ಬುಧವಾರ, ಮೇ 25, 2022
24 °C

ಕಾನೂನನ್ನು ಯಾರ‌್ಯಾರೋ ಕೈಗೆತ್ತಿಕೊಂಡಾಗ...

ಶಿವರಾಮ್ Updated:

ಅಕ್ಷರ ಗಾತ್ರ : | |

ಮೆರವಣಿಗೆ ಮೊದಲಾದ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಾಗ ಸಮಾ ಜದ ಹಿತದೃಷ್ಟಿಯಿಂದ ಪೊಲೀಸರ ರಕ್ಷಣೆ ಅತ್ಯಗತ್ಯ. ಆಯಾ ಪ್ರದೇಶಕ್ಕೆ ಸಂಬಂಧಿಸಿದ ಕಾನೂನುಗಳು ಜಾರಿಯಲ್ಲಿದ್ದು, ಅವುಗಳನ್ನು ರಕ್ಷಿಸುವುದು ಪೊಲೀಸರ ಹೊಣೆಗಾರಿಕೆಯಾಗಿರುತ್ತದೆ. ಕಾರ್ಮಿಕ ಸಂಘಟನೆಗಳು, ರಾಷ್ಟ್ರೀಯ ಪಕ್ಷಗಳು, ಮತೀಯ ಸಂಘಟನೆಗಳು, ರೈತ ಸಂಘಟನೆಗಳು, ಪ್ರಾದೇಶಿಕ ಪಕ್ಷಗಳಿಗೆ ಸೇರಿದವರು ಹಾಗೂ ಪ್ರತ್ಯೇಕವಾದಿಗಳಲ್ಲಿ ಕೆಲವರಿಗೆ ವೇದಿಕೆ ಹತ್ತಿದೊಡನೆ ಆವೇಶ ಬರುತ್ತದೆ.ಅಂಥವರು ಮುಖತಃ ಮಾತನಾಡುವಾಗ ಸೌಮ್ಯ ಸ್ವಭಾವದವರಂತೆ ಕಂಡರೂ ಭಾಷಣ ಮಾಡುವಾಗ ಭಾವಾವೇಶಕ್ಕೆ ಒಳಗಾಗುತ್ತಾರೆ. ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ಪ್ರಚೋದನಕಾರಿಯಾಗಿ ಮಾತಾಡಿಬಿಡುತ್ತಾರೆ. ಸೈದ್ಧಾಂತಿಕ ಚಳವಳಿಗಳಿಗೆ ನಿರ್ದಿಷ್ಟ ಉದ್ದೇಶ, ಸ್ಪಷ್ಟ ಗುರಿ ಇರುವುದರಿಂದ ಆಗ ಕಾನೂನಿನ ಉಲ್ಲಂಘನೆ ಯಾಗುವ ಸಾಧ್ಯತೆ ಕಡಿಮೆ. ಅದೇ ಕೆಲವರು ಪರಿಸ್ಥಿತಿ ಹದಗೆಡಿಸಲೆಂದೇ ಪ್ರಚೋದನಕಾರಿಯಾಗಿ ಮಾತ ನಾಡುವುದುಂಟು. ಹೀಗಾದಾಗ ಜನ ರೊಚ್ಚಿ ಗೇಳುತ್ತಾರೆ. ಗಲಭೆ ಗಳಾಗುತ್ತವೆ. ರಸ್ತೆ ತಡೆ ನಡೆದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಇದೆಲ್ಲದರ ವ್ಯತಿರಿಕ್ತ ಪರಿಣಾಮವನ್ನು ಅನುಭವಿಸಬೇಕಾದವರು ಸಾರ್ವಜನಿಕರು. ಅವರು ತಕ್ಷಣಕ್ಕೆ ಪೊಲೀಸರನ್ನೇ ದೂರುತ್ತಾರೆ.ಇತ್ತೀಚೆಗೆ ರಾಜಕೀಯ ಕಾರಣಕ್ಕೆ ಹಾಗೂ ತಮ್ಮ ಸ್ವಾರ್ಥ ಸಾಧನೆಗೆ ಕೆಲವು ರಾಜಕಾರಣಿಗಳು ಸಾಮಾಜಿಕ ಕಳಕಳಿ ಇಲ್ಲದೆ ಭಾಷಣ ಮಾಡುವುದು ವ್ಯಾಪಕವಾಗಿದೆ.ನಾನು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗಣೇಶ ಹಾಲು ಕುಡಿಯುತ್ತಾನೆಂದು ಗುಲ್ಲೆದ್ದಿತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಾವು ಕೆಲವು ಪೊಲೀಸರು ಗಣೇಶ ಹಾಲು ಕುಡಿಯುತ್ತಿಲ್ಲ ಎಂಬುದನ್ನು ತೋರಿಸಿ ಹೇಳಿದರೂ, ಬಹುತೇಕರು ನಮ್ಮ ಮಾತನ್ನು ಒಪ್ಪಲಿಲ್ಲ. `ಸರಿಯಾಗಿ ನೋಡಿ, ಕುಡಿಯುತ್ತಿದ್ದಾನೆ~ ಎಂದು ನಮ್ಮ ಜೊತೆ ವಾದ ಹೂಡಿದರು. ಅದು ಅವರವರ ನಂಬಿಕೆ ಎಂದು ಇನ್ನು ಕೆಲವರು ಜಾರಿಕೊಂಡರು. ಆದರೆ, ಈ ರೀತಿಯ `ಸಮೂಹ ಸನ್ನಿ~ಗೆ ಜನ ಒಳಗಾದಾಗ ಸಣ್ಣ ದೇವಸ್ಥಾನದಲ್ಲಿ ಜನಜಾತ್ರೆ ನೆರೆಯುತ್ತದೆ. ಕಳ್ಳಕಾಕರು,  ಸುಲಿಗೆಕೋರರು ವಿಜೃಂಭಿಸುತ್ತಾರೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಮತ್ತೆ ಈ ಎಲ್ಲಾ ಸಮಸ್ಯೆ ಬಗೆಹರಿಸುವ ಉಸಾಬರಿ ಪೊಲೀಸರದ್ದು. ಜನರ ಮೌಢ್ಯಕ್ಕೂ ಪೊಲೀಸರು ಜವಾಬ್ದಾರರಾಗಬೇಕಾದ ಪ್ರಸಂಗಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಇದು ಉದಾಹರಣೆ.ನಾನು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸದಲ್ಲಿದ್ದ ಸಂದರ್ಭ. ಮಲ್ಲೇಶ್ವರದಲ್ಲಿದ್ದ ನನ್ನ ಮನೆಗೆ ಊಟಕ್ಕೆಂದು ಹೋಗಿದ್ದೆ. ಆಗ ಕಂಟ್ರೋಲ್ ರೂಮ್‌ನಿಂದ ಫೋನ್ ಬಂತು. ಯಾವುದೋ ಅಪಘಾತ ಸಂಭವಿಸಿ ಶೇಷಾದ್ರಿರಸ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಜಯನಗರ ಹಾಗೂ ಮೈಸೂರು ರಸ್ತೆಗೂ ಅದರ ಬಿಸಿತಟ್ಟಿ, ಅಲ್ಲೆಲ್ಲಾ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಾನು ತಕ್ಷಣ ಜೀಪು ಹತ್ತಿ ಮನೆಯಿಂದ ಹೊರಟೆ. ರೇಸ್‌ಕೋರ್ಸ್‌ವರೆಗೆ ಮಾತ್ರ ಜೀಪು ಸಂಚರಿಸಲು ಸಾಧ್ಯವಾಗಿದ್ದು. ಅಲ್ಲಿಂದ ಇಳಿದು ಶೇಷಾದ್ರಿ ರಸ್ತೆಯವರೆಗೆ ಓಡಿಕೊಂಡೇ ಹೋದೆ.  ಅಪಘಾತ ಸಂಭವಿಸಿದ್ದ ಸ್ಥಳದಲ್ಲಿ ಕೆಲವು ಆಟೋ ಚಾಲಕರು ರಸ್ತೆ ತಡೆ ನಡೆಸಿದ್ದರು.ಟ್ರಾಫಿಕ್ ಹಾಗೂ `ಲಾ ಅಂಡ್ ಆರ್ಡರ್~ಗೆ ಸೇರಿದ ಸುಮಾರು ಹತ್ತು ಜನ ಸಬ್‌ಇನ್ಸ್‌ಪೆಕ್ಟರ್‌ಗಳು ಅಲ್ಲಿದ್ದರು. ಉಳಿದವರೂ ಸೇರಿದಂತೆ ಸುಮಾರು ಮೂವತ್ತು ಮಂದಿ ಪೊಲೀಸರು ಇದ್ದೂ ಏನೂ ಮಾಡಲು ತೋಚದೆ ಕಂಗಾಲಾಗಿದ್ದರು. ಯಾಕೆಂದರೆ, ಅಲ್ಲಿ ವಕೀಲರೊಬ್ಬರು ದನಿಯೆತ್ತಿ ಮಾತನಾಡುತ್ತಿದ್ದರು. ಅಲ್ಲಿದ್ದ ಸಬ್ ಇನ್ಸ್‌ಪೆಕ್ಟರ್‌ಗಳಲ್ಲಿ ಅನನುಭವಿಗಳೇ ಹೆಚ್ಚಾಗಿದ್ದರು. ಅವರಿಗೆಲ್ಲಾ ವಕೀಲರನ್ನು ಎದುರಿಸಿ ಮಾತನಾಡಿದರೆ ಏನು ತೊಂದರೆಯಾದೀತೋ ಎಂಬ ಆತಂಕ.ಅಲ್ಲಿ ನಿಜಕ್ಕೂ ನಡೆದದ್ದೇನು ಎಂಬುದು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಜನರಿಗೂ ಗೊತ್ತಿರಲಿಲ್ಲ. ಅಪಘಾತದಲ್ಲಿ ಯಾರೋ ಸತ್ತಿರುವ ಕಾರಣಕ್ಕೆ ಕೆಲವರು ರೊಚ್ಚಿಗೆದ್ದಿದ್ದಾರೆಂದು ಭಾವಿಸಿದ್ದರು. ನಾನು ಅಲ್ಲಿದ್ದ ಸಬ್ ಇನ್ಸ್‌ಪೆಕ್ಟರ್‌ಗಳನ್ನು ವಿಚಾರಿಸಿದೆ. ಅಪಘಾತದಲ್ಲಿ ಒಬ್ಬನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿತ್ತಷ್ಟೆ ಎಂದು ಅವರು ವಸ್ತುಸ್ಥಿತಿಯನ್ನು ಬಿಡಿಸಿ ಹೇಳಿದರು. ಆದರೆ, ಅಲ್ಲಿ ವಕೀಲರು ಮಾತನಾಡಲು ನಿಂತಿದ್ದರಿಂದ ಪೊಲೀಸರು ಬಾಯಿಕಟ್ಟಿದಂತಾಗಿದ್ದರು. ಸುತ್ತಲಿದ್ದ ಜನ ಪೊಲೀಸರಿಗೆ ಧಿಕ್ಕಾರ ಕೂಗುತ್ತಿದ್ದರು.ಆಟೋ ಚಾಲಕರು ಅನಗತ್ಯವಾಗಿ ರಸ್ತೆ ತಡೆ ಮಾಡಿದ್ದರು. ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದೇನೂ ಅಪಘಾತ ಸಂಭವಿಸಿರಲಿಲ್ಲ. ಚಾಲಕರ ಅಚಾತುರ್ಯ ದಿಂದ ನಡೆದ ಘಟನೆ ಅದು. ಅದನ್ನು ನಾನು ತಿಳಿಹೇಳಲು ಯತ್ನಿಸಿದೆ. ಪ್ರಯೋಜನವಾಗಲಿಲ್ಲ.ಅಪಘಾತದ ಕೇಸು ದಾಖಲಾಗುತ್ತದೆ. ಆಗ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಇಲ್ಲಿ ದರೋಡೆ, ಸುಲಿಗೆ ಏನೂ ಆಗಿಲ್ಲ. ಯಾಕೆ ಸುಮ್ಮನೆ ನಾಗರಿಕರಿಗೆ ತೊಂದರೆ ಮಾಡುತ್ತಿದ್ದೀರಿ ಎಂದು ಕೇಳಿದೆ. ಯಾರೂ ಜಗ್ಗಲಿಲ್ಲ. ಧರಣಿ ಕೂತುಬಿಟ್ಟರು. ಆ ವಕೀಲರಿಗೆ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ. ಖುದ್ದು ಕಮಿಷನರ್ ಬಂದು ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಪಟ್ಟುಹಿಡಿದರು.ವ್ಯಾನ್‌ನಲ್ಲಿದ್ದ ಎಲ್ಲಾ ಪೊಲೀಸರನ್ನು ಕೆಳಗಿಳಿಯುವಂತೆ ಹೇಳಿದೆ. ಸುಮಾರು ಮೂವತ್ತು ಮಂದಿ ಪೊಲೀಸರಿದ್ದರು. ಎರಡು ನಿಮಿಷ ಕಾಲಾವಕಾಶ ಕೊಡುತ್ತೇನೆ, ಎಲ್ಲರೂ ಶಾಂತ ರೀತಿಯಿಂದ ರಸ್ತೆ ತಡೆ ನಿಲ್ಲಿಸಬೇಕು. ಇಲ್ಲವಾದರೆ, ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಅಲ್ಲಿ ಧರಣಿ ಕೂತವರಿಗೆ ಎಚ್ಚರಿಕೆ ಕೊಟ್ಟೆ.ಹಾಗೆಂದಾಕ್ಷಣ ಅಲ್ಲಿದ್ದವರೆಲ್ಲಾ ಇನ್ನಷ್ಟು ಹಾರಾಡತೊಡಗಿದರು. ಕ್ರಿಮಿನಲ್ ಪ್ರಕರಣ ದಾಖಲಿಸುವುದು ಅಷ್ಟು ಸುಲಭವಲ್ಲ ಎಂದು ಕೂಗಾಡಿದರು. ಮುಂದೆ ಲಾಠಿಚಾರ್ಜ್, ದಸ್ತಗಿರಿ ಮಾಡುವ ಪರಿಸ್ಥಿತಿ ಉದ್ಭವ ವಾದೀತು ಎಂದು ಎಚ್ಚರಿಸಿದರೂ ಪ್ರಯೋಜನ ವಾಗಲಿಲ್ಲ. ನಿಂತಿದ್ದ ಎಲ್ಲಾ ಪೊಲೀಸರಿಗೂ ಧರಣಿ ಕೂತವರನ್ನು ಹಿಡಿಯುವಂತೆ ಸೂಚಿಸಿದೆ.

 

ನಾನು ಆ ವಕೀಲರನ್ನು ಹಿಡಿದುಕೊಂಡೆ. ಅವರನ್ನು ಹಿಡಿದದ್ದೇ ತಡ, ಉಳಿದವರೆಲ್ಲಾ ತಂತಾವೇ ಅಲ್ಲಿಂದ ಜಾಗ ಖಾಲಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷರು ನನಗೆ ಫೋನ್ ಮಾಡಿದರು. ನಾನು ನಡೆದ ಘಟನೆಯನ್ನು ವಿವರಿಸಿದಾಗ ಅವರು ಕೂಡ ನಾನು ಮಾಡಿದ್ದು ಸರಿ ಎಂದರು. ಸಣ್ಣ ವಿಷಯವನ್ನು ಜನ ಹೇಗೆ ದೊಡ್ಡದು ಮಾಡುತ್ತಾರೆಂಬುದಕ್ಕೆ ಇದು ಉದಾಹರಣೆ. ಪೊಲೀಸರಿಗೆ ಧಿಕ್ಕಾರ ಕೂಗುತ್ತಿದ್ದವರೆಲ್ಲಾ ಕರಗಿದ ಮೇಲೆ ಜನ ಪೊಲೀಸರಿಗೆ ಜೈಕಾರ ಹಾಕಲಾರಂಭಿಸಿದರು. ಮಾಧ್ಯಮ ಕೂಡ ಆ ಕ್ಷಣದ ಸಮಯಪ್ರಜ್ಞೆಯನ್ನು ಹೊಗಳಿತು.ಅಲ್ಲಿದ್ದ ಎಷ್ಟೋ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ವಿನಾ ಕಾರಣ ರಸ್ತೆ ತಡೆ ಮಾಡುವವರನ್ನೂ ಕ್ರಿಮಿನಲ್ ಪ್ರಕರಣದ ಅಡಿ ದಸ್ತಗಿರಿ ಮಾಡಬಹುದು ಎಂಬುದು ಗೊತ್ತಿರಲಿಲ್ಲ. ಕಚೇರಿಗಳಿಗೆ ಘೇರಾವ್ ಮಾಡುವುದು, ಅಧಿಕಾರಿಗಳನ್ನು ಘೇರಾವ್ ಮಾಡುವುದು, ಸಭ್ಯರಿಗೆ ಮಸಿ ಬಳಿಯುವುದು ಇವೆಲ್ಲವುಗಳ ಪರಿಣಾಮ ಆಘಾತಕಾರಿಯಾಗಿರುತ್ತವೆ.ನಾನು ವಿಲ್ಸನ್ ಗಾರ್ಡನ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಸಂದರ್ಭ. ಎನ್‌ಟಿಸಿ (ನ್ಯಾಷನಲ್ ಟೆಕ್ಸ್‌ಟೈಲ್ ಕಾರ್ಪೊರೇಷನ್) ಕಚೇರಿಯು ಆಗ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿತ್ತು. ಆ ಕಾಲಘಟ್ಟದಲ್ಲಿ ಹಲವು ಮಿಲ್‌ಗಳಿಂದ ಕಾರ್ಮಿಕರಿಗೆ ಸರಿಯಾಗಿ ಸಂಬಳ ಪಾವತಿ ಆಗಿರಲಿಲ್ಲ. ಎಸ್.ಕೆ.ಕಾಂತಾ ಮೊದಲಾದ ಹಿರಿಯ ಕಾರ್ಮಿಕ ಹೋರಾಟಗಾರರು ಎನ್‌ಟಿಸಿ ಕಚೇರಿಗೆ ಬಂದರು. ಎಷ್ಟೇ ವಿನಂತಿಸಿಕೊಂಡರೂ ಎನ್‌ಟಿಸಿ ಅಧಿಕಾರಿವರ್ಗದ ಯಾರೂ ಮಾತುಕತೆಗೆ ಬರಲಿಲ್ಲ. ಕಾರ್ಮಿಕ ಹೋರಾಟಗಾರರೆಲ್ಲಾ ಮಧ್ಯಾಹ್ನದವರೆಗೆ ಕಾದರೂ ಏನೂ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ವಿಧಿಯಿಲ್ಲದೆ ಅವರೆಲ್ಲರೂ ಎನ್‌ಟಿಸಿ ಕಚೇರಿಯನ್ನೇ ಘೇರಾವ್ ಮಾಡಿದರು.ಅಲ್ಲಿದ್ದ ಅಧಿಕಾರಿಗಳಿಗೆ ಎದೆಬಡಿತ ಜೋರಾಯಿತು. ಪೊಲೀಸರಿಗೆ ಲಾಠಿಚಾರ್ಜ್ ಮಾಡಿ, ಟಿಯರ್ ಗ್ಯಾಸ್ ಒಡೆಯಿರಿ ಎಂದು ಅವರು ಫೋನ್ ಮಾಡಿ ಒತ್ತಡ ಹೇರಲಾರಂಭಿಸಿದರು.ಅದು ತುಂಬಾ ಸೂಕ್ಷ್ಮ ವಿಷಯ. ನಾವು ಕಾರ್ಮಿಕ ಸಂಘಟನೆಯ ಗಟ್ಟಿತನವನ್ನು ಕೂಡ ಅರಿತಿದ್ದೆವು. ಮಾನವೀಯ ದೃಷ್ಟಿಯಿಂದ ಸ್ವಲ್ಪವಾದರೂ ಸಂಬಳ ಕೊಡಬೇಕು. ಆರೇಳು ತಿಂಗಳಿನಿಂದ ಸಂಬಳವೇ ಬಂದಿಲ್ಲವಾದ್ದರಿಂದ ಅವರ ಹೋರಾಟ ನ್ಯಾಯಯುತ ವಾಗಿತ್ತು ಎಂಬುದನ್ನು ಅಧಿಕಾರವರ್ಗದವರಿಗೆ ಮನದಟ್ಟು ಮಾಡಿಸಿದೆವು. ಒಂದೇ ಸಲಕ್ಕೆ ಅಷ್ಟೂ ಸಂಬಳ ಕೊಡದೇ ಇದ್ದರೂ ಎರಡು ತಿಂಗಳ ಸಂಬಳವನ್ನಾದರೂ ಕೊಟ್ಟಲ್ಲಿ ಕಾರ್ಮಿಕರಿಗೆ ಸಮಾಧಾನವಾಗುತ್ತದೆ ಎಂದು ತಿಳಿಸಿದೆವು. ಒಂದು ವಾರದಲ್ಲಿ ಎರಡು ತಿಂಗಳ ಸಂಬಳ ಬಿಡುಗಡೆ ಮಾಡುವ ಆಶ್ವಾಸನೆ ಕೊಟ್ಟರು. ಅಧಿಕಾರಿಗಳು ಏಳು ತಿಂಗಳಿನಿಂದ ಹೀಗೆಯೇ ಹೇಳಿಕೊಂಡು ಬಂದು ಕಾಲ ದೂಡುತ್ತಿದ್ದಾರೆ ಎಂದ ಕಾರ್ಮಿಕರು ಸಂಬಳಕ್ಕಾಗಿ ಒಂದು ವಾರದವರೆಗೆ ಕಾಯಲು ಸಿದ್ಧರಿರಲಿಲ್ಲ. ಕೊನೆಗೆ ಮರುದಿನ ಬೆಳಗ್ಗೆಯೇ ಎರಡು ತಿಂಗಳ ಸಂಬಳ ಕೊಡುವಂತೆ ಅಧಿಕಾರಿಗಳನ್ನು ಒಪ್ಪಿಸಿದೆವು.

 

ಕಾರ್ಮಿಕರು ನಂಬಿಕೆ ಇಟ್ಟಿದ್ದ ಅಧಿಕಾರಿಯೊಬ್ಬರು ಹೊರಬಂದು ಈ ವಿಷಯ ಪ್ರಕಟಿಸಿದಾಗ ಮಿಲ್ ಕಾರ್ಮಿಕರು ಘೇರಾವ್ ನಿಲ್ಲಿಸಿ, ಅಲ್ಲಿಂದ ಚದುರಿದರು. ಮರುದಿನ ಅವರಿಗೆ ಎರಡು ತಿಂಗಳ ಸಂಬಳ ಕೂಡ ಸಿಕ್ಕಿತು. ಒಂದು ವೇಳೆ ನಾವು ಅಧಿಕಾರಿಗಳ ಒತ್ತಡಕ್ಕೆ ಮಣಿದು ಲಾಠಿಚಾರ್ಜ್ ಮಾಡಿದ್ದರೆ ಅಥವಾ ಟಿಯರ್ ಗ್ಯಾಸ್ ಒಡೆದಿದ್ದರೆ ಕಾರ್ಮಿಕ ಚಳವಳಿ ತನ್ನ ಕೆನ್ನಾಲಗೆಯನ್ನು ಬೆಂಗಳೂರಿನ ಉದ್ದಕ್ಕೂ ಚಾಚುವ ಸಾಧ್ಯತೆ ಇತ್ತು. ನ್ಯಾಯವಾಗಿ ಏನು ಮಾಡಬೇಕು ಎಂಬುದರ ಜೊತೆಗೆ ಪರಿಸ್ಥಿತಿ ಯಾವ ರೀತಿಯ ಕ್ರಿಯೆಯನ್ನು ಬೇಡುತ್ತದೆ ಎಂಬುದರ ಅರಿವು ಪೊಲೀಸರಿಗೆ ಇರಬೇಕು ಎಂಬುದಕ್ಕೆ ಇದು ನಾನು ಕಂಡ ಇನ್ನೊಂದು ಉತ್ತಮ ಉದಾಹರಣೆ.ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿದ್ದ ಹಿರಿಯ ವಕೀಲ ಪ್ರಶಾಂತ್‌ಭೂಷಣ್ ಅವರ ಮೇಲೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಜನರ ಮನಸ್ಥಿತಿ ಈಗ ಹೇಗೆ ಆಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿದೆ. ಈ ಹೊತ್ತಿನಲ್ಲಿ ಪೊಲೀಸರು ಇನ್ನೂ ಸೂಕ್ಷ್ಮವಾಗ ಬೇಕಾದ ಅಗತ್ಯವಿದೆ.

ಮುಂದಿನ ವಾರ: ಸೂಕ್ಷ್ಮ ಸುಳಿವಿನಿಂದ ಪತ್ತೆಯಾದ ಅಪರೂಪದ ಕೇಸು

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.