ಭಾನುವಾರ, ಮೇ 16, 2021
22 °C

`ಕೀಲಿಂಗ್ ಕರ್ವ್' ನಲ್ಲಿ ಭೂಮಿಯ ಪಿಸುಮಾತು

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

`ಕೀಲಿಂಗ್ ಕರ್ವ್' ನಲ್ಲಿ ಭೂಮಿಯ ಪಿಸುಮಾತು

ವಾಸನೆ ಇಲ್ಲ, ಆಕಾರ ಇಲ್ಲ, ಬಣ್ಣ ಇಲ್ಲ, ರುಚಿ ಇಲ್ಲ. ಇಂಗಾಲದ ಡೈಆಕ್ಸೈಡ್ ನಮ್ಮ ಸುತ್ತ ಇದೆ ಅಂತೇನೇ ನಮಗೆ ಗೊತ್ತಾಗುವುದಿಲ್ಲ. ಹಿಂದೆಲ್ಲ ಸಂತೆಯಲ್ಲಿ, ಜಾತ್ರೆಯಲ್ಲಿ ಗೋಲಿಸೋಡಾ ಮಾರುವವರ ಮೂಲಕ ಅದರ ಸದ್ದು ನಮಗೆ ಕೇಳುತ್ತಿತ್ತು. ದಪ್ಪ ಬಾಟಲಿಯ ಗೋಲಿಬಿರಡೆಯನ್ನು ಜೋರಾಗಿ ಒತ್ತಿದಾಗ ಒಳಗೆ ಒತ್ತಡದಲ್ಲಿದ್ದ ಇಂಗಾಲದ (ಕಾರ್ಬನ್) ಡೈಆಕ್ಸೈಡ್ ಅನಿಲ ಕೇಕೆ ಹಾಕುತ್ತ ನೊರೆಗುಳ್ಳೆಗಳ ರೂಪದಲ್ಲಿ ಹೊರಬರುತ್ತಿತ್ತು.

ಈಗಿನ ಪೀಳಿಗೆಗೆ ಈ ಅನಿಲದ ಸದ್ದೂ ಕೇಳುವುದಿಲ್ಲ. ಚರಂಡಿ ಸ್ವಚ್ಛ ಮಾಡಲೆಂದು ಕಾರ್ಮಿಕರು ಇಳಿದರೆ ಅಲ್ಲಿರುವ ಈ ಅನಿಲವನ್ನು ಉಸಿರಾಡುತ್ತಲೇ ಕ್ರಮೇಣ ಎಚ್ಚರದಪ್ಪಿ ಸತ್ತೇ ಹೋಗುತ್ತಾರೆ. ಅದು ಸುದ್ದಿಯೂ ಆಗುವುದಿಲ್ಲ. ಅದೆಷ್ಟೊ ದುರ್ದೈವಿಗಳು ಹೀಗೆ ಕಾರ್ಬನ್ ಡೈಆಕ್ಸೈಡ್ ಅನಿಲದಿಂದ ಸಾಯುತ್ತಿದ್ದರೂ ಲೆಕ್ಕ ಇಡುವವರಿಲ್ಲ.ಈ ಅಗೋಚರ ಅನಿಲ ಈಗ ಪೃಥ್ವಿಮಟ್ಟದ ಸುದ್ದಿ ಮಾಡುತ್ತಿದೆ. ವಾಯುಮಂಡಲದಲ್ಲಿ ಇಂಗಾಲದ ಡೈಆಕ್ಸೈಡ್(co2) ಅನಿಲದ ಮಟ್ಟ `400 ಪಿಪಿಎಮ್ ತಲುಪಿತು' ಎಂದು ವಿಜ್ಞಾನಿಗಳು ಕಳೆದ ವಾರ ಘೋಷಿಸಿದ್ದಾರೆ (ಪಿಪಿಎಮ್ ಅಂದರೆ ಪಾರ್ಟ್ಸ್ ಪರ್ ಮಿಲಿಯನ್-ದಶಲಕ್ಷದಲ್ಲಿ ಇಂತಿಷ್ಟು ಭಾಗ; ಅದರ ಅರ್ಥ ನಮ್ಮ ವಾತಾವರಣದಲ್ಲಿ ಶೇಕಡಾ 0.04ರಷ್ಟು ಕಾರ್ಬನ್ ಡೈಆಕ್ಸೈಡ್ ಇದೆ ಅಂತ). `ಅಯ್ಯ್ ಅಷ್ಟು ಕಮ್ಮೀನಾ?' ಅಂತ ಕೇಳಬೇಡಿ. ಭೂಮಿಯ ಮಟ್ಟಿಗೆ ಅದು ಹೊಸ ದಾಖಲೆಯೇ ಸರಿ. ಹಿಂದೆ, ಅಂದರೆ ಸುಮಾರು 45 ಲಕ್ಷ ವರ್ಷಗಳ ಮೊದಲು ಹೀಗಾಗಿತ್ತು. ಭೂಮಿಗೆ ಆಗ ಜ್ವರ ಬಂದಿತ್ತು.

ಆಗಿನ್ನೂ ಮನುಷ್ಯರು ಈ ಭೂಮಿಯ ಮೇಲೆ ಓಡಾಡುತ್ತಿರಲಿಲ್ಲ. ಆದರೆ ಇಂಗಾಲದ ಡೈಆಕ್ಸೈಡನ್ನು ಕಕ್ಕುವ ಇತರ ಜೀವಕೋಟಿಗಳಿದ್ದವು. ಜ್ವಾಲಾಮುಖಿಗಳಿಂದಲೂ ಇಂಗಾಲದ ಹೊಗೆ ಹೊಮ್ಮುತ್ತಿತ್ತು. ಇದರಿಂದಾಗಿ ವಾಯುಮಂಡಲ ತೀರ ಬಿಸಿಯಾಗಿ, ಹಿಮದ ಹಾಸುಗಳೆಲ್ಲ ಕರಗಿ ಸಮುದ್ರ ಮಟ್ಟ 20-30 ಮೀಟರ್ ಮೇಲಕ್ಕೇರಿತ್ತು. ವಾತಾವರಣದಲ್ಲಿನ ಅಷ್ಟೊಂದು ಪ್ರಮಾಣದ ಇಂಗಾಲದ ಡೈಆಕ್ಸೈಡನ್ನು ಹೀರಿ ತೆಗೆಯಲೆಂದು ಪೃಥ್ವಿಯೇ ಎಲ್ಲೆಂದರಲ್ಲಿ ಗಿಡಮರಗಳನ್ನು ಬೆಳೆಸತೊಡಗಿತ್ತು.

ದಕ್ಷಿಣದಲ್ಲಿ ಅಂಟಾರ್ಕ್ಟಿಕಾದ ಅಂಚಿನಿಂದ ಹಿಡಿದು ಉತ್ತರದಲ್ಲಿ ಆರ್ಕ್ಟಿಕ್ ವೃತ್ತದವರೆಗೂ ಅರಣ್ಯಗಳು ವ್ಯಾಪಿಸಿದವು. ಆ ಅರಣ್ಯಗಳೇ ಇಂಗಾಲದ ಗಟ್ಟಿಗಳಾಗಿ ಭೂಮಿಯೊಳಗೆ ಸೇರಿದ್ದವು. ಅವೇ ಕ್ರಮೇಣ ಕಲ್ಲಿದ್ದಲಾಗಿ, ಕಲ್ಲೆಣ್ಣೆಯಾಗಿ, ನೈಸರ್ಗಿಕ ಅನಿಲವಾಗಿ ಭೂಗರ್ಭಕ್ಕಿಳಿದವು. ವಾತಾವರಣದಲ್ಲಿ ಅತಿಯಾಗಿದ್ದ ಇಂಗಾಲ ಕ್ರಮೇಣ ಹೀಗೆ ಕಡಿಮೆಯಾಗಿ ಭೂಮಿಯ ಉದರ ಸೇರಿ ಭೂಜ್ವರ ಇಳಿದಿತ್ತು.ಈಗ ಮತ್ತೆ ಭೂಮಿಗೆ ಜ್ವರ ಏರುತ್ತಿದೆ. ಅದು ನೈಸರ್ಗಿಕ ಏರಿಕೆ ಅಲ್ಲ, ನಾವೇ ಏರಿಸಿದ್ದು ಎಂಬುದೂ ಖಚಿತವಾಗಿದೆ. ಹಿಂದಿನ ಬಾರಿ ಹೀಗೆ ಆದಾಗ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ತೀರ ನಿಧಾನವಾಗಿ ಏರುತ್ತಿತ್ತು. ಅನೇಕ ಲಕ್ಷ ವರ್ಷಗಳ ಅವಧಿಯಲ್ಲಿ ಕೋಟ್ಯಂತರ ಪ್ರಾಣಿಪಕ್ಷಿಗಳು, ಜ್ವಾಲಾಮುಖಿಗಳು ಈ ಅನಿಲವನ್ನು ವಿಸರ್ಜಿಸಿದ್ದರಿಂದ ಸಿಓಟು 400 ಪಿಪಿಎಮ್ ಮುಟ್ಟಿತ್ತು. ನಾವು ಕಳೆದ ಕೇವಲ ನೂರು ವರ್ಷಗಳಲ್ಲಿ ಅದನ್ನು ಸಾಧಿಸಿದ್ದೇವೆ.

ವ್ಯಂಗ್ಯ ಏನೆಂದರೆ ಆಗ ಭೂಮಿ ತನ್ನ ವಾಯುಮಂಡಲದಿಂದ ಹೀರಿ ತೆಗೆದು ಶಿಲಾಸ್ತರಗಳಲ್ಲಿ ಬಂಧಿಸಿ ಇಟ್ಟಿದ್ದನ್ನೇ ಈಗ ನಾವು ಯಂತ್ರಗಳ ಮೂಲಕ ಹೊರಕ್ಕೆ ತೆಗೆದು ಅದರಿಂದ ಅಸಂಖ್ಯ ಯಂತ್ರಗಳನ್ನು ಓಡಿಸುತ್ತ ಭೂಮಿಗೆ ಮತ್ತೆ ತಲೆಬಿಸಿ ಉಂಟುಮಾಡುತ್ತಿದ್ದೇವೆ. ಭೂಮಿಯ ನೆತ್ತಿಯ ಮೇಲಿನ ಹಿಮಪದರವೆಲ್ಲ ತ್ವರಿತವಾಗಿ ಕರಗುತ್ತಿದೆ.ಯಾರಿಗೂ ಕಾಣದ, ಯಾರ ಅನುಭವಕ್ಕೂ ಬಾರದ ಈ ವಿಷಾನಿಲ ನಮ್ಮ ವಾಯುಮಂಡಲದಲ್ಲಿ ಏರುತ್ತಿದೆ ಎಂಬುದು ಯಾರಿಗೆ ಹೇಗೆ ಗೊತ್ತಾಯಿತು? 1950ರ ದಶಕದಲ್ಲಿ ಎಂಥದೊ ಪ್ರೇರಣೆ ಬಂದಂತೆ ಚಾರ್ಲ್ಸ್ ಕೀಲಿಂಗ್ ಎಂಬ ಪಿಯಾನೊ ಹುಚ್ಚಿನ ಯುವಕ  ಕ್ಯಾಲಿಫೋರ್ನಿಯಾದಲ್ಲಿ ಭೂವಿಜ್ಞಾನ ಓದುತ್ತಿದ್ದಾಗ ಗಾಳಿಯಲ್ಲಿನ ಕಾರ್ಬನ್ ಡೈಆಕ್ಸೈಡ್ ಅಳೆಯಲು ಹೊರಟ. ಅಲ್ಲಿ ಇಲ್ಲಿ ಅಳೆಯುತ್ತ, ಅದೇ ಒಂದು ಗೀಳಾಗಿ ಗುಡ್ಡ ಬೆಟ್ಟಗಳಲ್ಲೆಲ್ಲ ಅಳೆಯುತ್ತ ಹೋದ.

ಆಗ ಲಭ್ಯವಿದ್ದ ಉಪಕರಣ ಅಷ್ಟೇನೂ ನಿಖರ ಇಲ್ಲವೆಂದು ತಾನೇ ಒಂದು ಹೊಸ ಸಾಧನವನ್ನು ತಯಾರಿಸಿದ. ಅದನ್ನು ಹಿಡಿದು ಎ.ಕೆ. ರಾಮಾನುಜನ್ನರ ಇಂಚುಹುಳದ ಹಾಗೆ ಕೀಲಿಂಗ್ ಅಲ್ಲಿ ಇಲ್ಲಿ, ಕಂಡಕಂಡಲ್ಲಿ ಸಿಓಟುವನ್ನು ಅಳೆಯುತ್ತ ಹೋದಾಗ ಒಂದು ಸಮಸ್ಯೆ ಹುಟ್ಟಿಕೊಂಡಿತು: ಸ್ಯಾನ್ ಫ್ರಾನ್ಸಿಸ್ಕೊ ನಗರದ ಕಡೆಯಿಂದ ಗಾಳಿ ಬೀಸಿದಾಗಲೆಲ್ಲ ಈತನ ಸಾಧನದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಏರುತ್ತಿತ್ತು. ಲೆಕ್ಕ ಹೆಚ್ಚುಕಮ್ಮಿ ಆಗುತ್ತಿತ್ತು.ಮನುಷ್ಯ ಸಂಪರ್ಕವೇ ಇಲ್ಲದ ದೂರದ ಹವಾಯಿ ದ್ವೀಪಕ್ಕೆ 1958ರಲ್ಲಿ ಹೋಗಿ ಅಲ್ಲಿನ ಮೌನಾ ಲೋವಾ ಎಂಬ ಜ್ವಾಲಾಮುಖಿ ದಿಬ್ಬದ ಮೇಲೆ ಕೀಲಿಂಗ್ ತನ್ನ ಸ್ವಯಂಚಾಲಿತ ಉಪಕರಣವನ್ನು ಸ್ಥಾಪಿಸಿದ. ಋತುಗಳು ಬದಲಾದ ಹಾಗೆ ಪೃಥ್ವಿಯ ಒಟ್ಟಾರೆ ಸಿಓಟು ಪ್ರಮಾಣ ಹೇಗೆ ಏರಿಳಿತ ಕಾಣುತ್ತದೆ ಎಂಬುದರ ಬಗ್ಗೆ ಡಾಕ್ಟರೇಟ್ ಪ್ರಬಂಧ ಬರೆದ. ಆಗ ಆತನಿಗೆ ತನ್ನ ಆಲೇಖದಲ್ಲಿ ಒಂದು ಹೊಸ ಸಂಗತಿ ಕಂಡು ಬಂತು. ಹಿಂದಿನ ನಾಲ್ಕಾರು ವರ್ಷಗಳಲ್ಲಿ ವಾಯುಮಂಡಲದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ವಾರ್ಷಿಕ ಸರಾಸರಿಗಿಂತ ಮೆಲ್ಲಗೆ ಏರುತ್ತಿರುವುದು ಗೊತ್ತಾಯಿತು.

ಅದು 310 ಪಿಪಿಎಮ್ ಇದ್ದುದು, 311, 312, 313 ಆಗತೊಡಗಿತ್ತು. ಅದನ್ನು ವರದಿ ಮಾಡಿದರೂ ವಿಜ್ಞಾನಿಗಳು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಮೆರಿಕ ಸರಕಾರದ ಗಮನ ಚಂದ್ರಲೋಕದ ಕಡೆ ಇದ್ದುದರಿಂದ ಅದಕ್ಕೇನೂ ಆಸಕ್ತಿ ಇರಲಿಲ್ಲ. ಇಂಥ ಚಿಲ್ಲರೆ ಸಂಗತಿಯ ಬಗ್ಗೆ ಹಣ ವ್ಯಯಿಸುವುದೂ ಅದಕ್ಕೆ ಬೇಕಿರಲಿಲ್ಲ. ಕೀಲಿಂಗ್‌ಗೆ ಹವಾಯಿಗೆ ಹೋಗಿ ಬರುವ ವೆಚ್ಚದ ಅನುದಾನವನ್ನೂ ನಿಲ್ಲಿಸಿತು. ಖಾಸಗಿ ಸಂಸ್ಥೆಗಳೂ `ಇದರಿಂದ ಯಾರಿಗೇನು ಪ್ರಯೋಜನ?' ಎಂದು ಕೇಳಿ ಧನಸಹಾಯವನ್ನು ನಿರಾಕರಿಸಿದವು.ಕೀಲಿಂಗ್ ಮತ್ತು ಆತನ ಗೈಡ್ ಡಾ. ರೆವೆಲ್ ಮಾತ್ರ ತಮ್ಮ ಛಲ ಬಿಡಲಿಲ್ಲ.ಬೇರೆ ಯಾವುದೋ ಸಂಶೋಧನೆಗೆ ಲಭಿಸಿದ ಹಣವನ್ನು ಇತ್ತ ತಿರುಗಿಸಿ, ಮೌನಾ ಲೋವಾ ಸಾಧನವನ್ನು ಜೀವಂತ ಇಟ್ಟರು. ಸಿಓಟು ಅಂಕಿಗಳು 320ನ್ನೂ ದಾಟಿ ಮೆಲ್ಲಗೆ ಏರುತ್ತಲೇ ಇದ್ದವು.ವಿಜ್ಞಾನಿಗಳ ಸಭೆಗಳಲ್ಲಿ ಮತ್ತೆ ಮತ್ತೆ ಈ ವಿಚಾರವನ್ನು ಮಂಡಿಸಿದ ಕೀಲಿಂಗ್‌ಗೆ ಕ್ರಮೇಣ ಬೆಂಬಲಿಗರು ಸಿಕ್ಕರು. ಭೂಮಿಯ ಇತರ ಕೆಲವು ಖಂಡಗಳಲ್ಲಿನ ಅಂಥದದ್ದೇ ಸಲಕರಣೆಗಳಲ್ಲೂ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಏರುತ್ತಿದ್ದುದು ಸ್ಪಷ್ಟ ಕಾಣತೊಡಗಿತು.

ಏಳು ವರ್ಷಗಳ ನಂತರ ಅಮೆರಿಕದ ಅಧ್ಯಕ್ಷರ ವಿಜ್ಞಾನ ಸಲಹಾ ಮಂಡಲಿ ಇದನ್ನು ಗಂಭೀರವಾಗಿ ಪರಿಗಣಿಸಿತು. ಕೀಲಿಂಗ್ ಸ್ಥಾಪಿಸಿದ ಹವಾಯಿಯ ಸಲಕರಣೆಯನ್ನು ಸರಕಾರ ತಾನೇ ನಿರ್ವಹಿಸಲು ಒಪ್ಪಿಕೊಂಡಿತು. ಸಿಓಟು ಪ್ರಮಾಣ ಹೆಚ್ಚುತ್ತ ಹೋದಂತೆಲ್ಲ ಭೂಮಿಯ ಸರಾಸರಿ ತಾಪಮಾನವೂ ಏರುತ್ತದೆ ಎಂಬುದು 1980ರ ವೇಳೆಗೆ ವಿಜ್ಞಾನಲೋಕಕ್ಕೆ ಖಚಿತವಾಗಿ ಗೊತ್ತಾಗಿತ್ತು. ಕಲ್ಲಿದ್ದಲು, ಪೆಟ್ರೋಲನ್ನು ಸುಡುವುದರಿಂದಲೇ ಸಿಓಟು ಏರುತ್ತದೆ, ಭೂಮಿ ಬಿಸಿಯಾಗುತ್ತಿದೆ ಎಂಬುದನ್ನು ಮೊದಮೊದಲು ಒಪ್ಪಿಕೊಳ್ಳಲು ಯಾರೂ ತಯಾರಿರಲಿಲ್ಲ.

ಹಾಗೆ ಸಂಬಂಧ ಕಲ್ಪಿಸಬಲ್ಲ ಸಂಶೋಧನೆಗಳಿಗೆ ಧನಸಹಾಯ ಸಿಗುವುದೂ ಕಷ್ಟವಾಗುತ್ತಿತ್ತು. ಆದರೆ ಸತ್ಯ ಸಂಗತಿಯನ್ನು ದೀರ್ಘಕಾಲ ಮುಚ್ಚಿಡುವುದು ಸಾಧ್ಯವಿಲ್ಲ ತಾನೆ? ಕ್ರಮೇಣ ಕೀಲಿಂಗ್ ಉಪಕರಣದಲ್ಲಿನ ಅಂಕಿಗಳು ಏರುತ್ತ ಹೋದ ಹಾಗೆ ಕೀಲಿಂಗ್‌ಗೆ ಪ್ರಶಸ್ತಿ, ಸಮ್ಮೋನಗಳೂ ಬರತೊಡಗಿದವು. ಇಂಗಾಲದ ಡೈಆಕ್ಸೈಡ್ ಏರಿಕೆಯನ್ನು ರೂಪಿಸುವ ಆತನ ಆಲೇಖ `ಕೀಲಿಂಗ್ ಕರ್ವ್' ಎಂದೇ ಪ್ರಖ್ಯಾತವಾಯಿತು. ವಾಷಿಂಗ್ಟನ್‌ನ ಒಂದು ಪ್ರಸಿದ್ಧ ಕಟ್ಟಡದ ಮೇಲೆ ಅದನ್ನೇ ಶಿಲ್ಪದಂತೆ ಅಚ್ಚು ಮೂಡಿಸಲಾಯಿತು. 2005ರ ಜೂನ್ 20ರಂದು ಆತ ವಿಧಿವಶನಾಗುವ ಹೊತ್ತಿಗೆ ಕಾರ್ಬನ್ ಡೈಆಕ್ಸೈಡ್ ಮಟ್ಟ 380ಕ್ಕೆ ಏರಿತ್ತು. ಇನ್ನೂ ಹೆಚ್ಚಿನ ಏರಿಕೆ ಆಗದಂತೆ ಅದನ್ನು ಹೇಗೆ ತಡೆಗಟ್ಟಬೇಕು ಎಂಬ ವಿಷಯದಲ್ಲಿ ರಾಷ್ಟ್ರರಾಷ್ಟ್ರಗಳ ನಡುವಣ ಜಗಳಕ್ಕೂ ಕಾವೇರತೊಡಗಿತ್ತು.400 ಮುಟ್ಟಿದಾಕ್ಷಣ ಪೃಥ್ವಿಯ ಮೇಲೆ ಏನೂ ಮಹಾ ಸ್ಥಿತ್ಯಂತರ ಆಗುವುದಿಲ್ಲ. ನಾವು ಗಾಡಿ ಓಡಿಸುವಾಗ ಮೈಲೇಜ್ ಮೀಟರ್ 97-98-99 ತೋರಿಸಿ 100ನ್ನು ತೋರಿಸಿದಾಕ್ಷಣ ಏನೂ ಅಪಘಾತ ಆಗುವುದಿಲ್ಲ. ಅದು ಒಂದು ಮಜಲು ಅಷ್ಟೆ. ಸುಲಭದಲ್ಲಿ ನೆನಪಿನಲ್ಲಿ ಉಳಿಯಬಲ್ಲ ನಂಬರ್. ವಾತಾವರಣ ಬದಲಾವಣೆಯ ಸಂಕೇತಗಳು ಕಳೆದ ಇಪ್ಪತ್ತು ವರ್ಷಗಳಿಂದ ಜಾಸ್ತಿ ಜಾಸ್ತಿ ಕಾಣುತ್ತಲೇ ಇವೆ.ಹಠಾತ್ ಮಹಾಪೂರ, ಪದೇಪದೇ ಚಂಡಮಾರುತ, ಪ್ರಚಂಡ ಬೇಸಿಗೆ, ಭೀಕರ ಚಳಿ, ಅನಿರೀಕ್ಷಿತ ಮೇಘಸ್ಫೋಟ, ಭೀಕರ ಕಾಳ್ಗಿಚ್ಚು ಇವೇ ಮುಂತಾದ ಘಟನೆಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ.

ಆದರೂ ಮುತ್ಸದ್ದಿಗಳೆಲ್ಲ ತಂತಮ್ಮ ಇಂದಿನ ರಾಜಕೀಯದ ಸಿಕ್ಕುಗಳಲ್ಲಿ ಸಿಲುಕಿದ್ದಾರೆ. ಇಡೀ ಭೂಮಂಡಲದ ಒಟ್ಟಾರೆ ಸ್ಥಿತಿಗತಿಯ ಬಗ್ಗೆ ಚಿಂತಿಸಲು ಬಿಡುವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. `ವಿಶ್ವ ಪರಿಸರ ದಿನ' ಬಂದರೇನು, `ಭೂ ದಿನ' ಬಂದರೇನು, `ಸಾಗರ ಉಕ್ಕೇರಲಿದೆ, ಮರುಭೂಮಿ ವಿಸ್ತರಿಸಲಿದೆ' ಎಂದು ವಿಜ್ಞಾನಿಗಳು ಎಷ್ಟು ಅಂಕಿಸಂಖ್ಯೆ ತೋರಿಸಿದರೇನು ಇವರಿಗೆ ಯಾವುದೂ ತಟ್ಟುವುದಿಲ್ಲ.45 ಲಕ್ಷ ವರ್ಷಗಳ ಹಿಂದೆ ಭೂಮಿಗೆ ಮುತ್ಸದ್ದಿಗಳ ಮರ್ಜಿ ಇರಲಿಲ್ಲ. ವಾಯುಮಂಡಲದಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚಾದರೆ ಪೃಥ್ವಿಯೇ ತಾನಾಗಿ ಲಕ್ಷೋಪಲಕ್ಷ ಗಿಡಮರಗಳನ್ನು ಬೆಳೆಸಿ ಎಲ್ಲ ಇಂಗಾಲವನ್ನೂ ಹೀರಿ ತೆಗೆಯುತ್ತಿತ್ತು. ಇಂದು ಅದು ದಟ್ಟ ಅರಣ್ಯ ಬೆಳೆಸಲು ಹೋದರೆ ಮನುಷ್ಯ ಅಲ್ಲಿ ಬುಲ್‌ಡೋಝರ್ ಓಡಿಸಿ ಭತ್ತ, ಗೋಧಿ, ಸೋಯಾ ಬೆಳೆಸುತ್ತಾನೆ. ಈ ಪೈರುಗಳ ಹುಲ್ಲುಕಡ್ಡಿ ಕೂಡ ನೆಲಕ್ಕೆ ಸೇರದಂತೆ ದನಗಳಿಗೆ ತಿನ್ನಿಸಿ ತಾನು ಹಾಲು ಬೆಣ್ಣೆ ಸೇವಿಸುತ್ತಾನೆ.

ಸೆಗಣಿ ಗಂಜಳವನ್ನು ಹಾಗೇ ಕೊಳೆಯಲು ಬಿಟ್ಟು ವಾತಾವರಣ ಇನ್ನಷ್ಟು ಬಿಸಿಯಾಗುವಂತೆ ಮಾಡುತ್ತಾನೆ. ನಾವು ಭೂಮಿಯ ಕೈಕಾಲು ಕಟ್ಟಿ ಕೂರಿಸಿದ್ದೇವೆ. ಆದರೆ ಎಲ್ಲೋ ಒಬ್ಬ ಕೀಲಿಂಗ್ ಮೂಲಕ, ಎಲ್ಲೋ ಒಬ್ಬಳು ವಂಗಾರಿ ಮಥಾಯ್ ಮೂಲಕ ಪೃಥ್ವಿ ತನ್ನ ಸಂಕಟವನ್ನು ಎತ್ತಿ ತೋರಿಸುತ್ತಿದೆ. ಜನಸಾಮಾನ್ಯರು ತಾವೇ ಪರಿಸರ ರಕ್ಷಣೆಯ ದೀಕ್ಷೆ ತೊಟ್ಟು ಕೈಲಾದಮಟ್ಟಿಗೆ ಸುಸ್ಥಿರ ಬದುಕನ್ನು ನಡೆಸಲು ಯತ್ನಿಸುತ್ತಾರೆ.

ಚೀನಾದ ತಂತ್ರಜ್ಞರು ಅತಿ ಕಡಿಮೆ ಬೆಲೆಯಲ್ಲಿ ಸೌರ ವಿದ್ಯುತ್ ಫಲಕಗಳನ್ನು ತಯಾರಿಸಿ ಯುರೋಪ್, ಅಮೆರಿಕ, ಕೊಲ್ಲಿ ರಾಷ್ಟ್ರಗಳ ಪೆಟ್ರೊದೊರೆಗಳಿಗೆ ಸವಾಲು ಹಾಕತೊಡಗಿದ್ದಾರೆ. ಅಮೆರಿಕದ ತೈಲ ಖಜಾನೆ ಎಂದೇ ಹೆಸರುವಾಸಿಯಾದ ಟೆಕ್ಸಾಸ್‌ನ ಎಲ್ ಪ್ಯಾಸೊ ಎಂಬಲ್ಲಿ ಸೌರಶಕ್ತಿಯಿಂದಲೇ ಬದುಕಲು ನಿರ್ಧರಿಸಿದ ಒಂದು ಸಮುದಾಯ ರೂಪುಗೊಳ್ಳುತ್ತಿದೆ.ಆದರೆ ತೈಲದ ಬಿಗಿಮುಷ್ಟಿಯಿಂದ ಬಿಡುಗಡೆ ಸುಲಭವೆ? 400 ತಲುಪಿದ ಸಿಓಟು ಸೂಚ್ಯಂಕವನ್ನು ಮತ್ತೆ ಕೆಳಕ್ಕೆ ತರಬೇಕೆಂದರೆ ಕಲ್ಲಿದ್ದಲು ಮತ್ತು ತೈಲದ ಬಳಕೆ ಶೇಕಡಾ 50-60ರಷ್ಟು ತಗ್ಗಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗೆಂದು ಕೀಲಿಂಗ್ ಕರ್ವ್  ನೋಡಿ ನಮ್ಮ ವೇಗ ತಗ್ಗೀತೆ? ಇತ್ತ ಗೋದಾವರಿ ತೀರದಲ್ಲಿ ಅಂಬಾನಿಯವರ ತೈಲಬಾವಿಯಲ್ಲಿ ಕಳೆದ ವಾರ ಹೊಸ ನಿಕ್ಷೇಪ ಕಂಡಿದ್ದೇ ತಡ, ಷೇರು ಪೇಟೆಯ ಸೂಚ್ಯಂಕ ಹಠಾತ್ ಮೇಲಕ್ಕೆ ಚಿಮ್ಮಿತಲ್ಲ!

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.