ಕಾಂತಾವರ ಹಚ್ಚಿದ ಕನ್ನಡದ ದೀಪ

7

ಕಾಂತಾವರ ಹಚ್ಚಿದ ಕನ್ನಡದ ದೀಪ

Published:
Updated:
ಕಾಂತಾವರ ಹಚ್ಚಿದ ಕನ್ನಡದ ದೀಪ

ಅದೊಂದು ಚಿಕ್ಕ ಕುಗ್ರಾಮ. ಅಲ್ಲೊಂದು ಆಯುರ್ವೇದ ವೈದ್ಯಾಧಿಕಾರಿ ಹುದ್ದೆಗೆ ಸಂದರ್ಶನ. 29 ಮಂದಿ ಅಭ್ಯರ್ಥಿಗಳು ಬಂದಿದ್ದರು. ತಾಲ್ಲೂಕು ಬೋರ್ಡಿನ ಸದಸ್ಯರು ಸಂದರ್ಶನಕ್ಕೆ ಕುಳಿತಿದ್ದರು. ಅವರಲ್ಲಿ ಒಬ್ಬ ಅಭ್ಯರ್ಥಿಯ ಕಥೆ ಕೇಳಿ ಉಳಿದ 28 ಮಂದಿಯನ್ನು ಬಿಟ್ಟು ಆತನನ್ನೇ ಆಯ್ಕೆ ಮಾಡಿದರು. ಆತನಿಗೆ ಆಗ 21 ವರ್ಷ. ತಂದೆ ತಾಯಿ ಇರಲಿಲ್ಲ.ಸೋದರ ಮಾವನ ಮನೆಯಲ್ಲಿ ಇದ್ದು ಓದಿದ್ದ. ಮಠದಲ್ಲಿ ಉಚಿತ ಊಟ ಸಿಗುತ್ತದೆ ಎಂದು ಉಡುಪಿಯ ಎಸ್.ಡಿ.ಎಂ (ಈಗಿನ) ಆಯುರ್ವೇದ ಕಾಲೇಜಿನಲ್ಲಿ ಕಲಿತು ಪದವಿ ಗಳಿಸಿದ್ದ. ಅಂದು ಆಯ್ಕೆಯಾಗಿದ್ದು ಆ ಯುವಕನ ಅದೃಷ್ಟ ಎನ್ನಬೇಕೋ ಊರಿನ ಅದೃಷ್ಟ ಎನ್ನಬೇಕೋ ಗೊತ್ತಿಲ್ಲ. ಎರಡೂ ಇರಬಹುದು. ಆಯ್ಕೆಯಾದ ಯುವಕನ ಹೆಸರು ಡಾ.ನಾ.ಮೊಗಸಾಲೆ. ಆತನನ್ನು ಆಯ್ಕೆ ಮಾಡಿದ ಊರಿನ ಹೆಸರು ಕಾಂತಾವರ. ಕರ್ನಾಟಕದ ಮೂಲೆ ಮೂಲೆಯಲ್ಲಿ ಈ ಎರಡೂ ಹೆಸರು ಈಗ ಜನಜನಿತ. ಯೋಗಾಯೋಗ ಎಂದರೆ ಇದೇ ಇರಬೇಕು.ಮೊಗಸಾಲೆಯವರು ಕಾಂತಾವರದಲ್ಲಿ ಕೆಲಸಕ್ಕೆ ಸೇರಿದ್ದು 1965ರ ನವೆಂಬರ್1ರಂದು. ರಾಜ್ಯೋತ್ಸವದ ದಿನ. ಅದೂ ಒಂದು ಯೋಗಾಯೋಗ. ಕನ್ನಡಕ್ಕೆ ಇಂಥ ಅನೇಕ ಭಾಗ್ಯಗಳು ಒದಗಿ ಬಂದಿವೆ. ಮೊನ್ನೆ ಕಾಂತಾವರಕ್ಕೆ ಹೋಗಿ ಬಂದ ಮೇಲೆ ಮೊಗಸಾಲೆ ಆ ಊರಿನಲ್ಲಿ ಕೆಲಸಕ್ಕೆ ಸೇರಿದ್ದು ಕನ್ನಡದ ಅಂಥ ಇನ್ನೊಂದು ಭಾಗ್ಯ ಎಂದು ನನಗೆ ಅನಿಸಿತು.ಮೂಡುಬಿದರೆ-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳುವಾಯಿ ಎಂಬ ಪುಟ್ಟಪೇಟೆಯಲ್ಲಿ ಇಳಿದು ದೂರದ ಪಡುಬಿದ್ರೆಗೆ ಬೆಳ್ಮಣ್ಣು ಮೂಲಕ ಹಾದು ಹೋಗುವ ರಸ್ತೆಯಲ್ಲಿ ಐದು ಕಿಲೋಮೀಟರ್ ಮುಂದೆ ಬಂದರೆ ಮೊದಲು ಬಯಲು, ನಂತರ ಏರು, ಮತ್ತೆ ಕಾಡು. ಹಸಿರು ಹೊದ್ದು ನಿಂತ ಮುಖ್ಯ ರಸ್ತೆಯಿಂದ ತೀರಾ ಆಳವಾದ ಕಂದಕದಲ್ಲಿ ಇದೆ ಎನ್ನುವಂಥ ಕಾಂತಾವರದ ಮುಖ್ಯರಸ್ತೆಯಲ್ಲಿ ಪುರಾತನವಾದ ವಿಶಾಲ ಕಾಂತೇಶ್ವರ ದೇವಸ್ಥಾನ ಇದೆ. ದೇವಸ್ಥಾನದ ರಥಬೀದಿಯಲ್ಲಿಯೇ ಕರ್ನಾಟಕದಾದ್ಯಂತ ಹೆಸರು ಮಾಡಿದ ಕಾಂತಾವರ ಕನ್ನಡ ಸಂಘದ ಭವ್ಯ ಕಟ್ಟಡ ಇದೆ.ಬಾಗಿಲಲ್ಲೇ ಕಾಯುತ್ತ ನಿಂತಿದ್ದ ಮೊಗಸಾಲೆಯವರು ಒಳಗೆ ಕರೆದುಕೊಂಡು ಹೋಗಿ ಕಳೆದ ಮೂವತ್ತೈದು ವರ್ಷಗಳಲ್ಲಿ ಕನ್ನಡ ಸಂಘ ನಡೆದು ಬಂದ ದಾರಿಯನ್ನು ಹೇಳುತ್ತ ಇದ್ದರೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎನಿಸಿತು. ಒಂದು ಸಂಘ ಹೇಗೆಲ್ಲ ಬೆಳೆಯಬಹುದು ಎಂದೂ ಅನಿಸಿತು.ಮೊಗಸಾಲೆ ಶುದ್ಧ ಕನ್ನಡ ಜಾಯಮಾನದ ಮನುಷ್ಯ. ಅವರು ಕಾಂತಾವರಕ್ಕೆ ಬಂದಾಗ ಆ ಊರಿನ ಜನಸಂಖ್ಯೆ ಎರಡು ಸಾವಿರ ಇತ್ತು. ಅದರಲ್ಲಿ ಓದುಬಲ್ಲವರ ಸಂಖ್ಯೆ ಇನ್ನೂ ಕಡಿಮೆ. ಮೊಗಸಾಲೆಯವರ ಒಳಗೆ ಒಬ್ಬ ಲೇಖಕ ಇದ್ದ. ಆತನನ್ನು ಉದ್ದೀಪಿಸಲು ಸುತ್ತಲೂ ಅದ್ಭುತವಾದ ಪರಿಸರವಿತ್ತು. ಆದರೆ, ಯಾರ ಒಡನಾಟವೂ ಇರಲಿಲ್ಲ. ಹತ್ತು ವರ್ಷ ಹಾಗೂ ಹೀಗೂ ಕಳೆದರು. ಇನ್ನು ಆಗದು ಎನಿಸಿತು. ಊರಿನಲ್ಲಿ ಒಂದು ಪುಟ್ಟ ಕನ್ನಡ ಸಂಘ ಕಟ್ಟಬೇಕು ಎಂದುಕೊಂಡರು.

 

ಪಕ್ಕದ ಬೇಲಾಡಿ, ಬೆಳುವಾಯಿ, ಬೋಳ, ಕೆದಿಂಜೆ (ನಂದಳಿಕೆ) (ಈ ಊರ ಹೆಸರುಗಳು ಎಷ್ಟು ಚೆಂದ ಅಲ್ಲವೇ?) ಗ್ರಾಮಗಳ ಶಾಲೆಗಳ ಜತೆಗೆ ಮನೆ ಮನೆಗೂ ಭೇಟಿ ನೀಡಿ ಸಾಹಿತ್ಯ ಚಟುವಟಿಕೆ ಆರಂಭಿಸಿದರು (1976 ಮೇ 26). ಕು.ಶಿ.ಹರಿದಾಸಭಟ್ಟರು ಉಡುಪಿ ಪರಿಸರದಲ್ಲಿ ಮಾಡಿದ ಕೆಲಸ ಮೊಗಸಾಲೆಯವರಿಗೆ ಒಂದು ಮಾದರಿಯಾಗಿ ಇತ್ತು.ಬೇಲಾಡಿ ಶಾಲೆಯಲ್ಲಿ ಕನ್ನಡ ಸಂಘದ ಉದ್ಘಾಟನೆಗೆ ಇಟ್ಟ ಪುಟ್ಟ ದೀಪ ಬೆಳಗಿದವರು ಡಾ.ಎಸ್.ವಿ.ಪರಮೇಶ್ವರಭಟ್ಟರು. ಅಂದು ಹಚ್ಚಿದ ದೀಪ ಇಂದಿನವರೆಗೂ ನಂದಾದೀಪದಂತೆ ಬೆಳಗುತ್ತಲಿದೆ. ಕಾಂತಾವರಕ್ಕೆ ಕನ್ನಡ ನಾಡಿನ ದಶದಿಕ್ಕುಗಳಿಂದ ಲೇಖಕರು, ಕಲಾವಿದರು ಬಂದು ಹೋಗಿದ್ದಾರೆ.ಆರಂಭದಲ್ಲಿ ಎರಡು ತಿಂಗಳಿಗೆ ಒಮ್ಮೆಯಂತೆ ಸಾಹಿತ್ಯಾರಾಧನೆಯ ಕಾರ್ಯಕ್ರಮಗಳು ನಡೆಯುತ್ತಿದ್ದುವು. ಸಾಹಿತಿ, ಕಲಾವಿದರಿಗೆ ಸನ್ಮಾನ ನಡೆಯುತ್ತಿತ್ತು. `ಕನ್ನಡವಾಣಿ~ ಮತ್ತು `ಪ್ರಸ್ತುತ~ ಎಂಬ ಎರಡು ಅನಿಯತಕಾಲಿಕೆಗಳು ಪ್ರಕಟವಾಗುತ್ತಿದ್ದುವು. ಕನ್ನಡ ಸಂಘಕ್ಕೆ ಆಶ್ರಯ ನೀಡಿದ ಊರುಗಳಲ್ಲಿ ಮುದ್ದಣನ ನಂದಳಿಕೆ (ಕೆದಿಂಜೆ)ಯೂ ಸೇರಿತ್ತು.ಮನೋರಮೆಯ ಸರಸ ಸಲ್ಲಾಪದ ಪಾಠ ಬಿಟ್ಟರೆ ಮುದ್ದಣ ಎಲ್ಲರಿಗೂ ಮರೆತೇ ಹೋಗಿದ್ದ. ಅವನ ಹೆಸರನ್ನು ನೆನಪಿನಲ್ಲಿ ಇಡಲು `ಮುದ್ದಣ ಕಾವ್ಯ ಪ್ರಶಸ್ತಿ ಸ್ಪರ್ಧೆ~ಯನ್ನು ಸಂಘ ತಾನು ಆರಂಭವಾದ ಒಂದೇ ವರ್ಷದಲ್ಲಿ ಶುರು ಮಾಡಿತು. ಪ್ರಕಟಿತ ಅಥವಾ ಅಪ್ರಕಟಿತ ಕವನಗಳ ಹಸ್ತಪ್ರತಿಗಳನ್ನು ಸ್ಪರ್ಧೆಗೆ ಆಹ್ವಾನಿಸಿ ಅದನ್ನು ಪುಸ್ತಕ ರೂಪದಲ್ಲಿ ತರಲು ಧನಸಹಾಯ ಮಾಡುವುದು ಈ ಸ್ಪರ್ಧೆಯ ಉದ್ದೇಶ.ಈ ಸ್ಪರ್ಧೆಯಲ್ಲಿ ಮೊದಲು ಗೆದ್ದವರು ಬಾಗಲಕೋಟೆ ಜಿಲ್ಲೆಯ ಆನಂದ ಝುಂಜರವಾಡ. ಅಂದಿನಿಂದ ಇಂದಿನ ವರೆಗೆ ಸ್ಪರ್ಧೆ ನಡೆದುಕೊಂಡು ಬಂದಿದೆ. ಆರಂಭದಲ್ಲಿ ಕೇವಲ 200 ರೂಪಾಯಿ ಇದ್ದ ಧನ ಸಹಾಯ ಈಗ ಹತ್ತು ಸಾವಿರ ರೂಪಾಯಿಗೆ ಏರಿದೆ.ಈ ಎಲ್ಲ ಮೊತ್ತವನ್ನು ಹರಿಕೃಷ್ಣ ಪುನರೂರರು ಈಗ ಭರಿಸುತ್ತಿದ್ದಾರೆ. ಪ್ರಶಸ್ತಿ ಆರಂಭವಾದ ಹೊಸದರಲ್ಲಿ ಹಾ.ಮಾ.ನಾಯಕರು, `ಕಾವ್ಯಲೋಕಕ್ಕೆ ಈ ಪ್ರಶಸ್ತಿ ಒಂದು ಪಾಸ್‌ಪೋರ್ಟ್ ಇದ್ದಂತೆ~ ಎಂದು ಬಣ್ಣಿಸಿದ್ದರು. ಈ ಪ್ರಶಸ್ತಿ ಪಡೆದವರ ಪಟ್ಟಿ ನೋಡಿದರೆ ಅವರ ಮಾತು ಎಷ್ಟು ನಿಜವಲ್ಲವೇ ಎಂದು ಅನಿಸುತ್ತದೆ.ಸಾರ್ವಜನಿಕರ ಹಣವನ್ನು ಹೇಗೆ ನಿಯತ್ತಿನಿಂದ ಬಳಸಬೇಕು ಎಂಬುದಕ್ಕೆ ಕಾಂತಾವರ ಕನ್ನಡ ಸಂಘ ಒಂದು ದೊಡ್ಡ ಮಾದರಿ. ಸಂಘದ ಚೊಚ್ಚಲ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಹೊರತಂದ ನೆನಪಿನ ಸಂಚಿಕೆ `ಕನ್ನಡ ವಾಣಿ~ಗಾಗಿ ಸಂಗ್ರಹಿಸಿದ ಜಾಹೀರಾತು ಮೊತ್ತದ ಉಳಿಕೆಯಲ್ಲಿ `ದಕ್ಷಿಣ ಕನ್ನಡ ಕಾವ್ಯ~ ಎಂಬ ಒಂದು ಬೃಹತ್ ಸಂಪುಟವನ್ನು ಸಂಘ ಪ್ರಕಟ ಮಾಡಿತು.

 

ಸಂಘದ ಬೆಳ್ಳಿಹಬ್ಬದ ಸಮಯದಲ್ಲಿ `ದಕ್ಷಿಣ ಕನ್ನಡ ಜಿಲ್ಲೆಯ ಶತಮಾನದ ಕಾವ್ಯ~ ಎಂಬ ಇನ್ನೊಂದು ಸಂಕಲನವೂ ಪ್ರಕಟವಾಯಿತು. ಇಂಥ ಒಂದು ದಾಖಲೆಯ ಕೆಲಸ ಯಾವ ಜಿಲ್ಲೆಯಲ್ಲಿಯೂ ನಡೆದಿಲ್ಲ ಎಂಬುದು ಕಾಂತಾವರ ಕನ್ನಡ ಸಂಘದ ಹೆಗ್ಗಳಿಕೆ.ಸಂಘಕ್ಕೆ ಬೆಳ್ಳಿಹಬ್ಬದ ವಯಸ್ಸಾದರೂ ಅದಕ್ಕೆ ಒಂದು ಸ್ವಂತ ಕಟ್ಟಡವೆಂದು ಇರಲಿಲ್ಲ. ಬೇಲಾಡಿಯ ಶಾಲೆಯೇ ಅದಕ್ಕೆ ವೇದಿಕೆಯಾಗಿತ್ತು. ಊರಿನಲ್ಲಿ ಒಂದು ಕನ್ನಡ ಭವನ ಕಟ್ಟಬೇಕು ಎಂದು ಮೊಗಸಾಲೆಯವರು ಮತ್ತು ಸಂಘದ ಪದಾಧಿಕಾರಿಗಳು ಯೊಚನೆ ಮಾಡುತ್ತಿದ್ದಾಗ ಕಾಂತಾವರ ಪರಿಸರದಲ್ಲಿಯೇ ಹುಟ್ಟಿದ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಕೆ.ಬಿ.ಜಿನರಾಜ ಹೆಗ್ಡೆಯವರ ಜನ್ಮ ಶತಮಾನೋತ್ಸವ ಬಂತು. ಹೆಗ್ಡೆಯವರು ಎಲ್ಲರಿಗೂ ಮರೆತು ಹೋಗಿದ್ದರು.ಮೊಗಸಾಲೆಯವರು, ಮೂಡುಬಿದರೆ ಶಾಸಕ ಅಭಯಚಂದ್ರ ಜೈನ್ ಅವರನ್ನು ಕರೆದುಕೊಂಡು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬಳಿಗೆ ಹೋದರು. ಕನ್ನಡ ಸಂಘ ಕಟ್ಟಲು 25 ಲಕ್ಷ ರೂಪಾಯಿ ಕೊಡಿ ಎಂದರು.ಕೃಷ್ಣ ದೂಸರಾ ಮಾತನಾಡದೆ 12 ಲಕ್ಷ ರೂಪಾಯಿ ಮಂಜೂರು ಮಾಡಿದರು. ಅವರು ಯಾವಾಗಲೋ ಹೆಗ್ಡೆ ಮತ್ತು ಕೋಟ ರಾಮಕೃಷ್ಣ ಕಾರಂತ ಅವರ ಕೈ ಕೆಳಗೆ ವಕೀಲಿ ಮಾಡಿದ್ದರು!ಉಳಿದ 13 ಲಕ್ಷ ರೂಪಾಯಿಗಳನ್ನು ಕನ್ನಡ ಸಂಘ, ದಾನಿಗಳಿಂದ ಸಂಗ್ರಹಿಸಿತು. ಕಾಂತಾವರ ಬಾರಾಡಿ ಬೀಡು ಜಿನರಾಜ ಹೆಗ್ಡೆಯವರ ಮನೆ(ಬೀಡಿನ)ಯ ಹಾಗೆಯೇ ಈಗಿನ ಕನ್ನಡ ಭವನವನ್ನು ನಿರ್ಮಿಸಲಾಗಿದೆ. ಭವನದಲ್ಲಿ 150 ಜನ ಕುಳಿತುಕೊಳ್ಳಬಹುದಾದ ಪಂಪ ಮಹಾಕವಿ ಸಭಾಭವನ, ಅತಿಥಿಗಳ ವಿಶ್ರಾಂತಿ ಕೊಠಡಿ, ವಿಶಾಲವಾದ ಎರಡು ಚಾವಡಿ, ನಾಲ್ಕು ಸೂತ್ರದ ಮನೆಯೊಳಗಿರುವಂಥ `ತೊಟ್ಟಿ~, ಸಾರ್ವಜನಿಕ ಗ್ರಂಥಾಲಯ, ಕನ್ನಡ ಸಂಘದ ಕಚೇರಿ, ಒಳಗೆ ಪ್ರವೇಶ ಮಾಡಿದರೆ ಎದುರುಗೊಳ್ಳುವ ಹೆಗ್ಡೆಯವರ ಸುಂದರ ಪ್ರತಿಮೆ ಎಲ್ಲವೂ ಇವೆ. ಬೇರೆ ಯಾವ ಜಿಲ್ಲಾ ಕೇಂದ್ರದಲ್ಲೂ ಕನ್ನಡ ಸಂಘಕ್ಕೆ ಇಂಥ ಒಂದು ಕಟ್ಟಡದ ಭಾಗ್ಯ ಇದ್ದಂತೆ ಕಾಣುವುದಿಲ್ಲ.ಸಂಘಕ್ಕೆ ಮೂವತ್ತು ವರ್ಷ ತುಂಬಿದಾಗ `ನಾಡಿಗೆ ನಮಸ್ಕಾರ~ ಎಂಬ ಮಾಲಿಕೆಯೊಂದನ್ನು ಸಂಘ ಕೈಗೆತ್ತಿಕೊಂಡಿತು. ನಾಡಿಗೆ ನಾಡೇ ಬೆರಗಾಗುವಂತೆ ಸಾಧನೆ ಮಾಡಿದ ಸಾಧಕರನ್ನು ಪರಿಚಯಿಸಲು ಕನಿಷ್ಠ 52 ಪುಟಗಳ ಒಂದು ಪುಟ್ಟ ಪುಸ್ತಕ ಪ್ರಕಟಿಸಲು ಸಂಘ ಮುಂದಾಯಿತು.

 

ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ 75 ಸಾಧಕರನ್ನು ಪರಿಚಯಿಸುವ ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿವೆ.  ಪುಸ್ತಕಗಳು ಎಷ್ಟು ಅಂದವಾಗಿವೆ, ಉಪಯುಕ್ತವಾಗಿವೆ ಮತ್ತು ಜನಪ್ರಿಯವಾಗಿವೆ ಎಂಬುದನ್ನು ಅವುಗಳನ್ನು ನೋಡಿಯೇ ಮನಗಾಣಬೇಕು. `ನಾಡಿಗೆ ನಮಸ್ಕಾರ~ದ ಮುಂದುವರಿಕೆಯಾಗಿ `ನುಡಿ ನಮನ~ ಎಂಬ ತಿಂಗಳ ಕಾಯಕ್ರಮವೂ ಸಂಘದ ಆವರಣದಲ್ಲಿ ನಡೆಯುತ್ತಿದೆ.

 

ತಿಂಗಳ ಒಂದು ಭಾನುವಾರ ಒಬ್ಬ ಅತಿಥಿ ಅಲ್ಲಿಗೆ ಬರುತ್ತಾರೆ. `ನಾಡಿಗೆ ನಮಸ್ಕಾರ~ ಸರಣಿಯಲ್ಲಿ ಪ್ರಕಟವಾದ ಒಂದು ಪುಸ್ತಕದ ಪರಿಚಯ, ಆ ಅತಿಥಿಯ ಸನ್ಮಾನ, ಉಪನ್ಯಾಸ, ಜತೆಗೆ ತುಳು ನಾಡಿನ ತಿಂಡಿಯ ಸಮಾರಾಧನೆ.ಈ ಕಾರ್ಯಕ್ರಮಕ್ಕೆ ಹಣದ ಕೊರತೆಯೆಂದು ತಿಳಿದು ಮೂಡುಬಿದರೆಯ ಪಡಿವಾಳ್ ಹೋಟೆಲಿನ ಮಾಲೀಕ ಸಿ.ಕೆ.ಪಡಿವಾಳರು ವರ್ಷಕ್ಕೆ ಒಂದು ಲಕ್ಷ ರೂಪಾಯಿಯಂತೆ ದಾನ ಘೋಷಿಸಿದರು. ತಮ್ಮ ಹೋಟೆಲ್‌ನಿಂದ ತಿಂಡಿಯ ಉಚಿತ ಸರಬರಾಜನ್ನೂ ಮಾಡಿದರು.ಈಗಲೂ ಮಾಡುತ್ತಿದ್ದಾರೆ. ಒಳ್ಳೆಯ ಉದ್ದೇಶದಿಂದ ಒಂದು ಕೆಲಸವನ್ನು ಮಾಡುತ್ತ ಇದ್ದರೆ ಅದಕ್ಕೆ ವಿಘ್ನಗಳೇ ಇರುವುದಿಲ್ಲ. ಅವು ಇದ್ದರೂ ಸುಲಭವಾಗಿ ನಿವಾರಣೆ ಆಗುತ್ತವೆ ಎಂದು ಅನಿಸುತ್ತದೆ. ಸಂಘಕ್ಕೆ ತೀರಾ ಈಚೆಗೆ ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಗಿನ ಆಯುಕ್ತ ಮನು ಬಳಿಗಾರ್, `ಇಷ್ಟು ಪುಟ್ಟ ಊರಿನಲ್ಲಿ ಇಷ್ಟೆಲ್ಲ ಕೆಲಸ ಮಾಡುತ್ತಿದ್ದೀರೇನ್ರೀ. ನಿಮಗೆ ವಾರ್ಷಿಕ ಕೊಡುತ್ತಿದ್ದ ಒಂದು ಲಕ್ಷ ರೂಪಾಯಿ ಅನುದಾನವನ್ನು ಒಂದೂವರೆ ಲಕ್ಷಕ್ಕೆ ಏರಿಸಿದ್ದೇನೆ~ ಎಂದು ಅಲ್ಲಿಯೇ ಪ್ರಕಟಿಸಿದರು. ಮತ್ತು ತಾವು ಆ ಹುದ್ದೆ ಬಿಟ್ಟುಕೊಡುವುದಕ್ಕಿಂತ ಮುಂಚೆ ಆದೇಶವನ್ನೂ ಹೊರಡಿಸಿದರು. (ಈ ಸಂಗತಿಯನ್ನು ನೀವು ಬರೆಯಬೇಕು ಎಂದು ಮೊಗಸಾಲೆ ನನಗೆ ಒತ್ತಾಯಿಸಿದರು).ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತರಾದ ಸದಾನಂದ ಸುವರ್ಣ ಅವರು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಲು ಅರ್ಹರಿದ್ದೂ ಅಂಥ ಪ್ರಶಸ್ತಿಯಿಂದ ವಂಚಿತರಾದ ರಂಗಕರ್ಮಿಗಳಿಗೆ `ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ~ದ ಹೆಸರಿನಲ್ಲಿ ವಾರ್ಷಿಕ ಹತ್ತು ಸಾವಿರ ರೂಪಾಯಿಗಳ ಗೌರವ ಸಂಭಾವನೆ ಕೊಡುವ ಹೊಣೆಯನ್ನೂ ಕಾಂತಾವರ ಸಂಘದ ಹೆಗಲಿಗೇ ಹಾಕಿದ್ದಾರೆ. ಹಣವನ್ನು ಸುವರ್ಣ ಕೊಡುತ್ತಾರೆ... ನಾ.ಮೊಗಸಾಲೆಯವರು ಕಾಂತಾವರಕ್ಕೆ ಬಂದು ಕೆಲಸಕ್ಕೆ ಸೇರಿದಾಗ ಅವರಿಗೆ 95 ರೂಪಾಯಿ ಸಂಬಳವಿತ್ತು.ಅವರು ನಿವೃತ್ತರಾಗುವಾಗ ಆ ಸಂಬಳವೇನೂ ಭಾರಿ ಹೆಚ್ಚಿರಲಿಲ್ಲ. ಆದರೆ, ಅವರ ಮೂವರು ಗಂಡುಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದರೂ (ಓದಿದ್ದರಿಂದಲೇ) ಬಹಳ ಬುದ್ಧಿವಂತರಾದರು. ಇಬ್ಬರು ವಿದೇಶಕ್ಕೆ ಹೋಗಿ ನೆಲೆಸಿದರು. ತಮ್ಮ ತಂದೆ ಕಾಂತಾವರಕ್ಕೆ ಬಂದುದು ರಾಜ್ಯೋತ್ಸವದ ದಿನ.

 

ಅದರ ನೆನಪಿಗೆ ನಾ.ಮೊಗಸಾಲೆ ಪ್ರತಿಷ್ಠಾನದ ವತಿಯಿಂದ ಇಬ್ಬರಿಗೆ ತಲಾ ಐದು ಸಾವಿರ ರೂಪಾಯಿಗಳ `ಕಾಂತಾವರ ಪುರಸ್ಕಾರ~ ಕೊಡಲು ಹಣ ಇಟ್ಟರು. ಸಾಹಿತ್ಯ ಮತ್ತು ಲಲಿತ ಕಲಾ ಕ್ಷೇತ್ರದ ತಲಾ ಒಬ್ಬರಿಗೆ ಈ ಪ್ರಶಸ್ತಿ. ಕಾಂತಾವರ ಕನ್ನಡ ಸಂಘ ಮತ್ತು ಮೊಗಸಾಲೆ ಮಾಡಿದ ಕೆಲಸಗಳ ಪಟ್ಟಿಯನ್ನು ಕೊಡುತ್ತ ಹೋಗುವುದು ನನಗೆ ಇಷ್ಟವಿಲ್ಲ.

 

ಪಾಟೀಲ ಪುಟ್ಟಪ್ಪನವರು ಈ ಸಂಘಕ್ಕೆ ಭೇಟಿ ನೀಡಿದ ಸಮಯದಲ್ಲಿ, `ಕನ್ನಡ ಕಟ್ಟುವುದು ಹೇಗೆ ಎಂಬುದಕ್ಕೆ ಈ ಸಂಘ ಒಂದು ಮಾದರಿ~ ಎಂದಿದ್ದರು. ಚೆನ್ನವೀರ ಕಣವಿಯವರಿಗೆ ಅದು `ಅಯಸ್ಕಾಂತಾವರ~ವಾಗಿ ಕಂಡಿತ್ತು. ಕಾಂತಾವರಕ್ಕೆ ಹೋದರೆ ಯಾರಿಗೆ ನಮಸ್ಕಾರ ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಬಹುಶಃ ಮೊಗಸಾಲೆಯವರನ್ನು ಆಯುರ್ವೇದ ವೈದ್ಯ ಹುದ್ದೆಗೆ ನೇಮಕ ಮಾಡಿದವರಿಗೆ ಈ ನಮಸ್ಕಾರ ಸಲ್ಲಬೇಕು ಅನಿಸುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry