ಕಳ್ಳು ಬಳ್ಳಿ

7

ಕಳ್ಳು ಬಳ್ಳಿ

Published:
Updated:
ಕಳ್ಳು ಬಳ್ಳಿ

ಹಕ್ಕಿಗಳ ಮ್ಯಾಗ್ನಟಿಕ್ ಕಂಪಾಸ್ ಬಗೆಗೆ ಬಹಳ ಸಂಶೋಧನೆಗಳು ನಡೆದಿವೆ. ಆದರೂ ಅದರ ಭೌತಿಕ ಸಂಯೋಜನೆ ವಿಜ್ಞಾನಿಗಳಿಗೆ ಇಂದಿಗೂ ಬಿಡಿಸಲಾಗದ ಕಗ್ಗಂಟಾಗಿದೆ. ಇದರಲ್ಲಿ ಕ್ವಾಂಟಮ್ ಎಂಟಾಂಗಲ್ಮೆಂಟ್ ಆಫ್ ಇಲೆಕ್ಟ್ರಾನ್ ಸ್ಪಿನ್‌ನ ಕೈವಾಡ ಇರಬಹುದೆಂದು ವಿಜ್ಞಾನಿಗಳ ಅನಿಸಿಕೆ.

ಅದೇನೇ ಇರಲಿ ಯುರೋಪಿಯನ್ ರಾಬಿನ್ ಹಕ್ಕಿಗಳನ್ನು ಸೂರ್ಯ, ಚಂದ್ರ, ನಕ್ಷತ್ರಗಳ ಸುಳಿವು ಸಿಗದಂತಹ ಸನ್ನಿವೇಶದಲ್ಲಿ ಬಂಧಿಸಿಟ್ಟರು ಕೂಡ, ವಲಸೆ ಹೊರಡುವ ಕಾಲ ಬಂದಾಗ ತಾನು ಹೋಗಲೇಬೇಕಾದ ದಿಕ್ಕನ್ನು ಖಚಿತವಾಗಿ ಗುರುತಿಸುತ್ತವೆ’’.

ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ ಕಾಡಿನಿಂದ ಓಡಿಬರುತ್ತಿದ್ದ ಬೊಮ್ಮನನ್ನು ನೋಡಿದಾಗ ದಿಗಿಲಾಯಿತು.

‘ಕರಡಿ ಮಾದ ಸತ್‌ಹೋಗ್ತಾನೆ ಸಾ...’ ಎಂದು ಬೊಮ್ಮ ಏದುಸಿರು ಬಿಡುತ್ತಾ ನಿಂತ. ಅವನ ಮುಖದಲ್ಲಿ ಆವರಿಸಿದ್ದ ಭಯ ಆತಂಕಗಳು ಜರುಗಿರಬಹುದಾದ ಅನಾಹುತದ ಗಂಭೀರತೆಯನ್ನು ಹೇಳುತ್ತಿದ್ದವು. ಹೆಚ್ಚಿನ ವಿವರಗಳನ್ನು ಕೇಳದೆ ಬೊಮ್ಮ ತೋರಿದ ದಿಕ್ಕಿನತ್ತ ಸಾಗಿದೆವು.ಸ್ಥಳ ತಲುಪುವ ಹೊತ್ತಿಗೆ ಕರಡಿ ಮಾದನನ್ನು ಒಂದಿಬ್ಬರು ರಟ್ಟೆ ಹಿಡಿದು ರಸ್ತೆ ಬದಿಗೆ ಕರೆತರುತ್ತಿದ್ದರು. ಮುಖದಿಂದ ಇಳಿದಿದ್ದ ರಕ್ತ ಬಟ್ಟೆಯ ಮೇಲೆಲ್ಲಾ ಚೆಲ್ಲಾಡಿ ನೋಡಲು ಭಯಾನಕವಾಗಿ ಕಾಣುತ್ತಿತ್ತು.ದೆಹಲಿಯಿಂದ ಎಂ.ಫಿಲ್. ಪದವಿ ಹುಡುಕಿಕೊಂಡು ಬಂದಿದ್ದ ಇಬ್ಬರು ಅವಿವೇಕಿ ವಿಧ್ಯಾರ್ಥಿಗಳು ಈ ಅನಾಹುತಕ್ಕೆ ಕಾರಣರಾಗಿದ್ದರು. ಹಕ್ಕಿಗಳು ಗೂಡಿನಲ್ಲಿರಿಸುವ ಮೊಟ್ಟೆಗಳ ಸಂಖ್ಯೆಯ ದತ್ತಾಂಶ ಸಂಗ್ರಹಿಸಲು ಚಿಮ್ಮಿ ನಿಂತಿದ್ದ ಎಂಬತ್ತು ಅಡಿ ಎತ್ತರದ ಮರ ಏರುವಂತೆ ಮಾದನಿಗೆ ಕೋರಿದ್ದರಂತೆ.

ಗೂಡಿನಲ್ಲಿ ಮೊಟ್ಟೆ ಮರಿಗಳ ರಕ್ಷಣೆಯ ವಿಷಯದಲ್ಲಂತೂ ಈ ಹಕ್ಕಿಗಳು ಬಹಳ ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಹಾಗಾಗಿ ಜುಟ್ಟಿನ ಹದ್ದುಗಳ ಗೂಡಿರುವ ಮರಗಳನ್ನೇರುವ ದುಸ್ಸಾಹಸಕ್ಕೆ ಯಾವ ಮೂರ್ಖರು ಮುಂದಾಗುವುದಿಲ್ಲ.ಇದಲ್ಲದೆ ಜುಟ್ಟು ಹದ್ದುಗಳು ಕಟ್ಟುವ ಗೂಡು, ಇಡುವ ಮೊಟ್ಟೆ, ಆಹಾರ ಪದ್ಧತಿ, ಬೇಟೆ ಎಲ್ಲವನ್ನೂ ಡಾ. ಸಲೀಂ ಅಲಿ ಅರವತ್ತು ವರ್ಷಗಳ ಹಿಂದೆಯೇ ದಾಖಲಿಸಿ ಪ್ರಕಟಿಸಿದ್ದಾರೆ. ಜಗತ್ತಿಗೆಲ್ಲಾ ತಿಳಿದಿರುವ ಮಾಹಿತಿಯನ್ನು ಮತ್ತೆ ಪ್ರಸ್ತುತ ಪಡಿಸಿ ಎಂ.ಫಿಲ್. ಪದವಿ ಪಡೆಯುವುದು ಅರ್ಥವಿಲ್ಲದ ಕಸರತ್ತು. ಅದಕ್ಕಾಗಿ ಜೀವವನ್ನು ಒತ್ತೆಯಿಟ್ಟು ನಿರ್ಜೀವ ದತ್ತಾಂಶಗಳನ್ನು ಸಂಗ್ರಹಿಸುವುದರಲ್ಲಿ ಯಾವ ಅರ್ಥವೂ ಇಲ್ಲವೆನಿಸಿತು.ಭಾರತದ ಹದ್ದುಗಳಲ್ಲಿ ಈ ಜುಟ್ಟಿನ ಹದ್ದುಗಳು ಅತ್ಯಂತ ಬಲಶಾಲಿ. ಮಿಂಚಿನಂತೆ ಎರಗಿ ಬೇಟೆ ಎಟುಕಿಸಿಕೊಳ್ಳುವ ಇವುಗಳ ಕೌಶಲ್ಯ ಅದ್ಭುತ. ಈ ಕಾರ್ಯ ಚಟುವಟಿಕೆಗೆ ನೆರವಾಗಲೆಂದೆ ಪ್ರತಿ ಕಾಲಿನಲ್ಲಿ ಚೂರಿಯಂತೆ ಹರಿತವಾದ ನಾಲ್ಕು ಉದ್ದನೆಯ ಉಗುರುಗಳು ಸದಾ ಎಚ್ಚರವಾಗಿರುತ್ತವೆ. ನವಿಲುಗಳಂತಹ ದೊಡ್ಡ ಹಕ್ಕಿಗಳು ಈ ಹದ್ದುಗಳ ದಾಳಿಗೆ ಸಿಕ್ಕಿ ಕ್ಷಣಾರ್ಧದಲ್ಲಿ ನೆಲಕ್ಕುರುಳಿರುವುದನ್ನು ನಾವೇ ಕಂಡಿದ್ದೇವೆ.ಮಾದ ಮರವೇರಿದ್ದನ್ನು ದೂರದಿಂದ ಗಮನಿಸಿದ ಹದ್ದುಗಳು ಯುದ್ಧ ವಿಮಾನಗಳಂತೆ ವಿಭಿನ್ನ ದಿಕ್ಕುಗಳಿಂದ ಏಕಕಾಲದಲ್ಲಿ ದಾಳಿ ನಡೆಸಿದವಂತೆ. ಅದುಹೇಗೋ ಹಿಡಿದ ಅಪ್ಪುಗೆಯನ್ನು ಸಡಿಲಗೊಳಿಸದೆ ಪರಿಸ್ಥಿತಿಯನ್ನು ನಿಭಾಯಿಸಿ ಮರದಿಂದ ಇಳಿದು ಬಂದಿದ್ದರಿಂದ ಮಾದ ಬದುಕುಳಿದಿದ್ದ. ಆದರೆ ಅವನ ಮುಖ, ಬೆನ್ನು, ಭುಜಗಳೆಲ್ಲ ಹರಿದಿತ್ತು. ತಡ ಮಾಡದೆ ಆಸ್ಪತ್ರೆಗೆ ಸಾಗಿಸಿದ್ದರಿಂದ ಮಾದ ಸಾವಿನಿಂದ ಪಾರಾಗಿದ್ದ.ಕರಡಿ ಮಾದ ನಮ್ಮಲ್ಲಿಗೆ ಕೆಲಸಕ್ಕೆ ಬರುತ್ತಿದ್ದುದು ಯಾವಾಗಲೋ ಒಮ್ಮೆ. ನಮ್ಮ ಕಾಯಂ ಸಹಾಯಕರು ರಜೆ ಹೋದಾಗ ಮಾತ್ರ ಆತ ನಮ್ಮನ್ನು ಸೇರಿಕೊಳ್ಳುತ್ತಿದ್ದ. ಹೆಚ್ಚು ಮಾತನಾಡದ ಮಾದ ತನ್ನ ಕೆಲಸ ಮುಗಿದ ಬಳಿಕ ಹೋಗಿಬರುತ್ತೇನೆಂದು ಸೆಲ್ಯೂಟ್ ಹೊಡೆಯುತ್ತಿದ್ದನೇ ಹೊರತು ತನಗೆ ಸಲ್ಲಬೇಕಾದ ದಿನಗೂಲಿಯನ್ನು ಬಾಯಿ ತೆರೆದು ಕೇಳುತ್ತಿರಲಿಲ್ಲ.ಮಂಡಿಯವರೆಗೆ ತುಂಡು ಪಂಚೆ ಸುತ್ತಿಕೊಂಡು ಓಡಾಡುವ ಕುರುಬರಿಗಿಂತ ಆತ ಭಿನ್ನವಾಗಿದ್ದ. ಮಾಸಿದ ಹಳೆಯ ಪ್ಯಾಂಟಿನೊಳಗೆ ಶರ್ಟ್ ಇಳಿಬಿಟ್ಟು, ಸವೆದಿರುವ ಬೆಲ್ಟ್ ಕಟ್ಟಿಕೊಂಡು ಕಾಲಿಗೆ ಎನ್.ಸಿ.ಸಿ. ಬೂಟ್ ಧರಿಸಿ ಸದಾ ಚಟುವಟಿಕೆಯಿಂದ ಓಡಾಡುತ್ತಿದ್ದ.ಏಕಾಂಗಿಯಾಗಿ ಕಾಡಿನ ಒಳದಾರಿಗಳಲ್ಲಿ ಒಬ್ಬಂಟಿಗನಾಗಿ ಅಲೆದಾಡುತ್ತಾ ತನಗೆ ತಾನೆ ಮಾತಾಡಿಕೊಳ್ಳುವುದು, ಮುಂದಿನಿಂದ ಯಾರಾದರೂ ಬರುವುದನ್ನು ಗಮನಿಸಿದ ಕೂಡಲೆ ಮೌನವಾಗಿಬಿಡುವುದು ಅವನ ಸ್ವಭಾವವಾಗಿತ್ತು.ಕಾಡಿನಲ್ಲಿ ನಮ್ಮ ಸಹಾಯಕರ ಮುಖ್ಯ ಕೆಲಸವೆಂದರೆ ಸುಳಿವು ನೀಡದೆ ಪ್ರತ್ಯಕ್ಷಗೊಳ್ಳುವ ಆನೆಗಳನ್ನು ಗಮನಿಸುವುದು. ನಾವು ಗಿಡಗಂಟೆಗಳಲ್ಲಿ ಹಕ್ಕಿಗಳನ್ನು ಗಮನಿಸುವಾಗ ಅವರು ಎಚ್ಚರಿಕೆಯಿಂದ ಆನೆಗಳ ಚಲನವಲನಗಳನ್ನು ನೋಡುತ್ತಿರಬೇಕು. ಆನೆಗಳು ಅಧಿಕವಾಗಿರುವ ಮುದುಮಲೈ ಕಾಡಿನಲ್ಲಂತೂ ಇದು ಬಹುಮುಖ್ಯ.ಈ ಹಿನ್ನೆಲೆಯಲ್ಲಿ ನಮಗಿಂತ ಹತ್ತು ಹೆಜ್ಜೆ ಮುಂದೆ ನಡೆಯುತ್ತಿದ್ದ ಮಾದ ನೆಲಕ್ಕೆ ಮುಖಮಾಡಿ ಏನನ್ನೋ ಸಂಭಾಷಿಸುತ್ತಾ ಸಾಗುತ್ತಿದ್ದದ್ದು ದಿಗಿಲು ಹುಟ್ಟಿಸಿತ್ತು. ಏನಾದರು ಆನೆ ಎದುರಾದರೆ ನಾವಿರಿಲಿ ಮಾದ ಸಹ ಸಾಯುವುದು ಖಚಿತ ಎಂದು ಒಂದೆರಡು ಬಾರಿ ಎಚ್ಚರಿಸಿದ್ದೆವು. ಎಚ್ಚರಿಕೆ ಉಪಯೋಗಕ್ಕೆ ಬಾರದಿದ್ದಾಗ ‘‘ನಾವೆ ಮುಂದೆ ನಡೆಯುತ್ತೇವೆ, ನೀನು ನಮ್ಮನ್ನು ಹಿಂಬಾಲಿಸು’’ ಎಂದು ಮುನ್ನಡೆಯುತ್ತಿದ್ದೆವು.ಒಮ್ಮೆ, ಹೀಗೆ ಅರ್ಧ ತಾಸು ಸಾಗಿರುವಾಗ ಅಕ್ಕಪಕ್ಕದಲ್ಲೆಲ್ಲೋ ಆನೆಗಳ ಚಟುವಟಿಕೆಯ ಸದ್ದು ಕೇಳಿಬಂತು. ಆನೆಗಳಿಗೆ ನಮ್ಮ ಇರುವಿಕೆಯ ಸುಳಿವು ದೊರೆಯದಂತೆ ಬೇರೊಂದು ದಿಕ್ಕಿನಲ್ಲಿ ಸರಿದು ಬಿಡೋಣವೆಂದು ಯೋಚಿಸಿ ಮಾದನಿಗೆ ಸೂಚಿಸಲು ಹಿಂದೆ ತಿರುಗಿದೆ.ಮಾದ ಅಲ್ಲಿ ಇರಲೇ ಇಲ್ಲ! ತೀರ ಆತಂಕಕ್ಕೆ ಒಳಗಾದೆವು. ಅಷ್ಟರಲ್ಲಿ ಆನೆಗಳಿಗೆ ನಮ್ಮ ಗಾಳಿ ಸಿಕ್ಕಿ, ಘೀಳಿಡುತ್ತಾ ಮೈಮೇಲೆ ದೌಡಾಯಿಸಿ ಬಂದವು. ರೋಜಾಮುಳ್ಳುಗಳ ಪೊದೆಗಳನ್ನು ಜಿಗಿದು ಸುರಕ್ಷಿತ ಸ್ಥಳವನ್ನು ತಲುಪಿ ಮಾದನಿಗಾಗಿ ಅತ್ತಿತ್ತ ಕಣ್ಣು ಹಾಯಿಸಿದಾಗ ಮಾದ ಎಲ್ಲೂ ಕಾಣಲಿಲ್ಲ. ‘ಎಂತಹ ಬೇಜವಾಬ್ದಾರಿ ಮನುಷ್ಯ’ ಎಂದು ಬಯ್ದುಕೊಂಡು ಆನೆಗಳು ಅಲ್ಲಿಂದ ಕದಲಿದ ಬಳಿಕ. ‘‘ಮಾದ... ಏಯ್ ಮಾದ... ಎಲ್ಲಿದ್ದೀಯೊ’’ ಎಂದು ಕೂಗಿದೆವು.ಸ್ವಲ್ಪ ಹೊತ್ತಿನಲ್ಲಿ ‘ಇಲ್ಲೇ ಬನ್ಬಿಡಿ ಸಾ...’ ಎಂಬ ಧ್ವನಿ ಆಕಾಶದಿಂದ ಮೂಡಿಬಂತು. ತಲೆ ಎತ್ತಿ ನೋಡಿದೆ. ಅರವತ್ತು ಅಡಿ ಎತ್ತರದ ಮರದ ತುದಿಯ ರೆಂಬೆಯನ್ನು ಮಾದ ಗಟ್ಟಿಯಾಗಿ ತಬ್ಬಿ ಕುಳಿತಿದ್ದ.ಕಾಡಿನ ಕುರುಬರು ಹೀಗೆಯೇ; ಆಪತ್ತು ಎದುರಾಗುವ ಮುನ್ನವೇ ಎಲ್ಲಾ ಆಜ್ಞೆಗಳನ್ನು ತಿರಸ್ಕರಿಸುವ ಅವರ ಕೈಕಾಲುಗಳು ಕೆಲಸ ಆರಂಭಿಸಿ ಸುರಕ್ಷಿತ ಸ್ಥಳಕ್ಕೆ ಅವರನ್ನು ಕರೆದೊಯ್ದಿರುತ್ತವೆ. ಇದು ಕಾಡಿನಲ್ಲಿ ಅವರು ಬದುಕುಳಿಯುವ ‘ಇನ್‌ಸ್ಟಿಂಕ್ಟಿವ್ ಗುಣ’ವೆಂದು ತಿಳಿದಿದ್ದರೂ ಆ ಗಳಿಗೆಯಲ್ಲಿ ಮಾದ ವರ್ತಿಸಿದ ರೀತಿ ನಮಗೆ ಇಷ್ಟವಾಗಲಿಲ್ಲ.ಮಾದನ ಮನಸ್ಸು ಸದಾ ಎಲ್ಲೆಲ್ಲೋ ಅಲೆದಾಡುತ್ತಿತ್ತು. ಅತ್ತಿತ್ತ ಏನನ್ನೂ ನೋಡದೆ ಆನೆಕಾಡಿನಲ್ಲಿ ಸುಮ್ಮನೆ ನಡೆದು ಸಾಗುತ್ತಿದ್ದ. ಇದನ್ನು ಗಮನಿಸಿದಾಗ ಹಿಂದೆ ಎರಡು ಬಾರಿ ಕರಡಿಗಳ ಕೈಗೆ ಸಿಕ್ಕಿ ಪಾರಾಗಿ, ‘ಕರಡಿ ಮಾದ’ನೆಂದು ಹಾಡಿಯವರು ಪುನರ್‌ನಾಮಕರಣ ಮಾಡಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ.

ರಾತ್ರಿ ಮನೆ ಸೇರಿದಾಗ ಘಟನೆ ಜ್ಞಾಪಕಕ್ಕೆ ಬಂದು, ಅಡುಗೆ ಮಾಡುತ್ತಿದ್ದ ಬೊಮ್ಮನಿಗೆ ‘‘ನೀನು ಮತ್ತು ನಿಮ್ಮ ಹಾಡಿಯ ಜನರೆಲ್ಲಾ ಮಾದನನ್ನು ಮಹಾನ್ ಸಾಹಸಿ, ಧೈರ್ಯವಂತ ಎಂದೆಲ್ಲಾ ಕೊಂಡಾಡುತ್ತೀರಿ. ಆತ ತೀರ ಪುಕ್ಕಲು ಮನುಷ್ಯ’’ ಎಂದೆ.ಅಡುಗೆಯನ್ನು ಅರ್ಧಕ್ಕೆ ನಿಲ್ಲಿಸಿ ಒದ್ದೆಯ ಕೈಗಳನ್ನು ಪಂಚೆಗೆ ಒರೆಸಿಕೊಳ್ಳುತ್ತಾ ‘‘ಏಕೆ ಏನಾಯ್ತು ಸಾ...’’ ಎಂದು ಮುಂದೆ ಬಂದು ನಿಂತ. ನಡೆದ ಘಟನೆಯನ್ನೆಲ್ಲಾ ಕೇಳಿದ ಬಳಿಕ ‘‘ಪಾಪ... ಸಾ... ಆ ಮಾದ... ಬಹಳ ಒಳ್ಳೆಯವನು ಸಾ...’ ಎಂದು ಅಡುಗೆ ಮನೆಯತ್ತ ತೆರಳಿದ.

ಸ್ನಾನ ಮುಗಿಸಿ ಊಟಕ್ಕೆ ಕುಳಿತಾಗ ಅರ್ಧಕ್ಕೆ ನಿಂತಿದ್ದ ಮಾತುಕತೆಯನ್ನು ಬೊಮ್ಮ ಮುಂದುವರೆಸಿದ.‘‘ಆ... ಮಾದ ಸಾ... ಮೊದ್ಲು ಡಿಪಾರ್ಟ್‌ಮೆಂಟಲ್ಲಿ ಟೆಂಪ್ರವರಿ ವಾಚರ್‌ ಆಗಿದ್ದ ಸಾ... ಆಗ ವಿಪರೀತ ಗಂಧ ಕಳ್ಳತನ ಸಾ... ಕಾಡಲ್ಲಿ ಗಂಧದ ಮರಗಳು ಎಲ್ಲೆಲ್ಲಿ ಇವೆ, ಕಳ್ಳರು ಓಡಾಡುವ ದಾರಿ ಎಲ್ಲಾ ಕಂಪ್ಲೀಟ್ ಗೊತ್ತಿತ್ತಲ್ಲ ಸಾ... ಮಾದನಿಗೆ. ಕಳ್ಳರಿಗೆಲ್ಲಾ ಸರೀ ಬುದ್ಧಿ ಕಲ್ಸಿದ ಸಾ... ಎಂಟತ್ತು ಕಳ್ಳರನ್ನ ಮಾಲು ಸಮೇತ ಹಿಡಿದು ಜೈಲಿಗೆ ಹಾಕಿಸಿದ ಸಾ... ಆಮೇಲೆ ಕಾಡಲ್ಲಿ ಗಂಧದ ಕಳ್ಳತನವೇ ನಿಂತ್ತೋಯ್ತು.

ಕಳ್ಳತನ ಮಾಡುತ್ತಿದ್ದವರೆಲ್ಲಾ ಮಾದನಿಗೆ ಹೆದರಿ ಮಸಣಗುಡೀಲಿ, ಗೂಡ್ಲೂರಲ್ಲಿ ಕೂಲಿ ಕೆಲ್ಸಕ್ಕೆ ಸೇರ್ಕಂಡ್ರು. ಮಾದ ಅಂದ್ರೆ ಕಾಡೇ ನಡುಗ್ತಿತ್ತು. ಗಂಧದವರನ್ನ ಬಿಡಿ, ಜನ ಸೌದೆಗೂ ಕಾಡಿಗೆ ಬರುತಿರಲಿಲ್ಲ. ಆಗ ನೀವಿನ್ನು ಈ ಕಾಡಿಗೆ ಬಂರ್ದಿಲಿಲ್ಲ ಸಾ...’’ ಎಂದ.ಸ್ವಲ್ಪ ಸಮಯದ ನಂತರ ‘‘ಮಾದ ಯಾಕೆ ಆ ಕೆಲ್ಸ ಬಿಟ್ಟಿದ್ದು ಹೇಳು? ಇಷ್ಟೊತ್ತಿಗೆ ಪರ್ಮನೆಂಟಾದ್ರು ಆಗಿರ್ತಿತ್ತಲ್ವ’’ ಎಂದೆ.

‘‘ಆ ಡಿ.ಎಫ್.ಓ. ತುಂಬಾ ಮೋಸ ಸಾ... ಹತ್ತತ್ತಸಾವ್ರ ದುಡ್ಡೀಸ್ಕಂಡು ಯಾರ್ಯಾರ್ಗೋ ಕೆಲ್ಸ ಕೊಟ್ರು. ಗೌರ್ಮೆಂಟಲ್ಲಿ ದುಡ್ಡಿಲ್ಲ ಅಂತ ಟೆಂಪ್ರವರಿ ಕೆಲ್ಸದಿಂದ್ಲೂ ತೆಗೆದಾಕಿದ್ರು. ಪಾಪ... ಸಾ... ಮಾದ...’’ ಎಂದು ಬೊಮ್ಮ ಅನುಕಂಪದ ಮಾತನಾಡಿದ.ಮತ್ತೆ ಬೆಳಗಿನ ಆನೆ ಘಟನೆ ನೆನಪಿಗೆ ಬಂದು ‘‘ಅಲ್ಲ ಬೊಮ್ಮ, ನೀನು ಹೇಳೊ ಕತೇನೆ ಬೇರೆ. ಬೆಳಿಗ್ಗೆ ಆನೆಗಳಿಗೆ ಹೆದರಿ ಮಾದ ಮರದ ನೆತ್ತಿ ಏರಿದ್ದ. ನೀನು ಹೇಳಿದಂತೆ ಆತ ಧೈರ್ಯವಂತ ಅಂತ ಅನ್ಸದೇ ಇಲ್ಲ’’ ಎಂದೆ.‘‘ಅದು... ಸಾ... ಮಾದ ನಮ್ಮ ಮಾರನ ಮಗಳ್ನೇ ಮದ್ವೆ ಆಗಿದ್ದ. ಅವಳನ್ನ ಕಾಡಾನೆ ತುಳಿದು ಸಾಯಿಸ್ತು ಸಾ... ಪಾಪ ಅದುಕ್ಕೇನೋ ಆನೆ ಕಂಡ್ರೆ ಭಯ ಇರಬೌದು ಸಾ... ಮಾದಂಗೆ. ಇದೆಲ್ಲಾ ಆದ್ಮೇಲೆ ಅವನು ಒಬ್ಬನೆ ಕಾಡಲ್ಲಿ ಮಾತಾಡ್ಕಂಡು ಓಡಾಡೋಕೆ ಶುರು ಮಾಡಿದ್ದು ಸಾ...’’.

‘‘ಯಾರ್ಗಾದ್ರೂ ಹೇಳಿ ಒಂದು ಕೆಲ್ಸ ಕೊಡ್ಸಿ ಸಾ... ಮಾದನಿಗೆ’’ ಎಂದ.‘‘ಗೂಡಲೂರಿನ ವೆಳ್ಳಿಯಪ್ಪನವರ ಟೀ ತೋಟದಲ್ಲಿ ಕೆಲಸ ಸುಲಭ. ಬೇಕಾದ್ರೆ ನಾಳೆಯಿಂದಾನೆ ಹೋಗ್ಲಿ ಎಂದೆ’’.

‘‘ಸಾ... ಅವನು ಮುಂಚೆ ಟೀ ತೋಟದಲ್ಲೇ ಕೆಲ್ಸದಲ್ಲಿದ್ದ. ಸಿಂಗಾರದ ಊಟಿ ಸೇಟು ತೋಟದಲ್ಲಿ ಸಾ... ಸೇಟು ಆರು ತಿಂಗ್ಳು ಸಂಬ್ಳಾನೆ ಕೊಡ್ದೆ ಮೋಸ ಮಾಡ್ದ. ಆಗ್ಲಿಂದ ಈ ಕಾಡು ಬಿಟ್ಟು ಎಲ್ಲಿಗೂ ಹೋಗಲ್ಲಾ ಅಂತ ಶಪಥ ಮಾಡಿದ್ದಾನೆ ಸಾ...’’ ಎಂದ ಬೊಮ್ಮ.ಮಾದ ನಮ್ಮೊಂದಿಗೆ ಕೆಲಸ ಮಾಡುತ್ತಾ ನೆಮ್ಮದಿಯಿಂದ ಇದ್ದರೂ, ಆಗಿಂದಾಗ್ಗೆ ಅರಣ್ಯ ಇಲಾಖೆಯಲ್ಲಿ ವಾಚರ್ ಹುದ್ದೆ ಕೊಡಿಸಿ ಎಂದು ಪೀಡಿಸುತ್ತಿದ್ದ. ಬಹುಶಃ ಇಲಾಖೆಯ ಖಾಕಿ ಬಟ್ಟೆ, ಟೋಪಿ, ಬೂಟ್‌ಗಳಿಗೆ ಸಮಾಜದಲ್ಲಿ ದೊರಕುವ ಪ್ರಾಮುಖ್ಯತೆ – ಗೌರವಗಳಷ್ಟೇ ಮಾದನನ್ನು ಆಕರ್ಷಿಸಿರಬಹುದಾದ ಅಂಶಗಳಿರಬಹುದೆನಿಸಿತು.ಏಕೆಂದರೆ ಬಹುಕಾಲ ನಮ್ಮೊಂದಿಗಿದ್ದ ಬೊಮ್ಮ, ಚೆನ್ನ, ಕೃಷ್ಣ ಎಲ್ಲರೂ ಇಲಾಖೆಯ ನೌಕರಿ ಮನೆಯ ಬಾಗಿಲಿಗೆ ಬಂದಾಗ... ‘ಚೆಕ್ ಪೋಸ್ಟ್‌ನಲ್ಲಿ ನಿಂತ್‌ಕಂಡು ದುಡ್ಡು ವಸೂಲಿ ಮಾಡಬೇಕು ಸಾ... ಆ ರೇಂಜರ್ ಮನೇಲಿ ಪಾತ್ರೆ ಉಜ್‌ಬೇಕು’’ ಎಂದೆಲ್ಲ ಹೇಳಿ ವಾಕರಿಕೆ ವ್ಯಕ್ತಪಡಿಸಿ, ‘‘ಅದು ನಮಗೆ ಸರಿಬರಲ್ಲ’’ ಎಂದು ವಾಚರ್ ಹುದ್ದೆಯನ್ನು ತಿರಸ್ಕರಿಸಿದ್ದರು. ಆದರೆ ಮಾದ ಮಾತ್ರ ಮನೆಗೆ ಅಧಿಕಾರಿಗಳು ಬಂದಾಗಲೆಲ್ಲ ‘ನೀವ್ ಹೇಳಿದ್ರೆ ಆಗುತ್ತೆ ಸಾರ್. ಕೆಲಸ ಕೊಡಿಸಿ ಬಿಡಿ’ ಎಂದು ಪೀಡಿಸುತ್ತಿದ್ದ.ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಇದು ಸುಲಭದ ಕೆಲಸವಲ್ಲವೆಂದು ಅನೇಕ ಬಾರಿ ಮನವರಿಕೆ ಮಾಡಲು ಯತ್ನಿಸಿದರೂ ವಾಚರ್ ಆಗುವ ತನ್ನ ಮನದಾಳದ ಬಯಕೆಯನ್ನು ಬದಲಿಸಿಕೊಳ್ಳಲು ಮಾದನಿಗೆ ಸಾಧ್ಯವಾಗಲಿಲ್ಲ.

ಆದರೆ ಮಾದನ ಅದೃಷ್ಟವೋ ಏನೋ, ಮರುವರ್ಷದಲ್ಲಿ ನಮ್ಮ ಆಪ್ತರೊಬ್ಬರು ಇಲಾಖೆಯ ಮುಖ್ಯಸ್ಥರಾದರು. ಮಾದನ ವಿಷಯ ಪ್ರಸ್ತಾಪಿಸಿದಾಗ ಅವರು ಸಕರಾತ್ಮಕವಾಗಿ ಸ್ಪಂದಿಸಿ ಕಾರ್ಯರೂಪಕ್ಕೆ ತರಲು ಮುಂದಾದಾಗ ಕಡತಗಳಲ್ಲಿ ಮಲಗಿದ್ದ ನೂರಾರು ಕಾನೂನುಗಳು ಎದ್ದು ಜಾಗೃತವಾದವು.ಜಾತಿ, ವಿಳಾಸಗಳ ದೃಢೀಕರಣ ಪತ್ರ, ಹುಟ್ಟಿದ ದಿನಾಂಕ, ವಯಸ್ಸು ಇತ್ಯಾದಿಗಳೆಲ್ಲಾ ಅನಿವಾರ್ಯವಾದಾಗ ಮಾದನ ಬಹುದಿನದ ಕನಸು ನನಸಾಗುವುದಿಲ್ಲವೆಂದು ನಿರಾಶೆಯಾಯಿತು.ವಯಸ್ಸನ್ನು ಅರಿಯಲು ‘‘ಮಾದ ನೀನು ಹುಟ್ಟಿದ್ದು ಯಾವಾಗ’’ ಎಂದು ವಿಚಾರಿಸಿದೆ.

‘‘ಕ್ಯಾತನ ಅಣ್ಣ, ನಾನು ಜೊತೆಯವರೇ ಸಾ...’’

‘‘ಸರಿ ಮಾದ, ನೀನು ಹುಟ್ಟಿದ್ದು ಯಾವಾಗ ಅಂತ?’’

‘‘ಉಗಾದಿ ಹಬ್ಬಕ್ಕೆ ಮುಂಚೆ ಇರಬೇಕು’’.

‘‘ನಿನಗೀಗ ಎಷ್ಟು ವರ್ಷ ಮಾದ...’’‘‘ನನಗೆ ಸಾರ್...’’ ಎಂದು ಬೆರಳುಗಳನ್ನು ಮಡಚಿ ಎಣಿಸುತ್ತಾ ಸರಿಯಾಗಿ ಲೆಕ್ಕಮಾಡಿದವನಂತೆ ‘‘ಒಂದು ಮೂವತ್ತಿರಬಹುದು’’ ಎಂದ.

‘‘ಮಾದ ಮೂವತ್ತಕ್ಕಿಂತ ಹೆಚ್ಚಿರಬಹುದೇನೋ...?’’

‘‘ಇರಬಹುದು ಸಾರ್, ಒಂದು ನಲ್ವತ್ ಐವತ್ ಇರಬೇಕು’’.

‘‘ಖಂಡಿತ ನಿನಗೆ ಅಷ್ಟು ವಯಸ್ಸಾಗಿಲ್ಲ ಮಾದ...’’

‘‘ಹೌದಾ ಸಾರ್... ಅಂಗಿದ್ರೆ ಒಂದಿಪ್ಪತ್ ಅಂತ ಇಟ್ಟಕಳಿ ಸಾರ್...’’ ಎಂದ.ಮಾದ ಶಾಲೆಗೆ ಹೋಗದಿದ್ದದ್ದು, ಅವರಲ್ಲಿ ಜಾತಕ ಬರೆಸುವ ಪದ್ದತಿ ಇಲ್ಲದಿದ್ದದ್ದು ಅವನ ನೆರವಿಗೆ ಬಂತು. ಸರ್ಕಾರಿ ವಯೋಮಿತಗನುಗುಣವಾಗಿ ಜನ್ಮದಿನ ಬರೆದು ಅಧಿಕಾರಿಗಳು ಮಾದನಿಗೆ ನೆರವಾದರು. ವಾಚರ್ ಹುದ್ದೆಗಿಂತ ಇಲಾಖೆಯ ಸಮವಸ್ತ್ರಗಳು ಮಾದನ ಹಿರಿಮೆಯನ್ನು ಹೆಚ್ಚಿಸಿದವು. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಸಮವಸ್ತ್ರ ಕಳಚದೆ ಕಾಡಿನ ಮೂಲೆ ಮೂಲೆಗಳಲ್ಲಿ ಕಳ್ಳರಿಗೆ ಹುಡುಕಾಟ ನಡೆಸುತ್ತಾ ಒಪ್ಪಿಸಿದ ಕೆಲಸಕ್ಕಿಂತ ಹೆಚ್ಚಾಗಿ ದುಡಿಯುತ್ತಿದ್ದ ವರದಿಗಳು ಬರುತ್ತಿದ್ದವು.ಕೆಲಸಕ್ಕೆ ಸೇರಿದ ಮೂರ್ನಾಲ್ಕು ತಿಂಗಳ ಬಳಿಕ ಖಾಕಿ ಧರಿಸಿದ್ದ ಮಾದ ವಿದೇಶಿಯಂತೆ ಕಾಣುವ ಬಾಲಕನೊಬ್ಬನನ್ನು ಮನೆಯ ಬಳಿ ಕರೆತಂದ. ಗೆಸ್ಟ್ ಹೌಸ್‌ನಲ್ಲಿ ತಂಗಿರುವ ವಿದೇಶಿ ಪ್ರವಾಸಿಗರು ಬಾಲಕನನ್ನು ಕಾಡಿನಲ್ಲಿ ಅಲೆದಾಡಲು ಮಾದನೊಂದಿಗೆ ಕಳುಹಿಸಿರಬಹುದೆಂದು ಆ ಕ್ಷಣದಲ್ಲಿ ಭಾವಿಸಿದೆ.

ಹತ್ತಿರ ಬಂದ ಮಾದ ಕಾಲುಗಳನ್ನು ಜೋಡಿಸಿ ಸೆಲ್ಯೂಟ್ ಹೊಡೆದ. ಅದು ಆತನನ್ನು ಆವರಿಸಿಕೊಂಡ ಹೊಸ ಸಂಸ್ಕೃತಿ. ‘‘ಏನು ಮಾದ, ಕೆಲಸ ಹೇಗಿದೆ?’’ ಎಂದೆ.‘‘ಸಾರ್... ಇವನು ನನ್ನ ಮಗ. ಸುಮ್ಮನೆ ಮನೆಯಲ್ಲಿ ಕಾಲಕಳಿತನೆ. ಎಲ್ಲಾದರು ಕೆಲಸ ಕೊಡ್ಸಿ ಬಿಡಿ’’ ಎಂದು  ಬಾಲಕನತ್ತ ಮುಖಮಾಡಿದ.

ಹದಿವಯಸ್ಸಿನ ಆ ಬಾಲಕನಿಗೆ ಮಾದನ ಮಗನೆಂದು ದೃಢೀಕರಿಸುವ ಯಾವ ಸಾಮ್ಯತೆಗಳೂ ಇರಲಿಲ್ಲ. ಕಾಶ್ಮೀರಿ ಸೇಬಿನಂತಹ ವರ್ಣ.

ಸ್ಕ್ಯಾಂಡಿನೇವಿಯನ್ ಪ್ರದೇಶದ ಜನರಂತೆ ಅಗಲವಾದ ನೀಲಿ ಕಣ್ಣುಗಳು. ಅಚ್ಚರಿಯಾಯ್ತು. ಮುದುಮಲೈ, ನಾಗರಹೊಳೆ, ಬಂಡೀಪುರದಲ್ಲಿ ಅನೇಕ ಕಾಡು ಕುರುಬರನ್ನು ಕಂಡಿದ್ದರೂ ಮಾದನ ಮಗನಂತೆ ಹೊಳೆಯುವ ಆದಿವಾಸಿಯರನ್ನು ನಾವೆಂದೂ ನೋಡಿರಲಿಲ್ಲ.‘‘ಈ ಹುಡುಗನನ್ನು ಶಾಲೆಗೆ ಸೇರಿಸಬೇಕು ಮಾದ. ಕೆಲಸಕ್ಕೆ ಹಾಕಬೇಡ. ನಿನಗೆ ಹೇಗೋ ಒಂದು ಕೆಲಸ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅದ್ಯಾವುದು ಸಾಧ್ಯವಿಲ್ಲ’’ ಎಂದು ತಿಳಿಹೇಳಿದಾಗ ತಲೆಯಾಡಿಸುತ್ತಾ ಮಗನನ್ನು ಕರೆದುಕೊಂಡು ವಾಪಸಾದ.ಮರುದಿನ ಮುಂಜಾನೆಯಿಂದ ಆರಂಭಗೊಂಡ ಮಳೆ ಗರಗಸದಂತೆ ಉಜ್ಜುತ್ತಲೇ ಇತ್ತು. ಇಂದು ಕಾಡಿಗೆ ಹೋಗುವುದು ಬೇಡ ಎಂದು ಮನೆಯಲ್ಲೇ ಕುಳಿತಿರುವಾಗ ಮಾದನ ಮಗ ನೆನಪಿಗೆ ಬಂದ. ಕಾಫಿ ಹಿಡಿದು ಬಂದ ಬೊಮ್ಮನಿಗೆ ‘‘ಆ ಮಾದನ ಮಗನನ್ನು ನೋಡಿದ್ದೀಯ’’ ಎಂದೆ.‘‘ಆ ಕರಡಿ ಮಾದನ ಮಗನ ಸಾ... ಆ ದೊರೆಮಗ ಇದ್ದಂಗೆ ಬೆಳ್ಳಗೆ ಇದ್ದಾನಲ್ಲ ಅವನ ಸಾ...?’’

‘‘ಅವನೇ... ಅವನ್ಯಾರೋ ಬೊಮ್ಮ...’’

‘ಅವನು ಮಾದನ ಮಗನೇ ಸಾ... ಅಂದ್ರೆ ಅವನ ಮಗಾ ಅಲ್ಲಾ ಸಾ...’’

‘‘ಹಂಗದ್ರೇನೋ ಸರಿಯಾಗೇಳೊ’’.‘‘ಅದೇ ಸಾ... ರಸ್ತೇಲಿ ಕತ್ತೆ ಮೇಲೆ ಕೋಳಿ, ಮಕ್ಳು, ಸಾಮಾನೆಲ್ಲಾ ಇಟ್ಟಕಂಡು ಹೋಗಿರ್ತಿತರಲ್ಲಾ ಸಾ... ಹಿಂದಿ ಸಾ... ಅವರತ್ರ ಸಾ... ಇನ್ನೂರುಪಾಯಿಗೆ ಕೊಂಡ್ಕೊಂಡ ಸಾ...’’.

‘‘ಏನ್ನ ಬೊಮ್ಮ?!’’‘‘ಅದೇ ಸಾ... ಮಗನ್ನ... ಆಗ ಎಂಟು ತಿಂಗಳು ಮಗು ಸಾ... ಕತ್ತೆಯವ್ರು ಕಾರ್ಗುಡೀಲಿ ಎರಡು ದಿನ ತಂಗಿದ್ರಲ್ಲ ಸಾ... ಮಾದನಿಗೆ ಮಕ್ಕಳಿರಲಿಲ್ವಲ್ಲ ಸಾ... ಅದಿಕ್ಕೆ ಕೊಂಡ್ಕೊಂಡ ಸಾ...’’.‘‘ಅವನ್ನ ಕಂಡ್ರೆ. ಮಾದನಿಗೆ ಬಹಳಾ ಪ್ರೀತಿ ಸಾ... ಆದ್ರೆ ಆ ಹುಡುಗ ಓದ್ಲಿಲ್ಲ ಸಾ... ನಾಲ್ಕನೆ ಕ್ಲಾಸಿಗೆ ಸ್ಕೂಲ್ ಬಿಟ್ಟು, ಮಾದನ ಹಿಂದೆ ಸುತ್ಕೊಂಡು ಕಾಲ ಕಳಿತಾನೆ ಸಾ... ಪಾಪ ತುಂಬಾ ಕಷ್ಟ ಸಾ...’’ ಎಂದು ಅಡುಗೆ ಕೆಲಸಕ್ಕೆ ಮರಳಿದ.ಇದು ನಂಬಲಸಾದ್ಯವಾದರೂ ಅತಿ ಸೂಕ್ಷ್ಮವಾದ ವಿಷಯವಾದ್ದರಿಂದ ನಾನೆಂದು ಈ ಕುರಿತು ಮಾದನ ಬಳಿ ಕೇಳಿರಲಿಲ್ಲ. ಜೊತೆಗೆ ವರ್ಗಾವಣೆಗೊಂಡು ಕಾಡಿನ ಮತ್ತೊಂದು ಮೂಲೆಗೆ ತೆರಳಿದ್ದರಿಂದ ನಂತರದ ದಿನಗಳಲ್ಲಿ ಮಾದನ ಸಂಪರ್ಕವೇ ಇಲ್ಲವಾಯಿತು.ಕೆಲವು ವರ್ಷಗಳ ಬಳಿಕ ನಾವು ಬಂಡೀಪುರಕ್ಕೆ ಬಂದು ನೆಲೆಸಿದೆವು. ಈ ಮನೆ ಸಹ ಮುಖ್ಯರಸ್ತೆಗಳ ಸಂಪರ್ಕವಿಲ್ಲದೆ ಕಾಡಿನ ನಡುವೆ ಇದ್ದುದ್ದರಿಂದ ಅಪರಿಚಿತರ್‍್ಯಾರೂ ಅಲ್ಲಿಗೆ ಆಗಮಿಸುತ್ತಿರಲಿಲ್ಲ.ಆ ಮುಂಜಾನೆ ಪುಸ್ತಕ ಓದುತ್ತಾ ಕುಳಿತಿರುವಾಗ ಮನೆಯಂಗಳಕ್ಕೆ ಜೀಪ್ ಬಂದ ಸದ್ದಾಯಿತು. ಕಿಟಿಕಿಯ ಗಾಜಿನಿಂದ ಇಣುಕಿದಾಗ ಖಾಕಿ ಸಮವಸ್ತ್ರ ಧರಿಸಿದ್ದ ಮಾದ ಜೀಪಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ.

‘‘ಎಷ್ಟು ವರ್ಷ ಆಯ್ತೋ ಮಾದ... ಏನ್ ಸಮಾಚಾರ’’ ಎಂದೆ.ಜೀಪಿನಿಂದಿಳಿದು ನಡುಸೀಟಿನಲ್ಲಿ ಕುಳಿತಿದ್ದ ಹೆಂಗಸನತ್ತ ಕೈತೋರಿ, ‘‘ಇವರು ನನ್ನ ಹೊಸ ಹೆಂಗಸರು ಸಾ...’’ ಎಂದು ಪರಿಚಯಿಸಿದ.

‘‘ಏನೋ... ಬಾಡಿಗೆ ಜೀಪ್ ಮಾಡ್ಕೊಂಡು ಸುತ್ತುತ್ತಾ ಇದ್ದೀಯಲ್ಲ’’ ಎಂದೆ.‘‘ಬೆಟ್ಟಕ್ಕೆ ಬಂದಿದ್ದೆ ಸಾರ್...’’ ಎಂದು ಸುಮ್ಮನಾದ. ಆಗಲೆ ಈ ಹೊಸ ಹೆಂಗಸು ಕಾಡು ಕುರುಬರವಳಲ್ಲ ಅನಿಸಿತು. ಯಾವುದೊ ಊರಿನವಳಾದ ಈಕೆ ಪೂಜೆ ಪುನಸ್ಕಾರಗಳಿಗೆ ಮಾದನನ್ನು ಪೀಡಿಸಿ ಪುಣ್ಯ ಕ್ಷೇತ್ರಗಳ ಪ್ರದಕ್ಷಿಣೆ ಹಾಕಿಸುತ್ತಿರಬಹುದೆನಿಸಿತು.ಕಾಡಿನಲ್ಲಿ ಕುಳಿತ ಕಲ್ಲಿಗೆ ಎರಡು ಅಡಿ ಎತ್ತರದ ಮಣ್ಣಿನ ಗೋಡೆ ಕಟ್ಟಿ, ಬಿಸಿಲು ಬೀಳದಂತೆ ಸೊಪ್ಪಿನ ಚಾವಡಿ ಹಾಕಿ, ವರ್ಷಕ್ಕೊಮ್ಮೆ ತಮಟೆ ಬಾರಿಸುವುದಷ್ಟೆ ಇವರ ಸಂಪ್ರದಾಯ. ದೇಗುಲಗಳಿಗೆ ಹೋಗುವುದಾಗಲಿ, ಅರ್ಚನೆ ಮಾಡಿಸುವುದಾಗಲಿ, ತಲೆ ಬೋಳಿಸಿಕೊಳ್ಳುವುದಾಗಲಿ ಇವರ ಸಂಸ್ಕೃತಿಯಲ್ಲಿಲ್ಲ. ಬೆಟ್ಟದ ದೇವರ ದರ್ಶನವೆಲ್ಲ ಈ ಹೆಂಗಸಿನ ಪ್ರಭಾವ ಇರಬೇಕೆಂದುಕೊಂಡೆ.‘‘ಮಾದ ಅದೇನೋ ಇದ್ದಕ್ಕಿದ್ದಂತೆ ಬೆಟ್ಟಕ್ಕೆ’’ ಎಂದು ನನ್ನ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸಿದೆ.

‘‘ಬಳ್ಳಿ ಹುಡುಕ್ಕಂಡ್ ಬಂದೆ ಸಾರ್...’’

‘‘ಯಾವ ಬಳ್ಳಿ ಮಾದ?’’

‘‘ಬೆಟ್ಟದಲ್ಲಿ ಬಂಡೆಗಳಿಗೆ ಅಪ್ಪಿಕೊಂಡು ಹಬ್ಬಿರುತ್ತವಲ್ಲ... ನೀವು ನೋಡಿರ್ತೀರಿ ಸಾರ್...’’ಅಚ್ಚರಿ ಎನಿಸಿತು, ವಿನಾಶದಂಚಿನ ಜೀವಿಗಳನ್ನು ಹುಡುಕಿಕೊಂಡು ವಿಜ್ಞಾನಿಗಳು ಅಲೆದಾಡುವುದನ್ನು ಕಂಡಿದ್ದೇನೆ ವಿನಾ ಸ್ವಂತ ಹಣದಲ್ಲಿ ಬಾಡಿಗೆ ಜೀಪ್ ಮಾಡಿಕೊಂಡು ಕಣ್ಮರೆಯಾಗಿರುವ ಬಳ್ಳಿಯ ಅನ್ವೇಷಣೆಯಲ್ಲಿ ತೊಡಗಿರುವ ಕಾಡುಕುರುಬರನ್ನು ನಾನು ನೋಡಿರಲಿಲ್ಲ.

‘‘ಮಾದ ಆ ಬಳ್ಳಿ ಕಟ್‌ಕಂಡ್ ನಿನ್ಗೇನ್ ಆಗ್ಬೇಕು’’ ಎಂದೆ.ತುಸು ಹೊತ್ತು ಏನೋ ಯೋಚಿಸುತ್ತಾ ‘‘ಸಾರ್... ನನ್ ಮಗನ್‌ನೇನಾದ್ರು ನೋಡುದ್ರಾ ಸಾರ್...’’ ಎಂದ.

‘‘ಇಲ್‌ವಲ್ಲ ಮಾದ... ಏನಾಯ್ತು...’’‘‘ಮೂರ್‌ನಾಲ್ಕ್ ತಿಂಗಳಾಯ್ತು ಸಾರ್... ಕಾಣ್ತನೇ ಇಲ್ಲ... ಎಲ್ಲಿದನೆ ಅಂತ ಗೊತ್ತು ಸಾರ್... ಹುಡುಕೇ ಹುಡುಕ್‌ತಿನಿ... ಬಿಡಲ್ಲಾ ಸಾರ್’’ಎಂದು ಮೌನವಾದ.ಕಾಡು ಕುರುಬರ ಮನೋಭಾವ ಬಲ್ಲ ನನಗೆ ಸಿಟ್ಟು ಬಂತು. ‘‘ಮಾದ, ನಿನಗೆ ಬುದ್ಧಿ ಗಿದ್ದಿ ಇದೆಯಾ. ಮಗ ಎಲ್ಲಿರಬಹುದು ಅಂತ ಸರಿಯಾಗಿ ಹುಡುಕೋದ್ ಬಿಟ್ಟು ಬೆಟ್ಟ, ಗಿಟ್ಟ, ಬಳ್ಳಿ ಅಂತ ಬಾಡಿಗೆ ಜೀಪ್‌ನಲಿ ತಿರುಗ್ತಾ ಇದ್ದೀಯಲ್ಲ...’’ ಎಂದು ರೇಗಿದೆ.‘‘ಅದಕ್ಕೇ ಅಲ್ವಾ ಸಾರ್ ಬಳ್ಳಿ ಹುಡುಕ್‌ತಿರೋದು. ಒಂದ್ಸಲ ಈ ಬೆಟ್ಟದಲ್ಲಿ ನೋಡಿದ್ದೆ. ಆ ಬಳ್ಳಿ ಎಲ್ಲಿ ಹುಡ್ಕಿದ್ರೂ ಈಗ ಕಾಣಿಸ್ತನೆ ಇಲ್ಲ ಸಾ...’’

‘ಈ ಬಂಡೀಪುರದಲ್ಲಿ ಇದ್ದಾರಲ್ಲ ನಮ್ಮವರು, ಅವರಿಗೆಲ್ಲಾ ಕೇಳ್ದೆ... ಯಾರೂ ನೋಡೇ ಇಲ್ಲ ಅಂತರೆ. ಅವರಿಗೆ ಕಾಡೇ ಗೊತ್ತಿಲ್ಲ ಸಾ... ಬಿಡಲ್ಲ ಸಾ...

ನಾನೆಂಗಾದ್ರು ಮಾಡಿ ಹುಡುಕೇ ಹುಡುಕ್ತಿನಿ’ ಎಂದು ಮುಂದುವರಿದ ಮಾದನನ್ನು ತಡೆದು:

‘‘ಮಾದ, ಬಳ್ಳಿ ಸಿಕ್ಕಿದ್ರೆ ಏನ್ ಮಾಡ್ತೀಯಾ ಹೇಳು. ಹಣ ಸಮಯಾನೆಲ್ಲ ವ್ಯರ್ಥ ಮಾಡ್ತಿದ್ದೀಯಲ್ಲ’’ ಎಂದೆ.‘‘ಆ ಬಳ್ಳಿ ಸಿಕ್ಕಿದ್ರೆ ನನ್ಮಗ ಸಿಕ್ಕದಂಗೆ ಅಲ್ವಾ ಸಾ...?’’ ಎಂದು ಯೋಚಿಸಿ ‘‘ಹೊತ್ತಾಗೋಯ್ತು ಸಾ... ಜೇನ್ಬಾರೇಲಿ ಡ್ಯೂಟಿ’’ ಎಂದು ಅವಸರದಿಂದ ಹೊರಟ.

ಅಲೆಮಾರಿ ಜನಾಂಗದ ಹುಟ್ಟು ಗುಣ ಮಾದನ ಮಗನಲ್ಲಿ ಎಚ್ಚರಗೊಂಡಿರಬಹುದು. ಬಿಡುಗಡೆಗೆ ಪ್ರೇರೇಪಿಸಬಹುದು.

ನಿತ್ಯ ಚಲಿಸುವ ತುಡಿತ ಅವನಲ್ಲಿ ಮರುಹುಟ್ಟು ಪಡೆದಿರಬಹುದು... ಮತ್ತೆ ಮಾದನ ಮಗನನ್ನು ಯಾರೂ ನೋಡಲೇ ಇಲ್ಲ. ಆದರೆ ಕಾಡು ಕುರುಬನಾದ ಮಾದ, ಕಳೆದುಹೋದ ತನ್ನ ಕಳ್ಳುಬಳ್ಳಿಗಾಗಿ ಕಾಡಿನ ಬೆಟ್ಟ, ಗುಡ್ಡ, ಕಣಿವೆಗಳಲ್ಲಿ ಅಲೆಯುತ್ತಲೇ ಇದ್ದ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry