ಕಾಂಗ್ರೆಸ್ ಸುತ್ತಲೂ ಅಸ್ಪಷ್ಟತೆಗಳ ಗೋಜಲು

7

ಕಾಂಗ್ರೆಸ್ ಸುತ್ತಲೂ ಅಸ್ಪಷ್ಟತೆಗಳ ಗೋಜಲು

ಕುಲದೀಪ ನಯ್ಯರ್
Published:
Updated:
ಕಾಂಗ್ರೆಸ್ ಸುತ್ತಲೂ ಅಸ್ಪಷ್ಟತೆಗಳ ಗೋಜಲು

ನಾನು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷ ಕೇಳಿಸಿಕೊಳ್ಳುತ್ತದೆ ಎಂಬ ನಂಬಿಕೆಯಂತೂ ನನಗಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದಿದ್ದರೆ, ಹೋರಾಡುತ್ತಲೇ ಇರಿ ಎನ್ನುತ್ತಿದ್ದೆ. ಪ್ರಸಕ್ತ ಹತ್ತು ಹಲವು ಗೊಂದಲಗಳ ನಡುವೆಯೂ ಸರ್ಕಾರ ಉಳಿದುಕೊಂಡಿದೆಯಲ್ಲಾ, ಇದು ಕುರ್ಚಿಗೆ ಅಂಟಿಕೊಂಡಿದೆ ಅಷ್ಟೇ, ಆಡಳಿತವನ್ನಂತೂ ನಡೆಸುತ್ತಿಲ್ಲ ಎಂದೆನಿಸತೊಡಗಿದೆ. ಇದೀಗ ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ಸಮಸ್ಯೆ ಈ ಪಕ್ಷಕ್ಕೆ ಹೊಸದೇನೂ ಅಲ್ಲ. ಈ ಕುರಿತು ಕಳೆದ ಮೂರು ನಾಲ್ಕು ವರ್ಷಗಳಿಂದ ವ್ಯಾಪಕವಾದ ಚರ್ಚೆ ಮತ್ತು ವಾದವಿವಾದಗಳೂ ನಡೆಯುತ್ತಲೇ ಇವೆ. ಸುಧಾರಣೆಗಳನ್ನು ಸ್ವೀಕರಿಸಬೇಕೆ, ಬೇಡವೇ ಎಂಬ ಕುರಿತು ಪಕ್ಷ ಇನ್ನೂ ಮೀನಮೇಷ ಎಣಿಸುತ್ತಲೇ ಇದೆ.ಅಧಿಕಾರ ಕಳೆದುಕೊಳ್ಳುವ ಏಕೈಕ ಭಯದಿಂದಾಗಿ ಈ ಪಕ್ಷ ಯಾವುದೇ ತೆರನಾದ ಹೊಸ ಹೆಜ್ಜೆಗಳನ್ನು ಇಡಲು ಹಿಂದುಮುಂದು ನೋಡುತ್ತಲೇ ಬಂದಿದೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಘನತೆಗೆ ಕುಂದುಂಟಾಗುತ್ತಲೇ ಇದೆ. ಜತೆಗೆ ಪ್ರಧಾನಿಯವರ ದಯನೀಯ ಸ್ಥಿತಿಯೂ ಎದ್ದು ಕಾಣುತ್ತಿದೆ.ಹೌದು, ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದಲ್ಲಿ ಸಂಖ್ಯಾಬಲವಿಲ್ಲ. ಈಚೆಗೆ ತೃಣಮೂಲ ಕಾಂಗ್ರೆಸ್‌ನ 19 ಮಂದಿ ಸಂಸದರು ಬೆಂಬಲವನ್ನು ವಾಪಸು ಪಡೆದ ಮೇಲಂತೂ ಆಡಳಿತರೂಢ ಕಾಂಗ್ರೆಸ್ ಪಕ್ಷದ ತಲೆಯ ಮೇಲೆ ಅನಿಶ್ಚಿತತೆಯ ತೂಗುಕತ್ತಿ ಅಲ್ಲಾಡುತ್ತಲೇ ಇದೆ. 536 ಮಂದಿ ಸದಸ್ಯ ಬಲದ ಲೋಕಸಭೆಯಲ್ಲಿ ಯುಪಿಎ ಬೆನ್ನಿಗೆ 254 ಮಂದಿಯಷ್ಟೇ ನಿಂತಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ 22 ಸದಸ್ಯರನ್ನು ಹೊಂದಿರುವ ಸಮಾಜವಾದಿ ಪಕ್ಷ ಅಥವಾ 21 ಮಂದಿ ಸದಸ್ಯರನ್ನು ಹೊಂದಿರುವ ಬಹುಜನ ಸಮಾಜ ಪಕ್ಷವನ್ನು ಸಂಪುಟದೊಳಗೆ ಸೆಳೆದಿಟ್ಟುಕೊಳ್ಳುವ ಆಲೋಚನೆಗಳೂ ನಡೆದಿಲ್ಲ ಎನ್ನುವಂತಿಲ್ಲ. ಈ ಮೂಲಕ ಬಹುಮತವನ್ನು ಗಟ್ಟಿ ಮಾಡಿಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.ಮುಲಾಯಂಸಿಂಗ್ ಯಾದವ್ ಅಥವಾ ಮಾಯಾವತಿಯವರನ್ನು ತಮ್ಮ ಸಮೀಪ ಸೆಳೆಯುವ ದಿಸೆಯಲ್ಲಿ ತಾವು ಏನನ್ನು ತೆರಬೇಕಾಗುತ್ತೆ ಎನ್ನುವುದು ಕಾಂಗ್ರೆಸ್ ಪಕ್ಷದವರಿಗೆ ಗೊತ್ತಿಲ್ಲದ್ದೇನಲ್ಲ. ಸರ್ಕಾರಿ ನಿಯಂತ್ರಿತ ಸಿಬಿಐ ಸಂಸ್ಥೆಯು ಈ ಸಂದರ್ಭದಲ್ಲಿ ತನ್ನೆಲ್ಲಾ ಅಸ್ತ್ರಗಳನ್ನು ಬಳಸಲೂಬಹುದು. ಈ ಇಬ್ಬರೂ ಮುಖಂಡರು ಭ್ರಷ್ಟಾಚಾರ ಮತ್ತು ಆದಾಯಕ್ಕೂ ಮೀರಿ ಅಪಾರ ಆಸ್ತಿ ಗಳಿಸಿರುವುದಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ವಿರುದ್ಧವೂ ಈ ಇಬ್ಬರು ಇಂತಹದೇ ವಿಷಯಕ್ಕೆ ಸಂಬಂಧಿಸಿದಂತೆ ಹಾರಿಕೆ ಹೇಳಿಕೆಗಳನ್ನು ನೀಡುತ್ತಿದ್ದಾರಾದರೂ, ಬಲವಾಗಿ ತಿರುಗಿ ಬಿದ್ದಿಲ್ಲ. ಆದರೆ ಡಿಎಂಕೆ ಪಕ್ಷದ 18 ಮಂದಿ ಸಂಸದರು ಕಾಂಗ್ರೆಸ್‌ನತ್ತ ಕೆಲವು ಸಲ ಸಣ್ಣಪುಟ್ಟ ಕಲ್ಲುಗಳನ್ನು ಎಸೆಯುತ್ತಿರುತ್ತಾರಾದರೂ, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲದ ಬಗ್ಗೆ ನಿಷ್ಠೆಯಿಂದಿದ್ದಾರೆ.ಆದರೆ ಉತ್ತರ ಪ್ರದೇಶದ ಮಾಯಾವತಿ, ಮುಲಾಯಂ ಬಳಗದಿಂದಲೇ ನಿಜವಾದ ಸಮಸ್ಯೆ ಎದುರಾಗುತ್ತಿರುವುದಂತು ನಿಜ. ಒಂದು ವೇಳೆ ಕಾಂಗ್ರೆಸ್ ಇವರಲ್ಲಿ ಯಾರಾದರೊಬ್ಬರ ಜತೆಗೆ ಅಥವಾ ಇಬ್ಬರ ಜತೆಗೂ ನಿಕಟ ಸಖ್ಯ ಬೆಳೆಸಿತು ಎಂದಿಟ್ಟುಕೊಳ್ಳಿ. ಜನ ಏನನ್ನುವುದಿಲ್ಲ. ಈಗಾಗಲೇ ಕಳಂಕದ ಕೊಳೆ ಅಂಟಿಕೊಂಡಿರುವ ಕಾಂಗ್ರೆಸ್‌ಗೆ ಇಂತಹ ಸಖ್ಯದಿಂದ ಅದೆಂತಹ ಲಾಭವಾಗಲು ಸಾಧ್ಯ? ಹೊಂದಾಣಿಕೆ, ರಾಜಿ ಮತ್ತು ಅಧಿಕಾರದ ಗದ್ದುಗೆಯ ನಡುವೆ ಆಯ್ಕೆ ಪ್ರಶ್ನೆ ಬಂದಾಗ ಕಾಂಗ್ರೆಸ್‌ಗೆ ಎಲ್ಲವೂ ಸಲೀಸಾಗಿಲ್ಲ. ಕಾಂಗ್ರೆಸ್ ಇನ್ನು ಅದೆಷ್ಟೇ ಯತ್ನಿಸಿದರೂ ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಹಿಂದೆ ನಡೆದಿದ್ದ ಮತದಾನದಂತಹ ಇನ್ನೊಂದು ಪರಿಸ್ಥಿತಿಯನ್ನು ಹುಟ್ಟು ಹಾಕಲು ಸಾಧ್ಯವೇ ಇಲ್ಲ. ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಎದ್ದ ಅಸಮಾಧಾನದ ಒಡಲಿನಿಂದ ಬಹಳಷ್ಟು ಗೊಂದಲಗಳು ಉದ್ಭವಿಸಿವೆ. ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳದ ನೇರ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ ವಿಚಾರದಲ್ಲಿಯೂ ಇದೀಗ ಯುಪಿಎ ತೀರಾ ಮುಜುಗರ ಅನುಭವಿಸುವಂತಾಗಿದೆ.ಸ್ಥಳೀಯ ಮಾರುಕಟ್ಟೆಯಲ್ಲಿ ಮನಬಂದಂತೆ ಬೆಲೆ ಏರಿಸುತ್ತಾ, ಇಳಿಸುತ್ತಾ, ಉಡಾಫೆಯಿಂದ ವರ್ತಿಸುವ ವರ್ತಕರಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ `ಎಫ್‌ಡಿಐ~ ನೆರವಾಗಬಹುದೇನೋ? ವಿಶೇಷವಾಗಿ ಆಹಾರ ವಸ್ತುಗಳ ಬೇಡಿಕೆ ಹೆಚ್ಚಿದಾಗ ವರ್ತಕರು ಬೆಲೆಯನ್ನೂ ಗಗನದೆತ್ತರ ಏರಿಸಿಬಿಡುತ್ತಾರಲ್ಲಾ, ಅಂತಹ ಸಂದರ್ಭಗಳಲ್ಲಿ ಎಫ್‌ಡಿಐ ಅನುಕೂಲಕರವಾಗಿಯೇ ಕಂಡರೆ ಅಚ್ಚರಿ ಏನಿಲ್ಲ. ಇವೆಲ್ಲಾ ನಿಜವೇ ಎಂಬಂತೆ ಕಾಣಬಹುದು. ಆದರೆ ಒಂದು ಅಂದಾಜಿನ ಪ್ರಕಾರ ಸುಮಾರು ಐದು ಕೋಟಿ ಚಿಲ್ಲರೆ ವ್ಯಾಪಾರಿಗಳಲ್ಲಿ ಎಲ್ಲರೂ ಅದೇ ರೀತಿ ಜನವಿರೋಧಿ ಲಾಭಬಡುಕರೆಂದೇ ಪರಿಗಣಿಸಬೇಕಿಲ್ಲವಲ್ಲ. ಹಲವರು ತಮ್ಮ ಜವಾಬ್ದಾರಿಯ ಬಗ್ಗೆ ಪ್ರಜ್ಞಾವಂತಿಕೆಯಿಂದಿರುವವರೇ ಆಗಿದ್ದಾರೆ ಎನ್ನಬಹುದಲ್ಲ. ಆದರೆ ಎಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರೂ ಸರ್ಕಾರಕ್ಕೆ ಒಂದು ನಿರ್ಧಾರ ತೆಗೆದುಕೊಳ್ಳುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟವೇ. ಇದೀಗ ಪ್ರಧಾನಿಯವರು ತೆಗೆದುಕೊಳ್ಳಲಿಚ್ಚಿಸಿರುವ ಹೆಜ್ಜೆಗಳನ್ನು `ಸುಧಾರಣೆಗಳು~ ಎಂದು ಅದೇಕೆ ಕರೆಯುತ್ತಿದ್ದಾರೊ ನನಗೆ ಅರ್ಥವಾಗುತ್ತಿಲ್ಲ. ಹಾಗಿದ್ದರೆ ಇದನ್ನು ವಿರೋಧಿಸುವವರೆಲ್ಲರೂ ಸುಧಾರಣೆಯ ವಿರೋಧಿಗಳು ಎಂದು ನಾವು ತಿಳಿದುಕೊಳ್ಳಬೇಕೇನು. ಇಂತಹ ಸಂದರ್ಭಗಳಲ್ಲಿ ನಾವು ಬಳಸುವ ಪದಗಳ ಬಗ್ಗೆಯೂ ಹೆಚ್ಚು ಜಾಗರೂಕತೆಯಿಂದಿರಬೇಕೆನಿಸುತ್ತದೆ.ಅದೇನೆ ಇರಲಿ, ಇಂತಹ ಸುಧಾರಣೆಗಳ ಬಗ್ಗೆ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡಲು ಮನಮೋಹನ್ ಸಿಂಗ್ ಅವರು ಇದೇ ಸಮಯವನ್ನು ಆಯ್ಕೆ ಮಾಡಿಕೊಂಡಿರುವುದಾದರೂ ಏಕಿರಬಹುದು ಎಂಬ ಕುರಿತು ಮಾತುಗಳು ಕೇಳಿ ಬರತೊಡಗಿವೆ. 2012ರ ಸೆಪ್ಟೆಂಬರ್ ಬದಲಿಗೆ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ 2008 ಅಥವಾ 2004ನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಏಕೆ ಎಂಬ ಜಿಜ್ಞಾಸೆಗಳೂ ಕಾಡತೊಡಗಿವೆ. ಹೌದು, ಯುಪಿಎ ಎರಡನೇ ಅವಧಿಯ ಸರ್ಕಾರದ ಅವಧಿ ಮುಗಿಯಲು ಇನ್ನು ಒಂದೂವರೆ ವರ್ಷಗಳಷ್ಟಿವೆ ಅಷ್ಟೆ!ಕಲ್ಲಿದ್ದಲು ಹಗರಣವೂ ಸೇರಿದಂತೆ ಇದೀಗ ಕೇಂದ್ರ ಸರ್ಕಾರವನ್ನು ಕಾಡುತ್ತಿರುವ ಹತ್ತು ಹಲವು ಹಗರಣ, ವಿವಾದಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಇದಾಗಿರಬಹುದೇ ಎಂಬ ಅನುಮಾನವೂ ಧುತ್ತೆಂದಿದೆ. ಆದರೆ ಇಂತಹ ಕಸರತ್ತುಗಳಿಗಿಂತ ಅಥವಾ `ಸುಧಾರಣೆ ಪ್ರಕ್ರಿಯೆ~ ಗಳಿಗಿಂತ ಆಡಳಿತದಲ್ಲಿ ಅತಿ ಹೆಚ್ಚಿನ ಪಾರದರ್ಶಕತೆ ಇರುವುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ವಿಶ್ವಾಸಮತದ ಅಗತ್ಯ ಬಿದ್ದರೆ ಸರ್ಕಾರದ ಉಳಿವಿನ ಬಗ್ಗೆ ಸಣ್ಣದೊಂದು ಅನುಮಾನವಿದೆ. ಆದರೂ ತೀರಾ ಸಣ್ಣಪುಟ್ಟ ಪಕ್ಷಗಳ ಜನಪ್ರತಿನಿಧಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಕಸರತ್ತುಗಳು ಇದ್ದೇ ಇರುತ್ತವೆ.ಮತ್ತೊಂದು ವಿಷಯವನ್ನು ನಾನು ಇಲ್ಲಿ ಒತ್ತಿ ಹೇಳುವುದೇನೆಂದರೆ, ವಿಶ್ವಾಸಾರ್ಹತೆ ಇಲ್ಲದ ಮೇಲೆ ಅಂಕಿ ಅಂಶಗಳ ಕಸರತ್ತು ನಡೆಸಿ ವಿಶ್ವಾಸಮತ ಪಡೆಯುವ ಅಗತ್ಯವೇನಿರುವುದಿಲ್ಲ. ಹಲವು ಸಚಿವರು ಅಧಿಕಾರಿಗಳ ಜತೆಗೆ ಕೈಜೋಡಿಸಿ ಹಣ ಮಾಡಿರುವ ಸಂಗತಿ ರಹಸ್ಯವೇನಲ್ಲ. ಹೀಗಾಗಿ ಇನ್ನೂ ಬಹಳಷ್ಟು ಹಗರಣಗಳು ಬೆಳಕಿಗೆ ಬರಬೇಕಾಗಿದೆ. ಇಂತಹ ಹಲವು ಪ್ರಕರಣಗಳ ವಿವರಗಳನ್ನು ಬಯಲು ಮಾಡಿದ ಮಾಧ್ಯಮದ ಕೆಲಸ ಶ್ಲಾಘನಾರ್ಹವೇ ಹೌದು. ಇಂತಹ ಹಗರಣಗಳು ಬೆಳಕಿಗೆ ಬಂದಾಗಲೆಲ್ಲಾ ತಕ್ಷಣ ಅದಕ್ಕೆ ಸ್ಪಂದಿಸುವ ಸರ್ಕಾರ ತಾನು ಸಿದ್ಧಪಡಿಸಿಟ್ಟುಕೊಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡುತ್ತದೆ. ಅದು `ಇದರಿಂದ ಸರ್ಕಾರದ ಬೊಕ್ಕಸಕ್ಕೆ ಏನೇನೂ ನಷ್ಟ ಉಂಟಾಗಿಲ್ಲ~! ಅಂತಹದೇ ಒಂದು ಹಗರಣ 2ಜಿ ತರಂಗಾಂತರ ಹಂಚಿಕೆ.ಈ ವಿಷಯದ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್ ಆಸಕ್ತಿ ತೋರಿದ್ದರಿಂದ ಹಲವು ತಲೆಗಳು ಉರುಳಿದವು. ಆಗ ಸಂಬಂಧಪಟ್ಟವರು ಎಲ್ಲವನ್ನೂ ಮುಚ್ಚಿಡುವ ಪ್ರಯತ್ನ ಮಾಡಿದರಾದರೂ, ಅದಾಗಲೇ ಅದರ ವಿವರಗಳೆಲ್ಲವೂ ಮಾಧ್ಯಮಗಳ ಮೂಲಕ ದೇಶಾದ್ಯಂತ ಜನರನ್ನು ತಲುಪಿಯಾಗಿತ್ತು.ಏಷ್ಯಾ ಖಂಡದ ಬಹುತೇಕ ದೇಶಗಳಲ್ಲಿ ಪ್ರವಾಸ ನಡೆಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಾಲ್ ತಮ್ಮ ಏಷ್ಯನ್ ಡ್ರಾಮ ಎಂಬ ಕೃತಿಯಲ್ಲಿ ಭಾರತದ ಮನೋಧರ್ಮವನ್ನು ಹೀಗೆಯೇ ಇದು ಎಂದು ಖಚಿತವಾಗಿ ಹೇಳಲಿಕ್ಕೆ ಆಗುವುದಿಲ್ಲ ಎಂದು ಬರೆದಿದ್ದಾರೆ. ಇಲ್ಲಿ ರಾಜಕೀಯವಾಗಿ ಏನೆಲ್ಲಾ ಸಾಧ್ಯವಾಗಲೂ ಬಹುದು, ಅಸಾಧ್ಯವೂ ಹೌದು. ಬಹಳ ಕಟುವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇಲ್ಲಿ ಬಹಳಷ್ಟು ವಾದವಿವಾದಗಳು ನಡೆದೇ ಇರುತ್ತವೆ. ಐವತ್ತರ ದಶಕದಲ್ಲಿ ಪಂಚವಾರ್ಷಿಕ ಯೋಜನೆಗಳ ಸಂದರ್ಭದಲ್ಲಿ ಕಂಡು ಬಂದ ವಿಭಿನ್ನ ಅಭಿಪ್ರಾಯಗಳ ಪರಿಸ್ಥಿತಿ ಇವತ್ತಿಗೂ ವಿಭಿನ್ನ ರೀತಿಯಲ್ಲಿ ಕಂಡು ಬರುತ್ತಲೇ ಇವೆ.ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆಗಳು 1990ರಿಂದಲೇ ಭಾರತದಲ್ಲಿ ಹೆಜ್ಜೆಗಳನ್ನೂರುತ್ತಾ ಬಂದಿವೆ. ಮಿಶ್ರ ಆರ್ಥಿಕ ವ್ಯವಸ್ಥೆ ಅಥವಾ ಸಮಾಜವಾದ ವ್ಯವಸ್ಥೆಯು ಈ ದೇಶಕ್ಕೆ ಹೊಂದುವುದಿಲ್ಲ ಎಂಬುದನ್ನು ಸಿಂಗ್ ಅವರ ಆರ್ಥಿಕ ಚಿಂತನೆ ಸಾಬೀತು ಪಡಿಸುತ್ತಲೇ ಬಂದಿದೆ. ಜನಸಾಮಾನ್ಯರಲ್ಲಿರುವ ಸಾಂಪ್ರದಾಯಿಕ ಮನೋಭಾವ, ಕೋಮುವಾದ ಇತ್ಯಾದಿ ಸಂಗತಿಗಳು ಅಂತಹ ವ್ಯವಸ್ಥೆಗಳು ಕಾಲೂರುವುದಕ್ಕೆ ಎಡೆಕೊಡುವಂತಹದ್ದಲ್ಲ. ಇವುಗಳೆಲ್ಲದರ ನಡುವೆಯೂ ಎಲ್ಲವನ್ನೂ ಒಳಗೊಂಡಂತೆ ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಸಿಂಗ್ ಆರ್ಥಿಕ ಸುಧಾರಣೆಗಳು ಯಶಃ ಪಡೆಯಲೆಂದು ಹಾರೈಸುವವರಲ್ಲಿ ನಾನೂ ಒಬ್ಬ. ಆದರೆ ಒಂದೆಡೆ ಭ್ರಷ್ಟಾಚಾರ ಇನ್ನೊಂದು ಕಡೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಇರುವ ನೂರೆಂಟು ಅಡ್ಡಿ ಆತಂಕಗಳು ಮುಕ್ತ ಆರ್ಥಿಕತೆಗೆ ದೊಡ್ಡ ಸವಾಲೇ ಆಗಿದೆ. ಇವುಗಳ ನಡುವೆ ನಾನು ಒಂದಿಷ್ಟು ಎಡ ಚಿಂತನೆಯ ಒಲವಿರಿಸಿಕೊಂಡಿರುವವನಾದರೂ, ಅಂತಿಮದಲ್ಲಿ ವಾಸ್ತವ ಸಂಗತಿಗಳೇ ಈ ನೆಲದಲ್ಲಿ ನಿರ್ಣಾಯಕವಾಗುತ್ತವೆ ಎಂಬುದೂ ನನಗೆ ಗೊತ್ತಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry