ಕೃತಿಚೋರರ ಆಡುಂಬೊಲದ ಕೂರಂಬು, ನೆಲಬಾಂಬು

7

ಕೃತಿಚೋರರ ಆಡುಂಬೊಲದ ಕೂರಂಬು, ನೆಲಬಾಂಬು

ನಾಗೇಶ್ ಹೆಗಡೆ
Published:
Updated:

ಯುಧಿಷ್ಠಿರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ. ಆತನನ್ನು ಸೀದಾ ಅಲ್ಲಿಗೆ ಒಯ್ಯುವ ಬದಲು ಜತೆಗಿದ್ದ ದೂತ ಒಂದು ಸಣ್ಣ ಕಿತಾಪತಿ ಮಾಡುತ್ತಾನೆ. ದಾರಿಯಲ್ಲಿ ಮೊದಲು ಸಿಗುವ ನರಕದ ಬಾಗಿಲನ್ನು ಕೊಂಚ ತೆರೆದು ಧರ್ಮಜನಿಗೆ ಅಲ್ಲಿನ  ಶಿಕ್ಷಾಕೂಪವನ್ನು ತೋರಿಸುತ್ತಾನೆ. ಇಣುಕಿ ನೋಡಿದರೆ ಕೌರವರ ಜತೆ ಭೀಮಾರ್ಜುನ, ನಕುಲ ಸಹದೇವ, ದ್ರೌಪದಿ ಮತ್ತಿತರ ಸಮೀಪ ಬಂಧುಗಳು ಏನೆಲ್ಲ ಶಿಕ್ಷೆ ಅನುಭವಿಸುವುದನ್ನು ನೋಡಿ ಯುಧಿಷ್ಠಿರ ಖಿನ್ನನಾಗುತ್ತಾನೆ. ಮಾನಸಿಕವಾಗಿ ಜರ್ಝರನಾಗುತ್ತಾನೆ. ಸ್ವತಃ ಹಿಂಸೆ ಅನುಭವಿಸುತ್ತಾನೆ.`ನನಗೇಕೆ ಇವನ್ನೆಲ್ಲ ತೋರಿಸುತ್ತೀಯ? ನನ್ನ ಯಾವ ತಪ್ಪಿಗೆ ಈ ಶಿಕ್ಷೆ?~ ಎಂದು ಆತ ದೂತನನ್ನು ಕೇಳುತ್ತಾನೆ. ಅದಕ್ಕೆ ದೂತ, `ಕ್ಷಮಿಸಿ, ನನಗೆ ಮೇಲಿನಿಂದ ಆದೇಶ ಬಂದಿದೆ. ಅದೇನೋ ನೀವು `ಅಶ್ವತ್ಥಾಮೋ ಹತಃ ಕುಂಜರಃ~ ಎಂದು ಹೇಳಿ ದ್ರೋಣನ ಸಾವಿಗೆ ಕಾರಣರಾದಿರಂತಲ್ಲ, ಆ ತಪ್ಪಿಗೆ ಈ ಚಿಕ್ಕ ಶಿಕ್ಷೆ~ ಎನ್ನುತ್ತಾನೆ.ಭಾರತದ ಮೇರು ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಇದೀಗ ಅಂಥದ್ದೊಂದು ಚಿಕ್ಕ ತಪ್ಪಿಗೆ ನಲುಗಿದ್ದಾರೆ. ಕೃತಿಚೌರ್ಯದ ಆಪಾದನೆಗೆ ಸಿಲುಕಿ ವಿಜ್ಞಾನಲೋಕದ ಕ್ಷಮಾಪಣೆ ಕೋರಿದ್ದಾರೆ.ಆದದ್ದಿಷ್ಟೆ: ಅವರು ತಮ್ಮ ಶಿಷ್ಯ- ಸಂಗಾತಿಗಳೊಂದಿಗೆ ಸೇರಿ ಬರೆದ ಒಂದು ಜಂಟಿ ಸಂಶೋಧನಾ ಪ್ರಬಂಧದಲ್ಲಿ ಕೆಲವು ಅಂಶಗಳನ್ನು ಬೇರೆಲ್ಲಿಂದಲೋ ಎತ್ತಿ ತೇಪೆ ಹಚ್ಚಲಾಗಿದೆ. ಈ ಅಪರಾಧ ಪ್ರೊ. ರಾವ್ ಅವರಿಂದ ಘಟಿಸಿಲ್ಲವೆಂದೂ ಅದು ಅವರ ಕಿರಿಯ ಸಹೋದ್ಯೋಗಿಗಳಲ್ಲೊಬ್ಬ ಮಾಡಿದ ತಪ್ಪೆಂದೂ ಹೇಳಲಾಗುತ್ತಿದೆ.

 

ಅದೂ ದೊಡ್ಡ ತಪ್ಪೇನಲ್ಲ; ಬೇರೊಬ್ಬರ ಇಡೀ ಸಂಶೋಧನೆಯನ್ನೇನೂ ಕದ್ದಿಲ್ಲ. ಪ್ರಬಂಧದ ಪೀಠಿಕೆಯಲ್ಲಿ ಕೆಲವು ವಾಕ್ಯಗಳನ್ನು ಬೇರೊಬ್ಬರ ಪ್ರಬಂಧದಿಂದ ಎತ್ತಿದ್ದು ಅಷ್ಟೆ. ಲೇಖನದ ಕೊನೆಯಲ್ಲಿ ನೀಡುವ ಸೈಟೇಶನ್ ಪಟ್ಟಿಯಲ್ಲಿ ಆ ಮೂಲ ಕರ್ತೃವಿನ ಹೆಸರನ್ನು ಕೂಡ ಸೂಚಿಸಲಾಗಿದೆ. ಆದರೂ ಹಾಗೆ ವಾಕ್ಯ ಪುಂಜವನ್ನು ಇಡಿ ಇಡಿಯಾಗಿ ಎತ್ತಬಾರದಿತ್ತು.ತನ್ನದೇ ಮಾತುಗಳಲ್ಲಿ ಬರೆಯಬೇಕಿತ್ತು. ಏನಾದರೇನು, ತಪ್ಪು ತಪ್ಪೇ ಹೌದು. ಅಂತೂ ಪ್ರಪಂಚದ ಕುಖ್ಯಾತ ಕೃತಿಚೋರರ ಪಟ್ಟಿಯಲ್ಲಿ `ಕರ್ನಾಟಕ ರತ್ನ~ ಪ್ರೊಫೆಸರ್ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಹೆಸರೂ  ಸೇರಿದಂತಾಗಿದೆ.ಭಾರತದಲ್ಲಿ ಇಂದು ಬದುಕಿರುವ ವಿಜ್ಞಾನಿಗಳಲ್ಲಿ ಅತ್ಯಂತ ಪ್ರತಿಷ್ಠಿತ ಹೆಸರು ಪ್ರೊ. ಸಿ.ಎನ್.ಆರ್. ರಾವ್ ಅವರದ್ದು. ನಾನಾ ದೇಶಗಳ 45ಕ್ಕೂ ಹೆಚ್ಚು ಘನ ಸಂಸ್ಥೆಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿವೆ. ಜಗತ್ತಿನ ಎಲ್ಲ ಮಹಾನ್ ವಿಜ್ಞಾನ ಸಂಸ್ಥೆಗಳು ಅವರಿಗೆ ಗೌರವ ಸದಸ್ಯತ್ವ ನೀಡಿವೆ. ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಡ್ಯಾನ್ ಡೇವಿಡ್ ಪ್ರಶಸ್ತಿ ಅವರ ಮಡಿಲಿಗೆ ಬಂದಿದೆ.

 

ನೊಬೆಲ್ ಪ್ರಶಸ್ತಿಗೆ ಪದೇ ಪದೇ ಅವರ ಹೆಸರು ಕೇಳಬರುತ್ತಿದೆ. ಪ್ರಧಾನಮಂತ್ರಿಯ ವಿಜ್ಞಾನ ಸಲಹಾ ಮಂಡಲಿಯ ಅಧ್ಯಕ್ಷರಾಗಿರುವ ಅವರು ಈ 76ನೇ ವಯಸ್ಸಿನಲ್ಲೂ (ಬೆಂಗಳೂರಿನಲ್ಲಿ ಇದ್ದಷ್ಟು ದಿನವೂ) ಪ್ರಯೋಗಶಾಲೆಗೆ ಹೋಗಿ ದುಡಿಯುತ್ತಾರೆ. ಅವರು ಒಂದು ಕೋರಿಕೆ ಸಲ್ಲಿಸಿದರೆ ಸಾಕು, ನೂರಾರು ಕೋಟಿ ರೂಪಾಯಿಗಳ ವೈಜ್ಞಾನಿಕ ಸಲಕರಣೆಗಳು ಅವರಿದ್ದಲ್ಲಿಗೆ ಬರುತ್ತವೆ. ಅವರು ಗುಡುಗಿದರೆ (ಅವರ ಧ್ವನಿಯೂ ಗುಡುಗಿನಂತೆ ಗಡಸು; ಎರಡು ವರ್ಷಗಳ ಹಿಂದೆ ಕರ್ನಾಟಕಕ್ಕೆ ಐಐಟಿಯನ್ನು ತಂದೇ ತರುತ್ತೇನೆಂದು ಯಡ್ಯೂರಪ್ಪ ಹೇಳಿದಾಗ, ಅದನ್ನು ವಿರೋಧಿಸಿ ಗುಡುಗಿದ್ದರು. ಈಚೆಗೆ ಅಂತರಿಕ್ಷ್ ಹಗರಣದ ಸಂಬಂಧ ಇಸ್ರೊದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಪಕ್ಷ ವಹಿಸಿ ರಾವ್ ಗುಡುಗಿದ್ದರು) ದೇಶದ ಇಡೀ ವಿಜ್ಞಾನ ಸಮುದಾಯ ಕಿವಿ ನಿಮಿರಿಸಿ ಕೇಳುತ್ತದೆ. ಅಂಥ ಘನವೆತ್ತ ಪ್ರೊ. ಸಿಎನ್‌ಆರ್ ರಾವ್ ಈಗ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಅವರ ಬೃಹತ್ ಶಿಷ್ಯವೃಂದಕ್ಕೆ ತುಂಬ ನೋವಿನ ಸಂಗತಿ ಇದು. ಇನ್ನು ಸ್ವತಃ ಪ್ರೊ. ರಾವ್ ಹೇಗೆ ಇದನ್ನು ಅನುಭವಿಸುತ್ತಿದ್ದಾರೊ ಊಹಿಸುವಂತಿಲ್ಲ.ಮೋಸ, ವಂಚನೆ, ಕಳ್ಳತನಗಳ ಸಾಲಿಗೇ ಸೇರುವ ಈ ಕೃತಿಚೌರ್ಯ ಎಂಬುದು ಕಳಂಕದ ರಾಚುರಸಾಯನ. ಬೇರೊಬ್ಬರ ಸೃಜನಶೀಲ ಕೃತಿಯನ್ನು ಲಪಟಾಯಿಸಿ ತನ್ನದೆಂದು ಬಿಂಬಿಸುವ ಈ ಚಟಕ್ಕೆ ಯಾವ ಸಮಾಜದಲ್ಲೂ ಮನ್ನಣೆ ಇಲ್ಲ. ಸಿಕ್ಕಿಬಿದ್ದವರ ಗೌರವ ಮಣ್ಣುಪಾಲಾಗುತ್ತದೆ. ಆದರೂ ಇಂಥ ಭಾನಗಡಿ ಮಾಡಿಕೊಂಡು ಅವಹೇಳನಕ್ಕೆ ಗುರಿಯಾದ ಗಣ್ಯರ ಹೆಸರುಗಳು ವಿಜ್ಞಾನ ಚರಿತ್ರೆಯ ಉದ್ದಕ್ಕೂ ಹಾಸು ಹೊಕ್ಕಾಗಿದೆ.ವಿಜ್ಞಾನವೊಂದೇ ಅಲ್ಲ, ಸಾಹಿತ್ಯ, ಚಿತ್ರಕಲೆ, ಸಿನೆಮಾ, ಟಿವಿ, ಸಂಗೀತ, ಪತ್ರಿಕೋದ್ಯಮ ಹೀಗೆ -ರಾಜಕೀಯವನ್ನು ಬಿಟ್ಟರೆ ಬೇರೆ ಎಲ್ಲ ರಂಗಗಳಲ್ಲೂ ಕೃತಿಚೌರ್ಯದ ಹಗರಣಗಳು ಆಗಾಗ ಕಾಣಿಸುತ್ತಲೇ ಇರುತ್ತವೆ (ನಕಲು ಮಾಡುವವರನ್ನು ಬಿಡಿ, ನ್ಯಾಯಾಧೀಶರ ಹುದ್ದೆಗೆಂದು ಪರೀಕ್ಷೆಗೆ ಕೂತ ಎಲ್ಲರೂ ನಕಲು ಮಾಡುತ್ತ ಸಿಕ್ಕಿಬಿದ್ದ ದಾಖಲೆಯೇ ನಮ್ಮಲ್ಲಿದೆಯಲ್ಲ!). ಸಂಶೋಧನಾ ರಂಗದಲ್ಲಂತೂ ಯಾವ ಡಾಕ್ಟರೇಟ್ ಪ್ರಬಂಧದಲ್ಲಿ ಎಷ್ಟು ಭಾಗ ಸಾಚಾ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲವೇನೊ. ಮಾರ್ಟಿನ್ ಲೂಥರ್ ಕಿಂಗ್‌ನಂಥವರ ಥೀಸಿಸ್‌ನಲ್ಲೇ ಕೃತಿಚೌರ್ಯದ ಭಾಗಗಳು ಸಿಕ್ಕಿವೆ ಎಂದಮೇಲೆ ಇತರರದ್ದು ಲೆಕ್ಕಕ್ಕಿಡಬೇಕಾಗಿಲ್ಲ. `ಈ ಗೋರಿಯಲ್ಲಿದ್ದ ಮೂಳೆಗಳನ್ನು ಆ ಗೋರಿಗೆ ಸೇರಿಸುವುದೇ ಇತಿಹಾಸ ಸಂಶೋಧನೆ~ ಎಂಬ ಮಾತಿನಲ್ಲಿರುವ ಮೂಳೆಯನ್ನು ಯಾವ ಪಿಎಚ್‌ಡಿ ಪ್ರಬಂಧಕ್ಕೂ ಅನ್ವಯಿಸಬಹುದು.ಮಾನವಿಕ ಸಂಶೋಧನೆಗೆ ಹೋಲಿಸಿದರೆ ವಿಜ್ಞಾನರಂಗದ ಅಪ್ರಾಮಾಣಿಕತೆಗೆ ಅನೇಕ ಆಯಾಮಗಳಿರುತ್ತವೆ. ಹಣದ ಆಸೆಗೆ ಬಿದ್ದ ವಿಜ್ಞಾನಿ ಪ್ರಯೋಗದ ಫಲಿತಾಂಶವನ್ನೇ ತನಗಿಷ್ಟ ಬಂದಂತೆ ತಿದ್ದಬಹುದು. `ಎಂಡೊಸಲ್ಫಾನ್‌ನಿಂದ ಏನೂ ಅಪಾಯ ಕಂಡುಬಂದಿಲ್ಲ~ ಎಂದು ಘೋಷಿಸಿ ಇಡೀ ಜೀವಸಂಕುಲವನ್ನೇ ಅಪಾಯಕ್ಕೆ ಸಿಲುಕಿಸಬಹುದು.

 

ವಿದೇಶೀಯರ ಅಂಕಿ ಅಂಶಗಳನ್ನು ಅಲ್ಲಿಷ್ಟು ಇಲ್ಲಿಷ್ಟು ತಿರುಚಿ ತನ್ನದೆಂದು ಸಾಧಿಸಿ ಮೇಲೇರುತ್ತ ತನ್ನ ರಾಷ್ಟ್ರಕ್ಕೆ ಅಸಮರ್ಪಕ ಯೋಜನೆಗಳು ಬರುವಂತೆ ಮಾಡಬಹುದು. ತನ್ನದೇ 10 ವರ್ಷ ಹಳೆಯ ಸಂಶೋಧನಾ ಪ್ರಬಂಧವನ್ನು ಹೊಸತೆಂದು ಪ್ರಕಟಿಸಿ ವಿಜ್ಞಾನದ ಹಿನ್ನಡೆಗೆ ಕಾರಣವಾಗಬಹುದು. ಬೇರೆಯವರ ಪ್ರಬಂಧವನ್ನು ತನ್ನದೇ ಹೆಸರಿನಲ್ಲಿ ಪ್ರಕಟಿಸಿ ಕಿರಿಯರಿಗೆ ಕೆಳಪಂಕ್ತಿ ಹಾಕಬಹುದು.ಭಾರತದ ವಿಜ್ಞಾನರಂಗದಲ್ಲಿ ಇಂಥವೆಲ್ಲ ಪ್ರವೃತ್ತಿಗಳಿಗೂ ಉದಾಹರಣೆಗಳು ಸಿಗುತ್ತವೆ. ವಂಚನೆಗಳನ್ನೆಲ್ಲ ಬದಿಗಿಟ್ಟು ಕೇವಲ ಕೃತಿಚೌರ್ಯವನ್ನಷ್ಟೇ ನೋಡಿದರೂ ನಮ್ಮ ವಿಜ್ಞಾನಿಗಳ ಘನತೆ ಅಂತರರಾಷ್ಟ್ರೀಯ ವಲಯದಲ್ಲಿ ತೀರಾ ಕುಖ್ಯಾತಿಗೆ ಗುರಿಯಾಗಿದೆ.ತಿರುಪತಿಯ ಶ್ರೀ ವೆಂಕಟೇಶ ವಿಶ್ವವಿದ್ಯಾಲಯದ ಪ್ರೊ. ಪಿ. ಚಿರಂಜೀವಿ ಎಂಬಾತನ 70 ಸಂಶೋಧನಾ ಪ್ರಬಂಧಗಳು ಕೃತಿಚೌರ್ಯವೆಂದು ಗೊತ್ತಾಗಿ ಆತನ ಹೆಸರೇ ಚಿರಂಜೀವಿಯಾಗಿದೆ. ಅಣ್ಣಾ ವಿ.ವಿಯ ಪ್ರೊ. ಮುತ್ತು ಕುಮಾರ್ ಮತ್ತು ನಾಲ್ವರು ಸ್ವೀಡನ್ನಿನ ವಿಜ್ಞಾನಿಯೊಬ್ಬನ ಪ್ರಬಂಧವನ್ನು ಇಡಿ ಇಡಿಯಾಗಿ ಇಳಿಸಿ ಸಿಕ್ಕಿಬಿದ್ದಿದ್ದಾರೆ; ಕುಮಾಂವೊ ವಿ.ವಿ.ಯ ಕುಲಪತಿ ಪ್ರೊ. ಬಿ.ಎಸ್. ರಾಜಪೂತ್ ಎಂಬ ಭೌತವಿಜ್ಞಾನಿಯ ನಾಲ್ಕು ಸಂಶೋಧನಾ ಪ್ರಬಂಧಗಳು ಕೃತಿಚೌರ್ಯ ಮಾಡಿ ಸಿಕ್ಕಿ ಬಿದ್ದಿದ್ದಷ್ಟೇ ಅಲ್ಲ, ತನಗೆ ಗೊತ್ತಿಲ್ಲದಂತೆ ಶಿಷ್ಯನೊಬ್ಬ ಮಾಡಿದ ತಪ್ಪು ಇದೆಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದೂ ಅಲ್ಲದೆ, ಚೌರ್ಯವನ್ನು ಪತ್ತೆ ಹಚ್ಚಿದ ತನ್ನ ಸಹೋದ್ಯೋಗಿ ಪ್ರೊ. ಕವಿತಾ ಪಾಂಡೆಯನ್ನು ಅಮಾನತಿನಲ್ಲಿಟ್ಟ ಆರೋಪಕ್ಕೂ ಗುರಿಯಾಗಿ ಕುಲಪತಿ ಹುದ್ದೆಯಿಂದ ರಾಜೀನಾಮೆ ನೀಡಬೇಕಾಯಿತು.ದೇಶದ ಅತಿದೊಡ್ಡ ಸಂಶೋಧನಾ ಸಂಸ್ಥೆಯೆನಿಸಿದ ಸಿಎಸ್‌ಐಆರ್‌ನ ವಿಜ್ಞಾನಿ ಪ್ರೊ. ಅಶೋಕ್ ಪಾಂಡೆ ಕತೆ ಇನ್ನೂ ನಿಗೂಢವಾಗಿದೆ. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹತ್ತಾರು ಪತ್ರಿಕೆಗಳಿಗೆ ಸಂಪಾದಕರಾಗಿದ್ದು ಈ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದ ವ್ಯಕ್ತಿ ಈ ಪಾಂಡೆ. ಇವರ ಸಂಶೋಧನಾ ಪ್ರಬಂಧಗಳನ್ನು ತುಂಬಾ ಮಂದಿ ಪದೇ ಪದೇ ಉದ್ಧರಿಸುತ್ತಾರೆಂಬ ಕಾರಣಕ್ಕೆ ಇವರಿಗೆ ಥಾಮ್ಸನ್ ಪ್ರಶಸ್ತಿ ಬೇರೆ ಲಭಿಸಿದೆ. ಇಂಥವರು ಕೃತಿಚೌರ್ಯದಲ್ಲಿ ಸಿಕ್ಕಿಬಿದ್ದು ಹುದ್ದೆಯಲ್ಲಿ ಅವನತಿ ಪಡೆದರು. ನಾಲ್ಕು ವರ್ಷಗಳಾದ ನಂತರ ಮತ್ತೂ ಎತ್ತರದ ಹುದ್ದೆಗೇರಿದ್ದಲ್ಲದೆ, ಸಿಎಸ್‌ಐಆರ್‌ನದೇ ಪತ್ರಿಕೆಗೂ ಸಂಪಾದಕರಾಗಿ ನೇಮಕಗೊಂಡರು.ಸಿಎಸ್‌ಐಆರ್ ಪ್ರತಿಷ್ಠೆಗೆ ಅತಿ ದೊಡ್ಡ ಧಕ್ಕೆ ಬಂದಿದ್ದು ಅವರಿಂದಲ್ಲ. ಅದರ ಮಹಾ ನಿರ್ದೇಶಕರಾಗಿದ್ದ ಡಾ. ಆರ್.ಎ. ಮಶೇಲ್ಕರ್ ಎಂಬ ಖ್ಯಾತ ವಿಜ್ಞಾನಿಯಿಂದ. ಪೇಟೆಂಟ್ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸಲು ಯೋಜಿಸಿ, ಇವರ ಅಧ್ಯಕ್ಷತೆಯಲ್ಲಿ ಐವರು ಪ್ರತಿಷ್ಠಿತರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಸಮಿತಿಯ ವರದಿಯೆಲ್ಲ ವಿದೇಶೀ ಔಷಧ ಕಂಪೆನಿಗಳಿಗೆ ಲಾಭ ತರುವಂತಿದೆ ಎಂದು ಸಂಸತ್ತಿನಲ್ಲಿ ಗಲಾಟೆ ಎದ್ದಿತು.ಕೂಲಂಕಷವಾಗಿ ನೋಡಿದಾಗ ಈ ವರದಿಯಲ್ಲಿ ಕೆಲವು ಭಾಗಗಳನ್ನು ವಿದೇಶೀ ಔಷಧ ಕಂಪೆನಿಗಳ ಸಾಹಿತ್ಯದಿಂದ ಸಾರಾಸಗಟು ಎತ್ತಿದ್ದೆಂಬುದು ಗೊತ್ತಾಗಿ ಇನ್ನಷ್ಟು ಗಂಭೀರ ಆಪಾದನೆಗಳು ಬಂದು ಮಶೇಲ್ಕರ್ ರಾಜೀನಾಮೆ ನೀಡಿದರು.ಕೃತಿಚೌರ್ಯದ ಅತ್ಯಂತ ಹೀನಾಯ ಉದಾಹರಣೆ ನಮ್ಮದೇ ಅಡುಗೆ-ಊಟಕ್ಕೆ ಸಂಬಂಧಿಸಿದ್ದು. ಕುಲಾಂತರಿ ಬದನೆಯ ಕೃಷಿ ಕುರಿತಂತೆ ಗಣ್ಯರ ಅಹವಾಲುಗಳನ್ನು ಆಲಿಸಿದ ಕೇಂದ್ರ ಸಚಿವ ಜೈರಾಮ್ ರಮೇಶ್, ಸದ್ಯಕ್ಕೆ ಅದು ಹೊಲಕ್ಕಿಳಿಯುವುದು ಬೇಡವೆಂದು ಆಜ್ಞೆ ಹೊರಡಿಸಿದರಷ್ಟೆ? ಈ ನಡುವೆ ವಿಜ್ಞಾನಿಗಳ ಸಮುದಾಯದಿಂದಲೂ ಅಭಿಪ್ರಾಯ ಕೋರಿದರು.

 

ಕೃಷಿ, ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನ ಕ್ಷೇತ್ರಗಳಿಗೆ ಸೇರಿದ ಐದು ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳ ತಜ್ಞರು ಒಟ್ಟಾಗಿ ವರದಿ ನೀಡಿದರು: `ಸೀಮಿತ ಮಟ್ಟದಲ್ಲಿ ಬಿಟಿ ಬದನೆಯ ಕೃಷಿ ಪ್ರಯೋಗ ನಡೆಸಲು ಅಡ್ಡಿ ಇಲ್ಲ~ ಎಂಬ ಶಿಫಾರಸು ಅದರಲ್ಲಿತ್ತು.ನೋಡಿದರೆ ಆ ವರದಿ ಕೃತಿಚೌರ್ಯದ ಪರಾಕಾಷ್ಠೆ! ಕುಲಾಂತರಿ ಕಂಪೆನಿಗಳ ಪ್ರವರ್ತಕರೇ ಬರೆದಿದ್ದ 60 ಸಾಲುಗಳನ್ನು ಇಡಿ ಇಡಿಯಾಗಿ ಎತ್ತಿ ಪೋಣಿಸಲಾಗಿತ್ತು. ವಿವಾದವನ್ನು ಬಗೆಹರಿಸಬೇಕಾದ ವರದಿ ಹೀಗೆ ಕೋಲಾಹಲವನ್ನೇ ಸೃಷ್ಟಿಸಿತು. `ಇದು ಬರೀ ಕಳಪೆ ವಿಜ್ಞಾನವಲ್ಲ, ಗಟಾರ ವಿಜ್ಞಾನ~ ಎಂದು ಕೃಷಿ ಅಂಕಣಕಾರ ಡಾ. ದೇವಿಂದರ್ ಶರ್ಮಾ ಟೀಕಿಸಿದರು. `ನಕಲು ಮಾಡಿ ತೇಪೆ ಅಂಟಿಸುವುದಷ್ಟೇ ನಮ್ಮ ವಿಜ್ಞಾನಿಗಳಿಗೆ ಗೊತ್ತು~ ಎಂದು ಛೀಮಾರಿ ಹಾಕಿದರು.ಅದು ಪತ್ರಕರ್ತರ ಭಾಷೆ ಬಿಡಿ, ಖಾರ ಜಾಸ್ತಿ. ಇಷ್ಟಕ್ಕೂ ಭಾರತದ ಹೆಸರಾಂತ ವಿಜ್ಞಾನಿಗಳ ದಿನಚರಿಯನ್ನು ನೋಡಿದರೆ ನಮಗೆ ಕೋಪವಲ್ಲ, ಕರುಣೆ ಹುಟ್ಟಬೇಕು. ಬುದ್ಧಿಮತ್ತೆ, ಪರಿಶ್ರಮ ಮತ್ತು ಪ್ರಾಮಾಣಿಕತೆ ಮೂರೂ ಇರುವ ವಿಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರು ಬೆಳೆಯುತ್ತ ಹೋದಂತೆ ಅವರ ಮೇಲೆ ಆಡಳಿತದ ಹೊರೆಯೂ ಹೆಚ್ಚುತ್ತದೆ. ನಾನಾ ಸಮಿತಿಗಳಿಗೆ ಹೆಡ್‌ಗಳಾಗಿ ಅವರು ಯಾವುದಕ್ಕೂ ಪುರುಸೊತ್ತಿಲ್ಲದ ವ್ಯಕ್ತಿಯಾಗುತ್ತಾರೆ.ಸಂಶೋಧನಾ ಸಹಾಯಕರು ಬರೆದುಕೊಟ್ಟ ವರದಿಗೆ, ಕೆಲವೊಮ್ಮೆ ಓದದೇ ಸಹಿ ಹಾಕಬೇಕಾಗುತ್ತದೆ. ಸಹಾಯಕರ ಕೆಲಸ ಚೆನ್ನಾಗಿದ್ದಾಗ ಕೀರ್ತಿ ಇವರಿಗೆ ಬರುತ್ತದೆ. ಅಪರೂಪಕ್ಕೆ ಅವರು ಎಡವಿದಾಗ ಇವರು ಬೋರಲಾಗಿ ಬೀಳುತ್ತಾರೆ. ಅಥವಾ ಕೃಷ್ಣನ ಕುತಂತ್ರಕ್ಕೆ ಯುಧಿಷ್ಠಿರ ಬಲಿಯಾದ ಕತೆ ಮರುಕಳಿಸುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry