ಕರ್ನಾಟಕ ಮರೆತ ಕನ್ನಡಿಗರು ಇವರು!

7

ಕರ್ನಾಟಕ ಮರೆತ ಕನ್ನಡಿಗರು ಇವರು!

ಡಿ. ಉಮಾಪತಿ
Published:
Updated:
ಕರ್ನಾಟಕ ಮರೆತ ಕನ್ನಡಿಗರು ಇವರು!

ತ್ರಿಲೋಕಪುರಿ ಎಂಬುದು ಯಮುನಾ ನದಿಯ ಆಚೆಯ ಪೂರ್ವ ದಿಲ್ಲಿಯ ಮಯೂರ ವಿಹಾರಕ್ಕೆ ಅಂಟಿಕೊಂಡಿರುವ ನೆರೆಹೊರೆ. ಮೂವತ್ತೆರಡು ವರ್ಷಗಳ ಹಿಂದೆ ಇಲ್ಲಿ ಜರುಗಿದ ಸಿಖ್ಖರ ನರಮೇಧದ ಹಿಂದೆ ಕಾಂಗ್ರೆಸ್ ಪಕ್ಷದ ನೇರ ಕೈವಾಡವಿದ್ದುದು ಜನಜನಿತ. ಈ ನರಮೇಧದ ಅವಳಿ ಜನವಸತಿ ತಾಣ ಕಲ್ಯಾಣಪುರಿ. ತ್ರಿಲೋಕಪುರಿ ಮತ್ತು ಕಲ್ಯಾಣಪುರಿ ಎರಡೂ ಅಕ್ಕಪಕ್ಕದ ವಿಶಾಲ ಜನವಸತಿ ಪ್ರದೇಶಗಳು. ಈ ಎರಡನ್ನೂ ಹೊಸದಾಗಿ ನಿರ್ಮಿಸಿದವರು ಇಂದಿರಾ ಗಾಂಧಿ. ತುರ್ತುಪರಿಸ್ಥಿತಿಯಲ್ಲಿ ಜಗಮೋಹನ್ ಮತ್ತು ಸಂಜಯ ಗಾಂಧಿ ಅವರು ದಿಲ್ಲಿಯ ತುರ್ಕ್‌ಮಾನ್ ಗೇಟ್ ಮತ್ತಿತರೆ ಕೊಳೆಗೇರಿಗಳ ಮೇಲೆ ಬುಲ್ಡೋಜರ್ ಓಡಿಸಿದ ನಂತರ ನಿರಾಶ್ರಿತರಾದ ಜನರನ್ನು ಇಲ್ಲಿಗೆ ತಂದು ಕೆಡವಿದಾಗ ಯಾವ ಸೌಕರ್ಯವೂ ಇಲ್ಲದ ಪಾಳು ಬಿದ್ದಿದ್ದ ಬಂಜರು ಭೂಮಿಯಿದು. ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಇಲ್ಲದ ಈ ಬರಡು ಬಂಜರು ನೆಲದಲ್ಲಿ ಬಡ ದಲಿತರು, ಹಿಂದುಳಿದವರು ಹಾಗೂ ಮುಸಲ್ಮಾನರು ಬದುಕುಗಳನ್ನು ಕಟ್ಟಿಕೊಂಡರು.

ಇಲ್ಲಿಗೆ ಬಂದು ಬಿದ್ದವರೆಲ್ಲ ರಾಜಕೀಯ ಪುಢಾರಿಗಳ ಮರ್ಜಿಯನ್ನು ಅನುಸರಿಸಿ ಅವರ ಕೃಪಾ ಭಿಕ್ಷೆಯಲ್ಲಿ ಬದುಕಬೇಕಿತ್ತು. ಕಾಂಗ್ರೆಸ್ ಪಕ್ಷದ ಹಿಡಿತ ಬಲವಾಗಿದ್ದ ಈ ಪುನರ್ವಸತಿ ಪ್ರದೇಶಗಳು ಇಂದಿರಾ ಹತ್ಯೆಯ ನಂತರ ಸಿಖ್ಖರನ್ನು ತರಿದು ಹಾಕಿದ್ದವು. ಇದೇ ತ್ರಿಲೋಕಪುರಿ ಮೂರು ವರ್ಷಗಳ ಹಿಂದೆ ಬೆಚ್ಚಿಬೀಳಿಸುವಂತೆ ಕನಲಿತ್ತು. ಹಿಂದೂ- ಮುಸ್ಲಿಂ ಘರ್ಷಣೆಯ ಮತ್ತೊಂದು ಮಹಾ ಮಾರಣಹೋಮಕ್ಕೆ ಯಾರೋ ಮೇಲ್ಪದರ ಗೀರಿ ಕೋಮುವಾದದ ಕಬ್ಬಿಣ ಕಾದಿದೆಯೇ ಎಂದು ಪರಿಶೀಲಿಸಿ ನೋಡಿದ ಸೂಚನೆಗಳಿದ್ದವು.

ಈ ಅವಳಿ ಜನವಸತಿಗಳು ಕನ್ನಡದ ಕುತೂಹಲವೊಂದನ್ನು ಗರ್ಭದಲ್ಲಿ ಇರಿಸಿಕೊಂಡಿವೆ. ಅಸಲು ಲೆಕ್ಕದಲ್ಲಿ ‘ಕನ್ನಡಿಗರೆಂದು ಈವರೆಗೆ ಗುರುತಿಸಿಲ್ಲದ’ ಸಾವಿರಾರು ಮಂದಿ ಕನ್ನಡಿಗರಿದ್ದಾರೆ. ಕನ್ನಡ ನಾಡು ಇವರ ಇರವನ್ನೇ ಅರಿಯದು. ಕೌತುಕದ ಸಂಗತಿಯೆಂದರೆ ಈ ಕನ್ನಡಿಗರು ಕರ್ನಾಟಕದಿಂದ ವಲಸೆ ಬಂದು ನೆಲೆಸಿದವರಲ್ಲ. ಬದಲಾಗಿ ತಮಿಳುನೆಲದಿಂದ ಬಂದು ನೆಲೆ ನಿಂತವರು. ತಮಿಳು ಮಾತೃಭಾಷಿಕರ ಪಾಲಿಗೆ ಇವರು ‘ಕನ್ನಡಕಾರ’ರು. ಕರ್ನಾಟಕ ಸರ್ಕಾರ ಒಂದು ವೇಳೆ ಇವರ ಇರವನ್ನು ಗುರುತಿಸಿದರೂ ಹೊರನಾಡ ಕನ್ನಡಿಗರ ವ್ಯಾಖ್ಯೆ ಇವರಿಗೆ ಅನ್ವಯ ಆಗುವುದಿಲ್ಲ. ಸ್ವಾತಂತ್ರ್ಯ ಬಂದ ಮರುವರ್ಷವೇ ದೆಹಲಿ ಕರ್ನಾಟಕ ಸಂಘ ಅಸ್ತಿತ್ವಕ್ಕೆ ಬಂದಿತ್ತು. ಈ ಕೊಳೆಗೇರಿಯ ಬಡ ‘ಕನ್ನಡಕಾರ’ರ ಸಂಗತಿ ಸಂಘದ ಅರಿವಿಗೆ ಬಂದದ್ದು ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೇ. ಹೊಸ ಬಗೆಯ ಈ ‘ಕನ್ನಡಕಾರ’ರನ್ನು ಕನಿಷ್ಠಪಕ್ಷ ಮಾತಾಡಿಸಬೇಕೇ ಎಂಬ ಪ್ರಶ್ನೆಯನ್ನೂ ಸಂಘ ತನಗೆ ತಾನೇ ಇನ್ನೂ ಹಾಕಿಕೊಂಡಂತಿಲ್ಲ.

ಈ ಬಡ ಕನ್ನಡಕಾರರು ಸಣ್ಣಪುಟ್ಟ ವ್ಯಾಪಾರದಲ್ಲಿ, ಮನೆಗೆಲಸದಲ್ಲಿ, ಕಾರ್ಖಾನೆಗಳ ದಿನಗೂಲಿಯಲ್ಲಿ, ಅಡುಗೆ ಕೆಲಸದಲ್ಲಿ, ವಾಹನ ಚಾಲನೆ, ಟ್ರ್ಯಾಫಿಕ್ ಸಿಗ್ನಲ್‌ಗಳಲ್ಲಿ ಮಲ್ಲಿಗೆ ಹೂ ದಂಡೆಗಳ ಮಾರಾಟದಲ್ಲಿ ಅನ್ನದ ದಾರಿ ಹುಡುಕಿಕೊಂಡಿದ್ದಾರೆ. ಇವರ ಮನೆ ಮಾತು ಕನ್ನಡ. ಕೆಲ ಮಟ್ಟಿಗೆ ತಮಿಳು ಶಬ್ದಗಳು ಬೆರೆತಿದ್ದಾವು. ಅವರನ್ನು ಕೇಳಿ ನೋಡಿದರೆ ತಮ್ಮ ತಾಯ್ನುಡಿ ಕನ್ನಡವೆಂದೇ ಅವರು ಹೇಳುತ್ತಾರೆ. ಮೂಲತಃ ನೇಕಾರರಾದ ಇವರು ತಮಿಳುನಾಡಿನಲ್ಲಿ ‘ಕನ್ನಡ ದೇವಾಂಗ ಚೆಟ್ಟಿಯಾರ್’ ಎಂದೇ ಗುರುತಿಸಿಕೊಂಡವರು.

ಹೀಗೆ ದೆಹಲಿಗೆ ಬಂದವರ ಪೈಕಿ ಸಣ್ಣಪುಟ್ಟ ವ್ಯಾಪಾರ ಮಾಡಿ ಮಕ್ಕಳನ್ನು ಓದಿಸಿ ಉತ್ತಮ ಉದ್ಯೋಗಗಳಲ್ಲಿ ನೆಲೆ ಊರಿಸಿದವರು ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಅವರ ಪ್ರಕಾರ ಕನ್ನಡ ದೇವಾಂಗ ಚೆಟ್ಟಿಯಾರರ ದಿಲ್ಲಿ ವಲಸೆ ಆರಂಭ ಆದದ್ದು 1967ರ ಆಸುಪಾಸು. ತಮಿಳುನಾಡಿನ ಡಿ.ಎಂ.ಕೆ. ಸರ್ಕಾರ ತನ್ನ ಜವಳಿ ನೀತಿ ಬದಲಿಸಿ, ವಿದ್ಯುತ್ ಚಾಲಿತ ಮಗ್ಗಗಳಿಗೆ ಅನುಮತಿ ನೀಡಿದ್ದರ ಪರಿಣಾಮವಾಗಿ ನೇಕಾರರ ಕುಲಕಸುಬು ಆಘಾತ ಎದುರಿಸಿತ್ತು. ದುಡಿಮೆಯ ದಾರಿ ಅರಸಿಕೊಂಡು ನೇಕಾರರು ಬೆಂಗಳೂರು, ಮುಂಬೈ, ದಿಲ್ಲಿಯತ್ತ ಗುಳೆಯೆದ್ದರು.

ಹೀಗೆ ದಿಲ್ಲಿಗೆ ಬಂದಿಳಿದ ಕುಟುಂಬಗಳ ಸಂಖ್ಯೆ ಸಾವಿರದ ಆಸುಪಾಸು ಎಂಬುದು ನಾಗಲಿಂಗಂ ಅಂದಾಜು. ಖುದ್ದು ನಾಗಲಿಂಗಂ ಒಂಬತ್ತು ವರ್ಷದ ಬಾಲಕನಾಗಿ ಇಲ್ಲಿಗೆ ಬಂದಿಳಿದಾಗ ಕೈ ನೀಡಿ ಕರೆದುಕೊಂಡು ದಿನಗೂಲಿ ಕೊಟ್ಟದ್ದು ಪಂಜಾಬಿ ಚಹಾ ಅಂಗಡಿ. ದಿಲ್ಲಿಗೆ ಬಂದಿಳಿದ ಆರಂಭದ ದಿನಗಳಲ್ಲಿ ಈ ‘ಕನ್ನಡಕಾರ’ರು, ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದ್ ಕೈಮಗ್ಗಗಳಲ್ಲಿ ಕೂಲಿಗೆ ಸೇರಿಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆ ಪಂಚೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯುತ್ತಾರೆ. ಈ ಮಗ್ಗಗಳೂ ಬಾಗಿಲಿಕ್ಕಿದ ನಂತರ ಅಕ್ಷರಶಃ ಬೀದಿಗೆ ಬಿದ್ದು ಬದುಕು ಹುಡುಕಿಕೊಳ್ಳುತ್ತಾರೆ.

ಹೊಸತಾಗಿ ಬಂದಾಗ ಇವರು ನೆಲೆ ನಿಲ್ಲುವುದು ಇಂದಿನ ಪ್ರಸಿದ್ಧ ಕರೋಲ್ ಬಾಗಿನ ಗುಡಿಸಿಲು ಝೋಪಡಿಗಳಲ್ಲಿ. ಅಲ್ಲಿಂದ ಅವರನ್ನು ತೆರವು ಮಾಡಿಸಿದಾಗ ಸಣ್ಣ ಪುಟ್ಟ ನಿವೇಶನದ ರೂಪದಲ್ಲಿ ದೊರೆಯುವ ಹೊಸ ನೆಲೆಗಳು ಮಂಗೋಲ್ ಪುರಿ, ಇಂದ್ರಾಪುರಿ, ತ್ರಿಲೋಕ್ ಪುರಿ. ಈ ಮೂರೂ ಪ್ರದೇಶಗಳಲ್ಲಿ ತಮಗೆ ಮನೆಯಿಲ್ಲದೆ ಹೋದರೂ ತಮ್ಮ ಕುಲದೈವ ಸೌಂಡೇಶ್ವರಿಗೆ (ಚೌಡೇಶ್ವರಿ) ದೊಡ್ಡ ಗುಡಿಗಳನ್ನು ಕಟ್ಟಿದ್ದಾರೆ.

ತಮಿಳುನಾಡಿನಲ್ಲಿ ಇವರ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು ಎನ್ನಲಾಗಿದೆ. ಕರ್ನಾಟಕದ ಹಂಪಿಯ ಹೇಮಕೂಟ ದಯಾನಂದ ಸ್ವಾಮಿ ಈ ಜನರ ಕುಲಗುರು. ತಮಿಳುನಾಡಿನಲ್ಲಿ ಕನ್ನಡ ದೇವಾಂಗ ಚೆಟ್ಟಿಯಾರರ ಸೌಂಡೇಶ್ವರಿ ಗುಡಿಗಳ ಉದ್ಘಾಟನೆ, ಕುಂಭಾಭಿಷೇಕ ಮುಂತಾದ ಉತ್ಸವಗಳಿಗೆ ದಯಾನಂದ ಸ್ವಾಮಿ ಅವರನ್ನು ತಪ್ಪದೆ ಆಹ್ವಾನಿಸಿ ಅಗ್ರಾಸನ ನೀಡಲಾಗುತ್ತದೆ.

ಅವರ ಪ್ರಕಾರ ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ತಮಿಳುನಾಡಿನ ಮದುರೈ ತನಕ ಹಬ್ಬಿತ್ತು. ಹೀಗಾಗಿ ದೇವಾಂಗ ಜನಾಂಗ ಕರ್ನಾಟಕದಿಂದಲೇ ವಲಸೆ ಹೋಗಿರಬಹುದು ಅಥವಾ ಅಲ್ಲಿಯೇ ಇದ್ದಿರಬಹುದು. ಎರಡು ವರ್ಷ ತಮಿಳುನಾಡಿನಲ್ಲಿದ್ದು, ಅಲ್ಲಿನ ಕನ್ನಡಕಾರರ ಕನ್ನಡವನ್ನೂ ಅವರು ಕಲಿತಿದ್ದಾರೆ. ತಮಿಳುನಾಡಿಗೆ ಹೋದರೆ ದಿಲ್ಲಿಗೆ ಬಂದರೆ ಅದೇ ಕನ್ನಡದಲ್ಲೇ ಪ್ರವಚನ ನೀಡುತ್ತಾರೆ.

ತಮಿಳುನಾಡಿನಲ್ಲಿದ್ದೂ ತಮ್ಮ ಪ್ರತ್ಯೇಕ ಸಂಸ್ಕೃತಿಯನ್ನು ಕಾದುಕೊಂಡಿರುವ ಸಮುದಾಯವಿದು. ‘ಉಗಾದಿ ಕನ್ನಡದ ಹಬ್ಬ ಅಂತ ಗೊತ್ತು. ನಾವು ಆಚರಿಸಲ್ಲ. ಯಾಕೆ ಅಂತ ಗೊತ್ತಿಲ್ಲ’ ಎನ್ನುತ್ತಾರೆ ಈ ಸಮುದಾಯದವರು. ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಅರವತ್ತೂರು ಮತ್ತು ಮೂವತ್ತೂರು ಎಂಬ ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರಂತೆ. ಈ ಎರಡು ಸೀಮೆಗಳಲ್ಲಿನ ಒಟ್ಟು ತೊಂಬತ್ತು ಊರುಗಳಲ್ಲಿ ಇವರ ವಾಸವಂತೆ. ಈ ಕನ್ನಡಕಾರರ ಕನ್ನಡದ ನುಡಿಗಟ್ಟು, ಉಚ್ಚಾರಣೆ ತಮಿಳುನಾಡಿನಲ್ಲೇ ಒಂದು ಸೀಮೆಯಿಂದ ಇನ್ನೊಂದು ಸೀಮೆಗೆ ಬದಲಾಗುತ್ತದಂತೆ.

ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಸಮುದಾಯಕ್ಕೆ ತಮ್ಮ ಮೂಲ ನೆಲೆಯ ಅರಿವಿಲ್ಲ. ಆದರೆ ಮೂಲ ತಮಿಳರಲ್ಲ ಎಂಬ ಸಂಗತಿಯನ್ನು ಬಲ್ಲರು. ತಮ್ಮ ಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ, ಹೊರಗೆ ತಮಿಳನ್ನೂ ಮಾತಾಡುತ್ತಾರೆ. ಇವರು ನೆಲೆಸಿರುವ ತಮಿಳು ಸೀಮೆಗಳು ಗಡಿ ಭಾಗದಲ್ಲಿ ಇಲ್ಲ. ಹೀಗಾಗಿ ಕನ್ನಡ ಶಾಲೆಗಳಲ್ಲಿ ಕಲಿಯುವ ಅವಕಾಶ ಇವರಿಗಿಲ್ಲ. ಪತ್ರವ್ಯವಹಾರಗಳಲ್ಲಿ ತಮ್ಮದೇ ಕನ್ನಡವನ್ನು ಬಳಸುತ್ತಾರೆ. ಆದರೆ ಈ ಕನ್ನಡದ ಲಿಪಿ ತಮಿಳು. ತಾವು ಯಾರೆಂದು ತಿಳಿಯದ ತೊಳಲಾಟ ಇವರದು.

ಕೊಯಮತ್ತೂರಿನ ಆರ್.ವೆಂಕಟೇಶನ್ (63) ಮತ್ತು ಅವರ ಪತ್ನಿ ಜಿ.ರೇವತಿ ಅವರನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಇಂಗ್ಲಿಷ್ ದೈನಿಕವೊಂದು ಮಾತಿಗೆಳೆದು ವರದಿ ಪ್ರಕಟಿಸಿತ್ತು. ವರದಿಯ ಪ್ರಕಾರ ಪ್ರಾಯಶಃ ಕನ್ನಡ ದೇವಾಂಗ ಚೆಟ್ಟಿಯಾರರ ಸಮುದಾಯದ ಕಟ್ಟಕಡೆಯ ನೇಕಾರರು ಈ ಜೋಡಿ. ಅವರ ಮಕ್ಕಳು ನೇಕಾರಿಕೆ ಕಸುಬನ್ನು ಬಿಟ್ಟಾಯಿತು... ಉತ್ತಮ ಸಂಬಳದ ಉದ್ಯೋಗಗಳಿಗಾಗಿ ಅವರನ್ನು ಓದಿಸುತ್ತಿದ್ದೇವೆ ಎನ್ನುತ್ತಾರೆ ಅವರು. ಅಲ್ಲಿಂದ 50 ಕಿ.ಮೀ. ದೂರದಲ್ಲಿ ಸೀರನಾಯಕನಪಾಳ್ಯದಲ್ಲಿ ನೂರಾರು ಮಗ್ಗಗಳು ಮುರಿದು ರಾಶಿ ಬಿದ್ದಿವೆ. ಮೊದಲು ನಾವು 200 ಮಂದಿ ನೇಕಾರರಿದ್ದೆವು. ಈಗ 23 ಮಂದಿ ಉಳಿದಿದ್ದೇವೆ. ನಮ್ಮ ಮಕ್ಕಳು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅನ್ನದ ದಾರಿ ಕಂಡುಕೊಂಡಿದ್ದಾರೆ ಎಂದಿದ್ದಾರೆ ಎನ್. ಷಣ್ಮುಗಂ. ಅವರು ತೆಲುಗು ಮಾತಾಡುವ ದೇವಾಂಗ ಚೆಟ್ಟಿಯಾರ್. ಅವರ ಪ್ರಕಾರ, ಕನ್ನಡ ಮತ್ತು ತೆಲುಗು ದೇವಾಂಗ ಚೆಟ್ಟಿಯಾರರು 450 ವರ್ಷಗಳ ಹಿಂದೆ ತಮಿಳುನಾಡಿಗೆ ವಲಸೆ ಬಂದರಂತೆ.

ಎನ್.ಕಂದಸಾಮಿ ತೆಲುಗು ದೇವಾಂಗ ಚೆಟ್ಟಿಯಾರ್. ನಿವೃತ್ತ ಸರ್ಕಾರಿ ಉದ್ಯೋಗಿ ಮತ್ತು ದೇವಾಂಗ ಚೆಟ್ಟಿಯಾರ್ ಇತಿಹಾಸ ಬಲ್ಲವರು. ಕನ್ನಡ ಮತ್ತು ದೇವಾಂಗ ಚೆಟ್ಟಿಯಾರ್ ಸಮುದಾಯಗಳು ಶ್ರೀಕೃಷ್ಣದೇವರಾಯನ ಕಾಲದಲ್ಲಿ ಇಲ್ಲಿಗೆ ವಲಸೆ ಬಂದವಂತೆ. ಬರಗಾಲದ ಬಾಧೆ ತಡೆಯಲಾರದೆ ಹಳ್ಳಿಗಳನ್ನು ತೊರೆದು ಇಲ್ಲಿಗೆ ಬಂದರು. ಆಳುವ ಅರಸರು ತಮ್ಮ ಗಡಿಗಳನ್ನು ವಿಸ್ತರಿಸಿದ್ದು ವಲಸೆಯ ಹಿಂದಿನ ಮತ್ತೊಂದು ಕಾರಣ. ಕನ್ನಡ ಮಾತೃಭಾಷೆಯ ದೇವಾಂಗ ಚೆಟ್ಟಿಯಾರರು ಪೊಲ್ಲಾಚಿ ಮತ್ತು ಸಿರುಮಗೈನಲ್ಲಿ ನೆಲೆಸಿದರು. ತೆಲುಗಿನವರು ಕೊಯಮತ್ತೂರಿನಲ್ಲಿ ಬೇರು ಬಿಟ್ಟರು. ಭಾಷೆಯೊಂದನ್ನು ಬಿಟ್ಟರೆ ಎರಡೂ ಸಮುದಾಯಗಳದು ಒಂದೇ ಬಗೆಯ ಜೀವನ ವಿಧಾನ. ಒಂದೇ ದೈವ ಸೌಂಡೇಶ್ವರಿ.

ದಿಂಡಿಗಲ್, ಮದುರೈ, ವಿರುಧನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಯುವ ಅಥವಾ ಕಲಿಸುವ ಅಗತ್ಯ ಅವರಿಗೆ ಕಂಡುಬಂದಿಲ್ಲ. ಯಾಕೆಂದರೆ ಕನ್ನಡ ಎಂಬುದು ಅವರ ಅನ್ನದ ದಾರಿಯ ಜೊತೆಗೆ ತಳಕು ಹಾಕಿಕೊಂಡಿಲ್ಲ.

ಈ ತಮಿಳು ಕನ್ನಡಕಾರರ ಕನ್ನಡದ ಮಾದರಿ ಹೀಗಿರುತ್ತದೆ: ‘ಇಂದು ತುಂಬಾ ವಿಸೇಸವಾದಂತಹ ದಿನ... ಈ ಸೌಡೇಸ್ವರಿ ಅಮ್ಮನ ಗುಡಿ ಕಟ್ಟಿ ನೂರಾರು ಕುಂಬಾಬಿಸೇಕ ಮಾಡಕೋಗ್ತೀವಿ ಅಂತ ಹೇಳಿದರಲ್ಲ... ತುಂಬ ಸಂತೋಸವಾದಂತದ್ದು...’ ‘ಅಂಗಡಿ ಮಳಿಗೆಗೆ ಓಯಿಟ್ಟು ಯಡ್ ಕೇಜಿ ಮನಸಾಂತಿ ಕೊಡಾರಿ ಅಂದ್ರೆ ಕೊಡಾರಾ... ಕೊಡಮಾಟ್ಟರಲ್ಲ... ಎಡ್ಡ್ ಕೇಜಿ ಪುಣ್ಯ ಕೊಡಾರಿ ಅಂದ್ರೆ ಕೊಡಾರ, ಪುಣ್ಯವೂ ಸಿಗಲಾರದಲ್ಲ. ವಾಳ್ಕೆಯಲ್ಲಿ ಕೊಟ್ಟು ಮಡಗಿರಬೇಕು ಅಂತ ಯೇಳ್ತಾರೆ... ಬೂಮಿ ಮೇಲೇ ನಾವು ಉಟ್ಟಬೇಕಾದರೆ ಯಿಂಗೇ ಉಟ್ಬಬೇಕು ಇಂತಾ ಕುಲದಲ್ಲೇ ಉಟ್ಟಬೇಕು ಅಂತ ದೇವ್ರತ್ರ ಅಪ್ಲಿಕೇಸನ್ ಆಕಿರಮಾಟ್ಟ ರಾರು... ಅಂತ ಮಾದರಿ ಅಪ್ಲಿಕೇಸನ್ ಆಕಿದರೆ ಉಣ್ಮೆಯಾಗಿ ಮಾರಾಜರ ಮನೇಲೇ ಉಟ್ಟಬೇಕು ಕೂಡರ್ ಅಕ್ಕಪಕ್ಕ ಅಣ್ಣ ತಂಗಿ ಯಾರೂ ಇರಕೂಡದು ಅಂತ ಅಪ್ಲಿಕೇಸನ ಅಕ್ಕಿರಾಂಡರ್. ಅದಕ್ಕೇ ಆಂಡವ ಯಾರೂ ಏನೂ ಕೇಳಾಂಗೇ ಉಟ್ಸಿಟ್ರಲ್ಲ...’ ‘ಕಾವೇರಿಯಕ್ಕನ ತಮ್ಮ ಕೂಡ ಬತ್ತಾನಾ. ಓಯಿ ನೋಡು ಅತ್ತೆ ಬತ್ತಾರಾ ಅಂತಾ... ಸರಿ ಸರಿ ದೈರ್ಯಿಯವಾಗಿ ಹೋಗು, ಪತ್ರ ಕೊಟ್ಟಾರೆ ಕೈಯೆಳುತ್ತು ಆಕಬ್ಯಾಡಾ’.

‘ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕನ್ನಡಿಗರು ಬಹುಕಾಲದಿಂದ ನೆಲೆಸಿದ್ದಾರೆ. ಇವರಲ್ಲಿ ಮೂಲನಿವಾಸಿಗಳು ಮತ್ತು ವಲಸೆಗಾರರು ಇಬ್ಬರೂ ಇದ್ದಾರೆ. ತಮ್ಮ ತಾಯ್ನುಡಿಯನ್ನು ನೂರಾರು ವರ್ಷಗಳಿಂದ ಉಳಿಸಿಕೊಂಡಿದ್ದಾರೆ. ಸ್ವಾಭಾವಿಕವಾಗಿ ಇವರ ಆಡುಮಾತಿನಲ್ಲಿ ತಮಿಳು ಪದಗಳು ದೊಡ್ಡಸಂಖ್ಯೆಯಲ್ಲಿ ಸೇರಿಕೊಂಡಿವೆ. ವ್ಯಾಕರಣದ ಮೇಲೂ ತಮಿಳು ಪ್ರಭಾವ ಕಾಣುತ್ತದೆ’ ಎನ್ನುತ್ತಾರೆ ಭಾಷಾಶಾಸ್ತ್ರಜ್ಞ ರಾ.ಗೋಪಾಲಕೃಷ್ಣ.

ದಿಲ್ಲಿಯ ಈ ಕನ್ನಡಕಾರರನ್ನು ಸಾವಿರಾರು ಸಂಖ್ಯೆಯಲ್ಲಿ ಪ್ರತಿವರ್ಷ ಸೇರಿಸುವ ಸಂದರ್ಭ ಅವರ ಕುಲದೈವ ಚೌಡಮ್ಮನ ಆರಾಧನೆ. ಬಿರುಬಿಸಿಲು ಲೆಕ್ಕಿಸದೆ ದಿಲ್ಲಿಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ನಡೆದು ಕುಣಿದು ಕುಪ್ಪಳಿಸುತ್ತಾರೆ. ಕರಗ ಮಹೋತ್ಸವ ಮತ್ತು ಕತ್ತಿ ಉತ್ಸವದಲ್ಲಿ ಮುಳುಗೇಳುತ್ತಾರೆ. ಮೇಲ್ನೋಟಕ್ಕೆ ತಮಿಳರಂತೆ ಕಾಣುವವರು ಇವರು. ಕನ್ನಡಿಗರೆಂದು ತಿಳಿಯಬೇಕಿದ್ದರೆ ಬಳಿಗೆ ಸರಿದು ಅವರ ಸಂಭಾಷಣೆಗೆ ಕಿವಿ ಆನಿಸಬೇಕು. ನೂರಕ್ಕೆ ಎಂಬತ್ತರಷ್ಟು ಶಬ್ದಗಳು ಕನ್ನಡವೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry