ಕಾಗದದಲ್ಲಷ್ಟೇ ಉಳಿದ ಕ್ರೀಡಾನೀತಿ

ಗುರುವಾರ , ಜೂಲೈ 18, 2019
26 °C

ಕಾಗದದಲ್ಲಷ್ಟೇ ಉಳಿದ ಕ್ರೀಡಾನೀತಿ

ಗೋಪಾಲ ಹೆಗಡೆ
Published:
Updated:

ನಮ್ಮ ವ್ಯವಸ್ಥೆಯಲ್ಲಿ ಬಹಳ ಜನರಿಗೆ ಒಂದು ಕೆಟ್ಟ ಚಟ ಇದೆ. ಏನೇ ಮಾಡಲು ಹೋದರೂ ಅದು ಏನು, ಹೇಗೆ, ಯಾಕೆ ಎಂದು ಯೋಚಿಸದೇ ಮೊದಲು ವಿರೋಧಿಸುವುದು. ಈ `ವಿರೋಧಿ~ಗಳಿಗೆ ತಾವು ಎಷ್ಟೋ ಸಲ ತಾವು ಯಾಕೆ ವಿರೋಧಿಸುತ್ತಿದ್ದೇವೆ ಎಂಬುದೂ ಗೊತ್ತಿರುವುದಿಲ್ಲ.

 

ಕ್ರೀಡಾ ಜಗತ್ತಿಗೆ ಭಾರತ ಹೊಸತೇನೂ ಅಲ್ಲ. ಅರವತ್ತು ವರ್ಷಗಳ ಹಿಂದೆಯೇ ಮೊಟ್ಟಮೊದಲ ಏಷ್ಯನ್ ಕ್ರೀಡೆಗಳನ್ನು ದಿಲ್ಲಿಯಲ್ಲಿ ನಡೆಸಿದ ಹಿರಿಮೆ ನಮ್ಮ ದೇಶಕ್ಕಿದೆ.ಆದರೆ ಅರವತ್ತು ವರ್ಷಗಳ ನಂತರವೂ ನಮಗೊಂದು ಪಕ್ಕಾ ಕ್ರೀಡಾ ನೀತಿ ಅಥವಾ ಯೋಜನೆ ಎಂಬುದು ಇಲ್ಲ. ಅದಕ್ಕಿಂತ ಹೆಚ್ಚಾಗಿ ಕ್ರೀಡಾ `ಸಂಸ್ಕೃತಿ~ ಆರು ದಶಕಗಳ ನಂತರವೂ ಬಾಲ್ಯಾವಸ್ಥೆಯಲ್ಲಿಯೇ ಇದೆ. ಹೀಗೆಂದು ಕ್ರೀಡೆಗೆ ಸಂಬಂಧಪಟ್ಟಂತೆ ಭಾಷಣಗಳಿಗೇನೂ ಕೊರತೆಯಾಗಿಲ್ಲ.1951ರಲ್ಲಿ ದಿಲ್ಲಿಯಲ್ಲಿ ಮೊದಲ ಏಷ್ಯನ್ ಕ್ರೀಡೆಗಳನ್ನು ನಡೆಸುವ ಆಸಕ್ತಿ ತೋರಿದ್ದವರು ಪ್ರಧಾನಿ ಜವಾಹರಲಾಲ್ ನೆಹರೂ. ಏಷ್ಯದ ರಾಷ್ಟ್ರಗಳ ಅಭಿವೃದ್ಧಿಗೆ ಕ್ರೀಡೆ ದಾರಿ ತೋರುವುದು ಎಂಬ ಅವರ ನಂಬಿಕೆಯೇ ಏಷ್ಯನ್ ಕ್ರೀಡೆಗಳ ಜ್ಯೋತಿ ಬೆಳಗಲು ಕಾರಣವಾಗಿತ್ತು. ಜ್ಯೋತಿಯೇನೋ ಬೆಳಗಿತು. ಆದರೆ ಅದು ಪ್ರಜ್ವಲಿಸಲೇ ಇಲ್ಲ.ಭಾರತ ಏಷ್ಯದಲ್ಲೇ ಪ್ರಬಲ ಕ್ರೀಡಾರಾಷ್ಟ್ರವಾಗಿ ಅಭಿವೃದ್ಧಿ ಹೊಂದಲಿಲ್ಲ. ಆದರೆ ಕ್ರೀಡೆಯ ಹೆಸರಲ್ಲಿ ವ್ಯಕ್ತಿಗಳು ಬೆಳೆದರು. ಆ ವ್ಯಕ್ತಿಗಳು ಕ್ರೀಡೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಸರ್ಕಾರದಲ್ಲಿ ಕ್ರೀಡಾ ಇಲಾಖೆ ಇದ್ದರೂ ಅದು ಕೊನೆಯ ಪುಟವಾಗಿಯೇ ಉಳಿಯಿತು. ಈ ವ್ಯವಸ್ಥೆಯಿಂದ ಹೊರಗಿದ್ದ ಕ್ರಿಕೆಟ್ ಮಾತ್ರ ವಿಜೃಂಭಿಸಿತು.ಈಗ ಮತ್ತೆ ದೇಶಕ್ಕೆ ಕ್ರೀಡಾ ಅಭಿವೃದ್ಧಿ ಯೋಜನೆ ಅಗತ್ಯ ಇದೆ ಎಂಬ ಮಾತು ಕೇಳಿಬಂದಿದೆ. ಇದಕ್ಕಾಗಿ ರಾಷ್ಟ್ರವ್ಯಾಪಿ ಚರ್ಚೆಯಾಗಬೇಕೆಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೆನ್ ಲೋಕಸಭೆಯಲ್ಲಿ ಹೇಳಿದ್ದಾರೆ. ಹಳೆಯ ಮದ್ಯವನ್ನೇ ಹೊಸ ಬಾಟಲಿಯಲ್ಲಿ ಹಾಕುವ ಯತ್ನ ಇದು ಎಂಬ ಟೀಕೆಯ ಜೊತೆ, ದೇಶದ ಹೆಚ್ಚು ಕಡಿಮೆ ಎಲ್ಲ ಕ್ರೀಡಾ ಮಂಡಳಿಗಳು ಹೊಸ ಕ್ರೀಡಾ ನೀತಿಯನ್ನು ವಿರೋಧಿಸಿವೆ.ಕ್ರೀಡಾ ಮಂಡಳಿಗಳ ಕುರ್ಚಿಗೆ ಅಂಟಿಕೊಂಡು ಕುಳಿತವರಿಗೆ ಸರ್ಕಾರದ ಹಣ ಬೇಕೇ ಹೊರತು ಯಾವ ರೀತಿಯ ಕಡಿವಾಣವೂ ಬೇಕಾಗಿಲ್ಲ. ಸರ್ವಾಧಿಕಾರಿ ಮನೋಭಾವ ಈ ಕ್ರೀಡಾ ಮಂಡಳಿಗಳ ಅಧಿಕಾರಿಗಳಲ್ಲಿ ತಾಂಡವವಾಡುತ್ತಿದೆ. ರಾಜಕೀಯ ವ್ಯವಸ್ಥೆಯ ಇನ್ನೊಂದು ಮುಖ ಇದು.`ಆಡಿದ ಮಕ್ಕಳು ಬೆಳೆಯುತ್ತವೆ~ ಎಂಬುದೇ ಕ್ರೀಡಾ ಸಂಸ್ಕೃತಿಯ ಮೂಲ ಅಂಶ. `ಮಕ್ಕಳ ಶಿಕ್ಷಣಕ್ಕೆ ಕ್ರೀಡೆಯ ಅಡಿಪಾಯ ಇದ್ದಲ್ಲಿ ಅವರೆಂದೂ ಜೀವನದ ಕಾನೂನನ್ನು ಉಲ್ಲಂಘಿಸುವುದಿಲ್ಲ~ ಎಂದು ದಾರ್ಶನಿಕ ಪ್ಲೇಟೋ ಶತಮಾನಗಳ ಹಿಂದೆ ಹೇಳಿದ್ದ ಮಾತು ಇಂದಿಗೂ ಪ್ರಸ್ತುತ. `ಪ್ರಾಚೀನ ಕಾಲದ ಕ್ರೀಡಾ ಸಂಗತಿಗಳು ಇಂದಿಗೂ ಒಂದು ಸಾಮಾಜಿಕ ಅದ್ಭುತ.ಗ್ರೀಕರು ಮನುಕುಲಕ್ಕೆ ಕೊಟ್ಟ ದೊಡ್ಡ ಸಾಂಸ್ಕೃತಿಕ ಕಾಣಿಕೆಯೇ ಕ್ರೀಡೆ. ಒಲಿಂಪಿಕ್ ಕ್ರೀಡೆಗಳನ್ನು ನಡೆಸುವ ದೇಶ ತನ್ನ ಸಾಂಸ್ಕೃತಿಕ, ಆರ್ಥಿಕ ಮೈಲಿಗಲ್ಲನ್ನು ಹಾಗೂ ನೆಲೆಗಟ್ಟನ್ನು ಜಗತ್ತಿಗೆ ತೋರಿಸುತ್ತದೆ~ ಎಂದು ಸಮಾಜ ಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ. ನಾವಿದನ್ನು ಅರ್ಥ ಮಾಡಿಕೊಂಡೇ ಇಲ್ಲ.ಜಗತ್ತಿಗೆ ಚದುರಂಗದಾಟವನ್ನು ಕಲಿಸಿದವರು ಭಾರತೀಯರೇ ಆದರೂ, ಇಂದು ದೇಶದಲ್ಲಿ ಹೆಚ್ಚು ಪ್ರಚಲಿತವಿರುವ ಆಟಗಳನ್ನೆಲ್ಲ ಹೇಳಿಕೊಟ್ಟವರು ಬ್ರಿಟಿಷರೇ. ಅವರು ನೆಟ್ಟ ಇಂಗ್ಲಿಷ್ ಮತ್ತು ಕ್ರಿಕೆಟ್ ಸಸಿಗಳು ಮಾತ್ರ ಆಳವಾಗಿ ಬೇರು ಬಿಟ್ಟವು.

 

ಈ ಬ್ರಿಟಿಷರನ್ನು ಹೊಡೆದೋಡಿಸುವ ಸ್ವಾತಂತ್ರ್ಯ ಸಂಗ್ರಾಮ ಕ್ರೀಡಾ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದು ಆಗ ಸೂಕ್ತವಾಗೇ ಇತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ಕ್ರೀಡೆಯ ಬಗ್ಗೆ ಆಸಕ್ತಿ ಚಿಗುರಲೇ ಇಲ್ಲ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂಬ ಮನೋಭಾವವೂ ಕ್ರೀಡೆಯ ಬೆಳವಣಿಗೆಗೆ ಅಡ್ಡಿಯಾಯಿತು.

 

ಶಿಕ್ಷಣ ಕ್ರಮದಲ್ಲಿ ಕ್ರೀಡೆ ಸೇರಬೇಕು ಎಂಬ ಮಾತುಗಳು ಬರೀ ಕಾಗದದ ಮೇಲಷ್ಟೇ ಉಳಿದುಕೊಂಡವು. ಈಗ ಮತ್ತೆ `ಸಮಗ್ರ ಕ್ರೀಡಾ ನೀತಿ~ಯೊಂದು ಜಾರಿಗೆ ಬರಬೇಕೆಂದು ಸರ್ಕಾರ ಬಯಸುತ್ತಿದೆ. ಅದಕ್ಕಾಗಿ ಕರಡುಪತ್ರ ಸಿದ್ಧಪಡಿಸಿದೆ.ಅದರಲ್ಲಿರುವ ಕೆಲವು ಅಂಶಗಳು ವಿವಿಧ ಕ್ರೀಡಾ ಮಂಡಳಿಗಳ ಪದಾಧಿಕಾರಿಗಳಿಗೆ ಕಿರಿಕಿರಿಯುಂಟುಮಾಡಿವೆ. ತುಂಬಿ ತುಳುಕುವ ಖಜಾನೆ ಹೊಂದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಂತೂ ಈ ಕ್ರೀಡಾ ನೀತಿ ಬೇಡವೇ ಬೇಡ ಎಂದು ಹೇಳಿದೆ.ಖಾಲಿ ಖಜಾನೆಯೊಂದಿಗೆ ಯಾವಾಗಲೂ ಸರ್ಕಾರದ ಮುಂದೆ ಭಿಕ್ಷಾ ಪಾತ್ರೆ ಹಿಡಿಯುವ ಕ್ರೀಡಾ ಮಂಡಳಿಗಳೂ ವಿರೋಧ ವ್ಯಕ್ತಪಡಿಸಿವೆ.ಯಾವುದೇ ಮಂಡಳಿ ಅಥವಾ ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬುದು ಸರಿ. ಯಾಕೆಂದರೆ ಅಲ್ಲಿ ರಾಜಕೀಯ ಪ್ರವೇಶಿಸಿ ಎಲ್ಲವನ್ನೂ ಹಾಳುಮಾಡುತ್ತದೆ ಎಂಬುದು ಮೇಲಿಂದ ಮೇಲೆ ಸಾಬೀತಾಗಿದೆ. ಆದರೆ ಈ ಸಂಸ್ಥೆ ಅಥವಾ ಮಂಡಳಿಗಳ ಲೆಕ್ಕಪತ್ರ ಕೇಳುವುದರಲ್ಲಿ ಏನು ತಪ್ಪಿದೆ? ವ್ಯಕ್ತಿಯೇ ಆಗಿರಲಿ, ಸಂಸ್ಥೆಯೇ ಆಗಿರಲಿ ಹೊಣೆಗಾರಿಕೆ ಎಂಬುದು ಇರಬೇಕಲ್ಲವೇ?ಕ್ರೀಡಾ ಮಂಡಳಿಗಳು ಸಾರ್ವಜನಿಕರಿಗೇ ಸಂಬಂಧಪಟ್ಟವುಗಳಾಗಿರುವುದರಿಂದ ಅವುಗಳ ಅಧಿಕಾರಿಗಳು ಹಣಕಾಸಿನ ವ್ಯವಹಾರ ಹಾಗೂ ಇತರ ಎಲ್ಲ ವಿಷಯಗಳಿಗೂ ಉತ್ತರ ಕೊಡಲೇಬೇಕಾಗುತ್ತದೆ. ಇದೇ ಎಲ್ಲರನ್ನೂ ಮುಳ್ಳಿನಂತೆ ಚುಚ್ಚುತ್ತಿರುವ ಮುಖ್ಯ ಅಂಶ.ಭಾರತದ ಕ್ರೀಡಾ ಮಂಡಳಿಗಳಲ್ಲಿ ಕೊಳೆತು ನಾರುತ್ತಿರುವ ಹುಣ್ಣುಗಳು ಬಹಳ ಇವೆ.ಆಡಳಿತ ಪಾರದರ್ಶಕವಾಗಿರದೇ ಇರುವುದು, ಭ್ರಷ್ಟಾಚಾರ, ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ, ಕ್ರೀಡಾಪಟುಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ, ಕ್ರೀಡಾಪಟುಗಳ ವಯೋಮಿತಿಯಲ್ಲಿ ಮೋಸ, ಉದ್ದೀಪನ ಮದ್ದು ಸೇವನೆ ಪಿಡುಗು-ಇವೆಲ್ಲ ಕ್ರೀಡಾರಂಗದಲ್ಲಿ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ರೂಢಿಗೆ ಬಂದುಬಿಟ್ಟಿವೆ.

 

ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿ ಎರಡಕ್ಕಿಂತ ಹೆಚ್ಚಿನ ಅವಧಿಗೆ ಸ್ಪರ್ಧಿಸಬಾರದು ಎಂಬ ನಿಯಮವನ್ನು ಸರ್ಕಾರ ಕಡ್ಡಾಯಗೊಳಿಸಿದಾಗ, ಇದು ಸಂಸ್ಥೆಗಳ ಹಾಗೂ ವ್ಯಕ್ತಿಗಳ ಸ್ವಾತಂತ್ರ್ಯಹರಣ ಎಂದು ಎಲ್ಲರೂ ಕೂಗಾಡಿದ್ದರು.ಹಲವು ಕ್ರೀಡಾಮಂಡಳಿಗಳಲ್ಲಿ ಆಜೀವ ಸದಸ್ಯರಂತೆ ಆಜೀವ ಅಧ್ಯಕ್ಷ ಅಥವಾ ಕಾರ್ಯದರ್ಶಿಗಳು ಇದ್ದರು ಅಥವಾ ಇದ್ದಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಸಾಯುವವರೆಗೂ ಕುರ್ಚಿ ಮೇಲೆ ಇರಬೇಕು ಎನ್ನುವ ವ್ಯಕ್ತಿ ಸರ್ವಾಧಿಕಾರಿಯಾಗದೇ ಇನ್ನೇನಾಗುತ್ತಾನೆ?ಕ್ರೀಡಾಪಟುಗಳ ಮಾತುಗಳಿಗೂ ಮಂಡಳಿಯಲ್ಲಿ ಬೆಲೆ ಇರಬೇಕು ಎಂಬ ನಿಯಮ ಎಂದೋ ಜಾರಿಗೆ ಬರಬೇಕಿತ್ತು. ಆದರೆ ಮಂಡಳಿಯ ವಿರುದ್ಧ ಕಿರುಬೆರಳು ಎತ್ತಿದರೂ ಅದನ್ನು ಕತ್ತರಿಸಿ ಹಾಕಲಾಗುತ್ತಿದೆ.ದಶಕಗಳ ಹಿಂದೆ ಟೇಬಲ್ ಟೆನಿಸ್ ಫೆಡರೇಷನ್ ದುರಾಡಳಿತದ ವಿರುದ್ಧ ದನಿ ಎತ್ತಿದ್ದ ಆಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟ ಘಟನೆ ಭಾರತದ ಕ್ರೀಡಾ ಇತಿಹಾಸದ ಒಂದು ಕರಾಳ ಅಧ್ಯಾಯ. ಬೇರೆ ಕ್ರೀಡೆಗಳಲ್ಲೂ ಪ್ರಶ್ನೆ ಮಾಡಿದ ಕ್ರೀಡಾಪಟುಗಳ ಭವಿಷ್ಯ ಹೇಳಹೆಸರಿಲ್ಲದಂತೆ ಕತ್ತರಿಸಿಹೋಗಿವೆ. ಮಹಿಳಾ ಕ್ರೀಡಾಪಟುಗಳಂತೂ ಹೇಳಲೂ ಆಗದೇ ಬಿಡಲೂ ಆಗದೇ ಅಧಿಕಾರಿಗಳ ಶೋಷಣೆಯಲ್ಲಿ ಸಿಕ್ಕು ನರಳಿದ್ದಾರೆ.ಇತ್ತೀಚೆಗಷ್ಟೇ ಭಾರತ ಮಹಿಳಾ ಹಾಕಿ ತಂಡದ ಎಲ್ಲ ಆಟಗಾರ್ತಿಯರು ತಮ್ಮ ತರಬೇತುದಾರನ ವಿರುದ್ಧ ಪತ್ರ ಬರೆಯುವ ಧೈರ್ಯ ತೋರಿದ್ದರು. ಈ ಕಾರಣಗಳಿಂದಲೇ ಎಷ್ಟೋ ಜನ ತಮ್ಮ ಮಕ್ಕಳನ್ನು ಸ್ಪರ್ಧೆಗಳಿಗೆ ಕಳಿಸುವುದಿಲ್ಲ. ದೈಹಿಕ ಅರ್ಹತೆಗಾಗಿ ಆಟ ಆಡಲಿ, ಆದರೆ ಕ್ರೀಡಾ ಕೀಚಕರ ಕೈಲಿ ಸಿಗುವುದು ಬೇಡ ಎಂಬ ನಿಲುವು ಹಲವರದ್ದು.ಒಂದು ರಾಷ್ಟ್ರಕ್ಕೆ ಕ್ರೀಡಾ ನೀತಿ ಎಂಬುದು ಬಹಳ ಅಗತ್ಯ. ಅದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಬೇಕು. ಮಂಡಳಿಗಳು ಎಷ್ಟೇ ವಿರೋಧಿಸಿದರೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಬೇಕು. ಎಷ್ಟೇ ಪ್ರಭಾವಿ ವ್ಯಕ್ತಿಗಳು ಮಂಡಳಿಗಳಲ್ಲಿದ್ದರೂ ಅವರೂ ಕೂಡ ನೀತಿ ನಿಯಮಗಳಿಗೆ ತಲೆಬಾಗುವಂಥ ಕಾನೂನು ಬರಬೇಕು.ಮಂಡಳಿಗಳ ಸ್ವೇಚ್ಛಾಚಾರಕ್ಕೆ ಇನ್ನಾದರೂ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ ನಮಗೆ ಬರೀ ಕಲ್ಮಾಡಿಗಳು, ಭಾನೊಟ್‌ಗಳು, ಲಲಿತ್ ಮೋದಿಗಳು ಸಿಗುತ್ತಾರೆ. ವಿಶ್ವ ಕ್ರೀಡಾರಂಗದಲ್ಲಿ ದೇಶದ ಹಿರಿಮೆಗಾಗಿ, ನಮ್ಮ ಕ್ರೀಡಾಪಟುಗಳಿಗಾಗಿ ಒಂದು ಸತ್ವಯುತ, ಪ್ರಬಲ ಕ್ರೀಡಾ ನೀತಿ ಜಾರಿಗೆ ಬರುವಂತೆ ಜನರೇ ಆಗ್ರಹಿಸಬೇಕು. ಇದಕ್ಕಾಗಿ ಇಲ್ಲೂ ಒಬ್ಬ ಅಣ್ಣಾ ಹಜಾರೆ ಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry