ಕಾರ್ಬನ್ ಎ30 ಕಡಿಮೆ ಬೆಲೆಯಲ್ಲಿ ಅತಿದೊಡ್ಡ ಫೋನ್

7

ಕಾರ್ಬನ್ ಎ30 ಕಡಿಮೆ ಬೆಲೆಯಲ್ಲಿ ಅತಿದೊಡ್ಡ ಫೋನ್

ಯು.ಬಿ. ಪವನಜ
Published:
Updated:
ಕಾರ್ಬನ್ ಎ30 ಕಡಿಮೆ ಬೆಲೆಯಲ್ಲಿ ಅತಿದೊಡ್ಡ ಫೋನ್

ಭಾರತದ ಕಡಿಮೆ ಬೆಲೆಯ ಫೋನ್‌ಗಳ ಮಾರುಕಟ್ಟೆಯಲ್ಲಿ ಮುಖ್ಯವಾಗಿ ಕೇಳಿ ಬರುವ ಹೆಸರುಗಳು ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಲಾವಾ. ಈ ಮೂರೂ ಕಂಪೆನಿಗಳು ಮೊಬೈಲ್ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಯ ತಳಹಂತದಲ್ಲಿ ಒಬ್ಬರಿಗೊಬ್ಬರು ಸ್ಫರ್ಧಿಸುತ್ತಿದ್ದಾರೆ. ಕಾರ್ಬನ್ ಕಂಪೆನಿಯ ಒಂದು ಟ್ಯಾಬ್ಲೆಟ್ ಅನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈ ಸಲ ಅವರ ಒಂದು ಫೋನ್ ಎ30 (Karbonn A30) ಅನ್ನು ಗಮನಿಸೋಣ.ಇದನ್ನು ಫೋನ್ ಎನ್ನುವುದಕ್ಕಿಂತಲೂ ಫ್ಯಾಬ್ಲೆಟ್ ಎನ್ನುವುದೇ ಸೂಕ್ತ. ಯಾಕೆಂದರೆ ಇದು ಗಾತ್ರದಲ್ಲಿ ಫೋನ್ ಮತ್ತು ಟ್ಯಾಬ್ಲೆಟ್‌ಗಳ ಮಧ್ಯದಲ್ಲಿದೆ. ಇದರ ಪರದೆಯ ಗಾತ್ರ ಬರೋಬ್ಬರಿ 5.9 ಇಂಚು. ದೊಡ್ಡ ಕೈ ಇದ್ದವರು ಮಾತ್ರ ಇದನ್ನು ಕೈಯಲ್ಲಿ ಹಿಡಿದುಕೊಂಡು ಫೋನಿನಂತೆ ಬಳಸಬಹುದು. ಇತರರು ಟ್ಯಾಬ್ಲೆಟ್ ರೀತಿ ಬಳಸಬಹುದು. ಫೋನ್ ಎಂದೇ ಬಳಸಬೇಕಾದರೆ ಕಿವಿಗೆ ಇಯರ್‌ಫೋನ್ ಅಥವಾ ಬ್ಲೂಟೂತ್ ಹಾಕಿಕೊಳ್ಳುವುದು ಒಳಿತು.

ಗುಣವೈಶಿಷ್ಟ್ಯಗಳು (specifications)

ಎರಡು ಹೃದಯಗಳ 1 ಗಿಗಾಹರ್ಟ್ಸ್ ಪ್ರೋಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮತ್ತು 4 ಗಿಗಾಬೈಟ್ ಹೆಚ್ಚುವರಿ ಮೆಮೊರಿ, ಮೈಕ್ರೊಎಸ್‌ಡಿ ಕಾರ್ಡ್ ಮೂಲಕ 32 ಗಿಗಾಬೈಟ್ ತನಕ ಸಂಗ್ರಹ ಮೆಮೊರಿ, 480x800ಪಿಕ್ಸೆಲ್ ರೆಸೊಲೂಶನ್‌ನ 5.9 ಇಂಚು ಗಾತ್ರದ ಸ್ಪರ್ಶಸಂವೇದಿ ಬಣ್ಣದ ಪರದೆ (ಗೊರಿಲ್ಲ ಗ್ಲಾಸ್ ಇಲ್ಲ), ಎರಡು ಸಿಮ್ ಕಾರ್ಡ್ ಸೌಲಭ್ಯ, 2ಜಿ ಮತ್ತು 3ಜಿ ಸೌಲಭ್ಯ, ಬ್ಲೂಟೂತ್ ಮತ್ತು ವೈಫೈ ಸಂಪರ್ಕ, ಮೈಕ್ರೋ ಯುಎಸ್‌ಬಿ ಮತ್ತು 3.5 ಮಿಮೀ ಇಯರ್‌ಫೋನ್ ಕಿಂಡಿ, 8 ಮೆಗಾಪಿಕ್ಸೆಲ್ 3264x2448 ರೆಸೊಲೂಶನ್‌ನ ಪ್ರಾಥಮಿಕ ಕ್ಯಾಮೆರಾ, ಎಲ್‌ಇಡಿ ಫ್ಲಾಶ್, 1.3 ಮೆಗಾಪಿಕ್ಸೆಲ್‌ನ ಇನ್ನೊಂದು (ಎದುರುಗಡೆಯ) ಕ್ಯಾಮೆರಾ, ಎಕ್ಸೆಲರೋಮೀಟರ್, 166x91x10.7  ಮಿಮೀ ಗಾತ್ರ, 280 ಗ್ರಾಂ ತೂಕ, 2500 mAh ಬ್ಯಾಟರಿ, ಇತ್ಯಾದಿ.ಇದರ ಕಾರ್ಯಾಚರಣ ವ್ಯವಸ್ಥೆ (operating system) ಆಂಡ್ರೋಯಿಡ್ 4.0.4 (ಐಸ್‌ಕ್ರೀಂ ಸ್ಯಾಂಡ್‌ವಿಚ್). ಬೆಲೆ ಸುಮಾರು ರೂ.11,500. ಗಾತ್ರದಲ್ಲಿ ಇದರ ಹತ್ತಿರಕ್ಕೆ ಬರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್-2 ಫೋನಿಗೆ ಸುಮಾರು ರೂ.36,000 . ಬೆಲೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆ ಒಂದು ಉತ್ತಮ ಸುರಕ್ಷಾ ಪೌಚ್ ನೀಡಿದ್ದಾರೆ. ಇದರ ಜೊತೆ ಬಳಸಿದಾಗ ಈ ಫ್ಯಾಬ್ಲೆಟ್ ಒಂದು ಡೈರಿಯ ರೀತಿ ಕಾಣಿಸುತ್ತದೆ.ಪ್ರಾರಂಭದಲ್ಲೇ ಹೇಳಿದಂತೆ ಇದು ಕಡಿಮೆ ಬೆಲೆಯ ಫೋನ್ ಅಥವಾ ಫ್ಯಾಬ್ಲೆಟ್. ಎರಡು ಹೃದಯಗಳ ಅಂದರೆ ಡ್ಯುಯಲ್ ಕೋರ್ ಪ್ರೋಸೆಸರ್ ಇರುವುದರಿಂದ ಇದರ ಕೆಲಸದ ವೇಗ ತೃಪ್ತಿದಾಯಕವಾಗಿದೆ. ಆದರೆ ಪ್ರಾಥಮಿಕ ಮೆಮೊರಿ (RAM)ಕೇವಲ 512 ಮೆಗಾಬೈಟ್ ಇರುವುದು ಒಂದು ದೊಡ್ಡ ಕೊರತೆ. ವಿಡಿಯೋಗಳನ್ನು ಪ್ಲೇ ಮಾಡುವಾಗ ಇದು ಎದ್ದು ಕಾಣುತ್ತದೆ. ಕೆಲವು ಸಂದರ್ಭಗಳಲ್ಲಿ ವಿಡಿಯೋ ಚಾಲನೆಯಲ್ಲಿ ಅಡಚಣೆ (jerky) ಕಂಡುಬರುತ್ತದೆ.ಎಲ್ಲ ನಮೂನೆಯ ವಿಡಿಯೋಗಳನ್ನು ಪ್ಲೇ ಮಾಡುತ್ತದೆ. ಇದರ ಗಾತ್ರಕ್ಕೆ ಹೋಲಿಸಿದರೆ ಪರದೆಯ ರೆಸೊಲೂಶನ್ ಸ್ವಲ್ಪ ಕಡಿಮೆ ಆಯಿತು ಎನ್ನಬಹುದು. ಆದರೂ ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡಬಹುದು ಹಾಗೂ ಹಾಗೆ ಪ್ಲೇ ಮಾಡಿದಾಗ ಅನುಭವ ಅಷ್ಟೇನೂ ಕೆಟ್ಟದಾಗಿಲ್ಲ. ಗೊರಿಲ್ಲ ಗ್ಲಾಸ್ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆ.ಪರದೆಗೆ ಗೀರುಗಳು ಆಗಬಹುದು. ವಿಮರ್ಶೆಗೆ ಕಳುಹಿಸಿದ ಫೋನ್‌ನಲ್ಲಿ ಒಂದು ಪ್ಲಾಸ್ಟಿಕ್ ಹಾಳೆ ಅಂಟಿಸಿದ್ದರು. ಅದನ್ನು ನಾನು ತೆಗೆಯಲಿಲ್ಲ. ಆದರೂ ಅದರ ಮೇಲೆ ಒತ್ತಿ ಕೆಲಸ ಮಾಡುವಾಗ ಅನುಭವದಲ್ಲಿ ಅಷ್ಟೇನೂ ತೊಂದರೆ ಅನ್ನಿಸಲಿಲ್ಲ.ಇದರ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ ರೆಸೊಲೂಶನ್‌ನದು. ಗುಣಮಟ್ಟ ಅಷ್ಟಕ್ಕಷ್ಟೆ. ಕ್ಯಾಮೆರಾದಲ್ಲಿ ಹಲವು ಸೌಲಭ್ಯಗಳಿವೆ. ದೃಶ್ಯದ ಆಯ್ಕೆ ಇದೆ. ಮುಖದ ಪತ್ತೆ ಒಂದು ಉತ್ತಮ ಸೌಲಭ್ಯ. ಫೋಟೊ ತೆಗೆಯುವಾಗ ಈ ಸೌಲಭ್ಯವನ್ನು ಬಳಸಿ ವ್ಯಕ್ತಿಗಳ ಫೋಟೊಗಳನ್ನು ಸುಲಭವಾಗಿ ತೆಗೆಯಬಹುದು. ಒಮ್ಮೆಗೇ 4, 8 ಅಥವಾ 16 ಫೋಟೊ ಕ್ಲಿಕ್ಕಿಸಬಹುದು. ಫ್ಲಾಶ್ ಸೌಲಭ್ಯ ಇದೆ. ಎಚ್‌ಡಿಆರ್ ಫೋಟೊ ತೆಗೆಯಬಹುದು.ಆದರೆ ನಾನು ಪ್ರಯತ್ನಿಸಿ ನೋಡಿದಾಗ ಅಂತಹ ಉತ್ತಮ ಫಲಿತಾಂಶ ಕಂಡುಬರಲಿಲ್ಲ. ವೀಡಿಯೊ ಕೂಡ ಮಾಡಬಹುದು. ಒಟ್ಟಿನಲ್ಲಿ ಕ್ಯಾಮೆರಾಕ್ಕೆ ಅತ್ಯುತ್ತಮ ಮಾರ್ಕು ಕೊಡುವಂತಿಲ್ಲ. ಪಾಸು ಎನ್ನಬಹುದಷ್ಟೆ. ಇದರಲ್ಲಿ ಕಡಿಮೆ ರೆಸೊಲೂಶನ್‌ನ, ನಮ್ಮ ಫೋಟೊ ನಾವೇ ತೆಗೆಯಬಲ್ಲ, ಇನ್ನೊಂದು ಕ್ಯಾಮೆರಾ ಇದೆ. ಇದರ ಪ್ರಮುಖ ಬಳಕೆ ವೀಡಿಯೊ ಚಾಟ್ ಮಾಡಲು.ಇದರ ಸಂಗೀತದ ಗುಣಮಟ್ಟವೂ ಅದ್ಭುತ ಎನ್ನುವಂತಿಲ್ಲ. ಆದರೆ ಇದರ ಬೆಲೆಗೆ ಹೋಲಿಸಿದಾಗ ಪರವಾಗಿಲ್ಲ ಎನ್ನಬಹುದು. ಇದರ ಜೊತೆ ನೀಡಿದ ಇಯರ್‌ಫೋನ್ ಕೂಡ ಅದ್ಭುತ ಎನ್ನುವಂತಿಲ್ಲ. ಅತಿ ದೊಡ್ಡ ಪರದೆ ಇರುವ ಕಾರಣ ಸಿನಿಮಾ ನೋಡಲು ಉತ್ತಮ ಗ್ಯಾಜೆಟ್. ಇದರ ಗಾತ್ರ ತುಂಬ ದೊಡ್ಡದಾದ ಕಾರಣ ಇಯರ್‌ಫೋನ್ ಮೂಲಕ ಮಾತನಾಡುವುದೇ ಒಳ್ಳೆಯದು.ಇದರ ಜೊತೆ ಒಂದು ಪೆನ್ ಮಾದರಿಯ ಸ್ಟೈಲಸ್ ನೀಡಿದ್ದಾರೆ. ಪೆನ್ನಿನಂತೆಯೇ ಕಾಣಿಸುವ ಇದನ್ನು ಮಾಮೂಲಿ ಪೆನ್ನಿನಂತೆ ಬಳಸಲು ಸಾಧ್ಯವಿಲ್ಲ. ಇದರ ತುದಿಯಲ್ಲಿ ಸಾಮಾನ್ಯ ಪೆನ್ನಿನಲ್ಲಿರುವಂತೆ ನಿಬ್ ಇರುವ ಬದಲು ರಬ್ಬರ್ ಮಾದರಿಯ ಅರ್ಧಗೋಲಾಕಾರದ ತುದಿ ಇದೆ. ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆಗಳಲ್ಲಿ ಬರೆಯಲು ಇದು ಬಳಕೆ ಆಗುತ್ತದೆ.ಇಂತಹ ಪೆನ್‌ಗಳಿಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಇದೆ. ಇದನ್ನು ಬಳಸಲೇಬೇಕಾಗಿ ಏನೂ ಇಲ್ಲ.

ಇದರಲ್ಲಿ ಎರಡು ಸಿಮ್ ಕಾರ್ಡ್‌ಗಳಿಗೆ ಜಾಗ ಇದೆ. ಒಂದು ಸಿಮ್‌ನಲ್ಲಿ ಮಾತ್ರ 3ಜಿ ಸಿಮ್ ಕಾರ್ಡ್ ಹಾಕಬಹುದು. ಇನ್ನೊಂದರಲ್ಲಿ ಕೇವಲ 2ಜಿ ಸಿಮ್ ಕಾರ್ಡ್ ಬಳಸಬಹುದು. ಕಾರ್ಬನ್ ಕಂಪೆನಿಯದೇ ಮತ್ತು ಸರಿಸುಮಾರು ಇದೇ ಸಮಯದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಟ್ಯಾಬ್ಲೆಟ್‌ನಲ್ಲಿ ಆಂಡ್ರೋಯಿಡ್ ಆವೃತ್ತಿ 4.1 ಬಳಸಲಾಗಿದೆ. ಅದರ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಆಂಡ್ರೋಯಿಡ್ 4.1ರಲ್ಲಿ ಕನ್ನಡದ ರೆಂಡರಿಂಗ್ ಇದೆ. ಈ ಕಾರ್ಬನ್ ಎ30ರಲ್ಲಿ ಆಂಡ್ರೋಯಿಡ್ 4.0.4 ಬಳಕೆಯಾಗಿದೆ. ಈ ಆವೃತ್ತಿಯ ಆಂಡ್ರೋಯಿಡ್‌ನಲ್ಲಿ ಕನ್ನಡ ರೆಂಡರಿಂಗ್ ಇಲ್ಲ. ಅಂದರೆ ಕನ್ನಡದ ಜಾಲತಾಣ, ಇಮೇಲ್, ಎಸ್‌ಎಂಎಸ್, ಇತ್ಯಾದಿಗಳನ್ನು ಓದಲು ಸಾಧ್ಯವಿಲ್ಲ. ಕನ್ನಡ ಪಠ್ಯಗಳು ಖಾಲಿ ಚೌಕಗಳಂತೆ ಕಂಡುಬರುತ್ತದೆ.ಗ್ಯಾಜೆಟ್ ಸಲಹೆ

ಶಿವಪ್ರಸಾದರ ಪ್ರಶ್ನೆ:
ನನಗೆ ಡಿಟಿಎಚ್ ಕೊಳ್ಳಬೇಕಾಗಿದೆ. ಅದರ ಪೆಟ್ಟಿಗೆಯಲ್ಲಿ ಪೆನ್ ಡ್ರೈವ್ (ಯುಎಸ್‌ಬಿ ಡ್ರೈವ್) ಹಾಕಲು ಕಿಂಡಿ ಇದ್ದು, ಅದಕ್ಕೆ ಎಂದರೆ ಯುಎಸ್‌ಬಿ ಡ್ರೈವ್‌ಗೆ ರೆಕಾರ್ಡಿಂಗ್ ಮಾಡಿಕೊಳ್ಳುವ ಸೌಲಭ್ಯ ಬೇಕು. ಯಾವ ಡಿಟಿಎಚ್‌ನಲ್ಲಿ ಈ ಸೌಲಭ್ಯ ಇದೆ?ಉ: ಎರಡು ವಾರ ಹಿಂದೆ ಡಿಟಿಎಚ್ ಕೊಳ್ಳಲು ಮಾರುಕಟ್ಟೆ ಸಮೀಕ್ಷೆ ನಡೆಸಿದಾಗ ನನ್ನಲ್ಲೂ ಇದೇ ಪ್ರಶ್ನೆ ಇತ್ತು. ಕೆಲವು ಡಿಟಿಎಚ್‌ಗಳಲ್ಲಿ ಯುಎಸ್‌ಬಿ ಡ್ರೈವ್ ಹಾಕಿ ಅದರಿಂದ ಪ್ಲೇ ಮಾಡುವ ಸೌಲಭ್ಯ ಇದೆ. ಆದರೆ ರೆಕಾರ್ಡಿಂಗ್ ಸೌಲಭ್ಯ ಇಲ್ಲ. ರೆಕಾರ್ಡಿಂಗ್ ಏನಿದ್ದರೂ ಡಿಟಿಎಚ್ ಪೆಟ್ಟಿಗೆಯಲ್ಲೇ ಅಡಕವಾಗಿರುವ ಹಾರ್ಡ್‌ಡಿಸ್ಕ್‌ಗೆ ಮಾತ್ರ. ಅದನ್ನು ಬೇರೆ ಸ್ಥಳಕ್ಕೆ ಪ್ರತಿ ಮಾಡಿಕೊಳ್ಳುವಂತಿಲ್ಲ. ಇದಕ್ಕೆ ಪ್ರಮುಖ ಕಾರಣ ಹಾಗೆ ಮಾಡುವುದರಿಂದ ಹಕ್ಕುಸ್ವಾಮ್ಯದ ಉಲ್ಲಂಘನೆ ಆದಂತಾಗುತ್ತದೆ ಎಂಬುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry