ಶನಿವಾರ, ಡಿಸೆಂಬರ್ 14, 2019
25 °C

ಕುಡುಕರಿಗೆ ರುಕ್ಮಿಣಿಬಾಯಿಯ ‘ಬಡಿಗೆ’ ಸೇವೆ!

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಕುಡುಕರಿಗೆ ರುಕ್ಮಿಣಿಬಾಯಿಯ ‘ಬಡಿಗೆ’ ಸೇವೆ!

ಭಾರತ ದೇಶದ ತಳ ಸಮುದಾಯಕ್ಕೆ ಎಲ್ಲೋ ಒಂದು ಕಡೆ ತಮ್ಮ ಹಳೆಯ ಕಹಿನೆನಪು, ನೋವು, ಅವಮಾನಗಳನ್ನು ಮರೆಯಲು ಔಷಧಿಯಾಗಿ ಕಂಡ ಮದ್ಯ ಇಂದು ವಾಸಿಯಾಗದ ರೋಗವಾಗಿ ಪರಿಣಮಿಸಿದೆ.

ಈ ರೋಗ ದಿನೇ ದಿನೇ ಉಲ್ಬಣಿಸುತ್ತಿದೆ. ಬಾಳುವವರನ್ನು ಸಾವಿನ ಮನೆಗೆ ದೂಡುತ್ತಿದೆ. ಇದನ್ನು ನೋಡಿ ರೋಸಿ ಹೋಗಿದ್ದ ಅರವತ್ತೈದು ವರ್ಷದ ರುಕ್ಮಿಣಿಬಾಯಿ ಒಂದು ದಿನ ಕೈಗೆ ಸಿಕ್ಕ ಬಡಿಗೆಯನ್ನು ತೆಗೆದುಕೊಂಡರು. ಕುಡಿದು ಬಂದು ಹೆಂಡತಿಗೆ ಹೊಡೆಯುತ್ತಿದ್ದವನನ್ನು ಹಿಡಿದು ಚೆನ್ನಾಗಿ ಚಚ್ಚಿದರು. ಉಳಿದ ಮಹಿಳೆಯರೂ ಜೊತೆಯಾದರು. ಆತ ಏಟು ತಾಳಲಾರದೆ ಕತ್ತಲೆಯಲ್ಲಿ ಕಾಣೆಯಾದನು!

ರುಕ್ಮಿಣಿಬಾಯಿ ಕಾಂಬ್ಳೆ ದಿಟ್ಟತನ, ಆತ್ಮಬಲ ಉಳ್ಳವರು. ನೊಂದವರ ಕಣ್ಣೀರು ಒರೆಸುವ ತಾಯಿ ಗುಣದವರು. ಸಮುದಾಯದ ಹಿತಕ್ಕಾಗಿ ತಮ್ಮ ನೋವನ್ನು ದೊಡ್ಡದು ಮಾಡದೆ ಮದ್ಯಪಾನದ ವಿರುದ್ಧ ಹೋರಾಟವನ್ನು ಮುನ್ನಡೆಸಿದವರು.

ಇವರ ಹೋರಾಟದಿಂದಾಗಿ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಜವಳಗಾ (ಜೆ) ಗ್ರಾಮದ ಭೀಮನಗರದಲ್ಲಿ ಏಳು ವರ್ಷಗಳು ಮದ್ಯಪಾನ ಮತ್ತು ಮಾರಾಟ ಎರಡೂ ಗಡಿಪಾರಾಗಿದ್ದವು. ದಲಿತರೇ ವಾಸಿಸುವ ಈ ಗ್ರಾಮದಲ್ಲಿ  ಹೆಂಗಸರು, ಮಕ್ಕಳು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದರು. ಇವರು ಕಾನೂನು ಪದವಿ ಪಡೆದವರಲ್ಲ. ಆದರೆ, ‘ನಾರಿ ಅದಾಲತ್‌’ ಮೂಲಕ ಅಕ್ರಮ ಮದ್ಯ ಮಾರಾಟ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಾದ ಕಾನೂನು ಅರಿವು ಹೊಂದಿರುವವರು. ಶಾಲೆಯ ಮುಖವನ್ನೇ ನೋಡದ ಇವರಿಗೆ ಸಮಾಜವೇ ಪಾಠ ಹೇಳಿಕೊಟ್ಟಿದೆ.

ಭೀಮನಗರದಲ್ಲಿ ಮೂರು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಗಂಡಸರು ಕೈಗೆ ಹಣ ಸಿಕ್ಕಿದ ಕೂಡಲೇ ನಶೆ ಏರಿಸಿಕೊಳ್ಳುತ್ತಿದ್ದರು. ಹಣ ಸಾಲದೇ ಹೋದಾಗ ಮನೆಯಲ್ಲಿದ್ದ ತೊಗರಿಬೇಳೆ, ಜೋಳ, ಬೆಲೆ ಬಾಳುವ ವಸ್ತುಗಳನ್ನು ಮಾರುತ್ತಿದ್ದರು. ಅದೂ ಸಾಲದೇ ಹೋದರೆ ಪತ್ನಿ, ತಾಯಿಯ ಮೇಲೆ ಹಲ್ಲೆ ಮಾಡಿ ಹಣ ಕಸಿದುಕೊಳ್ಳುತ್ತಿದ್ದರು. ಚಿಗುರುಮೀಸೆಯ ಹುಡುಗರು ಮದ್ಯದ ದಾಸರಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ನೋಡುತ್ತಿದ್ದ ರುಕ್ಮಿಣಿಬಾಯಿಗೆ ಮನಸ್ಸು ತಡೆಯಲಿಲ್ಲ. ಕೇರಿಯ ಮಹಿಳೆಯರನ್ನು ಸೇರಿಸಿಕೊಂಡು ‘ಮಹಿಳಾ ಸಂಘ’ವನ್ನು ಸ್ಥಾಪಿಸಿದರು. ಒಗ್ಗಟ್ಟು ಧೈರ್ಯವನ್ನು ತಂದುಕೊಟ್ಟಿತು.

‘ಬಡಿಗೆ ಸೇವೆ’ ಕೆಲಸ ಮಾಡಿದ ಪರಿಗೆ ಮಹಿಳಾ ತಂಡ ವಿಸ್ಮಯಗೊಂಡಿತು. ಮುಂದೆ ರುಕ್ಮಿಣಿಬಾಯಿ ಮತ್ತು ಗೌಳನಬಾಯಿ ಬಡಿಗೆ ಹಿಡಿದು ಕೇರಿಯಲ್ಲಿ ರಾತ್ರಿ ಗಸ್ತು ತಿರುಗತೊಡಗಿದರು. ಕುಡಿದು ಬರುವವರಿಗೆ ಬಡಿಯುತ್ತಿದ್ದರು. ಮನೆ ಸೇರಿಕೊಂಡವರನ್ನು ಹೊಡೆದು ಹೊರ ದಬ್ಬುತ್ತಿದ್ದರು. ರುಕ್ಮಿಣಿಬಾಯಿ, ಗೌಳನಬಾಯಿ ಜೋಡಿ ಬಡಿಗೆ ಹಿಡಿದು ಹೊರಟರೆ ಕುಡುಕರು ಕಣ್ಮರೆಯಾಗುತ್ತಿದ್ದರು!

ಕುಡುಕರಿಗೆ ಭಯ ಹುಟ್ಟಿಸಿದ ಇವರು ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದರು. ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿತು. ಪಟ್ಟುಬಿಡದೆ ಕೇರಿಯಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.ರುಕ್ಮಿಣಿಬಾಯಿಯ ‘ಬಡಿಗೆ ಸೇವೆ’ ಜವಳಗಾ (ಜೆ) ಗ್ರಾಮದಲ್ಲಿ ದೊಡ್ಡ ಸುದ್ದಿ ಆಯಿತು. ಕೇರಿಯವರು ಕುಡಿಯುವುದರಿಂದ ದೂರವೇ ಉಳಿದರು. ಆದರೆ ಗ್ರಾಮದಲ್ಲಿ ಮದ್ಯವನ್ನು ಮಾರಲಾಗುತ್ತಿತ್ತು. ಇವರ ಕಣ್ಣು ಅಲ್ಲಿಗೂ ಬಿದ್ದಿತು. ರಾತ್ರಿ 10 ರಿಂದ 12 ಗಂಟೆ ತನಕ ರುಕ್ಮಿಣಿಬಾಯಿ–ಗೌಳನಬಾಯಿ ಬಡಿಗೆ ಹಿಡಿದು ಗಸ್ತಿಗೆ ಹೊರಟರು. ಬಯಲಿನಲ್ಲಿ ‘ಪಾರ್ಟಿ’ ಮಾಡುತ್ತಾ ಕುಳಿತಿದ್ದ ಏಳೆಂಟು ಹುಡುಗರು ಕಾಣಿಸಿದರು. ಇವರು ಬಡಿಗೆಯನ್ನು ಬೀಸಿದ  ಬಿರುಸಿಗೆ ಹೆದರಿ ದಿಕ್ಕಾಪಾಲು ಓಡಿಹೋದರು.ಇನ್ನೊಂದು ಪ್ರಸಂಗ ಹೀಗಿದೆ: ಅವರು ಕಟ್ಟು ಮಸ್ತಾದ ವ್ಯಕ್ತಿ. ಪ್ಯಾಂಟಿನ ಎರಡೂ ಕಿಸೆಗಳಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಬೈಕಿನಲ್ಲಿ ಹೊರಡಲು ಮುಂದಾಗಿದ್ದರು. ಇದನ್ನು ಅರಿತ ರುಕ್ಮಿಣಿಬಾಯಿ, ಅವರನ್ನು ತಡೆದು ಜೇಬಿಗೆ ಕೈ ಹಾಕಿ ಬಾಟಲಿಗಳನ್ನು ತೆಗೆದುಕೊಂಡರು. ಮದ್ಯ ಮಾರಾಟ ಮಾಡಿದವರು ವ್ಯಕ್ತಿಯ ಬೆಂಬಲಕ್ಕೆ ನಿಂತರು. ಆದರೂ ಇವರು ಬಗ್ಗಲಿಲ್ಲ. ಒರಟು ಮುಖದ ವ್ಯಕ್ತಿ ಬುಸುಗುಡುತ್ತಲೇ ಜಾಗ ಖಾಲಿ ಮಾಡಿದರು. ಆಮೇಲೆ ತಿಳಿಯಿತು–ಆ ವ್ಯಕ್ತಿ ನಿವೃತ್ತ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಎಂದು!

‘ರಾತ್ರಿ ಗಸ್ತು ತಿರುಗುವಾಗ ಹೆಚ್ಚು ಕಡಿಮೆ ಆಗಿದ್ದರೆ’ ಆತಂಕದಿಂದಲೇ ಕೇಳಿದೆ.

‘ಜೀವ ಹೋದ್ರೆ ಹೋಗೊಲ್ಯಾಕ. ಎಂದಿದ್ರೂ ಹೋಗೇಬೇಕಲ್ಲ. ಹೆಣ್ಣು ಮಕ್ಕಳ ತ್ರಾಸ ಕಡಿಮಿ ಆದ್ರ ಸಾಕು’ ಎಂದು ನಿರುಮ್ಮಳವಾಗಿ ಹೇಳಿದರು. ಹೋರಾಟವನ್ನು ಹಾಳು ಮಾಡಲು ಪಟ್ಟಭದ್ರರು ಎಲ್ಲ ಅಸ್ತ್ರಗಳನ್ನು ಬಳಸುತ್ತಾರೆ. ಮಾದಕ ವಸ್ತುಗಳ ವಿರುದ್ಧ ಸಮರ ಸಾರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಮಗನನ್ನೇ ವ್ಯಸನಿಯನ್ನಾಗಿ ಮಾಡುವ ಕಥೆಯನ್ನು ಸಿನಿಮಾದಲ್ಲಿ ನೋಡುತ್ತೇವೆ. ಅದೇ ರೀತಿ ಇಲ್ಲಿಯೂ ಆಯಿತು.ರುಕ್ಮಿಣಿಬಾಯಿಯ ಮಗ ಪೂನಾದಲ್ಲಿದ್ದನು. ಅವನು ಊರಿಗೆ ಬಂದಿದ್ದನು. ಅವನನ್ನು ಬುಟ್ಟಿಗೆ ಹಾಕಿಕೊಂಡ ಮದ್ಯ ಮಾರುವವರು ಕುಡಿಯಲು ಕೊಟ್ಟರು. ತಾಯಿ ವಿರುದ್ಧವೇ ಎತ್ತಿಕಟ್ಟಿದರು. ಅತಿಯಾದ ನಶೆಯಲ್ಲಿದ್ದ ಮಗ ತಾಯಿಯೊಂದಿಗೆ ಜಗಳ ತೆಗೆದು ‘ನೀ ದಾರು (ಮದ್ಯ) ಬಂದ್ ಮಾಡೋ ಜಿದ್ದಿಗೆ ಬೀಳಬ್ಯಾಡ’ ಎಂದು ತಾಕೀತು ಮಾಡಿದನು. ತಾಯಿ ಮಗನಿಗೆ ಚೆನ್ನಾಗಿ ಉಗಿದಳು. ಇದರಿಂದ ರೊಚ್ಚೆಗೆದ್ದು ಮನೆಗೆ ಬೆಂಕಿ ಇಟ್ಟನು. ಕೂಡಲೇ ಅಕ್ಕಪಕ್ಕದವರು ಬೆಂಕಿ ನಂದಿಸಿದರು. ಇದರಿಂದ ನೊಂದುಕೊಂಡ ತಾಯಿ, ಮಗನೊಂದಿಗೆ ಸಂಬಂಧ ಕಡಿದುಕೊಂಡರು. ಜೊತೆಗಾರ್ತಿ ಗೌಳನಬಾಯಿಯೂ ಬದುಕಿಲ್ಲ. ವಿಧವೆ ರುಕ್ಮಿಣಿಬಾಯಿ ಈಗ ಏಕಾಂಗಿ.

ಭಾವನಾತ್ಮಕ ಅಸ್ತ್ರಕ್ಕೆ ರುಕ್ಮಿಣಿಬಾಯಿ ಸೋಲಲಿಲ್ಲ. ಮತ್ತೊಂದು ಅಸ್ತ್ರ ಪ್ರಯೋಗವಾಯಿತು. ಗೊತ್ತಿರುವವರೇ ಮದುವೆಗೆ ಕರೆದು ಸೀರೆ ಉಡಿಸಿ ‘ಮರ್ಯಾದೆ’ ಮಾಡಿದರು. ಇದು ಸೋಜಿಗವೆನಿಸಿತು. ಏಕೆಂದರೆ ಅವರು ಊರಿನಲ್ಲಿ ಮದ್ಯ ಮಾರಾಟ ಮಾಡುವವರು. ರುಕ್ಮಿಣಿಬಾಯಿ ಇಂಥ ‘ಮರ್ಯಾದೆ’ಗೆ ಸಮುದಾಯದ ಹಿತವನ್ನು ಮಾರಿಕೊಳ್ಳುವಷ್ಟು ಸಣ್ಣವರಾಗಿರಲಿಲ್ಲ. ಮರುದಿನವೇ ಬಡಿಗೆ ಹಿಡಿದು ಅದೇ ಅಂಗಡಿ ಮುಂದೆ ಪ್ರತ್ಯಕ್ಷರಾಗಿದ್ದರು!ಕಾಮಧೇನು ಮಹಿಳಾ ಒಕ್ಕೂಟದ ಸಂಚಾಲಕಿ  ಚಂದ್ರಕಲಾ ಅವರ ಸಲಹೆಯಂತೆ ರುಕ್ಮಿಣಿಬಾಯಿ ಗ್ರಾಮ ಪಂಚಾಯಿತಿ ಚುನಾವಣೆಗೆ ‘ಸಾಮಾನ್ಯ’ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದರು. ಆದರೆ, ಮತ್ತೊಮ್ಮೆ ತಮ್ಮದೇ ಕೇರಿಯಲ್ಲಿ ‘ಮೀಸಲು’ ಕ್ಷೇತ್ರದಲ್ಲಿ ನಿಂತು ಬಿದ್ದರು. ಏಕೆ ಎನ್ನುವುದನ್ನು ರುಕ್ಮಿಣಿಬಾಯಿ ತಮಾಷೆಯಾಗಿ ಹೇಳುವುದು ಹೀಗೆ:‘ದಾರು ಕುಡಿಯೋರಿಗೆ ಬಡಿಗೆ ಸೇವೆ ಮಾಡುತ್ತಿದ್ದೆ. ದಾರು ದುಖಾನ್‌ಗಳನ್ನು ಬಂದ್‌ ಮಾಡಿಸಿದೆ. ಅದಕಾ ಈ ನೀಚ ಹೆಂಗಸು ಗೆದಿಯೋದು ಬ್ಯಾಡವೆಂದು ಬೀಳಿಸಿದ್ರು’ ಎಂದು ನಕ್ಕರು. ನಗುವಿನಲ್ಲಿ ನೋವಿತ್ತು.‘ಇದು ನನ್ನೊಬ್ಬಳ ಕಥಿ ಅಲ್ಲ; ಹಳ್ಳಿಗಳಲ್ಲಿ ಹೋರಾಡೋ ಎಲ್ಲ ಹೆಣ್ಣು ಮಕ್ಕಳ ಕಥಿಯೂ ಖರೇ' ಎಂದರು. ಹಲವರ ಕಥೆಗಳನ್ನು ಕೇಳಿದ್ದ ನನಗೆ ಇವರ ಮಾತನ್ನು ಅಲ್ಲೆಗಳೆಯಲು ಆಗಲಿಲ್ಲ.

ಮದ್ಯಪಾನದ ವಿರುದ್ಧದ ಧ್ವನಿ ಏಕೆ ದೊಡ್ಡ ಹೋರಾಟವಾಗಿ ರೂಪುಗೊಳ್ಳುವುದಿಲ್ಲ? ಏಕೆಂದರೆ, ಮಹಿಳೆಯರು ತಮ್ಮದೇ ಮನೆಯ ಗಂಡಸರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದನ್ನು ‘ನಮ್ಮ ಸಮಾಜ’ ಒಪ್ಪುವುದಿಲ್ಲ. ಮಧ್ಯಮ ವರ್ಗದ ಜನರು ‘ಕುಟುಂಬದ ಗೌರವ'ದ ಭಯದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಆದರೆ ಬಡ, ಶೋಷಿತ ಮತ್ತು ತಳ ಸಮುದಾಯದ ಮಹಿಳೆಯರ ಬದುಕು ಹೆಚ್ಚು ಕಡಿಮೆ ಬೀದಿಯಲ್ಲೇ ಇರುತ್ತದೆ. ಹೀಗಾಗಿ ಇವರು ಅಂಜುವುದಿಲ್ಲ. ಇದರಿಂದ ನೇರವಾಗಿ ತೊಂದರೆಗೆ ಒಳಗಾಗುವವರು ಇವರೇ. ಇಂಥವರಿಗೆ ನೋವು, ಅವಮಾನ, ಬಡತನವೇ ಹೋರಾಟದ ಪಾಠ ಹೇಳಿ ಕೊಡುತ್ತವೆ. ಇವರು ಯಾರೂ ಓದಿದವರಲ್ಲ, ಗಾಂಧೀಜಿಯ ಪಾನ ನಿಷೇಧದ ಬಗ್ಗೆ ತಿಳಿದವರಲ್ಲ. ಆದರೆ, ಇವರು ನೋವುಂಡ ಜನ.ನಾವು ಇದ್ದಲ್ಲಿಗೆ ಕೆಲವು ಯುವಕರು ಬಂದರು. ಕುತೂಹಲಕ್ಕಾಗಿ ರುಕ್ಮಿಣಿಬಾಯಿ ಬಗೆಗೆ ಕೇಳಿದೆ. ‘ಸಣ್ಣವರಿದ್ದಾಗ ರುಕ್ಕಾಯಿಗೆ ನೋಡಿ ಅಂಜಿ ಓಡಿ ಹೋಗುತ್ತಿದ್ದೆವು, ಈಗ ಇವಳೆಂದರೆ ನಮ್ಮಗೆಲ್ಲ ಅಭಿಮಾನ’ ಎಂದು ಒಬ್ಬ ಹೇಳಿದನು. ‘ನಮ್‌ ಕೇರಿಲಿ ಕುಡ್ದು ಸತ್ತರವನ್ನು ನೋಡೇವಿ. ರುಕ್ಕಾಯಿ ಮಾಡೊ ಕೆಸ್ಸ ಬರೋಬರಿ ಅದ. ನಾವು ಮಾತ್ರ ಕುಡಿತಕ್ಕೆ ದಾಸರಾಗೋದಿಲ್ಲ’ ಎಂದು ಇನ್ನೊಬ್ಬ ದೃಢವಾಗಿ ಹೇಳಿದನು.

‘ಊರಿನಲ್ಲಿ ದಾರು ಮಾರಾಟ ನಿಲ್ಲಿಸಲು ಆಗುತ್ತಿಲ್ಲ. ಅಲ್ಲಿ ದಾರು ಬಂದ್ ಮಾಡಲು ಊರಾನ ಹೆಣ್ಣಮಕ್ಕಳು ಸಾಥ್ ಕೊಡಲ್ಲ‘ ಎಂದು ಕೆಲವರು ಬೇಸರ ಮಾಡಿಕೊಂಡರು.

ಇನ್ನೂ ಸೂರ್ಯ ಪಶ್ಚಿಮದಲ್ಲಿ ಮರೆಯಾಗಿರಲಿಲ್ಲ. ನಾವು ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದೆವು. ಅವಸರದಲ್ಲಿ ಬಂದ ಮಹಿಳೆಯೊಬ್ಬರು ತನ್ನ ಗಂಡ ಕುಡಿದು ಪ್ರಜ್ಞೆ ಇಲ್ಲದೆ ಬಿದ್ದಿರುವ ಸುದ್ದಿಯನ್ನು ಮುಟ್ಟಿಸಿದಳು. ‘ಇಂಥ ಸುದ್ದಿ ಕೇಳಿದರೆ ನನಗೆ ನಿದ್ದಿ ಬರೋದಿಲ್ಲ. ಮನಸ್ಸು ಸುಮ್ಮನ ಕುಂಡರುವುದಿಲ್ಲ, ಕುಡಿದು ಸಣ್ಣ ವಯಸ್ಸಿನಾಗ ಹಾಳಾಗತ್ತವ’ ಎಂದ ರುಕ್ಮಿಣಿಬಾಯಿ ಬಡಿಗೆಯನ್ನು ಹಿಡಿದು ಆಕೆಯ ಹಿಂದೆಯೇ ಹೊರಟರು.‘ನಮ್ಮ ರೊಕ್ಕ, ನಮ್ಮ ಕಿಮ್ಮತ್ತು, ನಮ್ಮ ಜೀವ, ಇದು ಕೋಳೋಕ್ಕೆ ಆಕಿ ಯಾರೂ?– ಇದು ಕುಡುಕರು ಕೇಳುವ ಪ್ರಶ್ನೆ.

ಇಲ್ಲಿ ಸಮಾಜದ ಸ್ವಾಸ್ಥ್ಯ, ಘನತೆಯ ಬದುಕು ಇವೆಲ್ಲಕ್ಕಿಂತಲೂ ಮುಖ್ಯವಾಗುತ್ತವೆ.

ಪ್ರತಿಕ್ರಿಯಿಸಿ (+)