ಕೃತಜ್ಞತೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕೃತಜ್ಞತೆ

ಗುರುರಾಜ ಕರ್ಜಗಿ
Published:
Updated:

ನನ್ನ ಮಗ ನಚಿಕೇತ ಕಳುಹಿಸಿದ ಕಥೆ ಇದು. ಹೃದಯ ತಟ್ಟುವಂತಹದು. ಈ ಕಥೆ ಪೂನಾದ ಬಹುದೊಡ್ಡ ವ್ಯಾಪಾರಸ್ಥರಾದ ಝವೇರೆ ಪೂನಾವಾಲಾ ಅವರಿಗೆ ಸಂಬಂಧಿಸಿದ್ದು. ಪೂನಾವಾಲಾ ಆಗರ್ಭ ಶ್ರಿಮಂತರು.ಅವರ ಮನೆಯಲ್ಲಿ ಕಾರುಗಳೆಷ್ಟೋ. ಆದರೆ, ಅವರಿಗೆ ಅತ್ಯಂತ ಪ್ರಿಯವಾದದ್ದು ಒಂದು ಅತ್ಯಂತ ಐಷಾರಾಮಿ ಕಾರು. ಅದರ ವಿಶೇಷವೆಂದರೆ ಈ ಕಾರು ಮೊದಲು ಆಚಾರ್ಯ ರಜನೀಶ ಅವರು ಬಳಸಿದ್ದು. ಇದು ಅವರಿಗೂ ತುಂಬ ಪ್ರಿಯವಾಗಿತ್ತಂತೆ.

 

ಅವರು ಇದನ್ನು ಮಾರಬೇಕೆಂದಾಗ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಂಡರು ಪೂನಾವಾಲಾ. ಆ ಕಾರನ್ನು ಆಶ್ರಮದಿಂದ ತಂದವನು ಅವರ ಡ್ರೈವರ್ ಗಂಗಾದತ್ತ. ಆಗಿನ್ನೂ ಆತ ಹುಡುಗ.ಗಂಗಾದತ್ತ ಪೂನಾವಾಲಾ ಅವರ ಮೆಚ್ಚಿನ ಕಾರನ್ನೇ ಚಲಾಯಿಸುತ್ತಿದ್ದ. ಅದನ್ನು ತುಂಬ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ಮುಂದೆ ಮೂವತ್ತು ವರ್ಷಗಳ ಕಾಲ ಅವನೇ ಅದರ ಚಾಲಕ. ಮಾಲಿಕರು ಕಾರನ್ನು ಬದಲಿಸಲಿಲ್ಲ, ಅಂತೆಯೇ ಚಾಲಕನನ್ನು ಬದಲಿಸಲಿಲ್ಲ. ಇಬ್ಬರ ಬಗ್ಗೆಯೂ ಪೂನಾವಾಲಾರಿಗೆ ಅತೀವ ವಿಶ್ವಾಸ.ಇತ್ತೀಚೆಗೆ ಗಂಗಾದತ್ತನಿಗೆ ಹೃದಯಾಘಾತವಾಗಿ ತೀರಿಕೊಂಡ. ಆಗ ಕಾರ್ಯನಿಮಿತ್ತ ಪೂನಾವಾಲಾ ಅವರು ಮುಂಬೈನಲ್ಲಿದ್ದರು. ಗಂಗಾದತ್ತನ ಮಗ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಆಗ ಪೂನಾವಾಲಾ ಏನು ಮಾಡಿದರೆಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ.

 

ಅವರು ಗಂಗಾದತ್ತನ ಮಗನಿಗೆ ತಂದೆಯ ಅಂತ್ಯಕ್ರಿಯೆ  ಮಾಡಕೂಡದೆಂದೂ, ತಾವು ತೀವ್ರ ಪೂನಾಕ್ಕೆ ಮರಳುವುದಾಗಿಯೂ ಹೇಳಿದರು. ಆ ಸಮಯಕ್ಕೆ ತಕ್ಷಣಕ್ಕೆ ಪೂನಾಕ್ಕೆ ಹೋಗಲು ಯಾವ ವಿಮಾನವೂ ಇರಲಿಲ್ಲ. ಅವರೊಂದು ಹೆಲಿಕಾಪ್ಟರನ್ನು ಬಾಡಿಗೆ ತೆಗೆದುಕೊಂಡು ಹೊರಟು ಪೂನಾ ತಲುಪಿದರು.ತಾವು ತಲುಪುವ ಮೊದಲೇ ತಮ್ಮ ಮೆಚ್ಚಿನ, ಇದುವರೆಗೂ ಗಂಗಾದತ್ತ ನಡೆಸುತ್ತಿದ್ದ ಕಾರನ್ನು ಚೆನ್ನಾಗಿ ತೊಳೆದು, ಹೂವುಗಳಿಂದ ಅಲಂಕಾರಮಾಡುವಂತೆ ಮನೆಯ ಸೇವಕರಿಗೆ ಫೋನ್ ಮಾಡಿ ತಿಳಿಸಿದ್ದರು. ಮನೆ ಮುಟ್ಟಿದ ತಕ್ಷಣ ಅಲಂಕೃತ ಕಾರನ್ನು ತೆಗೆದುಕೊಂಡು ಗಂಗಾದತ್ತನ ಮನೆಗೆ ಹೋಗಿ ಅವನ ದೇಹವನ್ನು ಅದೇ ಕಾರಿನ ಮೇಲಿರಿಸಿಕೊಂಡು ಆ ಕಾರನ್ನು ತಾವೇ ನಡೆಸುತ್ತ ಸ್ಮಶಾನಕ್ಕೆ ಹೋದರು. ನಂತರ ಕ್ರಿಯೆಗಳು ನಡೆದವು.`ನೀವು ಏಕೆ ಹೀಗೆ ಮಾಡಿದಿರಿ~ ಎಂದು ಸ್ನೇಹಿತರು ಕೇಳಿದಾಗ ಝವೇರೆ ಪೂನಾವಾಲಾ ನೀಡಿದ ಉತ್ತರ ಮಾರ್ಮಿಕವಾಗಿದೆ. `ಗಂಗಾದತ್ತ ನನ್ನ ಹಾಗೂ ಕಾರಿನ ಸೇವೆಯನ್ನು ಮೂವತ್ತು ವರ್ಷಗಳ ಕಾಲ ಹಗಲು-ರಾತ್ರಿ ಮಾಡಿದ್ದಾನೆ. ಅವನಿಗೆ ಈ ಕೊನೆಯ ಸೇವೆ ಸಲ್ಲಿಸುವುದು ನನ್ನ ಕೃತಜ್ಞತೆಯ ಕುರುಹುವಾಗಿತ್ತು.ಗಂಗಾದತ್ತ ಪ್ರಾಮಾಣಿಕ, ಶ್ರದ್ಧಾವಂತ. ತುಂಬ ಬಡತನದಲ್ಲೇ ಬೆಳೆದಿದ್ದರೂ, ನಂತರ ಸ್ಥಿರವಾದ ಕೆಲಸ ಹೊಂದಿದ್ದರೂ ಬಡತನದಲ್ಲೇ ಅಸೆಬುರುಕತನ ತೋರದೇ, ಸಂಯಮದಿಂದ ಜೀವನ ನಡೆಸಿ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾನೆ. ಅವನ ಮಗಳು ಈಗ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾಳೆ.ಅದನ್ನು ಮೆಚ್ಚಿಕೊಳ್ಳಬೇಕಲ್ಲವೇ. ಇನ್ನೊಂದು ಮಾತನ್ನೂ ಪೂನಾವಾಲಾ ಹೇಳಿದರು.  ಎಲ್ಲರೂ ಹಣ ಮಾಡಲು ಪ್ರಯತ್ನ ಮಾಡುತ್ತಾರೆ. ಇದೇನೂ ವಿಶೇಷವಲ್ಲ. ಆದರೆ, ಹಣ ಮಾಡುವುದರ ಜೊತೆಗೆ ಮಾನವೀಯ ಗುಣಗಳನ್ನು ಮರೆಯದಿರುವುದು ಮುಖ್ಯ.

 

ನಮ್ಮ ಯಶಸ್ಸಿಗೆ ಕಾರಣರಾದವರು ಅವರು ಯಾರೇ ಆಗಿರಬಹುದು, ನಿಮ್ಮ ಮಾಲೀಕ, ಸ್ನೇಹಿತ, ಪತ್ನಿ, ಪತಿ, ಕೈಕೆಳಗೆ ಕೆಲಸ ಮಾಡುವವರು, ಮನೆಯಲ್ಲಿ ಸೇವೆ ಮಾಡುವವರು, ಅವರೆಲ್ಲ ನಿಮ್ಮ ಇಂದಿನ ಯಶಸ್ಸಿಗೆ ಕಾರಣರಾಗಿದ್ದಾರೆ. ಅದನ್ನು ಕೃತಜ್ಞತೆಯಿಂದ ನೆನೆಯುವುದು ಅತ್ಯಂತ ಸ್ವಾಭಾವಿಕವಾದ ಮನುಷ್ಯ ಧರ್ಮ. ಅದನ್ನು ಮಾತ್ರ ನಾನು ಪಾಲಿಸಿದ್ದೇನೆ.ಗಂಗಾದತ್ತನಿಗೆ ಗೌರವ ತೋರುವುದರೊಂದಿಗೆ ಆತನ ಪ್ರಾಮಾಣಿಕತೆ, ನಂಬಿಕೆ, ಗೌರವಿಸುವುದು ನನ್ನ ಉದ್ದೇಶವಾಗಿತ್ತು~. ನಮ್ಮ ಪರಂಪರೆಯ ವಾಣಿ ಹೇಳುತ್ತದೆ -ಕೃತಂಸ್ಮರ, ಕೃತೋಸ್ಮರ ಮಾಡಿದ್ದನ್ನು ನೆನೆ, ಮಾಡಿದವರನ್ನು ನೆನೆ. ಇದು ಮನುಷ್ಯ ಧರ್ಮ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry