ಗುರುವಾರ , ಮೇ 6, 2021
25 °C

ಕರ್ನಾಟಕ ಸಂಸ್ಕೃತಿಯ ನವ ತಾರುಣ್ಯ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಕರ್ನಾಟಕ ಸಂಸ್ಕೃತಿಯ ನವ ತಾರುಣ್ಯ

ಊರೂರು ಸುತ್ತುತ್ತಾ, ಹೊಸ ತಲೆಮಾರುಗಳು ನಡೆಸುತ್ತಿರುವ ವಿಚಾರ ಸಂಕಿರಣ, ಅಧ್ಯಯನ ಕಮ್ಮಟಗಳನ್ನು ನೋಡುತ್ತಿದ್ದರೆ ಕನ್ನಡ ಸಂಸ್ಕೃತಿಯಲ್ಲಿ ಹಾಗೂ ಒಟ್ಟು ಕರ್ನಾಟಕದಲ್ಲಿ ನವ ತಾರುಣ್ಯವೊಂದು ರೂಪುಗೊಳ್ಳುತ್ತಿರುವುದನ್ನು ಕಂಡು ಹೊಸ ಆಶಾವಾದ ಮೊಳೆಯತೊಡಗುತ್ತದೆ. ಚಿಕ್ಕನಾಯಕನಹಳ್ಳಿಯಂಥ ಊರಿನಲ್ಲಿ ಅರಸು ಶತಮಾನೋತ್ಸವ ಆಚರಿಸಿದರೆ ಅಲ್ಲಿ ಹೊಸ ತಲೆಮಾರಿನ ದಲಿತ, ಹಿಂದುಳಿದ ವರ್ಗಗಳ ಹುಡುಗ, ಹುಡುಗಿಯರು ಸಾಮಾಜಿಕ ನ್ಯಾಯದ ಪರಿಭಾಷೆಯನ್ನು ಆರಾಮಾಗಿ ಬಳಸುವುದು ಕಾಣುತ್ತದೆ. ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ‘ಸೆನ್ಸಾರ್‌ಶಿಪ್ ಅಂಡ್ ಲಿಟರೇಚರ್’ ಕುರಿತು ವಿಚಾರ ಸಂಕಿರಣ ನಡೆಯುತ್ತಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಸವಾಲುಗಳು ಮುಕ್ತವಾಗಿ, ಸರಳ ನುಡಿಗಟ್ಟುಗಳಲ್ಲಿ ಚರ್ಚೆಗೆ ಬರುತ್ತವೆ. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಜಗತ್ತಿನ ಈ ಕಾಲದ ಮುಖ್ಯ ಡಿಸ್ಕೋರ್ಸುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಚರ್ಚೆಗೆ ಒಳಗಾಗುತ್ತವೆ…

ಮತಿಘಟ್ಟ ಎಂಬ ಪುಟ್ಟ ಊರಿನ ಜೂನಿಯರ್ ಕಾಲೇಜಿನಲ್ಲಿ ರೈತರ ಆತ್ಮಹತ್ಯೆಯ ಸಮಸ್ಯೆಗೆ ಮಕ್ಕಳು, ರೈತ ಹೋರಾಟಗಾರರು ಹಾಗೂ ಅಧ್ಯಾಪಕರು ಸೇರಿ ಉತ್ತರ ಹುಡುಕುತ್ತಾರೆ; ರೈತರ ಮಕ್ಕಳು ತಮ್ಮ ಅಪ್ಪಂದಿರಿಗೆ ಅಪೀಲು ಮಾಡಿಕೊಂಡರೆ ಅದು ಅವರ ಹೃದಯಕ್ಕೆ ಮುಟ್ಟಬಹುದು ಎಂಬ ಹೊಸ ಹಾದಿಯೊಂದು ಅಲ್ಲಿ ತೆರೆಯುತ್ತದೆ. ‘ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್’ ಕೆಂಗಲ್ ಎಂಬ ಊರಿನಲ್ಲಿ ಕಾವ್ಯ ಕಮ್ಮಟ ನಡೆಸಿದರೆ ಕರ್ನಾಟಕದ ನೂರಾರು ತರುಣ, ತರುಣಿಯರು ಕಾವ್ಯ ಬರೆಯುವ ಕಲೆಯನ್ನು ಕಲಿಯುವ ಕಾತರದಿಂದ ಪಾಲ್ಗೊಳ್ಳುತ್ತಾರೆ; ರಾಮನಗರದ ಬಳಿಯ ಜಾನಪದ ಲೋಕದಲ್ಲಿ ‘ಬಯಲು ಬಳಗ’ ನಡೆಸಿದ ‘ಆಧುನಿಕ ಕರ್ನಾಟಕದ ಸಾಮಾಜಿಕ ಚಳವಳಿಗಳು’ ಕಮ್ಮಟದಲ್ಲಿ ದಿನವಿಡೀ ಕೂತು ಚಳವಳಿಗಳ ಇತಿಹಾಸ ಕುರಿತು ಚಿಂತಿಸುವ, ಗೊಂದಲಗಳನ್ನು ಪರಿಹರಿಸಿಕೊಳ್ಳುವ ಕಾಲೇಜು ಹುಡುಗ, ಹುಡುಗಿಯರ ಉತ್ಸಾಹ  ಸುತ್ತಮುತ್ತೆಲ್ಲ ಹಬ್ಬತೊಡಗುತ್ತದೆ.ಇವುಗಳ ಜೊತೆಗೇ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ‘ಸಾಮಾಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ’ ರಾಜ್ಯದಾದ್ಯಂತ ಒಂದು  ವರ್ಷ ಕಾಲ 500 ಕಾಲೇಜುಗಳಲ್ಲಿ ಆರಂಭಿಸಿರುವ ‘ಯುವಕರು ಮತ್ತು ಪ್ರಜಾಪ್ರಭುತ್ವಕ್ಕಾಗಿ ಅಂಬೇಡ್ಕರ್’ ಕಾರ್ಯಕ್ರಮ; ಕರ್ನಾಟಕ ಸಾಹಿತ್ಯ ಅಕಾಡೆಮಿ 125 ತಾಲ್ಲೂಕುಗಳ  ಕಾಲೇಜುಗಳಲ್ಲಿ ನಡೆಸುತ್ತಿರುವ ‘ಅಂಕುರ’ ಓದು ಕಮ್ಮಟಗಳು; ಕನ್ನಡ ಪುಸ್ತಕ ಪ್ರಾಧಿಕಾರ 200 ಕಾಲೇಜುಗಳಲ್ಲಿ ನಡೆಸುತ್ತಿರುವ ಪುಸ್ತಕ ಪ್ರೇಮಿ ಬಳಗದ ಚಿಂತನೆಗಳು, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕಾಲೇಜುಗಳಲ್ಲಿ ನಡೆಸುತ್ತಿರುವ ‘ಕುವೆಂಪು ಓದು’ ಕಾರ್ಯಕ್ರಮ; ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಶ್ವವಿದ್ಯಾಲಯಗಳಲ್ಲಿ ನಡೆಸುತ್ತಿರುವ ಕನ್ನಡ ಜಾಗೃತಿ ಯುವಜನೋತ್ಸವ… ಹೀಗೆ ಸಾವಿರಾರು ಕಾರ್ಯಕ್ರಮಗಳಲ್ಲಿ ಎಳೆಯರು ನವಚಿಂತನೆಗೆ ತೆರೆದುಕೊಳ್ಳುತ್ತಿದ್ದಾರೆ. ಮೊನ್ನೆ ಒಂದು ಕಮ್ಮಟದಲ್ಲಿ ಮಾತಾಡಿದ ಕನ್ನಡ ಚಳವಳಿಯ ರಾಜಕುಮಾರ್ ‘ಇಂಥದೊಂದು ಕರ್ನಾಟಕ ರೂಪುಗೊಳ್ಳುತ್ತಿರುವುದನ್ನೇ ನಾನು ಕಂಡಿರಲಿಲ್ಲ’ ಎಂದದ್ದು ಈ ಸಭೆಗಳಲ್ಲಿ ಭಾಗಿಯಾಗುವ ಎಲ್ಲ ಮಧ್ಯ ವಯಸ್ಕರ, ಹಿರಿಯರ ಆಶಾವಾದವನ್ನೂ ಸೂಚಿಸುವಂತಿತ್ತು. ಇಂಥ ಕಡೆ ಬಿತ್ತಿದ ಬೀಜಗಳು, ನೆಟ್ಟ ಸಸಿಗಳು ಹುಸಿ ಹೋಗಲಾರವು ಎಂಬ ನಂಬಿಕೆ ಸಾಂಸ್ಕೃತಿಕ ವಲಯದಲ್ಲಿ ಮತ್ತೆ ಮೊಳೆತರೆ ನಮ್ಮೆಲ್ಲ ಸಿನಿಕತೆಗಳೂ ತಂತಾನೇ ಮಾಯವಾಗಬಲ್ಲವು. ಇವುಗಳಲ್ಲಿ ಭಾಗಿಯಾಗುವ ಶೇಕಡ ಹತ್ತರಷ್ಟು ತರುಣ ತರುಣಿಯರಾದರೂ ಹೊಸ ದಿಕ್ಕಿಗೆ ಹೊರಳಬಲ್ಲರು. ಈ ಬಗೆಯ  ಚಿಂತನೆ, ಸಂವಾದಗಳಿಂದ ಎಳೆಯರ ಪ್ರಜ್ಞೆಯಲ್ಲಿ ಬದಲಾವಣೆ ಆಗುತ್ತದೆ ಎಂಬ ದೃಢ ಸ್ವ-ನಂಬಿಕೆಯಿಂದ ಇವನ್ನೆಲ್ಲ ನಡೆಸುತ್ತಿರುವ ಎಲ್ಲರಿಗೂ ಕರ್ನಾಟಕ ಕೃತಜ್ಞವಾಗಿರಬೇಕು.   ಇದನ್ನೆಲ್ಲ ವಾದಕ್ಕಾಗಿ ಹೇಳುತ್ತಿಲ್ಲ; ವಾದಗಳನ್ನು ರೂಪಿಸಲು ಹೋದರೆ ಅಷ್ಟಿಷ್ಟು ಸತ್ಯವೂ ಕೈ ಜಾರಿ ಹೋಗುತ್ತದೆ ಎಂಬುದನ್ನು ಆಗಾಗ್ಗೆ ಕಂಡುಕೊಂಡಿರುವ ನನಗೆ ಇವೆಲ್ಲ ಈ ಕಾಲದ ಇಂಥ ಆರೋಗ್ಯಕರ ವಿದ್ಯಮಾನಗಳನ್ನು ನೋಡುವ ಬಗೆಗಳಿಂದಲೇ ಮೂಡಿರುವ ಭರವಸೆಗಳು. ಈಚಿನ ವರ್ಷಗಳಲ್ಲಿ ನಮ್ಮ ಬಹುತೇಕ ರಾಜಕಾರಣಿಗಳು, ಧಾರ್ಮಿಕ ನಾಯಕರು ಹೊಸ ತಲೆಮಾರನ್ನು ಉದ್ದೇಶಿಸಿ ಆರೋಗ್ಯಕರವಾಗಿ ಮಾತಾಡಿದ್ದನ್ನೇ ನಾನು ಗಮನಿಸಿಲ್ಲ. ಕೊನೆಯ ಪಕ್ಷ ತಂತಮ್ಮ ಪಾರ್ಟಿಗಳ ತರುಣ ಕಾರ್ಯಕರ್ತರಿಗೆ ಒಮ್ಮೆಯಾದರೂ ಜನರನ್ನು ಬೆಸೆಯುವ ಬಗೆಗಾಗಲೀ ನಾಡು ಕಟ್ಟುವ ಬಗೆಗಾಗಲೀ ರಾಜಕಾರಣಿಗಳು ಮಾತಾಡಿದ್ದಾರೆಯೆ?ಏನಾದರೂ ಮಾಡಿ ತಮ್ಮ ಅನುಯಾಯಿಗಳನ್ನು ದಾರಿ ತಪ್ಪಿಸಿ ಯಾವುದಾದರೂ ಗಲಭೆಗೆ ಹಚ್ಚಬಯಸುವ ರಾಜಕಾರಣಿಗಳು; ಜನರು ಸ್ವಾಮೀಜಿಗಳ ಕಾಲಿಗೆರಗಿ ತಮ್ಮ ತಲೆ ಖಾಲಿ ಮಾಡಿಕೊಂಡಷ್ಟೂ ಸನಾತನ ಸಂಸ್ಕೃತಿ ಉಳಿಯುತ್ತದೆ ಎಂದು ಪ್ರವಚನ ನೀಡುವ ಮಠಾಧೀಶರು; ತಲೆಯಲ್ಲಿ ಯಾವ ಹೊಸ ಚಿಂತನೆಯೂ ಇಲ್ಲದೆ ನಾಲಗೆ ಹಾಗೂ ಅಕ್ಷರವನ್ನು ಹೇಗಾದರೂ ಬಳಸಬಹುದೆಂಬ ಠೇಂಕಾರದಲ್ಲಿರುವ ಸಮೂಹ ಮಾಧ್ಯಮಗಳು, ಬೇಜವಾಬ್ದಾರಿ  ಸಿನಿಮಾಗಳು... ಇವೆಲ್ಲ ನಮ್ಮ ‘ಜನಪ್ರಿಯ’ ಸಂಸ್ಕೃತಿಯನ್ನು ರೂಪಿಸುತ್ತಿರುವ ಕಾಲ ಇದು.ಇಂಥ ‘ಜನಪ್ರಿಯ’ ಸಂಸ್ಕೃತಿಯ ಅಬ್ಬರದಲ್ಲಿ ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ನಮ್ಮ ಬೋಧಕ, ಬೋಧಕಿಯರು ಸ್ವತಂತ್ರವಾಗಿ ಯೋಚಿಸದೆ, ಇಂಥವರು ಹೇಳಿದ್ದನ್ನೇ ಗಿಳಿಪಾಠ ಒಪ್ಪಿಸುವ ಕೆಟ್ಟ ಜಾಡಿಗೆ ಬಿದ್ದಂತಿದೆ. ವಿಜ್ಞಾನದ ಮೇಷ್ಟ್ರುಗಳು ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸುವುದು ತಮ್ಮ ಕೆಲಸವಲ್ಲ ಎಂದು  ಹಳೆ ಪಾಠಗಳನ್ನು ಒದರಿಕೊಂಡು ಆರಾಮಾಗಿರುವಂತಿದೆ!

ವಿಜ್ಞಾನ, ಇಂಗ್ಲಿಷ್, ಕನ್ನಡ ಸಾಹಿತ್ಯ ಹೇಳಿಕೊಡುವವರು, ಚರಿತ್ರೆ, ಸಮಾಜಶಾಸ್ತ್ರ ಇತ್ಯಾದಿಗಳನ್ನು ಪ್ರಗತಿಪರ ದೃಷ್ಟಿಕೋನದಿಂದ ಪಾಠ ಮಾಡಬಲ್ಲವರು ಕೊಂಚ ಜವಾಬ್ದಾರಿ ಹೊತ್ತುಕೊಂಡರೂ ಸಾಕು, ಹತ್ತು  ವರ್ಷಗಳಲ್ಲಿ ನಮ್ಮ ಹೊಸ ತಲೆಮಾರುಗಳು ಆರೋಗ್ಯಕರವಾಗಿ ಯೋಚಿಸಬಲ್ಲವು. ಇಡೀ ಚಿತ್ರ ಹತ್ತು ವರ್ಷಗಳಲ್ಲಿ ಬದಲಾಗಬಲ್ಲದು! ಇದನ್ನೆಲ್ಲ ಎಲ್ಲ ಟೀಚರುಗಳೂ ಒಟ್ಟಾಗಿ ಶುರು ಮಾಡಬೇಕೆಂದು ಕಾಯುತ್ತಾ ಕೂತರೆ ಪ್ರಯೋಜನವಿಲ್ಲ. ಅನೇಕ ಕಡೆ ಒಬ್ಬೊಬ್ಬ ಬೋಧಕ ಅಥವಾ ಬೋಧಕಿ ಇಂಥ ಕೆಲಸ ಶುರು ಮಾಡಿ ಇಡೀ ವಾತಾವರಣವನ್ನು ಎಚ್ಚರದಲ್ಲಿಟ್ಟಿರುವುದು ಎಲ್ಲರಿಗೂ  ಸ್ಫೂರ್ತಿಯಾಗಬಲ್ಲದು.  

          

ಈ ದೃಷ್ಟಿಯಿಂದ, ಈಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಇಂಥ ಬಿಡಿಬಿಡಿ ಪ್ರಯತ್ನಗಳನ್ನು ಇಡಿಯಾದ ತಾತ್ವಿಕ ಚೌಕಟ್ಟಿನಲ್ಲಿ ನೋಡಿದರೆ, ಏಕಕಾಲಕ್ಕೆ ವಚನ ಚಳವಳಿಯಿಂದ ಹಿಡಿದು ಎಲ್ಲ ಬಗೆಯ ಆರೋಗ್ಯಕರ ಚಳವಳಿಗಳ ಸತ್ವವೂ ಮೆಲ್ಲಗೆ ಹಬ್ಬುತ್ತಿರುವಂತೆ ಕಾಣತೊಡಗುತ್ತದೆ. ಇದು ಹುಸಿ ಆಶಾವಾದವಲ್ಲ. ಮೊನ್ನೆ ನಡೆದ ಕಮ್ಮಟವೊಂದರಲ್ಲಿ ಎಪ್ಪತ್ತರ ದಶಕದ ಸಿದ್ಧಲಿಂಗಯ್ಯನವರ ‘ಸಾವಿರಾರು ನದಿಗಳು’ ಹಾಡನ್ನು ಗಾಯಕ ಜನ್ನಿ ಹಾಡಿದರು: ‘ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು/ ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು / ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು/ ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ/ ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ/… ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು/ ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ/ ತರಗೆಲೆ ಕಸಕಡ್ಡಿಯಾಗಿ ತೇಲೆತೇಲಿ ಹರಿದವು/ ಹೋರಾಟದ ಸಾಗರಕೆ ಸಾವಿರಾರು ನದಿಗಳು…’ ಈ ಹಾಡು ಅಲ್ಲಿ ಗುಂಗಾಗಿ ಹಬ್ಬತೊಡಗಿತು.ಎಂಬತ್ತರ ದಶಕದಿಂದ ಈ ಹಾಡಿನ ಬೆನ್ನು ಹತ್ತಿರುವ ನನಗೆ ಅದು ಇಪ್ಪತ್ತೊಂದನೆಯ ಶತಮಾನದ ಹದಿಹರೆಯದವರಲ್ಲಿ ಮತ್ತೆ ಅದೇ ಕಂಪನವನ್ನೇ ಹುಟ್ಟಿಸುತ್ತಿದ್ದುದನ್ನು ಕಂಡು ಬೆರಗಾಯಿತು; ಲಂಕೇಶರ ‘ಅವ್ವ’ ಪದ್ಯವನ್ನು ಹೊಸ ತಲೆಮಾರಿನ ದೇವಾನಂದ್  ‘ಅವ್ವ… ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂದು ಶುರು ಮಾಡಿ, ಕೊನೆಗೆ ‘ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು: ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ/ ಮನೆಯಿಂದ ಹೊಲಕ್ಕೆ ಹೋದಂತೆ/ ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ’ ಎಂಬ ಸಾಲಿಗೆ ಬಂದು ನಿಂತಾಗ, ಹಾಡುಗಾರನ ಕಣ್ಣೂ ಹಾಡು ಕೇಳುತ್ತಿದ್ದ ಹುಡುಗ, ಹುಡುಗಿಯರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ಬಂಡಾಯ ಕವಿ ಸತೀಶ ಕುಲಕರ್ಣಿಯವರ ‘ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇ ಕಟ್ಟುತೇವ…ನಾವು ಮನಸ ಕಟ್ಟುತೇವ ನಾವು ಕನಸ ಕಟ್ಟುತೇವ’ ಎಂಬ ‘ಚಳವಳಿ ನಾಡಗೀತೆ’ಯನ್ನು ಶುರುವಿನಲ್ಲಿ ಹಾಡಿದಾಗ ವಿಚಿತ್ರ ಹುಮ್ಮಸ್ಸೂ, ಅದನ್ನೇ ಕೊನೆಯಲ್ಲಿ ಹಾಡಿದಾಗ ವಿಷಾದವೂ ಕನಸೂ ಒಟ್ಟಿಗೇ ಹುಟ್ಟಿದ್ದವು. ಈ ಹಾಡು ಸೃಷ್ಟಿಸುವ ಮೂಡ್ ಕೂಡ ಕರ್ನಾಟಕದಲ್ಲಿ ಹಲವು ದಶಕಗಳಿಂದ ಮತ್ತೆ ಮತ್ತೆ ಕಾಣಿಸುತ್ತಿರುತ್ತದೆ. ಅಂದರೆ ಎಪ್ಪತ್ತರ ದಶಕದ ಸ್ಪಂದನಗಳು ಈಗಲೂ ಹಾಗೇ ಇವೆ! ತಾನಾಯಿತು, ತನ್ನ ಏಳಿಗೆಯಾಯಿತು ಎನ್ನುವ ಅತಿವ್ಯಕ್ತಿವಾದಿ ತಲೆಮಾರಿನ ನಡುವೆ, ಅದರಾಚೆಗೆ ಮಿಡಿಯಬಲ್ಲ ಕರ್ನಾಟಕವೂ ಹಾಗೇ ಇದೆ. ಆದರೆ ಇವರನ್ನು ಉದ್ದೇಶಿಸಿ ಮಾತಾಡಬಲ್ಲ ಹಿರಿಯರ ಬದ್ಧತೆಯ ಕೊರತೆಯೇ ಎದ್ದು ಕಾಣತೊಡಗಿದೆ!ಮೊನ್ನಿನ ಕಮ್ಮಟವೊಂದರಲ್ಲಿ ಭಾಗಿಯಾಗಿದ್ದ ಹುಡುಗಿಯೊಬ್ಬಳು ‘ನಾವು ಯಾವಾಗಲೂ ಹೋರಾಟ ಮಾಡುತ್ತಲೇ ಇರಬೇಕೆ?’ ಎಂದು ಕೇಳಿದಳು. ಇದಕ್ಕೆ ‘ಹೋರಾಟವಿಲ್ಲದೆ ಯಾವುದೂ ದಕ್ಕುವುದಿಲ್ಲ; ಯಾವ ಮಹತ್ತರ ಬದಲಾವಣೆಯೂ ಆಗುವುದಿಲ್ಲ’ ಎಂಬ ಉತ್ತರ ಎಲ್ಲರ ಬಾಯಲ್ಲೂ ಇತ್ತು. ಆದರೆ ಈ ಬಗ್ಗೆ ಆಳವಾಗಿ ಯೋಚಿಸಿದ್ದ ಲೋಹಿಯಾ ಮಾತೊಂದು ನೆನಪಾಯಿತು: ‘ಅಲ್ಪ ಕಾಲ ಕೆಟ್ಟದ್ದರೊಂದಿಗೆ ಕಲಹ; ದೀರ್ಘ ಕಾಲ ಒಳ್ಳೆಯದರ ಜೊತೆಯಲ್ಲಿ ಶಾಂತಿ’. ಬಹುಶಃ ಗಾಂಧಿ ಅವರಿಂದ ಲೋಹಿಯಾ ಕಲಿತ ಪಾಠ ಇದು. ಆದರೆ ಅಂಬೇಡ್ಕರ್ ಅವರಿಗೆ ಈ ಲಕ್ಷುರಿಯಿರಲಿಲ್ಲ. ಸಾವಿರಾರು ವರ್ಷಗಳಿಂದ ಕೊಬ್ಬಿದ ಜಾತೀಯ ಶಕ್ತಿಗಳೊಂದಿಗೆ ಅವರು ದೀರ್ಘ ಕಾಲ ಹೋರಾಡಬೇಕಾಗಿತ್ತು. ಕೊನೆಯ ಕೆಲ ತಿಂಗಳ ಕಾಲ  ಬುದ್ಧತತ್ವದೊಡನೆ ಶಾಂತಿಯಿಂದ ಇರಬಯಸಿದ್ದರೇನೋ; ಆದರೆ ಕರ್ತವ್ಯ ಅವರನ್ನು ಕರೆಯುತ್ತಲೇ ಇತ್ತು. ಕೊನೆಯ ರಾತ್ರಿ ಅವರು  ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿ ತಿದ್ದುತ್ತಾ ಪೂರ್ಣ ವಿಶ್ರಾಂತಿಗೆ ಹೊರಟಿದ್ದರು…ಇದು ನೆನಪಾಗುತ್ತಿರುವಂತೆ, ಆ ಹುಡುಗಿಯ ಪ್ರಶ್ನೆಗೆ ಉತ್ತರ ಹೊಳೆಯತೊಡಗಿತು: ಹೋರಾಟ ಎನ್ನುವುದು ನಮ್ಮ ಹೊರಗಿರುವ ಕೆಲಸ ಎಂದು ತಿಳಿದರೆ ಅದು ಜೀತದಂತಿರುತ್ತದೆ. ಆದರೆ ನೇರ ಪ್ರತಿಭಟನೆಯಂತೆಯೇ ನಮ್ಮ ಓದು, ಬರಹ, ವಾಗ್ವಾದಗಳು ಕೂಡ ಚಳವಳಿಯೇ ಎಂಬುದನ್ನು ಅರಿತರೆ ಇಂಡಿಯಾದ ಸೂಕ್ಷ್ಮಜ್ಞರೆಲ್ಲ ಒಂದಲ್ಲ ಒಂದು ಚಳವಳಿಯ ಒಳಗೇ ಇದ್ದಾರೆಂಬುದು ಹೊಳೆಯುತ್ತದೆ. ಈ ಹುಡುಗಿ ವರದಕ್ಷಿಣೆಯ ವಿರುದ್ಧ ಮಾತಾಡಿದರೆ ಅದು ಕೋಟ್ಯಂತರ ಹೆಣ್ಣು ಮಕ್ಕಳ ದೀರ್ಘ ಹೋರಾಟವೇ ಆಗಬಲ್ಲದು. ಆ ಹೋರಾಟ ಕೂಡ ಆಕೆಯ ವಿದ್ಯಾಭ್ಯಾಸ, ಕನಸು, ಪ್ರೀತಿ, ಉದ್ಯೋಗ, ಕುಟುಂಬಗಳ ಜೊತೆಗೆ ಸಹಜವಾಗಿ ಸಾಗುತ್ತಿರಬಲ್ಲದು.  ಕೊನೆ ಟಿಪ್ಪಣಿ: ‘ತಾರುಣ್ಯದಲ್ಲಿ ಅವರು ಹೇಗೆ ಯೋಚಿಸುತ್ತಿದ್ದರು?’

ಮಿತ್ರನೊಬ್ಬ ತನ್ನ ಇಪ್ಪತ್ತೇಳನೆಯ ಹುಟ್ಟುಹಬ್ಬದ ದಿನ, ‘ಅಯ್ಯೋ ಇಷ್ಟು ಹೊತ್ತಿಗೆ ಇಂಗ್ಲಿಷ್ ಕವಿ ಕೀಟ್ಸ್ ತನ್ನ ಶ್ರೇಷ್ಠ ಪದ್ಯಗಳನ್ನು ಬರೆದು ತೀರಿಕೊಂಡಿದ್ದ; ನಾನು ಇನ್ನೂ ಏನನ್ನೂ ಸರಿಯಾಗಿ ಬರೆದಿಲ್ಲ’ ಎಂದು ವಿಷಾದದಿಂದ ಹೇಳಿದ. ಈ ಮಾತು ಬಹುಕಾಲದಿಂದ ನನ್ನಲ್ಲಿ ನೆಲೆಸಿ, ಕುತೂಹಲಕ್ಕಾಗಿಯಾದರೂ ನಮ್ಮ ಮನಸ್ಸಿನೊಳಗೇ ಇಂಥ ಹೋಲಿಕೆಯನ್ನು ಮಾಡಿಕೊಳ್ಳುವುದು ರೋಚಕವಾಗಿರಬಲ್ಲದು ಎಂದು ಸೂಚಿಸುತ್ತಿರುತ್ತದೆ.ಅಂದರೆ, ಮುಂದೊಮ್ಮೆ ಎತ್ತರಕ್ಕೆ ಬೆಳೆದ ನಾಯಕರು, ಚಿಂತಕರು ತಮ್ಮ ಹದಿಹರೆಯದಲ್ಲಿ ತಮಗರಿವಿಲ್ಲದೆಯೇ ಮಹೋನ್ನತ ಉದ್ದೇಶವೊಂದಕ್ಕಾಗಿ ಯಾವ ಬಗೆಯ ತಯಾರಿ ಮಾಡಿಕೊಳ್ಳುತ್ತಿದ್ದರು ಎಂಬ ಹುಡುಕಾಟ ಅರ್ಥಪೂರ್ಣವಾಗಿರಬಲ್ಲದು. ಉದಾಹರಣೆಗೆ ಮಾರ್ಕ್ಸ್, ಅಂಬೇಡ್ಕರ್, ಗಾಂಧಿ, ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್, ಟ್ಯಾಗೋರ್, ಕುವೆಂಪು ಥರದವರ ಜೀವನಚರಿತ್ರೆ ಓದುವಾಗ ಅವರು ತಮ್ಮ ಹದಿಹರೆಯ ಹಾಗೂ ತಾರುಣ್ಯಗಳಲ್ಲಿ ಏನನ್ನು ಓದುತ್ತಿದ್ದರು, ಹೇಗೆ ಯೋಚಿಸುತ್ತಿದ್ದರು ಎಂಬುದನ್ನು ಗಮನಿಸುವುದು ಕೂಡ ನಮ್ಮಲ್ಲಿ ಹಲವು ಪ್ರೇರಣೆಗಳನ್ನು ಚಿಮ್ಮಿಸಬಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.