ಕಾಸೊಂದ ನೀಡು ಶಿವನೇ...

7

ಕಾಸೊಂದ ನೀಡು ಶಿವನೇ...

Published:
Updated:
ಕಾಸೊಂದ ನೀಡು ಶಿವನೇ...

ಬೆಲೆ ಏರಿಕೆ ಬಿಸಿ ಗಣೇಶನ ಹಬ್ಬಕ್ಕೆ ತಟ್ಟಿದೆಯೇ? ಎಂದು ಸಂಪಾದಕರು ಪೆಕರನನ್ನು ಪ್ರಶ್ನಿಸಿದರು. ಜನಸಾಮಾನ್ಯರಿಗೆ ತಟ್ಟಿದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ, ಢುಂಢಿ ಗಣೇಶನಿಗಂತೂ ಬಿಸಿ ತಟ್ಟಿದೆ. ಅದನ್ನು ಬರೆದ ಪುಣ್ಯಾತ್ಮನನ್ನೂ ಸಾಹಿತಿಗಳು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಟೀಕಿಸುವ ಭರಾಟೆ ಎಲ್ಲಿಯವರೆಗೆ ಮುಟ್ಟಿದೆ ಅಂದರೆ, ಬಹಿಷ್ಕಾರ ಬೇಕಾ, ಟೀಕೆ ಬೇಕಾ, ನಿಷೇಧ ಸರಿಯಾ ಎಂದು ಸಾಹಿತಿ, ಸಾಹಿತಿಗಳೇ ರಸ್ತೆಯಲ್ಲಿ ನಿಂತು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಪೆಕರ ವರದಿ ಒಪ್ಪಿಸಿದ. ಅಯ್ಯ ಅವರ ಆಸ್ಥಾನ ಸಾಹಿತಿಗಳು ಇನ್ನೂ ಬಾಯಿಬಿಟ್ಟಿಲ್ಲ ಸಾರ್ ಎಂದೂ ಒಗ್ಗರಣೆ ಹಾಕಿದ.`ಹೋಗ್ಲಿ ಬಿಡ್ರಿ, ಪಾಪ, ಸಾಹಿತಿಗಳು ಗರಿಗರಿ ಇಸ್ತ್ರಿ ಹಾಕಿದ ಬಟ್ಟೆ ಹಾಕ್ಕೊಂಡು ವಿಧಾನಸೌಧ ರೋಡಿನಲ್ಲಿ ಓಡಾಡಿದ್ರೆ, ಅಕಾಡೆಮಿ, ನಿಗಮ ನೇಮಕ ಹತ್ರ ಬಂತು ಅಂತ ಟೀಕೆ ಮಾಡ್ತೀರಿ. ಅದೆಲ್ಲಾ ಬೇಡ, ಸಾಹಿತಿಗಳನ್ನು ಪಾಪ ಅವರ ಪಾಡಿಗೆ ಅವರನ್ನು ಬಿಡಿ, ಈಗ ಊರಿನಲ್ಲಿ ಸ್ವಲ್ಪ ಓಡಾಡಿ, ಬೆಲೆ ಏರಿಕೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಒಂದು ವಿಶೇಷ ವರದಿ ಬರೆಯಿರಿ. ಮನಮೋಹನ ಸಿಂಗ್ರೂ, ಅಯ್ಯಾ ಅವರೂ ಸ್ವಲ್ಪ ಓದಿ, ಜನರ ಸಂಕಷ್ಟ ತಿಳಿದುಕೊಳ್ಳಲಿ' ಎಂದು ಸಂಪಾದಕರು ಪೆಕರನಿಗೆ ಕೆಲಸ ಹಚ್ಚಿದರು.ತಕ್ಷಣ ಕಾರ್ಯಪ್ರವೃತ್ತನಾದ ಪೆಕರ, ಬೀದಿಗಿಳಿದೇ ಬಿಟ್ಟ. ಚಿಕ್ಕಪೇಟೆ ಸರ್ಕಲ್‌ನಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಜನ ಹಬ್ಬದ ಸರಕು ಕೊಳ್ಳಲು ತಡಕಾಡುತ್ತಿದ್ದರೆ, ಕಾರ್ನರ್‌ನಲ್ಲಿ ನಿಂತ ಆಸಾಮಿಯೊಬ್ಬ ಜೋರಾಗಿ ಹಾಡುತ್ತಿದ್ದ:

ಓ, ಅಯ್ಯ, ದಮ್ಮಯ್ಯ

ಧರ್ಮಾನೇ ತಾಯಿ-ತಂದೆ

ಕಾಸೊಂದ ನೀಡು ಶಿವನೇ

ನಾ ಕಳ್ಳನಾಗಲಾರೆ, ನಾ ಸುಳ್ಳನಾಗಲಾರೆ

ಧರ್ಮಾವ ನೀಡು ಶಿವನೇಪೆಕರ, ಶಿವ ಶಿವಾ ಎಂದು ಕಿವಿ ಮಚ್ಚಿಕೊಂಡ. `ರೀ, ಸ್ವಾಮೀ, ಗಣೇಶನ ಹಬ್ಬದ ದಿನಾ ಹಾಡೋ ಹಾಡೇನ್ರಿ ಇದು? ಬೆಗ್ಗರ್‌ಸಾಂಗ್‌ನ ಇಷ್ಟು ಧೈರ್ಯವಾಗಿ ನಾಲ್ಕು ರಸ್ತೆ ಸೇರೋ ಜಾಗದಲ್ಲಿ ನಿಂತು ಹಾಡ್ತಾ ಇದೀರಲ್ರಿ? ದೇವರ‌್ನ ಎದುರು ಕೂರಿಸಿಕೊಂಡು ಏನ್ ಬೇಕಾದ್ರೂ ಹಾಡೋ ಆರ್ಕೇಸ್ಟ್ರಾ ತರಹ ಆಯ್ತಲ್ರೀ ನಿಮ್ಮ ಕೇಸು' ಎಂದು ಗದರಿದ ಪೆಕರ ತಾನೊಂದು ಬಾಣ ಬಿಟ್ಟ. `ನೋಡ್ರಿ, ಉದಯಶಂಕರ್ ಕಾಲ ಬಿಟ್ಟು ಯೋಗರಾಜ್ ಭಟ್ಟರ ಕಾಲಕ್ಕೆ ಬನ್ನಿ,

ಒಂಟಿಯಾಗಿ ಹೋಗುತ್ತಿದ್ದೆ ರಸ್ತೆಯಲ್ಲಿ

ಅರ್ಧ ಲೀಟರ್ ಪೆಟ್ರೋಲ್ ಇತ್ತು

ಗಾಡಿಯಲ್ಲಿ...ನೋಡಿ ಈ ತರಹ ಹಾಡಬೇಕು. ಅರ್ಧ ಲೀಟರ್ ಪೆಟ್ರೋಲ್‌ನಲ್ಲೇ ಎಲ್ಲೆಂದರಲ್ಲಿ ಹೋಗಬಹುದು. ಇದು ಮಾಡ್ರನ್ ಬೆಗ್ಗರ್‌ಗಳ ಶೈಲಿ, ಈ ಕಾಲ್ದಲ್ಲಿ ಹೀಗೆ ಹಾಡಿದ್ರೇನೇ ಕ್ಲಿಕ್ ಆಗೋದು' ಎಂದು ಪೆಕರ ಐಡಿಯಾ ಕೊಟ್ಟ. ಪೆಕರನ ಐಡಿಯಾದಿಂದ ಕುಪಿತನಾದ ಕಾಮನ್‌ಮ್ಯಾನ್, `ರೀ ಸ್ವಾಮಿ ನಾನೇನ್ ಬೆಗ್ಗರ್ ತರಾ ಕಾಣ್ತಿದ್ದೀನಾ? ಸೈಕೋ ಶಂಕರ್ ತರಹ ಕಾಣ್ತಾ ಇದೀನಾ? ಸರ್ಕಾರ ನಮ್ಮನ್ನು ಬೆಗ್ಗರ್ ಮಾಡಲು ಹೊರಟಿದೆ ಅಂತ ಹೇಳ್ತಾ ಇದೀನಿ. ಅರ್ಥ ಮಾಡ್ಕೊಳ್ರೀ, ಪೆಟ್ರೋಲ್ ಬೆಲೆ ಗಗನಕ್ಕೆ, ಅಕ್ಕಿ ಬೆಲೆ ಗಗನಕ್ಕೆ, ಚಿನ್ನ ಬೆಳ್ಳಿ ಗಗನಕ್ಕೆ, ಹಾಲಿನ ಬೆಲೆ ಮತ್ತೆ ಮೇಲಕ್ಕೆ, ಈರುಳ್ಳಿ ಬೆಲೆ ಆಕಾಶಕ್ಕೆ, ಡಾಲರ್ ಮೌಲ್ಯ ಮೇಲಕ್ಕೆ ಹೀಗೆ ಎಲ್ಲವೂ ಗಗನಮುಖಿ ಆದ್ರೆ ನಾವೆಲ್ಲಾ ಎಲ್ಲಿ ಬದುಕಬೇಕ್ರೀ ಸ್ವಾಮಿ, ನಾವೂ ಮೇಲಕ್ಕೇ ಹೋಗಬೇಕಾಗುತ್ತೆ ಅಷ್ಟೇ, ಅದಕ್ಕೇ ಕಾಸೊಂದ ನೀಡು ಶಿವನೇ ಎಂದು ಗೋಳಾಡ್ತಾ ಇದ್ರೆ, ನನ್ನನ್ನ ಭಿಕ್ಷುಕ ಮಾಡಿಬಿಟ್ಟಿರಲ್ರೀ?' ಎಂದು ಪೆಕರನನ್ನು ದಬಾಯಿಸಿದ.`ಶಿವನ ಹತ್ರ ಎಲ್ಲಿದೆ ಸ್ವಾಮಿ ದುಡ್ಡು? ದೇವರ ಚಿನ್ನವನ್ನೂ ಅಡವಿಡುವ ಕಾರ್ಯಕ್ರಮ ಆರಂಭವಾಗಿರೋದು ಗೊತ್ತಿಲ್ವೇ? ತಿರುಪತಿ ತಿಮ್ಮಪ್ಪನ ಚಿನ್ನವೆಲ್ಲಾ ಈಗ ಅಡಮಾನಕ್ಕೆ ಹೋಗುತ್ತೆ. ಲೋಕಲ್‌ನಲ್ಲಿ ಮಾನ ಹೋಗೋದಲ್ದೆ ಇಂಟರ್‌ನ್ಯಾಷನಲ್‌ನಲ್ಲೂ ಮಾನ ಹೋಗ್ತಿದೆ. ಅದಕ್ಕೇ, ಕಾಸೊಂದ ನೀಡು ಶಿವನೇ ಅಂತ ಹಾಡ್ಬೇಡಿ, ಖಾಲಿಕ್ವಾಟ್ರು ಬಾಟ್ಲು ಇದ್ದಂಗೆ ಲೈಫು ಅಂತ ಹಾಡಿ ವೈನಾಗಿದ್ದು ಬಿಡಿ' ಎಂದು ಪೆಕರ ಅಡ್ವೈಸ್ ಮಾಡಿದ.`ಅಯ್ಯೋ ಬಿಡಿ ಸ್ವಾಮಿ, ರೂಪಾಯಿಗೆ ಈಗ ಚಿಕ್ಕಾಸಿನ ಬೆಲೆಯೂ ಇಲ್ಲ. ಪಾತಾಳಕ್ಕೆ ಬಿದ್ದುಬಿಟ್ಟಿರೋದು ಗೊತ್ತಿಲ್ವಾ?'

`ಮೂವತ್ತು ಅಡಿ ಮೇಲಿಂದ ಹಾರಿ ಬಿದ್ದ ಸೈಕೋನನ್ನೇ ಹಿಡಿದು ಕಟ್ಟಿಹಾಕಿದ್ದಾರೆ. ಪಾತಾಳಕ್ಕೆ ಬಿದ್ದ ಡಾಲರನ್ನು ರಘುರಾಂ ಗೋವಿಂದರಾಜನ್ ಎತ್ತಿಕೊಂಡು ಬರಲಾರರೇ? ಸ್ವಲ್ಪ ಕಾದು ನೋಡಿ ಸ್ವಾಮಿ' ಎಂದು ಪೆಕರ, ಅವನನ್ನು ಸಮಾಧಾನಿಸಿದ.`ಏನ್ ಗೋವಿಂದಾನೋ, ಏನ್ ರಾಜನೋ, ನಮ್ ರೂಪಾಯಿಗೆ ಥೈಲೆಂಡ್‌ನಲ್ಲೂ ಬೆಲೆ ಇಲ್ವಂತೆ ಸ್ವಾಮಿ, ಭಾರತದ ರೂಪಾಯಿ ತರಬೇಡಿ, ಡಾಲರ್ ಹಿಡ್ಕಂಡು ಬಂದ್ರೆ ಮಾತ್ರ ನಿಮಗೆ ಊಟ, ಇಲ್ಲದಿದ್ದರೆ ಟಾಟಾ ಎಂದು ಚಪ್ಪನ್ನೈವತ್ತಾರು ರಾಷ್ಟ್ರಗಳವರು ವೀಸಾ ಕೊಡುವಾಗಲೇ ಫರ್ಮಾನು ಗೂಸಾ ಕೊಡ್ತಾರಂತಲ್ಲಾ, ಇದಕ್ಕೇನ್ನಂತೀರಾ ಮನಮೋಹನೇಶ್ವರಾ?' ಎಂದು ಶ್ರೀಸಾಮಾನ್ಯ ಪೆಕರನನ್ನೇ ಪ್ರಶ್ನಿಸಿದ.

`ಸ್ವಲ್ಪ ತಡೀರಿ, ಮಾರಸ್ವಾಮಿಗಳು, ಹಂಬರೀಷು ಸೇರಿದಂತೆ 32 ಶಾಸಕರು ಆಸ್ತಿ ವಿವರ ಕೊಟ್ಟಿಲ್ವಂತೆ. ಇವರುಗಳ ಮನೇಲಿರೋ ಚಿನ್ನ ಅಡವಿಟ್ಟರೆ ರಾಜ್ಯದ ಅರ್ಧ ಆರ್ಥಿಕ ಸಮಸ್ಯೆ ಬಗೆಹರಿಯಬಹುದು. ಸ್ವಲ್ಪ ಕಾದುನೋಡಿ' ಎಂದು ಪೆಕರ ಭವಿಷ್ಯ ನುಡಿದ.`ಏನ್ ಕಾಯೋದು ಸ್ವಾಮಿ? ಮುಂದಿನ ತಿಂಗಳು ರಾಜ್ಯ ಸರ್ಕಾರಕ್ಕೆ ಕಂಟಕ ಬರುತ್ತದೆ, ಅಯ್ಯ ಸರ್ಕಾರಕ್ಕೆ ಆರೇ ತಿಂಗಳು ಆಯಸ್ಸು ಎಂದು ಕೋಡಿಮಠದ ಭವಿಷ್ಯ ಹೇಳ್ತಾ ಇದೆಯಂತಲ್ಲಾ ಸ್ವಾಮಿ, ಮತ್ತೆಲ್ಲಿ ಕಾಯೋದು?' ಎಂದು ಅಲ್ಲಿ ಸೇರಿದ್ದ ಮತ್ತೊಬ್ಬ ಕಿಲಾಡಿ ಪ್ರಶ್ನಿಸಿಯೇ ಬಿಟ್ಟ.

`ಕರ್ನಾಟಕಕ್ಕೆ ರಾಹುಲ್ ಭಂಟರ ಆಗಮನ ನೋಡಿ ಕೋಡಿಮಠದವರು ಹೀಗೆ ಹೇಳಿರಬಹುದು. ಬೈ ಎಲೆಕ್ಷನ್‌ನಲ್ಲಿ ಎರಡು ಸೀಟು ಹೊಡ್ಕಂಡು, ಜೊತೆಗೇ ಹಂಡ್ರೆಡ್ ಡೇಸ್ ಮಾಡ್ಕಂಡು ಅಯ್ಯ ಅವರು ಬೆಂಗಳೂರಲ್ಲಿ ಖುಷಿ ಖುಷಿಯಾಗಿ ಅಡ್ಡಾಡ್ತಾ ಇದ್ರೆ ಡಿಕುಶಿ ಮಾರ ಅವರು ದೆಹಲಿಗೆ ದೌಡಾಯಿಸಿ, ನನ್ನಿಂದಲೇ..... ನನ್ನಿಂದಲೇ, ಗೆಲುವೆಲ್ಲಾ ನನ್ನಿಂದಲೇ ಎಂದು ಹೈಕಮಾಂಡ್ ಮುಂದೆ ಭಜನೆ ಆರಂಭಿಸಿಬಿಟ್ಟರಂತೆ.

ಡಾಜಿಪ ಅವರೂ ನನ್ನಿಂದಲೇ ಎಂದು ತೋಡಿರಾಗ, ಆದಿತಾಳದಲ್ಲಿ ಡೆಪ್ಯುಟಿ... ಡೆಪ್ಯುಟಿ... ಡೆಪ್ಯುಟಿ ಎಂದು ಹಾಡಲಾರಂಭಿಸಿದ್ದಾರಂತೆ. ಜನಪ್ರಿಯ ಕಾರ್ಯಕ್ರಮಗಳಿಗೆ ವಾರಸುದಾರರು ನಾ ಮುಂದೆ, ತಾ ಮುಂದು ಅಂತ ಬರ‌ತಾ ಇದ್ದಾರೆ. ಇಷ್ಟು ಅಡ್ಡಿಗಳಿದ್ದರೆ ಸರ್ಕಾರಕ್ಕೆ ಕಂಟಕ ಎಂದು, ರೋಡ್‌ನಲ್ಲಿರೋ ಗಿಳಿಶಾಸ್ತ್ರದವನೂ ಹೇಳ್ತಾನೆ ಬಿಡಿ' ಎಂದು ಪೆಕರ ವಿವರಣೆ ನೀಡಿದ.`ನಮ್ಮ ಅಯ್ಯ ಅವರು ಕಿಲಾಡಿ ಬಿಡಿ ಸಾರ್, ಈ ತರಹ ಶಾಸ್ತ್ರ ಹೇಳುವವರಿಗೆ ಮೂಗುದಾರ ಹಾಕಲು ಮೌಢ್ಯ ನಿಷೇಧ ಕಾಯ್ದೆ ತರೋದಿಕ್ಕೆ ಹೊರಟಿದ್ದಾರೆ, ಆಮೇಲೆ ರಾಜಕೀಯ ರಂಗದಲ್ಲಿ ಬದಲಾವಣೆ ಆಗಲು ಹೇಗೆ ಸಾಧ್ಯ? ಕೋಡಿಮಠದ ಶಾಸ್ತ್ರಕ್ಕೆ ಕಳ್ಳೇಪುರಿ ತಿನ್ನಿಸ್ತಾರೆ ನೋಡ್ತಾ ಇರಿ' ಎಂದು ಜನ ಚಾಲೆಂಜ್ ಮಾಡಿದರು. `ನೀವೆಲ್ಲಾ ಭಾರೀ ಇದ್ದೀರಾ ಬಿಡ್ರಿ' ಎಂದು ಹೇಳುತ್ತಾ ಪೆಕರ ಮುಂದೆ ನಡೆದ.

-ಜಿಎಮ್ಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry