ಕರ್ಜಗಿ ಕಥೆ ಎಂದರೆ ಒಂದು ಹಣತೆ, ಒಂದು ದೀಪ!

7

ಕರ್ಜಗಿ ಕಥೆ ಎಂದರೆ ಒಂದು ಹಣತೆ, ಒಂದು ದೀಪ!

Published:
Updated:
ಕರ್ಜಗಿ ಕಥೆ ಎಂದರೆ ಒಂದು ಹಣತೆ, ಒಂದು ದೀಪ!

ನಿಮ್ಮ ಅಂಕಣಕ್ಕೆ ಏನು ಹೆಸರು ಇಡುತ್ತೀರಿ ಎಂದೆ. ಅವರು ಒಂದು ಕ್ಷಣವೂ ಯೋಚನೆ ಮಾಡಲಿಲ್ಲ. `ಕರುಣಾಳು ಬಾ ಬೆಳಕೆ~ ಎಂದರು. ಸುತ್ತಲೂ ಆವರಿಸಿದ ಕತ್ತಲೆ ಓಡಿಸಲು ಒಂದು ದೀಪ, ಒಂದು ಹಣತೆ ಸಾಕು. ತಾವೇ ಅಂಥ ಒಂದು ಹಣತೆ ಆಗಬೇಕು ಎಂದುಕೊಂಡವರು ಗುರುರಾಜ ಕರ್ಜಗಿ. ಅವರು `ಪ್ರಜಾವಾಣಿ~ಯಲ್ಲಿ ವಾರದಲ್ಲಿ ಐದು ದಿನ ಕಥೆ ಬರೆಯುತ್ತಿದ್ದಾರೆ. ಬರೆಯುತ್ತಿದ್ದು ನಾಲ್ಕು ವರ್ಷ ಆಗಿ ಹೋಯಿತು.ಒಂದೊಂದು ಕಥೆಯೂ ಒಂದೊಂದು ಹಣತೆ. ಅಂಥ ಸಾವಿರ ಹಣತೆಗಳನ್ನು ಕರ್ಜಗಿ ಈಗ ಹಚ್ಚಿದ್ದಾರೆ. ಪತ್ರಿಕೋದ್ಯಮದ ಇತಿಹಾಸದಲ್ಲಿ ಇದು ಒಂದು ದಾಖಲೆ. ಹೀಗೆ ಒಬ್ಬ ಲೇಖಕ ಒಂದು ಸಾವಿರ ಕಥೆಗಳನ್ನು ಸ್ವಂತವಾಗಿ ಬರೆದ ಮತ್ತೊಂದು ಉದಾಹರಣೆ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯಂತೂ ಇರಲಾರದು ಎಂದುಕೊಂಡಿದ್ದೇನೆ.ಕರ್ಜಗಿ ಮೂಲತಃ ಒಬ್ಬ ಶ್ರೇಷ್ಠ ಅಧ್ಯಾಪಕ. ಓದಿದ್ದು ರಸಾಯನಶಾಸ್ತ್ರ. ಕಲಿಸಿದ್ದೂ ಅದನ್ನೇ. ಮೂರು ವರ್ಷದ ಮಗುವಾಗಿದ್ದಾಗಿನಿಂದ ಅಜ್ಜನ ಎದೆಯ ಮೇಲೆ ಮಲಗಿ ಕಥೆ ಕೇಳಿದ ನೆನಪು ಇನ್ನೂ ಎದೆಯೊಳಗೆ ನೆಟ್ಟು ಬೇರೂರಿ ನಿಂತುಬಿಟ್ಟಿದೆ. ಅವರೊಳಗೆ ಇಂಥ ಒಬ್ಬ ಕಥೆಗಾರ ಇದ್ದಾನೆ ಎಂದು ಅವರಿಗೇ ಗೊತ್ತಿತ್ತೋ ಇಲ್ಲವೋ ತಿಳಿಯದು.

`ಪ್ರಜಾವಾಣಿ~ಯ ಒಂದು ಕರೆ ಅವರ ಒಳಗಿನ ಕಥೆಗಾರನನ್ನು ಹೊರಗೆ ತಂದಿತು.ಸಾವಿರ ದಿನಗಳ ಕಾಲ ಕಥೆ ಹೇಳುವುದು ಸುಲಭವಲ್ಲ. ಕರ್ಜಗಿ ಅವರ ಹಾಗೆ ದಿನಕ್ಕೆ ಒಂದು ಊರಿನಲ್ಲಿ ಇರುವವರಿಗೆ ಅದು ಇನ್ನೂ ಕಷ್ಟ. 21ನೇ ವಯಸ್ಸಿಗೆ ನೌಕರಿ ಸೇರಿ 46ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಪಡೆದು ಇಡೀ ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರಿವರ್ತನೆ ತರುವ ಹೊಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ಕರ್ಜಗಿ ಎಂದೂ ತಡಮಾಡಿ ನಮಗೆ ಕಥೆ ಕಳಿಸಲಿಲ್ಲ.ಯಾವಾಗಲೂ, `ನಿಮ್ಮ ಕಥೆ ನಮ್ಮ ಸಂಗ್ರಹದಲ್ಲಿ ಇಲ್ಲ~ ಎಂದು ಅವರಿಗೆ ನಾವು ಹೇಳಲಿಲ್ಲ. ಅವರ ಆಪ್ತ ಸಿಬ್ಬಂದಿ ಶ್ರೀಪ್ರಭಾ ಮುಂಗಡವಾಗಿಯೇ ಕಳಿಸಿದ ಕಥೆ ನನ್ನ ಮೇಲ್‌ಬುಟ್ಟಿಯಲ್ಲಿ ಬಂದು ಬೀಳುತ್ತಿತ್ತು. ಕರ್ಜಗಿ ಅಂಥ ಶಿಸ್ತಿನ, ಅಚ್ಚುಕಟ್ಟಿನ ಮನುಷ್ಯ.ನಮಗೆ ಕಳಿಸುವುದಕ್ಕಾಗಿ ಅವರು ವಿಮಾನದಲ್ಲಿ ಕಥೆ ಬರೆದರು. ವಿಮಾನ ಎರಡು ಗಂಟೆ ತಡ ಎಂದರೆ ಸಂತೋಷಪಟ್ಟರು. ರೈಲಿನಲ್ಲಿ ಕಥೆ ಬರೆದರು. ಈಚೆಗೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತೂ ಕಥೆ ಬರೆಯುವುದನ್ನು ಕಲಿತರು. ಅವರ ಜತೆ ಮಾತನಾಡುತ್ತ ಕುಳಿತಿದ್ದೆ. ನನಗೆ ಅವರ ಅನುಭವಗಳನ್ನು ಕೇಳಬೇಕಿತ್ತು. ಒಬ್ಬ ಕಥೆಗಾರನಿಗೆ ಓದುಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಯಬೇಕಿತ್ತು. ಅದೂ ಒಂದು ಕಥೆ!: ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಒಬ್ಬ ಹುಡುಗಿ ಚಾಮರಾಜನಗರ ಜಿಲ್ಲೆಯ ಮೂಗೂರಿನಿಂದ ಕರ್ಜಗಿ ಅವರ ಮನೆಗೆ ಫೋನ್ ಮಾಡುತ್ತಾಳೆ. ಆಕೆ ಅಂಗವಿಕಲೆ. ಅಂದಿನ ಕಥೆ ಕುರಿತು ಕರ್ಜಗಿ ಅವರ ಜತೆ ಚರ್ಚೆ ಮಾಡುತ್ತಾಳೆ. ಹತ್ತು ಗಂಟೆಗೆ ಫೋನ್ ಬಾರಿಸಿತು ಎಂದರೆ ಆಕೆಯದೇ ಎಂದು ಗ್ಯಾರಂಟಿ.

 

ಒಂದು ದಿನ ರಾತ್ರಿ 11 ಗಂಟೆಗೆ ಒಂದು ಫೋನ್ ಬಂತು. ಆಚೆ ಕಡೆ ಗಂಭೀರ ಧ್ವನಿ. ಕೊಂಚ ಗದ್ಗದಿತವಾದಂತೆಯೂ ಇತ್ತು. ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿ. ಕನ್ನಡಿಗರು. `ಕರ್ಜಗಿಯವರೇ ಇಂದಿನ ನಿಮ್ಮ ಕಥೆ ಓದಿದೆ. ಕಲಿಯುವುದು ಎಷ್ಟಿದೆ ಎಂದುಕೊಂಡೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಈ ಕಥೆ ಓದಿದ್ದರೆ ನಾನು ಇನ್ನೂ ಒಳ್ಳೆಯ ವಕೀಲನಾಗಬಹುದಿತ್ತು~ ಎಂದರು ಅವರು. ಅವರು ವಕೀಲರ ಕೋಟಾದಲ್ಲಿ ನ್ಯಾಯಮೂರ್ತಿಯಾದವರು.

 

ಲಿಬಿಯಾದಲ್ಲಿ ಅಶಾಂತಿಯುಂಟಾದಾಗ ಕೆಲವರನ್ನು ಒಂದು ಉಗ್ರಾಣದಲ್ಲಿ ಕೂಡಿ ಹಾಕಿ ರಕ್ಷಣೆ ಕೊಟ್ಟಿದ್ದರು. ಅವರಿಗೆ ಬದುಕಿ ಬರುವ ಭರವಸೆಯೇನೂ ಇರಲಿಲ್ಲ. ಅವರೆಲ್ಲ ಸುರಕ್ಷಿತವಾಗಿ ದೆಹಲಿಗೆ ಬಂದು ತಲುಪಿದ ನಂತರ ನೇಗಿ ಎಂಬ ಕನ್ನಡಿಗರೊಬ್ಬರು ಅಲ್ಲಿಂದಲೇ ಕರ್ಜಗಿ ಅವರಿಗೆ ಫೋನ್ ಮಾಡಿದರು. `ಕರ್ಜಗಿಯವರೇ ಎಂಟು ದಿನಗಳ ಕಾಲ `ಕರುಣಾಳು ಬಾ ಬೆಳಕೆ~ ಪುಸ್ತಕ ಕತ್ತಲೆಯ ಉಗ್ರಾಣದಲ್ಲಿ ನನ್ನ ಮುಂದಿನ ಹಣತೆಯಾಗಿತ್ತು. ನನ್ನಲ್ಲಿ ಬದುಕುವ ಬೆಳಕನ್ನು ಮೂಡಿಸಿತು~ ಎಂದರು.

 

`ತಾಯಿಯ ಋಣ~ ಎಂಬ ಅವರ ಕಥೆಗೆ ಸಿಕ್ಕ ಪ್ರತಿಕ್ರಿಯೆಯಂತೂ ಅಭೂತ ಪೂರ್ವವಾಗಿತ್ತು. ಇಂಗ್ಲೆಂಡಿನಲ್ಲಿ ನೆಲೆಸಿರುವ ಒಬ್ಬ ಯುವಕ `ಇನ್ನು ಮುಂದೆ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ~ ಎಂದು ಹೇಳಿ ಫೋನ್ ಇಟ್ಟ. ಕಥೆಗೆ ಒಂದು ಕಥೆ. ಅದಕ್ಕೆ ಕೊನೆ ಎಂಬುದು ಇರುವುದಿಲ್ಲ. `ನಮ್ಮ ಜೀವನವೇ ಒಂದು ಕಥೆ. ನಿತ್ಯ ನೂರು ಕಥೆಗಳು ನಡೆಯುತ್ತವೆ. ಅವುಗಳನ್ನು ನಾವು ಬರೀ ಘಟನೆ ಎಂದು ನೋಡಿದರೆ ಅದು ಘಟನೆಯಾಗಿರುತ್ತದೆ. ಸಾಕ್ಷಿಪ್ರಜ್ಞೆಯಿಂದ ನೋಡಿದರೆ ಅಲ್ಲಿ ಒಂದು ಕಥೆ ಇರುತ್ತದೆ. ನನ್ನ ಅಜ್ಜ ಗೋಪಾಲಾಚಾರ್ ನನಗೆ ಹೀಗೆ ಜೀವನದಲ್ಲಿನ ಕಥೆ ನೋಡಲು ಕಲಿಸಿದ. ವಾಲ್ಮೀಕಿ ಬರೆದ ರಾಮಾಯಣವನ್ನು, ವ್ಯಾಸ ಬರೆದ ಮಹಾಭಾರತವನ್ನು ನೀನು ನಿನ್ನ ದೃಷ್ಟಿಯಲ್ಲಿ ನೋಡು ಎಂದು ನನಗೆ ಹೇಳಿಕೊಟ್ಟ. ಈಗ ನಾನು ಕಥೆ ಬರೆಯುವುದಕ್ಕೆ ಅಜ್ಜನೇ ಪ್ರೇರಣೆ. ಸುತ್ತ ನಡೆಯುವ ಘಟನೆಯಲ್ಲಿ ಇರುವ ಕಥೆಯನ್ನು ಹುಡುಕುತ್ತೇನೆ. ಅದನ್ನೇ ಬರೆಯುತ್ತೇನೆ~ ಕರ್ಜಗಿ ಹೇಳುತ್ತಿದ್ದರು.

 

ಅವರ ಭಂಡಾರದಲ್ಲಿ ಇಷ್ಟೊಂದು ವೈವಿಧ್ಯಮಯ ಕಥೆಗಳು ಹೇಗೆ ಇರಬಹುದು ಎಂಬ ಕುತೂಹಲ ನನಗೆ. `ನಾನು ಅದೃಷ್ಟವಂತ. ಚಿಕ್ಕವನಿದ್ದಾಗ ಧಾರವಾಡದಲ್ಲಿ ಬೇಂದ್ರೆ, ಬಸವರಾಜ ರಾಜಗುರು ಅವರಂಥವರ ಒಡನಾಟ ಸಿಕ್ಕಿತು. ಬೆಂಗಳೂರಿಗೆ ಬಂದ ಮೇಲೆ ರಾಜರತ್ನಂ ಪರಿಚಯವಾದರು. ಅವರನ್ನು ಸದಾ ವಿರೋಧಿಸುತ್ತಿದ್ದ ಬೀಚಿ ಅವರ ಜತೆಗೂ ನನಗೆ ಅಷ್ಟೇ ನಿಕಟ ಒಡನಾಟವಿತ್ತು. ಡಿ.ವಿ.ಜಿ, ಮಾಸ್ತಿ ಅವರ ಪರಿಚಯವೂ ಅಷ್ಟೇ ಗಾಢವಾಗಿತ್ತು. ಇದಕ್ಕಿಂತ ಇನ್ನೇನು ಭಾಗ್ಯ ಬೇಕು? ರಾಜರತ್ನಂ ನನಗೆ ಪಾಲಿ ಕಲಿಸಿದರು. ಜಾತಕ ಕಥೆಗಳನ್ನು ಓದಲು ಹೇಳಿದರು. ವಿವಿಧ ಧರ್ಮಗಳನ್ನು ಅಧ್ಯಯನ ಮಾಡಿದೆ. ಮೌಲ್ವಿಯೊಬ್ಬರ ಬಳಿ ಕುಳಿತು ಆರು ತಿಂಗಳು `ಕುರ್ ಆನ್~ ಕಲಿತೆ. ನನಗೆ ಈಗಲೂ ಭಗವದ್ಗೀತೆಯಷ್ಟೇ ಬೈಬಲ್ ಕೂಡ ಇಷ್ಟವಾದ ಗ್ರಂಥ. ನನ್ನ ಹೃದಯ ಶುದ್ಧವಾಗುತ್ತ ಹೋದ ಬಗೆ ಇದು. ನನ್ನ ಕಥೆಗಳಲ್ಲಿ ಮಾರ್ದವತೆ ಇದ್ದರೆ ಅದಕ್ಕೆ ಇವರೆಲ್ಲ ಕಾರಣ. ಇದೆಲ್ಲ ಕಾರಣ.

 

ದೇವರ ಹತ್ತಿರ ಒಂದು ದಿನ ಹೋದಾಗ, ನನ್ನ ಹೃದಯದಲ್ಲಿ ಒಂದಿಷ್ಟೂ ಅಳುಕು ಇಲ್ಲ ಎಂದು ಹೇಳುವಂತೆ ನಾನು ಆಗಬೇಕು ಎಂಬುದು ನನ್ನ ಆಸೆ. ಹೀಗೆ ಎಲ್ಲರಿಗೂ ಅನಿಸಬೇಕು. ನನ್ನ ಎಲ್ಲ ಕಥೆಗಳ ಉದ್ದೇಶ ಇದು~ ಕರ್ಜಗಿ ಮುಂದುವರಿಸಿದ್ದರು. ಅವರು ಒಳ್ಳೆಯ ಮಾತುಗಾರ ಕೂಡ.`ಪತ್ರಿಕೆಗಳಲ್ಲಿ ಶೇಕಡ ತೊಂಬತ್ತು ಭಾಗ ನಕಾರಾತ್ಮಕ ಸುದ್ದಿಯೇ ಇರುತ್ತದೆ. ಜನರು ಬೇಸತ್ತು ಹೋಗಿದ್ದಾರೆ. ಜೀವನದಲ್ಲಿ ಒಂದಿಷ್ಟು ಒಳ್ಳೆಯದೂ ಇರಬೇಕು ಎಂದು ಅವರು ಬಯಸುತ್ತಾರೆ. ಮೂಲತಃ ಮನುಷ್ಯ ಒಳ್ಳೆಯವನು. ಆದರೆ, ಕಾಲದ ಮಹಿಮೆ. ಈಗ ಎಲ್ಲರೂ ಹಣದ ಹಿಂದೆ, ಯಶಸ್ಸಿನ ಹಿಂದೆ ಬಿದ್ದಿದ್ದಾರೆ. ಇಲ್ಲವಾದರೆ `ಹಣ ಮಾಡುವುದು ಹೇಗೆ~ ಎಂಬ ಪುಸ್ತಕಗಳು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಆಗುತ್ತಿರಲಿಲ್ಲ. ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಎಷ್ಟು ಮಲಗುವ ಕೋಣೆ ಇವೆ ಎಂದು ಯಾರೂ ಹೇಳುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಈಗ ಎಷ್ಟು ಬೆಡ್‌ರೂಂ ಮನೆ ಎಂದು ಕೇಳುತ್ತಾರೆ. ಬೆಡ್ ರೂಂಗಳು ಎಷ್ಟು ಹೆಚ್ಚು ಇರುತ್ತವೆಯೋ ಅಷ್ಟು ಆತ ಶ್ರೀಮಂತ. ನಾವೆಲ್ಲ ಮನೆಯ ಪಡಸಾಲೆಯಲ್ಲಿಯೇ ಮಲಗಿ ಅಲ್ಲವೇ ದೊಡ್ಡವರಾದುದು? ಈಗ ಅವ್ವ ಅಪ್ಪನೇ ಹೊರಗಿನವರು! ಭಾರತ ಇಡೀ ಜಗತ್ತಿಗೆ ಕೊಟ್ಟ ಅತಿದೊಡ್ಡ ಕೊಡುಗೆ ಎಂದರೆ ಕುಟುಂಬ ವ್ಯವಸ್ಥೆ. ಈಗ ಅದೇ ಕರಗಿ ಹೋಗುತ್ತಿದೆ. ಆದರೆ, ಎಲ್ಲ ಮನುಷ್ಯರಲ್ಲಿ ಎಲ್ಲಿಯೋ ಒಂದು ದೈವತ್ವದ ಅಂಶ ಇದ್ದೇ ಇರುತ್ತದೆ. ಅದಕ್ಕೆ ಈಗ ಮುಸುಕು ಕವಿದಿದೆ.

`ಕರುಣಾಳು ಬಾ ಬೆಳಕೆ~ ಕಥೆಗಳು ಆ ಮುಸುಕನ್ನು ಕೊಂಚವಾದರೂ ತೆರೆಯುವಂತೆ ಕಾಣುತ್ತದೆ. ಅದಕ್ಕೇ ಅದು ಅಷ್ಟು ಜನಪ್ರಿಯ ಆಗಿರಬಹುದು. ನಿಮಗೆ ಗೊತ್ತೇ? ಕೇವಲ ಮೂರು ವರ್ಷಗಳಲ್ಲಿ `ಕರುಣಾಳು ಬಾ ಬೆಳಕೆ~ ಕಥೆಗಳ ಮೂರು ಸಂಪುಟಗಳ ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ. ಮೊದಲ ಸಂಪುಟ ಹತ್ತು ಮುದ್ರಣ ಕಂಡಿದೆ. ಎರಡು ಮತ್ತು ಮೂರನೇ ಸಂಪುಟ ತಲಾ ಏಳು ಮುದ್ರಣ ಕಂಡಿವೆ~. ಕರ್ಜಗಿ ಅವರ ಮಾತಿನಲ್ಲಿ ಉಮೇದು ಎದ್ದು ಕಾಣುತ್ತಿತ್ತು.ಕರ್ಜಗಿ ಅವರಿಗೆ ದೀಪ ಎಂದರೆ ಇಷ್ಟ. ಜಮಖಂಡಿಯಲ್ಲಿ ಅವರು ಕಲಿಯುತ್ತಿದ್ದಾಗ ಅವರಿಗೆ ರೂಬೆನ್ ಎಂಬ ಒಬ್ಬ ಶಿಕ್ಷಕ ಇದ್ದರು. ಅವರು, `ಕರುಣಾಳು ಬಾ ಬೆಳಕೆ~ ಕವಿತೆಯನ್ನು ಮೂಲದಲ್ಲಿ ಮತ್ತು ಕನ್ನಡದಲ್ಲಿ ಕೂಡಿಯೇ ಪಾಠ ಮಾಡಿದ್ದರು. ಎಳೆಯ ಮನಸ್ಸಿನ ಮೇಲೆ ಆ ಕವಿತೆ ಮೂಡಿಸಿದ ಬೆಳಕು ಇನ್ನೂ ಕರ್ಜಗಿ ಅವರ ಮನಸ್ಸಿನಲ್ಲಿ ನಂದಾದೀಪದಂತೆ ಉರಿಯುತ್ತಿದೆ. `ದೊಡ್ಡವರ ಬಗ್ಗೆ ಆಸೆ ಬಿಟ್ಟು ಬಿಡೋಣ; ಮಕ್ಕಳ ಬಗ್ಗೆ ಆಸೆ ಇಟ್ಟುಕೊಳ್ಳೋಣ. ಮಕ್ಕಳಲ್ಲಿ ಮುಗ್ಧತೆ ಇದೆ. ಅದರಿಂದ ಕಲಿಯುವುದು ತುಂಬ ಇದೆ. ದೊಡ್ಡವರಲ್ಲಿನ ಅಹಂಕಾರದಿಂದ ಕಲಿಯುವುದು ಏನು ಇರುತ್ತದೆ? ಸಾಹಿತ್ಯಕ್ಕೆ ಇರುವ ಶಕ್ತಿ ಏನು ಗೊತ್ತೇ? ಅದು ದೊಡ್ಡವರಲ್ಲಿನ ಅಹಂಕಾರವನ್ನು ಮುರಿಯುತ್ತದೆ. ಮಕ್ಕಳಲ್ಲಿ ಇರುವಂಥ ಮನಸ್ಸನ್ನು ಅರಳಿಸುತ್ತದೆ. ಬುದ್ಧಿ ಮತ್ತು ಹೃದಯದ ನಡುವಿನ ವ್ಯತ್ಯಾಸವೂ ದೊಡ್ಡದು. ಬುದ್ಧಿಗೆ ಸುಸ್ತಾಗುತ್ತದೆ. ಹೃದಯಕ್ಕೆ ಆಗುವುದಿಲ್ಲ. ಕಥೆಗಳು ಹೃದಯದ ಜತೆಗೆ ಮಾತನಾಡುತ್ತವೆ. ಹಾಗಾಗಿ ಎಷ್ಟು ಕಥೆ ಕೇಳಿದರೂ ಬೇಸರ ಅನಿಸುವುದಿಲ್ಲ. `ಪ್ರಜಾವಾಣಿ~ಯಲ್ಲಿ ಬಂದ ಎಲ್ಲ ಕಥೆಗಳನ್ನು ಕತ್ತರಿಸಿ ನೋಟ್‌ಪುಸ್ತಕಕ್ಕೆ ಅಂಟಿಸಿಕೊಂಡು ಬಂದು ನನಗೇ ತೋರಿಸುವಾಗ, ಎಂದಾದರೂ ಒಂದು ದಿನ ಕಥೆ ಪ್ರಕಟವಾಗದೇ ಇದ್ದಾಗ ಏಕೆ ಬಂದಿಲ್ಲ ಎಂದು ಯಾವುದೋ ದೂರದ ಊರಿನಿಂದ ವಿಚಾರಿಸುವಾಗ, ರೈಲಿನಲ್ಲಿ, ಬಸ್ಸಿನಲ್ಲಿ ಭೇಟಿಯಾದವರು ನನ್ನ ಕಥೆಯನ್ನು ತಮ್ಮ ಬದುಕಿನ ಕಥೆ ಎನ್ನುವಂತೆ ನನಗೇ ಹೇಳುವಾಗ ಅದೆಲ್ಲ ಹೃದಯದ ಮಾತು ಅನಿಸುತ್ತದೆ. ಮನುಷ್ಯನಿಗೆ ಇದಕ್ಕಿಂತ ಇನ್ನೇನು ಕೃತಾರ್ಥತೆ ಬೇಕು? ಅಷ್ಟೊಂದು ಓದುಗರ ಜತೆಗೆ ಕೊಂಡಿ ಕಲ್ಪಿಸಿದ `ಪ್ರಜಾವಾಣಿ~ಗೆ ಹೇಗೆ ಕೃತಜ್ಞತೆ ಹೇಳಲಿ?~ ಕರ್ಜಗಿ ಕೇಳುತ್ತಿದ್ದರು. ಅವರು ಮತ್ತಷ್ಟು, ಇನ್ನಷ್ಟು ಕಥೆ ಹೇಳುವ ಮೂಲಕ ಕೃತಜ್ಞತೆ ಹೇಳಬಹುದೋ ಏನೋ?!

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry