಿರುಚಿಕೊಂಡೆ. ‘ಡ್ರೈವರಣ್ಣ ನಿನ್ನ ಕಾಲಿಗೆ ಬೀಳ್ತೀನಿ ನಿಲ್ಲಿಸಪ್ಪ’ ಎಂದು ಅರಚಿದೆ. ಅವರಿಬ್ಬರು ನನ್ನ ಮುಹೂರ್ತ ನಿಶ್ಚಯಿಸಿಕೊಂಡಿದ್ದರು. ಊರಿಂದ ಸುಮಾರು ದೂರ ಸಾಗಿದ ಮೇಲೆ ಒಂದು ಕಡೆ ಲಾರಿಯನ್ನು ನಿಲ್ಲಿಸಿ ಚಕ್ಕಂತ ಕೆಳಗಿಳಿದರು. ಅವರ ಕೈಯಲ್ಲಿ ಸರಿಯಾದ ಎರಡು ಕೋಲುಗಳಿದ್ದವು. ದಾರಿಯಲ್ಲಿ ದನ, ಎಮ್ಮೆ ಅಡ್ಡ ಬಂದರೆ ಬಾರಿಸಲು ಇಟ್ಟುಕೊಂಡಿದ್ದ ಬಿದಿರಿನ ದೊಣ್ಣೆಗಳು ಅವೆಂದು ಕಾಣುತ್ತದೆ.‘ಕಬ್ಬು ಎಳೆದು ಊರಿಗೆಲ್ಲಾ ಹಂಚ್ತೀಯಾ. ನಿಮ್ಮಪ್ಪಂದು ನೀರು, ಗೊಬ್ಬರ ಹಾಕಿ ಬೆಳ್ಸಿದ್ದೆ ನೋಡು. ಇಳಿಯೋ ಕೆಳೀಕೆ’ ಎಂದು ಅರಚಾಡಿದರು. ಕೆಳಗಿನಿಂದ ಕಲ್ಲುಗಳನ್ನು ಎತ್ತಿಕೊಂಡು ನಾಯಿ ಕುನ್ನಿಗೆ ಹೊಡೆಯುವಂತೆ ನನ್ನತ್ತ ಬೀರತೊಡಗಿದರು. ಅವರ ಅಬ್ಬರಗಳಿಗೆ ನಲುಗಿ ಹೆದರುತ್ತಲೇ ಕೆಳಗಿಳಿದೆ. ಅವರಿಗೆ ಯಾವ ಥರದ ಸಿಟ್ಟಿತ್ತೋ ಗೊತ್ತಿಲ್ಲ. ಇಬ್ಬರೂ ಸೇರಿಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟರು. ನನ್ನ ರುಬ್ಬಿ ಸುಸ್ತಾದ ಅವರಿಬ್ಬರೂ ನೀರು ಕುಡಿದರು. ಆಗ ಒಂದಿಷ್ಟು ಮನುಷ್ಯರಾದರು. ‘ಓದೋ ಹುಡ್ಗ ಆಗಿ ಕಳ್ಳತನ ಮಾಡ್ತಿಯಲ್ಲ ನಾಚ್ಕೆ ಆಗಲ್ವಾ. ಇನ್ನೊಂದ್ ಸಲ ಕಬ್ಬಿನ ಲಾರಿ ತಂಟೆಗೆ ಬಂದ್ರೆ ಹುಶಾರ್’ ಎಂದು ತಾಕೀತು ಮಾಡಿದರು.‘ದಾರಿ ಖರ್ಚಿಗೆ ಇರಲಿ ತಗೋ’ ಎಂದು ಒಂದು ಕಬ್ಬಿನ ಕೋಲನ್ನು ಕೊಟ್ಟರು. ಅವರು ಕೊಟ್ಟ ಪೆಟ್ಟುಗಳ ಜೊತೆಗೆ ಕಬ್ಬಿನ ಕೋಲನ್ನು ಜಗಿಯುತ್ತಾ ಊರಿನ ದಾರಿ ಹಿಡಿದೆ.ಬಾಲ್ಯದಲ್ಲಿ ಅದೇನೋ ಕದ್ದು ತಿನ್ನುವ ಚಪಲ ಜಾಸ್ತಿ. ಕೊಂಡು ತಿನ್ನುವುದಕ್ಕಿಂತ ಕದ್ದು ತಿನ್ನುವುದರಲ್ಲಿ ಹೆಚ್ಚಿನ ರುಚಿ. ಅದರ ಜೊತೆ ಸಿಗುವ ಹೊಡೆತಗಳೂ ಒಂಥರ ರುಚಿಯಾಗಿರ್ತಾವೆ. ಮಾವಿನ ಹಣ್ಣು, ಪೇರಲೆ ಹಣ್ಣುಗಳನ್ನು ಅವರಿವರ ಮನೆ ಹಿತ್ತಲಿನಿಂದ ಕದ್ದು ತಿನ್ನುತ್ತಿದ್ದ ನನಗೆ ಡ್ರೈವರಣ್ಣ ಹಾಗೂ ಕ್ಲೀನರ್ ಸಾರ್ ಕಲಿಸಿದ ನೀತಿ ಪಾಠ ಬಲು ದೊಡ್ಡದು. ಇಂಥವರೆಲ್ಲಾ ನನ್ನ ಜೀವನದ ಕ್ಲಾಸ್ ಟೀಚರ್‌ಗಳಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry