ಭಾನುವಾರ, ಡಿಸೆಂಬರ್ 8, 2019
21 °C

ಕರ್ನಾಟಕದ ಇಮ್ಮಡಿ ಲೋಕಾಯುಕ್ತಕ್ಕೊಂದು ಮುನ್ನುಡಿ

ನಾರಾಯಣ ಎ
Published:
Updated:
ಕರ್ನಾಟಕದ ಇಮ್ಮಡಿ ಲೋಕಾಯುಕ್ತಕ್ಕೊಂದು ಮುನ್ನುಡಿ

ಕರ್ನಾಟಕದಲ್ಲಿ ಕೊನೆಗೂ ಒಬ್ಬ ಹೊಸ ಲೋಕಾಯುಕ್ತರು ಅಧಿಕಾರ ವಹಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಕರ್ನಾಟಕ ಲೋಕಾಯುಕ್ತದ  ಎರಡನೆಯ ಅವತಾರ ಪ್ರಾರಂಭವಾಗಿದೆ ಎನ್ನುವುದು ಹೆಚ್ಚು ಸೂಕ್ತ. 1980ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದು, ಕಳೆದ 15 ವರ್ಷಗಳ ಕಾಲ ಕರ್ನಾಟಕದ ರಾಜಕೀಯ- ಆಡಳಿತ ಚರಿತ್ರೆಯಲ್ಲಿ ವಿಜೃಂಭಿಸಿದ ಕರ್ನಾಟಕ ಲೋಕಾಯುಕ್ತ, ಈಗ ಹಿಂದಿನಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯಲ್ಲ. ಭ್ರಷ್ಟಾಚಾರ ವಿಚಾರದಲ್ಲಿ ಈಗ ಅದರದ್ದೇನಿದ್ದರೂ ಪರೋಕ್ಷ ಪಾತ್ರ. ಈಗ ಅದು  ಸಾರ್ವಜನಿಕ ಕುಂದುಕೊರತೆಗಳನ್ನು ವಿಚಾರಿಸುವ, ಅಂದರೆ ಸರ್ಕಾರದ ವಿರುದ್ಧ ಆಡಳಿತಾತ್ಮಕ ವಿಚಾರಗಳಲ್ಲಿ ಜನ ಸಲ್ಲಿಸುವ ದೂರನ್ನು ಆಲಿಸಿ ಅಷ್ಟಿಷ್ಟು ಪರಿಹಾರ ನೀಡಲು ಶ್ರಮಿಸಬಹುದಾದ ಸಂಸ್ಥೆ. ಹೊಸ ಲೋಕಾಯುಕ್ತರು ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಕರ್ನಾಟಕ ಲೋಕಾಯುಕ್ತ–2 ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ.ಕರ್ನಾಟಕ ಲೋಕಾಯುಕ್ತದಿಂದ ಭ್ರಷ್ಟಾಚಾರ ನಿಗ್ರಹ ಅಧಿಕಾರವನ್ನು ಸರ್ಕಾರ  ಕಿತ್ತುಕೊಂಡದ್ದಕ್ಕೆ ಇದ್ದಿರಬಹುದಾದ ರಾಜಕೀಯ ಕಾರಣಗಳು ಏನು ಎನ್ನುವುದು  ಸ್ಪಷ್ಟವಾಗಿಲ್ಲ. ಅದನ್ನು ತಿಳಿದುಕೊಳ್ಳುವ ಕುತೂಹಲವೂ ಯಾರಿಗೂ  ಇದ್ದಂತಿಲ್ಲ. ಹಾಗೆಂದು ಲೋಕಾಯುಕ್ತದಲ್ಲಿ ಸರ್ಕಾರ ಮಾಡಿದ ದೊಡ್ಡ ಮಟ್ಟದ ಬದಲಾವಣೆಗೆ ಅಧಿಕಾರಸ್ಥ ರಾಜಕಾರಣಿಗಳನ್ನು ಮಾತ್ರ ದೂರುವುದಾದರೂ ಹೇಗೆ? ರಾಜಕೀಯದಲ್ಲಿದ್ದವರು ಅವರಿಗೇನು ಅನುಕೂಲವೋ ಅದನ್ನೇ ಮಾಡುತ್ತಾರೆ.ಮಾಡಿದ್ದನ್ನೆಲ್ಲಾ ಜನ ಒಪ್ಪಿಕೊಂಡರೆ ಅದನ್ನು ಮುಂದುವರಿಸುತ್ತಾರೆ. ಅಧಿಕಾರದಲ್ಲಿದ್ದವರು ಮಾಡಿದ್ದನ್ನು ಪ್ರಶ್ನಿಸಬೇಕಾದವರೆಲ್ಲಾ ಲೋಕಾಯುಕ್ತದ ವಿಚಾರದಲ್ಲಿ ಎಲ್ಲಿ ಹೋಗಿದ್ದರು ಎನ್ನುವುದು ಇಲ್ಲಿ ಎದ್ದು ಕಾಣಿಸುವ ಮುಖ್ಯ ಪ್ರಶ್ನೆ. ಇಲ್ಲದಿದ್ದರೆ ಕೋಣ ಓಡಿಸುವ ಹಕ್ಕು ಉಳಿಸಿಕೊಳ್ಳಲು, ಹೋರಿ ಬೆದರಿಸುವ ಅವಕಾಶ ಮುಂದುವರಿಸಲು ಪ್ರಾಣ ಪಣಕ್ಕಿಟ್ಟು ಹೋರಾಡುತ್ತೇವೆ ಎನ್ನುವ ಜನ ಇರುವ ರಾಜ್ಯದಲ್ಲಿ, ಲೋಕಾಯುಕ್ತವನ್ನು ಹಿಂದಿನಂತೆ ಉಳಿಸಬೇಕು ಎಂದು ಗಟ್ಟಿಯಾಗಿ ಕೂಗುವವರೂ ಇಲ್ಲದೇ ಹೋದದ್ದು ಹೇಗೆ?ಅಲ್ಲಲ್ಲಿ ಕೇಳಿಸಿದ್ದ ಪ್ರತಿಭಟನೆಯ ಕ್ಷೀಣ ಧ್ವನಿಗಳೂ ಈಗ ಸಂಪೂರ್ಣ ಉಡುಗಿ ಹೋಗಿವೆ. ಲೋಕಾಯುಕ್ತವನ್ನು ಕೊಂದೇಬಿಟ್ಟರು ಎಂದು ಬೊಬ್ಬಿಟ್ಟವರೆಲ್ಲಾ ಸಾವನ್ನು ಅನಿವಾರ್ಯವೆಂದು ಸ್ವೀಕರಿಸಿದ ಹಾಗೆ ‘ಕೊಲೆ’ಯನ್ನೂ ಸ್ವೀಕರಿಸಬೇಕು ಎನ್ನುವ ಅಸಹಾಯಕ ತಾತ್ವಿಕ ನಿಲುವಿಗೆ ಬಂದಿರಬೇಕು. ಬಹುಶಃ ಲೋಕಾಯುಕ್ತದ ಮೊದಲ ಅವತಾರ ಹೀಗೆ ಅನಾಥವಾಗಿ ಅಂತ್ಯವಾಗುವುದು ಎಲ್ಲರಿಗೂ ಬೇಕಿತ್ತು ಅನ್ನಿಸುತ್ತದೆ. ಸರ್ಕಾರದ ಅಂಕೆಗೆ ಸಿಗದೆ ಪ್ರಶ್ನಾತೀತವಾಗಿ ಕಾರ್ಯವೆಸಗುವಷ್ಟು ಪ್ರಬಲ ಸಂಸ್ಥೆಯೊಂದು, ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ದೀರ್ಘಕಾಲದಲ್ಲಿ ಅಪಾಯಕಾರಿ ಎನ್ನುವ ರಾಜಕೀಯ ತತ್ವವೂ ಈ ಮೌನಕ್ಕೆ ಸಮರ್ಥನೆಯಾಗಬಹುದು. ಕೊನೆಗೂ ಜನ ಯಾವುದನ್ನು ಬೇಕು ಎಂದು  ಉಳಿಸಿಕೊಳ್ಳುವುದಿಲ್ಲವೋ ಅಂಥದ್ದನ್ನು ಉಳಿಸಿಕೊಳ್ಳಲು ಸಾಕ್ಷಾತ್  ಭಗವಂತನಿ೦ದಲೂ ಸಾಧ್ಯವಿಲ್ಲ. ಹಾಗಾಗಿ ಲೋಕಾಯುಕ್ತದ ಹಳೆಯ ಸ್ವರೂಪ ಬದಲಾಗಿದೆ. ಲೋಕಾಯುಕ್ತದ ಹೆಸರಲ್ಲಿ ಎಷ್ಟು ಉಳಿದುಕೊಂಡಿದೆಯೋ ಅಷ್ಟನ್ನೇ ಅದರ ಹೊಸ ಸ್ವರೂಪ ಎಂದು ಸ್ವೀಕರಿಸಬೇಕಾಗಿದೆ.ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಅಧಿಕಾರ ಕಳೆದುಕೊಂಡಿರುವ ಲೋಕಾಯುಕ್ತ ಇದ್ದೂ ಇಲ್ಲದಂತೆ ಎನ್ನುವ ಭಾವನೆಯೊಂದನ್ನು ಈಗ ಮಾಧ್ಯಮಗಳು ಸೃಷ್ಟಿಸುತ್ತಿವೆ. ಇದು ಅವಸರದ ತೀರ್ಮಾನ. ಸರ್ಕಾರಿ ವ್ಯವಸ್ಥೆಯಲ್ಲಿ ಜನ ಎದುರಿಸುವುದು ಭ್ರಷ್ಟಾಚಾರದ ಸಮಸ್ಯೆಯನ್ನು ಮಾತ್ರವಲ್ಲ. ಭ್ರಷ್ಟಾಚಾರದಾಚೆಗೂ ಸರ್ಕಾರಗಳು ಜನರಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಆದರೆ ಇಷ್ಟರತನಕ ಭ್ರಷ್ಟಾಚಾರದ ವಿಚಾರದಲ್ಲಿ ಲೋಕಾಯುಕ್ತ ವಹಿಸಿದ ಪಾತ್ರವನ್ನಷ್ಟೇ ವೈಭವೀಕರಿಸಿ, ಉಳಿದಂತೆ ಅದು ನಿರ್ವಹಿಸಿದ ಮತ್ತು ನಿರ್ವಹಿಸಬೇಕಾಗಿದ್ದ ಪಾತ್ರವನ್ನು ಕಡೆಗಣಿಸಲಾಗಿದೆ. ಸರ್ಕಾರದ ಮುಂದೆ  ಜನ ಇಡುವ ಅಹವಾಲುಗಳನ್ನು ಆಲಿಸುವುದು ಮಹತ್ತರವಾದ ಕೆಲಸ. ಹಾಗೆ ನೋಡಿದರೆ ಭ್ರಷ್ಟಾಚಾರ ಎನ್ನುವುದು ಎರಡೂ ಕೈಗಳು ಸೇರಿದಾಗ ಕೇಳಿಸುವ ಚಪ್ಪಾಳೆಯಂತೆ. ಭ್ರಷ್ಟಾಚಾರದಲ್ಲಿ ಜನರ ಪಾಲೂ ಇರುತ್ತದೆ.ಸರ್ಕಾರದ ಮಂದಿ ಜನರಿಗೆ ನೀಡುವ ಇತರ ಕಿರುಕುಳಗಳು ಹಾಗಲ್ಲ. ಅವು ಎರಡೂ ಕೈ ಸೇರಿ ತಟ್ಟುವ ಚಪ್ಪಾಳೆಯಲ್ಲ. ಪ್ರಬಲರಾದವರು ದುರ್ಬಲರ ಮೇಲೆ ನಡೆಸುವ ಏಕಮುಖ ಪ್ರಹಾರ. ಇಲ್ಲಿ ಜನರ ನೆರವಿಗೆ ನಿಲ್ಲುವ ಕೆಲಸ ಪ್ರಮುಖ ಮಾತ್ರವಲ್ಲ, ಪವಿತ್ರವೂ ಆಗಿದೆ. ಆ ಮಟ್ಟಿಗೆ ಹೊಸ ಲೋಕಾಯುಕ್ತರು ಸಂಸ್ಥೆಯ ಈಗಿನ ಪಾತ್ರವೇನು ಎನ್ನುವುದನ್ನು ಸರಿಯಾಗಿಯೇ ನಿಷ್ಕರ್ಷಿಸಿದ್ದಾರೆ.  ಸೀಮಿತವಾದರೂ ಪ್ರಮುಖವಾದ ದಾರಿಯನ್ನು ಅವರು ಕ್ರಮಿಸಬೇಕಿದೆ. ಈ ಹಾದಿಯಲ್ಲಿ ಹಳೆಯ ಲೋಕಾಯುಕ್ತದ ಚರಿತ್ರೆ ತಿಳಿಸುವ ಕೆಲ ಪ್ರಮುಖ ಪಾಠಗಳನ್ನು ಗಮನದಲ್ಲಿರಿಸಿಕೊ೦ಡರೆ ಒಳಿತು. ಏನು ಈ ಪಾಠಗಳು?ಲೋಕಾಯುಕ್ತ ಒಂದು ವಿಲಕ್ಷಣ ಸಂಸ್ಥೆ. ಈ ಸಂಸ್ಥೆಯ ಮುಖ್ಯಸ್ಥರಾಗಿ  ನೇಮಕಗೊಳ್ಳುವವರು ನಿವೃತ್ತ ನ್ಯಾಯಮೂರ್ತಿಗಳಾಗಿದ್ದರೂ,  ಒಮ್ಮೆ ಆ ಹುದ್ದೆಗೆ ಬಂದ ನಂತರ ಅವರು ನ್ಯಾಯಮೂರ್ತಿಯಂತೆ ಒಂದು ರೀತಿಯ ಸಾಮಾಜಿಕ ನಿರ್ವಾತದಲ್ಲಿ ಕಾರ್ಯ ನಿರ್ವಹಿಸುವ ಹಾಗಿಲ್ಲ. ಲೋಕಾಯುಕ್ತರು ಪೊಲೀಸ್ ಇಲಾಖೆಯಿಂದ ನಿಯೋಜನೆಗೊಂಡವರ ಮೂಲಕ ಕೆಲಸ ಮಾಡಿಸಿಕೊಳ್ಳಬೇಕಾದರೂ ಅವರೇ ಇಲಾಖೆಯ ಮುಖ್ಯಸ್ಥರಂತೆ ಕಾರ್ಯವೆಸಗಲಾಗುವುದಿಲ್ಲ. ಲೋಕಾಯುಕ್ತರಿಗೆ ಸರ್ಕಾರದ ವ್ಯವಹಾರಗಳನ್ನು ಪರಿಶೀಲಿಸುವ, ಪ್ರಶ್ನಿಸುವ ಅಧಿಕಾರವನ್ನು ಕಾನೂನು ನೀಡುತ್ತದಾದರೂ ಅವರು ಮಾಡುವುದು ನ್ಯಾಯಾಲಯ ಮಾಡುವ ಕೆಲಸವನ್ನಲ್ಲ.ಲೋಕಾಯುಕ್ತರ ಹುದ್ದೆ ಜನಸೇವೆ ಮಾಡಲು ಅವಕಾಶ ನೀಡುವುದಾದರೂ ಅವರು ಒಬ್ಬ ಜನನಾಯಕನ೦ತೆ ವರ್ತಿಸುವ ಹಾಗಿಲ್ಲ. ಒಂದರ್ಥದಲ್ಲಿ ಲೋಕಾಯುಕ್ತ ಇವರೆಲ್ಲರೂ ಮಾಡುವ ಕೆಲಸವನ್ನು ಮಾಡಿಯೂ ಇವರ್‍ಯಾರಂತೆಯೂ ವರ್ತಿಸಲಾಗದ, ವರ್ತಿಸಬಾರದ ಒಗಟಾದ ಸಾಂಸ್ಥಿಕ ಆವಿಷ್ಕಾರ.ಇವೆಲ್ಲವೂ ಸೂಕ್ಷ್ಮ ಮಾತ್ರವಲ್ಲ, ಅಷ್ಟೇ ಮಹತ್ವದ ವಿಚಾರಗಳು. ದುರಂತ ಏನು ಎಂದರೆ, ಮೂರು ದಶಕಗಳ ಕರ್ನಾಟಕ ಲೋಕಾಯುಕ್ತದ ಚರಿತ್ರೆಯಲ್ಲಿ ಈ ಸೂಕ್ಷ್ಮ ಅಂಶಗಳೆಲ್ಲಾ ಕಡೆಗಣನೆಗೆ ಒಳಗಾಗಿ ಆ ಸಂಸ್ಥೆಯ ಬಗ್ಗೆ ಚಿತ್ರವಿಚಿತ್ರವಾದ ಅಭಿಪ್ರಾಯಗಳೂ, ಅಪೇಕ್ಷೆಗಳೂ ಹುಟ್ಟಿಕೊಂಡವು. ಮೊದಲ ಮೂವರು ಲೋಕಾಯುಕ್ತರು ಅಪ್ಪಟ ನ್ಯಾಯಮೂರ್ತಿಗಳಂತೆ  ಕಾರ್ಯವೆಸಗಿದರು. ಸಮಾಜದ ಆಗುಹೋಗುಗಳಿಂದ ಒಂದು ಹೆಜ್ಜೆ ಹಿಂದೆ ನಿಂತು ಎಲ್ಲವನ್ನೂ ಸ್ಥಿತಪ್ರಜ್ಞ ಸ್ಥಿತಿಯಲ್ಲಿ ನೋಡಬೇಕಾದ ನ್ಯಾಯಮೂರ್ತಿಗಳ ಕಾರ್ಯವಿಧಾನಕ್ಕೂ ಆಡಳಿತದ ಅಖಾಡಕ್ಕೆ ಇಳಿದು ಸೆಣಸಬೇಕಾದ ಲೋಕಾಯುಕ್ತರ ಕಾರ್ಯವಿಧಾನಕ್ಕೂ ಇರಬೇಕಾದ ಅಗತ್ಯ ವ್ಯತ್ಯಾಸ ಇವರ ಕಾಲದಲ್ಲಿ ಕಾಣಿಸಲಿಲ್ಲ.ನಾಲ್ಕನೆಯ ಲೋಕಾಯುಕ್ತರ ಕಾಲದಲ್ಲಿ, ಲೋಕಾಯುಕ್ತರು ಅಪ್ಪಟ ಜನನಾಯಕರಂತೆ ವರ್ತಿಸತೊಡಗಿದರು. ಲೋಕಾಯುಕ್ತರೆಂದರೆ ರಾಜಕೀಯ ನಾಯಕರಲ್ಲ ಎನ್ನುವ ಪ್ರಜ್ಞೆ ಅವರ ಕಾಲದಲ್ಲಿ ಸಂಪೂರ್ಣ ಮರೆಯಾಗಿತ್ತು. ಈ ಮರೆವಿನಲ್ಲೂ  ಅವರು ಒಬ್ಬ ಮುತ್ಸದ್ದಿಯ ರೀತಿ ವರ್ತಿಸಿದ್ದರೆ ಪರವಾಗಿರಲಿಲ್ಲ. ಆದರೆ ಅವರ ಕಾರ್ಯಶೈಲಿಯಲ್ಲಿ ಕಂಡದ್ದು ಒಬ್ಬ ಬೀದಿ ಮಟ್ಟದ ರಾಜಕಾರಣಿಯ ಅನುಕರಣೆ. ಆ ಮಾದರಿಯನ್ನು ಜನ ಮೆಚ್ಚಿದರು. ಮಾಧ್ಯಮಗಳು ಮೆಚ್ಚಿಕೊಂಡವು. ಲೋಕಾಯುಕ್ತದಂಥ ಒಂದು ಸಂಸ್ಥೆಯ ಕ್ಷಮತೆಯನ್ನು ಅಳೆಯಲು ಜನಪ್ರಿಯತೆ ಮಾನದಂಡವಾಗಬಾರದಿತ್ತು. ಆದರೆ ಈ ಆಧಾರವನ್ನೇ ಇಟ್ಟುಕೊಂಡು ಮಾಧ್ಯಮಗಳು ಭಲೇ ಭಲೇ ಎಂದವು.ಈಗಲೂ ಮಾಧ್ಯಮದ ಮ೦ದಿ ಆ ಲೋಕಾಯುಕ್ತರ ಕಾಲ ‘ಸುವರ್ಣ ಯುಗ’ ಎನ್ನುವಂತೆ ಬರೆಯುತ್ತಾರೆ. ಅವರ ಕಾಲದಲ್ಲಿ ಲೋಕಾಯುಕ್ತ ಜನರ ಬಳಿ ಹೋಯಿತು ಎನ್ನುತ್ತಾರೆ. ಅವರು ಜನರ ಬಳಿ ಹೋದರೋ, ಜನರಿಗೆ ಲೋಕಾಯುಕ್ತದ ಬಗ್ಗೆ ಅನಗತ್ಯ, ಅನಪೇಕ್ಷಿತ ನಿರೀಕ್ಷೆಗಳನ್ನು ಹುಟ್ಟಿಸಿ, ಆ ನಿರೀಕ್ಷೆಗಳನ್ನು ಮುಟ್ಟಲು ಪ್ರಯತ್ನಿಸುತ್ತಾ ಸಂಸ್ಥೆಯನ್ನು ವಿರೂಪಗೊಳಿಸಿದ್ದರೋ ಎನ್ನುವ ಪ್ರಶ್ನೆ ಮಾಧ್ಯಮಗಳಿಗೆ ಅರ್ಥವಾಗುವಂತಹದ್ದಲ್ಲ. 

ನ್ಯಾಯಮೂರ್ತಿಯಾದವರಿಗೆ ಮಾಧ್ಯಮಗಳ ಹೊಗಳಿಕೆಯ ಮಿತಿ ತಿಳಿದಿರಬೇಕಿತ್ತು. ಆದರೆ ನಡೆದದ್ದೇ ಬೇರೆ. ಮಾಧ್ಯಮಗಳ ಹೊಗಳಿಕೆಯ ಪ್ರವಾಹದಲ್ಲಿ ಲೋಕಾಯುಕ್ತ ದಾರಿತಪ್ಪಿತು. ಲೋಕಾಯುಕ್ತದ ಬೀದಿ ನ್ಯಾಯಾಧಿಕರಣಕ್ಕೊಳಗಾದವರು ಸುಧಾರಿಸಿದರು ಎನ್ನುವಂತಿಲ್ಲ.ಕಾನೂನಿನ ವಿಷಯದಲ್ಲಿ ಭಯ ಭಕ್ತಿ ಹೊಂದಿದರು ಎನ್ನುವಂತಿಲ್ಲ.  ಲೋಕಾಯುಕ್ತದ ಆಗಿನ ಪ್ರಹಸನಗಳನ್ನು ಅವರೆಲ್ಲ ಒಂದು ದಿನದ ಮಟ್ಟಿಗೆ ತಾಳಿಕೊಳ್ಳಬೇಕಾದ ಕಿರುಕುಳ (one-day nuisance) ಎಂದುಕೊಂಡರು. ಈ ಅವಧಿಯಲ್ಲಿ ಲೋಕಾಯುಕ್ತದ ಗೌರವ ಆಕಾಶಕ್ಕೇರಿತೋ ಪಾತಾಳಕ್ಕಿಳಿಯಿತೋ ಎಂಬುದು ಜನರ ವಿವೇಚನೆಯ ಮಟ್ಟಕ್ಕೆ ಬಿಟ್ಟದ್ದು.ಐದನೆಯ ಲೋಕಾಯುಕ್ತರ ಕಾಲಕ್ಕೆ ಆ ಸಂಸ್ಥೆ ಇನ್ನೊಂದು ತಿರುವು ಪಡೆಯಿತು. ಪಾಳೆಗಾರಿಕೆಗೆ ಹೋಯಿತು. ಲೋಕಾಯುಕ್ತ ಎಂದರೆ ಒಂದು ಸಾಮಾಜಿಕ ಚಳವಳಿ ಎನ್ನುವಂತೆ ಘಟನಾವಳಿಗಳು ನಡೆದು ಹೋದವು. ಲೋಕಾಯುಕ್ತ ಒಂದು ಸಂಸ್ಥೆ, ಅದೊಂದು ರಾಜಕೀಯ ಹೋರಾಟದ ವೇದಿಕೆಯಲ್ಲ ಎನ್ನುವ ಸತ್ಯ ಮರೆತ ಅವರ ಕಾರ್ಯವಿಧಾನ, ಸಂಸ್ಥೆಯ ಜನಪ್ರಿಯತೆಯನ್ನು ಇನ್ನೊಂದು ರೀತಿಯಲ್ಲಿ ಹೆಚ್ಚಿಸಿತು. ಅವರು  ಹೀಗೆಲ್ಲಾ ಮಾಡಿರುವುದು ಜನಹಿತದ ದೃಷ್ಟಿಯಿಂದ ಮತ್ತು ಜನಹಿತ ಇದರಿಂದ ಸಾಧ್ಯವಾಯಿತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಯಾವ ಸಂಸ್ಥೆ ಯಾವ ರೀತಿ ಜನಹಿತಕ್ಕೆ ನೆರವಾಗಬೇಕು ಎನ್ನುವುದಕ್ಕೆ ಅಲಿಖಿತ ನಿಯಮವಿದೆ. ಅದನ್ನು ಪಾಲಿಸುವುದು ಇಡೀ ವ್ಯವಸ್ಥೆಯ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ. ಇದನ್ನು ನ್ಯಾಯಮೂರ್ತಿಯಾದವರು ಗುರುತಿಸದೇ ಹೋದರೆ ಇನ್ಯಾರು ಗುರುತಿಸಬೇಕು?ಕರ್ನಾಟಕ ಲೋಕಾಯುಕ್ತ ಈ ಹಂತದಲ್ಲಿ ಗಳಿಸಿದ ಜನಪ್ರಿಯತೆ ಎಷ್ಟಿತ್ತು ಎಂದರೆ, ಅದು ಚುನಾಯಿತ ಸರ್ಕಾರಕ್ಕಿಂತಲೂ ಹೆಚ್ಚು ಜನಪ್ರಿಯವಾಗಿ ಒಂದು ರೀತಿಯಲ್ಲಿ ಪರ್ಯಾಯ ಸರ್ಕಾರವೇ ಆಗಿಬಿಟ್ಟಿತು. ಜನಪ್ರಿಯತೆಯ ಜತೆಜತೆಗೆ ಬರುವ ದೌರ್ಬಲ್ಯಗಳೆಲ್ಲಾ ಅಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರ ಸೃಷ್ಟಿಸಿದ ಸಂಸ್ಥೆಯೊಂದು ಸರ್ಕಾರಕ್ಕಿಂತ ಹೆಚ್ಚು ಜನಪ್ರಿಯವಾಗುವುದನ್ನು ಸರ್ಕಾರದಲ್ಲಿದ್ದವರು  ಸಹಿಸಿಕೊಳ್ಳುವುದಿಲ್ಲ. ಆ ಅಸಹನೆಯ ಪರಿಣಾಮವಾಗಿ ಏನೇನಾಗಬಹುದೋ ಅವೆಲ್ಲಾ ಈಗ ಆಗಿ ಹೋಗಿವೆ.ಲೋಕಾಯುಕ್ತರು ಹೀಗೇ ಇರಬೇಕು ಎಂದು ಒಂದು ಮಾದರಿ ಇಲ್ಲ. ಬಹುಶಃ ಲೋಕಾಯುಕ್ತ (ಓಂಬುಡ್ಸ್‌ಮನ್) ಎಂಬ ಮಾದರಿಯೇ ನಮಗೆ ಹೊಸತು. ಅದು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಕಾರ್ಯವೆಸಗುತ್ತದೆ. ಕಳೆದ ಮೂರು ದಶಕಗಳ ಅನುಭವ ಲೋಕಾಯುಕ್ತಕ್ಕೆ ಅದರದ್ದೇ ಆದ ಒಂದು ಸಾಂಸ್ಥಿಕ ಗುಣ ಬೆಳೆಸಿಕೊಳ್ಳಲು ನೆರವಾಗಬೇಕಿತ್ತು. ಹಾಗಾದಂತೆ ಕಾಣುವುದಿಲ್ಲ. ಲೋಕಾಯುಕ್ತ ಸಾಂಸ್ಥಿಕವಾಗಿ ಬೆಳೆಯುವುದಕ್ಕಿಂತ ಅದರ ಮುಖ್ಯಸ್ಥರಾಗಿ ನೇಮಕಗೊಳ್ಳುವವರ ವೈಯಕ್ತಿಕ ಒಲವು, ನಿಲುವುಗಳ ಮೂಲಕವೇ ಆ ಸಂಸ್ಥೆ ಕೆಲಸ ಮಾಡಿದ್ದು.

ಆರನೆಯ ಲೋಕಾಯುಕ್ತರು ತೀರಾ ಅಲ್ಪಾವಧಿಯಲ್ಲೇ ನಿರ್ಗಮಿಸಿದರು.ಏಳನೆಯ ಲೋಕಾಯುಕ್ತರು ಸ್ವತಃ ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದರು. ಈ ಎರಡೂ ಅವಧಿಗಳನ್ನು ಅಪವಾದ ಎನ್ನುವಂತೆ ಬದಿಗಿಡೋಣ. ಈಗಷ್ಟೇ ಅಧಿಕಾರ ವಹಿಸಿಕೊಂಡ ಎಂಟನೆಯ ಲೋಕಾಯುಕ್ತರು ಮೊದಲ ಐವರು ಲೋಕಾಯುಕ್ತರು ಗುರುತಿಸದ ಸೂಕ್ಷ್ಮಗಳನ್ನು ಗುರುತಿಸಿ ಕಾರ್ಯವೆಸಗಿದರೆ, ಲೋಕಾಯುಕ್ತಕ್ಕೊಂದು ಸಾಂಸ್ಥಿಕ ಸ್ವರೂಪ ನೀಡಿದರೆ, ಅದೊಂದು ದೊಡ್ಡ ಕೊಡುಗೆಯಾಗಬಹುದು. ಅವರು ಮಾಧ್ಯಮಗಳ ಹೊಗಳಿಕೆ ತೆಗಳಿಕೆಯ ಬಗ್ಗೆ ನಿರ್ಲಿಪ್ತರಾಗಿದ್ದರೆ ಅರ್ಧ ಯಶಸ್ಸಿಗೆ ಅದೇ ಸಾಕು.ಈ ತನಕ ಭ್ರಷ್ಟಾಚಾರದ ಪ್ರಕರಣಗಳು ಅತಿರಂಜನೆಯ ಪ್ರಚಾರ ಪಡೆದರೆ, ಉಳಿದಂತೆ ಲೋಕಾಯುಕ್ತದ ಮುಂದೆ ಬರುವ ದೂರುಗಳೆಲ್ಲಾ ಕೇವಲ ಅಂಕಿ-ಅಂಶಗಳಾಗಿ ಉಳಿದಿವೆ. ಈಗ ಈ ದೂರುಗಳನ್ನು ಆಲಿಸುವುದೇ ಲೋಕಾಯುಕ್ತದ ಪ್ರಮುಖ ಕೆಲಸ ಆಗಿರುವುದರಿಂದ, ದೂರುಗಳ ಜಾಡು ಹಿಡಿದು ಸಾಗಿದರೆ ಸರ್ಕಾರದ ಕಾರ್ಯನಿರ್ವಹಣೆ ಕುರಿತಂತೆ ವಿಭಿನ್ನ  ಲೋಕವೊಂದರ ಅನಾವರಣವಾಗುತ್ತದೆ. ಆ ಲೋಕದ ಆಳ, ಅಗಲವನ್ನು ತಿಳಿದುಕೊ೦ಡು ಆಡಳಿತ ಸುಧಾರಣೆಗಳು ನಡೆಯದೇ ಹೋದರೆ, ಬಂದ ದೂರುಗಳೇ ಮತ್ತೆ ಮತ್ತೆ ಬರುತ್ತವೆ. ಸುಧಾರಣೆ ಮಾಡಬೇಕಿರುವುದು ಸರ್ಕಾರ. ಅದಕ್ಕೆ ಬೇಕಾದ ಭೂಮಿಕೆ ಸಿದ್ಧಪಡಿಸುವ ಕೆಲಸ ಲೋಕಾಯುಕ್ತದ ಕಡೆಯಿಂದ ಜರುಗಿದರೆ ಆ ಸಂಸ್ಥೆಯ ಅಸ್ತಿತ್ವಕ್ಕೊಂದು ಅರ್ಥ ಬರುತ್ತದೆ.

ಪ್ರತಿಕ್ರಿಯಿಸಿ (+)