ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ

7

ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ

ಬನ್ನಂಜೆ ಸಂಜೀವ ಸುವರ್ಣ
Published:
Updated:
ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ

ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ಚಾವಡಿಯಲ್ಲಿ ಕಣ್ಣು ತಿಕ್ಕುತ್ತ ಎದ್ದಾಗ ಮೂಡಣ ಘಟ್ಟದ ಮರೆಯಲ್ಲಿ ಸೂರ್ಯನೂ ಮೆಲ್ಲನೆ ಮೂಡುತ್ತಿದ್ದ. ಊಟ- ಉಪಾಹಾರಕ್ಕಂತೂ ಅಲ್ಲಿ ತತ್ವಾರವಿಲ್ಲದ ಕಾರಣ ೭೦ರ ದಶಕದಲ್ಲಿ ಅಲ್ಲಿಯೇ ಗಟ್ಟಿ ಬಿಡಾರ ಹೂಡಿದ್ದೆ. ಆದರೆ, ಎಂದಿಗೆ ನಾರಾಯಣ ಶೆಟ್ಟರು ತೀರಿಕೊಂಡರೋ ಆವಾಗ ಆ ಮನೆಯಿಂದ ಹೊರಬರಬೇಕೆನ್ನಿಸಿ ಏನಾದರೂ ಉದ್ಯೋಗ ಹಿಡಿಯೋಣ ಅಂತನ್ನಿಸಿತ್ತು.

‘ಹೋಗು’ ಎನ್ನುವವರಿರಲಿಲ್ಲ. ಆದರೂ ವಿನಾಕಾರಣ ನಿಸ್ಪೃಹತೆಯ ಬಯಕೆ ಮೂಡಿತ್ತು. ಆಗಲೇ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕರಿಂದ ಹೆಜ್ಜೆ ಕಲಿತು, ಮೇಳದಲ್ಲೂ ಅರ್ಧ ತಿರುಗಾಟ ನಡೆಸಿ, ಹವ್ಯಾಸಿ ಸಂಘಸಂಸ್ಥೆಗಳ ಹಿಮ್ಮೇಳ- ಮುಮ್ಮೇಳಗಳಲ್ಲಿ ಭಾಗವಹಿಸುತ್ತಿದ್ದೆನಾದ್ದರಿಂದ ಎಲ್ಲರಿಗೂ ಪರಿಚಿತನಾಗಿದ್ದೆ. ಹಾಗೆ, ಯಕ್ಷಗಾನ ಕಲಾಪೋಷಕರಾಗಿದ್ದ ಮಹನೀಯರೊಬ್ಬರ ಬಳಿಗೆ ಹೋಗಿ ತಮ್ಮ ಅಕ್ಕಿಗಿರಣಿಯಲ್ಲಿ ಕೆಲಸವೇನಾದರೂ ಇದೆಯೊ ಎಂದು ವಿಚಾರಿಸಿದೆ. ಅವರು ವಾರಕ್ಕೆ ಮೂವತ್ತು ರೂಪಾಯಿ ಪಗಾರದಂತೆ ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡರು.ಅಲ್ಲಿ ನನ್ನ ಬದುಕಿನ ಹೊಸ ಅಧ್ಯಾಯವೊಂದು ತೆರೆದುಕೊಂಡಿತು. ದೊಡ್ಡದೊಂದು ಬಾಣಲೆಯ ಕೆಳಗೆ ಭಗಭಗನೆ ಬೆಂಕಿ ಉರಿಯುತ್ತಿತ್ತು. ಬೆಳಿಗ್ಗೆ ಎರಡು ಗಂಟೆಗೆ ಎದ್ದು ಅದರ ಬೆಂಕಿಗೆ ತೌಡ(ಹೊಟ್ಟು)ನ್ನು ಬೀಸಿ ಎಸೆಯಬೇಕಾಗಿತ್ತು. ಬೆಂಕಿಯ ಉರಿಗೆ ಸನಿಹ ಸುಳಿಯುವುದಕ್ಕಾಗುತ್ತಿರಲಿಲ್ಲ. ಕೆಲಸ ಯಾವುದಾದರೇನು, ಎಲ್ಲದರಲ್ಲೂ ಯಕ್ಷಗಾನದ್ದೇ ಲಯ. ತಾಳಬದ್ಧವಾಗಿ ರಾಳ ಎಸೆದಾಗ ಭಗ್ಗನೆ ಹೊತ್ತಿಕೊಳ್ಳುವ ದೊಂದಿಯಂತೆ ಅದು ಊರ್ಧ್ವಮುಖಿಯಾಗಿ ಉರಿಯುತ್ತಿತ್ತು, ನನ್ನೊಳಗಿನ ಕಲೆಯ ತುಡಿತದಂತೆ! ಕುದಿಯುವ ನೀರಿನಲ್ಲಿ ಭತ್ತ ಅರ್ಧ ಬೇಯುವಾಗಲೇ ಗಿರಣಿಯ ಮೇಲ್ವಿಚಾರಕನಿಗೆ ಸುದ್ದಿ ಮುಟ್ಟಿಸಬೇಕು.

ಭತ್ತವನ್ನು ಬಿದಿರು ಸಿಕ್ಕಿಸಿದ ಬುಟ್ಟಿಯಲ್ಲಿ ಎತ್ತಿ ಅಂಗಳದಲ್ಲಿ ಒಣ ಹಾಕುವ ಕೆಲಸಕ್ಕೆ ಶುರುವಿಡಬೇಕು. ಅಲ್ಲಿಗೆ ಮುಗಿಯುವುದಿಲ್ಲ; ಕಾಗೆ, ನಾಯಿಗಳು ಅದರ ಬಳಿಗೆ ಸುಳಿಯದಂತೆ ಕಾಯುತ್ತ ಕೂರಬೇಕು. ಹಾಗೆ ಒಣಗಿದ ಭತ್ತವನ್ನು ಬಿಸಿಲಿನ ಬಿಸಿಯಿರುವಾಗಲೇ ಗಿರಣಿಯ ಬಾಣಲೆಗೆ ಸುರಿಯಬೇಕು. ಬೇರೆಬೇರೆಯಾಗಿ ಹೊರಬೀಳುವ ಅಕ್ಕಿ ಮತ್ತು ಹೊಟ್ಟುಗಳನ್ನು ಸಂಗ್ರಹಿಸಿ ಗೋಣಿಚೀಲಕ್ಕೆ ತುಂಬಿಸಬೇಕು.ಚಕ್ರದಂತೆ ನನ್ನ ದಿನಗಳು ಯಾಂತ್ರಿಕವಾಗಿ ಉರುಳುತ್ತಿದ್ದವು. ನನ್ನ ಬದುಕನ್ನು ಕಲಾಸಂಸ್ಕಾರವೆಂಬ ಗಿರಣಿಯೊಳಗೊಡ್ಡಿ, ಅಕ್ಕಿಯನ್ನೂ ಹೊಟ್ಟನ್ನೂ ಬೇರೆಬೇರೆಯಾಗಿಸುವ ಸಾಧ್ಯತೆಯ ಕನಸು ಕಮರಿಹೋದಂತೆ ಬಿಸಿಲಿನಲ್ಲಿ ಒಣಹಾಕಿದ ಭತ್ತವನ್ನು ಕಾಯುವುದರಲ್ಲಿಯೇ ಮಗ್ನನಾಗುತ್ತಿದ್ದೆ. ಒಮ್ಮೆ ರಾತ್ರಿ ಅರೆನಿದ್ದೆಯನ್ನು ಅನುಭವಿಸಿದ ಶರೀರ ಬಿಸಿಲಿಗೆ ಒಡ್ಡಿಕೊಂಡಾಗ ಆಯಾಸದಿಂದ ಮೆಲ್ಲನೆ ನಿದ್ದೆ ತೂಕಡಿಸಲಾರಂಭಿಸಿತ್ತು. ಹಾಗೇ ಕಣ್ಣು ಮುಚ್ಚಿದ್ದೆ.ಯಾರೋ ಕಾಲನ್ನು ಚಕ್ಕನೆ ಮೆಟ್ಟಿದಾಗ ಒಮ್ಮೆಲೆ ಎಚ್ಚರವಾಯಿತು. ಗಿರಣಿಯ ಮೇಲ್ವಿಚಾರಕ ಭೈರವನಂತೆ ನನ್ನ ಮುಂದೆ ನಿಂತಿದ್ದ. ತಾಳತಪ್ಪಿದ ನನ್ನ ಕಾಲುಗಳನ್ನು ಮೆಟ್ಟಿ ಗುರು ವೀರಭದ್ರ ನಾಯಕರು ನನ್ನ ಮುಂದೆ ಹಾಗೆ ನಿಂತಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ. ಇನ್ನು ಅರೆಕ್ಷಣವೂ ಅಲ್ಲಿ ನಿಲ್ಲಲಾರೆನೆಂದು ನಿರ್ಧರಿಸಿ ಎದ್ದು ಕುಂಟುತ್ತ ಹೊರನಡೆದುಬಿಟ್ಟೆ. ನಾನು ನಡೆದುಹೋಗುವ ರೀತಿಯಲ್ಲಿಯೇ ಮರುದಿನದಿಂದ ಕೆಲಸಕ್ಕೆ ಬರುವುದಿಲ್ಲವೆಂದು ಮೇಲ್ವಿಚಾರಕನಿಗೆ ಮನದಟ್ಟಾಗಿರಬೇಕು.“ಇಷ್ಟು ದಿನ ಕಾಣಲೇ ಇಲ್ಲ. ಎಲ್ಲಿಗೆ ಹೋದದ್ದು? ಚೆನ್ನಾಗಿ ಉಣ್ಣುವ ಆಸೆಯಷ್ಟೇ ಅಲ್ಲ, ದುಡ್ಡು ಮಾಡುವ ದುರಾಸೆಯೂ ನಿನಗೆ ಅಂಟಿಕೊಂಡಿತಾ?” ಎಂದು ಗುರುಗಳ ಪತ್ನಿ ಗದರಿಸಿದರು. ನಾನು ಅವರ ಮಾತನ್ನು ಕೇಳಿಯೂ ಕೇಳದವನಂತೆ, ಆ ಮನೆಯನ್ನೇ ನನ್ನ ಆಸರೆದಾಣ ಎಂದು ಪುನರಪಿ ನೆನೆದುಕೊಂಡು, ಯಥಾಪ್ರಕಾರ ಉದ್ದು ಬಿತ್ತುವ ಕೆಲಸಕ್ಕೆ ಹೊಲದತ್ತ ನಡೆದೆ.

ರಾಮನಂಥವರು ಸಿಗದೇ ಹೋದರೆ ಯಾವ ಶಬರಿಯ ಬದುಕೂ ಭಾಗ್ಯವಾಗುವುದಿಲ್ಲ...

                                                           ******************

“ಮೆಲ್ಲನೆ ಬಂದಳು ರಾಮನ ನೆನೆಯುತ” ಎಂದು ಹಾಡುತ್ತ ಯಕ್ಷಗಾನದ ಶಬರಿ ಅಲಹಾಬಾದ್ ಓಪನ್ ಥಿಯೇಟರ್‌ನಲ್ಲಿ ವೇದಿಕೆಯಲ್ಲಿ ಹೆಜ್ಜೆ ಹಾಕಿದಾಗ ವೀಕ್ಷಕರ ಸಾಲಿನಲ್ಲಿ ಕುಳಿತವರು ಅಂತಿಂಥವರೆ? ಮಾನವ ಸಂಪನ್ಮೂಲ ಸಚಿವರಾದ ಮುರಳಿ ಮನೋಹರ ಜೋಶಿಯವರೂ ಅವರಲ್ಲೊಬ್ಬರು. ದೇಶದ ಐವತ್ತನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸೌತ್ ಝೋನ್ ಕಲ್ಚರಲ್ ಸೆಂಟರ್‌ನವರು ಆಯೋಜಿಸಿದ್ದ ಕಲಾಮೇಳವದು.

ರಾಮಾಯಣದ ‘ಶಬರಿ ಮೋಕ್ಷ’ ಆಖ್ಯಾನವೇ ಆಗಬೇಕೆಂದು ಆಯೋಜಕರು ಹೇಳಿದ ಕಾರಣ ಅದಕ್ಕೊಂದು ಪ್ರಸಂಗಪಠ್ಯ ಸಿದ್ಧಗೊಳ್ಳಬೇಕಾಗಿತ್ತು. ನನಗೆ ನನ್ನ ಹೆಸರೇ ಸರಿಯಾಗಿ ಬರೆಯಲು ಬಾರದು. ಹಾಗಾಗಿ, ನನ್ನ ಶಿಷ್ಯನಾದ ವೊಗೆಬೆಟ್ಟು ಪ್ರಸಾದನನ್ನು ಕೂರಿಸಿ ಕಥೆಯನ್ನು ಹೇಳಿ ನಲ್ವತ್ತೆಂಟು ಪದ್ಯಗಳನ್ನು ಬರೆಸಿದೆ. ಆ ಹೊಸ ಕಥಾನಕದ ಪ್ರಸ್ತುತಿಗಾಗಿ ಕಲಾವಿದರನ್ನು ಸಿದ್ಧಗೊಳಿಸಿದೆ.

ಶಿವರಾಮ ಕಾರಂತರು ‘ನಳದಮಯಂತಿ’ ಯಕ್ಷಗಾನ ಬ್ಯಾಲೆಯಲ್ಲಿ ನಳನು ಕಾರ್ಕೋಟಕನನ್ನು ಎತ್ತಿ ಎಸೆಯುವ ಅಭಿನಯವನ್ನು ಮಾಡಿಸಿ, ಸರ್ಪವನ್ನು ಸಾಂಕೇತಿಕವಾಗಿ ಕಾಣಿಸಿದ್ದರು.

ನಾನು ಕಾರ್ಕೋಟಕನನ್ನು ಕೂಡ ಒಂದು ಪಾತ್ರವಾಗಿಸಿ, ಮುಖವರ್ಣಿಕೆ ಮತ್ತು ವೇಷಭೂಷಣಗಳನ್ನು ರೂಪಿಸಿ ಅವರ ಪ್ರಯೋಗಕ್ಕಿಂತ ಭಿನ್ನವಾಗಿ ತೋರಿಸಿದ್ದೆ. ಕಾರಂತರ ಪ್ರಯೋಗಗಳಲ್ಲಿ ಮುಖವಾಡ ಧರಿಸಿ ಬರುತ್ತಿದ್ದ ಕೆಲವು ಪಾತ್ರಗಳಿಗೆ ಮುಖವರ್ಣಿಕೆಯನ್ನು ಕೂಡ ರೂಪಿಸಿದ್ದೆ. ಕಾರಂತರಿಗಿಂತ ಭಿನ್ನವಾಗಿ ಯಕ್ಷಗಾನ ಪ್ರಯೋಗಗಳನ್ನು ಕಾಣಿಸುವ ಅನಿವಾರ್ಯ ಸಂದರ್ಭವೂ ನನ್ನ ಪಾಲಿಗಿತ್ತು.ಶಿವರಾಮ ಕಾರಂತರು ನಿರ್ದೇಶಿಸದೇ ಇದ್ದ, ಸಂಪೂರ್ಣ ಹೊಸದೇ ಆಗಿರುವ ‘ಶಬರಿ ಮೋಕ್ಷ’ದ ಪ್ರಸಂಗಪಠ್ಯವನ್ನು ರಂಗಕ್ಕೇರಿಸುವ ಹೊಣೆ ನಿಜವಾಗಿಯೂ ಸವಾಲೆನಿಸಿ ನನ್ನ ಮುಂದೆ ನಿಂತಿತ್ತು. ಶಿವರಾಮ ಕಾರಂತರು ಹೇಳಿಕೊಡುತ್ತಿದ್ದ ರೀತಿ ಮತ್ತು ಪ್ರಸಂಗವನ್ನು ಪ್ರಸ್ತುತಿಗೆ ಸಿದ್ಧಪಡಿಸುತ್ತಿದ್ದ ದಟ್ಟ ಅನುಭವ ದಿವ್ಯನೆನಪುಗಳಾಗಿ ನನ್ನ ಮನಸ್ಸಿನಲ್ಲಿದ್ದ ಕಾರಣದಿಂದ, ಇಡೀ ಪ್ರಸಂಗವನ್ನು ರಂಗವಿನ್ಯಾಸಗೊಳಿಸಲು, ಸೀಮಿತ ಅವಧಿಗೆ ಅಳವಡಿಸಲು ಸುಲಭವಾಯಿತು. ನಮ್ಮ ತಂಡದ ಹಿಮ್ಮೇಳ- ಮುಮ್ಮೇಳದ ಕಲಾವಿದರು ನನ್ನ ಯೋಚನೆಗಳಿಗೆ ಚೆನ್ನಾಗಿ ಸ್ಪಂದಿಸಿದರು.ಲಖನೌ ಮೂಲಕ ಅಲಹಾಬಾದ್‌ಗೆ ಬಂದಿಳಿದು ನಮ್ಮ ತಂಡದ ಪೂರ್ವಪ್ರದರ್ಶನಕ್ಕೆ ಸಿದ್ಧರಾದೆವು. ದೇಶದ ವಿವಿಧೆಡೆಗಳಿಂದ ಬಂದ ಕಲಾತಂಡಗಳು ಅಲ್ಲಿದ್ದವು. ಕೊರಿಯೋಗ್ರಾಫರ್ ಭಾನುಭಾರತಿಯವರು ಸಂಯೋಜಕಿಯಾಗಿ ತಂಡಗಳನ್ನು ನಿರ್ದೇಶಿಸುತ್ತಿದ್ದರು. ಪ್ರತೀತಂಡಕ್ಕೂ ಒಂಬತ್ತು ನಿಮಿಷಗಳ ಸೀಮಿತ ಅವಧಿಯನ್ನು ನೀಡಿದಾಗ ಎಲ್ಲರೂ ಆಕ್ಷೇಪಿಸಿ, ‘ಕನಿಷ್ಠ ಹದಿನೈದು ನಿಮಿಷಗಳಾದರೂ ಬೇಕು’ ಎಂದು ಬೇಡಿಕೆ ಇಟ್ಟರು. ಸಮಯ ಹಿಗ್ಗಿಸುವ ಒತ್ತಾಸೆಗೆ ಒಪ್ಪಿಗೆ ದೊರೆಯಲಿಲ್ಲ.

ನಮ್ಮ ಪ್ರದರ್ಶನವನ್ನು ಕೂಡ ಯಕ್ಷಗಾನದ ಸಾಂಪ್ರದಾಯಿಕ ಸೊಬಗಿಗೆ ಚ್ಯುತಿಯಾಗದ ಹಾಗೆ ಒಂಬತ್ತು ನಿಮಿಷಗಳಿಗೇ ಹೊಂದಿಸಬೇಕಾದ ಅನಿವಾರ್ಯತೆ ಉಂಟಾಯಿತು. ಮರದ ನೆರಳಿನಲ್ಲಿ ನಮ್ಮ ತಂಡದವರು ಕುಳಿತು ಸಮಾಲೋಚನೆ ನಡೆಸಿದೆವು. ಆ ಸಮಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದಾದ್ದರಿಂದ ಪ್ರದರ್ಶನ ನೀಡುವುದು ಅಸಾಧ್ಯವೆಂದು ಕೆಲವರು ಭಾವಿಸಿದ್ದರು. ನಾನು ಎಲ್ಲರೊಂದಿಗೆ ಚಿಂತನೆಯನ್ನು ನಡೆಸಿ ಪ್ರತಿ ದೃಶ್ಯಗಳಿಗೂ ಎಷ್ಟು ಸಮಯ ನೀಡಬೇಕೆಂದು ನಿರ್ಣಯಗೊಳಿಸಿ ಪೂರ್ವಪ್ರದರ್ಶನಕ್ಕೆ ಸಜ್ಜುಗೊಳಿಸಿದೆ.

ಸೀತಾ ವಿಯೋಗದಿಂದ ಲಕ್ಷ್ಮಣನೊಂದಿಗೆ ರಾಮ ಆಗಮಿಸುವುದರಿಂದ ತೊಡಗಿ ಕಬಂಧನನ್ನು ಸಂಧಿಸಿ ಶಬರಿಯೊಂದಿಗೆ ಮುಖಾಮುಖಿಯಾಗುವ ದೃಶ್ಯಗಳನ್ನು ಸಾಂಕೇತಿಕ ಪೂರ್ವರಂಗ ಮತ್ತು ಮಂಗಲ ಹಾಡಿನೊಂದಿಗೆ ಹತ್ತು ನಿಮಿಷಕ್ಕೆ ಇನ್ನೇನು ಒಂದು ನಿಮಿಷವಿರುವಾಗಲೇ ಮುಗಿಸಿದಾಗ ಕೊರಿಯೋಗ್ರಾಫರ್ ಭಾನುಭಾರತಿಯವರಿಗೆ ಅತ್ಯಂತ ಸಂತೋಷವಾಯಿತು. ಉಳಿದ ಕಲಾತಂಡಗಳು ಪೂರ್ವಪ್ರದರ್ಶನದಲ್ಲಿ  ಅರ್ಧಗಂಟೆಗಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಂಡುದರಿಂದ, ‘ನೀವೂ ಯಕ್ಷಗಾನದವರ ಹಾಗೆ ಮಾಡಿ’ ಎಂದು ಅವರು ಸೂಚಿಸುವಷ್ಟರ ಮಟ್ಟಿಗೆ ನಾವು ಸಮಯಬದ್ಧರಾಗಿದ್ದೆವು. ಕೆಲವು ತಂಡಗಳ ಗುರುಗಳೊಂದಿಗೆ ನಾವೂ ಸೇರಿಕೊಂಡು ಅವರ ಆಖ್ಯಾನಗಳನ್ನು ಸೀಮಿತ ಅವಧಿಗೆ ಅಳವಡಿಸಲು ಸಹಕರಿಸಿದೆವು.‘ಶಬರಿ ಮೋಕ್ಷ’ವನ್ನು ಮೆಚ್ಚಿದ ಭಾನುಭಾರತಿಯವರು ಪ್ರಧಾನ ವೇದಿಕೆಯಲ್ಲಿಯೂ ನಮ್ಮ ತಂಡಕ್ಕೆ ಅವಕಾಶ ನೀಡಿದ್ದರು. ರಂಗಕರ್ಮಿ ಶೇಖರ್ ಸುಮನ್ ಅಂದಿನ ಕಾರ್ಯಕ್ರಮವನ್ನು ನಿರೂಪಿಸಿದ್ದರು. ನಮ್ಮ ಯಕ್ಷಗಾನ ತಂಡಕ್ಕೆ ಮೊದಲ ಬಹುಮಾನವೂ ಬಂದಿತ್ತು.

ಹೊಸ ಪ್ರೇಕ್ಷಕರ ಮುಂದೆ ಯಕ್ಷಗಾನವನ್ನು ಪ್ರದರ್ಶಿಸುವಾಗಲೆಲ್ಲ ಅವರ ಅಗತ್ಯಕ್ಕೆ ತಕ್ಕಂತೆ ಈ ಕಲೆಯನ್ನು ಮರುನಿರೂಪಿಸುವುದರ ಜೊತೆಗೆ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಯ್ದುಕೊಳ್ಳುವುದು ಅವಶ್ಯವಿತ್ತು.

ಯಕ್ಷಗಾನವೆಂದರೆ ಕೇವಲ ಕಲೆಯಲ್ಲ, ಅದೊಂದು ಬೆಳಕಿನ ಸೇವೆಯೂ ಆಗಿದೆ ಎಂಬ ವಿಚಾರವನ್ನು ನಾನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಹಾಗಾಗಿಯೇ ನಮ್ಮ ತಂಡದ ಪ್ರದರ್ಶನ ಆರಂಭವಾಗುವುದೇ ಕಾಲುದೀಪ ಹಿಡಿದುಕೊಂಡು, ಬಹುಪರಾಕಿನೊಂದಿಗೆ ಆಗಮಿಸುವ ಕೋಡಂಗಿಗಳ ವೇಷದೊಂದಿಗೆ. ಎನ್‌ಎಸ್‌ಡಿಯಂಥ ತಂಡದ ಕಲಾವಿದರಿಗೆ ಹೇಳಿಕೊಡುವಾಗ ಈ ಆಗಮನದ ನಡೆಯಲ್ಲಿ ಪ್ರಾಯೋಗಿಕ ವ್ಯತ್ಯಾಸಗಳನ್ನು ಮಾಡಿರಬಹುದು; ಆದರೆ ಮುನ್ನೆಲೆಯಲ್ಲಿರುವವನು ದೀಪ ಹಿಡಿದುಕೊಂಡು ಬರುವುದನ್ನೆಂದೂ ತಪ್ಪಿಸಲಿಲ್ಲ. ಪ್ರಾಯೋಗಿಕತೆಗೆ ಒಳಪಡಿಸುತ್ತ ನಾವೇ ಕಲೆಯನ್ನು ವಿಸ್ತರಿಸುತ್ತೇವೊ, ಕಲೆಯೇ ವಿಸ್ತಾರಗೊಳ್ಳುತ್ತ ನಮ್ಮನ್ನು ಆವರಿಸುತ್ತದೆಯೋ ಹೇಳುವುದು ಕಷ್ಟ. ಕಲೆ- ಕಲಾವಿದ- ಸಹೃದಯಿ ಈ ಸಂಬಂಧ ಭಾವನಾತ್ಮಕ ನೆಲೆಯದ್ದು. ಇದನ್ನು ಅರಿಯಲು ಹೋದರೆ ತೆರೆದುಕೊಳ್ಳದ ‘ಚಿದಂಬರ ರಹಸ್ಯ’.

                                                        *********************ಚಿದಂಬರಮ್‌ನ ರಹಸ್ಯ!

ನಾವು ಈವರೆಗೆ ಯಾವ ದೇವನನ್ನು ಮುದದಿಂದ ಕೊಂಡಾಡುತ್ತಿದ್ದೇವೊ ಅವನ ಜನ್ಮದಾತನಾದ ನಟರಾಜನೇ ತಾಂಡವವಾಡಲು ಮಾಯಕದಿಂದ ಬಂದುಹೋಗುವ ತಾಣವದು. ಬುದ್ಧಿಯ ನೆಲೆಯ ಅರಿವಿಗಿಂತ ಭಾವನೆಯ ತಳಹದಿಯಲ್ಲಿ ರಹಸ್ಯವಾಗಿಯೇ ಉಳಿದ ಸಂಗತಿಯಿದು. ತಮಿಳುನಾಡಿನ ಚಿದಂಬರಮ್‌ನ ನಟರಾಜನ ಮುಂದೆ ದೇಶದ ಎಂತೆಂಥ ದೊಡ್ಡ ಕಲಾವಿದರೆಲ್ಲ ಕುಣಿದು, ಹಾಡಿ ಹೋಗುತ್ತಾರೆ! ದೇವರ ಮುಂದಿರುವ ಸುವರ್ಣಸ್ತಂಭದ ಬಳಿಗೆ ತೆರಳುವುದಕ್ಕೆ ಸಾಗುವ ಸರಣಿಯಲ್ಲಿ ಎಲ್ಲರೂ ಮಹಾನ್ ಕಲಾವಿದರೇ. ಎಲ್ಲರಿಗೂ ನಾಟ್ಯಾಧಿದೇವತೆಯ ಮುಂದೆ ನೂಪುರ ಸೇವೆ ಮಾಡುವ ತವಕ. ಪ್ರೇಕ್ಷಕರು ಎಂಥ ಪ್ರತಿಷ್ಠಿತರಾದರೂ ನೆಲದಲ್ಲಿ ಕುಳಿತೇ ನೋಡಬೇಕು.ಶಿವರಾಮ ಕಾರಂತರು ಇರುವಾಗಲೇ ಅವರದೇ ನಿರ್ದೇಶನದ ಯಕ್ಷಗಾನ ಬ್ಯಾಲೆಯ ಪ್ರದರ್ಶನಕ್ಕಾಗಿ ತಂಡದೊಂದಿಗೆ ಚಿದಂಬರಮ್ ಹೋಗಿದ್ದೆ. ಬಿಡುವಿನಲ್ಲಿ ವೇದಿಕೆಯೊಂದರಲ್ಲಿ ನಡೆಯುವ ಪ್ರದರ್ಶನವನ್ನು ವೀಕ್ಷಿಸುವುದಕ್ಕೆ ಪ್ರೇಕ್ಷಕರ ನಡುವೆ ಕುಳಿತಿದ್ದೆ. ಇಳಿವಯಸ್ಸಿನವರೊಬ್ಬರು ರಂಗದ ಮೇಲೆ ಬಂದರು. ನಾನು ಮತ್ತು ನನ್ನ ಜೊತೆಗಿದ್ದವರು ಅವರ ವಯಸ್ಸನ್ನು ಲಕ್ಷಿಸಿ, ‘ಈಕೆ ಎಂಥ ನೃತ್ಯ ಪ್ರದರ್ಶಿಸಿಯಾರು!’ ಎಂದು ಒಳಗೊಳಗೇ ನಕ್ಕೆವು. ಆದರೆ, ನಟುವಾಂಗ ಆರಂಭವಾದಾಗ ಆಕೆಯ ಕಣ್ಣರಳಿಸಿದ ರೀತಿಗೆ ದಂಗಾಗಿಬಿಟ್ಟೆ. ಆಮೇಲೆ ಎರಡು ಮೃದಂಗಗಳ ಮೇಲಿನ ಕೈಬೆರಳುಗಳು ಸೋಲುವಂತೆ, ಇಬ್ಬರು ನಟುವಾಂಗದವರಿಗೆ ಉಸಿರಾಡಲು ಅವಕಾಶವೀಯದಂತೆ ಅವರು ಹೆಜ್ಜೆಗಳನ್ನು ಹಾಕುತ್ತಿರುವಾಗ ಮೂಕನಾಗಿದ್ದೆ.ಯಾಮಿನಿ ಕೃಷ್ಣಮೂರ್ತಿಯವರ ಆ ಅದ್ಭುತ ನೃತ್ಯವನ್ನು ವೀಕ್ಷಿಸಿದ್ದೇನೆಂದು ಹೇಳಿಕೊಳ್ಳಲು ನನಗೆ ಇವತ್ತಿಗೂ ಹೆಮ್ಮೆ. ಅವರ ಶಿಷ್ಯೆಯೊಬ್ಬರು ಹಿಮ್ಮೇಳದ ಲಯಕ್ಕೆ ಸರಿಯಾಗಿ ನೂರಾ ಎಂಟು ಕರಣಗಳನ್ನು ಪ್ರದರ್ಶಿಸಿ ಬೆರಗಾಗಿಸಿದರು. ನೃತ್ಯದ ಕರಣಗಳು, ಯೋಗಾಭ್ಯಾಸ ಇತ್ಯಾದಿಗಳ ಬಗ್ಗೆ ನನಗೆ ನೈಜ ಕುತೂಹಲ ಕೆರಳಲು ಕಾರಣವಾದ ಘಟನೆಯಿದು.ಒಂದು ಕಾಲನ್ನು ಮೇಲ್ಮುಖವಾಗಿ ಚಲಿಸಿ ಕಿವಿಗೆ ಸೋಕಿಸಿ ನೀಳವಾಗಿ ನಿಲ್ಲುವ ‘ಆಕಾಶಚಾರಿ’ಯಂಥ ಭಂಗಿಯನ್ನು ಕಲಿಯಬಹುದಾದ ವಯಸ್ಸು ಮೀರಿತು ಎಂದು ನನಗೆ ಅರಿವಿದ್ದರೂ ಕೆಲವು ಕರಣಗಳನ್ನಾದರೂ ನನಗೆ ನಾನೇ ಕಲಿತುಕೊಳ್ಳಲು ಪ್ರಯತ್ನಿಸಿದ್ದೆ.

ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ದೇಹಪ್ರಕೃತಿ ಕುಂದಬಹುದು. ಆದರೆ, ಆ ವ್ಯಕ್ತಿಯೊಳಗಿನ ಕಲಾವಿದ ಮಾತ್ರ ಮಾಗುತ್ತ ಹೋಗುತ್ತಾನೆ. ಒಂದು ಕಲೆ ಸಿದ್ಧಿಸಬೇಕಾದರೆ ಎಷ್ಟು ವರ್ಷ ಕಲಿಯಬೇಕು ಎಂದು ಯಾರಾದರೂ ಕೇಳಿದರೆ, ‘ಬದುಕಿರುವವರೆಗೂ’ ಎಂಬುದೇ ಸರಿಯಾದ ಉತ್ತರ.

                                                          **********************“ಮೂರು ತಿಂಗಳು ಕಲಿತರೆ ಏನೂ ಗೊತ್ತಾಗುವುದಿಲ್ಲವಮ್ಮ... ಪ್ರಾಥಮಿಕ ಪರಿಚಯವಾಗಬೇಕಾದರೂ ಮೂರು ವರ್ಷ ಕಲಿಯಬೇಕಾಗುತ್ತದೆ” ಎಂದೆ. ಜರ್ಮನಿಯ ಹುಡುಗಿಯೊಬ್ಬಳು ಯಕ್ಷಗಾನವನ್ನು ಕಲಿತು, ಅದರ ಬಗ್ಗೆಯೇ ಪಿಎಚ್.ಡಿ ಅಧ್ಯಯನ ಮಾಡುವ ಅಪೇಕ್ಷೆಯೊಂದಿಗೆ ‘ಕಲಾರಾಘವನ ದರ್ಶನಕ್ಕೆ ತುಡಿಯುವ ಶಬರಿಯಂತೆ’ ನಿಂತಿರುವಾಗ ನಾನು ಅವಳನ್ನು ನಿರುತ್ಸಾಹಗೊಳಿಸುವ ಹಾಗಿರಲಿಲ್ಲ. ಇಂಗ್ಲಿಷ್ ಅರಿಯದ ನಾನು ಪತ್ನಿ ವೇದಾಳ ಸಹಾಯದಿಂದ ಯಕ್ಷಗಾನವೆಂಬುದು ಎಂಥ ಹರಹಿನ ಕ್ಷೇತ್ರವೆಂಬುದನ್ನು ಅವಳಿಗೆ ವಿವರಿಸುವ ಪ್ರಯತ್ನ ಮಾಡಿದೆ.“ಎಷ್ಟು ವರ್ಷವಾದರೂ ಅಡ್ಡಿಯಿಲ್ಲ, ನನಗೆ ಕಲಿಯುವುದು ಮುಖ್ಯ” ಎಂದು ದೃಢವಾಗಿ ನಿರ್ಧರಿಸಿದಂತೆ ಅವಳು ಹೇಳಿದಾಗ ನಾನು ನಕ್ಕೆ. “ಯಕ್ಷಗಾನದ ಎಲ್ಲ ಪಠ್ಯಗಳಿರುವುದು ಕನ್ನಡದಲ್ಲಿ. ನನ್ನೊಡನೆ ಸಂವಹನಕ್ಕಂತೂ ಕನ್ನಡ ಅಗತ್ಯವಾಗಿ ಬೇಕು. ಕನ್ನಡ ಮತ್ತು ಸಂಸ್ಕೃತದ ಅನುಭವವಿದ್ದರೆ ನೀನು ಯೋಚಿಸಿದಂತೆ ಅಧ್ಯಯನ ಮಾಡುವುದು ಸಾಧ್ಯ” ಎಂದು ಅವಳಿಗೆ ಮನದಟ್ಟು ಮಾಡಿದೆ.

ಅವಳು ಹಿಂದೆ ಸರಿಯುವಂತೆ ತೋರಲಿಲ್ಲ. ನಮ್ಮೊಂದಿಗೆ ಮಧ್ಯಾಹ್ನದ ಊಟವನ್ನು ಮಾಡಿ, “ನಾನು ಕನ್ನಡವನ್ನು ಕಲಿತುಕೊಂಡು ಬರುತ್ತೇನೆ” ಎಂದು ಹೊರಟುನಿಂತಳು.

“ನಿನ್ನ ಆಸೆ ಕೈಗೂಡಲಿ” ಎಂದು ಹಾರೈಸಿದೆ.

ನನ್ನ ಹರಕೆ ಸುಳ್ಳಾಗಲಿಲ್ಲ.(ಸಶೇಷ)

ನಿರೂಪಣೆ: ಹರಿಣಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry