ಗುರುವಾರ , ಮಾರ್ಚ್ 4, 2021
22 °C

ಕಳೆಯನ್ನು ಕೀಳು ಎಂದರೆ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಕಳೆಯನ್ನು ಕೀಳು ಎಂದರೆ...

ಇದು ಪಾಪದ ಕೆಲಸ. ಯಾವ ಸರ್ಕಾರವೂ ಮಾಡಬಾರದ ಕೆಲಸ. ಸರ್ಕಾರ ಇರುವುದು ಜನರಿಗಾಗಿ ಮತ್ತು  ಅವರ ಕಲ್ಯಾಣಕ್ಕಾಗಿ. ಸಾರ್ವಜನಿಕ ಜೀವನದಲ್ಲಿ ಜನಕಲ್ಯಾಣಕ್ಕೆ ವಿರೋಧವಾದುದು ಯಾವುದಾದರೂ ಇದ್ದರೆ ಅದು ಭ್ರಷ್ಟಾಚಾರ. 1984ರಲ್ಲಿ ಆಗಿನ ಜನತಾಪಕ್ಷದ ಚುನಾವಣೆ ಪ್ರಣಾಳಿಕೆ ಭರವಸೆಯ ಈಡೇರಿಕೆಯಾಗಿ, ಹುಟ್ಟಿಕೊಂಡ ಲೋಕಾಯುಕ್ತ ಸಂಸ್ಥೆಯನ್ನು ಈಗಿನ ಕಾಂಗ್ರೆಸ್‌ ಸರ್ಕಾರ ಸಾಯಿಸಿ ಶವಪೆಟ್ಟಿಗೆಯಲ್ಲಿ ಇಟ್ಟು ಕೊನೆಯ ಮೊಳೆಯನ್ನೂ ಹೊಡೆದು ಬಿಟ್ಟಿದೆ.

ಸಂಸ್ಥೆಗಳನ್ನು ಹುಟ್ಟಿ ಹಾಕುವುದು ಬಹಳ ಕಷ್ಟ. ಅದರಲ್ಲೂ ವಿಶ್ವಾಸಾರ್ಹ ಸಂಸ್ಥೆಗಳನ್ನು ಹುಟ್ಟಿ ಹಾಕುವುದು ಇನ್ನೂ ಕಷ್ಟ. ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರಿ ಪೆಟ್ಟು ಬಿದ್ದಿದೆ. ಅದಕ್ಕೆ ಜನರು ಕಾರಣರಲ್ಲ. ಲೋಕಾಯುಕ್ತರನ್ನು ನೇಮಕ ಮಾಡುವ ಸರ್ಕಾರ ಮತ್ತು ನೇಮಕ ಆದೇಶ ಹೊರಡಿಸುವ ರಾಜ್ಯಪಾಲರು ಕಾರಣ. ಈಗಿನ ಲೋಕಾಯುಕ್ತ ವೈ.ಭಾಸ್ಕರ ರಾವ್‌ ಅವರನ್ನೇ ನೇಮಕ ಮಾಡಲು ಆಗಿನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜರು ಹಿಡಿದ ಪಟ್ಟು ಎಲ್ಲರಿಗೂ ಗೊತ್ತಿರುವಂಥದು. ಭಾಸ್ಕರ ರಾವ್‌ ಮೇಲೆ ಅವರಿಗೆ ಅಂಥ ಪ್ರೀತಿ ಏಕೆ ಇತ್ತು ಎಂಬ ಕಾರಣಗಳು ಬಹಿರಂಗವಾಗಿಲ್ಲ. ಆದರೆ, ಈಗ ಲೋಕಾಯುಕ್ತಕ್ಕೆ ಆಗಿರುವ ಗತಿ ನೋಡಿದರೆ ಅದಕ್ಕೆ ಭಾರದ್ವಾಜರು ನೈತಿಕ ಹೊಣೆ ಹೊತ್ತುಕೊಳ್ಳುತ್ತಾರೆಯೇ? ಒಂದು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದವರು ಮತ್ತೊಂದು ಅಂಥದೇ ದೊಡ್ಡ ಸಂಸ್ಥೆಯನ್ನು ಹಾಳು ಮಾಡುವಂಥ ತೀರ್ಮಾನ ತೆಗೆದುಕೊಂಡು ಹೊರಟು ಹೋಗಿಬಿಟ್ಟರೆ ಅದರ ಪರಿಣಾಮಗಳನ್ನು ಯಾರು ಎದುರಿಸಬೇಕು?ಇಂಥ ಉನ್ನತ ಹುದ್ದೆಗಳಲ್ಲಿ ಕುಳಿತುಕೊಳ್ಳುವವರು ಬಹಳ ಸೂಕ್ಷ್ಮವಾಗಿರಬೇಕು. ದಪ್ಪ ಚರ್ಮದವರು ಆಗಿರಬಾರದು. ಯಾವಾಗ ತಮ್ಮ ಮಗ ಅಶ್ವಿನ್‌ ರಾವ್‌ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದುವೋ ತಕ್ಷಣ ಭಾಸ್ಕರ ರಾವ್‌ ಅವರು, ‘ಮುಕ್ತ ತನಿಖೆಗೆ ಅವಕಾಶ ಕಲ್ಪಿಸಲು’ ತಾವು ರಾಜೀನಾಮೆ ಕೊಡುವುದಾಗಿ ಹೇಳಿದ್ದರೆ ಅವರ ಗೌರವ ಹೆಚ್ಚುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಲೋಕಾಯುಕ್ತ ಸಂಸ್ಥೆಯ ಗೌರವ ಉಳಿಯುತ್ತಿತ್ತು. ಅದರ ಬದಲು ಅವರು ರಜೆ ಹಾಕಿ ಊರಿನಲ್ಲಿ ಕುಳಿತುಕೊಂಡಿರುವುದರಿಂದ ಅವರನ್ನು ಪದಚ್ಯುತಿಗೊಳಿಸುವುದು ಅನಿವಾರ್ಯವಾಗಿರಬಹುದು, ಅಗತ್ಯವೂ ಆಗಿರಬಹುದು. ಆದರೂ ‘ಅವರ ಮಗ ಮಾಡಿದ ತಪ್ಪಿಗೆ ಅವರ ತಂದೆಯನ್ನು ಶಿಕ್ಷಿಸಬಹುದೇ’ ಎಂಬ ಕಾನೂನಿನ ತೊಡಕಿನ ಪ್ರಶ್ನೆಯನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಎದುರಿಸಿದ್ದಾರೆ.ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ರಚಿಸುವ ಮೂವರು ನ್ಯಾಯಮೂರ್ತಿಗಳ ಸಮಿತಿ ಮುಂದೆ ಭಾಸ್ಕರ ರಾವ್‌ ಪದಚ್ಯುತಿ ಪ್ರಕರಣ ಹೋಗಲಿದೆ. ಭಾಸ್ಕರ ರಾವ್‌ ಅವರ ವಿರುದ್ಧ ಭ್ರಷ್ಟಾಚಾರಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದ ಆರೋಪವನ್ನು ಮಾಡಲು ಸಾಧ್ಯವಿದೆ. ಅದನ್ನು ಸಾಬೀತು ಕೂಡ ಮಾಡಬಹುದು. ಆದರೆ, ಉಪಲೋಕಾಯುಕ್ತ ಸುಭಾಷ್‌ ಅಡಿ ಅವರ ವಿರುದ್ಧ ಅಂಥ ಯಾವ ಆರೋಪ ಇದೆ? ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನಿಷ್ಕಳಂಕ ದಾಖಲೆ ಹೊಂದಿರುವ ಅಡಿ ಅವರನ್ನು ಪದಚ್ಯುತ ಮಾಡುವ ತೀರ್ಮಾನ ಎಷ್ಟು ತರಾತುರಿಯದು ಎಂದರೆ ಸರ್ಕಾರ,  ಲೋಕಾಯುಕ್ತ ಕಾಯ್ದೆಯ ಕಲಮುಗಳನ್ನು ಕೂಡ ನಿಧಾನವಾಗಿ ನೋಡಿದಂತೆ ಕಾಣುವುದಿಲ್ಲ. ಲೋಕಾಯುಕ್ತ ಹುದ್ದೆ ಖಾಲಿ ಇರುವ ಸಂದರ್ಭದಲ್ಲಿ ಉಪಲೋಕಾಯುಕ್ತರಿಗೆ ಆಡಳಿತಾತ್ಮಕ ಅಧಿಕಾರ ಹೊರತುಪಡಿಸಿ ಉಳಿದ ಯಾವ ಅಧಿಕಾರವನ್ನೂ ಚಲಾಯಿಸುವ ಅವಕಾಶ ಇಲ್ಲ ಎಂದು ಲೋಕಾಯುಕ್ತ ಕಾಯ್ದೆ ಓದಿದ ಯಾರಿಗಾದರೂ ಗೊತ್ತಾಗುತ್ತದೆ.ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ ಈಗ ಹಾಲಿ ಇರುವ ಪ್ರಕರಣಗಳನ್ನಾಗಲೀ, ಹೊಸದಾಗಿ ಬರುವ ಪ್ರಕರಣಗಳನ್ನಾಗಲೀ ಉಪಲೋಕಾಯುಕ್ತರು ಪರಾಮರ್ಶಿಸುವಂತೆ ಇಲ್ಲ. ಹಾಗಿರುವಾಗ ರಾಜ್ಯ ಸರ್ಕಾರಕ್ಕೆ ಯಾವ ಭಯವಿತ್ತು? ವೈದ್ಯೆ ಶೀಲಾ ಪಾಟೀಲ ಅವರನ್ನು ಆರೋಪಗಳಿಂದ ಖುಲಾಸೆ ಮಾಡಿದ  ಒಂದು ಆರೋಪದ ಮೇಲೆ ಉಪಲೋಕಾಯುಕ್ತರನ್ನು ವಜಾ ಮಾಡಲು ಸಾಧ್ಯವೇ? ಈಗ ಲೋಕಾಯುಕ್ತರ ಜೊತೆಗೆ ಉಪಲೋಕಾಯುಕ್ತರ ಪದಚ್ಯುತಿ ಪ್ರಕರಣವೂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು  ರಚಿಸುವ ಮೂವರು ನ್ಯಾಯಮೂರ್ತಿಗಳ ಸಮಿತಿ ಮುಂದೆ ಹೋಗುತ್ತದೆ. ಅವರೇನು ಕಣ್ಣು ಮುಚ್ಚಿ ತಮ್ಮ ‘ತೀರ್ಪು’  ಪ್ರಕಟಿಸುತ್ತಾರೆಯೇ? ಅವರಿಗೆ ತಮ್ಮದೇ ವೃತ್ತಿಗೆ ಸೇರಿದ ‘ಸೋದರ ನ್ಯಾಯಾಧೀಶ’ರಿಗಿಂತ ಶಾಸನಸಭೆ ಮೇಲೆ ಪ್ರೀತಿ ಇರಲು ಸಾಧ್ಯವೇ?ರಾಜ್ಯ ವಿಧಾನಸಭೆಯಲ್ಲಿ ಉಪಲೋಕಾಯುಕ್ತರ ಪದಚ್ಯುತಿಗೆ ನಿರ್ಣಯ ಮಂಡಿಸುವುದಕ್ಕಿಂತ ಮುಂಚೆ ಕಾಂಗ್ರೆಸ್‌ ಶಾಸಕರು ನೂರು ಸಾರಿ ಯೋಚನೆ ಮಾಡಬೇಕಿತ್ತು. ಸಂವಿಧಾನದಲ್ಲಿ ಶಾಸಕಾಂಗಕ್ಕೆ ಹೇಗೆ ಸಾರ್ವಭೌಮ ಸ್ಥಾನ ಇದೆಯೋ ಹಾಗೆಯೇ ನ್ಯಾಯಾಂಗಕ್ಕೂ ಇದೆ. ಇದುವರೆಗಿನ ಸ್ವತಂತ್ರ ಭಾರತದ ಸಂಸತ್ತಿನ ಇತಿಹಾಸದಲ್ಲಿ ಒಬ್ಬ ನ್ಯಾಯಮೂರ್ತಿಗೆ ಮಾತ್ರ ‘ಛೀಮಾರಿ’ ಆಗಿದೆ. ಅಂದರೆ ಸಂವಿಧಾನದ ಉಭಯ ಅಂಗಗಳು ಪರಸ್ಪರರ ಬಗೆಗೆ ಗೌರವ ಇಟ್ಟುಕೊಂಡು ನಡೆದಿವೆ ಎಂದೇ ಅರ್ಥ ಅಲ್ಲವೇ? ತಮ್ಮ ತಮ್ಮ ಪರಮಾಧಿಕಾರಿಗಳನ್ನು ತಮ್ಮ ತಮ್ಮ ವ್ಯಾಪ್ತಿಗೆ ಉಳಿಸಿಕೊಂಡಿವೆ ಎಂದೇ ಪ್ರಜಾಪ್ರಭುತ್ವದ ರಥ ಮುಗ್ಗರಿಸದೇ ನಡೆದಿದೆ. ಈಗ ಅಡಿ ಅವರ ಪದಚ್ಯುತಿಗೆ ಶಾಸಕಾಂಗ ಹಾಕಿರುವ ಮುನ್ನುಡಿ ಗಮನಿಸಿದರೆ ನ್ಯಾಯಾಂಗಕ್ಕೆ ಅಳುಕುಂಟಾಗುವುದು ಸಹಜ.ಹೀಗೆ ವಿನಾಕಾರಣವಾಗಿ ಶಾಸಕರು ನ್ಯಾಯಾಂಗದ ಮೇಲೆ ಸೇಡಿನಿಂದ ಅಥವಾ ಅವಿವೇಕದಿಂದ ದಾಳಿ ಮಾಡಲು ಆರಂಭಿಸಿದರೆ ನ್ಯಾಯಾಂಗವೂ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸಲು ತೊಡಗಬಹುದು. ಮೂವರು ನ್ಯಾಯಮೂರ್ತಿಗಳ ಸಮಿತಿ ಪ್ರತಿಯೇಟು ನೀಡಬೇಕು ಎಂದು, ‘ಅಡಿ ಅವರು ಬಿಡಿ, ಭಾಸ್ಕರ್‌ ರಾವ್‌ ಅವರ  ಮೇಲೆ ನೇರವಾದ ಯಾವುದೇ ಆರೋಪಗಳು ಇಲ್ಲ’ ಎಂದು ಇಬ್ಬರನ್ನೂ ಖುಲಾಸೆ ಮಾಡಿದರೆ ಶಾಸನ ಸಭೆ ಏನು ಮಾಡುತ್ತದೆ? ಆಗ ಮತ್ತೆ ಲೋಕಾಯುಕ್ತರಾಗಿ ಬಂದು ಕುಳಿತುಕೊಳ್ಳುವ ಭಾಸ್ಕರ ರಾವ್‌ ಅವರ ಮನಸ್ಸಿನಲ್ಲಿ ಎಂಥ ಸೇಡಿನ ಮನೋಭಾವ ಇರಬಹುದು?ಭ್ರಷ್ಟಾಚಾರದಂಥ ಪಿಡುಗನ್ನು ಹೊಡೆದು ಓಡಿಸಲು ಅಥವಾ ಸಾಧ್ಯವಾದ ಮಟ್ಟಿಗೆ ನಿಯಂತ್ರಿಸಲು ಹುಟ್ಟಿಕೊಂಡ ಲೋಕಾಯುಕ್ತ ಸಂಸ್ಥೆ, ಹೀಗೆ ಶಾಸನ ಸಭೆಯ ಹಂಗಿನಲ್ಲಿ ಇರಬಾರದು. ಅದಕ್ಕಾಗಿಯೇ 1984ರಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟಿ ಹಾಕುವಾಗ ಶಾಸನಸಭೆಯ ಮೂರರಲ್ಲಿ ಎರಡರಷ್ಟು ಸದಸ್ಯರ ಮತಗಳಿಂದ ಲೋಕಾಯುಕ್ತರನ್ನು ವಜಾ ಮಾಡುವ ನಿರ್ಣಯ ಅಂಗೀಕಾರ ಆಗಬೇಕು ಎಂಬ ಬಲವಾದ ಕಲಮನ್ನು ಸೇರಿಸಲಾಗಿತ್ತು. ಈಗ ಮೂರನೇ ಒಂದು ಭಾಗ ಸಾಕು ಎಂದು ಕಾಯ್ದೆ ಮಾಡುತ್ತಿದ್ದಂತೆಯೇ ಅದರ  ದುಷ್ಪರಿಣಾಮಗಳು ಗೋಚರಿಸತೊಡಗಿವೆ. ಕಳೆಯನ್ನು ಕೀಳಲು ಅಧಿಕಾರ ಕೊಟ್ಟರೆ ಸರ್ಕಾರ, ಬೆಳೆಯನ್ನೇ ಕೀಳಲು ಹೊರಟಂತೆ ಕಾಣುತ್ತದೆ!ಲೋಕಾಯುಕ್ತ ಸಂಸ್ಥೆಯಲ್ಲಿ ಸಮಸ್ಯೆ ಇರಲಿಲ್ಲ ಎಂದು ಅಲ್ಲ. ಭಾಸ್ಕರ ರಾವ್‌ ಅವರನ್ನು ಬಂಧಿಸಬೇಕಿತ್ತು ಎಂದು ವಾದಿಸುವ ಸಂತೋಷ್ ಹೆಗ್ಡೆಯವರು ಕೂಡ ಲೋಕಾಯುಕ್ತದಲ್ಲಿ ಹಿಂದೆಯೂ ಭ್ರಷ್ಟರು ಇದ್ದರು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಉನ್ನತ ಮಟ್ಟದಲ್ಲಿ ಅಂದರೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರ ಮಟ್ಟದಲ್ಲಿ ಇದುವರೆಗೆ ಅಪಸ್ವರದ ಮಾತುಗಳು ಕೇಳಿ ಬಂದಿರಲಿಲ್ಲ. 1984ರಲ್ಲಿ ಮೊದಲ ಲೋಕಾಯುಕ್ತರಾಗಿ ನೇಮಕವಾಗಿದ್ದ ಎ.ಡಿ.ಕೋಶಲ್‌ ಅವರಿಂದ ಸಂತೋಷ್‌ ಹೆಗ್ಡೆಯವರವರೆಗೆ ಯಾರ ವಿರುದ್ಧವೂ ಯಾರೂ ಬೆರಳು ಮಾಡಿ ತೋರಿಸುವಂತೆ ಇರಲಿಲ್ಲ. ಹೆಗ್ಡೆಯವರ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ಶಿವರಾಜ ಪಾಟೀಲರು ಕೂಡ ತಮ್ಮ ವಿರುದ್ಧ ಆರೋಪ ಕೇಳಿ ಬರುತ್ತಿರುವಂತೆಯೇ ರಾಜೀನಾಮೆ ಕೊಟ್ಟು ಹೊರಟು ಹೋದರು.ಅವರೆಲ್ಲ ಪ್ರಾಮಾಣಿಕರು ಆಗಿದ್ದರು ಎಂದೇ ಅಧಿಕಾರಿಗಳು, ರಾಜಕಾರಣಿಗಳು ಅವರಿಗೆ ಹೆದರುತ್ತಿದ್ದರು. ಅದರಿಂದ ಸಾಮಾನ್ಯ ಜನರ ಕೆಲಸಗಳು ಆಗುತ್ತಿದ್ದುವು. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆಗೆ ಒಂದು ಖದರ್ ಮತ್ತು ಒಂದು ಛಾತಿಯನ್ನು ತಂದು ಕೊಟ್ಟರೆ ಸಂತೋಷ್ ಹೆಗ್ಡೆಯವರು ಮತ್ತು ಅವರ ಜೊತೆಗೆ ಉಪಲೋಕಾಯುಕ್ತರಾಗಿ ಕೆಲಸ ಮಾಡುತ್ತಿದ್ದ ನ್ಯಾಯಮೂರ್ತಿ ಪತ್ರಿ ಬಸವನಗೌಡರು ಅದಕ್ಕೆ ಒಂದು

ಮಾನವೀಯ ಮುಖ ಒದಗಿಸಿಕೊಟ್ಟರು.ಹೆಗ್ಡೆ ಮತ್ತು ಪತ್ರಿಯವರಿಗೆ ರಾಜ್ಯದ ಯಾವುದೇ ಮೂಲೆಯಿಂದ ಯಾರೇ ಆಗಲಿ ಫೋನ್‌ ಮಾಡಿ ತಮಗೆ ಸರ್ಕಾರಿ  ಕಚೇರಿಯಲ್ಲಿ ತೊಂದರೆಯಾಗುತ್ತಿದೆ ಎಂದೋ, ಆಸ್ಪತ್ರೆಯಲ್ಲಿ ಸೌಲಭ್ಯ ಸಿಗುತ್ತಿಲ್ಲ ಎಂದೋ, ಪೊಲೀಸ್‌ ಠಾಣೆಯಲ್ಲಿ ಹಣ ಕೇಳುತ್ತಿದ್ದಾರೆ ಎಂದೋ ದೂರಬಹುದಿತ್ತು. ತಕ್ಷಣ ಇವರು ಸಂಬಂಧಪಟ್ಟವರಿಗೆ ಕರೆ ಮಾಡಿ ದೂರು ಕೊಟ್ಟವರಿಗೆ ಸಹಾಯ ಮಾಡುವಂತೆ ಸೂಚಿಸುತ್ತಿದ್ದರು. ಅವರಿಗೆಲ್ಲ ಸಹಾಯ ಸಿಗುತ್ತಿತ್ತು. ಇಂಥ ಅನೇಕ ಕಥೆಗಳು ನನಗೇ ಗೊತ್ತಿವೆ. ಕಷ್ಟದಲ್ಲಿ ಇರುವ ಜನರಿಗೆ ಇದು ಒಂದು ದೊಡ್ಡ ಭರವಸೆಯಾಗಿತ್ತು. ಇಂಥವರಿಗೆ ಕರೆ ಮಾಡಿದರೆ ತಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂದು ಜನರಿಗೆ ಗೊತ್ತಿತ್ತು. ಈಗ ಅವರು ಯಾರಿಗೆ ಕರೆ ಮಾಡಬೇಕು? ಒಂದೇ ಏಟಿಗೆ ಸರ್ಕಾರ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಪದಚ್ಯುತ ಮಾಡಲು ತೀರ್ಮಾನಿಸಿರುವುದರಿಂದ ಜನಸಾಮಾನ್ಯರು ನರಳುವಂತೆ ಆಯಿತು; ಭ್ರಷ್ಟರು ಕೇಕೆ ಹಾಕಿ ನಗುವಂತೆ ಆಯಿತು. ಇದರಂಥ ಜನವಿರೋಧಿ ತೀರ್ಮಾನ ಇನ್ನೊಂದು ಇರಲು ಸಾಧ್ಯವಿಲ್ಲ.ಸರ್ಕಾರದ ಕಚೇರಿಗಳಲ್ಲಿ ಲಂಚ ತಿನ್ನಲು ಹೆದರುವವರು ಇನ್ನು ಮುಂದೆ ರಾಜಾರೋಷವಾಗಿಯೇ ಮೇಜಿನ ಮೇಲಿನಿಂದಲೇ ದುಡ್ಡು ತೆಗೆದುಕೊಳ್ಳಬಹುದು. ಇದನ್ನೆಲ್ಲ ಸರ್ಕಾರದಲ್ಲಿ ಇದ್ದವರು ಯೋಚಿಸುವುದು ಬೇಡವೇ? ಬರೀ  ಅಶೋಕ ಪಟ್ಟಣ ಅವರಂಥ ಬಿಸಿ ರಕ್ತದ ಕೆಲವರು ಶಾಸಕರು ಸೇರಿಕೊಂಡು ಇಂಥ ತೀರ್ಮಾನ ತೆಗೆದುಕೊಂಡರು ಎಂದರೆ ನಂಬಲು ಆಗುತ್ತದೆಯೇ? ಮುಖ್ಯಮಂತ್ರಿ, ಗೃಹ ಮಂತ್ರಿ, ಕಾನೂನು ಮಂತ್ರಿಗಳಿಗೆ ಏನೇನೂ ಗೊತ್ತಿರಲಿಲ್ಲವೇ? ಇಂಥ ಮಹತ್ವದ ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಪಕ್ಷದ ಹಿರಿಯರೆಲ್ಲ ಸೇರಿ ಅದರ ಪರಿಣಾಮಗಳನ್ನು ಯೋಚನೆ ಮಾಡಿದರೇ ಅಥವಾ ಇಲ್ಲವೇ? ಈ ಸರ್ಕಾರ ಭ್ರಷ್ಟ ಅಲ್ಲವಾದರೆ ಅದಕ್ಕೆ ಯಾರ ಭಯ? ಭ್ರಷ್ಟಾಚಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪಾಲುದಾರರಾಗಿರುತ್ತಾರೆ. ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಉತ್ತರದಾಯಿತ್ವ ಇರುವುದಿಲ್ಲ. ಜನಪ್ರತಿನಿಧಿಗಳಿಗೆ ಇರುತ್ತದೆ. ಅವರು ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ.ಲೋಕಾಯುಕ್ತವನ್ನು ದುರ್ಬಲಗೊಳಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರಂಥ ಪ್ರಭಾವಿಗಳು ಯಾವಾಗಲೂ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದರು. ಈಗ ಜನಪ್ರತಿನಿಧಿಗಳೂ ಅವರ ಜೊತೆಗೆ ಕೈ ಜೋಡಿಸಿದಂತೆ ಆಯಿತು. ಈಗ ಲೋಕಾಯುಕ್ತ ಸಂಸ್ಥೆ ಸ್ಥಗಿತಗೊಂಡಿರುವುದರಿಂದ ಇನ್ನು ಮುಂದೆ ಶಾಸಕರು, ಸಚಿವರು ಮತ್ತು ಅಧಿಕಾರಿಗಳಂಥ ‘ಸಾರ್ವಜನಿಕ ಸೇವಕ’ರ ವಿರುದ್ಧ ನೊಂದವರು ದೂರು ದಾಖಲಿಸಬೇಕು ಎಂದರೆ ಸರ್ಕಾರದ ಪೂರ್ವಾನುಮತಿ ಬೇಕು. ಇಂಥ ಅನುಮತಿ ಕೊಟ್ಟ ಪ್ರಕರಣಗಳು ವಿರಳಾತಿ ವಿರಳ. ಏಕೆಂದರೆ ಎಲ್ಲರ ಕೈಗಳಿಗೂ ಮಸಿ ಮೆತ್ತಿಕೊಂಡಿರುತ್ತದೆ. ಆಗ ಜನರಿಗೆ ನ್ಯಾಯ ಕೊಡುವವರು ಯಾರು? ಹತಾಶೆ ಬಿಟ್ಟು ಅವರಿಗೆ ಬೇರೆ ಏನು ದಾರಿ ಇದೆ?ನ್ಯಾಯಾಂಗದ ಸೇವೆಯಿಂದ ಲೋಕಾಯುಕ್ತಕ್ಕೆ ನೇಮಕವಾಗಿ ಬರುವವರ ಬಗೆಗೆ ಶಾಸಕಾಂಗಕ್ಕೆ ಇರುವ ಈಗಿನ ‘ತಿರಸ್ಕಾರ’ ಮನೋಭಾವ ನೋಡಿದರೆ ಮುಂದೆ ಯಾರಾದರೂ ಪ್ರಾಮಾಣಿಕ, ಮಾನವುಳ್ಳ ನ್ಯಾಯಮೂರ್ತಿಗಳು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಾಗಲು ಒಪ್ಪುತ್ತಾರೆ ಎಂದು ನಂಬುವುದು ಕಷ್ಟ. ಸುಭಾಷ್‌ ಅಡಿ ಅವರಿಗೆ ಇಂದು ಆಗಿರುವ ಅವಮಾನ ನಾಳೆ ತಮಗೂ ಆಗುವುದಿಲ್ಲ ಎಂದು ಅವರು ಹೇಗೆ ನಂಬಬೇಕು? ಒಂದು ಸಾರಿ ಹೀಗೆ ನೈತಿಕ ಸ್ಥೈರ್ಯ ಕುಂದಿ ಹೋದ ಒಂದು ಸಂಸ್ಥೆ ಮತ್ತೆ ತನ್ನ ಮೂಲ ಆಶಯದೊಂದಿಗೆ ದೃಢವಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಕಾನೂನು ಪದವೀಧರರೂ ಆದ, ಬಡವರ ಬಗೆಗೆ ಬಹಳ ಕಾಳಜಿ ಇರುವ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಹೀಗೆ ತರಾತುರಿಯಲ್ಲಿ ಅನುಮತಿ ನೀಡಬಾರದಿತ್ತು. ಮಾಜಿ ವಿಧಾನಸಭಾಧ್ಯಕ್ಷರಾದ, ಸ್ವತಃ ಕಾನೂನು ಪದವೀಧರರಾದ ರಮೇಶಕುಮಾರ್‌ ಅವರಂಥ ಹಿರಿಯರು ಇರುವ ಸಭೆಯಲ್ಲಿಯೂ ಹೀಗೆಲ್ಲ ಆಗಬಾರದಿತ್ತು. ದ್ರೌಪದಿಯ ವಸ್ತ್ರಾಪಹರಣವೂ ಎಲ್ಲ ಹಿರಿಯರ ಸಮ್ಮುಖದಲ್ಲಿಯೇ ನಡೆದಿತ್ತು. ಈಗ ಆಗಿರುವುದು ಅದಕ್ಕಿಂತ ಕಡಿಮೆ ಪಾಪದ ಕೆಲಸವೇನೂ ಅಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.