ಕರಿಬಸವಯ್ಯ ಮತ್ತು ಕ್ರಿಕೆಟ್

7

ಕರಿಬಸವಯ್ಯ ಮತ್ತು ಕ್ರಿಕೆಟ್

ಗಂಗಾಧರ ಮೊದಲಿಯಾರ್
Published:
Updated:
ಕರಿಬಸವಯ್ಯ ಮತ್ತು ಕ್ರಿಕೆಟ್

ಕಳೆದವಾರದಿಂದೀಚೆಗೆ ಅಪ್ರಿಯ ಸಂಗತಿಗಳೇ ಕೇಳಿಬರುತ್ತಿವೆ. ಈಗಾಗಲೇ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಸ್ಯನಟ ಕರಿಬಸವಯ್ಯ ಅವರ ದಿಢೀರ್ ನಿಧನ ಅಭಿಮಾನಿಗಳಿಗೆ ಆಘಾತ ತಂದಿದೆ. ರಂಗಭೂಮಿಯ ಮೂಲಕ ತನ್ನ ನೆಲೆಯನ್ನು ಹುಡುಕಿಕೊಂಡು, ಚಿತ್ರರಂಗದಲ್ಲಿ ಸ್ಥಾನವನ್ನು ಕಂಡುಕೊಂಡ ಕರಿಬಸವಯ್ಯ ಕೊನೆಗೆ ಚಿತ್ರರಂಗದಲ್ಲಿ, ಜೀವನದಲ್ಲಿ ತಮ್ಮ ಅಭಿಲಾಷೆಯನ್ನು ಈಡೇರಿಸಿಕೊಂಡರೇ ಎಂದು ಪ್ರಶ್ನಿಸಿಕೊಂಡರೆ ನಿರಾಶೆಯ ಉತ್ತರವೇ ಕಾದಿದೆ.ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಎಲ್‌ಐಜಿ ಬಾಡಿಗೆ ಮನೆಯಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿದ್ದ ಕರಿಬಸವಯ್ಯ, ಕಳೆದ ವರ್ಷ ಅದೇ ಚಿಕ್ಕ ಮನೆಯನ್ನು 13 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರು. ಇನ್ನೂ ಏಳು ಲಕ್ಷ ರೂಪಾಯಿ ಸಾಲ ಬಾಕಿ ಇದೆ. ಒಬ್ಬ ಮಗಳ ದುರಂತ ಅಂತ್ಯವಾದ ನಂತರ ಎರಡನೇ ಮಗಳಿಗೆ ಮದುವೆ ಮಾಡಿದರು.ಸಾಲ ಬಾಕಿ ಇದೆ. ಸದಾ ದುಡಿದರೆ ಮಾತ್ರ ಬದುಕುವುದು ಸಾಧ್ಯ ಎಂದು ಅರಿವಾದಾಗ ಎಲ್ಲ ಕಾರ್ಯಕ್ರಮಕ್ಕೆ ಹೋಗಲಾರಂಭಿಸಿದರು. ಹೊನ್ನವಳ್ಳಿ ಕೃಷ್ಣ ತಂಡದೊಂದಿಗೆ ಹಾಸ್ಯರಸಾಯನ ಉಣಬಡಿಸುವ ಕಲಾವಿದರ ಬಳಗದ ಜೊತೆ ಓಡಾಟ, ಹರಿಕಥೆ ಮಾಡುವುದಕ್ಕಾಗಿ ಊರಿಂದೂರಿಗೆ ಪಯಣ, ಕಿರುತೆರೆಯಲ್ಲೂ ಅಭಿನಯ, ಬೆಳ್ಳಿತೆರೆಯಲ್ಲೂ ಪಾತ್ರಗಳು... ಹೀಗೆ ಓಡಾಡಲು ಕರಿಬಸವಯ್ಯ ಕಾರು ಕೊಂಡರು.

 

ಅದರ ಸಾಲ ಬಾಕಿ ಇದೆ. ಇದು ಕನ್ನಡ ಕಲಾವಿದರ ಕತೆ. ಅವರ ಪುಟ್ಟ ಮನೆಯಲ್ಲಿ ಗೋಡೆಯ ಮೇಲೆ ದೊಡ್ಡ ಕಪಾಟುಗಳನ್ನು ಮಾಡಿ ಅವುಗಳ ತುಂಬ ಪಡೆದ ಪ್ರಶಸ್ತಿ, ಸ್ಮರಣಫಲಕಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದಾರೆ. ಅವರು ಭಾಗವಹಿಸಿದ ಸಮಾರಂಭಗಳ ಲೆಕ್ಕವನ್ನು ಅದು ಕೊಡುತ್ತದೆ. ಅದನ್ನು ತೋರಿಸಿ, ಅವರ ಪತ್ನಿ ಹೇಳುತ್ತಾರೆ: `ನೋಡಿ, ಇದೇ ಅವರು ಬಿಟ್ಟು ಹೋಗಿರುವ ಆಸ್ತಿ. ಅವರ ದನಿಯಲ್ಲಿ ವಿಷಾದ ತುಂಬಿದ್ದುದನ್ನು ಗುರುತಿಸುವುದು ಕಷ್ಟವಾಗಲಿಲ್ಲ.ಸುಮಾರು 250 ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡೇ ಬದುಕಿದ ಕರಿಬಸವಯ್ಯ, ಸಾಯುವ ಕಾಲಕ್ಕೆ ಸಾಲದಲ್ಲಿ ಮುಳುಗಿಹೋಗಿದ್ದರು ಎಂಬುದೇ ಕನ್ನಡ ಚಿತ್ರರಂಗದ ಸ್ಥಿತಿಯನ್ನು ತೋರಿಸುತ್ತದೆ. `ಕೈ ತಟ್ಟುವವರೆಗೆ ಕಲಾವಿದ ಕೈಲಾಸದಲ್ಲಿರುತ್ತಾನೆ. ಕೈ ತಟ್ಟುವುದು ನಿಂತಕೂಡಲೇ ಕಲಾವಿದನಿಗೆ ಕೈ ಸಾಲವೂ ಹುಟ್ಟುವುದಿಲ್ಲ~ ಎಂದು ಹಿರಣ್ಣಯ್ಯನವರು ಪದೇಪದೇ ಹೇಳುವುದು ಇಂತಹ ಕಲಾವಿದರನ್ನು ಕಂಡೇ.ಪರಭಾಷೆಗಳಲ್ಲಿ ಸಣ್ಣಸಣ್ಣ ಪಾತ್ರ ಮಾಡುವ ಕಲಾವಿದರೂ ಕೋಟ್ಯಧಿಪತಿಗಳು. ಕನ್ನಡ ಚಿತ್ರರಂಗದಲ್ಲಿ ಹೀರೋಗಳಿಗೆ ಮಾತ್ರ ಮಣೆ. ಒಂದೆರೆಡು ಚಿತ್ರಗಳಲ್ಲಿ ಅಭಿನಯಿಸಿದವರೆಲ್ಲಾ ಇಂದು ಮೀಸೆ ತಿರುವಿಕೊಂಡು ಚಿತ್ರೋದ್ಯಮದಲ್ಲಿ ಮರೆಯುತ್ತಿದ್ದಾರೆ. ಚಿಕ್ಕಪುಟ್ಟ ಕಲಾವಿದರನ್ನು ತುಳಿಯುತ್ತಿದ್ದಾರೆ.ಚಲನಚಿತ್ರ ವಾಣಿಜ್ಯಮಂಡಳಿ ಕರಿಬಸವಯ್ಯನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದಾಗ ಬಂದವರು ಕೆಲವೇ ಮಂದಿ. ನಟ, ಶಾಸಕ ಜಗ್ಗೇಶ್ ಅವರು ಈ ಸಂದರ್ಭದಲ್ಲಿ ಎತ್ತಿದ ವಿಷಯ ಪ್ರಸ್ತುತ ಚಿತ್ರರಂಗದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಹೇಳುತ್ತಿತ್ತು. ಕರಿಬಸವಯ್ಯ ಅವರ ಅಂತಿಮದರ್ಶನಕ್ಕಾಗಿ ಅವರ ಮೃತದೇಹವನ್ನು ಕಲಾಕ್ಷೇತ್ರದ ಸಂಸಬಯಲು ರಂಗಮಂದಿರದ ಬಳಿ ಇರಿಸಲಾಗಿತ್ತು. ಅಲ್ಲಿಗೆ ಮುಖ್ಯಮಂತ್ರಿಗಳು, ಶಾಸಕರು, ಸಚಿವರು ಬಂದು ಕಣ್ಣೀರಾಂಜಲಿ ಸಲ್ಲಿಸಿದರು.`ಸಿನಿಮಾದವರು ಯಾರೂ ಕಾಣಿಸುತ್ತಿಲ್ಲವಲ್ಲಾ ಎಂದು ಮುಖ್ಯಮಂತ್ರಿಗಳು ಜಗ್ಗೇಶ್ ಅವರನ್ನು ಪ್ರಶ್ನಿಸಿದರಂತೆ~. ಚಿತ್ರರಂಗ ತಲೆತಗ್ಗಿಸಬೇಕಾದ ವಿಷಯ ಎಂದು ಜಗ್ಗೇಶ್ ದುಃಖಿಸಿದರು. ಕ್ರಿಕೆಟ್ ಬಂದು ಚಿತ್ರರಂಗ ಹಾಳಾಗಿಹೋಯಿತು ಎಂದು ಜಗ್ಗೇಶ್ ಹೇಳುತ್ತಾರೆ. `ಕನ್ನಡ ಚಿತ್ರರಂಗದ ಹೆಸರಿನಲ್ಲಿ ಕ್ರಿಕೆಟ್ ತಂಡವೊಂದನ್ನು ರಚಿಸಿಕೊಂಡು ಕೆಲವರು ತಾವೇ ಚಿತ್ರರಂಗ ಎಂದು ಬೀಗುತ್ತಿದ್ದಾರೆ, ಎರಡು ಚಿತ್ರ ಹಿಟ್ ಆದ ಕೂಡಲೇ ಕೋಟಿ ಕೋಟಿ ಸಂಭಾವನೆ ಏರಿಸಿಕೊಂಡು, ಬಡ ಕಲಾವಿದರನ್ನು ನಿರ್ಲಕ್ಷಿಸುತ್ತಿದ್ದಾರೆ~ ಎಂದು ಜಗ್ಗೇಶ್ ಹೇಳಿದರು. ಕಲಾವಿದರ ಸಂಘ ಎನ್ನುವ ನಿಷ್ಕ್ರಿಯ ಸಂಘವೊಂದು ಇದೆ.ಅದು ಏನು ಮಾಡುತ್ತಿದೆ ಎಂದು ಕೇಳಬೇಡಿ, ಅದರ ಅಧ್ಯಕ್ಷ ಸ್ಥಾನದಲ್ಲಿ ಅಂಬರೀಷ್ ಸುಮ್ಮನೆ ನಿದ್ದೆ ಮಾಡುತ್ತಿದ್ದಾರೆಯೇ ಹೊರತು, ಕೆಲಸ ಮಾಡುತ್ತಿಲ್ಲ. ನೋಡಿ, ಮುಖ್ಯಮಂತ್ರಿಗಳೇ ಕಲಾವಿದರು ಯಾರೂ ಇಲ್ಲ ಎಂದು ಕೇಳುವ ಪರಿಸ್ಥಿತಿ ಬಂತು. ಒಬ್ಬ ಕಲಾವಿದ ಸತ್ತರೆ, ಕಲಾವಿದರು ಅವನ ಸಾವಿಗೆ ಮರುಗುವುದು ಬಿಟ್ಟು, ಬ್ಯಾಟ್ ಹಿಡಿದು, ಕ್ರಿಕೆಟ್ ಆಡುವುದು ನ್ಯಾಯವೇ? ಎನ್ನುವುದು ಜಗ್ಗೇಶ್ ಮಾತು.ಕರಿಬಸವಯ್ಯ ಅವರನ್ನು ನೋಡಲು ಕಲಾವಿದರು ಬಾರದಿರುವುದಕ್ಕೆ ಕ್ರಿಕೆಟ್ ಕಾರಣ ಎನ್ನುವುದು ಬೇಸರದ ಸಂಗತಿ. ಕ್ರಿಕೆಟ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದೂ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ. ತಾರಾ ಕ್ರಿಕೆಟ್ ಎನ್ನುವುದು ಚಿತ್ರರಂಗದಲ್ಲಿ ಒಡಕು ಮೂಡಿಸುತ್ತಿದೆ ಎನ್ನುವ ಅಸಮಾಧಾನ ಈಗ ವ್ಯಾಪಕವಾಗಿದೆ.

 

ಬಾಂಧವ್ಯ ಬೆಸೆಯಬೇಕಾದ ಆಟ, ಸಂಘಟನೆಯನ್ನು ಮುರಿಯುತ್ತಿದೆ. ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಶಿವರಾಜ್‌ಕುಮಾರ್ ಅಭಿಮಾನಿಗಳ ವಿರುದ್ಧ ತಂಡದ ನಾಯಕ ಸುದೀಪ್ ಕೆಂಡಕಾರಿದರು. ಕೈಕೈ ಮಿಲಾಯಿಸುವ ಘಟನೆ ನಡೆಯಿತು. ಎಲ್ಲ ಕಡೆ ಇದೇ ರೀತಿ ಕಲಾವಿದರ ರಾಜಕೀಯ ನಡೆಯುತ್ತಿದೆ. ಅಂಬರೀಷ್ `ಅಂದಕರಿಕು ಮಂಚಿವಾಡು~ ರೀತಿ ಇರಬೇಕು ಎಂದು ನಿರ್ಧರಿಸಿರುವುದರಿಂದ ಚಿತ್ರರಂಗದಲ್ಲಿ ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ರಾಜಕುಮಾರ್ ಅವರು ನಿಧನರಾದ ನಂತರ ಚಿತ್ರರಂಗದಲ್ಲಿ ನಾಯಕತ್ವ ಇಲ್ಲದೆ, ಪರದಾಡುವ ಸ್ಥಿತಿ ಬಂದಿದೆ.

 

ರಾಜ್ ನಿಧನದ ನಂತರ ವಿಷ್ಣುವರ್ಧನ್ ಅವರನ್ನು ನೇತೃತ್ವ ವಹಿಸುವಂತೆ ಕೋರಲಾಯಿತು. ಅದನ್ನು ವಿಷ್ಣು ನಯವಾಗಿಯೇ ನಿರಾಕರಿಸಿದ್ದರು. ಅಂಬರೀಷ್ ಅವರು ನಾಯಕರಾದರು. ಕಲಾವಿದರ ಸಂಘದ ಅಧ್ಯಕ್ಷರೂ ಆದರು. ಕಲಾವಿದರ ಸಂಘಕ್ಕೆ ಎಷ್ಟೋ ಬಾರಿ ರಾಜೀನಾಮೆ ನೀಡಿ ವಾಪಸು ಪಡೆದಿದ್ದಾರೆ. ಸಂಸದರಾಗಿದ್ದಾಗಲೂ ಪಾರ್ಲಿಮೆಂಟಿಗೆ ಹೋಗಲಿಲ್ಲ. ಸಚಿವರಾಗಿದ್ದಾಗಲೂ ಸಚಿವಾಲಯ ಪ್ರವೇಶ ಮಾಡಲೇ ಇಲ್ಲ.ಹೀಗೆ ಒಂದೂ ಕೆಲಸ ಮಾಡಲಾಗದೆ ಪದವಿಗಳಲ್ಲಿ ಅಲಂಕಾರಕ್ಕಾಗಿ ಕುಳಿತುಕೊಳ್ಳುವ ಅವರ ಮನಸ್ಥಿತಿಯಿಂದಾಗಿ ಕಲಾವಿದರ ಸಂಘ ತ್ರಿಶಂಕು ಸ್ಥಿತಿಗೆ ತಲುಪಿದೆ.. ಅಂಬರೀಷ್ ಸೇರಿದಂತೆ ಈಗ ಬಹುತೇಕ ಜನಪ್ರಿಯ ನಟರು ಖೇಣಿ ಕೃಪಾಪೋಷಿತ ಆಟೋಟಗಳಲ್ಲಿ ಭಾಗವಹಿಸಿ ಪಾವನರಾಗಲು ಹಾತೊರೆಯುತ್ತಿರುವುದರಿಂದ ಚಿತ್ರರಂಗ ಈಗ ಕವಲು ಹಾದಿ ಹಿಡಿದಂತೆ ಕಾಣುತ್ತಿದೆ.

 

ಕೇರಳ, ಆಂಧ್ರ, ತಮಿಳುನಾಡಿನ ತಂಡಗಳಲ್ಲಿ, ಹಿರಿಯ-ಕಿರಿಯ ಕಲಾವಿದರ ತಂಡದ ಸಮ್ಮಿಲನವಿದೆ. ಕನ್ನಡ ಚಿತ್ರರಂಗದ ತಂಡದಲ್ಲಿ ಅಂತಹ ಸಮ್ಮಿಲನ ಕಾಣುವುದಿಲ್ಲ. ತಂಡದಲ್ಲಿರುವ ಕೆಲವರ ಹೆಸರನ್ನು ಬಹಳ ಜನ ಕೇಳಿಯೇ ಇಲ್ಲ. ಮತ್ತೆ ಕೆಲವು ಹಿರಿಯ ಕಲಾವಿದರನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇಂತಹ ರಾಜಕೀಯ ಕಾರಣಗಳಿಂದ ಚಲನಚಿತ್ರರಂಗ ಹೋಳಾಗಿಹೋಗಿದೆ. ಕಲಾವಿದರ ಗೋಳು ಕೇಳುವವರಿಲ್ಲದಾಗಿದೆ.ಕರಿಬಸವಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಲಾವಿದರು ಕಡೆಗಾಲದಲ್ಲಿ ಹಣವಿಲ್ಲದೆ ಪರದಾಡುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಿತು. ವಾಣಿಜ್ಯ ಮಂಡಳಿ ಒಂದು ಲಕ್ಷ ರೂಪಾಯಿ ನೀಡುವ ನಿರ್ಧಾರ ಪ್ರಕಟಿಸಿದರೆ, ಜಗ್ಗೇಶ್ 50 ಸಾವಿರ ರೂಪಾಯಿ ನೀಡುವ ವಾಗ್ದಾನ ಮಾಡಿದರು.ಇದು ಒಂದು ಆರಂಭ.

 

ಇನ್ನೂ ಹೆಚ್ಚಿನ ನಿಧಿ ಕರಿಬಸವಯ್ಯ ಕುಟುಂಬಕ್ಕೆ ಬರಲಿದೆ. ಕಲಾವಿದರ ಕಲ್ಯಾಣ ನಿಧಿ ಸ್ಥಾಪನೆ ಮಾಡುವ ಆಲೋಚನೆಯನ್ನೂ ಈ ಸಂದರ್ಭದಲ್ಲಿ ಮಾಡಿದ್ದು ಒಳ್ಳೆಯ ಕೆಲಸ. ಕಲಾವಿದರು, ಚಿತ್ರರಂಗದ ಬೇರೆಬೇರೆ ವಿಭಾಗಗಳಲ್ಲಿ ದುಡಿಯುವವರಿಗೆ ಕ್ಷೇಮಾಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಲು ಕಲಾವಿದರ ಸಂಘ ಮುಂದಾಗಬಹುದು.( ನಿರ್ದೇಶಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ.ಹಿರಿಯ ನಿರ್ದೇಶಕ ಗೀತಪ್ರಿಯ ಅವರು ತಮ್ಮ ದನಿಯನ್ನು ಕಳೆದುಕೊಂಡಿದ್ದಾರೆ. ಅವರ ಗಂಟಲು ಚಿಕಿತ್ಸೆಗೆ ಸರಿದೂಗುವಷ್ಟು ಹಣ ಅವರಲ್ಲಿಲ್ಲ). ಕೋಟಿ ಕೋಟಿ ಸಂಭಾವನೆ ಪಡೆದು, ಫ್ಲಾಪ್ ಚಿತ್ರಗಳನ್ನು ಕೊಡುವ ಹೀರೋಗಳು ತಮ್ಮ ಸಂಭಾವನೆಯನ್ನು ಈ ನಿಧಿಗೆ ಒಂದು ಸಲವಾದರೂ ಪೂರ್ತಿ ಕೊಟ್ಟರೆ ಎಷ್ಟೋ ಸಣ್ಣ ಕಲಾವಿದರು ಬದುಕಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry